ಮುಂದೇನುಮಾಡಬೇಕೆಂದು ಕ್ಷಣಕಾಲ ಯೋಚನೆಯಲ್ಲಿ ಮುಳುಗಿದ್ದ ಹನುಮಂತನು ಮತ್ತೊಮ್ಮೆ ವೇಗವಾಗಿ ಊರನ್ನೆಲ್ಲ ಸುತ್ತಿಕೊಂಡು ಬಂದನು. ಎಲ್ಲಿಯೂ ಆತನ ಅಪೇಕ್ಷೆ ನೆರವೇರಲಿಲ್ಲ. ಆದ್ದರಿಂದ ಮತ್ತೊಮ್ಮೆ ರಾವಣನ ಅರಮನೆಯನ್ನೆ ಪ್ರವೇಶಿಸಿ, ಆತನ ಅಂತಃಪುರದಲ್ಲಿ ಹುಡುಕಿ ನೋಡಬೇಕೆಂದು ನಿಶ್ಚಯಿಸಿದನು. ಆ ಒಂದೆಡೆಯನ್ನು ಆತನಿನ್ನೂ ಶೋಧಿಸಿರಲಿಲ್ಲ. ಆದ್ದರಿಂದ ಅದೊಂದೆಡೆಯಲ್ಲಿ ಹುಡುಕಿ ತನ್ನ ಸಂದೇಹವನ್ನು ನಿವಾರಣೆ ಮಾಡಿಕೊಳ್ಳಬೇಕೆಂದು ಆತನು ನಿಶ್ಚಯಿಸಿದನು. ಕ್ರೂರರಾದ ರಾಕ್ಷಸರು ಕಾಯುತ್ತಾ ನಿಂತಿದ್ದ ಆ ರಾಕ್ಷಸೇಶ್ವರನ ಅಂತಃಪುರವು ಸಿಂಹಗಳು ಕಾಯುತ್ತಿರುವ ಘೋರಾರಣ್ಯದಂತೆ ಭಾಸವಾಯಿತು ಹನುಮಂತನಿಗೆ. ಆ ದಿವ್ಯ ಭವನದ ಸೌಂದರ್ಯವನ್ನೂ ವೈಭವವನ್ನೂ ಕಂಡು ಆತನಿಗೆ ಆಶ್ಚರ್ಯವುಂಟಾಯಿತು. ಚಿನ್ನದ ಚಿ‌ತ್ರಕಾರ್ಯಗಳಿಂದ ಕೂಡಿದ ಬೆಳ್ಳಿಯ ಹೊರಬಾಗಿಲುಗಳು! ಚಿತ್ರವಿಚಿತ್ರಗಳಾದ ಒಳತೊಟ್ಟಿಗೆಗಳು! ರತ್ನಖಚಿತವಾದ ಒಳಬಾಗಿಲುಗಳು! ಶಸ್ತ್ರವಿದ್ಯೆಯಲ್ಲಿ ಪರಿಣತರಾದ ಸಹಸ್ರಾರು ಯೋಧರು ಅಲ್ಲಿ ಸದಾ ಕಾವಲಾಗಿರುವರು. ಅಲ್ಲಲ್ಲಿ ಪ್ರಮುಖರಾದ ರಾಜಪುರುಷರು ಆನೆಯಮೇಲೆ ಕುಳಿತು ಗಸ್ತು ತಿರುಗುತ್ತಿರುವರು. ಅಲ್ಲಿಯೆ ಸಮೀಪದಲ್ಲಿ ದಂತದಿಂದಲೂ ಬಂಗಾರದಿಂದಲೂ ನಿರ್ಮಿತವಾದ ರಥಗಳು ನಿಂತಿರುವುವು. ಎಲ್ಲಿ ನೋಡಿದರೂ ರಾಜಯೋಗ್ಯವಾದ ಆಸನಗಳು ಅಲಂಕೃತವಾಗಿರುವುವು. ಅಲ್ಲಲ್ಲಿ ಹಕ್ಕಿಗಳಿಂದ ಕೂಡಿದ ನವರತ್ನ ಪಂಜರಗಳು ತೂಗುಗಟ್ಟಿವೆ. ವಿಲಾಸ ವಿಭ್ರಮಗಳಿಂದ ಮೆರೆಯುತ್ತಿರುವ ಸ್ತ್ರೀಯರು ಅತ್ತಿಂದಿತ್ತ ಸಂಚರಿಸುತ್ತಿರಲು ಆಭರಣಗಳ ಧ್ವನಿ ಸಮುದ್ರದ ಘೋಷದಂತೆ ಮೊಳಗುತ್ತಿರುವುದು. ಭೇರೀ, ಮೃದಂಗ, ವೀಣೆಗಳ ಮಂಗಳ ಧ್ವನಿಗಳು ನಾಲ್ಕು ಮೂಲೆಗಳಿಂದಲೂ ಕೇಳಿಬರುತ್ತಿದೆ. ಅಗರು ಚಂದನಾದಿಗಳ ಧೂಪಧೂಮದಿಂದ ಅರಮನೆಯೆಲ್ಲವೂ ಸುವಾಸಿತವಾಗಿದೆ. ಇದನ್ನೆಲ್ಲಾ ಕಂಡ ಮಾರುತಿಯ ಮನಸ್ಸಿಗೆ “ಈ ಅರಮನೆಯೆ ಈ ಲಂಕಾಪಟ್ಟಣಕ್ಕ ಒಂದು ಆಭರಣ” ಎನ್ನಿಸಿತು.

