ಕಣ್ಣು ಮುಚ್ಚಿ ತೆರೆಯುವವಷ್ಟರಲ್ಲಿ ಮಹಾಧನುಸ್ಸಿನಿಂದ ಹೊರಡುವ ದಿವ್ಯ ಮಾರ್ಗಣದಂತೆ ಹನುಮಂತನು ಆಕಾಶಕ್ಕೆ ನೆಗೆದನು.

ಸೀತಾನ್ವೇಷಣೆಗೆಂದು ಹೊರಟ ಮಾರುತಿ ತನ್ನ ಪ್ರಯಾಣಕ್ಕೆ ದೇವಚಾರಣರಿಗೆ ದಾರಿಯಾದ ಆಕಾಶವೆ ಅತ್ಯುತ್ತಮವೆಂದು ಭಾವಿಸಿದನು. ಮಹೇಂದ್ರ ಪರ್ವತದ ಕಂದರದಲ್ಲಿ ತಲೆಯೆತ್ತಿ ನಿಂತಿದ್ದ ಆ ವಾನರವೀರನು ಮಲೆತು ನಿಂತಿರುವ ಮಹಾ ವೃಷಭದಂತೆ ಕಂಗೊಳಿಸುತ್ತಿದ್ದನು. ವೈಡೂರ್ಯ ವರ್ಣದಿಂದ ವಿರಾಜಿಸುತ್ತಿದ್ದ ಹಸುರು ಹುಲ್ಲಿನ ಮೇಲೆ ಒಂದು ಕ್ಷಣಕಾಲ ಶತಪಥ ತಿರುಗುತ್ತಿದ್ದು ಅನಂತರ ಕೋಡುಗಳಲ್ಲೊಂದನ್ನೇರಿ ನಿಂತುಕೊಂಡನು. ಮುಹೂರ್ತಮಾತ್ರ ಕಣ್ಮುಚ್ಚಿ ಪಂಚಭೂತಗಳನ್ನು ಮನಸ್ಸಿನಲ್ಲಿ ಧ್ಯಾನಿಸಿದಮೇಲೆ ಆ ವೀರನು ಪರ್ವತದ ಸತ್ವವನ್ನು ಪರೀಕ್ಷಿಸುವುದಕ್ಕೋ ಎಂಬಂತೆ ಒಮ್ಮೆ ಕಾಲನ್ನು ನೆಲಕ್ಕೆ ಅಪ್ಪಳಿಸಿದನು. ಅದರಿಂದ ಪರ್ವತವೆಲ್ಲವೂ ಅಲುಗಿದಂತಾಯಿತು. ಸುತ್ತಲಿದ್ದ ವೃಕ್ಷಗಳಿಂದ ಹೂಗಳೆಲ್ಲವೂ ಉದುರಿದುವು. ಸಂದಿಗಳಲ್ಲಿ ಹುದುಗಿದ್ದ ಹಾವುಗಳೆಲ್ಲವೂ ಹೊರಕ್ಕೆ ಬಂದುವು. ದೂರದಲ್ಲಿ ನಿಂತಿದ್ದ ವಾನರರು ಈತನ ಸಾಮರ್ಥ್ಯವನ್ನು ಕಂಡು ಮನಸ್ಸಿನಲ್ಲಿಯೆ ನಲಿದರು. ಬೆಟ್ಟದ ನೆತ್ತಿಯೇರಿ ನಿಂತಿರುವ ಮತ್ತೊಂದು ಬೆಟ್ಟದಂತ ಬಹುದೂರದವರೆಗೂ ಆತನು ಕಾಣಬರುತ್ತಿದ್ದನು. ಆತನ ಆಕಾರವನ್ನೂ ನಿಲವನ್ನೂ ಕಂಡು ಮಹೇಂದ್ರಪರ್ವತದಲ್ಲಿದ್ದ ಋಷಿಗಳು ಆತನು ತನ್ನ ಕಾರ್ಯದಲ್ಲಿ ವಿಜಯಿಯಾಗಲು ಸಂದೇಹವೇ ಇಲ್ಲವೆಂದು ಭಾವಿಸಿದರು. ಹನುಮಂತನು ಅಲ್ಲಿಂದ ಹಾರಲು ನಿಶ್ಚೈಸಿ ಒಮ್ಮೆ ಮೈಯನ್ನೊದರಿದನು. ಮೈಮೇಲಿದ್ದ ಕೂದಲುಗಳು ನಿಮಿರಿ ನೆಟ್ಟನೆ ನಿಂತುವು. ಬಾಲವು ಮೇಲಕ್ಕೆದ್ದುನಿಂತು ಅದರ ತುದಿ ಗೊಂಡೆಯಂತಾಯಿತು. ಸಮುದ್ರದ ಅಲೆಗಳಂತಿದ್ದ ಬಾಹುಗಳೆರಡೂ ಮೇಲಕ್ಕೂ ಕೆಳಕ್ಕೂ ತೂಗಾಡಿದುವು. ಚಿಮ್ಮುವ ಮೊದಲು ಕಾಲುಗಳನ್ನು ಭೂಮಿಗೆ ಬಲವಾಗಿ ಊರಿದುದರಿಂದ ಅವು ಸಂಕುಚಿತವಾದುವು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಮಹಾಧನುಸ್ಸಿನಿಂದ ಹೊರಡುವ ದಿವ್ಯಮಾರ್ಗಣದಂತೆ ಹನುಮಂತನು ಆಕಾಶಕ್ಕೆ ನೆಗೆದನು. ಶ್ರೀರಾಮನು ರಾವಣನ ಮೇಲೆ ಪ್ರಯೋಗಿಸುವ ಮೊಟ್ಟಮೊದಲನೆಯ ಬಾಣವೇ ಹನುಮಂತನೆಂಬಂತೆ ಕಾಣಿಸಿತು. ಆತನು ಹಾರಿದ ವೇಗಕ್ಕೆ ಬಿರುಗಾಳಿಯೆದ್ದು ಸುತ್ತಲಿನ ಮರಗಿಡಗಳು ಮುರಿದುಬಿದ್ದುವು; ಹೂಗಳೂ ಎಲೆಗಳೂ ಆ ವೇಗಕ್ಕೆ ಸಿಕ್ಕಿ ಆತನ ಹಿಂದೆಯೆ ಹಾರಿಹೋದುವು; ಆತನನ್ನು ಸಾಗಕಳುಹುವುದಕ್ಕೂ ಎಂಬಂತೆ. ಮೇಲೆದ್ದು ನಿಂತಿದ್ದ ಬಾಲವೆ ತನ್ನ ವಿಜಯಧ್ವಜದಂತೆ ಕಂಗೊಳಿಸುತ್ತಿರಲು, ಆತನು ದಕ್ಷಿಣ ದಿಕ್ಕನ್ನು ಕುರಿತು ಪ್ರಯಾಣ ಹೊರಟನು.

ಮೇಲೆ ವಿಸ್ತಾರವಾದ ನೀಲಗಗನ; ಕೆಳಗೆ ಅಪಾರವಾದ ಸಾಗರ. ಇವುಗಳ ನಡುವೆ ಅದ್ಭುತವೇಗದಿಂದ ಚಲಿಸುವ ವಾಯುಪುತ್ರನನ್ನು ನೋಡುವುದಕ್ಕಾಗಿ ದೇವಾನುದೇವತೆಗಳೆಲ್ಲರೂ ಅಂತರಿಕ್ಷದಲ್ಲಿ ನೆರೆದರು. ಜಲದೇವತೆಯೆಲ್ಲರೂ ಸಮುದ್ರದ ಮೇಲೆ ನೆರೆದರು. ಸ್ವತಃ ಸಮುದ್ರರಾಜನೆ ಆ ಮಹಾತ್ಮನ ಮಹಾಕಾರ್ಯವನ್ನು ಕಂಡು ಮೆಚ್ಚಿ, ತನ್ನಲ್ಲಿ ಅಡಗಿದ್ದ ಮೈನಾಕಪರ್ವತವನ್ನು ಕುರಿತು “ಎಲೈ ಮೈನಾಕನೆ, ನೀರನ್ನು ಬಿಟ್ಟು ಮೇಲಕ್ಕೇಳು. ದುರ್ಭರ ಕಾರ್ಯದಲ್ಲಿ ತೊಡಗಿರುವ ಆಂಜನೇಯನು ಕ್ಷಣಕಾಲ ನಿನ್ನಲ್ಲಿ ನಿಂತು ಆಯಾಸವನ್ನು ಕಳೆದುಕೊಳ್ಳಲಿ” ಎಂದನು. ಆತನ ಅಪ್ಪಣೆಯಂತೆ ಮೈನಾಕನು ತನ್ನ ಸುವರ್ಣಶಿಖರಗಳೊಡನೆ ನೀರಿನಿಂದ ಮೇಲಕ್ಕೆದ್ದು ಹನುಮಂತನ ದಾರಿಗೆ ಅಡ್ಡವಾಗಿ ನಿಂತನು. ಇದನ್ನು ನೋಡಿ ಹನುಮಂತನಿಗೆ ತನ್ನ ಗಮನಕ್ಕೆ ಇದೇನೋ ಒಂದು ಅಡ್ಡಿ ಬಂದಿತೆಂದು ಭಾಸವಾಯಿತು. ಒಮ್ಮೆ ತನ್ನ ಎದೆಯಿಂದ ವೇಗವಾಗಿ ಹಾದು ಅದನ್ನು ಕೆಳಕ್ಕೆ ತಾಡಿಸಿದನು. ಕೆಳಕ್ಕೆ ಬಿದ್ದರೂ ಮೈನಾಕನಿಗೆ ಮಾರುತಿಯ ಪರಾಕ್ರಮವನ್ನು ಕಂಡು ಅತಿಶಯಾನಂದವಾಯಿತು. ಆದ್ದರಿಂದ ಆತನನ್ನು ಕುರಿತು “ಪೂಜ್ಯನೆ, ಸಮುದ್ರರಾಜನೂ ನಾನೂ ನಿನ್ನ ಹಿತವನ್ನೇ ಕೋರತಕ್ಕವರು. ಆದ್ದರಿಂದ ಸಮುದ್ರರಾಜನ ಅಪ್ಪಣೆಯಂತೆ ನಿನ್ನ ವಿಶ್ರಾಂತಿಗಾಗಿ ನಾನು ನಿನ್ನ ಇದಿರಿಗೆ ನಿಂತೆ. ಅಲ್ಲದೆ ನಿನ್ನ ತಂದೆಯಾದ ವಾಯುದೇವನಿಗೆ ನಾನು ಚಿರಋಣಿ. ಹಿಂದೆ ಇಂದ್ರನು ಬೆಟ್ಟಗಳ ರೆಕ್ಕೆಗಳನ್ನೆಲ್ಲಾ ಕತ್ತರಿಸುತ್ತಿದ್ದಾಗ, ನಾನು ನಿನ್ನ ತಂದೆಯ ದಯದಿಂದ ಹಾರಿ ಬಂದು ಈ ಸಮುದ್ರದಲ್ಲಿ ಅಡಗಿಕೊಂಡೆ. ನನ್ನ ಪ್ರಾಣವನ್ನು ಉಳಿಸಿದ ಆತನು ನನಗೆ ತಂದೆಯಿದ್ದಂತೆ. ಆ ಮೂಲಕ ನೀನು ನನಗೆ ಸೋದರನಾದಂತಾಯಿತು. ದಯವಿಟ್ಟು ನನ್ನ ಆತಿಥ್ಯವನ್ನು ಸ್ವೀಕರಿಸಿ ಮುಂದಕ್ಕೆ ಪ್ರಯಾಣ ಬೆಳಸು” ಎಂದು ಪ್ರಾರ್ಥಿಸಿದನು. ಆದರೆ ಹನುಮಂತನು ಕಾರ್ಯಗೌರವದಿಂದ ತನಗೆ ಈಗ ವ್ಯವಧಾನವಿಲ್ಲವೆಂದು ತಿಳಿಸಿ ಲಂಕೆಯಿಂದ ಹಿಂದಿರುಗಿ ಬರುವಾಗ ಆತನ ಆತಿಥ್ಯವನ್ನು ಸ್ವೀಕರಿಸುವುದಾಗಿ ಮಾತುಕೊಟ್ಟು ಪ್ರಯಾಣವನ್ನು ಮುಂದುವರಿಸಿದನು.

