ಶತ್ರುವಿನ ಹೆಡದಲೆ ಮೆಟ್ಟುವಂತೆ ವೀರಮಾರುತಿ ಲಂಕೆಯ ನೆಲದ ಮೇಲೆ ಎಡಗಾಲಿಟ್ಟು ಪುರವನ್ನು ಪ್ರವೇಶಿಸಿದನು. ಭಯಂಕರರಾದ ರಾಕ್ಷಸರು ಕಾವಲು ಕಾಯುತ್ತಿದ್ದ ರಾಜಮಾರ್ಗವನ್ನು ಅನುಸರಿಸಿಯೇ ಆತನು ನಡೆದನು. ಕಾಲಿಟ್ಟರೆ ಎಲ್ಲಿ ಮಾಸುವುದೋ ಎನ್ನುವಂತಿದ್ದ ಆ ರಾಜಮಾರ್ಗದ ಇಕ್ಕೆಲಗಳಲ್ಲಿಯೂ ಗಗನಚುಂಬಿತಗಳಾದ ಉಪ್ಪರಿಗೆಯ ಮನೆಗಳಿದ್ದುವು. ಜಗತ್ತಿನ ಐಶ್ವರ್ಯವೆಲ್ಲವೂ ಅಲ್ಲಿಯೇ ಬಂದು ನೆಲಸಿರುವಂತೆ ನವರತ್ನಗಳಿಂದ ಅಲಂಕೃತವಾಗಿರುವ ಆ ಸೌಧಸೌಧದಿಂದಲೂ, ವಾದ್ಯಧ್ವನಿ ಹೊರಹೊಮ್ಮುತ್ತಿತ್ತು. ಎಲ್ಲಿ ನೋಡಿದರೂ ನಗುವಿನ ತರಂಗಗಳನ್ನೆಬ್ಬಿಸುತ್ತಿರುವ ಹೆಣ್ಣು ಗಂಡುಗಳು. ಅಪ್ಸರೆಯರ ಕೋಮಲ ಕಂಠವನ್ನು ನಿಂದಿಸುವ ಕೋಕಿಲಗಾನದೊಡನೆ ಅತ್ತಿತ್ತ ಸಂಚರಿಸುತ್ತಿರುವ ನವಯುವತಿಯರ ಕಾಂಚೀ ನಿನಾದವೂ ಕಾಲಂದುಗೆಗಳ ಝಣಝಣತ್ಕಾರವೂ ಸೇರಿ ಮಧುರವಾದ ಸ್ವರಮೇಳನವೊಂದು ಕೇಳಿಬರುತ್ತಿತ್ತು. ಹನುಮಂತನು ಲಂಕೆಯ ಸೌಂದರ್ಯವನ್ನೂ ಜನರ ರಸಿಕತೆಯನೂ ಕಂಡು ಮೆಚ್ಚುತ್ತಾ ಮುಂದೆ ಹೊರಟನು. ಕೆಲವು ಮನೆಗಳಲ್ಲಿ ವೇದಘೋಷ ಕೇಳಿಬರುತ್ತಿದೆ. ಕೆಲವು ಮನೆಗಳಲ್ಲಿ ರಾಜಾಶೀರ್ವಾದ ಕೇಳಿಬರುತ್ತಿದೆ. ರಾಜಮಾರ್ಗವನ್ನು ಆವರಿಸಿ ನಿಂತಿರುವ ರಾವಣನ ಮೂಲಬಲ ಒಂದು ಕಡೆ, ಅದರ ಮಧ್ಯದಲ್ಲಿ ಕಾರ್ಯ ಗೌರವದಿಂದ ಓಡಾಡುತ್ತಿರುವ ಅನೇಕ ರಾಜದೂತರು. ಅವರಲ್ಲಿ ಕೆಲವರಿಗೆ ಒಂದೇ ಕಣ್ಣು; ಕೆಲವರಿಗೆ ಒಂದೇ ಕಿವಿ; ಕೆಲವರು ಬೃಹದಾಕಾರಿಗಳು; ಮತ್ತೆ ಕೆಲವರು ಕೇವಲ ಕುಳ್ಳರು; ಪ್ರತಿಯೊಬ್ಬರ ಕೈಯಲ್ಲಿಯೂ ಒಂದೊಂದು ಬಗೆಯಾದ ಭಯಂಕರವಾದ ಆಯುಧ – ಇವುಗಳನ್ನೆಲ್ಲಾ ನೋಡುತ್ತಾ ಆಂಜನೇಯನು ರಾಜಬೀದಿಯನ್ನು ಹಿಡಿದು ಮುಂದುವರಿಯುತ್ತಿರಲು ರಾಕ್ಷಸೇಶ್ವರನಾದ ರಾವಣನ ಅರಮನೆ ಸಿಕ್ಕಿತು. ಅರಮನೆಯ ಸುತ್ತಲೂ ದೊಡ್ಡ ಪ್ರಾಕಾರ; ಅಲ್ಲಿ ಎಲ್ಲಿ ನೋಡಿದರೂ ರಥಗಳೂ ವಾಹನಗಳೂ ವಿಮಾನಗಳೂ ಆನೆಕುದುರೆಗಳೂ ಕಿಕ್ಕಿರಿದು ತುಂಬಿದ್ದವು. ಅದರ ಹೊರಬಾಗಿಲು ಬಂಗಾರದಿಂದ ನಿರ್ಮಿತವಾದುದು. ಬಹುಬಲಾಢ್ಯರಾದ ಸಾವಿರಾರು ಮಂದಿ ರಾಕ್ಷಸರು ಆ ಬಾಗಿಲ ಬಳಿ ಬಹು ಎಚ್ಚರಿಕೆಯಿಂದ ಕಾವಲ ಕೆಲಸ ನಡೆಸುತ್ತಿದ್ದರು. ಹನುಮಂತನು ಆ ಪ್ರಾಕಾರದೊಳಗೆ ಪ್ರವೇಶಿಸಿದನು.

ಧೀಮಂತನಾದ ಹನುಮಂತನು ರಾವಣನ ಅರಮನೆಯ ಪ್ರಾಕಾರವನ್ನು ಪ್ರವೇಶಿಸುವ ಹೊತ್ತಿಗೆ ಮಧ್ಯರಾತ್ರಿಯ ಸಮಯವಾಗಿತ್ತು. ಆ ಹೊತ್ತಿಗೆ ಸರಿಯಾಗಿ ಚಂದ್ರೋದಯವಾಯಿತು. ತುರುಮಂದೆಯ ಮಧ್ಯದಲ್ಲಿರುವ ಕೊಬ್ಬಿದ ಗೂಳಿಯಂತೆ ನಕ್ಷತ್ರಮಧ್ಯದಲ್ಲಿ ಹೊಳೆಯುತ್ತಿರುವ ಚಂದ್ರನು ನಾಲ್ಕು ದಿಕ್ಕುಗಳಲ್ಲಿಯೂ ತನ್ನ ತಂಪಾದ ಕಿರಣಗಳನ್ನು ಎರಚಹೊರಟನು. ಸರೋವರದ ಮಧ್ಯದಲ್ಲಿನ ಕಮಲದಂತೆ ಗಗನಮಧ್ಯದಲ್ಲಿ ಬೆಳಗುತ್ತಿದ್ದ ಆ ಚಂದ್ರನು ಹನುಮಂತನ ಕಣ್ಣಿಗೆ ರಜತಪಂಜರದಲ್ಲಿ ರಾರಾಜಿಸುವ ರಾಜಹಂಸದಂತೆಯೂ ಮಂದರ ಪರ್ವತದ ಕಂದರ ಪ್ರಾಂತದಲ್ಲಿ ನಿಂತಿರುವ ಸಿಂಹದಂತೆಯೂ ಮದಗಜದ ಮೇಲೆ ಕುಳಿತಿರುವ ಮಾವಟಿಗನಂತೆಯೂ ಭಾಸವಾದನು. ಸಿಂಹಾಸನವನ್ನೇರಿದ ರಾಜನಂತೆ ಉಲ್ಲಾಸವನ್ನು ಎಲ್ಲೆಡೆಯಲ್ಲಿಯೂ ಬೀರುತ್ತಿರುವ ಚಂದ್ರನನ್ನು ಕಾಣುತ್ತಲೇ ಕತ್ತಲೆ ಎತ್ತಲೋ ಹಾರಿಹೋಯಿತು. ನಾಯಿಕಾನಾಯಕರ ಪ್ರಣಯಕೋಪಗಳು ತೊಲಗಿ ಅವರು ಅನ್ಯೋನ್ಯಾಸಕ್ತರಾದರು. ಪಟ್ಟಣದ ನಾಲ್ಕು ದಿಕ್ಕುಗಳಿಂದಲೂ ವೀಣಾ, ವೇಣು ಮೊದಲಾದ ತಂತ್ರೀವಾದ್ಯಗಳು ಕಿವಿಗಿಂಪಾದ ಇಂಚರವನ್ನು ಹೊರಚೆಲ್ಲತೊಡಗಿದುವು. ಪತಿವ್ರತೆಯರಾದ ಸ್ತ್ರೀಯರು ತಮ್ಮ ಪತಿಗಳ ತೋಳತಲ್ಪದಲ್ಲಿ ಸುಖನಿದ್ರಾಸಕ್ತರಾದರು. ರಾತ್ರಿಂಚರರಾದ ರಾಕ್ಷಸರು ತಮ್ಮ ಕ್ರೂರಕೃತ್ಯಗಳಿಗಾಗಿ ವಿಹರಿಸಲು ಮನೆಯಿಂದ ಹೊರಹೊರಟರು. ಒಂದು ಕಡೆ ಹಾಸ್ಯಪರಿಹಾಸ್ಯಗಳಲ್ಲಿ ತೊಡಗಿರುವ ಹೆಣ್ಣುಗಳು; ಮತ್ತೊಂದೆಡೆ ಪರಸ್ಪರ ಆಲಿಂಗನದಲ್ಲಿ ಬಾಹ್ಯ ಜಗತ್ತನ್ನು ಮರೆತು ಅರ್ಥವಿಲ್ಲದ ಜಲ್ಪಿತದಲ್ಲಿ ಮಗ್ನರಾಗಿರುವ ಕಾಮಾಸಕ್ತರು; ಇನ್ನೊಂದೆಡೆ ಪಾನದಿಂದ ಮತ್ತೇರಿ ಬಾಯಿಗೆ ಬಂದಂತೆ ಹರಟುತ್ತಲೊ ಅಥವಾ ಒಬ್ಬರನ್ನೊಬ್ಬರು ಬಯ್ದಾಡುತ್ತಲೊ ಇರುವ ಕುಡುಕರ ತಂಡ. ಭುಜದಮೇಲೆ ಪರಸ್ಪರ ತೋಳುಗಳನ್ನು ಬೀಸಿಕೊಂಡು ಓಡಾಡುತ್ತಿರುವ ಕಾಮಿಗಳೂ ಗಂಧಪುಷ್ಪಾದಿಗಳಿಂದಲಕೃತರಾಗಿ ನಗೆಮೊಗದಿಂದ ಉಲ್ಲಾಸವನ್ನು ಹೊರಸೂಸುತ್ತಿರುವ ವಿಟಪುರುಷರೂ ಅಲ್ಲಲ್ಲಿ ಕಾಣಬರುತ್ತಿದ್ದರು. ಆ ಊರಿನಲ್ಲಿ ಸತ್ಪುರುಷರಿಗೂ ಕಡಮೆಯಿರಲಿಲ್ಲ. ಉತ್ತಮ ರೂಪ, ರೂಪಕ್ಕೆ ತಕ್ಕ ಗುಣ, ಗುಣಕ್ಕೆ ತಕ್ಕ ನಡವಳಿಕೆ – ಇವುಗಳುಳ್ಳ ರಾಕ್ಷಸರನ್ನು ಕಂಡು ಹನುಮಂತನಿಗೆ ಆನಂದವಾಯಿತು.

