ತಂಗಿಯ ಮಾತನ್ನು ಕೇಳಿ ಖರನು ಉರಿದೆದ್ದನು. ಯಮನಿಗೆ ಸಮಾನರಾದ ಹದಿನಾಲ್ಕು ಮಂದಿ ರಾಕ್ಷಸವೀರರನ್ನು ಕರೆದು, “ನಡೆಯಿರಿ. ಆ ಮೂವರು ನರಾಧಮರನ್ನು ಕೊಂದು ಇಲ್ಲಿಗೆ ತೆಗೆದುಕೊಂಡು ಬನ್ನಿ. ಅವರ ನೆತ್ತರನ್ನು ಹೀರಿ ತಣಿಯಲಿ ನನ್ನ ತಂಗಿ” ಎಂದು ಗರ್ಜಿಸಿದನು. ಖರನ ಅಪ್ಪಣೆಯಂತೆ ಆಗ ಬಿರುಗಾಳಿಯೊಡಗೂಡಿದ ಮೋಡಗಳಂತೆ ಆ ಶೂರ್ಪನಖಿಯೊಡಗೂಡಿ ಅವರು ದಂಡಕಾರಣ್ಯವನ್ನು ಹೊಕ್ಕು ಸೀತೆಯೊಡನಿದ್ದ ರಾಮಲಕ್ಷ್ಮಣರನ್ನು ಕಂಡರು. ತಮ್ಮ ಮೇಲೆತ್ತಿ ಬರುತ್ತಿದ್ದ ರಾಕ್ಷಸರನ್ನು ನೋಡಿ ಬಲಶಾಲಿಯಾದ ರಾಮನು ಸೀತೆಯನ್ನು ರಕ್ಷಿಸುತ್ತಿರುವಂತೆ ಲಕ್ಷ್ಮಣನಿಗೆ ಬೆಸಸಿ ಹಗೆಗಳಿಗೆ ಇದಿರಾದನು. ರಾಮನು ಬಿಟ್ಟ ಬಾಣಗಳಿಂದ, ಬೇರು ಸಹಿತ ಕತ್ತರಿಸಿ ಹೋದ ಮರದಂತೆ ಆ ಹದಿನಾಲ್ಕು ಮಂದಿ ರಕ್ಕಸರೂ ನೆಲಕ್ಕುರಳಿ ಪ್ರಾಣಬಿಟ್ಟರು. ಇದನ್ನು ಕಂಡ ಶೂರ್ಪನಖಿ ಭಯಂಕರವಾಗಿ ಕೂಗುತ್ತ ಖರನ ಬಳಿಗೋಡಿ ಬಂದು ಎಲ್ಲರೂ ರಾಮನೊಬ್ಬನಿಂದ ಹತರಾದ ಸಮಾಚಾರವನ್ನು ಅವನಿಗೆ ತಿಳಿಸಿದಳು.

ಶೂರ್ಪನಖಿ ತಂದ ಸಮಾಚಾರದಿಂದ ಖರನು ಸಂತೃಪ್ತನಾದನು. ರಾಮನನ್ನು ಕೊಲ್ಲದಿದ್ದರೆ ತಾನು ಪ್ರಾಣಬಿಡುವೆನೆಂಬ ಆಕೆಯ ಮಾತುಗಳು ಅವನನ್ನು ಉದ್ರೇಕಗೊಳಿಸಿದುವು. ಭಯ, ಕೋಪ, ದುಃಖಗಳಿಂದ ಹೊಟ್ಟೆ ಬಡಿದುಕೊಳ್ಳುತ್ತಿದ್ದ ತನ್ನ ತಂಗಿಯನ್ನು ನೋಡಿ ಖರನು “ತಂಗಿ, ನಿನ್ನ ಅಪಮಾನದಿಂದ ನನಗುಂಟಾಗಿರುವ ಕೋಪವನ್ನು ಉಕ್ಕೆದ್ದ ಸಾಗರದಂತೆ ತಡೆಯಲು ಅಸಾಧ್ಯವಾಗಿದೆ. ಮನುಷ್ಯ ಮಾತ್ರದವನೂ ಅಲ್ಪಾಯುಷ್ಯವನ್ನು ಹೊಂದಿರುವವನೂ ಆಗಿರುವ ರಾಮನನ್ನು ನಾನು ಲೆಕ್ಕಿಸುವೆನೆಂದು ಬಗೆದೆಯಾ? ಕಣ್ಣುಗಳಿಂದ ಬೀಳುತ್ತಿರುವ ಕಂಬನಿಯನ್ನು ತಡೆದುಕೊ. ಇಗೋ! ರಾಮನೊಡನೆ ಯುದ್ಧಕ್ಕೆ ನಾನೆ ಹೊರಟೆ. ಯುದ್ಧದಲ್ಲಿ ಮಾಡಿದ ರಾಮನ ಬಿಸಿ ನೆತ್ತರಿಂದ ತೃಪ್ತಿಪಡು” ಎಂದು ಅವಳನ್ನು ಸಂತೈಸಿದನು.

ಅಣ್ಣನ ಮಾತಿನಿಂದ ಶೂರ್ಪನಖಿಗೆ ಸಂತೋಷವೂ ಹಾಗೂ ಸಮಾಧಾನವೂ ಉಂಟಾದವು. ಅವನನ್ನು ಆಕೆ ಬಾಯಿತುಂಬ ಹೊಗಳಿದಳು. ಆಗ ಖರನು ನೀಲಮೇಘದ ಕಾಂತಿಯುಳ್ಳ ಭಯಂಕರಾಕಾರದ ಹದಿನಾಲ್ಕು ಸಾವಿರ ರಾಕ್ಷಸರನ್ನು ತನ್ನಲ್ಲಿಗೆ ಕಳುಹಿಸಿಕೊಡುವಂತೆ ಸೇನಾಪತಿಯಾದ ದೂಷಣನಿಗೆ ಹೇಳಿಕಳುಹಿಸಿದನು. ಒಡೆಯನ ಅಪ್ಪಣೆಯಂತೆ ದೂಷಣನು ಹೊಂಬಣ್ಣದ ಕುದುರೆಗಳಿಂದ ಹೂಡಿದ ರಥವನ್ನು ಸಿದ್ಧಪಡಿಸಿ ತಂದನು. ಆ ರಥವನ್ನು ಹತ್ತಿ ಖರನು ಯುದ್ಧಕ್ಕೆ ಹೊರಟಾಗ, ಹದಿನಾಲ್ಕು ಸಾವಿರ ಯೋಧರ ಆಯುಧಗಳು ಆಕಾಶವನ್ನೂ, ಧ್ವನಿಗಳು ದಿಕ್ಕುದಿಕ್ಕುಗಳನ್ನೂ ತುಂಬಿದುವು.

