ಮರುದಿನ ಬೆಳಕು ಹರಿಯಿತು. ಅರಮನೆಯಲ್ಲಿ ಎಂದಿನಂತೆ ಕಾರ್ಯ ಕಲಾಪಗಳು ಆರಂಭವಾದುವು. ಮಂಗಳವಾದ್ಯಗಳು ಮೊಳಗಿದುವು; ಸ್ತುತಿ ಪಾಠಕರು ರಾಜನ ಗುಣಸ್ತವವನ್ನು ಹಾಡಿದರು; ಮಹಾರಾಜನು ಎದ್ದೊಡನೆಯೆ ಸಂದರ್ಶನ ಮಾಡಲೆಂದು ಕನ್ನಡಿ ಗೋವು ಮೊದಲಾದುವುಗಳನ್ನು ಅಣಿ ಮಾಡಿದರು; ಮಹಾರಾಜನ ದರ್ಶನಕ್ಕಾಗಿ ಪ್ರಮುಖರಾದ ರಾಜಕೀಯ ಜನರು ಬಂದು ಅರಮನೆಯ ಬಾಗಿಲಲ್ಲಿ ಕಾದು ನಿಂತರು. ಆದರೆ ಎಷ್ಟು ಹೊತ್ತಾದರೂ ಮಹಾರಾಜನು ಎಚ್ಚತ್ತಂತೆಯೆ ಕಾಣಬರಲಿಲ್ಲ. ಅಂತಃಪುರದಲ್ಲಿ ಸಂಚರಿಸಲರ್ಹವಾದ ಜನ ಇಣಿಕಿ ನೋಡಿದರು. ರಾಜನು ಹಾಸಗೆಯ ಮೇಲೆ ಮಲಗಿದ್ದಾನೆ; ಆದರೆ ಆತನು ನಿದ್ದೆಮಾಡುತ್ತಿಲ್ಲ! ಪ್ರಾಣವಿದೆಯೇ ಇಲ್ಲವೋ ಎಂಬುದೆ ಸಂಶಯವಾಗಿದೆ. ಉಸಿರಾಡುತ್ತಿರುವಂತೆ ಕಾಣುತ್ತಿಲ್ಲ. ಅಂತಃಪುರದ ಆ ಹೆಣ್ಣುಗಳು ಇನ್ನೂ ಹತ್ತಿರಕ್ಕೆ ಹೋಗಿ ನೋಡಿದರು. ಮಹಾರಾಜನು ದಿವಂಗತನಾಗಿರುವುದೆ ನಿಶ್ಚಯ. ಹತ್ತಿರದಲ್ಲಿಯೆ ಅತ್ತು ಅತ್ತು ಹೈರಾಣಾಗಿ ಬಿದ್ದಿದ್ದ ಕೌಸಲ್ಯೆ ಸುಮಿತ್ರೆಯರ ಮುಖದಮೇಲೆ ಪ್ರೇತಕಳೆ ಸುರಿಯುತ್ತಿದೆ. ಆ ನೋಡಹೊರಟವರಿಗೆ ಏಕೊ ಬಹು ಭಯವಾಯಿತು. ಕಿಟ್ಟನೆ ಕಿರಿಚಿಕೊಂಡರು. ಆ ಚೀತ್ಕಾರದಿಂದ ಎಚ್ಚತ್ತ ಕೌಸಲ್ಯಾ ಸುಮಿತ್ರೆಯರುದ ದಿಗಿಲುಬಿದ್ದು ಮೇಲಕ್ಕೆದ್ದರು. ಮಹಾರಾಜನನ್ನು ಕೈಗಳಿಂದ ಮುಟ್ಟಿನೋಡಿದ ಅವರು ಆತನು ದಿವಂಗತನಾಗಿದ್ದಾನೆ ಎಂಬುದನ್ನರಿತವರಾಗಿ “ಹಾ ನಾಥಾ!” ಎಂದು ಚೀರುತ್ತಾ ನೆಲದ ಮೇಲೆ ಬಿದ್ದು ಮೂರ್ಛಿತರಾದರು.

