ಶ್ರೀರಾಮನಿಗೆ ಸೀತೆಯ ವೃತ್ತಾಂತವನ್ನು ಇನ್ನೂ ಕೇಳಬೇಕೆಂಬ ಆಸೆ. ಆದ್ದರಿಂದ ಹನುಮಂತನನ್ನು ಕುರಿತು, “ಅಯ್ಯಾ ಮಾರುತಿ, ಸೀತೆ ನಿನ್ನೊಡನೆ ಇನ್ನೂ ಏನೇನು ಹೇಳಿದಳು? ಎಲ್ಲವನ್ನೂ ವಿವರವಾಗಿ ತಿಳಿಸು” ಎಂದನು. ಹನುಮಂತನು ಶ್ರೀರಾಮನ ಮನಃತೃಪ್ತಿಗಾಗಿ ಮತ್ತೊಮ್ಮೆ ಸೀತಾದೇವಿಯ ವೃತ್ತಾಂತವನ್ನೆಲ್ಲಾ ತಿಳಿಸಿದುದಲ್ಲದೆ ಕಾಕಾಸುರನ ಕಥೆಯನ್ನೂ ಸೀತಾದೇವಿ ಮಾತುಗಳಲ್ಲಿಯೆ ಎಡೆಬಿಡದೆ ತಿಳಿಸಿದನು: “ನೀವು ಚಿತ್ರಕೂಟದಲ್ಲಿದ್ದಾಗ ಒಂದು ದಿನ ಸೀತಾದೇವಿ ನಿನ್ನೊಡನೆ ನಿದ್ರಿಸುತ್ತಿದ್ದು ನಿನಗಿಂತಲೂ ಮೊದಲೇ ಎಚ್ಚರಗೊಂಡಳಂತೆ. ನೀನು ಇನ್ನೂ ಮಲಗಿ ನಿದ್ರಿಸುತ್ತಿದ್ದೆಯಂತೆ. ಆಗ ಒಂದು ಕಾಗೆ ಆಕೆ ಸ್ತನಾಗ್ರವನ್ನು ಕುಕ್ಕಿತಂತೆ. ಕಣ್ದೆರೆದ ನೀನು ಅದನ್ನು ಕಂಡು ಹಾಸ್ಯಮಾಡಿದೆಯಂತೆ. ಆಗ ನಾಚಿಕೆಯಿಂದ ನಿನ್ನ ತೊಡೆಯ ಮೇಲೆ ಮಲಗಿ ನಿದ್ರಿಸಿದಳಂತೆ. ಆಕೆ ಎದ್ದಮೇಲೆ ನೀನು ಆಕೆಯ ತೊಡೆಯ ಮೇಲೆ ಮಲಗಿ ನಿದ್ರೆ ಹೋದೆಯಂತೆ. ಆಗ ಮತ್ತೊಮ್ಮೆ ಆ ಕಾಗೆ ಆಕೆಯನ್ನು ಪೀಡಿಸಲು ಸ್ತನಾಗ್ರವನ್ನು ಕುಕ್ಕಿ ಕುಕ್ಕಿ ಗಾಯಗೊಳಿಸಿತಂತೆ. ಅದರಿಂದ ಸ್ರವಿಸಿದ ರಕ್ತಬಿಂದು ನಿನ್ನ ಮೇಲೆ ಬಿದ್ದು ನಿನಗೆ ನಿದ್ದೆಬಿಟ್ಟುದಂತೆ. ಅಷ್ಟರಲ್ಲಿ ಆಕೆಯೂ ಬಾಧೆಯನ್ನು ತಾಳಲಾರದೆ ನಿನ್ನನ್ನು ಎಬ್ಬಿಸಿದಳಂತೆ. ನೀನು ಆಕೆಯ ಅವಸ್ಥೆಯನ್ನು ಕಂಡು ಕೋಪದಿಂದ ಘೋರ ಸರ್ಪದಂತೆ ನಿಟ್ಟುಸಿರುಬಿಡುತ್ತಾ ‘ಪಂಚಫಣಾಹಿಯೊಡನೆ ಸರಸವಾಡಿದವರಾರು? ನಿನ್ನ ಸ್ತನಾಂತವನ್ನು ಗಾಯಪಡಿಸಿದವರು ಯಾರು?’ ಎಂದು ಗರ್ಜಿಸಿ ಸಮೀಪದಲ್ಲಿಯೆ ಇದ್ದ ಆ ಕಾಗೆಯನ್ನು ಕಂಡೆಯಂತೆ. ಆ ಕಾಗೆ ಇಂದ್ರನ ಮಗನಂತೆ; ಪಕ್ಷಿಗಳಲ್ಲೆಲ್ಲಾ ಶ್ರೇಷ್ಠವಾದುದಂತೆ. ನೀನು ದರ್ಭಾಸನದಿಂದ ಒಂದು ದಭೆಯನ್ನು ಕಿತ್ತು, ಅದನ್ನು ಬ್ರಹ್ಮಾಸ್ತ್ರ ಮಂತ್ರದಿಂದ ಅಭಿಮಂತ್ರಿಸಿ, ಆ ಕಾಗೆಯ ಮೇಲೆ ಬಿಟ್ಟೆಯಂತೆ. ಆಗ ಆ ಕಾಗೆ ಮೂರು ಲೋಕಗಳನ್ನೂ ಸುತ್ತಿ ಎಲ್ಲಿಯೂ ರಕ್ಷಕರನ್ನು ಕಾಣದೆ ನಿನ್ನನ್ನೆ ಶರಣುಹೊಕ್ಕಿತಂತೆ. ವಧಾರ್ಹವಾದ ಆ ಕಾಗೆಯನ್ನು ನೀನು ಕ್ಷಮಿಸಿದೆಯಂತೆ. ಆದರೆ ಬ್ರಹ್ಮಾಸ್ತ್ರ ನಿರರ್ಥಕವಾಗಬಾರದಾಗಿ ಆ ಕಾಗೆಯ ಒಂದು ಕಣ್ಣನ್ನು ಆ ಅಸ್ತ್ರಕ್ಕೆ ಬಲಿಕೊಟ್ಟೆಯಂತೆ. ಅಂತಹ ನೀನು ಈಗ ರಾಕ್ಷಸರ ಮೇಲೆ ಏಕೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವುದಿಲ್ಲವೆಂದು ಆಕೆ ಕೇಳಿದಳು. ‘ಸುರಾಸುರರಲ್ಲಿ ಯಾರೂ ಶ್ರೀರಾಮನೊಡನೆ ಯುದ್ಧ ಮಾಡಲಾರರು. ಆತನಿಗೆ ನನ್ನಲ್ಲಿ ಸ್ವಲ್ಪವಾದರೂ ಕರುಣವಿದ್ದರೆ ಕ್ಷಿಪ್ರದಲ್ಲಿಯೆ ಇಲ್ಲಿಗೆ ಬಂದು ರಾಕ್ಷಸರನ್ನು ಸಂಹರಿಸುವನು. ಲಕ್ಷ್ಮಣನಾದರೂ ಅಣ್ಣನಿಂದ ಅಪ್ಪಣೆಯನ್ನು ಪಡೆದು ಇಲ್ಲಿಗೆ ಬಂದು ಈ ರಾಕ್ಷಸರನ್ನು ಧ್ವಂಸ ಮಾಡಬಾರದೆ? ಪುರುಷೋತ್ತಮರಾದ ಆ ಸಹೋದರರು ನನ್ನನ್ನೇಕೆ ರಕ್ಷಿಸುತ್ತಿಲ್ಲ?’ ಎಂದು ಸೀತಾಮಾತೆ ಹಲುಬಿ ಹಂಬಲಿಸಿದಳು. ತನ್ನ ಅದೃಷ್ಟವನ್ನು ಪರಿಪರಿಯಾಗಿ ನಿಂದಿಸಿಕೊಂಡಳು. ಆಗ ನಾನು ಆ ಪೂಜ್ಯಳನ್ನು ಸಮಾಧಾನಾಮಾಡುತ್ತಾ ‘ತಾಯಿ, ಶ್ರೀರಾಮಚಂದ್ರನು ನಿನಗಾಗಿ ಬಹುಪರಿತಾಪಕ್ಕೆ ಒಳಗಾಗಿರುತ್ತಾನೆ. ನೀನು ಇರುವ ಸ್ಥಳ ಗೊತ್ತಾಗುತ್ತಲೆ ಇಲ್ಲಿಗೆ ಬರುತ್ತಾನೆ. ನಿನ್ನ ವ್ಯಸನವೆಲ್ಲವೂ ಶೀಘ್ರದಲ್ಲಿಯೆ ಕೊನೆಗೊಳ್ಳುತ್ತದೆ. ರಾಮಲಕ್ಷ್ಮಣರು ಈ ಲಂಕೆಯನ್ನು ಭಸ್ಮಮಾಡುತ್ತಾರೆ. ರಾವಣನನ್ನು ಸಂಹರಿಸುತ್ತಾರೆ. ನಿನ್ನನ್ನು ಇಲ್ಲಿಂದ ಕರೆದೊಯ್ಯುತ್ತಾರೆ’ ಎಂದು ಮೇಲಿಂದ ಮೇಲೆ ಹೇಳಿ, ನಿನಗೆ ಗುರುತು ತೋರುವುದಕ್ಕಾಗಿ ಒಂದು ಅಭಿಜ್ಞಾನವನ್ನು ಕೊಡುವಂತೆ ಕೇಳಿದೆ. ಆಗ ಆಕೆ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಈ ಚೂಡಾರತ್ನವನ್ನು ತೆಗೆದು ನನ್ನ ಕೈಗಿತ್ತಳು. ನಾನು ಅದನ್ನು ತೆಗೆದುಕೊಂಡು ಆಕೆಗೆ ಪ್ರದಕ್ಷಿಣ ನಮಸ್ಕಾರ ಮಾಡಿ ಹೊರಡಲು ಸಿದ್ಧನಾದೆ. ಬೃಹದಾಕಾರವನ್ನು ತಾಳುತ್ತಿದ್ದ ನನ್ನನ್ನು ಕಂಡು ಆಕೆ ಕಣ್ಣೀರು ಸುರಿಸುತ್ತಾ ‘ಸಿಂಹಪರಾಕ್ರಮಿಗಳಾದ ರಾಮಲಕ್ಷ್ಮಣರಿಗೆ ನನ್ನ ಕುಶಲವನ್ನು ತಿಳಿಸು. ನನ್ನನ್ನು ಈ ವ್ಯಸನಸಮುದ್ರದಿಂದ ಕಡೆ ಹಾಯಿಸುವಂತೆ ಶ್ರೀರಾಮಚಂದ್ರನಿಗೆ ನಿವೇದಿಸು. ಈ ರಾಕ್ಷಸಿಯರ ಮಧ್ಯದಲ್ಲಿ ನಾನು ಅನುಭವಿಸುತ್ತಿರುವ ನನ್ನ ಸಂಕಟವನ್ನು ಆತನಿಗೆ ತಿಳಿಯಹೇಳು. ನಿನಗೆ ಮಂಗಳವಾಗಲಿ!’ ಎಂದು ಹೇಳಿದಳು. ಆಕೆ ಹೇಳಿರುವುದನ್ನೆಲ್ಲಾ ನಿನಗೆ ಹೇಳಿದ್ದೇನೆ. ಆಕೆ ಕ್ಷೇಮವಾಗಿರುವಳೆಂಬುದನ್ನು ನಂಬು” ಎಂದನು.