ಯುದ್ಧಕ್ಕೆ ಹೊರಟಿದ್ದ ಖರನಿಗೆ ಆಗ ಅನೇಕ ದುಶ್ಯಕುನಗಳು ಕಾಣಿಸಿಕೊಂಡುವು. ಕತ್ತೆಯ ಬಣ್ಣದ ಮೇಘವೊಂದು ರಕ್ತದ ಮಳೆಯನ್ನೇ ಸುರಿಸಿತು. ಖರನ ರಥದ ಕುದುರೆಗಳು ಹೂವಿನ ಹಾಸಿನಂತಿದ್ದ ರಾಜಮಾರ್ಗದಲ್ಲಿ ಮುಗ್ಗರಿಸಿ ಬಿದ್ದುವು. ಸೂರ್ಯನ ಸುತ್ತಲೂ ಪರಿವೇಷ ಕಂಡುಬಂತು. ದೊಡ್ಡದೊಂದು ಹದ್ದು ಚಿನ್ನದ ದಂಡವುಳ್ಳ ಧ್ವಜದ ಮೇಲೆ ಬಂದೆರಗಿತು. ನಡುಹಗಲಿನಲ್ಲೆ ನರಿಗಳು ಅಶುಭ ಧ್ವನಿಯಿಂದ ಕೂಗಿಕೊಂಡುವು. ಭಯಂಕರವಾದ ಮೇಘಗಳು ಆಕಾಶವನ್ನೆಲ್ಲ ತುಂಬಿ ಕತ್ತಲೆಯನ್ನುಂಟುಮಾಡಿದವು. ಆಗ ಬೀಸಿದ ಬಿರುಗಾಳಿಯಿಂದ ಧೂಳೆದ್ದು ಬೆಟ್ಟಗಳೂ ಕಾಡುಗಳೂ ನಡುಗಿಹೋದುವು. ಮುಂದೆ ಬರುವ ಕೇಡನ್ನು ಸೂಚಿಸಿ, ಖರನ ಎಡಭುಜ ನಡುಗಿತು. ಆದರೆ ಆ ದುಶ್ಯಕುನಗಳನ್ನು ಕಂಡು ಖರನು ಹೆದರಲಿಲ್ಲ. ಯುದ್ಧವನ್ನು ನೋಡಲು ದೇವತೆಗಳೂ ಗಂಧರ್ವರೂ ಋಷಿಗಳೂ ವಿಮಾನಗಳನ್ನು ಏರಿಕೊಂಡು ಆಕಾಶದಲ್ಲಿ ನೆರೆದರು.

ಖರದೂಷಣರು ತಮ್ಮ ಬಲದೊಡನೆ ರಾಮನ ಆಶ್ರಮದ ಬಳಿಗೆ ಬರುತ್ತಿರಲು, ರಾಮನು ಉತ್ಪಾತಗಳನ್ನು ನೋಡಿದನು. ಲಕ್ಷ್ಮಣನನ್ನು ಕುರಿತು “ವತ್ಸ, ರಾಕ್ಷಸರ ವಧೆಗಾಗಿ ಮೂಡಿರುವ ಈ ಉತ್ಪಾತಗಳನ್ನು ನೋಡಿದೆಯಾ? ಈ ಶಕುನಗಳು ನಮಗೆ ಶುಭವನ್ನೂ ಶತ್ರುಗಳಿಗೆ ನಾಶವನ್ನೂ ಸೂಚಿಸುತ್ತಿವೆ. ನನ್ನ ಬಲದೋಳು ಬಾರಿಬಾರಿಗೂ ಸ್ಫುರಿಸುತ್ತಿದೆ. ಕ್ರೂರಿಗಳಾದ ಈ ರಾಕ್ಷಸರನ್ನು ನಾನೊಬ್ಬನೆ ಇದಿರಿಸುತ್ತೇನೆ. ನೀನು ಧನುರ್ಧಾರಿಯಾಗಿ, ಗಿಡಮರಗಳಿಂದ ತುಂಬಿ ಪ್ರವೇಶಿಸಲು ಅಸಾಧ್ಯವಾದ ಬೆಟ್ಟದ ಬುಡದಲ್ಲಿರುವ ಗುಹೆಯೊಂದರೊಳಗೆ ಈ ವೈದೇಹಿಯನ್ನು ಕರೆದುಕೊಂಡು ಹೋಗು” ಎಂದನು. ರಾಮನ ಮಾತಿನಂತೆ ಲಕ್ಷ್ಮಣನು ಸೀತೆಯನ್ನು ಕರೆದುಕೊಂಡು ಹೋದನು. ಇತ್ತ ರಾಮನು ಅಗ್ನಿಗೆ ಸಮಾನವಾಗಿ ಕವಚವನ್ನು ತೊಟ್ಟು, ಬಿಲ್ಲುಬಾಣಗಳನ್ನು ಹಿಡಿದು, ಹೊಗೆಯಿಲ್ಲದ ಬೆಂಕಿಯಂತೆ ಯುದ್ಧಕ್ಕೆ ಸಿದ್ಧನಾದನು. ಶ್ರೀರಾಮನ ಬಿಲ್ಲಿನ ಧ್ವನಿಗೆ ಹತ್ತು ದಿಕ್ಕುಗಳು ಮೊಳಗೆದವು. ಯುದ್ಧಕ್ಕೆ ಸಿದ್ಧನಾಗಿ ನಿಂತ ರಾಮನು ಪ್ರಳಯಕಾಲದ ರುದ್ರನಂತೆ ರಂಜಿಸಿದನು.

