ಪಕ್ಷಿರಾಜನಾದ ಸಂಪಾತಿ ಹಾರಿಹೋದಮೇಲೆ, ಸಿಂಹವಿಕ್ರಮಿಗಳಾದ ವಾನರರು ಸಂತೋಷದಿಂದ ಕೋಲಾಹಲ ಧ್ವನಿಮಾಡಿದರು. ಆ ಬಳಿಕ ಈ ಲೋಕಕ್ಕೆಲ್ಲ ಕನ್ನಡಿಯಂತಿದ್ದ ದಕ್ಷಿಣಸಮುದ್ರದ ಉತ್ತರ ತೀರಕ್ಕೆ ಬಂದು ಅಲ್ಲಿ ಬೀಡುಬಿಟ್ಟರು. ಪರ್ವತಕ್ಕೆ ಸಮನಾದ ಅಲೆಗಳಿಂದ ಕೂಡಿ, ದೊಡ್ಡ ಜಂತುಗಳನ್ನೊಳಗೊಂಡಿದ್ದ ಆ ಸಾಗರವನ್ನು ಕಂಡು ಮುಂದೇನು ಮಾಡಬೇಕೆಂದು ಅವರು ಯೋಚಿಸಿದರು. ಸಾಗರದ ವಿಸ್ತಾರವನ್ನು ಕಂಡು ವಾನರ ವೀರರ ಮನಸ್ಸು ಕುಗ್ಗಿತು; ಚಿಂತೆಯಿಂದ ಮುಖ ಬಾಡಿತು. ಬುದ್ಧಿವಂತನಾದ ಅಂಗದನು ಆ ವಾನರವೀರರನ್ನು ಸಂತೈಸಿ ಈ ರೀತಿ ನುಡಿದನು: “ವೀರರೇ, ಈಗ ನೀವು ಸಂಕಟಕ್ಕೆ ಎಡೆಕೊಡಕೂಡದು ಕೋಪಗೊಂಡ ಹಾವು ಎಳೆಯ ಮಗುವನ್ನು ಕಚ್ಚುವಂತೆ, ಚಿಂತೆ ಮನುಷ್ಯನನ್ನು ನಾಶಮಾಡುತ್ತದೆ. ಕಷ್ಟಕಾಲದಲ್ಲಿ ಧೈರ್ಯವೊಂದಿದ್ದರೆ ನಾವು ಎಂಥ ಕಾರ್ಯವನ್ನಾದರೂ ಸಾಧಿಸಬಹುದು.”

ಸಮುದ್ರವನ್ನು ದಾಟುವ ಉಪಾಯವನ್ನು ಯೋಚಿಸುತ್ತಿರುವಾಗಲೆ ರಾತ್ರಿ ಕಳೆದು ಬೆಳಗಾಯಿತು. ಆಗ ವಾನರರೆಲ್ಲರೂ ಅಂಗದನನ್ನು ಸುತ್ತಿ ಮುತ್ತಿ ಮುಂದಿನ ಕಾರ್ಯವನ್ನು ಆಲೋಚಿಸಿದರು. ವೃದ್ಧರಾದ ವಾನರ ವೀರರನ್ನು ನೋಡಿ ಅಂಗದನು “ವಾನರವೀರರೇ, ನೂರುಯೋಜನ ವಿಸ್ತೀರ್ಣವುಳ್ಳ ಈ ಕಡಲನ್ನು ದಾಟಿ, ಸೀತೆಯ ವೃತ್ತಾಂತವನ್ನು ತಿಳಿದು ಬಂದು, ನಮ್ಮನ್ನು ಈ ದುಃಖದಿಂದ ದಾಟಿಸುವ ಶಕ್ತಿ ನಿಮ್ಮಲ್ಲಿ ಯಾಗಿಗುಂಟು ? ಯಾರ ದಯೆಯಿಂದ ನಾವು ಮನೆಯನ್ನು ಸೇರಿ ಹೆಂಡತಿ ಮಕ್ಕಳನ್ನು ನೋಡಿ ಸುಖದಿಂದ ಇರಬಹುದು? ಶ್ರೀರಾಮಸುಗ್ರೀವರ ಅನುಗ್ರಹಕ್ಕೆ ನಮ್ಮನ್ನು ಪಾತ್ರರನ್ನಾಗಿ ಮಾಡುವ ಸಮರ್ಥನು ನಿಮ್ಮಲ್ಲಿ ಯಾವನಿದ್ದಾನೆ? ನಿಮ್ಮಲ್ಲಿ ಯಾರಿಗಾದರೂ ಆ ಶಕ್ತಿಯಿದ್ದರೆ ಆ ಮಹಾತ್ಮನು ಮುಂದೆ ಬಂದು ನಮಗೆ ಅಭಯ ಕೊಡಲಿ” ಎಂದನು.

