ಅಣ್ಣನ ಹಿತದಲ್ಲಿಯೆ ದೃಷ್ಟಿಯುಳ್ಳ ಲಕ್ಷ್ಮಣನು ಅಣ್ಣನನ್ನು ಬೀಳ್ಕೊಂಡು ಕಿಷ್ಕಿಂಧೆಯನ್ನು ಹೊಕ್ಕನು. ಕೋಪದಿಂದ ಅದಿರುತ್ತಿದ್ದ ತುಟಿಯುಳ್ಳ ಲಕ್ಷ್ಮಣನು ಸುಗ್ರೀವನ ಅರಮನೆಯನ್ನು ಕುರಿತು ವೇಗವಾಗಿ ನಡೆದನು. ಲಕ್ಷ್ಮಣನ ಕೋಪವನ್ನು ಕಂಡು ಹೆದರಿದ ವಾನರರು. ತಾರೆಯೊಡನೆ ರಾಣೀವಾಸದಲ್ಲಿದ್ದ ಸುಗ್ರೀವನಿಗೆ ಅವನ ಬರುವಿಕೆಯನ್ನು ತಿಳಿಸಿದರು. ಆದರೆ ಆ ವಾನರರ ಮಾತು ಸುಗ್ರೀವನ ಗಮನವನ್ನು ಸೆಳೆಯಲೇ ಇಲ್ಲ. ಸುಗ್ರೀವನ ಮದವನ್ನೂ, ಅಣ್ಣನ ಶೋಕವನ್ನು ನೆನೆದು ಲಕ್ಷ್ಮಣನು ಕೋಪದಿಂದ ಕುರುಡನಂತಾದನು. ಅಂಗದನು ಲಕ್ಷ್ಮಣನ ಸಂದೇಶವನ್ನು ತಂದಾಗ ಸುಗ್ರೀವನು ಮದ್ಯಪಾನದಿಂದ ಮತ್ತನಾಗಿದ್ದನು. ಸುಗ್ರೀವನಿಗೂ ತಾರೆಗೂ ನಮಸ್ಕರಿಸಿ ಲಕ್ಷ್ಮಣನ ಮಾತನ್ನು ತಿಳಿಸಿದರೂ ಸುಗ್ರೀವನಿಗೆ ಎಚ್ಚರವುಂಟಾಗಲಿಲ್ಲ. ಸುಗ್ರೀವನಿಗೆ ಎಚ್ಚರವನ್ನುಂಟುಮಾಡಲು ಲಕ್ಷ್ಮಣನು ಸಿಂಹಾನಾದವನ್ನೂ ಕಪಿಗಳು ದೊಡ್ಡ ಶಬ್ದವನ್ನೂ ಮಾಡಬೇಕಾಗಯಿತು. ಆಗ ಪ್ಲಕ್ಷ ಮತ್ತು ಪ್ರಭಾವರೆಂಬ ಮಂತ್ರಿಗಳು ಎಚ್ಚರಗೊಂಡು ಸುಗ್ರೀವನಿಗೆ ಲಕ್ಷ್ಮಣನ ಬರುವಿಕೆಯನ್ನು ತಿಳಿಸಿದರು. ಹಾಗೂ ಅವನ ಕೋಪವನ್ನು ಶಮನಗೊಳಿಸುವಂತೆ ಬೇಡಿಕೊಂಡರು.

ಮಂತ್ರಿಗಳ ಮಾತನ್ನು ಕೇಳಿ ಸುಗ್ರೀವನು ಹಾಸಗೆಯನ್ನು ಬಿಟ್ಟೆದ್ದನು. ನೀತಿಕುಶಲನಾದ ಆತನು ನಿಪುಣರಾದ ತನ್ನ ಮಂತ್ರಿಗಳನ್ನು ಕರೆಸಿಕೊಂಡು ಅವರೊಡನೆ ಮಂತ್ರಾಲೋಚನೆಯನ್ನು ನಡೆಸಿದನು. “ರಾಮನ ತಮ್ಮನಾದ ಲಕ್ಷ್ಮಣನು ಕೋಪಗೊಂಡು ಏತಕ್ಕಾಗಿ ಇಲ್ಲಿಗೆ ಬಂದಿರುವನೊ ನಾನರಿಯೆ. ರಾಮಲಕ್ಷ್ಮಣರಿಗೆ ನಾನಾವ ಕೇಡನ್ನೂ ಬಗೆದಿಲ್ಲ. ಕೆಡನುಡಿಯನ್ನೂ ನುಡಿದಿಲ್ಲ. ಲಕ್ಷ್ಮಣನು ನನ್ನ ವೈರಿಗಳ ಚಾಡಿಮಾತುಗಳಿಗೆ ಕಿವಿಗೊಟ್ಟನೊ ಏನೊ! ರಾಮನನ್ನಾಗಲಿ ಲಕ್ಷ್ಮಣನನ್ನಾಗಲಿ ಕಂಡರೆ ನನಗೆ ಹೆದರಿಕೆಯಿಲ್ಲದಿದ್ದರೂ, ಲಕ್ಷ್ಮಣನ ಕೋಪವು ನನ್ನ ಸಂಭ್ರಮವನ್ನು ಹೆಚ್ಚಿಸಿ ಭಯವನ್ನುಂಟುಮಾಡುತ್ತಿದೆ. ರಾಮನು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡಲು ನನಗೆ ಇನ್ನೂ ಸಾಧ್ಯವಾಗಿಲ್ಲವೆಂದು ಮನಸ್ಸು ತಳಮಳಗೊಳ್ಳುತ್ತಿದೆ. ”

ಸುಗ್ರೀವನ ಮಾತನ್ನು ಕೇಳಿ ನೀತಿಕುಶಲವಾದ ಹನುಮಂತನು: “ಸುಗ್ರೀವ, ತನ್ನ ಕಾರ್ಯವನ್ನು ಸುಗ್ರೀವನು ಇನ್ನೂ ಮಾಡಲಿಲ್ಲವೆಂದು ಅರಿತು ಕೋಪಗೊಂಡು ರಾಮನು ಲಕ್ಷ್ಮಣನನ್ನು ಇಲ್ಲಿಗೆ ಕಳುಹಿಸಿದ್ದಾನೆ. ನೀನು ನೀತಿಶಾಸ್ತ್ರಕುಶಲನು. ಈಗಲಾದರೋ ಶರತ್ ಕಾಲ ಕಾಲಿಟ್ಟಿದೆ. ಸೀತೆಯ ಅಗಲಿಕೆಯಿಂದ ದುಃಖಿತನಾದ ರಾಮನು ಲಕ್ಷ್ಮಣನೊಡನೆ ಕಠಿಣ ವಚನಗಳನ್ನು ಹೇಳಿಕಳುಹಿಸಿರಬಹುದು. ಮಿತ್ರಕಾರ್ಯದಲ್ಲಿ ತೊಡಗಿದ ನೀನು ಅವುಗಳನನು ಸಹಿಸಿಕೊಳ್ಳಬೇಕು. ಆದ್ದರಿಂದ ಕೈಮುಗಿದು ಬೇಡಿ ಲಕ್ಷ್ಮಣನ ಕೋಪವನು ನೀನು ಸಮಾಧಾನಗೊಳಿಸು. ಕೋಪಗೊಂಡ ರಾಮನನ್ನು ತಡೆದು ನಿಲ್ಲಿಸಲು ದೇವಗಂಧರ್ವರಿಗೂ ಸಾಧ್ಯವಿಲ್ಲ. ಆದ್ದರಿಂದ ಮೊದಲು ಲಕ್ಷ್ಮಣನನ್ನು ಪ್ರಸನ್ನಗೊಳಿಸಿ ಮಿತ್ರಕಾರ್ಯದಲ್ಲಿ ತೊಡಗು” ಎಂದು ಬುದ್ದಿ ಹೇಳಿದನು.

ಆ ವೇಳೆಗೆ ಲಕ್ಷ್ಮಣನು ಮನೋಹರವಾದ ಸುಗ್ರೀವನ ಅಂತಃಪುರವನ್ನು ಹೊಕ್ಕು, ಅಲ್ಲಿ ಮಧುರವಾದ ವೀಣಾಗಾನವನ್ನು ಕೇಳಿದನು: ರೂಪಯೌವನದಿಂದ ಗರ್ವಿತರಾದ ಸ್ತ್ರೀಯರನ್ನು ಆ ಸುಗ್ರೀವಭವನದಲ್ಲಿ ಕಂಡನು. ಆ ಸ್ತ್ರೀಯರ ನೂಪುರಗಳ ಸದ್ದನ್ನು ಕೇಳಿ ಲಕ್ಷ್ಮಣನಿಗೆ ಸ್ವಲ್ಪ ನಾಚಿಕೆಯೆ ಆಯಿತು. ಆದರೂ ಕೋಪಗೊಂಡ ಲಕ್ಷ್ಮಣನು ಏಕಾಂತದಲ್ಲಿ ನಿಂತು ಬಿಲ್ಲನ್ನು ಧ್ವನಿಮಾಡಿದನು. ಅದನ್ನು ಕೇಳಿ ಸುಗ್ರೀವನು ಭಯದಿಂದ ಇದ್ದಲ್ಲಿಯೆ ನಡುಗಿಹೋದನು. ಲಕ್ಷ್ಮಣನ ಬರುವಿಕೆಯನ್ನು ಅರಿತ ಸುಗ್ರೀವನು ಗಾಬರಿಯಿಂದ ಕೂಡಿ ತಾರೆಯನ್ನು ಕುರಿತು “ಪ್ರಿಯೆ, ಲಕ್ಷ್ಮಣನು ಯಾರ ಕಾರಣಕ್ಕಾಗಿ ಕೋಪಗೊಂಡು ಬಂದಿರುವನೊ ಅದು ತಿಳಿಯದಾಗಿದೆ. ಉತ್ತಮರು ಕಾರಣವಿಲ್ಲದೆ ಕೋಪಗೊಳ್ಳರು. ಆದ್ದರಿಂದ ನೀನೇ ಹೋಗಿ ಲಕ್ಷ್ಮಣನನ್ನು ಇನಿವಾತುಗಳಿಂದ ಸಂತೈಸಿ ಪ್ರಸನ್ನನನ್ನಾಗಿ ಮಾಡು. ಆ ಬಳಿಕ ನಾನು ಲಕ್ಷ್ಮಣನನ್ನು ಕಾಣುತ್ತೇನೆ. ಮಹಾತ್ಮರು ಸ್ತ್ರೀಯರ ವಿಷಯದಲ್ಲಿ ಕೋಪಗೊಳ್ಳರು” ಎಂದನು.

ಅನಂತರ ಮದ್ಯಪಾನದಿಂದ ಕಣ್ಣು ಚಂಚಲವಾಗಿ, ಸೊಂಟದ ಪಟ್ಟಿ ಜೋಲಾಡುವಂತೆ ಸಡಿಲವಾಗಿ, ಅಡಿಗಡಿಗೂ ತತ್ತರಿಸುತ್ತಿದ್ದ ತಾರೆ ಲಕ್ಷ್ಮಣನ ಬಳಿಗೆ ಬಂದಳು. ವಿನಯದಿಂದ ನಮಸ್ಕರಿಸಿದ ತಾರೆಯನ್ನು ಲಕ್ಷ್ಮಣನು ಉದಾಸೀನ ಭಾವದಿಂದಲೆ ಕಂಡನು. ಆದರೇನು? ಸ್ತ್ರೀ ಸಾಮೀಪ್ಯದಿಂದ ಲಕ್ಷ್ಮಣನ ಕೋಪವೆಲ್ಲ ಮಾಯಾವಾಯಿತು. ರಾಜಕುಮಾರನು ತಾರೆಯನ್ನು ನೋಡಿ ನಾಚಿ ಮುಖ ತಗ್ಗಿಸಿದನು: ಇನಿವಾತುಗಳಿಂದಲೆ ಲಕ್ಷ್ಮಣನ ಕೋಪಕ್ಕೆ ಕಾರಣವೆನೆಂದು ತಾರೆ ಕೇಳಿದಳು. ತಾರೆಯ ಮಾತಿಗೆ ಲಕ್ಷ್ಮಣನು “ಕಾಮಮತ್ತನಾದ ಸುಗ್ರೀವನಿಗೆ ಧರ್ಮಾರ್ಥಗಳ ಚಿಂತೆಯುಂಟೇ? ರಾಜ್ಯದ ಹಿತಚಿಂತನೆ ಅವನಿಗೆ ಬೇಕಿಲ್ಲವೆಂದೇ ತೋರುತ್ತದೆ. ಸಂಕಟದಿಂದ ಕುಗ್ಗಿಹೋದ ನಮ್ಮನ್ನು ಮರೆತು, ಕಾಮಾಸಕ್ತನಾದ ಅವನು ವರ್ಷಾಕಾಲ ಕಳೆದಿರುವುದನ್ನೆ ಅರಿಯದಿದ್ದಾನೆ. ಉಪಕಾರಿಗಳ ವಿಷಯದಲ್ಲಿ ಅಪಕಾರವೆಸಗುವುದು ಧರ್ಮ ಲೋಪಕ್ಕೂ, ಮೈತ್ರೀನಾಶಕ್ಕೂ ಕಾರಣ ಎಂಬುದು ಅವನಿಗೆ ತಿಳಿಯದಾಗಿದೆ. ಧರ್ಮಮಾರ್ಗವನ್ನು ಮೀರಿರುವ ಅವನ ವಿಷಯದಲ್ಲಿ ನಾವು ಮಾಡತಕ್ಕ ಕೆಲದವನ್ನು ಅವನಿಗೆ ತಿಳಿಸು” ಎಂದು ನುಡಿದನು.

ಧರ್ಮಯುಕ್ತವೂ ಮಧುರವೂ ಆದ ಲಕ್ಷ್ಮಣನ ಮಾತನ್ನು ಕೇಳಿ ತಾರೆ ವಿಶ್ವಾಸದಿಂದ ರಾಜಕುಮಾರನಿಗೆ ಈ ರೀತಿ ನುಡಿದಳು “ರಾಜಕುಮಾರ, ಸ್ವಜನರಲ್ಲಿ ಕೋಪಗೊಳ್ಳುವುದು ಉಚಿತವಲ್ಲ. ಸುಗ್ರೀವನು ನಿಮ್ಮ ಕಾರ್ಯದಲ್ಲಿಯೆ ನಟ್ಟಮನಸ್ಸುಳ್ಳವನಾಗಿದ್ದಾನೆ. ಅವನ ಈ ಅಲ್ಪ ಅಪರಾಧವನ್ನು ಮನ್ನಿಸು. ನಿನ್ನಂಥ ಶೂರರು ಬಲಹೀನರಲ್ಲಿ ಕೋಪಗೊಳ್ಳುವುದು ಯುಕ್ತವೆ? ತಾನು ಕಾಲವಿಳಂಬ ಮಾಡಿರುವುದೂ ಅದಕ್ಕಾಗಿ ರಾಮನು ಕೋಪಗೊಂಡಿರುವುದೂ ಸುಗ್ರೀವನಿಗೆ ತಿಳಿದಿದೆ. ಇದುವರೆಗೂ ಇಂದ್ರಿಯಗಳನ್ನು ದಮನಮಾಡಿಕೊಂಡಿದ್ದ ನಿನ್ನ ತಮ್ಮನಾದ ಸುಗ್ರೀವನು ಈಗ ಸ್ವಲ್ಪ ಕಾಮಸಕ್ತನಾದರೆ ಆ ತಪ್ಪನ್ನು ನೀನು ಮನ್ನಿಸಬೇಕು. ಋಷಿಗಳೇ ಕಾಮವಶರಾಗುವರೆಂದಮೇಲೆ ಸುಗ್ರೀವನ ಮಾತೇನು? ಸ್ವಭಾವದಿಂದ ಸುಗ್ರೀವನು ಚಪಲನಲ್ಲವೆ? ಆತನು ಕಾಮಾಸಕ್ತನಾಗಿದ್ದರೂ ಬಹಳ ದಿನಗಳ ಹಿಂದೆಯೆ ನಿಮ್ಮ ಕಾರ್ಯಕ್ಕಾಗಿ ವಾನರರನ್ನು ಬರುವಂತೆ ಅಪ್ಪಣೆಮಾಡಿದ್ದಾನೆ. ಅವನ ಅಪ್ಪಣೆಗೆ ತಲೆಬಾಗಿ ಕಾಮರೂಪಿಗಳೂ, ಶೂರರೂ ಆದ ವಾನರರು ಬಂದು ನೆರೆದಿದ್ದಾರೆ. ಪರಸ್ತ್ರೀಯರನ್ನು ಸತ್ಪುರುಷರು ಮಿತ್ರಭಾವದಿಂದ ಕಾಣುವುದರಲ್ಲಿ ದೋಷವಿಲ್ಲ. ಆದ್ದರಿಂದ ನೀನು ಒಳಕ್ಕೆ ಬರಬಹುದು”.

ತಾರೆಯ ಕರೆಯನ್ನು ಮನ್ನಿಸಿ ಲಕ್ಷ್ಮಣನು ಅಂತಃಪುರವನ್ನು ಹೊಕ್ಕನು. ಹೇಮಪೀಠದಲ್ಲಿ ಕುಳಿತು ದೇವೇಂದ್ರನಂತೆ ಮೆರೆಯುತ್ತಿದ್ದ ಸುಗ್ರೀವನನ್ನು ಕಂಡು ಲಕ್ಷ್ಮಣನು ಕೋಪದಿಂದ ಕೆಂಡವಾದನು. ಸುಗ್ರೀವನು ಪೀಠದಿಂದೆದ್ದು ಲಕ್ಷ್ಮಣನ ಬಳಿಗೆ ಬಂದನು. ನಕ್ಷತ್ರಗಳಿಂದ ಸುತ್ತುವರಿದ ಚಂದ್ರನಂತೆ, ಸ್ತ್ರೀಯರಿಂದ ಸುತ್ತುವರಿದ ಸುಗ್ರೀವನಿಗೆ ಲಕ್ಷ್ಮಣನು ನುಡಿದಳು: “ಒಳ್ಳೆಯ ವಂಶದಲ್ಲಿ ಹುಟ್ಟಿದವನೂ ಜಿತೇಂದ್ರಿಯನೂ ಸತ್ಯವಂತನೂ ಆದ ಪುರಷನು ಮಾಡಿದ ಉಪಕಾರವನ್ನು ಸ್ಮರಿಸಿಕೊಳ್ಳುತ್ತಾನೆ. ಅಂಥ ರಾಜನನ್ನು ಮಹಾತ್ಮನೆನ್ನುತ್ತಾರೆ. ಮಾಡಿದ ಉಪಕಾರವನ್ನು