ಅಣ್ಣ ತಮ್ಮಂದಿರಬ್ಬರಿಗೂ ಮಾಹಾ ಕಾಳಗವೇ ಆರಂಭವಾಯ್ತು.

ಇತ್ತ ವಾಲಿ ಹಸುರು ಬಣ್ಣದ ಬಟ್ಟೆಯನ್ನು ಬಿಗಿದುಟ್ಟು, ಕೊರಳಲ್ಲಿ ಕಾಂಚನಮಾಲೆಯನ್ನು ಧರಿಸಿ, ಕೋಪದಿಂದ ನಿಟ್ಟುಸಿರುಬಿಡುತ್ತ ಪ್ರಜ್ವಲಿಸುವ ಅಗ್ನಿಯಂತೆ ಸುಗ್ರೀವನ ಸಮೀಪಕ್ಕೆ ಬಂದನು. ರಣಪಂಡಿತನಾದ ವಾಲಿ ಮುಷ್ಟಿಯನ್ನು ಮೇಲೆತ್ತಿ ಸುಗ್ರೀವನನ್ನು ಕುರಿತು “ ಇಗೋ ಈ ಹೊಡೆತ ನಿನ್ನ ಪ್ರಾಣಗಳನ್ನು ಸೆಳೆಯುವುದು” ಎಂದು ಹೇಳುತ್ತ ಮುಂದೆ ನುಗ್ಗಿದನು. ವಾಲಿಯ ಹೊಡೆತದಿಂದ ಸುಗ್ರೀವನು ರಕ್ತವನ್ನು ಕಾರುತ್ತ ಝರಿಗಳಿಂದ ಕೂಡಿದ ಬೆಟ್ಟದಂತೆ ಕಂಡುಬಂದನು. ಅಣ್ಣತಮ್ಮಂದಿರಿಬ್ಬರಿಗೂ ದೊಡ್ಡ ಯುದ್ಧವೆ ಆಯಿತು. ಸುಗ್ರೀವನು ಚೇತರಿಸಿಕೊಂಡು, ಸಾಲವೃಕ್ಷವೊಂದನ್ನು ಕಿತ್ತು ವಾಲಿಯನ್ನು ಹೊಡೆದನು. ವಜ್ರಾಯುಧದ ಏಟನ್ನು ಸಹಿಸಲಾರದೆ ಬೆಟ್ಟ ನಡುಗುವಂತೆ, ಸುಗ್ರೀವನ ಹೊಡೆತದಿಂದ ವಾಲಿ ನಡುಗಿಹೋದನು. ಗರುಡನಿಗೆ ಸಮಾನವಾದ ವೇಗವುಳ್ಳ ಆ ವೀರರಿಬ್ಬರೂ ಆಕಾಶದಲ್ಲಿ ಸೂರ್ಯಚಂದ್ರರಂತೆ ಯುದ್ಧಮಾಡುತ್ತ ಪ್ರಕಾಶಿಸುತ್ತಿದ್ದರು. ಹೀಗಿರುವಲ್ಲಿ ವಾಲಿಯ ಬಲ ಕ್ರಮೇಣ ಹೆಚ್ಚುತ್ತ ಬಂತು. ಹಾಗೆಯೇ ಸೂರ್ಯಪುತ್ರನಾದ ಸುಗ್ರೀವನು ಬಲಗುಂದಿದನು. ಆದರೂ ರೆಂಬೆಗಳಿಂದಲೂ ಮುಷ್ಟಿಗಳಿಂದಲೂ ಭುಜಗಳಿಂದಲೂ ಇಬ್ಬರಿಗೂ ವೃತ್ತ ಇಂದ್ರರಿಗೆ ಯುದ್ಧವಾದಂತೆ ಭಯಂಕರವಾದ ಯುದ್ಧವಾಯಿತು. ನೆತ್ತರಿಂದ ನೆನೆದು, ಸಿಂಹನಾದ ಮಾಡುತ್ತ ದೊಡ್ಡ ಮೇಘಗಳಂತೆ ಅವರಿಬ್ಬರು ಯುದ್ಧಮಾಡುತ್ತಿದ್ದರೂ, ಕ್ಷಣಕ್ಷಣಕ್ಕೂ ಬಲಗುಂದಿ, ದಿಕ್ಕುಗಳನ್ನು ನೋಡುತ್ತಿದ್ದ ಸುಗ್ರೀವನನ್ನು ರಾಮನು ನೋಡಿದನು. ಆತನು ಸಿಡಿಲಿಗೆ ಸಮಾನವಾದ ಬಾಣವೊಂದನ್ನು ಬಿಲ್ಲಿನಲ್ಲಿ ಹೂಡಿ, ಸೆಳೆದು ವಾಲಿಯ ಮೇಲೆ ಪ್ರಯೋಗಿಸಿದನು. ಆ ಬಾಣದ ವೇಗದಿಂದ ಹೊಡೆಯಲ್ಪಟ್ಟ ವಾಲಿ ಪ್ರಜ್ಞೆಯಿಲ್ಲದೆ ನಿಶ್ಚೇಷ್ಟಿತನಾಗಿ ಭೂಮಿಯ ಮೇಲೆ ಬಿದ್ದನು.

ದೇವೇಂದ್ರನ ಇಂದ್ರಧ್ವಜದಂತೆ ಭೂಮಿಯ ಮೇಲೆ ಬಿದ್ದ ವಾಲಿ ಚಂದ್ರನಿಲ್ಲದ ಆಕಾಶದಂತೆ ತೋರುತ್ತಿದ್ದನು. ಅವನ ಪ್ರಾಣ ಇನ್ನೂ ಹೋಗಿರಲಿಲ್ಲ. ಆತನ ಕೊರಳಿನಲ್ಲಿ ಇಂದ್ರನು ಕೊಟ್ಟಿದ ಚಿನ್ನದ ಹಾರ ಚೆನ್ನಾಗಿ ಮಿರುಗುತ್ತಿತ್ತು. ಅದನ್ನು ಧರಿಸಿದ ವಾಲಿ ಸಂಧ್ಯಾರಾಗದಿಂದ ರಂಜಿತವಾದ ಮೇಘದಂತೆ ಶೋಭಿಸುತ್ತಿದ್ದನು. ಆ ಸಮಯದಲ್ಲಿ ಸಮೀಪಕ್ಕೆ ಬಂದ ಶ್ರೀರಾಮನು ಮಹಾಬಾಹುವೂ ಹರಿಣಲೋಚನನೂ ಆದ ವಾಲಿಯನ್ನು ಕಂಡನು. ಸ್ವರ್ಗಲೋಕದಿಂದ ಪದಚ್ಯುತನಾದ ಯಯಾತಿಯಂತೆ ಶೋಭಿಸುತ್ತಿದ್ದ ವಾಲಿ ಮೆಲ್ಲಮೆಲ್ಲನೆ ಮೈತಿಳಿದು ರಾಮಲಕ್ಷ್ಮಣರನ್ನು ನೋಡಿ ಈ ರೀತಿ ನುಡಿದನು: “ರಾಮಚಂದ್ರ ನೀನು ಪ್ರಸಿದ್ಧನೂ ಸುಶೀಲನೂ ಆದ ಕ್ಷತ್ರಿಯ ಕುಮಾರ. ಹೀಗಿರುವ ನೀನು ಯಾವ ಲಾಭಕ್ಕಾಗಿ ನಾನು ಬೇರೊಬ್ಬರೊಡನೆ ಯುದ್ಧ ಮಾಡುತ್ತಿರುವಾಗ ನನ್ನೆದೆಗೆ ಬಾಣದಿಂದ ಹೊಡೆದೆ? ನೀನು ದಯಾಳುವೆಂದೂ, ನೀತಿಯನ್ನು ಅರಿತವನೆಂದೂ ಲೋಕವೆ ಕೊಂಡಾಡುತ್ತಿದೆ. ಅಪರಾಧಿಗಳನ್ನು ದಂಡಿಸುವುದು ರಾಜಧರ್ಮ. ಹೀಗಿರುವಲ್ಲಿ ನಿರಪರಾಧಿಯಾದ ನನ್ನನ್ನು ಮರೆಯಿಂದ ಹೊಡೆದ ನಿನ್ನನ್ನು ಅಧಾರ್ಮಿಕನೆಂದೂ ಪಾಪಾಚಾರಿಯೆಂದೂ ತಿಳಿಯುತ್ತೇನೆ. ತಾರೆ ನಿನ್ನನ್ನು ಸತ್ಕುಲಪ್ರಸೂತನೆಂದು ಹೇಳಿದಳು. ಆದರೆ ನಿನ್ನ ನಡತೆಯನ್ನೂ ನೋಡಿದರೆ ನೀನು ಹುಲ್ಲು ಮುಚ್ಚಿದ ಬಾವಿಯಂತೆ ಇದ್ದೀಯೆ; ಬೂದಿ ಮುಚ್ಚಿದ ಕೆಂಡದಂತಿದ್ದೀಯೆ. ನಿನ್ನ ವಿಷಯದಲ್ಲಿ ನಾನು ಅಪಚಾರವನ್ನೆಸಗಿಲ್ಲ; ನಿನ್ನನ್ನು ಅಪಮಾನಗೊಳಿಸಿಲ್ಲ. ಹೀಗಿರುವಲ್ಲಿ ನಿರಪರಾಧಿಯಾದ ನನ್ನನ್ನು ನೀನು ಹೇಗೆ ಹೊಡೆದೆ? ಸತ್ಕುಲದಲ್ಲಿ ಹುಟ್ಟಿ, ಸತ್ಪುರುಷರ ವೇಷವನ್ನು ಧರಿಸಿ ಈ ಕಾರ್ಯವೆಸಗುವುದು ನಿನಗೆ ತರವಲ್ಲ. ಕಾಮಕ್ರೋಧಗಳೆ ನಿನ್ನ ಹುಟ್ಟುಗುಣಗಳೆಂದು ತೋರುತ್ತದೆ. ಲೋಕನಿಂದಿತವಾದ ಈ ಕೆಲಸವನ್ನು ನೀನು ಮಾಡಿದುದರಿಂದ ಧರ್ಮದಲ್ಲಿ ನಿನಗೆ ಶ್ರದ್ಧೆಯಿಲ್ಲ. ರಾಜಹತ್ಯೆ ನರಕಕ್ಕೆ ಹೆದ್ದಾರಿಯೆಂದು ನಿನಗೆ ತಿಳಿಯದೆ? ಅಯ್ಯೊ! ತಾರೆಯ ಮಾತನ್ನು ಮೀರಿದುದರಿಂದ ನನಗೆ ಈ ಗತಿಯುಂಟಾಯಿತು. ನೀನು ನನ್ನೆದುರಿಗೆ ನಿಂತು ಯುದ್ಧಮಾಡಿದ್ದರೆ ಈಗ ನನಗಾಗಿರುವ ಗತಿಯೇ ನಿನಗುಂಟಾಗುತ್ತಿತ್ತು. ಅಥವಾ ಈ ಮೊದಲೆ ನೀನು ನನ್ನನ್ನು ಕಂಡಿದ್ದರೆ, ಒಂದೇ ದಿನದಲ್ಲಿ ನಾನು ಸೀತೆಯನ್ನು ಹುಡುಕಿಸಿ ಕೊಡುತ್ತಿದ್ದೆ. ಯಾರನ್ನು ಕೊಲ್ಲುವ ಸಲುವಾಗಿ ಸುಗ್ರೀವನ ಬಯಕೆಯನ್ನು ಪೂರ್ಣಮಾಡಲು ನನ್ನನ್ನು ಕೊಂದೆಯೊ ಅಂಥ ರಾವಣನ ಕಂಠವನ್ನು ನಾನೆ ತಂದು ನಿನಗೊಪ್ಪಿಸುತ್ತಿದ್ದೆ. ಸಮುದ್ರದಲ್ಲಾಗಲಿ ಪಾತಾಳದಲ್ಲಾಗಲಿ ಎಲ್ಲಿದ್ದರೆ ಅಲ್ಲಿ ನಾನು ಸೀತೆಯನ್ನು ಹುಡುಕಿಸಿಕೊಡುತ್ತಿದ್ದೆ. ಈಗೇನೊ ನನ್ನ ಸಾವಿನಿಂದ ಸುಗ್ರೀವನಿಗೆ ಕಪಿರಾಜ್ಯ ಪಟ್ಟ ದೊರಕಿತು. ಆದರೆ ನೀನು ಮಾತ್ರ ನನ್ನನ್ನು ಮರೆಯಿಂದ ಹೊಡೆದುದು ಧರ್ಮವಲ್ಲ. ಈ ನನ್ನ ಪ್ರಶ್ನೆಗೆ ನಿನ್ನ ಉತ್ತರವೇನು?”

