ಶ್ರೀರಾಮಚಂದ್ರನು ಸೀತೆಯ ವಿಷಯವಾಗಿ ಹನುಮಂತನು ಹೇಳಿದ ಮಾತುಗಳನ್ನು ಕೇಳಿ ಸಂತೋಷಗೊಂಡನು. ಆ ಬಳಿಕ ತನ್ನ ಸುತ್ತಲೂ ನೆರೆದಿದ್ದ ಸುಗ್ರೀವಾದಿಗಳನ್ನು ನೋಡಿ ಪ್ರೀತಿಯುಕ್ತವಾದ ಈ ಮಾತುಗಳನ್ನು ನುಡಿದನು: “ಈ ಲೋಕದಲ್ಲಿ ಯಾವನೊಬ್ಬನಿಂದಲೂ ಮನಸ್ಸಿನಲ್ಲಿಯೂ ಕೂಡ ಯೋಚಿಸಲಾಗದ ಸಮುದ್ರಲಂಘನ ಮತ್ತು ಸೀತಾದರ್ಶನ ಕಾರ್ಯಗಳನ್ನು ಹನುಮಂತನು ಸಾಧಿಸಿದ್ದಾನೆ. ವಾಯು ಗರುಡರನ್ನು ಬಿಟ್ಟರೆ ಈ ನೂರು ಯೋಜನಗಳ ಅಗಲವಾದ ಸಮುದ್ರವನ್ನು ದಾಟಲು ಹನುಮಂತನಲ್ಲದೆ ಇನ್ನಾರು ಸಮರ್ಥರು? ದೇವದಾನವರಾಗಲಿ ಯಕ್ಷಗಂಧರ್ವರಾಗಲಿ ರಾವಣನಗರಿಯಾದ ಲಂಕೆಯನ್ನು ಕಣ್ಣೆತ್ತಿ ಕೂಡ ನೋಡಲು ಸಾಧ್ಯವಿಲ್ಲ. ಹೀಗಿರುವಲ್ಲಿ ಅದನ್ನು ಹೊಕ್ಕು, ನನ್ನ ಪ್ರಿಯೆಯಾದ ಸೀತೆಯನ್ನು ಕಂಡು ಮತ್ತೆ ಬದುಕಿ ಬರಲು ಸಾಧ್ಯವೆ? ಈ ಮಹತ್ಕಾರ್ಯವನ್ನು ಸ್ವಾಮಿಗಾಗಿ ಪ್ರೀತಿಯಿಂದ ನೆರವೇರಿಸಿದ ಹನುಮಂತನೆ ಭೃತ್ಯೋತ್ತಮ! ಈತನು ಮಾಡಿರುವ ಕೆಲಸವನ್ನು ನೆನೆದು ನನ್ನ ಮನಸ್ಸು ಕರಗಿ ನೀರಾಗಿದೆ. ನನಗೆ ಅತ್ಯಂತ ಪ್ರಿಯತಮಳಾದ ಸೀತೆಯ ವೃತ್ತಾಂತವನ್ನು ತಂದು ಹೇಳಿರುವ ಈತನಿಗೆ ಉಚಿತವಾದ ಬಹುಮಾನವನ್ನು ಮಾಡಲಿಲ್ಲವೆಂದು ಮನಸ್ಸು ತಪಿಸುತ್ತಿದೆ. ಈ ಸಮಯದಲ್ಲಿ ನಾನು ಈತನಿಗೆ ಕೊಡುವ ಆಲಿಂಗನವೆ ಬಹುಮಾನ ಸರ್ವಸ್ವವಾಗಲಿ. ” ಹೀಗೆಂದು ಹೇಳಿ ಸೀತಾ ವೃತ್ತಾಂತವನ್ನು ಕೇಳಿ ಪುಳಕಿತನಾದ ಶ್ರೀರಾಮಚಂದ್ರನು ಮಹಾತ್ಮನಾದ ಹನುಮಂತನನ್ನು ಗಾಢವಾಗಿ ಆಲಿಂಗಿಸಿದನು.