ಮರೆತು ಸ್ನೇಹಿತರೆದುರಿಗೆ ಸುಳ್ಳು ಪ್ರತಿಜ್ಞೆಯನ್ನು ಮಾಡುವವನಿಗಿಂತಲೂ ಘಾತುಕನು ಮತ್ತೊಬ್ಬನುಂಟೇ? ಸುಳ್ಳುನುಡಿ ನುಡಿಯುವುದು ಸಾವಿರ ಹಸುಗಳನ್ನು ಕೊಂದ ಪಾಪಕ್ಕೆ ಸಮನಾದುದು. ಮಿತ್ರರಿಂದ ಉಪಕಾರಹೊಂದಿ ಅವರ ಕಾರ್ಯವನ್ನು ನೆರವೇರಿಸಿ ಕೊಡದವನು ವಧೆಗೆ ಅರ್ಹನು. ಚಿನ್ನವನ್ನು ಕದ್ದ, ಗುರುಪತ್ನಿಯಲ್ಲಿ ಗಮನಮಾಡಿದ ಪಾಪಕ್ಕೆ ಯಾವ ಪ್ರಾಯಶ್ಚಿತ್ತವೂ ಇರದು. ರಾಮನಿಂದ ಉಪಕಾರ ಹೊಂದಿ ಸೀತಾನ್ವೇಷಣ ಕಾರ್ಯದಲ್ಲಿ ತೊಡಗದಿರುವ ನಿನಗಿಂತಲೂ ಕೃತಘ್ನನು ಮತ್ತೊಬ್ಬನುಂಟೆ? ಕಾಮಾಸಕ್ತನಾಗಿ ನೀನು ಸುಳ್ಳುಪ್ರತಿಜ್ಞೆಯನ್ನು ಮಾಡಬಹುದೇ? ರಾಮನ ಉಪಕಾರವನ್ನು ನೆನೆಯದಾದರೆ ನಿನಗೂ ವಾಲಿಯ ಗತಿಯೆ ಉಂಟಾಗುವುದೆಂದು ತಿಳಿ. ಆದರೆ ವಾಲಿಯ ಮಾರ್ಗವನ್ನು ಅನುಸರಿಸಬೇಡ. ವಜ್ರಾಯುಧಕ್ಕೆ ಸಮನಾದ ರಾಮಬಾಣಗಳು ಸಾಮಾನ್ಯವಲ್ಲ. ”

ಕೋಪದಿಂದ ಮಾತನಾಡುತ್ತಿದ್ದ ತೇಜಸ್ವಿಯಾದ ಲಕ್ಷ್ಮಣನನ್ನು ತಾರೆ ಮತ್ತೆ ಸಂತೈಸಿದಳು: “ಲಕ್ಷ್ಮಣ, ಶ್ರೀರಾಮನು ಮಾಡಿದ ಉಪಕಾರವನ್ನು ಮರೆಯುವಷ್ಟು ಸುಗ್ರೀವನು ಕೃತಘ್ನನಲ್ಲ. ಬಹುಕಾಲದಿಂದ ಇಂದ್ರಿಯಗಳನ್ನು ನಿಗ್ರಹಮಾಡಿದ ಇವನ ಕಾಮಾಸಕ್ತತೆಯನ್ನು ನೀನು ಮನ್ನಿಸಬೇಕು. ಸುಗ್ರೀವನು ರಾಮಕಾರ್ಯಕ್ಕಾಗಿ ಸಮಯ ಬಂದರೆ ತನ್ನನ್ನೂ, ರುಮೆಯನೂ, ಕೊನೆಗೆ ರಾಜ್ಯವನ್ನೂ ಬಿಡಲು ಸಿದ್ಧನಿದ್ದನೆ. ಸುಗ್ರೀವನ ಅಪ್ಪಣೆಯನ್ನು ನಿರೀಕ್ಷಿಸುತ್ತ ಈಗಾಗಲೆ ವಾನರ ವೀರರು ಸಿದ್ಧರಾಗಿದ್ದಾರೆ. ”