ಅಂಗದನ ಮಾತಿಗೆ ಯಾರೊಬ್ಬರೂ ಪಡಿನುಡಿಯಲಿಲ್ಲ. ಅಲೆಯಡಗಿದ ಕಡಲಂತೆ ವಾನರ ಸೇನೆ ಸುಮ್ಮನೆ ನಿಂತುಬಿಟ್ಟಿತು. ಆಗ ಅಂಗದದನು ಮತ್ತೆ ವಾನರವೀರರ ಸಮುದ್ರಲಂಘನ ಶಕ್ತಿಯನ್ನು ತಿಳಿಸುವಂತೆ ಬೇಡಿಕೊಂಡನು.

ಅಂಗದನ ಮಾತನ್ನು ಕೇಳಿ ವಾನರವೀರರು ತಮ್ಮ ಸಮುದ್ರಲಂಘನ ಶಕ್ತಿಯನ್ನು ಹೇಳಿಕೊಂಡರು. ಗಜನು ಹತ್ತು ಯೋಜನ, ಗವಾಕ್ಷನು ಇಪ್ಪತ್ತು, ಗವಯನು ಮೂವತ್ತು, ಶರಭನು ನಾಲ್‌ವತ್ತು, ಗಂಧಮಾದನನು ಐವತ್ತು, ಮೈಂದನು ಅರವತ್ತು, ದ್ವಿವಿದನು ಎಪ್ಪತ್ತು, ಸುಷೇಣನು ಎಂಬತ್ತು ಯೋಜನ ದೂರ ಹಾರಬಲ್ಲೆವೆಂದು ತಮ್ಮ ತಮ್ಮ ಶಕ್ತಿಯನ್ನು ಹೇಳಿಕೊಂಡರು. ಮುದುಕನಾದ ತನಗೆ ತೊಂಬತ್ತು ಯೋಜನ ದೂರ ಹಾರುವ ಶಕ್ತಿ ಮಾತ್ರ ಉಂಟೆಂದು ಜಾಂಬವನು ನುಡಿದನು. ‘ನೂರು ಯೋಜನ ವಿಸ್ತೀರ್ಣವುಳ್ಳ ಸಮುದ್ರವನ್ನು ದಾಟುವ ಶಕ್ತಿ ನನಗುಂಟು. ಆದರೆ ಹಿಂತಿರುಗಿ ಬರುವ ಸಾಮರ್ಥ್ಯ ನನಗುಂಟೊ ಇಲ್ಲವೊ ಎಂಬುದನ್ನು ಮಾತ್ರ ಹೇಳಲಾರೆ’ ಎಂದು ಅಂಗದನು ಹೇಳಿದನು. ಅಂಗದನಿಗೆ ಎಷ್ಟೇ ಸಾಮರ್ಥ್ಯವಿದ್ದರೂ, ಸ್ವಾಮಿಯಾದ ಅವನಿಂದ ಈ ಕೆಲಸಮಾಡಿಸಲು ಅವರು ಒಪ್ಪಲಿಲ್ಲ.

ವಾನರರು ಕಡಲನ್ನು ಹಾರುವ ವಿಷಯವನ್ನು ಯೋಚಿಸುತ್ತಿರುವಾಗ ಹನುಮಂತನು ಸಮುದ್ರದ ತೀರದಲ್ಲಿ ಒಂಟಿಯಾಗಿ ಕುಳಿತಿದ್ದನು. ಪರಾಕ್ರಮದಲ್ಲಿ, ಕಡಲನ್ನು ಹಾರುವುದರಲ್ಲಿ ಅವನನ್ನು ಮೀರಿಸಿದವರು ಇನ್ನೊಬ್ಬರಿರಲಿಲ್ಲ. ಅವನಿಂದಲೇ ಈ ಕೆಲಸ ನಡೆಯಬಹುದು ಎಂದೆಣಿಸಿ ಜಾಂಬವನು ಅವನ ಬಳಿಗೆ ಬಂದು ಅವನನ್ನು ಹುರಿದುಂಬಿಸಿದನು: “ವೀರನೆ, ಒಂಟಿಯಾಗಿ ಕುಳಿತು ನೀನೇಕೆ ಮಾತನಾಡದಿರುವೆ? ಭುಜಬಲದಲ್ಲಿ ನೀನು ರಾಮಲಕ್ಷ್ಮಣರಿಗೂ ಸುಗ್ರೀವನಿಗೂ ಸರಿಯೆನಿಸಿರುವೆ. ನಿನ್ನ ತೋಳ್‌ಬಲ ಗರುಡವೇಗಕ್ಕೇನೂ ಕಡಮೆಯಾದುದಲ್ಲ. ಬುದ್ಧಿ ತೇಜಸ್ಸು ಶಕ್ತಿಗಳಲ್ಲಿ ಎಲ್ಲರನ್ನೂ ಮೀರಿಸಿರುವ ನೀನು ನಿನ್ನ ಬಲವನ್ನೇಕೆ ತಿಳಿಯದಿರುವೆ? ವಾಯುವೇದನ ದಯೆಯಿಂದ ಅಂಜನಾದೇವಿಯಲ್ಲಿ ಜನಿಸಿದವನು ನೀನಲ್ಲವೆ? ಬುದ್ಧಿ, ಪರಾಕ್ರಮ, ತೇಜಸ್ಸು ಮತ್ತು ಲಂಘನಸಾಮರ್ಥ್ಯ ಇವುಗಳಲ್ಲಿ ತನಗೆ ಸಮನಾದ ಮಗನು ಹುಟ್ಟುವನೆಂದು ನಿನ್ನ ತಂದೆಯಾದ ವಾಯುದೇವನು ನಿನ್ನ ತಾಯಿಗೆ ವರ ಕೊಟ್ಟಿದ್ದನು. ಹುಟ್ಟಿದಾಗಲೆ, ಸೂರ್ಯನನ್ನೆ ಹಣ್ಣೆಂದು ಭ್ರಮಿಸಿ ತಿನ್ನಲು ಹೋದ ವೀರನಲ್ಲವೆ ನೀನು? ಇಂದ್ರನು ವಜ್ರಾಯುಧದಿಂದ ನಿನ್ನ ಎಡಕೆನ್ನೆಯನ್ನು ಹೊಡೆಯಲು ಕೋಪಗೊಂಡ ನಿನ್ನ ತಂದೆ ಬೀಸುವ ತನ್ನ ಕರ್ತವ್ಯವನ್ನೆ ನಿಲ್ಲಿಸಿಬಿಟ್ಟನು. ಬಹುಕಷ್ಟಕ್ಕೆ ಈಡಾದ ಲೋಕಪಾಲಕರು ನಿನ್ನ ತಂದೆಯನ್ನು ಬಹಳವಾಗಿ ಬೇಡಿಕೊಂಡು ಒಲಿಸಿಕೊಳ್ಳಬೇಕಾಯಿತು. ಆಗ ಬ್ರಹ್ಮನು ಶಸ್ತ್ರಗಳಿಂದ ಸಾವಿಲ್ಲವೆಂದು ನಿನಗೆ ವರ ಕೊಟ್ಟನು. ಸಂತೋಷಗೊಂಡ ದೇವೇಂದ್ರನು ನಿನಗೆ ಇಚ್ಛಾಮರಣವುಂಟಾಗಲೆಂದು ವರದಾನ ಮಾಡಿದನು. ಪರಾಕ್ರಮದಲ್ಲಿ ಹಾರುವುದರಲ್ಲಿ ನೀನು ವಾಯುದೇವನಿಗೆ ಸಮಾನನೆನಿಸಿರುವೆ. ಈಗ ನೀನು ನಿನ್ನ ಪರಾಕ್ರಮದಿಂದ ನಮ್ಮನ್ನು ಉಣಿಸಬೇಕು. ವಾನರ ಸೇನೆ ನಿನ್ನ ಶಕ್ತಿ ಸಾಮರ್ಥ್ಯಗಳನ್ನು ನೋಡಬಯಸುತ್ತದೆ. ಆದ್ದರಿಂದ ವಿಸ್ತಾರವಾದ ಈ ಕಡಲನ್ನು ನೀನು ದಾಟು. ಈ ನಿನ್ನ ಕಾರ್ಯದಿಂದ ಎಲ್ಲ ಜೀವಿಗಳಿಗೂ ಮಂಗಳವುಂಟಾಗುತ್ತದೆ. ಈ ವಾನರರು ದೀನರಾಗಿದ್ದಾರೆ. ತ್ರಿವಿಕ್ರಮನು ಮೂರು ಹೆಜ್ಜೆಗಳಿಂದ ಈ ಲೋಕವನ್ನು ಅಳೆದಂತೆ ಈ ಮಹಾ ವಿಸ್ತೀರ್ಣದ ಕಡಲನ್ನು ದಾಟಿ ನಮ್ಮನ್ನು ಆನಂದಗೊಳಿಸು. ”