ಇದಾದಮೇಲೆ ಶ್ರೀರಾಮನು ಸ್ವಲ್ಪಹೊತ್ತು ಸುಮ್ಮನಿದ್ದನು. ಆಗ ಅವನನ್ನು ಮತ್ತೊಂದು ಚಿಂತೆ ಬಾಧಿಸತೊಡಗಿತು. ಸುಗ್ರೀವನಿಗೆ ಕೇಳುವಂತೆ ಮತ್ತೆ ಹನುಮಂತನಿಗೆ ಈ ರೀತಿ ನುಡಿದನು: “ಸೀತೆಯನ್ನು ಹುಡುಕುವ ಕೆಲಸ ನಿನ್ನಿಂದ ಚೆನ್ನಾಗಿ ನೆರವೇರಿತು. ಆದರೆ ಈ ಸಮುದ್ರವನ್ನು ನೆನೆದೊಡನೆಯೆ ನನ್ನ ಧೈರ್ಯ ಕುಂದುತ್ತದೆ. ಇದನ್ನು ದಾಟಿ ಇದರ ದಕ್ಷಿಣ ತೀರವನ್ನು ಸೇರಲು ಹೇಗೆತಾನೆ ಸಾಧ್ಯ? ಇದಕ್ಕೆ ಒಂದು ಉಪಾಯವನ್ನು ಸೂಚಿಸು.”

ಚಿಂತೆಯಿಂದ ಕೂಡಿದ ಶ್ರೀರಾಮಚಂದ್ರನನ್ನು ಸಮಾಧಾನಗೊಳಿಸಿ, ಸುಗ್ರೀವನು ಹೇಳಿದನು. “ಶ್ರೀರಾಮಚಂದ್ರ, ಸಾಮಾನ್ಯ ಮನುಷ್ಯನಂತೆ ನೀನು ದುಃಖಿಸುವುದು ತರವಲ್ಲ. ಮಾಡಿದ ಉಪಕಾರವನ್ನು ಮರೆತವನ ಸ್ನೇಹವನ್ನು ತೊರೆಯುವಂತೆ ಈ ದುಃಖವನ್ನು ದೂರಮಾಡು. ಸೀತೆಯ ವರ್ತಮಾನವೂ ಶತ್ರುಗಳ ನೆಲೆಯೂ ತಿಳಿದಿರುವಲ್ಲಿ ನಿನ್ನ ಈ ದುಃಖಕ್ಕೆ ಕಾರಣವೇನು? ನೀನು ಬುದ್ಧಿಶಾಲಿ, ಪಂಡಿತ, ಅಲ್ಲದೆ ಶಾಸ್ತ್ರಗಳನ್ನು ತಿಳಿದವನು. ಹೀಗಿರುವಲ್ಲಿ ಉತ್ಸಾಹಕ್ಕೆ ಭಂಗತರುವ ಈ ಬುದ್ಧಿಯನ್ನು ತೊರೆದುಬಿಡು. ಈ ಸಮುದ್ರವನ್ನು ದಾಟಿ ನಿನ್ನ ಶತ್ರುಗಳನ್ನು ನಾವು ನಾಶಮಾಡುತ್ತೇವೆ. ನಿರುತ್ಸಾಹದಿಂದ ಎಲ್ಲವೂ ನಾಶಹೊಂದುತ್ತದೆ. ನಿನಗೆ ಹಿತವನ್ನುಂಟುಮಾಡಲು ಅಗ್ನಿಯನ್ನು ಹೊಗಲೂ ಸಿದ್ಧರಾಗಿರುವ ಈ ವಾನರರ ಉತ್ಸಾಹವನ್ನು ನೋಡು. ಈ ಸಮುದ್ರಕ್ಕೆ ಸೇತುವೆಯನ್ನು ಕಟ್ಟುವ ಉಪಾಯವನ್ನು ಕುರಿತು ಯೋಚಿಸು. ಸೇತುವೆಯನ್ನು ಕಟ್ಟಿದೊಡನೆಯೆ ಸಮುದ್ರವನ್ನು ದಾಟಿ, ರಾವಣನನ್ನು ಇವರು ಕೊಂದರೆಂದೆ ತಿಳಿ. ಯುದ್ಧದಲ್ಲಿ ಬಿಲ್ಲನ್ನು ಹಿಡಿದ ನಿನ್ನನ್ನು ಇದಿರಿಸಲು ಯಾರಿಗೆ ತಾನೆ ಸಾಧ್ಯ? ಉದ್ಯೋಗಹೀನರಾಗಿ ಕ್ಷತ್ರಿಯರು ಕುಳಿತುಬಿಡುವುದು ಯೋಗ್ಯವಲ್ಲ. ಆದ್ದರಿಂದ ಈ ಕಡಲನ್ನು ದಾಟಲು ಉಪಾಯವನ್ನು ಚಿಂತಿಸು. ಆ ಬಳಿಕ ಎಲ್ಲವೂ ಸರಿಹೋಗುತ್ತದೆ. ಹೆಚ್ಚು ಹೇಳುವುದರಿಂದ ಏನು ಪ್ರಯೋಜನ? ಈಗ ಶುಭಸೂಚನೆಗಳು ಸುತ್ತಲೂ ಕಾಣಬರುತ್ತಿವೆ. ನನ್ನ ಮನಸ್ಸು ಹರ್ಷಗೊಂಡಿದೆ.”