ಹನುಮಂತನು ಆ ಅರಮನೆಯಲ್ಲಿದ್ದ ಉಪ್ಪರಿಗೆಗಳಲ್ಲಿಯ ಉದ್ಯಾನಗಳಲ್ಲಿಯೂ ಸೀತಾದೇವಿಯನ್ನು ಹುಡುಕುತ್ತಾ ಹೊರಟನು. ಪ್ರಹಸ್ತ, ಸುಪಾರ್ಶ್ವ, ಕುಂಭಕರ್ಣ, ವಿಭೀಷಣ, ಮಹೋದರ, ವಿರೂಪಾಕ್ಷ, ವಿದ್ಯುಜ್ಜಿಹ್ವ, ವಿದ್ಯುನ್ಮಾಲಿ, ವಜ್ರದಂಷ್ಟ್ರ, ಶುಕ, ಸಾರಣ, ಇಂದ್ರಿಜಿತ್ತು, ಜಂಬುಮಾಲಿ – ಇವರೇ ಮೊದಲಾದ ಮಹಾರಾಜ ಪರಿವಾರದವರ ಮನೆಯನ್ನೆಲ್ಲಾ ಶೋಧಿಸಿಯಾದಮೇಲೆ ಹನುಮಂತನು ರಾವಣನ ಸ್ವಂತ ಅರಮನೆಯನ್ನು ಪ್ರವೇಶಿಸಿದನು. ಅಲ್ಲಿನ ಪುಷ್ಪಲತಾ ಮಂದಿರಗಳೂ, ವಿಲಾಸಭವನಗಳೂ, ಕೃತಕ ಶೈಲಗಳೂ, ಮನ್ಮಥ ಸದನಗಳೂ ಮಾರುತಿಯನ್ನು ಬೆರಗುಗೊಳಿಸಿದುವು. ಎಲ್ಲಿ ನೋಡಿದರೂ ರನ್ನದ ರಾಶಿಗಳು, ನವನಿಧಿಗಳು! ಕುಬೇರನಿಗೂ ಇಂತಹ ಐಶ್ವರ್ಯವಿರದು! ಅಲ್ಲಿಯ ಕ್ರೀಡಾ ಭವನವಂತೂ ರಾವಣೇಶ್ವರನ ತಪಃಫಲದಂತೆ ಕಂಗೊಳಿಸುತ್ತಿತ್ತು. ಹಂಸತೂಲಿಕಾತಲ್ಪಗಳೂ ಸುಖಾಸನಗಳೂ ಅವುಗಳ ಬಳಿಯಲ್ಲೆ ಇದ್ದ ಪಾನಪಾತ್ರೆಗಳೂ ಆ ಲಂಕೇಶ್ವರನ ರಸಿಕತೆಗೆ ಸಾಕ್ಷಿಯಂತಿದ್ದುವು. ಹನುಮಂತನು ಅವುಗಳನ್ನೆಲ್ಲಾ ನೋಡುತ್ತಾ ತೊಟ್ಟಿಯಿಂದ ತೊಟ್ಟಿಗೆ ಪ್ರವೇಶಿಸುತ್ತಾ ಹೊರಟನು. ಆಯುಧಾಗಾರವನ್ನೂ ಚಂದ್ರಶಾಲೆಯನ್ನೂ ದಾಟಿದಮೇಲೆ ರಾವಣನ ಪುಷ್ಪಕವಿಮಾನವು ಮಾರುತಿಯ ಕಣ್ಣಿಗೆ ಬಿತ್ತು. ಅದರ ಕೆತ್ತನೆಯ ಕೆಲಸ ಅದ್ಭುತವಾಗಿತ್ತು. ಅದೊಂದು ‘ಕಲೆಯ ಬಲೆ’ಯೇ ಸರಿ. ಅ ವಿಮಾನದ ಮೇಲ್ಮಯ್ಯಲ್ಲಿ ಪುಷ್ಪಭರಿತಗಳಾದ ಮರಗಳೇನು, ಬೆಳ್ಳಗೆ ಬೆಳಗುತ್ತಿರುವ ದಿವ್ಯ ಭವನಗಳೇನು, ಅರಳಿದ ತಾವರೆಗಳಿಂದ ನಿಬಿಡವಾದ ಸರೋವರಗಳೇನು, ಮನೋಹರವಾದ ಉದ್ಯಾನಗಳೇನು, ಬಗೆಬಗೆಯಾದ ಮೃಗಪಕ್ಷಿಗಳೇನು, – ಇವುಗಳ ಚಿತ್ರಗಳನ್ನು ಕಣ್ತುಂಬ ನೋಡುತ್ತಾ ಕ್ಷಣಕಾಲ ಅದರ ಮುಂದೆ ನಿಂತುಕೊಂಡನು. ಅದರೊಳಗೆ ಪ್ರವೇಶಿಸಿ, ಅಲ್ಲೆಲ್ಲಾ ಸೀತಾದೇವಿಯನ್ನೂ ಹುಡುಕಿ ನೋಡಿದನು. ಪೂಜ್ಯಳಾದ ಸೀತಾಮಾತೆ ಅಲ್ಲಿಯೂ ಕಾಣಬರಲಿಲ್ಲ.

