ಬಲಭೀಮನಾದ ವಿರಾಧನನ್ನು ಕೊಂದಬಳಿಕ ಶ್ರೀರಾಮನು ಸೀತೆಯನ್ನು ಅಪ್ಪಿಕೊಂಡು ಆಕೆಯನ್ನು ಸಂತೈಸಿದನು. ಅನಂತರ ದಟ್ಟವಾದ ಕಾಡನ್ನು ಆ ಮೂವರೂ ಹೊಕ್ಕರು. ಶರಭಂಗ ಋಷಿಯ ಆಶ್ರಮದ ಸಮೀಪಕ್ಕೆ ಬರುತ್ತಲೆ ಸೂರ್ಯಾಗ್ನಿ ಸಮಾನವಾದ ವಸ್ತುವೊಂದನ್ನು ನೋಡಿದರು. ಆ ಪದಾರ್ಥದ ಹತ್ತಿರಕ್ಕೆ ಬರುತ್ತಲೆ ಶ್ರೀರಾಮನು ದೇವೇಂದ್ರನು ಆ ಸ್ಥಳಕ್ಕೆ ಬರುತ್ತಿರುವನೆಂದರಿತನು. ಆಕಾಶದಲ್ಲಿಯೆ ತನ್ನ ರಥವನ್ನು ನಿಲ್ಲಿಸಿ, ದೇವತೆಗಳು ತನ್ನನ್ನು ಹಿಂಬಾಲಿಸಿ ಬರುತ್ತಿರಲು ಭೂಮಿಯನ್ನು ಮುಟ್ಟದೆ ಇಂದ್ರನು ಆ ಋಷಿಯ ಸಮೀಪಕ್ಕೆ ಬರುತ್ತಿದ್ದನು. ಪಚ್ಚೆ ಬಣ್ಣದಿಂದ ಕೂಡಿ, ಬಾಲಸೂರ್ಯನಂತೆ ಆಕಾಶದಲ್ಲಿ ಹೊಳೆಯುತ್ತಿದ್ದ ರಥವನ್ನು ನೋಡಿ ಶ್ರೀರಾಮನು “ವತ್ಸ ಲಕ್ಷ್ಮಣ, ಒಂದು ಕ್ಷಣಕಾಲ ಸೀತೆಯೊಡನೆ ಇಲ್ಲಿ ನಿಲ್ಲು. ನಾನು ಹೋಗಿ ರಥದಲ್ಲಿರುವ ಪುರುಷ ಶ್ರೇಷ್ಠನಾರೆಂಬುದನ್ನು ತಿಳಿದುಬರುತ್ತೇನೆ” ಎಂದು ಹೇಳಿ ಶರಭಂಗಾಶ್ರಮಕ್ಕೆ ನಡೆದನು. ಆಶ್ರಮದ ಕಡೆಗೆ ಬರುತ್ತಿದ್ದ ಶ್ರೀರಾಮನನ್ನು ನೋಡಿ ದೇವೇಂದ್ರನು, ದೇವತಾಕಾರ್ಯ ಮುಗಿದ ಮೇಲೆಯೆ ಕೃತಕೃತ್ಯನಾದ ಶ್ರೀರಾಮನನ್ನು ತಾನು ನೋಡಬೇಕೆಂಬ ವಿಧಿನಿಯತಿಯಿರುವುದರಿಂದ ಆಗಲೆ ಕಾಣಿಸಿಕೊಳ್ಳದೆ, ಶ್ರೀರಾಮನು ಅಲ್ಲಿಗೆ ಬಂದಿರುವುದನ್ನು ಆ ಋಷಿಗೆ ತಿಳಿಸಿ ಆತನನ್ನು ಸತ್ಕರಿಸಿ ಹೊರಟು ಹೋದನು. ದೇವೇಂದ್ರನು ಹೊರಟು ಹೋದುದನ್ನು ಕಂಡು ಶ್ರೀರಾಮನು ಹಿಂದಿರುಗಿ ಬಂದು ಸೀತಾಲಕ್ಷ್ಮಣರೊಡನೆ ಶರಭಂಗಮುನಿಯನ್ನು ಕಂಡು ನಮಸ್ಕರಿಸಿದನು. ಶರಭಂಗನು ಅವರನ್ನು ಉಪಚರಿಸಿ ಕುಳ್ಳಿರಿಸಿದ ಮೇಲೆ ಶ್ರೀರಾಮನನ್ನು ಕುರಿತು ಹೇಳಿದನು – “ರಾಮಚಂದ್ರ, ದೇವೇಂದ್ರನು ನನ್ನನ್ನು ಬ್ರಹ್ಮಲೋಕಕ್ಕೆ ಕರೆದೊಯ್ಯಲು ಈಗ ತಾನೆ ಇಲ್ಲಿಗೆ ಬಂದಿದ್ದನು. ನಾನಾದರೊ ನಿನ್ನನ್ನು ಕಾಣದೆ ಬ್ರಹ್ಮಲೋಕಕ್ಕೆ ಹೋಗಲು ಒಪ್ಪದಿದ್ದೆ. ಈಗ ನಾನು ನಿನ್ನೊಡನೆ ಮಾತನಾಡಿ, ನಿನ್ನನ್ನು ಉಪಚರಿಸಿ ಬ್ರಹ್ಮಲೋಕ್ಕೆ ಹೋಗುವೆನು. ಈ ಅರಣ್ಯದಲ್ಲಿ ಸುತೀಕ್ಷ್ಣನೆಂಬ ಧಾರ್ಮಿಕನದ ಮುನಿಯೊಬ್ಬನು ವಾಸ ಮಾಡಿಕೊಂಡಿದ್ದಾನೆ. ನೀನು ಅವನಲ್ಲಿಗೆ ಹೋದರೆ ಈ ಕಾಡಿನಲ್ಲಿ ನೀವು ವಾಸಮಾಡಿಕೊಂಡಿರಲು ಮನೋಹರವೂ ಪ್ರಶಸ್ತವೂ ಆದ ಸ್ಥಳವೊಂದನ್ನು ಮಾಡಿಕೊಡುವನು. ಎಲೈ ಪುರುಷ ಶ್ರೇಷ್ಠನೆ, ಸ್ವಲ್ಪ ಕಾಲ ಇಲ್ಲಿಯೆ ನಿಲ್ಲು. ಸರ್ಪವು ಪೊರೆಯನ್ನು ಬಿಡುವಂತೆ ಇನ್ನು ಈ ದೇಹವನ್ನು ಬಿಡುತ್ತೇನೆ. ” ಇಷ್ಟು ಮಾತನ್ನಾಡಿದ ಬಳಿಕ ಶರಭಂಗನು ಮಂತ್ರದಿಂದ ಅಗ್ನಿಯನ್ನು ಪ್ರಜ್ವಲಗೊಳಿಸಿ, ಆಜ್ಯದಿಂದ ಹೋಮಮಾಡಿ, ಅದನ್ನು ಪ್ರವೇಶ ಮಾಡಿದನು. ಶ್ರೀರಾಮನು ಸೀತಾಲಕ್ಷ್ಮಣರೊಡನೆ ಈ ಸೋಜಿಗವನ್ನು ನೋಡುತ್ತಿರುವಾಗಲೆ ಶರಭಂಗನ ಆ ಭೌತಿಕದೇಹ ಸುಟ್ಟು ಬೂದಿಯಾಯಿತು. ಆ ಅಗ್ನಿಯಿಂದಲೆ ಮೇಲೆದ್ದು ಚೆಲುವುಗೂಡಿ ಪ್ರಾಯದಿಂದ ಉಕ್ಕುತ್ತಿದ್ದ ದೇಹವನ್ನು ಧರಿಸಿ ಆ ಋಷಿ ಬ್ರಹ್ಮಲೋಕವನ್ನು ಕುರಿತು ತೆರಳಿದನು.