ತಾರೆಯ ಮೃದುಮಾತು ಲಕ್ಷ್ಮಣನ ಮನಸ್ಸನ್ನು ಕರಗಿಸಿತು; ಅವನ ಕೋಪವನ್ನೂ ಇಳಿಸಿತು. ಈ ವೇಳೆಗೆ ಲಕ್ಷ್ಮಣನ ವಿಷಯದಲ್ಲಿ ಸುಗ್ರೀವನ ಭಯವೂ ಬಿಟ್ಟುಹೋಯಿತು. ಅನಂತರ ಅವನನ್ನು ಒಲಿಸಿಕೊಳ್ಳಲು ಸುಗ್ರೀವನು ಈ ರೀತಿ ನುಡಿದನು: ಲಕ್ಷ್ಮಣ, ಕೈಬಿಟ್ಟಹೋದ ಈ ವಾನರ ರಾಜ್ಯ ನನಗೆ ಶ್ರೀರಾಮನ ದಯೆಯಿಂದ ದೊರಕಿತು. ಆತನು ಮಾಡಿರುವ ಉಪಕಾರಕ್ಕೆ ನಾನು ಏನುತಾನೆ ಪ್ರತ್ಯುಪಕಾರ ಮಾಡಲಿ? ಸೀತೆಯನ್ನು ಪಡೆಯಲು ಆತನಿಗೇ ಶಕ್ತಿಯುಂಟು. ಆದಕಾರನ ನನ್ನ ಸಹಾಯ ರಾಮನಿಗೆ ನಿಮಿತ್ತಮಾತ್ರವೆಂದು ತಿಳಿಯುತ್ತೇನೆ. ಶ್ರೀರಾಮನ ಆಜ್ಞೆಯನ್ನು ಹೂವಿನಂತೆ ತಲೆಯಲ್ಲಿ ತೊಟ್ಟು ಅವನನ್ನು ಹಿಂಬಾಲಿಸುತ್ತೇನೆ. ನನ್ನ ಮೇಲಿರುವ ಪ್ರೀತಿ ವಿಶ್ವಾಸಗಳಿಂದ ನನ್ನ ತಪ್ಪನ್ನು ಶ್ರೀರಾಮನು ಮನ್ನಿಸತಕ್ಕದ್ದು.” ಸುಗ್ರೀವನ ಮಾತು ಲಕ್ಷ್ಮಣನನ್ನು ಸಂತೋಷಗೊಳಿಸಿತು. “ವಾನರವೀರ, ನಿನ್ನ ಕುಲಕ್ಕೆ ತಕ್ಕ ಮಾತುಗಳನ್ನೇ ನೀನು ಆಡಿದೆ. ನಿನ್ನ ವಿಷಯದಲ್ಲಿ ಆಡಿದ ಕಠಿಣೋಕ್ತಿಗಳನ್ನು ಕ್ಷಮಿಸು” ಎಂದು ಲಕ್ಷ್ಮಣನು ಸುಗ್ರೀವನನ್ನು ಕೇಳಿಕೊಂಡನು.

ಅನಂತರ ಸುಗ್ರೀವನು ಹನುಮಂತನನ್ನು ಕರೆದು “ಪರ್ವತಗಳಲ್ಲಿ ವಾಸಮಾಡುವ, ಕಡಲಿನ ತೀರದಲ್ಲಿರುವ, ವೃಕ್ಷಗಳನ್ನು ಆಶ್ರಯಿಸಿರುವ ಎಲ್ಲ ಕಪಿಗಳನ್ನೂ ಬೇಗ ಬರಮಾಡು. ಈ ಮೊದಲೆ ಕಪಿಗಳನ್ನು ಕರೆತರಲು ದೂತರು ಹೋಗಿರುವರು. ಈಗ ಇನ್ನೂ ಕೆಲವರನ್ನು ಕಳುಹು. ನನ್ನ ಆಜ್ಞೆಯನ್ನು ಕೇಳಿದ ಹತ್ತು ದಿನಗಳಲಿ ಯಾರು ಇಲ್ಲಿಗೆ ಬರುವುದಿಲ್ಲವೊ ಅವರನ್ನು ಕೂಡಲೆ ಸಂಹರಿಸತಕ್ಕದ್ದು” ಎಂದು ಅಪ್ಪಣೆ ಮಾಡಿದನು.