ರಾವಣನ ಅರಮನೆಯೆಂದರೆ ಅದೊಂದು ನಗರವಿದ್ದಂತೆ. ಆ ಅರಮನೆಯ ಮಧ್ಯದಲ್ಲಿದ್ದ ವಿಮಾನವೇ ಒಂದು ದೊಡ್ಡ ಮನೆಯಷ್ಟು ವಿಸ್ತಾರವಾಗಿತ್ತು. ಅದನ್ನು ದಾಟಿ ಅತ್ತ ಹೋದರೆ ಮತ್ತೊಂದು ದೊಡ್ಡ ಮಹಲು. ಅದು ಅರ್ಧಯೋಜನ ಅಗಲ ಒಂದು ಯೋಜನ ಉದ್ದ ವಿಸ್ತಾರವಾದದ್ದು. ಅದರಲ್ಲಿಯೇ ರಾವಣೇಶ್ವರನ ಪತ್ನಿಯರೂ ಆತನು ಭುಜಬಲದಿಂದ ಅಪಹರಿಸಿ ತಂದಿದ್ದ ರಾಜಕನ್ನಿಕೆಯರೂ ಅಸಂಖ್ಯಾತವಾಗಿ ತುಂಬಿದ್ದುದು. ಆ ಸ್ತ್ರೀಯರೆಲ್ಲರೂ ರಾತ್ರಿ ಬಹಳ ಹೊತ್ತಿನವರೆಗೆ ಕ್ರೀಡಿಸುತ್ತಿದ್ದು ಅರ್ಧರಾತ್ರಿಯಾದ ಮೇಲೆ ನಿದ್ರೆಯಿಂದಲೂ ಪಾನಮದದಿಂದಲೂ ಮೈಮರೆತು ಮಲಗಿದ್ದರು. ರಂಗುರಂಗಾದ ವಸ್ತ್ರಗಳನ್ನು ಧರಿಸಿ ಪುಷ್ಪಮಾಲಿಕೆಗಳಿಂದಲೂ ವಿವಿಧಾಭರಣಗಳಿಂದಲೂ ಭೂಷಿತೆಯರಾಗಿ ರತ್ನಗಂಬಳಿಯ ಮೇಲೆ ಮೌನದಿಂದ ಮಲಗಿದ್ದ ಅವರನ್ನು ನೋಡಿದರೆ ನಿಶ್ಶಬ್ದವಾಗಿ ನಿದ್ರಿಸುತ್ತಿರುವ ಹಂಸಭ್ರಮರಗಳಿಂದ ಕೂಡಿದ ಕಮಲವನದಂತೆ ಕಾಣುತ್ತಿತ್ತು. ಸೂರ್ಯೋದಯವಾದೊಡನೆಯೆ ಅರಳಿ ಸೂರ್ಯಾಸ್ತದೊಡನೆ ಮೊಗ್ಗಾಗುವ ಕಮಲಗಳಂತೆ ಕಳಕಳಿಸುತ್ತಿದ್ದ ಈ ಕಮಲಮುಖಿಯರು ಕಣ್ಣುಮುಚ್ಚಿ ತಮ್ಮ ನಿಶ್ವಾಸದೊಡನೆ ಸುಗಂಧವನ್ನು ಹೊರಚೆಲ್ಲುತ್ತಾ ಮಲಗಿದ್ದರು. ಅವರ ಮಧ್ಯದಲ್ಲಿ ಹಂಸತೂಲಿಕಾತಲ್ಪದಲ್ಲಿ ಮಲಗಿದ್ದ ಲಂಕಾಧಿಪತಿಯು ನಕ್ಷತ್ರಮಧ್ಯದಲ್ಲಿ ಇರುವ ಚಂದ್ರನಂತೆ ಕಂಗೊಳಿಸುತ್ತಿದ್ದನು. ನಿಜವಾಗಿಯೂ ಅವರು ಪುಣ್ಯಶೇಷದಿಂದ ಸ್ತ್ರೀರೂಪವನ್ನು ಧರಿಸಿದ್ದ ನಕ್ಷತ್ರಗಳೆಂದೇ ಹನುಮಂತನು ಭಾವಿಸಿದನು. ಅಷ್ಟು ಕಾಂತಿ ಲಾವಣ್ಯಗಳಿಂದ ಬೆಳಗುತ್ತಿದ್ದರು, ಆ ಕಾಂತೆಯರು. ಮಧುಪಾನ ಮಾಡಿ ರತಿಕ್ರೀಡೆಯಲ್ಲಿ ತೊಡಗಿದಾಗ ಪುಷ್ಪಹಾರಗಳೂ ಆಭರಣಗಳೂ ಸಡಿಲಿಹೋಗಿರಲು, ಅವುಗಳನ್ನು ನೇವರಿಸಿಕೊಳ್ಳದೆ ಹಾಗೆಯೆ ಅವರು ನಿದ್ರಾಸಕ್ತರಾಗಿದ್ದರು. ಕೆಲವರಿಗೆ ತಿಲಕ ಅರ್ಧ ಅಳಿಸಿ ಹೋಗಿದೆ; ಕೆಲವರ ಕಾಲಂದುಗೆ ಜಾರಿಹೋಗಿದೆ; ಕೆಲವರ ಕಂಠಹಾರಗಳು ಜಾರಿಬಿದ್ದಿವೆ; ಕೆಲವರ ಉಟ್ಟಬಟ್ಟೆಯೇ ಸಡಿಲಿಹೋಗಿದೆ; ಮತ್ತೆ ಕೆಲವರಿಗೆ ಒಡ್ಯಾಣ ಕಿತ್ತುಹೋಗಿದೆ. ಹೂವರಳಿದ ಬಳ್ಳಿಗಳನ್ನು ಕಾಡಾನೆ ಕಿತ್ತೆಸೆದಂತೆ ಅಸ್ತವ್ಯಸ್ತವಾಗಿ ಬಿದ್ದಿದ ಪ್ರಮದೆಯರು ಒಂದು ಕಡೆ; ನಿದ್ರಾವಸ್ಥೆಯಲ್ಲಿಯೂ ಶೃಂಗಾರ ಚೇಷ್ಟೆಗಳಲ್ಲಿ ತೊಡಗಿರುವ ಕಾಮಿನಿಯರು ಮತ್ತೊಂದು ಕಡೆ. ಅಲ್ಲೊಬ್ಬ ಪ್ರೌಢೆಯ ಸೆರಗು ಅವಳ ಉಸಿರಿನ ಗಾಳಿಯಿಂದ ಹೇಗೆ ಬಾರಿಬಾರಿಗೂ ಮೇಲೆದ್ದು ಕುಣಿಯುತ್ತಿದೆ! ಬಣ್ಣದ ಧ್ವಜಪಟವೊಂದು ಗಾಳಿಯಿಂದ ಹರಿದಾಡುತ್ತಿರುವಂತೆ ಅದು ಕಾಣುತ್ತಿದೆ! ಇತ್ತ ಕಡೆ ಒಬ್ಬಳು ತರುಣಿ ಪಕ್ಕದಲ್ಲಿರುವ ತನ್ನ ಸವತಿಯನ್ನೇ ರಾವಣನೆಂದು ಭ್ರಮಿಸಿ ಅವಳ ಮುಖಕ್ಕೆ ಮುತ್ತಿಡುತ್ತಿದ್ದಾಳೆ! ಮದ್ಯಪಾನದಿಂದ ಮೈಮರೆತು ಬಿದ್ದಿದ್ದ ಅವಳು ತನ್ನ ಗಂಡನೇ ಮುದ್ದಿಸುತ್ತಿರುವನೆಂದು ಮೋಹಗೊಂಡು ಪ್ರತಿಚುಂಬನದಿಂದ ಆ ಸವತಿಯನ್ನು ಸಂತೋಷಪಡಿಸುತ್ತಿದ್ದಾಳೆ. ಒಬ್ಬಳು ತೋಳನ್ನೇ ತಲೆಗಿಂಬಾಗಿ ಮಾಡಿಕೊಂಡಿದ್ದರೆ ಮತ್ತೊಬಳು ಉಟ್ಟಬಟ್ಟೆಯನ್ನೆ ಸುತ್ತಿ ತಲೆಗಿಂಬಾಗಿ ಉಪಯೋಗಿಸಿದ್ದಾಳೆ. ಒಬ್ಬಳ ಭುಜದ ಮೇಲೆ ಮತ್ತೊಬ್ಬಳು; ಅವಳ ಭುಜದಮೇಲೆ ಮತ್ತೊಬ್ಬಳು; ಅವಳ ತೊಡೆಯಮೇಲೆ ಇನ್ನೊಬ್ಬಳು; ಅವಳ ತೋಳಿನಮೇಲೆ ಮಗುದೊಬ್ಬಳು. ಸಾಲಾಗಿ ಪೋಣಿಸಿರುವ ಪುಷ್ಪಮಾಲೆಗಳಂತೆ ಆ ಸ್ತ್ರೀಸಮೂಹಕಾಣುತ್ತಿರಲು ಆ ಅಂತಃಪುರವೊಂದು ಹೂಬಳ್ಳಿಯ ತೋಟದಂತೆ ಬೆಳಗುತ್ತಿದ್ದಿತು.

ಹನುಮಂತನು ಈ ಸ್ತ್ರೀ ಸದಸ್ಸನ್ನು ಕಂಡು ನಿಟ್ಟುಸಿರಿಟ್ಟನು. “ಈ ರಮಣಿಯರು ರಾವಣನೊಡನೆ ಸುಖವಾಗಿರುವಂತೆ ಸೀತಾಮಾತೆಯೂ ಶ್ರೀರಾಮನೊಡನೆ ಸುಖದಿಂದಿದ್ದರೆ ಎಷ್ಟು ಚೆನ್ನಾಗಿತ್ತು! ಆಕೆಯನ್ನು ಶ್ರೀರಾಮನಿಗೆ ಅರ್ಪಿಸಿದರೆ ರಾವಣನ ಬದುಕೂ ಎಷ್ಟೋ ಶ್ರೇಯಸ್ಕರವಾಗುವುದಲ್ಲವೆ? ಅಯ್ಯೋ, ಈ ಮಹಾವೈಭವಗಳಿಂದ ಕೂಡಿದ ಈ ಶೂರ ರಾವಣನು ಸೀತಾದೇವಿಯನ್ನು ಕದ್ದುತಂದು ಎಂತಹ ಅನರ್ಥಕ್ಕೆ ಕಾರಣವಾದನು! ಇದು ಏನು ವಿನಾಶಕಾಲ ಇವನಿಗೆ!” ಎಂದು ಮನಸ್ಸಿನಲ್ಲಿಯೆ ಮಿಡುಕಿಕೊಂಡನು.

ಹನುಮಂತನು ಅಲ್ಲಿದ್ದ ಹೆಣ್ಣುಗಳನ್ನು ಒಬ್ಬೊಬ್ಬರನ್ನಾಗಿ ಪರೀಕ್ಷಿಸಿ ನೋಡುತ್ತಾ ಹೊರಟನು. ಅವರಲ್ಲಿ ಒಬ್ಬರೂ ಸೀತೆಯನ್ನು ಹೋಲುವಂತಿಲ್ಲ. ಮುಂದುವರಿದು ಹಾಗೆಯೆ ಮುಂದಕ್ಕೆ ಬರಲು ಅಲ್ಲಿ ರಾವಣನ ಶಯನ ವೇದಿಕೆ ಕಾಣಬಂದಿತು. ಅದನ್ನು ಸ್ಫಟಿಕಶಿಲೆಯಿಂದ ನಿರ್ಮಿಸಿತ್ತು. ಅದರ ಸುತ್ತಲೂ ಅಂಚಿನಲ್ಲಿ ಚಿತ್ರಕಲೆಯಿಂದ ತುಂಬಿಹೋದ ದಂತದ ಕಟ್ಟುಗಳು. ಅದರ ಮೇಲಿದ್ದ ಹಲಗೆ ವೈಢೂರ್ಯನಿರ್ಮಿತವಾದುದು. ಅದರ ಮೇಲೆ ಅಮೂಲ್ಯವಾದ ರತ್ನಗಂಬಳಿಗಳೊಡನೆ ಕೂಡಿದ ಹಂಸತೂಲಿಕಾತಲ್ಪ. ಆ ವೇದಿಕೆಯ ಅಗ್ರಭಾಗದಲ್ಲಿ ಪುಷ್ಪಮಾಲಿಕೆಗಳಿಂದ ಅಲಂಕೃತವಾಗಿ ಚಂದ್ರಬಿಂಬದಂತೆ ಬೆಳ್ಳಗೆ ಬೆಳಗುತ್ತಿರುವ ಶ್ವೇತಚ್ಛತ್ರವೊಂದು ಎತ್ತಿಕಟ್ಟಿದೆ. ಅದರ ಸಮೀಪದಲ್ಲಿಯೆ ಕೈಲಿ ಚಾಮರಗಳನ್ನು ಹಿಡಿದು ಬೀಸುತ್ತಿರುವ ಕೀಲುಬೊಂಬೆಗಳು. ಪಾರಿಜಾತಾದಿ ಪುಷ್ಪಗಳಿಂದ ಆ ಪರ್ಯಂಕವನ್ನು ಅಲಂಕರಿಸಿತ್ತು. ಆ ಮನೋಹರವಾದ ಪರ್ಯಂಕದ ಮೇಲೆ ಕಾರ್ಮುಗಿಲಿನಂತೆ ದೀರ್ಘಕಾಯಕನಾದ ಲಂಕೇಶ್ವರನು ಮಲಗಿದ್ದನು. ಆತನ ಕಿವಿಯಲ್ಲಿದ್ದ ಕರ್ಣಕುಂಡಲಗಳು ಥಳ ಥಳ ಹೊಳೆಯುತ್ತಿದ್ದುವು. ಸುವರ್ಣವಸ್ತ್ರವನ್ನು ಧರಿಸಿ ಗಂಧಪುಷ್ಪಾದಿಗಳಿಂದ ಅಲಂಕೃತನಾಗಿದ್ದ ಆತನನ್ನು ನೋಡಿದರೆ ಮಿಂಚಿನೊಡಗೂಡಿ ಸಂಜೆಗೆಂಪಿನಿಂದ ಹೊಳೆಯುವ ಮುಗಿಲಿನಂತೆ ಕಾಣಬರುತ್ತಿದ್ದನು. ದಿವ್ಯಾಭರಣಗಳಿಂದ ಭೂಷಿತನಾದ ಆ ಆಜಾನುಬಾಹುವನ್ನು ಕಂಡು ಹನುಮಂತನಿಗೆ ಮೆಚ್ಚಿಗೆಯಾಗುವುದಕ್ಕೆ ಬದಲಾಗಿ “ಇವನು ಸೀತಾಪಹರಣ ಮಾಡಿದ ಮಹಾಪಾಪಿ” ಎಂಬ ಭಾವನೆ ಮನಸ್ಸಿನಲ್ಲಿ ಸುಳಿದು, ಪಿಶಾಚವನ್ನು ಕಂಡವನು ಹಿಮ್ಮೆಟ್ಟುವಂತೆ ಆತನು ಸ್ವಲ್ಪ ಹಿಂದಕ್ಕೆ ಸರಿದನು. ಆದರೂ ಆ ಪರ್ಯಂಕವನ್ನು ಹತ್ತಿ ಅವನ ಪಾದಮೂಲದಲ್ಲಿ ಮಲಗಿದ್ದ ಅವನ ಪ್ರಿಯ ಪತ್ನಿಯರನ್ನೆಲ್ಲಾ ಪರೀಕ್ಷಿಸಿ ನೋಡಿದನು. ಆ ಪ್ರಮದೆಯರು ಮಲಗುವ ಮುನ್ನ ನುಡಿಸುತ್ತಿದ್ದ ವಾದ್ಯವಿಶೇಷಗಳು ಅವರ ಬಳಿಯಲ್ಲಿಯೆ ಬಿದ್ದಿದ್ದುವು. ರಮಣಿಯೊಬ್ಬಳು ವೀಣೆಯನ್ನು ಹಾಗೆಯೆ ಅಪ್ಪಿಕೊಂಡು ಮಲಗಿರಲು ತಾವರೆಯ ಬಳ್ಳಿಯೊಂದು ತೆಪ್ಪವನ್ನು ಆಶ್ರಯಿಸುವಂತೆ ಕಾಣುತ್ತಿತ್ತು. ಮತ್ತೊಬ್ಬಳು ಮನೋಹರಿ ತಮಟೆಯನ್ನಪ್ಪಿ ಮಲಗಿರಲು ಬಹುಕಾಲದಿಂದ ಅಗಲಿಬಂದ ಪ್ರಿಯನನ್ನು ಅಪ್ಪಿದವಳಂತೆ ಕಾಣುತ್ತಿದ್ದಳು. ಹಾಗೆಯೆ ಮದ್ದಲೆಯನ್ನಪ್ಪಿ ಮಲಗಿರುವವಳು, ಕೊಳಲನ್ನು ಕಟ್ಟಿಕೊಂಡು ಮಲಗಿರುವವಳು – ಆಂಜನೇಯನು ಒಬ್ಬರಾದಮೇಲೊಬ್ಬರಂತೆ ಇವರನ್ನೆಲ್ಲಾ ಪರೀಕ್ಷಿಸುತ್ತಾ ಮುಂದೆ ಬರಲು ಅಲ್ಲಿಯೆ ಪ್ರತ್ಯೇಕವಾದ ಒಂದು ಹಾಸಿಗೆಯ ಮೇಲೆ ಏಕಾಂತ ಸ್ಥಳದಲ್ಲಿ ಮಲಗಿದ್ದ ದಿವ್ಯ ಸುಂದರ ಸ್ತ್ರೀಯೊಬ್ಬಳನ್ನು ಕಂಡನು. ಆಕೆಯ ಸರ್ವ ಅವಯವಗಳೂ ಮುಕ್ತಾಭರಣಗಳಿಂದ ಅಲಂಕೃತವಾಗಿದ್ದುವು. ಸುವರ್ಣಕಾಂತಿಯಿಂದ ಹೊಳೆಯುತ್ತಿರುವ ಆಕೆಯ ದೇಹಕಾಂತಿಯಿಂದ ಆ ಸದಸ್ಸೆಲ್ಲವೂ ಕಾಂತಿಯುಕ್ತವಾಗುತ್ತಿರುವಂತೆ ಕಾಣಿಸುತ್ತಿತ್ತು. ಸೌಂದರ್ಯಾಧಿದೇವತೆಯಂತೆ ಕಾಣುತ್ತಿದ್ದ ಆಕೆಯನ್ನು ಕಂಡು ಹನುಮಂತನು ಆಕೆಯೇ ಸೀತಾಮಾತೆಯಿರಬೇಕೆನ್ನಿಸಿತು: ಆತನು ಅಮಿತಾನಂದದಿಂದ ತನ್ನ ಬಾಲವನ್ನು ಒಮ್ಮೆ ಮುತ್ತಿಟ್ಟುಕೊಂಡು ಕುಣಿದಾಡಿಬಿಟ್ಟನು.