ಶರಭಂಗಋಷಿ ಬ್ರಹ್ಮಲೋಕಕ್ಕೆ ಹೋಗುತ್ತಲೆ, ಇತ್ತ ಅವನ ಆಶ್ರಮದಲ್ಲಿ ನಾನಾ ರೀತಿಗಳಲ್ಲಿ ತಪಸ್ಸು ಮಾಡುತ್ತಿದ್ದ ಮುನಿಗಳು ಸೀತಾರಾಮಲಕ್ಷ್ಮಣರನ್ನು ಇದಿರುಗೊಂಡರು. ಅವರು ಶ್ರೀರಾಮನನ್ನು ಕುರಿತು ಇಂತು ಪ್ರಾರ್ಥಿಸಿದರು – “ದೇವತೆಗಳಿಗೆಲ್ಲ ಇಂದ್ರನೆ ಮುಖ್ಯನಾಗಿರುವಂತೆ, ಇಕ್ಷ್ವಾಕುವಂಶಕ್ಕೆ ನೀನೆ ಪ್ರಭು. ಪರಾಕ್ರಮದಿಂದಲೂ ಕೀರ್ತಿಯಿಂದಲೂ ನೀನು ಮೂರು ಲೋಕಗಳಲ್ಲಿಯೂ ಹೆಸರುಗೊಂಡಿರುವೆ. ಸತ್ಯ, ಧರ್ಮ, ಪಿತೃಭಕ್ತಿ ಇದೇ ಮೊದಲಾದ ಸದ್ಗುಣಗಳು ನಿನ್ನಲ್ಲಿ ಹೇರಳವಾಗಿವೆ. ನಾವು ಮಾಡುತ್ತಿರುವ ತಪಸ್ಸಿನ ನಾಲ್ಕರಲ್ಲಿ ಒಂದು ಭಾಘವನ್ನು ಪಡೆಯಲು ನೀನು ಅರ್ಹನಾಗಿರುವೆ. ಇಲ್ಲಿ ನಮಗಾದರೊ ರಾಕ್ಷಸರಿಂದ ಸಹಿಸಲಾರದಷ್ಟು ತೊಂದರೆಯುಂಟಾಗುತ್ತಿದೆ. ಆದಕಾರಣ ನೀನು ಆ ರಾಕ್ಷಸರನ್ನು ಕೊಂದು ನಮ್ಮನ್ನು ಕಾಪಾಡಬೇಕು. ಋಷಿಗಳಾದ ನಾವು ನಿನ್ನನ್ನು ಮರೆಹೊಕ್ಕಿದ್ದೇವೆ. ”

ಋಷಿಗಳ ಮಾತನ್ನು ಮನ್ನಿಸಿ, ಅವರಿಗೆ ಅಭಯಕೊಟ್ಟು ಶ್ರೀರಾಮನು ಸೀತಾಲಕ್ಷ್ಮಣರೊಡನೆ ಸುತೀಕ್ಷ್ಣ’ ಮುನಿಯ ಆಶ್ರಮದ ಕಡೆಗೆ ಹೊರಟನು. ದಾರಿಯಲ್ಲಿ ಸಿಕ್ಕ ಅನೇಕ ನದಿಗಳನ್ನು ದಾಟಿ ಬಹುದೂರ ಪ್ರಯಾಣ ಮಾಡಿದ ಮೇಲೆ, ಅವರಿಗೆ ಕಪ್ಪಾದ ಬೆಟ್ಟವೊಂದು ಕಾಣಿಸಿತು. ಆ ಬೆಟ್ದ ತಪ್ಪಲಲ್ಲಿ ಹಣ್ಣುಗಳಿಂದ ತುಂಬಿದ ನಾನಾ ರೀತಿಯ ವೃಕ್ಷಗಳಿಂದ ಕೂಡಿದ ವನವೊಂದು ಅವರಿಗೆ ಗೋಚರಿಸಿತು. ಆ ವನವನ್ನು ಹೊಕ್ಕ ಅವರಿಗೆ ನಾರುಮಡಿಗಳಿಂದ ಅಲಂಕೃತವಾಗಿ ಏಕಾಂತದಲ್ಲಿದ್ದ ಆಶ್ರಮವೊಂದು ಕಣ್ಣಿಗೆ ಬಿದ್ದಿತು. ಅದೇ ಸುತೀಕ್ಷ್ಣ ಮುನಿಯ ಆಶ್ರಮ. ಆ ಆಶ್ರಮದಲ್ಲಿ ಜಟೆಗಳನ್ನು ಧರಿಸಿ, ತಪಸ್ಸಿನಿಂದಲೆ ಮುದುಕನಾಗಿ ಹೋಗಿದದ ಸುತೀಕ್ಷ್ಣನನ್ನು ಇವರು ಕಂಡರು. ರಾಮನಾದ ನಾನು ನಿನ್ನನ್ನು ನೋಡಲು ಬಂದಿದ್ದೇನೆಂದು ಋಷಿಗೆ ತಿಳಿಸಿ ಶ್ರೀರಾಮನು ಹೆಂಡತಿ ತಮ್ಮಂದಿರೊಡನೆ ಆತನಿಗೆ ನಮಸ್ಕರಿಸಿದನು. ಸುತೀಕ್ಷ್ಣನು ಶ್ರೀರಾಮನನ್ನು ತನ್ನೆರಡು ತೋಳುಗಳಿಂದ ಬಿಗಿಯಾಗಿ ಅಪ್ಪಿಕೊಂಡು ಪ್ರೀತಿಯಿಂದ ಈ ರೀತಿ ನುಡಿದನು – “ವೀರನಾದ ರಾಮನೆ, ನಿನಗೆ ಸ್ವಾಗತ. ನಿನ್ನ ಬರುವಿಕೆಯಿಂದ ಈ ನನ್ನ ಆಶ್ರಮ ಸನಾಥವಾಯಿತು. ನೀನು ಬರುವಿಯೆಂದೇ ತಿಳಿದು, ಇದುವರೆಗೆ ಸ್ವರ್ಗವನ್ನೇರದೆ ನಿನಗಾಗಿ ಕಾದಿದ್ದೆ. ಇದುವರೆಗೆ ತಪಸ್ಸಿನಿಂದ ನಾನು ಸಂಪಾದಿಸಿರುವ ಪುಣ್ಯಲೋಕಗಳನ್ನು ನೀನೇ ಅನುಭವಿಸು. ” ಸುತೀಕ್ಷ್ಣನ ಮಾತಿಗೆ ಶ್ರೀರಾಮನು “ಎಲೈ ಮುನಿಪುಂಗವನೆ, ಆ ಪುಣ್ಯಲೊಕಗಳನ್ನು ನಾನೇ ಸಂಪಾದಿಸುತ್ತೇನೆ. ಈ ಕಾಡಿನಲ್ಲಿ ವಾಸ ಮಾಡಲು ಯೋಗ್ಯವಾದ ಒಂದು ಸ್ಥಳವನ್ನು ತೋರಿಸು” ಎಂದನು. ಶ್ರೀರಾಮನ ಮಾತಿಗೆ ಮುನಿ “ಈ ವನದಲ್ಲಿ ಈ ಆಶ್ರಮದ ಪ್ರದೇಶವೆ ಉತ್ತಮವಾದುದು. ಎಲ್ಲ ಕಾಲಗಳಲ್ಲಿಯೂ ಕಂದಮೂಲಗಳಿಂದ ಕೂಡಿರುವುದು. ವಾಸ ಮಾಡಲು ನಿನಗೆ ಈ ಸ್ಥಳವೆ ಅತ್ಯಂತ ಯೋಗ್ಯವಾದುದು. ಆದರೆ ಈ ಪ್ರದೇಶದಲ್ಲಿ ದುಷ್ಟಮೃಗಗಳಿಂದ ಋಷಿಗಳಿಗೆ ತೊಂದರೆಯುಂಟು” ಎಂದನು. ತಾನು ಮೃಗಗಳನ್ನು ಕೊಲ್ಲುವುದು ಋಷಿಗಳಿಗೆ ರುಚಿಸದೆಂದು ತಿಳಿದು ಶ್ರೀರಾಮನು ಅಲ್ಲಿ ವಾಸಮಾಡಲು ಒಪ್ಪಲಿಲ್ಲ.

ಸುತೀಕ್ಷ್ಣನಿಂದ ಸತ್ಕಾರವನ್ನು ಪಡೆದ ಆ ಮೂವರೂ ಆ ರಾತ್ರಿಯನ್ನು ಆಶ್ರಮದಲ್ಲಿಯೆ ಕಳೆದರು. ಮಾರನೆಯ ದಿನ ಬೆಳಗಾಗುತ್ತಲೆ ಋಷಿಯ ಹರಕೆಯನ್ನು ಪಡೆದು ಮುಂದಕ್ಕೆ ಪ್ರಯಾಣ ಮಾಡಿದರು. ದಾರಿಯಲ್ಲಿ ಹೋಗುತ್ತ ಸೀತೆ ಶ್ರೀರಾಮನಿಗೆ ಈ ರೀತಿ ಹೇಳಿದಳು: “ರಾಮಚಂದ್ರ, ಸುಳ್ಳಾಡುವುದು, ಪರರ ಹೆಂಡಿರಲ್ಲಿ ಮರೆಯಾಗಿ ಬಾಳುವುದು, ವೈರವಿಲ್ಲದೆ ಮತ್ತೊಬ್ಬರನ್ನು ಹಿಂಸಿಸುವುದು – ಇವು ಒಂದನ್ನೊಂದು ಮೀರಿಸಿದ ಪಾಪಗಳು. ನಿನ್ನಲ್ಲಿ ಸುಳ್ಳು ಕನಸಿನಲ್ಲಿಯೂ ಕೂಡ ಸುಳಿಯದು. ಹಾಗೆಯೆ ಪರಸ್ತ್ರೀಯ ಬಯಕೆ ನಿನ್ನ ಮನಸ್ಸಿನಲ್ಲಿ ಹೇಗೆ ತಾನೆ ಸುಳಿದೀತು? ಆದರೆ ಋಷಿಗಳನ್ನು ಕಾಪಾಡಲು ರಾಕ್ಷಸರನ್ನು ಕೊಲ್ಲುವೆನೆಂದು ಅವರಿಗೆ ಅಭಯವಿತ್ತಿರುವೆ. ಇದರಿಂದ ನನ್ನ ಮನಸ್ಸು ತುಂಬ ಕಲಕಿಹೋಗಿದೆ. ದಂಡಕಾರಣ್ಯದ ನಿನ್ನ ಈ ವನವಾಸ ನನಗೆ ರುಚಿಸದು. ಬೆಂಕಿದೆ ಕಟ್ಟಿಗೆ ಹೇಗೊ ಹಾಕೆ ಕ್ಷತ್ರಿಯರಿಗೆ ಅವರ ಬಿಲ್ಲುಬಾಣ. ಅದರಿಂದ ಅವರಿಗೆ ಪರಾಕ್ರಮ ಹೆಚ್ಚುತ್ತದೆ. ಹಿಂದೆ ಮಹಾ ತಪಸ್ವಿಯಾದ ಋಷಿಯೊಬ್ಬನ ಬಳಿ ದೇವೇಂದ್ರನು ಖಡ್ಗವೊಂದನ್ನು ಇಟ್ಟು ಹೋಗಿದ್ದನು. ತನ್ನ ತಪಸ್ಸನು ಕೆಡಿಸಲು ದೇವೇಂದ್ರನು ತನ್ನ ಬಳಿ ಇಟ್ಟಿರುವ ಖಡ್ಗ ಅದು ಎಂಬ ಅರಿವು ಅವನಿಗುಂಟಾಗಲಿಲ್ಲ. ಅದರಿಂದ ಅವನು ಕ್ರೂರಕರ್ಮಕ್ಕೆ ತೊಡಗಿದನು. ಇದರ ಫಲವಾಗಿ ಅ ತಪಸ್ವಿಗೆ ನರಕವುಂಟಾಯಿತು. ಆಯುಧವನ್ನು ಹಿಡಿಯುವುದು ಬೆಂಕಿಯೊಡನೆ ಸರಸವಾಡಿದಂತೆ. ಅದು ಮನಸ್ಸನ್ನು ಕಲಕಿಬಿಡುತ್ತದೆ. ನಿನ್ನಲ್ಲಿರುವ ಸ್ನೇಹದಿಂದ, ಪ್ರೀತಿಯಿಂದ ಈ ವಿಷಯವನ್ನು ನಿನ್ನ ನೆನಪಿಗೆ ತಂದುಕೊಟ್ಟೆ. ನಮ್ಮ ವಿಷಯದಲ್ಲಿ ತಪ್ಪು ಮಾಡದ ಜನರನ್ನು ಕೊಲ್ಲಲು ನಾನು ಬಯಸುವುದಿಲ್ಲ. ಅದಕ್ಕೆ ಬದಲಾಗಿ ಅಯೋಧ್ಯೆಗೆ ಹಿಂದಿರುಗಿ ಕ್ಷತ್ರಿಯ ಧರ್ಮವನ್ನು ಪಾಲಿಸುವುದೆ ಲೇಸು. ” ಸೀತೆಯ ಮಾತನ್ನು ಕೇಳಿ ಶ್ರೀರಾಮನು “ದೇವಿ, ನಿನ್ನ ಕುಲಕ್ಕೆ ಉಚಿತವಾದ, ಹಿತಕರವಾದ ಮಾತುಗಳನ್ನೆ ನೀನಾಡಿದೆ. ಸಂಕಟದಿಂದ ಪೀಡಿತರಾದವರನ್ನು ಕಾಪಾಡಲು ಕ್ಷತ್ರಿಯನಾದವನು ಬಿಲ್ಲನ್ನು ಹಿಡಿಯುತ್ತಾನೆ. ಋಷಿಗಳನ್ನು ಪೀಡಿಸುವ ಈ ರಾಕ್ಷಸರನ್ನು ಕೊಲ್ಲದ ಹೊರತು ಈ ಮುನಿಗಳಿಗೆ ಸುಖವೆಲ್ಲಿ ಬಂತು? ಈ ದಂಡಕಾರಣ್ಯದಲ್ಲಿರುವ ಋಷಿಗಳೆಲ್ಲ ಒಟ್ಟಾಗಿ ನನ್ನಲ್ಲಿಗೆ ಬಂದು ಈ ದುಷ್ಟರಾಕ್ಷಸರನ್ನು ಕೊಲ್ಲಬೇಕೆಂದು ಬೇಡಿಕೊಂಡಿದ್ದಾರೆ. ಮನುಷ್ಯರನ್ನು ಕೊಲ್ಲುವೆನೆಂದು ಅಭಯವನ್ನು ಕೊಟ್ಟಿದ್ದೇನೆ. ಈಗ ಈ ರೀತಿ ಅಭಯ ಕೊಟ್ಟು ಮರುಕ್ಷಣದಲ್ಲಿಯೆ ಅದರಂತೆ ನಡೆಯುವುದಿಲ್ಲವೆಂದು ನಾನು ಹೇಗೆ ತಾನೆ ನುಡಿಯಲಿ? ನಾನು ಜೀವವನ್ನಾಗಲಿ ಲಕ್ಷ್ಮಣನೊಡನೆ ನಿನ್ನನ್ನಾಗಲಿ ಬಿಟ್ಟೇನು. ಆದರೆ ಮಾಡಿದ ಪ್ರತಿಜ್ಞೆಯನ್ನು ಮಾತ್ರ ಬಿಡೆನು. ನೀನು ನನ್ನ ಪ್ರಾಣಕ್ಕಿಂತಲೂ ಮಿಗಿಲಾದವಳು; ಆದರೆ ಸಹಧರ್ಮಿಣಿ. ಅಂತಹ ನೀನು ಹೇಳಿದ್ದು ನನ್ನ ಹಿತಕ್ಕೆ ತಾನೆ!” ಎಂದು ನುಡಿದು ಮುಂದೆ ಮುಂದೆ ಹೊರಟನು.