ದಶರಥ ಮಹಾರಾಜನ ಸ್ವರ್ಗಸ್ಥನಾದ ಸುದ್ಧಿ ಕ್ಷಣಮಾತ್ರದಲ್ಲಿ ಕಾಡುಕಿಚ್ಚಿನಂತೆ ಹಬ್ಬಿ ಹರಡಿತು. ಅರಮನೆಯೆಲ್ಲವೂ ಗೋಳಿನ ಗೂಡಾಯಿತು. ಶ್ರೀರಾಮನ ವನವಾಸದಿಂದ ಮೊದಲೆ ಸಂಕಟಗೊಂಡಿದ್ದ ರಾಣಿವಾಸ ಮಹಾರಾಜನ ಮರಣದಿಂದ ಮುಂದೋರದನಿತು ಮಹಾದುಃಖದಲ್ಲಿ ಮುಳುಗಿ ಹೋಯಿತು. ಕೌಸಲ್ಯಾದೇವಿಯಂತೂ ಮಹಾರಾಜನ ಮೃತದೇಹದೊಡನೆ ಸಹಗಮನ ಮಾಡುವುದಾಗಿ ನಿಶ್ಚಯಿಸಿದಳು. ಅಷ್ಟರಲ್ಲಿ ಮಂತ್ರಿಗಳೆಲ್ಲರೂ ವಸಿಷ್ಠರನ್ನು ಮುಂದುಮಾಡಿಕೊಂಡು ಅರಮನೆಗೆ ಬಂದರು. ವಸಿಷ್ಠರ ಆದೇಶದಂತೆ ರಾಜನ ಕಳೇಬರವನ್ನು ತೈಲದ್ರೋಣದಲ್ಲಿಟ್ಟುದಾಯಿತು. ಮಂತ್ರಿಗಳೆಲ್ಲರೂ ಸಭೆ ಸೇರಿ ಒಡನೆಯೆ ಭರತನಿಗೆ ಹೇಳಿ ಕಳುಹಿಸಿ, ಆತನನ್ನು ಅಯೋಧ್ಯೆಗೆ ಕರೆಸಬೇಕೆಂದೂ ಆತನು ಬರುವವರೆಗೆ ರಾಜನ ಅಂತ್ಯ ಸಂಸ್ಕಾರಗಳಾವುವೂ ನಡೆಯುವಂತಿಲ್ಲವೆಂದೂ ನಿಶ್ಚಯಿಸಿದರು. ವಸಿಷ್ಠರು ಕೇಕಯ ರಾಜ್ಯಕ್ಕೆ ಹೋಗಬೇಕಾದ ದೂತರನ್ನು ಕುರಿತು “ಅಯ್ಯಾ, ನೀವು ವೇಗಗಾಮಿಗಳಾದ ಕುದುರೆಗಳನ್ನೇರಿ ಈಗಲೆ ಭರತಶತ್ರುಘ್ನರ ಬಳಿಗೆ ಹೋಗಬೇಕು. ಅವರನ್ನು ಕಂಡಾಗ ನೀವು ಸ್ವಲ್ಪವೂ ವ್ಯಥೆಯನ್ನು ತೋರಕೂಡದು. ಇಲ್ಲಿ ನಡೆದಿರುವ ಅನಾಹುತವನ್ನು ಕುರಿತು ಒಂದೂ ಮಾತು ಆಡಕೂಡದು. ‘ನಿಮ್ಮಿಂದ ಅತ್ಯಾವಶ್ಯಕವಾದ ಕಾರ್ಯಗೌರವವಿರುವುದರಿಂದ ವಸಿಷ್ಠರು ಕೂಡಲೆ ಕರೆತರುವಂತೆ ಹೇಳಿದ್ದಾರೆ’ ಎಂದಿಷ್ಟು ಮಾತ್ರ ಹೇಳಬೇಕು. ರಾಜಕುಮಾರರಿಗೂ ಕೇಕಯರಾಜನಿಗೂ ಅನರ್ಘ್ಯವಾದ ಉಡುಗೊರೆಗಳೊಡನೆ ಈಗಲೆ ತೆರಳಿರಿ” ಎಂದು ಆಜ್ಞಾಪಿಸಿದರು.

ವಸಿಷ್ಠರಿಂದ ಆಜ್ಞಪ್ತರಾಗಿ ಹೊರಟ ದೂತರು ಸ್ವಲ್ಪವೂ ವಿಳಂಬ ಮಾಡದೆ ಪ್ರಯಾಣ ಮಾಡಿದರು. ಹಸ್ತಿನಾಪುರದ ಬಳಿಯಲ್ಲಿ ಗಂಗಾನದಿಯನ್ನು ದಾಟಿ ಕುರುಜಾಂಗಲ ದೇಶದ ಮೂಲಕ ಪಾಂಚಾಲ ದೇಶವನ್ನು ಸೇರಿದರು. ಆ ದೇಶದಲ್ಲಿದ್ದ ಶರದಂಡವೆಂಬ ನದಿಯನ್ನು ದಾಟಿ ಅನೇಕ ಪಟ್ಟಣಗಳನ್ನು ದಾಟುತ್ತಾ ಇಕ್ಷುಮತಿಯೆಂಬ ನದಿಯ ತೀರವನ್ನು ಸೇರಿದರು. ಅಲ್ಲಿ ಜಲಪಾನಮಾಡಿ ವಿಶ್ರಮಿಸಿಕೊಂಡು ಬಾಹ್ಲೀಕ ದೇಶವನ್ನು ಪ್ರವೇಶಿಸಿದರು. ಅವರು ಪ್ರಯಾಣ ಮಾಡುವಾಗ ಅನೇಕ ಗಿರಿ ನದಿ ಕೆರೆ ಸರೋವರಗಳನ್ನೂ ಅನೇಕ ಊರುಗಳನ್ನೂ ಹಾದುಹೋಗಬೇಕಾಯಿತು. ಪಯಣ ಮುಗಿಯುವ ವೇಳೆಗೆ ಕುದುರೆಗಳೂ ಸವಾರರೂ ಬಳಲಿಹೋಗಿದ್ದರು. ಆದರೂ ನಿಲ್ಲದೆ ಪ್ರಯಾಣ ಮಾಡಿ ಕೊನೆಗೆ ಕೇಕಯ ರಾಜಧಾನಿಯಾದ ಗಿರಿವ್ರಜವನ್ನು ಸೇರಿದರು.

ಅವರು ಗಿರಿವ್ರಜವನ್ನು ಸೇರಿದಾಗ ರಾತ್ರಿಯಾಗಿತ್ತು. ಆದ್ದರಿಂದ ಮರುದಿನ ಬೆಳಗ್ಗೆ ಭರತನಿಗೆ ಕಾಣಿಸಿಕೊಂಡರು. ಅವರು ಗಿರಿವ್ರಜವನ್ನು ಸೇರಿದ ರಾತ್ರಿಯೆಲ್ಲಾ ಭರತನಿಗೆ ಏನೇನೊ ದುಃಸ್ವಪ್ನಗಳು – ತಂದೆ ದಶರಥನು ಕೂದಲನ್ನು ಕೆದರಿಕೊಂಡು ಪರ್ವತಾಗ್ರದಿಂದ ಮಲಿನವಾದ ಗೋಮಯದ ಗುಂಡಿಗೆ ಉರುಳಿ ಬಿದ್ದಂತೆಯೂ, ಹಾಗೆ ಬಿದ್ದವನು ಗಹಗಹಿಸಿ ನಗುತ್ತಾ ಬೊಗಸೆ ಬೊಗಸೆ ತೈಲವನ್ನು ಕುಡಿದು ತಿಲಮಿಶ್ರವಾದ ಅನ್ನವನ್ನು ತಿನ್ನುತ್ತಿದ್ದಂತೆಯೂ, ಕೆಂಪು ಹೂಗಳ ಮಾಲಿಕೆಯನ್ನು ಧರಿಸಿಕೊಂಡು ಕತ್ತೆಗಳನ್ನು ಕಟ್ಟಿದ ರಥದಲ್ಲಿ ಕುಳಿತು ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡುತ್ತಿದ್ದಂತೆಯೂ ಆತನಿಗೆ ಸ್ವಪ್ನವಾಗಿತ್ತು. ಮರುದಿನ ಬೆಳಗ್ಗೆ ಎದ್ದಾಗ ಆತನಿಗೆ ಈ ಸ್ವಪ್ನಗಳ ನೆನಪಿನಿಂದ ಬಹು ಜುಗುಪ್ಸೆಯುಂಟಾಗಿತ್ತು. ಬೆಳಗಿನ ಜಾವದಲ್ಲಿ ಕಂಡ ಸ್ವಪ್ನಗಳು ತನ್ನ ತಂದೆಗೆ ಯಾವುದೊ ಘೋರವಾದ ಅನಿಷ್ಟವನ್ನು ಸೂಚಿಸುತ್ತವೆಂದು ಆತನು ಭಾವಿಸಿ ಭಯಗೊಂಡಿದ್ದನು. ಅಷ್ಟರಲ್ಲಿ ಅಯೋಧ್ಯೆಯಿಂದ ಅವಸರದ ದೂತರು ಬಂದಿರುವರೆಂಬ ವಾರ್ತೆ ಬಂದಿತು. ಅವರನ್ನು ತತ್‌ಕ್ಷಣವೆ ತನ್ನ ಬಳಿಗೆ ಕರೆಸಿಕೊಂಡು, ಬಂದ ಕಾರಣವನ್ನು ವಿಚಾರಿಸಿದನು. ದೂತರು ಆತನನ್ನು ಕುರಿತು “ರಾಜಕುಮಾರ, ನಿನ್ನೊಡನೆ ಅತಿ ತ್ವರಿತವಾಗಿ ಮಾತನಾಡಬೇಕಾದ್ದು ಇರುವುದರಿಂದ ನಿನ್ನನ್ನು ಕರೆದುತರಬೇಕೆಂಬುದಾಗಿ ವಸಿಷ್ಠರು ನಮ್ಮನ್ನು ಅಟ್ಟಿದರು. ಕ್ಷಣವೂ ಇಲ್ಲಿ ವಿಳಂಬಮಾಡದೆ ಪ್ರಯಾಣ ಬೆಳೆಸು” ಎಂದು ಹೇಳಿ ಅನರ್ಘ್ಯವಾದ ಉಡುಗೊರೆಗಳನ್ನು ಆತನ ಮುಂದಿಟ್ಟರು.

ದೂತರ ಮಾತು ಕೇಳಿ ಭರತನಿಗೆ ಹೆದರುವವನ ಮೇಲೆ ಕಪ್ಪೆಯನ್ನು ಎಸೆದಂತಾಯಿತು. ದೂತರನ್ನು ಕುರಿತು ಉತ್ಕಂಠತೆಯಿಂದ ಕೇಳಿದನು – “ತಂದೆ ಕ್ಷೇಮವೆ? ರಾಮಲಕ್ಷ್ಮಣರು ಕುಶಲವಾಗಿದ್ದಾರೆಯೆ? ಪೂಜ್ಯಳಾದ ಕೌಸಲ್ಯೆಯೂ ಧರ್ಮಜ್ಞಳಾದ ಸುಮಿತ್ರೆಯೂ ಸುಖವಾಗಿರುವರೆ? ನನ್ನ ತಾಯಿಯಾದ ಕೈಕೆ ಆರೋಗ್ಯದಿಂದಿರುವಳೆ? ಆಕೆ ತುಂಬ ಕೋಪಿಷ್ಠೆ; ತಾನೆ ಪ್ರಾಜ್ಞಳೆಂಬ ಗರ್ವ ಬೇರೆ. ನೀವು ಬರುವ ಮುನ್ನ ಆಕೆಯೇನಾದರೂ ಹೇಳಿಕಳುಹಿಸಿದಳೆ?” ಆತನ ಪ್ರಶ್ನೆಗಳಿಗೆ ದೂತರು ತಡಮಾಡದ ಉತ್ತರವಿತ್ತರು. “ಕುಮಾರ, ಎಲ್ಲರೂ ಸುಕ್ಷೇಮಿಗಳು. ಪದ್ಮಹಸ್ತಳಾದ ಲಕ್ಷ್ಮಿ ನಿನಗೆ ಪ್ರಸನ್ನಳಾಗಲಿ! ಬೇಗ ಪ್ರಯಾಣಕ್ಕೆ ಸಿದ್ಧನಾಗು. ”

