ಕೋಟೆಯಲ್ಲಿ ಕಾಲಿಡಬೇಕೆಂದು ಹೆಜ್ಜೆಯೆತ್ತುವಷ್ಟರಲ್ಲಿ ಆಂಜನೇಯನ ಇದಿರಿಗೆ ಭಯಂಕರಳಾದ ರಾಕ್ಷಸಿಯೊಬ್ಬಳು ಕಾಣಿಸಿಕೊಂಡಳು.

ಭಾರತದ ದಕ್ಷಿಣ ಸಮುದ್ರ ತೀರದಿಂದ ಲಂಕಾದ್ವೀಪಕ್ಕೆ ಒಂದು ನೂರು ಯೋಜನೆ ದೂರವಿತ್ತು. ಹನುಮಂತನು ಅಷ್ಟು ದೀರ್ಘವಾದ ಅಂತರವನ್ನು ಹಾರಿಬಂದಿದ್ದರೂ ಆತನಿಗೆ ಬಳಲಿಕೆಯೇನೂ ತೋರಲಿಲ್ಲ. ಆದಷ್ಟು ಬೇಗ ತಾನು ಬಂದಿರುವ ಕಾರ್ಯವನ್ನು ಸಾಧಿಸಬೇಕೆಂಬುದಿಷ್ಟೇ ಆತನ ಆತುರ. ಆದ್ದರಿಂದ ಆತನು ಇದಿರಿಗೆ ಕಾಣುತ್ತಿದ್ದ ತ್ರಿಕೂಟ ಪರ್ವತದ ಶಿಖರದಲ್ಲಿದ್ದ ಲಂಕಾಪಟ್ಟಣವನ್ನು ಪ್ರವೇಶಿಸುವ ಪ್ರಯತ್ನದಲ್ಲಿ ತೊಡಗಿದನು. ಲಂಬಾಚಾಲಕ್ಕೂ ತ್ರಿಕೂಟ ಶಿಖರಕ್ಕೂ ಮಧ್ಯೆ ನಿಸರ್ಗಶೋಭೆ ಕಣ್ಣು ಕೋರೈಸುವಂತಿತ್ತು. ನೆಲವೆಲ್ಲವೂ ಹಸುರು ಹುಲ್ಲಿನಿಂದ ತುಂಬಿತ್ತು. ಅಲ್ಲಲ್ಲೆ ದೊಡ್ಡದೊಡ್ಡ ಕಲ್ಲುಬಂಡೆಗಳು, ಅವುಗಳ ಅಕ್ಕಪಕ್ಕಗಳಲ್ಲಿ ಗಗನ ಚುಂಬಿತವಾದ ವೃಕ್ಷಗಳು, ಹೂಗಿಡಗಳಿಂದ ತುಂಬಿದ ರಮ್ಯವಾದ ಉದ್ಯಾನಗಳು; ಮಧ್ಯೆಮಧ್ಯೆ ತಿಳಿನೀರಿನಿಂದ ತುಂಬಿದ ಕೊಳಗಳು. ಮಾರುತಿ ಇವುಗಳೆಲ್ಲವನ್ನೂ ನೋಡುತ್ತಾ ಆನಂದಪಡುತ್ತಾ ತ್ರಿಕೂಟಪರ್ವತವನ್ನು ಸಮೀಪಿಸಿದನು. ಪರ್ವತದ ಮೇಲ್ಭಾಗದಲ್ಲಿ, ಮೋಡದಿಂದ ತೂಗುಬಿಟ್ಟಿರುವಂತೆ ಕಾಣುತ್ತಿರುವ ಲಂಕಾಪಟ್ಟಣವು. ಸಂಜೆಯ ಹೊಂಬಿಸಿಲಲ್ಲಿ ಮಿರಿಮಿರಿ ಮಿಂಚುತ್ತಿತ್ತು. ಆ ಊರಿನ ಸುತ್ತಲೂ ಅಭೇದ್ಯವಾದ ಕೋಟೆ. ಆ ಕೋಟೆಯ ಗೋಡೆಯ ಮೇಲೆ ಶಸ್ತ್ರಸಜ್ಜಿತರಾದ ಯೋಧರು ಎಡೆಬಿಡದೆ ಕಾವಲು ತಿರುಗುತ್ತಿದ್ದಾರೆ. ಸಮುದ್ರ ಮಧ್ಯದಲ್ಲಿರುವ ಆ ದ್ವೀಪದಲ್ಲಿ, ಅಂತಹ ಅಭೇದ್ಯವಾದ ಕೋಟೆಯಲ್ಲಿ ಆ ಬಗೆಯಾದ ಕಾವಲಿರುವಾಗ ಶೂರನಾದ ರಾವಣನನ್ನು ಗೆಲ್ಲುವುದು ಸಾಧ್ಯವೆ? ಎನ್ನಿಸಿತು ಹನುಮಂತನಿಗೆ. ನೂರು ಯೋಜನ ವಿಸ್ತಾರವಾದ ಸಮುದ್ರವನ್ನು ಹಾರುವಂತಹ ಶೂರರು ಎಷ್ಟು ಜನಗಳಿದ್ದಾರೆ? ಹಾಗೆ ಹಾರಿಬಂದರೂ ಈ ಕೋಟೆಯನ್ನು ಭೇದಿಸಿಕೊಂಡು ಒಳನುಗ್ಗಿ ಶೂರನಾದ ರಾವಣನೊಡನೆ ಯುದ್ಧಮಾಡಬಲ್ಲವರಾರು? ಹನುಮಂತನು ಕ್ಷಣಮಾತ್ರ ಯೋಚನೆಯಲ್ಲಿ ಮುಳುಗಿದ್ದನು. ಆದರೆ ಮರುಕ್ಷಣದಲ್ಲೆ “ಅದೆಲ್ಲಾ ಆಲೋಚನೆ ಈಗೇಕೆ? ಮೊದಲು ಸೀತಾದೇವಿ ಬದುಕಿರುವಳೊ ಇಲ್ಲವೊ, ಬದುಕಿದ್ದರೆ ಎಲ್ಲಿರಬಹುದು – ಎಂಬುದನ್ನು ತಿಳಿದುಕೊಳ್ಳುತ್ತೇನೆ” ಎಂದುಕೊಂಡನು. ಸ್ವಸ್ವರೂಪದಿಂದ ಆತನು ಲಂಕಾಪಟ್ಟಣವನ್ನು ಪ್ರವೇಶಿಸುವುದು ಸಾಧ್ಯವಿರಲಿಲ್ಲ. ಏನಿದ್ದರೂ ಕಾವಲುಗಾರರನ್ನು ವಂಚಿಸಿ ಕೋಟೆಯನ್ನು ಪ್ರವೇಶಮಾಡಬೇಕು. ಅದಕ್ಕಾಗಿ ಆತನು ತನ್ನ ದೇಹವನ್ನು ಕುಗ್ಗಿಸಿಕೊಂಡನು. ಕೇವಲ ಒಂದು ಬೆಕ್ಕಿನಷ್ಟು ಗಾತ್ರವಾಯಿತು ಅವನ ದೇಹ. ಸೂರ್ಯನು ಮುಳುಗುವುದನ್ನು ಕಾಯುತ್ತಿದ್ದು ಕತ್ತಲಾದ ಮೇಲೆ ಕೋಟೆಯ ಸಮೀಪದಲ್ಲಿಯೆ ನಡೆಯುತ್ತ ಪ್ರವೇಶಕ್ಕೆ ಮಾರ್ಗವನ್ನು ಹುಡುಕುತ್ತಿದ್ದನು. ಹೀಗೆ ಹುಡುಕುತ್ತಿರಲು ಕೋಟೆಯ ಉತ್ತರದಿಕ್ಕಿಗೆ ಹೆಬ್ಬಾಗಿಲು ಕಾಣಿಸಿತು. ಚಿನ್ನದಿಂದ ಮಾಡಿದ್ದ ಆ ಬಾಗಿಲುಗಳನ್ನೂ ರತ್ನಖಚಿತವಾಗದ ಬಾಗಿಲುವಾಡಗಳನ್ನೂ ವಜ್ರ ವೈಡೂರ್ಯಗಳಿಂದ ಕೂಡಿದ ಮೆಟ್ಟಲುಗಳನ್ನೂ ನೋಡಿ ಆಶ್ಚರ್ಯಪಡುತ್ತಾ ಆತನು ಕೋಟೆಯೊಳಕ್ಕೆ ಪ್ರವೇಶಿಸಲೆಂದು ಹವಣಿಸುತ್ತಿದ್ದನು.