ಸಿತೆಯನ್ನು ನಡುವಿಟ್ಟುಕೊಂಡು, ಬಿಲ್ಲು ಬಾಣಗಳನ್ನು ಧರಿಸಿದ ರಾಮಲಕ್ಷ್ಮಣರು ಮುಂದೆ ಮುಂದೆ ಹೊರಟರು. ಬೆಟ್ಟ, ಕಾಡು, ಕಮಲಗಳಿಂದ ಅಲಂಕೃತವಾದ ಸರೋವರ – ಇವುಗಳನ್ನು ನೋಡುತ್ತ ಸಂಜೆಯ ವೇಳೆಗೆ ಹಂಸಕಾರಂಡಗಳಿಂದ ತುಂಬಿ ಚೆಲುವನ್ನು ಸೂಸುತ್ತಿದ್ದ ಒಂದಾನೊಂದು ತಟಾಕವನ್ನು ಸೇರಿದರು. ಆ ತಟಾಕದ ಮಧ್ಯದಿಂದ ಇಂಪಾದ ಗಾನ ಕೇಳಿಬರುತ್ತಿತ್ತು. ಅದನ್ನು ಕುರಿತು ಜೊತೆಯಿದ್ದ ಋಷಿಯೊಬ್ಬನು “ರಾಮಚಂದ್ರ, ಈ ಸರೋವರದ ನಡುವೆ ಮಾಂಡಕರ್ಣಿ ಋಷಿಯ ಆಶ್ರಮವಿದೆ. ಈ ಸರೋವರದ ಹೆಸರು ಪಂಚಸರಸ್ಸು. ಹತ್ತು ಸಾವಿರ ವರುಷ ತಪಸ್ಸನ್ನು ಆಚರಿಸಿದ ಈ ಮುನಿಯ ಮಹಿಮೆಗೆ ಹೆದರಿ, ಇವನ ತಪಸ್ಸನ್ನು ಕೆಡಿಸಲು ದೇವತೆಗಳು ಐವರು ಅಪ್ಸರೆಯರನ್ನು ಕಳುಹಿಸಿದರು. ಇವರು ಈ ಋಷಿಯನ್ನು ಮೋಹಗೊಳಿಸಿ ಅವನೊಡನೆ ಇಲ್ಲಿ ಸುಖವಾಗಿರುವರು. ಅವರ ಆ ಗಾನವೆ ಈ ತಟಾಕದ ಮಧ್ಯದಲ್ಲಿ ಕೇಳಿಬರುತ್ತಿದೆ” ಎಂದು ಕತೆ ಹೇಳಿದನು. ಆಶ್ಚರ್ಯಕರವಾದ ಈ ಮಾತನ್ನು ಕೇಳಿ ಶ್ರೀರಾಮನು ಮುಂದೆ ಪ್ರಯಾಣ ಮಾಡಿ ಅಲ್ಲಿಯ ಆಶ್ಚರ್ಯಕರವಾದ ಋಷಿಗಳ ಆಶ್ರಮಗಳನ್ನು ನೋಡುತ್ತ ಮತ್ತೆ ಸುತೀಕ್ಷ್ಣ ಮುನಿಯ ಆಶ್ರಮಕ್ಕೆ ಹಿಂದಿರುಗಿ ಬಂದನು. ಅಲ್ಲಿ ಸುತೀಕ್ಷ್ಣನ ಆತಿಥ್ಯವನ್ನು ಸ್ವೀಕರಿಸಿ ರಾಮನು ಅವನನ್ನು ಕುರಿತು “ಎಲೈ ಮುನಿಪುಂಗವನೆ, ಮುನಿಪುಂಗನಾದ ಅಗಸ್ತ್ಯನು ಈ ಕಾಡಿನಲ್ಲಿಯೆ ಇರುವನೆಂದು ಕೇಳಿದ್ದೇವೆ. ಈ ಕಾಡು ವಿಶಾಲವಾಗಿರುವುದರಿಂದ ಆತನು ಇರುವ ಆಶ್ರಮ ನನಗೆ ತಿಳಿಯದಾಗಿದೆ. ಆತನನ್ನು ಸೇವಿಸಬೇಕೆಂಬ ಬಯಕೆ ನನಗುಂಟಾಗಿದೆ. ಆ ಸ್ಥಳವನ್ನು ನೀನು ತಿಳಿಸಬೇಕು” ಎಂದನು. ಶ್ರೀರಾಮನ ಮಾತಿಗೆ ಸುತೀಕ್ಷ್ಣನು “ರಾಮಚಂದ್ರ, ನಮ್ಮ ಆಶ್ರಮಕ್ಕೆ ನಾಲ್ಕು ಹರಿದಾರಿ ದಕ್ಷಿಣಕ್ಕೆ ಹೋದರೆ ಅಲ್ಲಿ ಅಗಸ್ತ್ಯ. ಮುನಿಯ ತಮ್ಮನ ಆಶ್ರಮ ಸಿಕ್ಕುತ್ತದೆ. ರಾತ್ರಿಯನ್ನು ಆ ಆಶ್ರಮದಲ್ಲಿ ಕಳೆದು, ಬೆಳಗಾಗುತ್ತಲೆ ಆ ಆಶ್ರಮದಿಂದ ಮೂರು ಹರಿದಾರಿ ದಕ್ಷಿಣಕ್ಕೆ ಹೋದರೆ ಅಗಸ್ತ್ಯ ಮುನಿಯ ಆಶ್ರಮ ಕಾಣಿಸುತ್ತದೆ. ತಡಮಾಡದೆ ನೀನು ಅಲ್ಲಿಗೆ ಹೋಗು. ನಿನಗೆ ಮಂಗಳವಾಗಲಿ” ಎಂದು ನುಡಿದು ಅವರನ್ನು ಬೀಳ್ಕೊಟ್ಟನು.