ಸಿಂಹನಾದ ಮಾಡುತ್ತ ನಾನಾವಿಧವಾದ ಆಯುಧಗಳನ್ನು ಧರಿಸಿದ ರಾಕ್ಷಸರ ಸೇನೆ ಶ್ರೀರಾಮನನ್ನು ಸಮೀಪಿಸಿತು. ರಾಕ್ಷಸರ ಪಡೆಯನ್ನು ನೋಡಿ ಪ್ರಳಯಕಾಲದ ರುದ್ರನಂತೆ ಕೋಪಗೊಂಡು ಧನುಸ್ಸನ್ನೆತ್ತಿದ ರಾಮನನ್ನು ದರ್ಶಿಸಿದೊಡನೆಯೆ ವನದೇವತೆಗಳು ಓಡಿಹೋದುವು. ಖರನ ಅಪ್ಪಣೆಯಂತೆ ಅವನ ಸಾರಧಿ ರಥವನ್ನು ಶ್ರೀರಾಮನ ಮುಂದೆ ಹರಿಸಿದನು. ಆ ಸಮಯದಲ್ಲಿ ಖರನ ಮಂತ್ರಿಗಳೂ ರಾಮನನ್ನು ಸುತ್ತುವರಿದು. ತಾರಾಗಣದ ನಡುವೆ ಇರುವ ಅಂಗಾರಕನಂತೆ, ರಥದ ಮೇಲಿದ್ದ ಖರನು ಶ್ರೀರಾಮನನ್ನು ಸಾವಿರಾರು ಬಾಣಗಳಿಂದ ಹೊಡೆದನು. ಅವನ ಸೈನಿಕರು ರಾಮನ ಮೇಲೆ ಆಯುಧಗಳ ಮಳೆಯನ್ನೇ ಕರೆದರು. ಸಾಗರವು ನದಿಗಳನ್ನು ತಡೆಯುವಂತೆ ರಾಮನು ತನ್ನ ಬಾಣಗಳಿಂದ ಹಗೆಗಳ ಬಾಣಗಳನ್ನು ಮಧ್ಯದಲ್ಲೇ ತಡೆದನು. ಅಷ್ಟೇ ಅಲ್ಲದೆ ಬಿರುಗಾಳಿಗೆ ಸಿಲುಕಿದ ಬಾಳೆಯ ಮರಗಳಂತೆ ಶತ್ರುವನ್ನು ತನ್ನ ಬಾಣಗಳಿಂದ ಉರುಳಿಸತೊಡಗಿದನು. ತನ್ನ ದಂಡು ನಷ್ಟವಾಗುತ್ತಿರುವುದನ್ನು ಕಂಡು ಕೆಂಡದಂತಾದ ದೂಷಣನು ಶ್ರೀರಾಮನ ಇದಿರು ನುಗ್ಗಿದನು. ಆಗ ಶ್ರೀರಾಮನು ಅರ್ಧಚಂದ್ರಾಕಾರದ ಬಾಣವೊಂದರಿಂದ ಅವನ ರಥದ ಕುದುರೆಗಳನ್ನು ಕೊಂದು, ಸಾರಥಿಯ ತಲೆಯನ್ನು ಕತ್ತರಿಸಿ ದೂಷಣನ ಎದೆಗೆ ಗುರಿಯಿಟ್ಟು ಹೊಡೆದನು. ಕ್ರೋಧದಿಂದ ಉದ್ದೀಪ್ತನಾದ ದೂಷಣನೂ ಪರಿಘವನ್ನೆತ್ತಿಕೊಂಡು ರಾಮನ ಮೇಲೆ ಬೀಳಬರಲು ಹರಿತವಾದ ಬಾಣವೊಂದರಿಂದ ರಾಮನು ಅವನ ತಲೆಯನ್ನು ಕತ್ತರಿಸಿದನು. ಕಡಿವಡೆದ ಮದಗಜದಂತೆ ದೂಷಣನು ಭೂಮಿಯಲ್ಲಿ ಮಲಗಿದನು.