ಕೋಟೆಯಲ್ಲಿ ಕಾಲಿಡಬೇಕೆಂದು ಹೆಜ್ಜೆಯತ್ತುವಷ್ಟರಲ್ಲಿ ಆತನ ಇದಿರಿಗೆ ಭಯಂಕರಳಾದ ರಾಕ್ಷಸಿಯೊಬ್ಬಳು ಕಾಣಿಸಿಕೊಂಡಳು. ಸಿಡಿಲಿನಂತಹ ಗಡಸು ದನಿಯಲ್ಲಿ ಆ ಲಂಕಿಣಿ ಹನುಮಂತನನ್ನು ಗದರಿಸುತ್ತಾ “ಎಲೆ, ಕಾಡುಕಪಿ, ನೀನುಯಾರು? ಇಲ್ಲಿಗೆ ಏಕೆ ಬಂದೆ? ನಾನು ನಿನ್ನನ್ನು ಸಂಹರಿಸುವುದಕ್ಕೆ ಮುಂಚೆಯೇ ಈ ವಿಚಾರವನ್ನಷ್ಟು ಯಥಾರ್ಥವಾಗಿ ತಿಳಿಸಿಬಿಡು” ಎಂದಳು. ವೀರನಾದ ಮಾರುತಿ ಅವಳ ಮಾತುಗಳನ್ನು ಕೇಳಿ ನಗುತ್ತ “ಎಲೈ ವಿಕಾರಸ್ವರೂಪಳೆ, ನನ್ನ ವಿಚಾರವನ್ನು ಕೇಳುವ ಮೊದಲು ನೀನಾರೆಂಬುದನ್ನು ತಿಳಿಸು. ನನ್ನ ಪಾಡಿಗೆ ನಾನು ಪುರಪ್ರವೇಶ ಮಾಡುತ್ತಿರಲು ನನ್ನನ್ನು ನೀನೇಕೆ ತಡೆಯುತ್ತಿರುವೆ? ಅದನ್ನು ಕೇಳಿ ಆಮೇಲೆ ನನ್ನ ಸಮಾಚಾರವನ್ನು ತಿಳಿಸುತ್ತೇನೆ” ಎಂದನು. ಅವನ ಮಾತುಗಳಿಂದ ಲಂಕಿಣಿಗೆ ಕೋಪ ಕೆರಳಿತು. ಕ್ರೋಧದಿಂದ ಕೆಂಪಾದ ತನ್ನ ಕಣ್ಣುಗಳಿಂದ ಹನುಮಂತನನ್ನು ಸುಟ್ಟುಬಿಡುವಳೆಂಬಂತೆ ದುರುಗುಟ್ಟಿ ನೋಡುತ್ತಾ “ಎಲವೋ, ವಾನರಾಧಮ, ನಾನಾರೆಂಬುದನ್ನು ಕೇಳು. ನಾನು ರಾವಣೇಶ್ವರನ ಆಜ್ಞಾಧಾರಕಳು. ಈ ನಗರವನ್ನು ಸಂರಕ್ಷಿಸಲೆಂದು ಆತನು ನನ್ನನ್ನು ನೇಮಿಸಿರುವನು. ಈ ಪಟ್ಟಣಕ್ಕೆ ಅಧಿದೇವತೆಯಾದ ಲಂಕಾದೇವಿಯೆ ನಾನು. ನನ್ನನ್ನು ಗೆದ್ದು ಈ ಊರನ್ನು ಪ್ರವೇಶಿಸುವುದು ನಿನ್ನಂತಹ ಹುಲುಗೋಡಗಕ್ಕೆ ಆಗಹೋಗದ ಕೆಲಸ” ಎಂದಳು. ತನ್ನ ಇದಿರಿಗೆ ನಿಂತಿರುವವಳು ಸ್ವತಃ ಲಂಕಾಧಿದೇವತೆಯೆಂಬುದನ್ನು ಕೇಳಿದಾಗಲೂ ಹನುಮಂತನ ಧೈರ್ಯ ಕಲಕಲಿಲ್ಲ. ಆತನು ಆಕೆಯನ್ನು ಕುರಿತು “ದೇವಿ, ಸುಂದರವಾದ ಈ ಪಟ್ಟಣವನ್ನು ಕಣ್ತುಂಬ ನೋಡಬೇಕೆಂಬ ಆಸೆ ನನಗೆ. ಒಮ್ಮೆ ಊರನ್ನೆಲ್ಲಾ ಸುತ್ತಿಕೊಂಡು ಬರುತ್ತೇನೆ” ಎಂದನು. ಆದರೆ ಲಂಕಾದೇವಿ ಅದಕ್ಕೆ ಒಪ್ಪಲಿಲ್ಲ. ತನ್ನನ್ನು ಜಯಿಸದೆ ರಾವಣರಕ್ಷಿತವಾದ ಆ ಪುರವನ್ನು ಪ್ರವೇಶಿಸುವುದು ಅಸಾಧ್ಯವೆಂದು ಮತ್ತೆ ಆತನಿಗೆ ತಿಳಿಸಿದಳು. ಆದರೂ ಆತನು “ಎಲೆ ಭದ್ರೆ, ನೀನು ನನ್ನಲ್ಲಿ ಸಂಶಯಪಡಬೇಡ. ಒಮ್ಮೆ ಊರನ್ನೆಲ್ಲಾ ನೋಡಿದ ಬಳಿಕ ಬಂದ ಹಾದಿಯಲ್ಲೆ ಹಿಂದಿರುಗಿ ಹೋಗುತ್ತೇನೆ. ಅಷ್ಟು ಅವಕಾಶಕೊಟ್ಟರೆ ಸಾಕು” ಎಂದು ಕೇಳಿಕೊಂಡನು. ಆತನ ಮೃದುನುಡಿಗಳು ಲಂಕಾದೇವಿಯನ್ನು ಒಲಿಸಲಾರದೆ ಹೋದುವು. ಆಕೆ ಮತ್ತಷ್ಟು ಕ್ರುದ್ದಳಾಗಿ ವಿಕಾರವಾಗಿ ಕೂಗುತ್ತಾ ಮಾರುತಿಯ ತಲೆಯ ಮೇಲೆ ತನ್ನ ಮುಷ್ಟಿಯಿಂದ ಬಲವಾಗಿ ಪ್ರಹಾರಮಾಡಿದಳು. ಆ ಪೆಟ್ಟು ಬಿದ್ದೊಡನೆಯೆ ಆತನ ಸಮಾಧಾನ ಹಾರಿಹೋಯಿತು. ಎಡಗೈ ಮುಷ್ಟಿಯಿಂದ ಒಮ್ಮೆ ಲಂಕಾದೇವಿಯ ನೆತ್ತಿಯ ಮೇಲೆ ಗುದ್ದಿದನು. ಆ ಪೆಟ್ಟನ್ನು ತರಹರಿಸಲಾರದ ಆಕೆ ಜರ್ಝರಿತಶರೀರಳಾಗಿ ನೆಲದ ಮೇಲೆ ಬಿದ್ದಳು. ಆಕೆಯ ಕೆಚ್ಚೆಲ್ಲವೂ ಅಲ್ಲಿಗೆ ಅಡಗಿ ಹೋಯಿತು. ಕೋತಿಯಿಂದ ತಾನು ಸೋತದ್ದರಿಂದ ರಾವಣನ ಅಧೋಗತಿ ಆರಂಭವಾಗುವುದೆಂದು ಹಿಂದೆ ಬ್ರಹ್ಮನು ತನಗೆ ಹೇಳಿದ ಮಾತು ಈಗ ಆಕೆಗೆ ಜ್ಞಾಪಕಕ್ಕೆ ಬಂದಿತು. ಕೇವಲ ವಿನೀತಭಾವದಿಂದ ಅದನ್ನು ಹನುಮಂತನಿಗೆ ತಿಳಿಸಿ “ಎಲೈ, ವಾನರೋತ್ತಮ, ದುರಾತ್ಮನಾದ ರಾವಣನಿಗೂ ಆತನ ಸಕಲ ಪರಿವಾರಕ್ಕೂ ಮೃತ್ಯು ಹತ್ತಿರವಾಗುತ್ತಾ ಬಂದಿದೆ. ಇಗೋ ಯಥೇಚ್ಛವಾಗಿ ಊರಿನೊಳಕ್ಕೆ ಪ್ರವೇಶಮಾಡು. ನೀನು ಯಾವ ಕಾರ್ಯವನ್ನು ಮಾಡಬೇಕೆಂದೆಣಿಸಿರುವೆಯೋ, ಅದನ್ನು ಅಗತ್ಯವಾಗಿ ನಡಸು. ಯಾವ ಅಡಚಣೆಯೂ ಇಲ್ಲದೆ ಎಲ್ಲೆಡೆಗಳಲ್ಲೂ ಸಂಚರಿಸಿ ಪತಿವ್ರತಾಶಿರೋಮಣಿಯಾದ ಜನಕ ನಂದಿನಿಯನ್ನು ಹುಡುಕುವವನಾಗು” ಎಂದಳು. ವಿಘ್ನನಿವಾರಣೆಯಿಂದ ಉತ್ಸಾಹಗೊಂಡ ಹನುಮಂತನು ಕೋಟೆಯ ಗೋಡೆಯನ್ನು ಹಾರಿ ಲಂಕಾಪಟ್ಟಣದ ಒಳಕ್ಕಿಳಿದನು.