ಸುತೀಕ್ಷ್ಣ ಮುನಿ ತೋರಿಸಿದ ದಾರಿಯಲ್ಲಿಯೆ ಶ್ರೀರಾಮನು ಸೀತಾಲಕ್ಷ್ಮಣರೊಡನೆ ಹೋಗುತ್ತ. ಹೂವು ಹಣ್ಣುಗಳಿಂದ ಜಗ್ನಿ, ಹಿಪ್ಪೆಯ ಗಿಡದ ವಾಸನೆಯನ್ನು ಹೊತ್ತು ತರುತ್ತಿರುವ ಗಾಳಿಯಿಂದ ಕೂಡಿ, ಕಪ್ಪಾದ ಮೇಘಗಳಂತೆ ಹೊರಡುತ್ತಿರುವ ಹೊಗೆಗಳಿಂದ ತುಂಬಿ ಮೆರೆಯುತ್ತಿದ್ದ ಪ್ರದೇಶಕ್ಕೆ ಬಂದರು. ಸುತೀಕ್ಷ್ಣ ಮುನಿ ಹೇಳಿದ ಅಗಸ್ತ್ಯಭ್ರಾತೃವಿನ ಆಶ್ರಮ ಇದೇ ಎಂದು ಅವರು ಅರಿತರು. ಶ್ರೀರಾಮನು ಲಕ್ಷ್ಮಣನನ್ನು ಕುರಿತು “ವತ್ಸ ಲಕ್ಷ್ಮಣ, ಸುತೀಕ್ಷ್ಣ ಮುನಿ ಹೇಳಿದ ಅಗಸ್ತ್ಯಭ್ರಾತೃವಿನ ಆಶ್ರಮ ಇದೇ ಎಂದು ತೋರುತ್ತದೆ. ಅಗಸ್ತ್ಯಮುನಿ ಇಲ್ಲಿಯೆ ತಪಸ್ಸನ್ನು ಮಾಡಿ ರಾಕ್ಷಸರನ್ನು ಸಂಹರಿಸಿದನು. ಹಿಂದೆ ಈ ಸ್ಥಳದಲ್ಲಿ ವಾತಾಪಿ ಇಲ್ವಲರೆಂಬ ಇಬ್ಬರು ರಾಕ್ಷಸ ಸೋದರರಿದ್ದರು. ಇವರಲ್ಲಿ ಕ್ರೂರಿಯಾದ ಇಲ್ವಲನು ಬ್ರಾಹ್ಮಣ ವೇಷವನ್ನು ಧರಿಸಿ, ಶ್ರಾದ್ಧ ಮಾಡಲು ಭೋಜನಕ್ಕೆ ಬ್ರಾಹ್ಮಣರನ್ನು ಕರೆಯುತ್ತಿದ್ದನು. ಆ ಬಳಿಕ ತಮ್ಮನಾದ ವಾತಾಪಿಯನ್ನು ಚೆನ್ನಾಗಿ ಬೇಯಿಸಿ ಅಡಿಗೆ ಮಾಡಿ ಬ್ರಾಹ್ಮಣರಿಗೆ ಭೋಜನ ಮಾಡಿಸುತ್ತಿದ್ದನು. ಏನೂ ಅರಿಯದ ಬ್ರಾಹ್ಮಣರು ಊಟ ಮಾಡಿದೊಡನೆಯೆ ಇಲ್ವಲನು ‘ವಾತಾಪಿ ಹೊರಟು ಬಾ’ ಎಂದು ದೊಡ್ಡದಾಗಿ ಕೂಗುತ್ತಿದ್ದನು. ಆಗ ವಾತಾಪಿ ಮೇಕೆಯಂತೆ ಅರಚುತ್ತ ಬ್ರಾಹ್ಮಣರ ಹೊಟ್ಟೆಗಳನ್ನು ಸೀಳಿಕೊಂಡು ಬರುತ್ತಿದ್ದನು. ಹೀಗೆ ಸತ್ತ ಬ್ರಾಹ್ಮಣರ ಲೆಕ್ಕವನ್ನು ದೇವರೇ ಬಲ್ಲ! ಲೋಕಕಂಟಕರಾದ ಇವರನ್ನು ಕೊಲ್ಲಲು ದೇವತೆಗಳ ಪ್ರಾರ್ಥನೆಯಂತೆ ಅಗಸ್ತ್ಯನು ಇಲ್ವಲನ ಕರೆಯನ್ನು ಮನ್ನಿಸಿ ಶ್ರಾದ್ಧ ಭೋಜನಕ್ಕೆ ಹೋದನು. ವಾತಾಪಿಯನ್ನು ಪಾಕ ಮಾಡಿ ಇಲ್ವಲನು ಅಗಸ್ತ್ಯರಿಗೆ ಭೋಜನಕ್ಕೆ ಬಡಿಸಿದನು. ಅಗಸ್ತ್ಯನು ಉಂಡು ತೃಪ್ತಿಯಾದ ಕೂಡಲೇ ಇಲ್ವಲನು ‘ವಾತಾಪಿ ಹೊರಕ್ಕೆ ಬಾ’ ಎಂದು ಕೂಗಿದನು. ಆ ರಾಕ್ಷಸನನ್ನು ನೋಡಿ ನಗುತ್ತ ಅಗಸ್ತ್ಯನು ‘ಮೇಕೆಯ ರೂಪವನ್ನು ಧರಿಸಿದ ನಿನ್ನ ತಮ್ಮನು ನನ್ನ ಹೊಟ್ಟೆಯಲ್ಲಿ ಜೀರ್ಣವಾಗಿ ಹೋಗಿದ್ದಾನೆ. ಹೀಗಿರಲು ಯಮನ ಮನೆಯನ್ನು ಕಂಡ ವನಿಗೆ ಹೊರಕ್ಕೆ ಬರುವ ಶಕ್ತಿಯೆಲ್ಲಿ ಬಂತು?’ ಎಂದನು. ತಮ್ಮನ ಸಾವನ್ನು ಕೇಳಿ ಕೋಪದಿಂದ ತನ್ನ ಮೇಲೆ ಬೀಳಲು ಬಂದ ಇಲ್ವಲನನ್ನು ಅಗಸ್ತ್ಯನು ತನ್ನ ಕಣ್ಣುಗಳಿಂದಲೇ ಸುಟ್ಟು ಬಿಟ್ಟನು” ಎಂದು ವಾತಾಪಿ ಇಲ್ವಲರ ಕಥೆಯನ್ನು ತಿಳಿಸಿದನು.