ಜಾಂಬವನ ಪ್ರೋತ್ಸಾಹವಚನಗಳಿಂದ ಹುರುಪುಗೊಂಡ ಹನುಮಂತನು ನೂರುಯೋಜನದ ಕಡಲನ್ನು ದಾಟಲು ತಕ್ಕಂತೆ ತನ್ನ ದೇಹವನ್ನು ಬೆಳೆಸಿಕೊಂಡನು. ಬೆಳೆಯುತ್ತಿರುವ ಹನುಂತನ ದೇಹವನ್ನು ನೋಡಿ ವಾನರರು ಶೋಕವನ್ನು ಬಿಟ್ಟುಹರ್ಷದಿಂದ ಸಿಂಹನಾದ ಮಾಡಿದರು. ಅಷ್ಟೇ ಅಲ್ಲದೆ ಹನಮಂತನ ಪರಾಕ್ರಮವನ್ನು ಹೊಗಳಿದರು. ಅವರು ಹೊಗಳಿದಷ್ಟೂ ಹನುಮಂತನು ವೃದ್ಧಿಹೊಂದಿದನು. ಹರ್ಷದಿಂದ ಅವನು ಬಾಲವನ್ನು ಅಲ್ಲಾಡಿಸಿದಷ್ಟೂ ಅವನ ಬಲ ಅಧಿಕವಾಯಿತು. ಆಗ ತೇಜಸ್ವಿಯಾದ ಹನುಮಂತನ ಮುಖಮಂಡಲ ಹೊಗೆಯಿಲ್ಲದ ಅಗ್ನಿಯಂತೆ ಪ್ರಕಾಶಿಸುತ್ತಿತ್ತು.

ಆಗ ಹನುಮಂತನು ಕಪಿಗಳ ನಡುವೆ ಎದ್ದು, ಹಿರಿಯರಿಗೆ ನಮಸ್ಕರಿಸಿ ಈ ರೀತಿ ನುಡಿದನು: “ವೀರವಾನರರೇ, ವಾಯುಪುತ್ರನಾದ ನನಗೆ ಹಾರುವುದರಲ್ಲಿ ಸಮಾನರು ಮತ್ತೊಬ್ಬರಿಲ್ಲ. ಆಕಾಶವನ್ನೇ ಮುತ್ತಿಡುತ್ತಿರುವ ಮೇರುಪರ್ವತವನ್ನು ಸಾವಿರಬಾರಿ ಸುತ್ತಿಬರುವ ಉತ್ಸಾಹ ನನಗುಂಟು. ಕಡಲನ್ನು ಶೋಷಿಸುವ, ಭುಮಿಯನ್ನು ಸೀಳುವ, ಪರ್ವತಗಳನ್ನು ಪುಡಿಗುಟ್ಟುವ ಶಕ್ತಿ ನನಗುಂಟು. ಹೀಗಿರುವಲ್ಲಿ ಈ ಸಾಗರವನ್ನು ದಾಟುವುದೊಂದು ಕಷ್ಟವೆ? ಆಕಾಶದಲ್ಲಿ ಹಾರಿ ಈ ಸಾಗರದ ದಕ್ಷಿಣದ ತೀರದಲ್ಲಿ ನಿರಾಯಾಸವಾಗಿ ಇಳಿಯುವ ನನ್ನನ್ನು ನೀವು ನೋಡುವಿರಿ. ಲಂಕೆಗೆ ಹೋಗಿ ಸೀತೆಯನ್ನು ಕಂಡುಬರುತ್ತೇನೆ. ನೀವು ಸಂತೋಷದಿಂದಿರಿ. ದೇವೇಂದ್ರನಿಂದ ಅಮೃತಕಲಶವನ್ನು ಹರಣಮಾಡುವ ಶಕ್ತಿಯುಳ್ಳ ನನಗೆ ಇದೊಂದು ಮಹಾಕಾರ್ಯವಲ್ಲ. ”