ಈ ಬಗೆಯಾದ ಸೀತೆಯೆಂಬ ಭ್ರಾಂತಿಯನ್ನು ಹುಟ್ಟಿಸಿದ ದಿವ್ಯ ಸುಂದರಿ ರಾವಣನ ಪ್ರಾಣಪ್ರಿಯೆಯಾದ ಮಂಡೋದರಿ. ಹನುಮಂತನಿಗೆ ಹುಟ್ಟಿದ ಭ್ರಾಂತಿಯಾದರೂ ಕ್ಷಣಿಕವಾದುದು. ಮರುಕ್ಷಣದಲ್ಲಿಯೆ ಆತನು ತನ್ನ ಅವಿವೇಕಕ್ಕಾಗಿ ಸಂತಾಪಗೊಂಡನು. “ಮಹಾ ಪತಿವ್ರತೆಯಾದ ಸೀತಾಮಾತೆಯಲ್ಲಿ, ಈ ಕ್ಷುದ್ರಳಾದ ಹೆಣ್ಣೆಲ್ಲಿ? ರಾಮನನ್ನು ಅಗಲಿರುವ ಆ ಸೀತಾಮಾತೆಗೆ ನಿದ್ರೆಯೆಂದರೇನು? ಅಲಂಕಾರವೆಂದರೇನು? ಮದ್ಯಪಾನದಿಂದ ಮತ್ತೇರಿ ಮಲಗಿರುವ ಈ ಹೆಣ್ಣನ್ನು ಸೀತೆಯೆಂದು ಯೋಚಿಸಿದುದು ಮಹಾಪಾತಕ. ರಾಮನ ಸುಂದರಾಕಾರವನ್ನು ಕಂಡ ಹೆಣ್ಣು ಬೇರೊಬ್ಬನನ್ನು ಮೋಹಿಸಿಯಾಳೆ? ಇವಳೆಂದಿಗೂ ಸೀತೆಯಲ್ಲ” ಎಂದು ನಿಶ್ಚಯಿಸಿಕೊಂಡನು. ಅಲ್ಲಿದ್ದವರನ್ನೆಲ್ಲಾ ಮತ್ತೊಮ್ಮೆ ಎಚ್ಚರದಿಂದ ಪರೀಕ್ಷಿಸಿ, ಅಲ್ಲೆಲ್ಲಿಯೂ ಸೀತೆಯಿಲ್ಲವೆಂದು ನಿಶ್ಚಯವಾದ ಮೇಲೆ ಅಲ್ಲಿಂದ ಹೊರಕ್ಕೆ ಹೊರಟನು.