ತಾನು ಮತ್ತು ತ್ರಿಶಿರಸ್ಸು ಇಬ್ಬರು ಹೊರೆತು ಇನ್ನುಳಿದ ತನ್ನ ಬಲವೆಲ್ಲ ನಾಶವಾದುದನ್ನು ನೋಡಿ, ವಜ್ರಾಯುಧವನ್ನು ಹಿಡಿದ ದೇವೇಂದ್ರನಂತೆ ಖರನೆ ಶ್ರೀರಾಮನನ್ನು ಎದುರಿಸಿದನು. ಇದನ್ನು ಕಂಡು ತ್ರಿಶಿರಸ್ಸು ಖರನನ್ನು ತಡೆದು “ರಾಜನ್, ನಾನೇ ಹೋಗಿ ರಾಮನನ್ನು ವಧಿಸುತ್ತೇನೆ. ತಾವು ಜನಸ್ಥಾನಕ್ಕೆ ಹಿಂದಿರುಗಬೇಕು. ಒಂದು ವೇಳೆ ನಾನು ರಣದಲ್ಲಿ ಮೃತಪಟ್ಟರೆ ಆಗ ತಾವು ರಾಮನೊಡನೆ ಯುದ್ಧಕ್ಕೆ ಬರಬಹುದು” ಎಂದು ಪ್ರಾರ್ಥಿಸಿಕೊಂಡನು. ಖರನು ತ್ರಿಶಿರಸ್ಸಿನ ಪ್ರಾರ್ಥನೆಯನ್ನು ಮನ್ನಿಸಲು ಆ ರಾಕ್ಷಸನು ಶ್ರೀರಾಮನ ಬಳಿಗೈದಿ ಅವನ ಮೇಲೆ ಬಾಣದ ಮಳೆಯನ್ನೆ ಕರೆದನು. ತ್ರಿಶಿರಸ್ಸಿನ ಸಿಂಹನಾದವಾದರೊ ಗುಡುಗನ್ನು ನೆನಪೆಗೆ ತರುವಂತಿತ್ತು. ತನ್ನನ್ನು ಸಮೀಪಿಸಿ ಬರುತ್ತಿದ್ದ ತ್ರಿಶಿರಸ್ಸನ್ನು ನೋಡಿ, ರಾಮನು ಅವನನ್ನು ಹರಿತವಾದ ಬಾಣಗಳಿಂದಲೆ ಸ್ವಾಗತಿಸಿದನು. ಅವರಿಬ್ಬರಿಗೂ ಪ್ರಬಲವಾದ ಯುದ್ಧವಾಯಿತು. ಆಗ ತ್ರಿಶಿರಸ್ಸು ಮೂರು ಬಾಣಗಳಿಂದ ರಾಮನ ಹಣೆಗೆ ಗುರಿಯಿಟ್ಟು ಹೊಡೆದನು. ಇದರಿಂದ ಕೋಪಗೊಂಡ ರಾಮನು ಅವನನ್ನು ಕುರಿತು “ನನ್ನ ಹಣೆಗೆ ನಿನ್ನ ಬಾಣಗಳು ಹೂವಿನಂತೆ ಬಂದು ತಾಕಿದುವು. ನಿನ್ನ ಪರಾಕ್ರಮ ದೊಡ್ಡದು. ಈಗ ನೀನು ನನ್ನ ಬಾಣಗಳನ್ನು ಸೈರಿಸಿಕೊ” ಎಂದು ಅವನನ್ನು ಹೊಗಳುತ್ತ, ಹದಿನಾಲ್ಕು ಬಾಣಗಳಿಂದ ರಾಕ್ಷಸನ ಎದೆಯನ್ನೂ, ನಾಲ್ಕರಿಂದ ಅವನ ತೇರಿನ ಕುದುರೆಗಳನ್ನೂ, ಎಂಟರಿಂದ ಸಾರಥಿಯನ್ನೂ, ಮೂರು ಬಾಣಗಳಿಂದ ತ್ರಿಶಿರಸ್ಸಿನ ತಲೆಯನ್ನೂ ಕತ್ತಿರಿಸಿದನು. ನೆತ್ತರನ್ನು ಕಾರುತ್ತ ಆ ರಾಕ್ಷಸನು ಭೂಮಿಗೆ ಬೀಳಲು ಖರನ ಸೇವಕರು ಹುಲಿಗೆ ಹೆದರಿದ ಹುಲ್ಲೆಗಳಂತೆ ಓಡಿಹೋದರು.

ಆ ದೃಶ್ಯವನ್ನು ಕಂಡು ಉರಿದೆದ್ದ ಖರನು ಚಂದ್ರನನ್ನು ಅಟ್ಟಿ ಬರುವ ರಾಹುವಿನಂತೆ ಶ್ರೀರಾಮನನ್ನು ಅಟ್ಟಿಬಂದನು. ರಣದಲ್ಲಿ ರಾಮ ಬಾಣಗಳಿಂದ ಮಡಿದು ಬಿದ್ದಿದ ದೂಷಣ ತ್ರಿಶಿರಸ್ಸುಗಳನ್ನು ನೋಡಿ ಖರನಿಗೆ ಹೆದರಿಕೆಯಾಯಿತು. ಆದರೂ ಅವನು ರಾಮನ ಮೇಲೆ ಕೃಷ್ಣಸರ್ಪದಂತೆ ಕ್ರೂರವಾದ, ನೆತ್ತರನ್ನು ಕುಡಿಯಲು ಹಾತೊರೆಯುವ ಬಾಣಗಳನ್ನು ಪ್ರಯೋಗಿಸಿದನು. ಅವರಿಬ್ಬರೂ ಬಿಡುತ್ತಿದ್ದ ಬಾಣಗಳಿಂದ ಆಕಾಶ ಮುಚ್ಚಿಹೋಯಿತು; ಬಿಲ್ಲಿನ ಧ್ವನಿಯಿಂದ ಹತ್ತು ದಿಕ್ಕುಗಳೂ ತುಂಬಿ ಹೋದುವು; ಸೂರ್ಯನು ಕಾಣಿಸದಾದನು. ಆ ಸಮಯದಲ್ಲಿ ಖರನು ಹರಿತವಾದ ಬಾಣಗಳಿಂದ ಶ್ರೀರಾಮನ ಧನುಸ್ಸನ್ನು ಕತ್ತರಿಸಿ, ಕವಚವನ್ನು ಸೀಳಿದನು. ಆಗ ರಾಮನು ಅಗಸ್ತ್ಯರು ತನಗೆ ಕೊಟ್ಟಿದ್ದ ವೈಷ್ಣವ ಧನುಸ್ಸಿನಿಂದ ಖರನ ರಥದ ಸ್ವರ್ಣಧ್ವಜವನ್ನು ಕತ್ತರಿಸಿದನು. ವಜ್ರಾಯುಧಕ್ಕೆ ಸಮಾನವಾದ ಮೂರು ಬಾಣಗಳಿಂದ ಖರನನ್ನು ಹೊಡೆದು, ಅವನ ರಥವನ್ನು ಧ್ವಂಸಮಾಡಿದನು. ಆದರೂ ಖರನು ಎದೆಗೆಡದೆ ಗದಾಪಾಣಿಯಾಗಿ ಯುದ್ಧಕ್ಕೆ ಮುನ್ನುಗ್ಗಿ ಬರಲು, ಅವನನ್ನು ನೋಡಿ ರಾಮನು “ಎಲೈ ನೃಶಂಸನೆ, ಪ್ರಾಣಿಗಳನ್ನು ಹಿಂಸಿಸುತ್ತ ನಿನ್ನಂತೆ ಪಾಪಕಾರ್ಯಗಳನ್ನು ಆಚರಿಸುತ್ತಿರುವವರು ಈ ಮೂರು ಲೋಕಗಳಲ್ಲಿ ಮತ್ತಾರೂ ಇಲ್ಲ. ದುಷ್ಟ ಮನುಷ್ಯನನ್ನು