ಮುಂದಕ್ಕೆ ಪ್ರಯಾಣ ಹೊರಟ ಹನುಮಂತನು ಕ್ಷಣಮಾತ್ರದಲ್ಲಿ ಮೈನಾಕ ಪರ್ವತದಿಂದ ಕಣ್ಮರೆಯಾಗಿ ಹೊರಟುಹೋದನು. ಕ್ಷಣ ಕ್ಷಣಕ್ಕೂ ಆತನ ವೇಗ ಹೆಚ್ಚುತ್ತಿತ್ತು. ಆಯಾಸವೆಂದರೆ ಏನೆಂಬುದೇ ಆತನಿಗೆ ಗೊತ್ತಿಲ್ಲವೆಂದು ತೋರುತ್ತದೆ. ಅಗೊ! ಮತ್ತೆ ಅದೇನು? ಸಮುದ್ರಮಧ್ಯದಿಂದ ಘೋರವಾದ ರಾಕ್ಷಸಾಕಾರವೊಂದು ಮೇಲಕ್ಕೇಳುತ್ತಿದೆ! ಅಹುದು! ದೇವತೆಗಳು ಹನುಮಂತನ ಸತ್ವವನ್ನು ಪರೀಕ್ಷಿಸಬೇಕೆಂದು ಸುರಸೆಯೆಂಬ ಪನ್ನಗಮಾತೆಯನ್ನು ಆತನನ್ನು ತಡೆಯಲು ಕಳುಹಿಸಿದ್ದಾರೆ. ಅವಳು ಅತಿ ವಿಕಾರ ರೂಪದಿಂದ ಮಾರುತಿಯನ್ನು ಅಡ್ಡಗಿಸಿ ದೊಡ್ಡ ಕಮರಿಯಂತಿದ್ದ ತನ್ನ ಬಾಯನ್ನು ತೆರೆದು ಅವನನ್ನು ನುಂಗುವವಳಂತೆ ಬರುತ್ತಿದ್ದಾಳೆ. ಅವಳು ಹನುಮಂತನನ್ನು ಕುರಿತು “ಎಲೈ ವಾನರನೆ, ದೇವತೆಗಳು ನಿನ್ನನ್ನು ನನಗೆ ಆಹಾರವಾಗಿ ತೋರಿಸಿದ್ದಾರೆ. ನಾನು ನಿನ್ನನ್ನು ಭಕ್ಷಿಸಬೇಕು. ನನ್ನ ಬಾಯನ್ನು ಪ್ರವೇಶಿಸು” ಎಂದಳು. ಹನುಮಂತನು ತನ್ನ ಕಾರ್ಯಗೌರವವನ್ನು ಆಕೆಗೆ ವಿವರಿಸಿ ಹೇಳಿ, ತನ್ನ ಕಾರ್ಯಸಾಧನೆಯಾದ ಮೇಲೆ ಹಿಂದಿರುಗಿ ಬರುವಾಗ ಅವಳ ಇಷ್ಟದಂತೆ ನಡೆದುಕೊಳ್ಳುವುದಾಗಿ ತಿಳಿಸಿ, ತನ್ನನ್ನು ಸದ್ಯಕ್ಕೆ ತೊಂದರೆ ಪಡಿಸಕೂಡದೆಂದು ಕೈಮುಗಿದು ವಿನಯದಿಂದ ಬೇಡಿಕೊಂಡನು. ಆದರೆ ಸುರಸೆ ಇದಕ್ಕೊಪ್ಪಲಿಲ್ಲ. ಆದ್ದರಿಂದ ಹನುಮಂತನು ಅವಳ ಬಾಯಿಗೆ ಅಳವಡದಷ್ಟು ಎತ್ತರವಾಗಿ ಬೆಳೆದುನಿಂತನು. ಅದನ್ನು ಕಂಡು ಸುರಸೆ ತನ್ನ ಬಾಯನ್ನು ಹಿಗ್ಗಲಿಸಿದಳು. ಹನುಮಂತ ಹತ್ತುಯೋಜನೆ ಬೆಳೆದರೆ ಅವಳ ಬಾಯಿ ಇಪ್ಪತ್ತುಯೋಜನದಷ್ಟು ವಿಸ್ತಾರವಾಗುವುದು. ಆತನ ದೇಹ ಮೂವತ್ತು ಯೋಜನದಷ್ಟು ಬೆಳೆದರೆ ಅವಳ ಬಾಯಿ ನಲವತ್ತು ಯೋಜನದಷ್ಟು ಹಿಗ್ಗಲಿಸುವುದು. ಇವಳನ್ನು ನಿಗ್ರಹಿಸಲು ಪ್ರಯತ್ನಿಸಿದರೆ ತನ್ನ ಕಾರ್ಯ ವಿಳಂಬವಾಗುವುದೆಂದುಕೊಂಡು ಮಾರುತಿ ಫಕ್ಕನೆ ಅಂಗುಷ್ಟ ಪ್ರಮಾಣಕ್ಕೆ ತನ್ನ ದೇಹವನ್ನು ಕುಗ್ಗಿಸಿಕೊಂಡು ಅವಳು ತನ್ನ ದೇಹವನ್ನು ಕುಗ್ಗಿಸಿಕೊಳ್ಳುವುದರೊಳಗಾಗಿಯೆ ಅವಳ ಬಾಯಲ್ಲಿ ಹೊಕ್ಕು ಹೊರಕ್ಕೆ ಬಂದನು. ಅನಂತರ ಆತನು ಸುರಸೆಯನ್ನು ಕುರಿತು “ಎಲೈ ರಾಕ್ಷಸಿಯೆ, ‘ನನ್ನ ಬಾಯನ್ನು ಪ್ರವೇಶಿಸು’ ಎಂದು ನೀನು ಹೇಳಿದಂತೆ ಇದೋ ಪ್ರವೇಶಿಸಿ ಹೊರಬಂದಿದ್ದೇನೆ. ಇನ್ನು ನನ್ನನ್ನು ಬಿಡು, ಸ್ವಾಮಿ ಕಾರ್ಯಕ್ಕೆ ವಿಳಂಬವಾಗುವುದು ಎಂದನು. ಆತನ ಧೈರ್ಯವನ್ನೂ ಜಾಣ್ಮೆಯನ್ನೂ ಕಂಡು ಸುರಸೆಗೆ ಆನಂದವಾಯಿತು. ಆತನನ್ನು ಬಾಯ್ತುಂಬ ಹರಸಿ ಬೀಳ್ಕೊಟ್ಟಳು.

ಸುರಸೆಯಿಂದ ಬೀಳ್ಕೊಂಡ ಹನುಮಂತನು ಮಳೆಗಾಲದ ಚಂದ್ರನಂತೆ ಮೇಘಗಳ ಮಧ್ಯದಲ್ಲಿ ಹಾರಿಹೋಗುತ್ತಾ ಸ್ವಲ್ಪದೂರವನ್ನು ಸವೆಸಿದ್ದನೊ ಇಲ್ಲವೊ ಅಷ್ಟರಲ್ಲಿ ಮತ್ತೊಂದು ವಿಘ್ನ ಪ್ರಾಪ್ತವಾಯಿತು. ಸಮುದ್ರ ಮಧ್ಯದಲ್ಲಿ ವಾಸಿಸುತ್ತಿದ್ದ ಸಿಂಹಿಕೆಯೆಂಬ ರಾಕ್ಷಸಿಯೊಬ್ಬಳು ಆತನನ್ನು ಕಂಡಳು. ಮೇಲೆ ಸಂಚರಿಸುವ ಪ್ರಾಣಿಗಳ ನೆರಳಿನಿಂದಲೇ ಅವುಗಳ ಚಲನೆಯನ್ನು ತಡೆದುನಿಲ್ಲಿಸಿ, ಅವುಗಳನ್ನು ತನ್ನ ಹೊಟ್ಟೆಗೆ ಹಾಕಿಕೊಳ್ಳುವುದು ಆ ರಾಕ್ಷಸಿಯ ನಿತ್ಯಕ್ರಮ. ಇಂದು ದೊಡ್ಡ ಬೇಟೆಯೊಂದು ದೊರೆಯಿತೆಂದು ಅವಳಿಗೆ ಮಹದಾನಂದವಾಯಿತು. ಸಮುದ್ರದ ಮೇಲೆ ಬಿದ್ದಿದ್ದ ಹನುಮಂತನ ನೆರಳನ್ನು ಹಿಡಿದು ಅವನ ಆಕಾಶಗಮನವನ್ನು ತಡೆದು ನಿಲ್ಲಿಸಿದಳು. ಎದುರುಗಾಳಿಯಿಂದ ತೊಂದರೆಗೊಳಗಾದ ಹಡಗಿನಂತೆ ತನ್ನ ಸ್ಥಿತಿ ಆಗಿರುವುದನ್ನು ಕಂಡು ಹನುಮಂತನು ಕೆಳಗೆ ನೋಡುತ್ತಾನೆ, ಭಯಂಕರ ರಾಕ್ಷಸಿ ಕಮರಿಯಂತಿರುವ ತನ್ನ ಬಾಯನ್ನು ತೆರೆದುಕೊಂಡು, ನೆರಳಿನ ಮೂಲಕ ತನ್ನನ್ನು ಕೆಳಗೆಳೆಯುತ್ತಿದ್ದಾಳೆ! ಸುಗ್ರೀವನು ಹಿಂದೆ ಹೇಳಿದ್ದ ‘ನೆರಳನ್ನು ಹಿಡಿದು ಭಕ್ಷಿಸುವ ಭೂತ’ ಇವಳೇ ಇರಬೇಕೆಂದುಕೊಂಡು ಆತನು ತನ್ನ ದೇಹವನ್ನು ಅದ್ಭುತಾಕಾರವಾಗಿ ಬೆಳಸಿದನು. ಅನಂತರ ದೇಹವನ್ನುಡುಗಿಸಿಕೊಂಡು ತಾನಾಗಿಯೆ ಅವಳ ಬಿಚ್ಚಿದ ಬಾಯಲ್ಲಿ ಪ್ರವೇಶಿಸಿದನು. ಹೊಟ್ಟೆಯನ್ನು ಹೊಕ್ಕ ಹನುಮಂತನು ಅವಳ ಉದರ ಸ್ಥಾನವನ್ನು ಸಿಗಿದು ಅಲ್ಲಿಂದ ಪುಟವೆದ್ದ ಚೆಂಡಿನಂತೆ ಆಕಾಶಕ್ಕೆ ನೆಗೆದನು. ಆ ರಾಕ್ಷಸಿ ಘೋರವಾಗಿ ಚೀತ್ಕರಿಸುತ್ತ ಸುತ್ತ ನೀರಿನಲ್ಲಿ ಬಿದ್ದಳು. ಇಷ್ಟಾದಮೇಲೆ ಮತ್ತಾವ ವಿಘ್ನವೂ ಇಲ್ಲದೆ ಆತನು ಗರುಡನಂತೆ ಸುಖವಾಗಿ ಹಾರುತ್ತಾ ಸಮುದ್ರದ ದಂಡೆಗೆ ಬಂದು ಸೇರಿದನು. ಅದರ ತೀರದಲ್ಲಿ ದೊಡ್ಡದೊಂದು ಅಡವಿಯಿತ್ತು. ಹನುಮಂತನು ನೆಲಕ್ಕಿಳಿಯುವ ಮುನ್ನ ತನ್ನ ದೇಹವನ್ನು ಅತ್ಯಂತ ಚಿಕ್ಕದಾಗಿ ಕುಗ್ಗಿಸಿಕೊಂಡು ಆ ಅಡವಿಯಲ್ಲಿ ಕೇತಕೀ ವನದಿಂದ ತುಂಬಿರುವ ಲಂಬಾಚಲವೆಂಬ ಪರ್ವತದ ಶಿಖರದ ಮೇಲೆ ಬಂದಿಳಿದನು. ಆ ಪರ್ವತದಿಂದಾಚೆ ಅತ್ಯಂತ ಎತ್ತರವಾದ ತ್ರಿಕೂಟ ಶಿಖರವೆಂಬ ಪರ್ವತವಿತ್ತು. ಅದರ ಮೇಲ್ಗಡೆಯಲ್ಲಿಯೆ ಕಾಣಿಸಿತು. ಲಂಕಾಪಟ್ಟಣ.