ಹನುಮಂತನ ಮಾತನ್ನು ನಂಬುವುದರಲ್ಲಿ ಶ್ರೀರಾಮ ಹಿಂದು ಮುಂದು ನೋಡುವಂತಿರಲಿಲ್ಲ; ಆತನಿಗೆ ಬೇಕಾದುದು ಸೀತೆಯ ವಿಚಾರವಾದ ಸುದ್ದಿಯಷ್ಟೆ. ಎಷ್ಟು ಆಲಿಸಿದರೂ ಆತನಿಗೆ ಸಮಾಧಾನವಿಲ್ಲ. ಆದ್ದರಿಂದ ಹನುಮಂತನು ತನ್ನ ಮಾತನ್ನು ಮುಂದುವರಿಸಿದನು. “ಪ್ರಭು ಮಾತೆಯಾದ ಸೀತಾದೇವಿ ಪ್ರಯಣಸನ್ನದ್ಧನಾಗಿದ್ದ ನನ್ನನ್ನು ಕಂಡು ಕಣ್ಣೀರುಗರೆಯುತ್ತಾ. ‘ಮಾರುತಿ, ನೀನು ಯಾವ ರೀತಿ ಹೇಳಿದರೆ ನನ್ನ ಪತಿದೇವನು ಇಲ್ಲಿಗೆ ಸ್ವಂತವಾಗಿ ಹೊರಟುಬರುವನೊ ಆ ರೀತಿ ಆತನಿಗೆ ನನ್ನ ವಿಚಾರವನ್ನು ತಿಳಿಸು. ನಿನಗೆ ಇಷ್ಟಬಂದರೆ ನೀನು ಇಲ್ಲಿಯೆ ಒಂದು ದಿನ ರಹಸ್ಯವಾಗಿದ್ದು ವಿಶ್ರಮಿಸಿಕೊಂಡು ಮಾರನೆಯ ದಿನ ಹೊರಡು. ನೀನು ಇಲ್ಲಿಯೆ ಒಂದು ದಿನವಿದ್ದರೆ ದುರದೃಷ್ಟಶಾಲಿಯಾದ ನಾನು ಎಷ್ಟೋ ಸಮಾಧಾನಪಟ್ಟುಕೊಳ್ಳುತ್ತೇನೆ. ಶ್ರೀರಾಮನ ವಿಯೋಗದಿಂದ ಅತಿಶಯವಾದ ಪರಿತಾಪಕ್ಕೆ ಒಳಗಾಗಿರುವ ನಾನು ನೀನು ಹೊರಟು ಹೋಗುವುದನ್ನು ಕಂಡು ಮತ್ತೂ ಮಹಾವ್ಯಸನಕ್ಕೆ ಒಳಗಾಗುವೆನು. ಅಗಾಧವಾದ ಈ ಸಮುದ್ರವನ್ನು ನಿನ್ನ ರಾಜನ ಕಪಿಸೇನೆಯಾಗಲಿ ರಾಮಲಕ್ಷ್ಮಣರಾಗಲಿ ದಾಟುವುದು ಹೇಗೆ? ಆದರೆ ನನ್ನನ್ನು ಕರೆದೊಯ್ಯಲು ಶ್ರೀರಾಮನು ಪ್ರತ್ಯಕ್ಷವಾಗಿ ಇಲ್ಲಿಗೆ ಬಂದು ಈ ರಾವಣನನ್ನು ಸಂಹರಿಸುವುದು ಅನಿವಾರ್ಯವಲ್ಲವೆ? ಅದು ಹೇಗೆ ಸಾಧ್ಯ?’ ಎಂದು ಕೇಳಿದಳು. ನಾನು ಆಕೆಗೆ ‘ತಾಯಿ, ರಾಜನಾದ ಸುಗ್ರೀವನಲ್ಲಿ ಮಹಾಶೂರರಾದ ಅನೇಕ ವಾನರಿದ್ದಾರೆ. ಅವರಿಗೆ ದಶದಿಕ್ಕುಗಳಲ್ಲಿಯೂ ಸಂಚರಿಸುವ ಶಕ್ತಿಯುಂಟು. ಅವರಲ್ಲೆಲ್ಲಾ ನಾನೇ ಕಿರಿಯ. ನನಗಿಂತಲೂ ಅಧಿಕ ಬಲಶಾಲಿಗಳು ಆತನ ಬಳಿ ಇದ್ದಾರೆ. ನಾನೇ ಇಲ್ಲಿಗೆ ಬಂದಿರುವಾಗ ಉಳಿದವರೂ ಇಲ್ಲಿಗೆ ಬರುವರೆಂಬುದರಲ್ಲಿ ಸಂದೇಹವೇಕೆ? ನೀನು ವ್ಯಸನವನ್ನು ತೊರೆ. ಸಮಾಧಾನವನ್ನು ಹೊಂದು; ವಾನರವೀರರೆಲ್ಲಾ ಲಂಕೆಗೆ ಬರುತ್ತಾರೆ. ಪುರುಷೋತ್ತಮರಾದ ರಾಮಲಕ್ಷ್ಮಣರು ನನ್ನ ಹೆಗಲ ಮೇಲೆ ಕುಳಿತು ಏಕಕಾಲದಲ್ಲಿ ಉದಯಿಸುವ ಸೂರ್ಯಚಂದ್ರರಂತೆ ನಿನ್ನ ಬಳಿಗೆ ಬರುತ್ತಾರೆ. ಸಿಂಹಸದೃಶನಾದ ಶ್ರೀರಾಮನನ್ನೂ ಧನುರ್ಧಾರಿಯಾಗಿ ಲಂಕಾದ್ವಾರದಲ್ಲಿ ನಿಂತಿರುವ ಲಕ್ಷ್ಮಣನನ್ನೂ ನೀನು ಶೀಘ್ರದಲ್ಲಿಯೆ ಕಾಣುವೆ. ಪರ್ವತದೇಹಿಗಳಾದ ವಾನರರ ಕೋಲಾಹಲ ಧ್ವನಿ ಕ್ಷಿಪ್ರದಲ್ಲಿಯೆ ನಿನ್ನ ಕಿವಿಗೆ ಸವಿಜೇನಾಗುತ್ತದೆ! ದೇವಿ, ಶ್ರೀರಾಮಚಂದ್ರನು ಶೀಘ್ರದಲ್ಲಿಯೇ ನಿನ್ನನ್ನು ಇಲ್ಲಿಂದ ಕರೆದೊಯ್ದು ಅಯೋಧ್ಯಾನಗರದಲ್ಲಿ ನಿನ್ನೊಡನೆ ಪಟ್ಟಾಭಿಷಿಕ್ತನಾಗುತ್ತಾನೆ!’ ಎಂದು ಆಕೆಯ ವ್ಯಸನ ಇಂಗಿಹೋಗುವಂತೆ ಮಂಗಳಕರವಾದ ನುಡಿಗಳನ್ನು ಹೇಳಿರುತ್ತೇನೆ. ನನ್ನ ಮಾತುಗಳಿಂದ ಆಕೆಗೆ ಎಷ್ಟೋ ಶಾಂತಿ ಒದಗಿತು. ಅಷ್ಟಾದ ಮೇಲೆಯೆ ನಾನು ಅಲ್ಲಿಂದ ಹೊರಟುಬಂದದ್ದು. ”

ಹನುಮಂತನ ಸಾಂತ್ವನ ವಚನಗಳನ್ನು ಆಲಿಸಿದ ಮೇಲೆ ಶ್ರೀರಾಮನ ಮನಸ್ಸು ಒಂದಿನಿತು ಸಮಾಧಾನಗೊಂಡಿತು.