ಲೋಕದಲ್ಲಿ ಜನರು ಕ್ರೂರ ಸರ್ಪವನ್ನು ಕೊಲ್ಲುವಂತೆ ಕೊಲ್ಲುವರು. ಎಲಾ ದುಷ್ಟ, ದಂಡಕಾರಣ್ಯವಾಸಿಗಳೂ ಧರ್ಮಪರರೂ ಆದ ಋಷಿಗಳನ್ನು ಕೊಲ್ಲುವುದರಿಂದ ನಿನಗೆ ಬರುವ ಭಾಗ್ಯವೇನು? ಬೇರು ಸವೆದ ಮರದಂತೆ ಪಾಪಾತ್ಮನಾದ ನೀನು ಇನ್ನು ಬಹು ಕಾಲ ಬದುಕಲಾರೆ. ವಿಷದಿಂದ ಕೂಡಿದ ಅನ್ನವನ್ನು ತಿನ್ನುವವರಿಗೆ ಸಾವು ಉಂಟಾಗುವಂತೆ ಬಹುಬೇಗ ನಿನ್ನ ಪ್ರಾಣಗಳು ಹೊರಟುಹೋಗುತ್ತವೆ. ಹುತ್ತದಿಂದ ಬರುವ ಕೃಷ್ಣಸರ್ಪದಂತೆ ನನ್ನ ಬಾಣಗಳು ನಿನ್ನನ್ನು ಕೊಲ್ಲುವುವು” ಎಂದನು. ಆ ಮಾತಿಗೆ ಖರನು “ಸಾಮಾನ್ಯ ರಾಕ್ಷಸರನ್ನು ಕೊಂದು ನಿನ್ನನ್ನೇ ನೀನು ಹೊಗಳಿಕೊಳ್ಳುವೆ. ತಮ್ಮನ್ನು ತಾವು ಹೊಗಳಿಕೊಳ್ಳುವುದು ವೀರರಿಗೆ ಉಚಿತವಲ್ಲ. ಉರಿಯುವ ದರ್ಭೆಯ ಕಾಂತಿ ತನ್ನನ್ನೇ ತಾನು ನಾಶಮಾಡಿಕೊಳ್ಳುವಂತೆ, ಆತ್ಮಸ್ತುತಿ ಮಾಡಿಕೊಳ್ಳುವ ನೀನು ಬಹುಬೇಗ ನಾಶಹೊಂದುವೆ. ಪಾಶಸಹಿತನಾದ ಯಮನಂತಿರುವ ನಾನು ಈ ಸಂಜೆಯೊಳಗೆ ನಿನ್ನನ್ನು ಕೊಂದು ಸತ್ತ ಹದಿನಾಲ್ಕು ಸಾವಿರ ರಾಕ್ಷಸ ಬಾಂಧವರ ಕಣ್ಣೀರನ್ನೊರಸುತ್ತೇನೆ” ಎಂದು ಗರ್ಜಿಸಿ ಸಿಡಿಲಿನಂತಿದ್ದ ಗದೆಯನ್ನು ಶ್ರೀರಾಮನ ಮೇಲೆ ಎಸೆದಪ್ಪಳಿಸಿದನು. ಆ ಗದೆಯನ್ನು ಮಧ್ಯಮಾರ್ಗದಲ್ಲಿಯೆ ಶ್ರೀರಾಮನು ಕತ್ತರಿಸಲು, ಮಂತ್ರಬಲದಿಂದ ಕೆಲಕ್ಕುರುಳಿದ ಸರ್ಪದಂತೆ ಅದು ಕೆಳಕ್ಕುರುಳಿತು.