ಭರತನಿಗೆ ದೂತರ ಆತುರ ಅರ್ಥವಾಗಲಿಲ್ಲ. ಆದರೂ ಹಿರಿಯರದ ವಸಿಷ್ಠರು ಹೇಳಿ ಕಳುಹಿಸಿದ್ದುದರಿಂದ ಒಡನೆಯೆ ಹೊರಡುವುದು ತನ್ನ ಕರ್ತವ್ಯವೆಂದು ಆತನು ಭಾವಿಸಿದನು. ತಮ್ಮನಾದ ಶತ್ರುಘ್ನನೊಡನೆ ತಾತನಿಂದಲೂ ಸೋದರಮಾವನಿಂದಲೂ ಅಪ್ಪಣೆಯನ್ನು ಪಡೆದು ಅಂದೇ ಆತನು ಅಯೋಧ್ಯೆಗೆ ಹೊರಟನು. ಪ್ರಯಾಣಸನ್ನದ್ಧರಾದ ಮೊಮ್ಮಕ್ಕಳಿಗೆ ಕೇಕಯ ರಾಜನು ಅಮೂಲ್ಯವಾದ ವಸ್ತುವಾಹಗಳನ್ನೂ ಸೇವಕ ಸೇವಕಿಯರನ್ನೂ ಕೊಟ್ಟು ಸತ್ಕರಿಸಿದನು. ಆತನ ಚತುರಂಗಬಲವೂ ರಾಜಕುಮಾರರ ರಕ್ಷಣೆಗಾಗಿ ಅವರ ಜೊತೆ ಹೊರಟಿತು. ಈ ಪರಿವಾರದೊಡಗೂಡಿದ ಭರತನು ಇಂದ್ರಲೋಕದಿಂದ ಹೊರಹೊರಟ ಸಿದ್ಧನಂತೆ ಪ್ರಯಾಣವನ್ನು ಕೈಕೊಂಡು ತ್ವರಿತಗತಿಯಿಂದ ಮಾರ್ಗಕ್ರಮಣ ಮಾಡಿದನು. ನಾಲ್ಕಾರು ದಿನಗಳು ಪ್ರಯಾಣ ಮಾಡಿದ ಮೇಲೆ ಆತನಿಗೆ ಪರಿವಾರದೊಡನೆ ಹೋಗುವುದು ವಿಳಂಬಕ್ಕೆ ಕಾರಣವೆನ್ನಿಸಿತು. ಊರು ಹತ್ತಿರವಾದಂತೆಲ್ಲಾ ಆತನ ಕಳವಳ ಹೆಚ್ಚುತ್ತಿತ್ತು. ಆದ್ದರಿಂದ ಉಜ್ಜಹಾಸನೆಂಬ ಪಟ್ಟಣದ ಸಮೀಪಕ್ಕೆ ಬಂದೊಡನೆಯೆ ಆತನು ಪರವಾರವನ್ನೆಲ್ಲ ಹಿಂದೆ ಬಿಟ್ಟು ತಾನೊಬ್ಬನೆ ಮುಂದೆ ಹೊರಟನು. ಹಗಲೆನ್ನದೆ ಇರುಳೆನ್ನದೆ ಪಯಣವನ್ನು ಮುಂದುವರಿಸಿದ ಆತನು ಗಿರಿವ್ರಜವನ್ನು ಬಿಟ್ಟ ಎಂಟನೆಯ ದಿನ ಬೆಳಗ್ಗೆ ಅಯೋಧ್ಯೆಗೆ ಸೇರಿದನು.

* * *