ಸುಗ್ರೀವನ ಅಪ್ಪಣೆಯಂತೆ ಹನುಮಂತನು ಎಲ್ಲ ಸ್ಥಳಗಳಿಗೂ ವಾನರರನ್ನು ಕಳುಹಿಸಿಕೊಟ್ಟನು. ಅವರು ಬೆಟ್ಟ ಸಮುದ್ರ ಕಾಡುಗಳಲ್ಲಿ ಸಂಚರಿಸಿ ರಾಮಕಾರ್ಯಕ್ಕಾಗಿ ಬರಲು ಎಲ್ಲ ಕಪಿಗಳನ್ನೂ ಹುರಿದುಂಬಿಸಿದರು. ಯಮನಿಗೆ ಸಮಾನವಾದ ಸುಗ್ರೀವನ ಅಜ್ಞೆಯನ್ನು ಕೇಳಿ, ಹೆದರಿ, ತಂಡ ತಂಡವಾಗಿ ಕಪಿಗಳು ಬಂದರು. ಅಪಾರವಾದ ಕಪಿಸೇನೆಯನ್ನು ಕಂಡು, ಅವರು ತಂದೊಪ್ಪಿಸಿದ ಹಣ್ಣು ಗೆಡ್ಡೆಗೆಣಸುಗಳನ್ನು ಸ್ವೀಕರಿಸಿ ಸುಗ್ರೀವನು ಸಂತೋಷಗೊಂಡನು. ಉಚಿತವಾದ ಮಾತುಗಳನ್ನಾಡಿ ಸುಗ್ರೀವನು ಅವರನ್ನು ಬಿಡಾರಕ್ಕೆ ಕಳುಹಿಸಿದನು.

ಸುಗ್ರೀವನ ಸೇನೆಯನ್ನು ನೋಡಿ ಲಕ್ಷ್ಮಣನ ಕೋಪವಿಳಿದು, ಸಂತೋಷವುಕ್ಕಿತು. ಕಿಷ್ಕಿಂಧೆಯಿಂದ ಹೊರಟು, ರಾಮನಿಗೆ ಈ ಪ್ರಿಯ ವಾರ್ತೆಯನ್ನು ಬೇಗ ತಿಳಿಸಬೇಕೆಂದು ಲಕ್ಷ್ಮಣನು ಸುಗ್ರೀವನನ್ನು ಹುರಿದುಂಬಿಸಿದನು. ತನ್ನೊಡನಿದ್ದ ತಾರೆ ಮೊದಲಾದ ಸ್ತ್ರೀಯರನ್ನು ಅಂತಃಪುರಕ್ಕೆ ಕಳುಹಿಸಿಕೊಟ್ಟಮೇಲೆ, ರಾಮನ ಬಳಿಗೆ ಹೋಗಲು ಸುಗ್ರೀವನು ಲಕ್ಷ್ಮಣನೊಡನೆ ಪಲ್ಲಕ್ಕಿಯಲ್ಲಿ ಕುಳಿತು ಹೊರಟನು. ವಾನರ ದೂತರು ಸುಗ್ರೀವ ಲಕ್ಷ್ಮಣರಿಗೆ ಬೆಳ್ಗೊಡೆ ಹಿಡಿದರು; ಚಿನ್ನದ ಹಿಡಿಯ ಚಾಮರಗಳನ್ನು ಬೀಸಿದರು. ಶಂಖದುಂದುಭಿಗಳು ಮೊರೆಯುತ್ತಿರಲು ಶಸ್ತ್ರಾಸ್ತ್ರಗಳನ್ನು ಹಿಡಿದ ವೀರರಿಂದ ಸುತ್ತುವರಿದ ಸುಗ್ರೀವನು ಮಹಾವೈಭವದಿಂದ ಶ್ರೀರಾಮನ ಬಳಿಗೆ ಐತಂದನು.

* * *