ರಾಮಲಕ್ಷ್ಮಣರು ಹೀಗೆ ಮಾತನಾಡಿಕೊಳ್ಳುತ್ತ ಅಗಸ್ತ್ಯ ಭ್ರಾತೃವಿನ ಆಶ್ರಮಕ್ಕೆ ಬಂದರು. ಆ ಮುನಿಯಿಂದ ಸತ್ಕೃತರಾದ ಅವರು ಆ ರಾತ್ರಿಯನ್ನು ಆ ಆಶ್ರಮದಲ್ಲಿಯೆ ಕಳೆದರು. ಮಾರನೆಯ ದಿನ ಋಷಿಗಳಿಂದ ಬೀಳ್ಕೊಂಡ ಅವರು ಅಗಸ್ತ್ಯಾಶ್ರಮದ ಕಡೆಗೆ ನಡೆದರು. ಆರ್ಶರಮದ ಹತ್ತಿರವಾಗುತ್ತಲೆ ಶ್ರೀರಾಮನು ಲಕ್ಷ್ಮಣನನ್ನು ಕುರಿತು “ವತ್ಸ, ಇಗೋ ನೋಡು ಈ ಪ್ರದೇಶದಲ್ಲಿ ಮರದ ಎಲೆಗಳು ನುಣುಪಾಗಿದೆ. ಮೃಗಗಳು ಯಾರ ಭಯವೂ ಇಲ್ಲದೆ ಶಾಂತವಾಗಿ ಹರಿದಾಡುತ್ತಿವೆ. ಅಗಸ್ತ್ಯ ಮುನಿಯ ಆಶ್ರಮ ಸಮೀಪವಾಯಿತು. ಅಗೋ, ನಾರು ನುಡಿಗಳಿಂದ ಅಲಂಕೃತವಾಗಿ ಹೋಮ ಧೂಮಗಳಿಂದ ಕೂಡಿ ಆಶ್ರಮ ಕಾಣಿಸುತ್ತಿದೆ. ಬಳಲಿದ ಜನರ ಆಯಾಸವನ್ನು ಪರಿಹರಿಸುವ ಸ್ಥಳ ಇದು. ಇಲ್ಲಿ ಪಕ್ಷಿಗಳು ತಮ್ಮ ಕಲಕಲರವದಿಂದ ನಮ್ಮ ಕಿವಿಗೆ ಇಂಪನ್ನುಂಟು ಮಾಡುತ್ತಿವೆ. ರಾಕ್ಷಸರು ಈ ಕಡೆ ಕಣ್ಣನ್ನು ಕೂಡ ಸುಳಿಸರು. ಸಜ್ಜನರಿಗೆ ಒಳ್ಳೆಯದನ್ನುಂಟುಮಾಡುವುದೆ ಅಗಸ್ತ್ಯನ ಜೀವನದ ಗುರಿ. ಇಂಥಾ ಮಹಾಮಹಿಮನ ಬಳಿಗೆ ಹೋಗಿ ಆತನನ್ನು ಸೇವಿಸೋಣ. ಲಕ್ಷ್ಮಣ, ನೀನು ಮುಂದೆ ಹೋಗಿ ಆ ತಪಸ್ವಿಗೆ ನಾನು ಬಂದಿರುವುದಾಗಿ ತಿಳಿಸು” ಎಂದನು.

ಅಣ್ಣನ ಅಪ್ಪಣೆಯನ್ನು ತಲೆಯಲ್ಲಿ ಹೊತ್ತು, ಲಕ್ಷ್ಮಣನು ಅಗಸ್ತ್ಯಾಶ್ರಮದ ದ್ವಾರವನ್ನು ಸೇರಿದನು. ಅಲ್ಲಿದ್ದ ಶಿಷ್ಯನೊಬ್ಬನನ್ನು ಕುರಿತು “ದಶರಥನ ಹಿರಿಯ ಮಗನಾದ ಶ್ರೀರಾಮನು ಹೆಂಡತಿಯಾದ ಸೀತೆಯೊಡನೆಯೂ ತಮ್ಮನಾದ ಲಕ್ಷ್ಮಣನೊಡನೆಯೂ ಕಾಡಿಗೆ ಬಂದಿದ್ದಾನೆ. ಅಗಸ್ತ್ಯ ಋಷಿಯನ್ನು ನೋಡುವ ಬಯಕೆಯಿಂದ ಇಲ್ಲಿಗೆ ಬಂದಿರುವನು. ಈ ವಿಷಯವನ್ನು ದಯವಿಟ್ಟು ಋಷಿಗೆ ತಿಳಿಸು” ಎಂದು ಹೇಳಿದನು. ಶಿಷ್ಯನು ಈ ವಿಷಯವನ್ನು ಅಗಸ್ತ್ಯನಿಗೆ ತಿಳಿಸಲು, ಇದನ್ನು ಕೇಳಿ ಸಂತೋಷಗೊಂಡ ಮುನಿ ಅವರನ್ನು ಉಪಚರಿಸಿ ತನ್ನಲ್ಲಿಗೆ ಕರೆತರುವಂತೆ ಶಿಷ್ಯನಿಗೆ ಅಪ್ಪಣೆ ಮಾಡಿದನು. ಶಿಷ್ಯನ ಮಾತಿನಂತೆ ಶ್ರೀರಾಮನು ಆಶ್ರಮವನ್ನು ಹೊಕ್ಕು, ಶಿಷ್ಯರಿಂದ ಸುತ್ತುವರಿದ ತೇಜಸ್ವಿಯಾದ ಋಷಿಯನ್ನು ಕಂಡನು. ಮೂವರೂ ಋಷಿಯ ಪಾದಗಳಿಗೆ ನಮಸ್ಕರಿಸಿ ನಿಂತರು. ಅಗಸ್ತ್ಯನು ಕುಶಲ ಪ್ರಶ್ನೆಯನ್ನು ಕೇಳಿ ಅವರನ್ನು ಉಪಚರಿಸಿದನು. ಆ ಬಳಿಕ ರಾಮನನ್ನು ಕುರಿತು ಅಗಸ್ತ್ಯನು “ಪುರುಷವ್ಯಾಘ್ರನಾದ ಶ್ರೀರಾಮಚಂದ್ರ, ಚಿನ್ನ ಮತ್ತು ರನ್ನಗಳಿಂದ ಅಲಂಕೃತವಾದ ಈ ಧನುಸ್ಸನ್ನು ಬ್ರಹ್ಮನು ನಿರ್ಮಿಸಿದನು. ಸೂರ್ಯನ ತೇಜಸ್ಸಿನಂತೆ ಹೊಳೆಯುವ ಬಾಣಗಳನ್ನು ನನಗೆ ಕೊಟ್ಟವನು ಬ್ರಹ್ಮನೆ. ಅಗ್ನಿತ್ರಯಗಳಂತೆ ಹೊಳೆಯುವ ಬಾಣಗಳಿಂದ ತುಂಬಿದ ಈ ಅಕ್ಷಯಸಾಯಕಗಳನ್ನೂ ಆತನೆ ನನಗೆ ಕೊಟ್ಟನು. ಚಿನ್ನದ ಹಿಡಿಯಿಂದ ಕೂಡಿದ ಈ ಖಡ್ಗದಿಂದ ಪೂರ್ವದಲ್ಲಿ ಮಹಾವಿಷ್ಣುವು ದೈತ್ಯರನ್ನು ಸಂಹರಿಸಿದನು. ದೇವೇಂದ್ರನು ವಜ್ರಾಯುಧವನ್ನು ಧರಿಸುವಂತೆ, ರಾಕ್ಷಸರನ್ನು ಗೆಲ್ಲಲು ಈ ವೈಷ್ಣವ ಧನುಸ್ಸು, ಬಾನ, ಬತ್ತಳಿಕೆ ಮತ್ತು ಖಡ್ಗಗಳನ್ನು