ಹನುಮಂತನು ಮನೆಯಿಂದ ಮನೆಗೆ ಹೋಗುತ್ತಾ ಸೀತೆಯ ಸಮಾಚಾರವನ್ನು ಸಂಗ್ರಹಿಸುವ ಪ್ರಯತ್ನಕ್ಕೆ ಕೈ ಹಾಕಿದನು. ಬರುಬರುತ್ತಾ ರಾತ್ರಿ ವೇಳೆ ಮೀರಿದುದರಿಂದ ಜನರೆಲ್ಲರೂ ಸಾಮಾನ್ಯವಾಗಿ ನಿದ್ರಾಸಕ್ತರಾಗಿದ್ದರು. ಆದ್ದರಿಂದ ಅವನ ಕೆಲಸಕ್ಕೆ ಎಷ್ಟೋ ಅನುಕೂಲವಾದಂತಾಯಿತು. ಶ್ರೀರಾಮನು ತಿಳುಹಿದ್ದ ಕುರುಹುಗಳೆಲ್ಲವನ್ನೂ ಜ್ಞಪ್ತಿಯಲ್ಲಿಟ್ಟುಕೊಂಡು ಮನೆಯಲ್ಲಿಯೂ ಸೀತೆಯ ಶೋಧನೆಗೆ ತೊಡಗಿದನು. ಮಂಜುಲ ವಸ್ತ್ರಾಭರಣಗಳಿಂದಲೂ ಸುಂದರ ಲಾವಣ್ಯದಿಂದಲೂ ಬೆಳಗುತ್ತಿದ್ದ ಅನೇಕ ಕಾಮಿನಿಯರು ಆತನ ಕಣ್ಣಿಗೆ ಬಿದ್ದರಾದರೂ ಸೀತೆ ಕಾಣಿಸಲಿಲ್ಲ. ಹೂಗಳಲ್ಲಿ ಓಡಾಡುವ ದುಂಬಿಗಳಂತೆ ಆನಂದಪರವಶರಾಗಿ ಮೈಮರೆತು ಮಲಗಿದ್ದ ಅನೇಕ ಸುರಸುಂದರಿಯರು ಅವನಿಗೆ ಕಾಣಬಂದರು. ಆದರೆ ಅವರಲ್ಲಿ ಒಬ್ಬರೂ ಸೀತೆಯನ್ನು ಹೋಲುತ್ತಿರಲಿಲ್ಲ. ಉಪ್ಪರಿಗೆಯ ಮೇಲೆ ಪತಿಯ ತೊಡೆಯಮೇಲೇರಿ ಕುಳಿತು ಬೆಳದಿಂಗಳನ್ನು ಹೀರುತ್ತಾ ಆನಂದಿಸುತ್ತಿದ್ದ ಪ್ರಮದೆಯರ ತಂಡದಲ್ಲಿಯೂ ಸೀತೆ ಕಾಣಬರಲಿಲ್ಲ. ರತಿಕೇಳಿಯಿಂದಾಯಾಸಗೊಂಡು, ಮೈಮರೆತು ಮೇಲುಹೊದ್ದಿಕೆಯೂ ಇಲ್ಲದೆ ಚಿನ್ನದಂತೆ ಹೊಳೆಯುವ ದೇಹಕಾಂತಿಯನ್ನು ಬೀರುತ್ತಾ ನಿದ್ರಾಮುದ್ರಿತರಾಗಿದ್ದ ಮತ್ತಕಾಶಿನಿಯರ ಸಮೂಹದಲ್ಲಿ ಎಲ್ಲಿಯೂ ಸೀತೆ ಕಾಣಬರಲಿಲ್ಲ. ಸಹಸ್ರಾರು ಹೆಣ್ಣುಗಳಲ್ಲಿ ಹುಡುಕಿನೋಡಿದರೂ ಸೀತಾದೇವಿಯ ಸುಳಿವೆ ಇರಲಿಲ್ಲ. ಉತ್ತಮಸ್ತ್ರೀಯರಲ್ಲಿ ಪರಮೋತ್ತಮಳೆಂದು ಪ್ರಸಿದ್ಧಳಾದ ಪತಿವ್ರತಾ ಶಿರೋಮಣಿ ಸೀತಾಮಾತೆ ಕಣ್ಣಿಗೆ ಬೀಳದಿದ್ದುದರಿಂದ ಹನುಮಂತನು ವ್ಯಥೆಗೊಂಡು ಕಿಂಕರ್ತವ್ಯತಾ ಮೂಢನಾಗಿ ಕ್ಷಣಕಾಲ ಸುಮ್ಮನೆ ನಿಂತನು.