ಎಲ್ಲೆಲ್ಲಿ ಹುಡುಕಿದರೂ ಸೀತಾಮಾತೆ ಕಾಣಬರದಿದ್ದುದರಿಂದ ಹನುಮಂತನು ಅತ್ಯಂತ ಚಿಂತಾಕ್ರಾಂತನಾದನು. “ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆ? ಅಥವಾ ತನ್ನ ಇಷ್ಟಕ್ಕೆ ಒಳಗಾಗದ ಆ ಪತಿವ್ರತಾಶಿರೋಮಣಿಯನ್ನು ರಾವಣನೇ ಕೊಂದುಹಾಕಿರಬಹುದೆ? ಕರಾಳಾಕೃತಿಯ ರಾಕ್ಷಸ ಸ್ತ್ರೀಯರನ್ನು ಕಂಡು ಭಯದಿಂದ ಆಕೆ ಮೃತಿಹೊಂದಿದ್ದರೂ ಹೊಂದಿದ್ದಿರಬಹುದು. ಇನ್ನು ಆಕೆಯನ್ನು ಕಾಣದೆ ನಾನು ಹಿಂದಿರುಗಿ ಸುಗ್ರೀವನಿಗೆ ಮುಖ ತೋರಿಸುವುದು ಹೇಗೆ? ನೂರುಗಾವುದ ಸಮುದ್ರವನ್ನು ಹಾರಿ ಬಂದ ನನ್ನ ಶ್ರಮವೆಲ್ಲವೂ ವ್ಯರ್ಥವಾಯಿತಲ್ಲಾ! ಅಯ್ಯೋ ದುರ್ವಿಧಿ! ನಾನು ಇಲ್ಲಿ ವ್ಯರ್ಥವಾಗಿ ಕಾಲಕ್ಷೇಪಮಾಡುತ್ತಾ ಕುಳಿತರೆ ಸಮುದ್ರತೀರದಲ್ಲಿ ನನಗಾಗಿ ಕಾಯುತ್ತ ಕುಳಿತಿರುವ ಅಂಗದಾದಿಗಳು ಏನು ಮಾಡಬೇಕು? ಅವಧಿ ಮೀರಿದರೆ ಅವರೆಲ್ಲಾ ಪ್ರಾಯೋಪವೇಶ ಮಾಡುವರಲ್ಲಾ!” ಹೀಗೆಯೇ ಬಹುಕಾಲ ಚಿಂತೆಮಾಡುತ್ತಾ ಕುಳಿತಿದ್ದ ಹನುಮಂತನು ತನ್ನ ನಿರುತ್ಸಾಹವನ್ನು ಕೊಡಹಿ ಮೇಲಕ್ಕೆದ್ದನು, “ಉತ್ಸಾಹವೇ ಸಮಸ್ತ ಸಂಪತ್ತಿಗೆ ಮೂಲ. ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆಳೆಯದೆ ಮುನ್ನುಗ್ಗಿ ಕೆಲಸ ಮಾಡುವುದೀಗ ಧೀರನ ಲಕ್ಷಣ” ಎಂದುಕೊಂಡು ಮತ್ತೊಮ್ಮೆ ರಾವಣನ ಅಂತಃಪುರವನ್ನೆಲ್ಲಾ ಒಂದು ಅಂಗುಲಪ್ರಮಾಣದಷ್ಟೂ ಸ್ಥಳವನ್ನು ಬಿಡದೆ ಹುಡುಕಿನೋಡಿದನು. ಕುರೂಪಿಗಳೂ ಕರಾಳ ವದನೆಯರೂ ಆದ ರಾಕ್ಷಸಿಯರು ಕಾಣಿಸಿದಂತೆ ಸೂರೂಪೆಯರಾದ ವಿದ್ಯಾಧರಿಯರೂ, ಚಂದ್ರಮುಖಿಯರಾದ ನಾಗಕನ್ಯೆಯರೂ, ಅಸಂಖ್ಯಾತರಾಗಿ ಕಾಣಬಂದರಾದರೂ ಅವರಲ್ಲಿ ಒಬ್ಬರಾದರೂ ಸೀತೆಯಾಗಿರಲಿಲ್ಲ. ಮುಗಿಲಿಂದ ಮುಗಿಲಿಗೆ ಶೋಧಿಸಿದರೂ ರಾಮಪತ್ನಿಯಾದ ಸೀತೆಯ ಸುಳಿವೆ ಇರಲಿಲ್ಲ. ಹನುಮಂತನ ತಲೆಯಲ್ಲಿ ಆಲೋಚನಾ ತರಂಗಗಳು ಏಳಲಾರಂಭಿಸಿದುವು. “ರಾಜಕುಮಾರಿಯೇನಾದರೂ ಸದ್ವರ್ತನೆಯನ್ನು ಗಾಳಿಗೆ ತೂರಿ ರಾವಣನ ಪ್ರೇಮವನ್ನು ಅಂಗೀಕರಿಸರಬಹುದೇ? ‘ಶಾಂತಂ ಪಾಪಂ! ಶಾಂತಂ ಪಾಪಂ!’ ಎಂತಹ ದುರ್ಭಾವನೆ ಮನಸ್ಸಿನಲ್ಲಿ ಸುಳಿಯಿತು? ಹಾಗೆಂದಿಗೂ ನಡೆಯಲಾರದು. ಸಾಗರದ ಮೇಲೆ ಬರುತ್ತಿರುವಾಗ ಆಕೆ ಸಾಗರದಲ್ಲಿ ಬಿದ್ದುಹೋಗಿರಬಹುದು. ಅಥವಾ ಆ ರಾಕ್ಷಸನ ಬಾಹುಪೀಡನದಿಂದ ಆ ಕೋಮಲಾಂಗಿಯ ಪ್ರಾಣವಾಯು ಹಾರಿಹೋಗಿರಬಹುದು. ಈ ರಾವಣನೋ ಅಥವಾ ಅವನ ಸ್ತ್ರೀಯರಲ್ಲಿ ಯಾರಾದರೂ ಆ ಕೋಮಲೆಯನ್ನು ಭಕ್ಷಿಸಿರುವುದೂ ಸಾಧ್ಯ. ಇರಬೇಕಿರಬೇಕು. ಆಕೆ ಹಾಗೆಯೇ ಮೃತಿಹೊಂದಿರಬೇಕು. ಪಾಪ, ಸಾಯುವ ಮುನ್ನ ‘ಹಾ ರಾಮಾ! ಹಾ ಲಕ್ಷ್ಮಣಾ!’ ಎಂದು ಎಷ್ಟು ಹಂಬಲಿಸುತ್ತ ಪ್ರಾಣಬಿಟ್ಟಳೋ! ಹಾಗಲ್ಲದೆ ಆಕೆ ರಾವಣನ ಅರಮನೆಯಲ್ಲಿಯೇ ರಹಸ್ಯವಾದ ಯಾವುದಾದರೊಂದು ಸ್ಥಳದಲ್ಲಿ ಪಂಜರಸ್ಥವಾದ ಗಿಳಿಯಂತೆ ಬಂಧಿತಳಾಗಿ ರೋದಿಸುತ್ತಿರುವಳೋ ಏನೋ! ಅದು ಸಾಧ್ಯವಿಲ್ಲವೆಂದು ತೋರುತ್ತದೆ. ನಾನು ಆ ಅರಮನೆಯಲ್ಲಿ ಬೆದಕದ ಸ್ಥಳವೇ ಇಲ್ಲ. ಆಕೆ ದೇಹತ್ಯಾಗ ಮಾಡಿರುವುದೇ ನಿಶ್ಚಯ. ಆಕೆಯಲ್ಲಿ ಪ್ರಾಣಾಧಿಕ ಪ್ರೇಮವನ್ನು ಇಟ್ಟಿರುವ ಶ್ರೀರಾಮನಿಗೆ ಈ ಸುದ್ದಿಯನ್ನು ಕೊಂಡೊಯ್ದು ನಿವೇದಿಸುವುದು ಹೇಗೆ? ಹೇಳದೆ ಸುಮ್ಮನಿರುವುದಕ್ಕೆ ತಾನೆ ಸಾಧ್ಯವೇ? ಈಗ ನನ್ನ ಕರ್ತವ್ಯವೇನು? ಸೀತಾದೇವಿಯನ್ನು ಕಾಣದೆ ಹಿಂತಿರುಗಿದರೆ ಯಾವ ಪುರುಷಾರ್ಥವನ್ನು ಸಾಧಿಸಿದಂತಾಯಿತು? ‘ಸೀತೆಯನ್ನು ನಾನು ಕಾಣಲಾಗಲಿಲ್ಲ ಎಂಬ ದಾರುಣ ವಾಕ್ಯ ಕಿವಿಗೆ ಬಿದ್ದೊಡನೆಯೆ ಶ್ರೀರಾಮಚಂದ್ರನು ಜೀವತ್ಯಾಗಮಾಡುತ್ತಾನೆ. ಅದನ್ನು ಕಂಡು ಅಣ್ಣನಲ್ಲಿ ಭಕ್ತಿ ವಾತ್ಸಲ್ಯಗಳಿಂದ ತುಂಬಿ ತುಳುಕುತ್ತಿರುವ ಲಕ್ಷ್ಮಣಸ್ವಾಮಿ ತನ್ನ ಪ್ರಾಣಗಳನ್ನು ಧರಿಸಿಯಾನೆ? ಈ ಸೋದರರು ಮಡಿದುದನ್ನು ಕೇಳಿದರೆ ಬಂಧು ಪ್ರೇಮಿಗಳಾದ ಭರತ ಶತ್ರುಘ್ನರೂ ಪ್ರಾಣಗಳನ್ನು ತೊರೆಯುತ್ತಾರೆ. ರಾಜಮಾತೆಯರಾದ ಕೌಸಲ್ಯಾ ಸುಮಿತ್ರಾ ಕೈಕೆಯರಿಗೂ ಮರಣವೇ ಶರಣಾಗಬೇಕಾಗುತ್ತದೆ. ಈ ಮರಣ ಪರಂಪರೆಗಳನ್ನು ಕಂಡು ಸುಗ್ರೀವನು ಜೀವಿಸಲು ಸಾಧ್ಯವೇ? ಆತನೂ ಅಸುದೊರೆವನು; ಆತನ ಹೆಂಡತಿ ಮಕ್ಕಳೂ ಆತನೊಡನೆಯೇ ಸತ್ತುಹೋಗುವರು. ಇದನ್ನು ಕಂಡು ಅಂಗದನೂ ಕಪಿವೀರರೂ ಎದೆಯೊಡೆದು ಪ್ರಾಣ ಬಿಡುವರು. ಹೀಗೆ ಇಕ್ಷ್ವಾಕುಕುಲನಾಶದೊಡನೆ ಕಪಿಕುಲವೂ ನಾಮಾವಶೇಷವಾಗಿ ಹೋಗುವುದು. ಇದು ತಪ್ಪಬೇಕಾದರೆ ನಾನು ಕೃತಕಾರ್ಯನಾಗದೆ ಹಿಂದಿರುಗಬಾರದು. ಆದ್ದರಿಂದ ಸೀತಾವೃತ್ತಾಂತವು ತಿಳಿಯುವವರೆಗೂ ನಾನು ಇಲ್ಲಿಯೆ ಇದ್ದುಬಿಡಬೇಕು.”

ಕೈಕೊಂಡ ಕಾರ್ಯ ವಿಫಲವಾದುದಕ್ಕಾಗಿ ಹನುಮಂತನಿಗೆ ಅಸಹ್ಯ ವೇದನೆಯಾಗಿತ್ತು. ಒಮ್ಮೊಮ್ಮೆ “ಹಾಳು ಈ ಪ್ರಾಣಗಳನ್ನು ಪ್ರಾಯೋಪವೇಶದಿಂದ ಕೊನೆಗಾಣಿಸಲೆ?” ಎಂದುಕೊಳ್ಳುವನು. ಆದರೆ ಮರುಕ್ಷಣದಲ್ಲಿಯೆ ಆ ಧೀರನು “ಛೆ ಛೆ! ಆತ್ಮಹತ್ಯ ಹೇಡಿತನ. ಜೀವವೊಂದಿದ್ದರೆ ಇಂದಲ್ಲ ನಾಳೆ ಶುಭವನ್ನು ಕಂಡೇನು! ಆತ್ಮಹತ್ಯದಂತಹ ಹೇಯಕಾರ್ಯವನ್ನು ಕೈಕೊಂಡು ಇಹಪರಗಳಿಗೆ ದೂರನಾಗಲೆ?” ಎಂದು ಸಮಾಧಾನಪಟ್ಟುಕೊಳ್ಳುವನು. ಪಾಪಿ ರಾವಣನನ್ನು ಸಂಹರಿಸಿಬಿಡಲೆ?” ಎಂದು ಒಮ್ಮೆ ಆಲೋಚಿಸುವನು. ಆದರೆ ಮರುಕ್ಷಣದಲ್ಲಿಯೆ “ಉಹು! ಅವನನ್ನು ಎಳೆದೊಯ್ದು, ಅಗ್ನಿಗೆ ಪಶುವನ್ನು ಬಲಿಗೊಡುವಂತೆ, ಶ್ರೀರಾಮನಿಗೆ ಕಾಣಿಕೆಯಾಗಿ ಒಪ್ಪಿಸುವೆನು” ಎಂದುಕೊಳ್ಳುವನು. ಏನುಮಾಡಿದರೂ ತಾನು ಕೈಕೊಂಡ ಕಾರ್ಯವನ್ನು ಸಾಧಿಸಲಾಗುವುದಿಲ್ಲವೆಂಬ ಭಾವನೆ ಮನಸ್ಸಿನಲ್ಲಿ ಉದಿಸಲು ಆತನ ಮನಸ್ಸು ಮತ್ತೆ ಉದ್ವಿಗ್ನಗೊಳ್ಳುವುದು. ಜಿತೇಂದ್ರಿಯನಾಗಿ, ನಿಯತಾಹಾರದಿಂದ ಅಲ್ಲಿಯೆ ಇದ್ದುಬಿಡುವುದೇ ಸರಿಯೆಂದು ಆತನು ನಿರ್ಧರಿಸಿದನು. ಅಷ್ಟರಲ್ಲಿ ತನ್ನ ಎದುರಿಗೆ ಕಾಣಿಸುತ್ತಿದ್ದ ಅಶೋಕವನವನ್ನು ತಾನು ಹುಡುಕಿ ನೋಡಲಿಲ್ಲವಲ್ಲಾ ಎಂದುಕೊಂಡು ಅದನ್ನು ಶೋಧಿಸಹೊರಟನು. ಹೊರಡುವ ಮುನ್ನ ಅಷ್ಟವಸುಗಳಿಗೂ, ಏಕಾದಶ ರುದ್ರರಿಗೂ, ದ್ವಾದಶಾದಿತ್ಯರಿಗೂ, ಅಶ್ವಿನೀ ದೇವತೆಗಳಿಗೂ, ಸಪ್ತಮರುತ್ತುಗಳಿಗೂ ಭಕ್ತಿಯಿಂದ ಮನಸಾವಂದಿಸಿದನು. ಆ ವನದಲ್ಲಿ ದೇವಿಯೇನಾದರೂ ಕಂಡುಬಂದರೆ, ತಪಸ್ಸಿಗೆ ಫಲಪ್ರದಾನಮಾಡುವಂತೆ, ವಿರಹಪೀಡಿತನಾದ ಶ್ರೀರಾಮನಿಗೆ ಆಕೆಯನ್ನು ಒಪ್ಪಿಸುತ್ತೇನೆ ಎಂದುಕೊಂಡನು. ಮನಸ್ಸಿಗೇಕೋ ಸೀತೆಯನ್ನು ಕಂಡರೆ ಹೇಗೋ ಹಾಗೆ ಸಂತೋಷವಾಯಿತು. ಚಿರತಪಸ್ವಿನಿಯಾದ ಸೀತೆಯನ್ನು ಯಾವಾಗ ಕಾಣುವೆನೊ ಎಂದು ಚಿಂತಿಸುತ್ತಾ ರಾವಣಾಂತಃಪುರದಿಂದ ಒಂದೇ ನೆಗೆತಕ್ಕೆ ಅಶೋಕವನದ ಪ್ರಾಕಾರಕ್ಕೆ ಹಾರಿದನು.