ಧರಿಸು” ಎಂದು ಅವುಗಳನ್ನು ರಾಮನಿಗೆ ಅನುಗ್ರಹಿಸಿಕೊಟ್ಟನು. ಇದಾದ ಮೇಲೆ ಅಗಸ್ತ್ಯನು ರಾಮಲಕ್ಷ್ಮಣರಿಗೆ ಮಂಗಳವನ್ನು ಕೋರಿದನು; ಹಗೆಯೆ ಸೀತೆಯ ಪಾತಿವ್ರತ್ಯವನ್ನು ಹೊಗಳಿದನು. ಆಗ ರಾಮನು ಅಗಸ್ತ್ಯನಿಗೆ ಕೈಮುಗಿದು “ಸ್ವಾಮಿನ್, ನಾವು ನನ್ನ ವಿಷಯದಲ್ಲಿ ಪೂರ್ಣವಾದ ಅನುಗ್ರಹವನ್ನು ತೋರಿರುವಿರಿ. ನಿಮ್ಮ ಅನುಗ್ರಹದಿಂದ ನಾನು ಧನ್ಯನಾದೆ. ನಮ್ಮ ವನವಾಸದ ಕಾಲ ಕಳೆಯುವವರೆಗೆ ವಾಸ ಯೋಗ್ಯವಾದ ಆಶ್ರಮವನ್ನು ರಚಿಸಲು ನನಗೊಂದು ಸರಿಯಾದ ಸ್ಥಳವನ್ನು ತಿಳಿಸಿಕೊಡಬೇಕು” ಎಂದು ಬೇಡಿಕೊಂಡನು. ರಾಮನ ಮಾತನ್ನು ಕೇಳಿ ಅಗಸ್ತ್ಯನು ಎರಡು ಘಳಿಗೆ ಧ್ಯಾನಿಸಿ “ವತ್ಸ, ಇಲ್ಲಿಗೆ ಎರಡು ಯೋಜನಗಳ ದೂರದಲ್ಲಿ ಪಂಚವಟಿಯೆಂಬ ಮನೋಹರವಾದ ಸ್ಥಳವಿದೆ. ಅನೇಕ ಮೃಗಗಳಿಂದಲು ಕಂದಮೂಲಗಳಿಂದಲೂ ಕೂಡಿದ ಜಲಸಮೃದ್ಧಿಯುಳ್ಳ ಸ್ಥಳ ಅದು. ಏಕಾಂತವಾದ ಆ ಪ್ರದೇಶದಲ್ಲಿ ನೀನು ಆಶ್ರಮವನ್ನು ಕಟ್ಟಿಕೊಂಡು ಸುಖದಿಂದ ಇರಬಹುದು. ನಿನ್ನ ಪ್ರತಿಜ್ಞೆಯ ಕಾಲವನ್ನು ಕಳೆದು ನೀನು ಸುಖವಾಗಿ ಅಯೋಧ್ಯೆಗೆ ಹಿಂದಿರುಗುವೆ. ನಿನ್ನಂಥ ಮಗನನ್ನು ಪಡೆದ ದಶರಥನು ನಿಜವಾಗಿಯೂ ಧನ್ಯ. ನೀವೆಲ್ಲರೂ ಪಂಚವಟಿಗೆ ಪ್ರಯಾಣ ಮಾಡಿ. ಆ ಸ್ಥಳ ಸೀತೆಗೆ ಪ್ರಿಯವಾಗುತ್ತದೆ. ಗೋದಾವರಿ ಅಲ್ಲಿಗೆ ಸಮೀಪದಲ್ಲಿಯೆ ಹರಿಯುತ್ತಿದೆ. ಅಲ್ಲಿ ನೀನು ಆಶ್ರಮವನ್ನು ಕಟ್ಟಿಕೊಂಡು ವಾಸವಾಗಿದ್ದು ಮುನಿಗಳನ್ನು ರಕ್ಷಿಸು, ಈ ಹಿಪ್ಪೆಯ ಮರದ ಕಾಡಿನ ಉತ್ತರಕ್ಕಿರುವ ನ್ಯಗ್ರೋಧವೃಕ್ಷದ ಮಾರ್ಗವನ್ನು ಅನುಸರಿಸಿ ಹೋಗು. ಅಲ್ಲಿ ಸಿಕ್ಕುವ ಬೆಟ್ಟವನ್ನು ಏರಿಹೋದರೆ ಪಂಚವಟಿ ಸಿಕ್ಕುತ್ತದೆ” ಎಂದನು. ಆ ರಾಜಕುಮಾರನು ಸೀತೆಯೊಡಗೂಡಿ, ಅಗಸ್ತ್ಯನು ಕೊಟ್ಟ ಬಿಲ್ಲು ಬಾಣ ಬತ್ತಳಿಕೆಗಳನ್ನು ಧರಿಸಿ, ಆತನ ಅಪ್ಪಣೆಯನ್ನು ಪಡೆದು ಪಂಚವಟಿಗೆ ತೆರಳಿದರು.

ಪಂಚವಟಿಯ ಕಡೆಗೆ ಹೋಗುತ್ತ, ಪುಣ್ಯಶಾಲಿಗಳಾದ ರಾಮ ಲಕ್ಷ್ಮಣರು ಮಧ್ಯಮಾರ್ಗದಲ್ಲಿ, ನ್ಯಗ್ರೋಧವೃಕ್ಷದ ಮೇಲಿದ್ದ ಭೀಮ ಪರಾಕ್ರಮಿಯೂ ದೊಡ್ಡ ದೇಹವುಳ್ಳವನೂ ಆದ ಜಟಾಯುವನ್ನು ನೋಡಿದರು. ರಾಮಲಕ್ಷ್ಮಣರು ಜಟಾಯುವನ್ನು ನೋಡಿ ಆತನಾರೆಂದು ಪ್ರಶ್ನೆ ಮಾಡಿದರು. ಆ ಮಾತಿಗೆ ಉತ್ತರವಾಗಿ ಮಧುರವೂ ಪ್ರಿಯವೂ ಆದ ಮಾತಿನಿಂದ ಜಟಾಯು ಹೇಳಿದನು – “ಅರುಣನ ಮಗನಾದ ನಾನು ದಶರಥ ರಾಜನ ಪ್ರಿಯಮಿತ್ರ. ನನ್ನನ್ನು ಜಟಾಯುವೆಂದು ಕರೆಯುವರು. ಪರಾಕ್ರಮಿಯಾದ ಸಂಪಾತಿ ನನ್ನ ತಮ್ಮ. ಈ ಕಾಡು ರಾಕ್ಷಸರಿಂದ ತುಂಬಿಹೋಗಿದೆ. ನಿಮಗೆ ಸಹಾಯಕನಾಗಿ ನಾನು ಈ ಕಾಡಿನಲ್ಲಿ ನಿಲ್ಲುತ್ತೇನೆ. ನೀವು ಈ ಕಾಡಿನಲ್ಲಿ ಸಂಚಾರ ಹೊರಟಾಗ ಸೀತೆಯನ್ನು ಕಾಪಾಡುವ ಭಾರ ನನ್ನದು.” ಜಟಾಯುವಿನ ಮಾತನ್ನು ಕೇಳಿ, ಆ ಕಾಡಿನಲ್ಲಿ ತಮಗೊಬ್ಬ ಗೆಳೆಯ ದೊರೆತನೆಂದು ರಾಮಲಕ್ಷ್ಮಣರಿಗೆ ಆನಂದವಾಯಿತು. ಅಗ್ನಿ ಪತಂಗಗಳನ್ನು ಸುಟ್ಟು ಹಾಕುವಂತೆ ಶತ್ರುಗಳನ್ನು ನಾಶ ಮಾಡಲು ಅವರು ಜಟಾಯುವಿನೊಡನೆ ಪಂಚವಟಿಗೆ ಬಂದರು.

ಪಂಚವಟಿಗೆ ಬಂದ ರಾಮನು ತೇಜಸ್ವಿಯಾದ ಲಕ್ಷ್ಮಣನನ್ನು ಕುರಿತು, “ವತ್ಸ, ಅಗಸ್ತ್ಯರು ಹೇಳಿದ ಸ್ಥಳಕ್ಕೆ ಈಗ ಬಂದಿದ್ದೇವೆ. ನಿನ್ನ ದೃಷ್ಟಿಯನ್ನು ಎಲ್ಲ ಕಡೆಗಳಲ್ಲಿಯೂ ಹರಿಬಿಟ್ಟು ಹೂ ಬಿಟ್ಟಿರುವ ಈ ಮರಗಳನ್ನು ನೋಡು. ನಿನಗೆ ಕಾಡಿನ ವಿಷಯವೆಲ್ಲ ಚೆನ್ನಾಗಿ ತಿಳಿದಿರುವುದಲ್ಲವೆ? ಆದ್ದರಿಂದ ನಾವೆಲ್ಲರೂ ರಮಿಸಲು ಯೋಗ್ಯವಾದ ಜೀಸಮೃದ್ಧಿಯುಳ್ಳ, ಹೂವು ಹಣ್ಣು ಸಮಿತ್ತು ಧರ್ಬೆಗಳಿಗೆ ಆಸರೆಯಾಗಿರುವ ರಮಣೀಯವಾದ ಒಂದು ಸ್ಥಳವನ್ನು ಗೊತ್ತುಮಾಡು” ಎಂದನು. ಅಣ್ಣನ ಮಾತಿಗೆ ಲಕ್ಷ್ಮಣನು ಸಮ್ಮತಿಸದೆ, ರಾಮನೇ ಅಂಥ ಸ್ಥಳವನ್ನು ತೋರಿಸಬೇಕೆಂದನು. ಶ್ರೀರಾಮನು ಸಂತೋಷದಿಂದ ಅವನ ಕೈಯನ್ನು ಹಿಡಿದುಕೊಂಡು, ಅಲ್ಲಲ್ಲಿ ಹುಡುಕಿ ಕೊನೆಗೆ, ಒಂದು ಪ್ರದೇಶಕ್ಕೆ ಬಂದರು. “ವತ್ಸ ಈ ಸ್ಥಳ ಉಬ್ಬು ತಗ್ಗುಗಳಿಲ್ಲದೆ ಸಮನಾಗಿದೆ. ಹೂ ಬಿಡುತ್ತಿರುವ ಮರಗಳಿಂದ ಕೂಡಿದೆ. ಈ ಪ್ರದೇಶದಲ್ಲಿಯೆ ನಮ್ಮ ವಾಸಕ್ಕೆ ಯೋಗ್ಯವಾದ ಆಶ್ರಮವೊಂದನ್ನು ರಚಿಸು. ಸೂರ್ಯನ ಕಾಂತಿಗೆ ಸಮವಾದ. ಸುಗಂಧಯುಕ್ತವಾದ, ಕಮಲಗಳಿಂದ ಕೂಡಿದ ರಮ್ಯವಾದ ಸರೋವರ ಹತ್ತಿರದಲ್ಲಿಯೆ ಕಾಣಿಸುತ್ತಿದೆ. ಹಂಸ ಕಾರಂಡಗಳಿಂದ ಕೂಡಿದ ರಮಣೀಯಳಾದ ಗೊದಾವರಿ ಸಮೀಪದಲ್ಲಿಯೆ ಹರಿಯುತ್ತಿದ್ದಾಳೆ. ಜಿಂಕೆಗಳಿಂದಲೂ ಕುಣಿಯುತ್ತಿರುವ ನವಿಲುಗಳಿಂದಲೂ ಈ ಪ್ರದೇಶ ಕೂಡಿದೆ. ಕಂದರಗಳಿಂದಲೂ ಧಾತುರಾಗಗಳಿಂದಲೂ ಕೂಡಿದ ಬೆಟ್ಟಗಳು ಇಲ್ಲವೆ. ಪುಣ್ಯಕರವಾದ ಈ ಪ್ರದೇಶದಲ್ಲಿ ನಾನು ಜಟಾಯುವಿನೊಡನೆ ವಾಸಿಸುತ್ತೇನೆ” ಎಂದನು.

ಅಣ್ಣನ ಮಾತಿನಂತೆ ಮಹಾಬಲಶಾಲಿಯಾದ ಲಕ್ಷ್ಮಣನು ಆ ಸ್ಥಳದಲ್ಲಿ ಮಣ್ಣು ಅಗೆದು, ಗೋಡೆ ಕಟ್ಟಿ, ಬನ್ನಿಯ ಮರದ ಕೊಂಬೆಗಳನ್ನು ಹಾಸಿ ಬಿದಿರಿನ ಜಂತೆಗಳನ್ನು ಜೋಡಿಸಿದನು. ಈ ಜಂತೆಗಳನ್ನು ಹುಲ್ಲು ಮತ್ತು ಎಲೆಗಳಿಂದ ಮುಚ್ಚಿ ಮನೋಹರವಾದ ಮತ್ತು ಉತ್ತಮವಾದ ಆಶ್ರಮವೊಂದನ್ನು ಬಹು ಬೇಗ ಕಟ್ಟಿದನು. ಅನಂತರ ಲಕ್ಷ್ಮಣನು ಗೋದಾವರಿಯಲ್ಲಿ ಮಿಂದು, ಹೂವು ಹಣ್ಣುಗಳಿಂದೊಡಗೂಡಿ ಆಶ್ರಮಕ್ಕೆ ಬಂದು ವಾಸ್ತುಪೂಜೆಯನ್ನು ನೆರವೇರಿಸಿದನು. ಈ ಕಾರ್ಯಗಳೆಲ್ಲ ಮುಗಿದ ಮೇಲೆ ಲಕ್ಷ್ಮಣನು ಶ್ರೀರಾಮನಿಗೆ ತಾನು ಕಟ್ಟಿದ ಆಶ್ರಮವನ್ನು ತೋರಿಸಿದನು. ಆಶ್ರಮವನ್ನು ನೋಡಿ ಸಂತೋಷಗೊಂಡ ಶ್ರೀರಾಮನು ತನ್ನೆರಡು ತೋಳುಗಳಿಂದ ತಮ್ಮನನ್ನು ಬಿಗಿಯಾಗಿ ಅಪ್ಪಿಕೊಂಡು “ವತ್ಸ, ನೀನು ಇಂದು ಬಹು ದೊಡ್ಡ ಕಾರ್ಯವನ್ನು ಮಾಡಿರುವೆ. ಇದರಿಂದ ನಾನು ಸಂತೋಷಗೊಂಡಿದ್ದೇನೆ. ನನ್ನ ಭಾವವನ್ನು ನೀನು ಗ್ರಹಿಸಿ, ಈ ಕೆಲಸವನ್ನು ಮಾಡಿರುವೆಯಾದ ಕಾರಣ, ಧರ್ಮಾತ್ಮನಾದ ತಂದೆ ಮೃತನಾಗಿಲ್ಲವೆಂದು ತಿಳಿಯುತ್ತೇನೆ” ಎಂದು ಆದರದಿಂದ ನುಡಿದು, ಸ್ವರ್ಗದಲ್ಲಿ ಇಂದ್ರನು ವಾಸಿಸುವಂತೆ ತಾನು ಅಲ್ಲಿ ವಾಸಿಸತೊಡಗಿದನು.

* * *