ಹನುಮಂತನ ವೀರವಾಣಿಯನ್ನು ಕೇಳಿ ಜಾಂಬವಂತನು “ಆಂಜನೇಯ, ನಿನ್ನಿಂದ ನಮ್ಮ ಶೋಕ ಕೊನೆಗೊಂಡಿತು. ನಿನ್ನ ಶ್ರೇಯಸ್ಸಿನಲ್ಲಿ ಆಸಕ್ತರಾದ ನಾವು ನಿನಗೆ ಮಂಗಳವನ್ನು ಕೋರುತ್ತೇವೆ. ಋಷಿಗಳ ಅನುಗ್ರಹದಿಂದ, ವೃದ್ಧ ವಾನರರ ಆಶೀರ್ವಾದದಿಂದ, ಗುರುಗಳ ಪ್ರಸಾದದಿಂದ ಈ ದೊಡ್ಡ ಸಾಗರವನ್ನು ದಾಟು. ನಿನ್ನ ಬರುವಿಕೆಯನ್ನೆ ಇದಿರು ನೋಡುತ್ತ ನಾವೆಲ್ಲರೂ ಒಂದೇ ಕಾಲಿನಲ್ಲಿ ನಿಂತು ನಿನ್ನನ್ನು ನಿರೀಕ್ಷಿಸುತ್ತೇವೆ. ವಾನರರ ಪ್ರಾಣಗಳೆಲ್ಲ ನಿನ್ನನ್ನೇ ಆಶ್ರಯಿಸಿವೆ” ಎಂದು ಸಂತೋಷದಿಂದ ನುಡಿದನು.

ಹಿರಿಯರ ಹರಕೆಯನ್ನು ಹೊತ್ತು ಹನುಮಂತನು, ಭೂಮಿ ತನ್ನ ವೇಗವನ್ನು ಧರಿಸಲಾರದೆಂದು ಮಹೇಂದ್ರ ಪರ್ವತದ ಶಿಖರಕ್ಕೆ ಏರಿದನು. ಹೂಬಳ್ಳಿಗಳಿಂದ ತುಂಬಿ, ಹರಿಯುವ ಝರಿಗಳಿಂದಲೂ ಸಿಂಹ ಶಾರ್ದೂಲಗಳಿಂದಲೂ ಕೂಡಿದ ಆ ಪರ್ವತದ ಮೇಲೆ ಮಹಾಬಲಶಾಲಿಯಾದ ಹನುಮಂತನು ತಾನೇತಾನಾಗಿ ಸಂಚರಿಸಿದನು. ಕಪಿವೀರನ ಹೊಡೆತಕ್ಕೆ ಸಿಕ್ಕ ಆ ಪರ್ವತ ಸಿಂಹದಿಂದ ಹೊಡೆಯಲ್ಪಟ್ಟ ಆನೆಯಂತೆ ಶೋಭಿಸುತ್ತಿತ್ತು. ಹನುಮಂತನ ಕಾಲಿನ ಹೊಡೆತಕ್ಕೆ ಬಂಡೆಗಳು ಜಾರಿದುವು. ಬೆಟ್ಟದಲ್ಲಿದ್ದ ನೀರು ಜಿನುಗಿ ಝರಿಗಳಾಗಿ ಹರಿಯಲಾರಂಭಿಸಿತು. ಪಕ್ಷಿಗಳು ಹಿಂಡು ಹಿಂಡಾಗಿ ಹಾರಿಹೋದುವು. ಬಿಲದಲ್ಲಿ ಸರ್ಪಗಳು ನಿಟ್ಟುಸಿರು ಬಿಡುತ್ತ ಅರ್ಧಮರ್ಧವಾಗಿ ಹೆಡೆತೆರೆದು ಹೊರತೆ ಬಂದು ಪರ್ವತದ ಧ್ವಜಗಳಂತೆ ಕಂಗೊಳಿಸುತ್ತಿದ್ದುವು. ಮಹರ್ಷಿಗಳು ಭ್ರಾಂತರಾಗಿ ಆಶ್ರಮಗಳನ್ನು ಬಿಟ್ಟು ಹೋಗಲು, ಸಂಗಡಿಗರಿಲ್ಲದೆ ಕಾಡಿನಲ್ಲಿ ದುಃಖಿಸುವ ಪ್ರಯಾಣಿಕನಂತೆ ಪರ್ವತವು ಕಾಣಿಸಿತು. ಹೀಗೆ ಸಮುದ್ರವನ್ನೇ ನೆಗೆದು ದಾಟುವ ಮನಸ್ಸು ಮಾಡಿ ಪರಂತಪನಾದ ಹನುಂತನು ಪರ್ವತದ ತುದಿಯಲ್ಲಿ ನಿಂತು, ಮನಸ್ಸಿನಿಂದಲೆ ಲಂಕೆಯನ್ನು ಸೇರಿದಂತಿದ್ದನು.

* * *