ಇಷ್ಟು ಮಾತುಗಳನ್ನಾಡಿದ ವಾಲಿಗೆ ಸಂಕಟದಿಂದ ಮೋರೆ ಬಾಡಿತು. ಬೆಳಕನ್ನು ಕಳೆದುಕೊಂಡ ಸೂರ್ಯನಂತಿದ್ದ ವಾಲಿಯನ್ನು ನೋಡಿ ಮಧುರವಾದ ಮಾತಿನಿಂದ ಶ್ರೀರಾಮನು ಈ ರೀತಿ ನುಡಿದನು: “ಕಪಿವೀರ, ಧರ್ಮವನ್ನೂ ಆಚಾರವನ್ನೂ ತಿಳಿಯದ ಮೂಢನಾದ ನೀನು ನನ್ನನ್ನೇಕೆ ನಿಂದಿಸುತ್ತೀಯೆ? ಕಪಿಗೆ ಚಪಲತೆ ಸಹಜ. ಚಪಲತೆಗೆ ಎಡೆಗೊಟ್ಟು ನೀನು ನನ್ನನ್ನು ದೂರುವುದು ಉಚಿತವಲ್ಲ. ಬೆಟ್ಟ ವನ ನದಿಗಳಿಂದ ಕೂಡಿದ ಈ ಸಮಸ್ತ ಭೂಮಿಗೆ ಭರತನೇ ಒಡೆಯ. ಆ ಧರ್ಮಾತ್ಮನಾದ ಭರತನ ಅಪ್ಪಣೆಯಂತೆ, ಧರ್ಮೋದ್ಧಾರಕ್ಕಾಗಿಯೇ ನಾವು ಈ ಭೂಮಿಯಲ್ಲಿ ಸಂಚರಿಸುತ್ತಿದ್ದೇವೆ. ಧರ್ಮವನ್ನು ಮೀರಿ ನಡೆಯುವವರನ್ನು ನಿಗ್ರಹಿಸುವುದು ನಮ್ಮ ಕರ್ತವ್ಯ. ನಿನ್ನನ್ನು ಕೊಲ್ಲಲು ಕಾರಣವನ್ನು ಹೇಳುತ್ತೇನೆ, ಕೇಳು. ಧರ್ಮವನ್ನು ಬಿಟ್ಟು, ನಿನ್ನ ಸೊಸೆಯಂತಿರುವ ಸುಗ್ರೀವನ ಹೆಂಡತಿಯಲ್ಲಿ ನೀನು ಕಾಮದಿಂದ ರಮಿಸಿರುವೆ. ಇದು ಪಾಪಕರ್ಮವಲ್ಲದೆ ಮತ್ತೇನು? ಆದ್ದರಿಂದ ನೀನು ದಂಡಾರ್ಹ. ಈ ಪಾಪಕ್ಕೆ ಮರಣವೆ ಶಿಕ್ಷೆ. ಒಡಹುಟ್ಟಿದವಳಂತಿರುವ ತಮ್ಮನ ಹೆಂಡತಿಯನ್ನು ಭೋಗಿಸುವುದನ್ನು ಕಂಡು ಯಾವ ಕ್ಷತ್ರಿಯನು ತಾನು ಸಹಿಸುವನು? ಭರತನ ಅಪ್ಪಣೆಯನ್ನು ಪಾಲಿಸುವ ನಾವು ನೀನು ಆಚರಿಸಿದ ಅಧರ್ಮವನ್ನು ಕಂಡು ನಿನ್ನನ್ನು ಶಿಕ್ಷಿಸಿದೆವು. ನನ್ನಂತೆಯೆ ಸುಗ್ರೀವನೂ ರಾಜ್ಯ ಮತ್ತು ಹೆಂಡತಿಯನ್ನು ಕಳೆದುಕೊಂಡಿರುವ ಕಾರಣ ನಮ್ಮಿಬ್ಬರಿಗೂ ಸ್ನೇಹವುಂಟಾಯಿತು. ಅಗ್ನಿಸಾಕ್ಷಿಯಾಗಿ ಸುಗ್ರೀವನಿಗೆ ನಾನು ಮಾಡಿದ ಪ್ರತಿಜ್ಞೆಯನ್ನು ಮುರಿಯಲು ಹೇಗೆತಾನೆ ಸಾಧ್ಯ? ತಮ್ಮನ ಹೆಂಡತಿಯನ್ನು ಹರಣಮಾಡಿದ ಕಾರಣ ನಿನಗೆ ಶಿಕ್ಷೆಯಾಯಿತೆಂಬುದನ್ನು ಒಪ್ಪಿಕೊ. ಧರ್ಮಮಾರ್ಗದಲ್ಲಿ ನಡೆಯುತ್ತಿರುವವನು ಮಿತ್ರಕಾರ್ಯವನ್ನು ಅವಶ್ಯವಾಗಿ ಮಾಡತಕ್ಕದ್ದು. ಮೇಲಾಗಿ ರಾಜರಿಂದ ಪಾಪಿಗಳೂ ಶಿಕ್ಷಿತರಾದರೆ ಸ್ವರ್ಗವನ್ನು ಸೇರುವರೆಂದು ನೀತಿಶಾಸ್ತ್ರವುಂಟು. ಪಾಪಕಾರ್ಯಗಳನ್ನು ಯಾರು ಆಚರಿಸುವರೋ ಅವರನ್ನು ಶಿಕ್ಷಿಸದಿದ್ದರೆ ರಾಜನಿಗೆ ಆ ಪಾಪವುಂಟಾಗುವುದು. ಆದ್ದರಿಂದ ನೀನು ಸಂತಾಪಗೊಳ್ಳಬೇಡ. ಮೇಲಾಗಿ ನೀನು ಶಾಖಾಮೃಗವಾದ ಕಾರಣ, ಮೃಗಗಳನ್ನು ಸಮಯವರಿತು ಎದುರಿನಲ್ಲಿಯೂ ಮರೆಯಲ್ಲಿಯೂ ನಿಂತು ನಿಗ್ರಹಿಸುವಂತೆ ನಾನು ನಿನ್ನನ್ನು ನಿಗ್ರಹಿಸಿದ್ದೇನೆ. ಆದ್ದರಿಂದ ನೀನು ನನ್ನ ವಿಷಯದಲ್ಲಿ ಕೋಪಿಸಕೂಡದು”

ರಾಮನ ಮಾತು ವಾಲಿಗೆ ಸಮಾಧಾನ ತಂದಿತು. ರಾಮನಲ್ಲಿದ್ದ ಕೋಪವನ್ನು ಬಿಟ್ಟುಬಿಟ್ಟನು. ಆದರೆ ಅವನ ದುಃಖ ಮಾತ್ರ ಪೂರ್ಣವಾಗಿ ಶಮನವಾಗಿರಲಿಲ್ಲ. ಆ ಸ್ಥಿತಿಯಲ್ಲಿಯೆ ವಾಲಿ ರಾಮನಿಗೆ ಕೈಮುಗಿದು, “ರಾಮಚಂದ್ರ, ನೀನು ಹೇಳಿದ ಮಾತು ನಿಜ. ನೀನಾಡಿದ ಮಾತಿಗೆ ಪ್ರತಿ ಹೇಳಲು ನಾನು ಶಕ್ತನಲ್ಲ. ಹಿಂದೆ ನಿನ್ನ ವಿಷಯದಲ್ಲಿ ನಾನಾಡಿದ ಅಪ್ರಿಯವಾದ ಮಾತುಗಳನ್ನು ಮನಸ್ಸಿನಲ್ಲಿಡಬೇಡ. ಪ್ರಜೆಗಳ ಹಿತದಲ್ಲಿಯೆ ಆಸಕ್ತವಾದ ನಿನ್ನ ಮನಸ್ಸು ನಿರ್ಮಲವಾದುದು. ಆದರೆ ಈ ಒಂದು ವಿಷಯದಲ್ಲಿ ನನಗೆ ಅಭಯಪ್ರಧಾನಮಾಡು. ನಾನು ಬಂಧುಗಳನ್ನಾಗಲಿ ತಾರೆಯನ್ನಾಗಲಿ ನನ್ನ ವಿಷಯವನ್ನಾಗಲಿ ಕುರಿತು ಚಿಂತಿಸುವುದಿಲ್ಲ. ಆದರೆ ಹುಡುಗತನದಿಂದಲೂ ನನ್ನ ಮುದ್ದಿನಿಂದಲೂ ಬೆಳೆದಿರುವ ಅಂಗದನು, ಈ ನನ್ನ ಸಾವಿನಿಂದ ಬಿಸಿಲಿನಿಂದ ಬಾಡಿದ ಕೆರೆಯ ನೀರಿನಂತೆ, ಬಾಡಿಹೋಗುತ್ತಾನೆ. ಆ ನನ್ನ ಒಬ್ಬನೇ ಮಗನು ನನಗೆ ಅತ್ಯಂತ ಪ್ರಿಯನಾಗಿದ್ದಾನೆ. ಅತ್ಯಂತ ಬಲಶಾಲಿಯಾದ ಇವನ ರಕ್ಷಣೆಯ ಹೊರೆಯನ್ನು ನಿನಗೊಪ್ಪಿಸಿದ್ದೇನೆ. ಸುಗ್ರೀವನಿಗೂ ಅಂಗದವನಿಗೂ ಮಾರ್ಗದರ್ಶಕನಾಗು. ತಾರೆಯಲ್ಲಿ ಅನುಗ್ರಹವನ್ನು ತೋರು. ನಿನ್ನ ಅನುಗ್ರಹದಿಂದ ಈ ಭೂಮಂಡಲವನ್ನಲ್ಲದೆ ದೇವಲೋಕವನ್ನೂ ಸಾಧಿಸಲು ನನಗೆ ಅಸಧ್ಯವೆನಿಸುತ್ತಿರಲಿಲ್ಲ. ಆದರೆ ತಾರೆ ಹೇಳಿದ ಮಾತನ್ನು ಕೇಳದೆ ಸುಗ್ರೀವನೊಡನೆ ದ್ವಂದ್ವ ಯುದ್ಧಕ್ಕೆ ಬಂದೆ. ನಿನ್ನ ಪ್ರಸಾದವನ್ನು ಬಯಸಿ ಬರಲಿಲ್ಲ” ಎಂದು ನುಡಿದು ಸುಮ್ಮನಾದನು. “ಕಪಿವೀರ, ಅಂಗದನ ವಿಷಯದಲ್ಲಿ ನೀನು ಚಿಂತಿಸಬೇಡ. ದೈವವನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ವ್ಯಸನವನ್ನು ಬಿಡು” ಎಂದು ರಾಮನು ಧರ್ಮಯುಕ್ತವಾದ ಹಿತವಚನಗಳಿಂದ ವಾಲಿಯನ್ನು ಸಂತೈಸಿದನು. ರಾಮನ ಮಾತನ್ನು ಕೇಳಿ ಸುಪ್ರೀತನಾದ ವಾಲಿ ತನ್ನ ಅಪರಾಧವನ್ನು ಮನ್ನಿಸಬೇಕೆಂದು ಬೇಡಿಕೊಂಡನು.

* * *