ಗದೆ ಮುರಿದುದನ್ನು ನೋಡಿ ಖರನು ಸಂತೃಪ್ತನಾಗಿ ದೊಡ್ಡದೊಂದು ಮರವನ್ನು ಎತ್ತಿಕೊಂಡು ‘ರಾಮ ನೀನು ಸತ್ತೆ’ ಎಂದು ರಾಮನನ್ನು ಹೊಡೆದನು. ರಾಮನು ಅದನ್ನು ಅರ್ಧ ದಾರಿಯಲ್ಲಿಯೆ ಕತ್ತರಿಸಿ ಖರನ ಮೈಯಿಂದ ರಕ್ತದ ಕೋಡಿಯನ್ನೆ ಹರಿಯಿಸಿದನು. ದೇಹದಲ್ಲಿ ಸುರಿಯುತ್ತಿದ್ದ ರಕ್ತದಿಂದ ಖರನು ಝರಿಗಳು ಹರಿದು ಬರುವ ಬೆಟ್ಟದಂತೆ ರಂಜಿಸಿದನು. ಆ ಸಮಯದಲ್ಲಿ ಶ್ರೀರಾಮನು ಇಂದ್ರನು ಕೊಟ್ಟಿದ್ದ ಹರಿತವಾದ ಬಾಣವೊಂದರಿಂದ ಹೊಡೆಯಲು, ರುದ್ರನಿಂದ ದಹಿಸಲ್ಪಟ್ಟ ಅಂಧಕಾಸುರನಂತೆ ವೈರಿ ಭೂಮಿಗೆ ಬಿದ್ದನು.

ಖರನ ಸಾವಿನಿಂದ ಋಷಿಗಳು ಸಂತೋಷಗೊಂಡು ಶ್ರೀರಾಮನನ್ನು ಗೌರವಿಸಿದರು. “ರಾಮಚಂದ್ರ, ನಿನ್ನಿಂದ ಈ ಕಾರ್ಯವನ್ನು ಮಾಡಿಸುವುದಕ್ಕಾಗಿಯೆ ತೇಜಸ್ವಿಯಾದ ಇಂದ್ರನು ಶರಭಂಗನ ಆಶ್ರಮಕ್ಕೆ ಬಂದಿದ್ದನು. ನೀನು ಇಲ್ಲಿಗೆ ಬಂದು, ಕ್ರೂರಕರ್ಮಿಗಳಾದ ಈ ರಾಕ್ಷಸರನ್ನು ಕೊಂದುದರಿಂದ ಯಾರ ಭಯವೂ ಇಲ್ಲದೆ ನಾವಿನ್ನು ಸುಖವಾಗಿ ತಪಸ್ಸನ್ನು ಆಚರಿಸಬಹುದು” ಎಂದು ಋಷಿಗಳು ಅವನನ್ನು ಕೊಂಡಾಡಿದರು. ಆಗ ದೇವ ದುಂದುಭಿಗಳು ಮೊಳಗಿದುವು; ದೇವತೆಗಳು ಆಕಾಶದಿಂದ ಶ್ರೀರಾಮನ ಮೇಲೆ ಹೂವಿನ ಮಳೆಯನ್ನು ಕರೆದರು. ಚಾರಣರು ರಾಮನ ಗುಣಗಳನ್ನು ಕೊಂಡಾಡಿದರು. ಆಗ ಲಕ್ಷ್ಮಣನು ಸೀತೆಯೊಡಗೂಡಿ ಗುಹೆಯಿಂದ ಹೊರಕ್ಕೆ ಬಂದು ವಿಜಯಿಯಾದ ಅಣ್ಣನನ್ನು ಕಂಡು ಸಂತೋಷಪಟ್ಟನು. ಸೀತೆ ಹರುಷಗೊಂಡು ಗಂಡನನ್ನು ಅಪ್ಪಿದಳು.

***