ಶಯನ ಗೃಹಕ್ಕೆ ಸಮೀಪದಲ್ಲಿಯೆ ರಾವಣನ ಪಾನಗೃಹವಿತ್ತು. ಹನುಮಂತನು ಅದನ್ನು ಪ್ರವೇಶಿಸಿ ಅಲ್ಲಿ ಸೀತೆಯನ್ನು ಹುಡುಕ ಹೊರಟನು. ಅಲ್ಲಿಯೂ ಕೆಲವರು ಸ್ತ್ರೀಯರು ಮಲಗಿದ್ದರು. ಅವರಲ್ಲಿ ಮನ್ಮಥ ಕ್ರೀಡೆಯಿಂದ ಬಳಲಿ ಮಲಗಿರುವವರು ಕೆಲವರು; ಮದ್ಯಪಾನದಿಂದ ಮತ್ತರಾಗಿ ಮೈಮರೆತು ಮಲಗಿರುವವರು ಕೆಲವರು; ನರ್ತನದಿಂದಲೋ ಸಂಗೀತದಿಂದಲೋ ಶ್ರಾಂತರಾಗಿ ಮಲಗಿರುವವರು ಕೆಲವರು; ಸಂಗೀತ ಸಾಧನಗಳನ್ನೇ ತಲೆಗಿಂಬಾಗಿಟ್ಟುಕೊಂಡು ಮಲಗಿರುವವರು ಕೆಲವರು. ಅವರಾರೂ ಸೀತೆಯನ್ನು ಹೋಲುವಂತಿರಲಿಲ್ಲ. ಹನುಮಂತನು ಮತ್ತೊಮ್ಮೆ ರಾವಣ ಶಯನಗೃಹಕ್ಕೆ ಹೋಗಿ ಗೂಳಿಯ ಸುತ್ತಲೂ ಮಲಗಿರುವ ಗೋವುಗಳಂತಿದ್ದ ಅಲ್ಲಿನ ಹೆಣ್ಣುಗಳ ಮಧ್ಯೆ ಅರಸಿದನು; ಪುನಃ ಮತ್ತೊಮ್ಮೆ ಪಾನಭೂಮಿಯನ್ನು ಪ್ರವೇಶಿಸಿ ಅಲ್ಲಿದ್ದ ಬಗೆಬಗೆಯಾದ ಮಾಂಸಗಳ ರಾಶಿಯನ್ನೂ ಭಕ್ಷ್ಯಭೋಜ್ಯಗಳಿಂದ ತುಂಬಿದ ಭಾಂಡಗಳನ್ನೂ ರತ್ನಖಚಿತವಾದ ಸುವರ್ಣ ಪಾನಪಾತ್ರೆಗಳನ್ನೂ ಅಮೂಲ್ಯ ಮಧ್ಯಗಳಿಂದ ಕೂಡಿ ಸಾಲಾಗಿರಿಸಿದ್ದ ಸುವರ್ಣ ಕುಂಭಗಳನ್ನೂ ಕಂಡನೇ ಹೊರತು ಸೀತೆಯನ್ನು ಬೇರೆ ಕಾಣಲಿಲ್ಲ. ನಾನಾವರ್ಣದ ನಾನಾಜಾತಿಯ ನಾನಾರೂಪಿನ ಹೆಣ್ಣುಗಳು ಅಲ್ಲಿ ಅಸ್ತವ್ಯಸ್ತವಾಗಿ ಮಲಗಿದ್ದರು. ಅವರನ್ನು ಆ ಸ್ಥಿತಿಯಲ್ಲಿ ನೋಡುವುದೇ ಪಾಪಕರವೆನ್ನಿಸಿತು ಆತನಿಗೆ. ಪರಪುರುಷರ ಪ್ರವೇಶಕ್ಕೆ ಆಸ್ಪದವಿಲ್ಲವೆಂದು ಅರಿತೇ ಆ ಸ್ತ್ರೀಯರು ನಿರ್ಲಜ್ಜರಾಗಿ ಮೈಮಮರೆತು ಮಲಗಿದ್ದರು. ಆ ಸ್ಥಿತಿಯಲ್ಲಿ ಅವರನ್ನು ನೋಡುವುದು ಪರಮಪಾತಕವೆನ್ನಿಸಿತು ಆ ಪಾಪಭೀರುವಿಗೆ. ಕ್ಷಣಕಾಲ ಈ ಭಾವನೆಯಿಂದ ಆತನು ಮನಸ್ಸಿನಲ್ಲಿಯೆ ಕೊರಗಿ ಮರುಗಿದನು. ಆದರೆ ತಾನು ಬಂದ ಕಾರ್ಯಕ್ಕೆ ತಾನು ಆಚರಿಸಿದಂತೆ ಆಚರಿಸದ ಹೊರತೂ ಗತ್ಯಂತರವಿಲ್ಲ. ಆದ್ದರಿಂದ ತನ್ನಲ್ಲಿಯೆ ತಾನು ಹೀಗೆಂದು ಸಮಾಧಾನ ತಂದುಕೊಂಡನು: “ನಗ್ನ ಸ್ತ್ರೀಯರನ್ನು ಕಂಡರೂ ನನ್ನ ಮನಸ್ಸು ವಿಕಾರಗೊಳ್ಳದು. ಸಮಸ್ತ ಇಂದ್ರಿಗಳ ಪ್ರವರ್ತನೆಗೂ ಕಾರಣವಾದ ಮನಸ್ಸು ಸ್ವಾಧೀನದಲ್ಲಿರುವಾಗ ದೋಷಕ್ಕೆ ಅವಕಾಶವೆಲ್ಲಿಯದು? ಸೀತಾದೇವಿಯನ್ನು ಹೆಂಗಸರ ಮಧ್ಯದಲ್ಲಿ ಅಲ್ಲದೆ ಬೇರೆಲ್ಲಿ ಹುಡುಕುವುದು?”