ಸುಗ್ರೀವನ ಮಾತುಗಳು ಶ್ರೀರಾಮನಿಗೆ ಸಮಾಧಾನ ತಂದುವು. ರಾಮನು ತಪಸ್ಸನ್ನು ಮಾಡಿ ಇಲ್ಲವೆ ಸಮುದ್ರವನ್ನು ಶೋಷಿಸಿ ಸೇತುವೆಯನ್ನು ಕಟ್ಟುವ ಸಾಮರ್ಥ್ಯ ತನಗುಂಟೆಂದೂ, ಆದರೆ ತಾನು ಹಾಗೆ ಮಾಡುವುದಕ್ಕೆ ಮೊದಲು ಲಂಕಾನಗರದ ವಿಸ್ತಾರವನ್ನೂ ರಾವಣನ ಸೈನ್ಯದ ಬಲವನ್ನೂ ತನಗೆ ತಿಳಿಸಬೇಕೆಂದೂ ಹನುಮಂತನನ್ನು ತಿರುಗಿ ಕೇಳಿದನು. ಮಾತನಾಡುವುದರಲ್ಲಿ ಚತುರನಾದ ಹನುಮಂತನು ಶ್ರೀರಾಮನ ಪ್ರಶ್ನೆಗೆ ಈ ರೀತಿ ಉತ್ತರಕೊಟ್ಟನು. “ರಾಮಚಂದ್ರ, ನನಗೆ ತಿಳಿದಮಟ್ಟಿಗೆ ಈ ವಿಷಯವನ್ನು ನಿನ್ನಲ್ಲಿ ಬಿನ್ನೈಸುತ್ತೇನೆ; ಕೇಳು. ಲಂಕೆಯ ಜನರು ನಿತ್ಯತೃಪ್ತರು. ಸಂತೋಷದಿಂದ ಇರತಕ್ಕವರು. ಮದಿಸಿದ ಆನೆ ಕುದುರೆಗಳಿಂದಲೂ ವಿಪುಲವಾದ ರಥಗಳಿಂದಲೂ ಕೂಡಿದ ಲಂಕೆಯನ್ನು ಹೋಗುವುದು ಅಸಾಧ್ಯ. ಆ ನಗರದ ನಾಲ್ಕು ಮಹಾದ್ವಾರಗಳನ್ನು ಶೂರರೂ ಭಯಂಕರರೂ ಆದ ರಾಕ್ಷಸರು ರಕ್ಷಿಸುತ್ತಿರುವರು. ವಜ್ರ ವೈಢೂರ್ಯದ ದೊಡ್ಡ ಪ್ರಾಕಾರ ಆ ನಗರಿಗುಂಟು. ಆ ಪ್ರಾಕಾರದ ಸುತ್ತಲೂ ದೊಡ್ಡದಾಗಿಯೂ ಆಳವಾಗಿಯೂ ಕಂದಕವುಂಟು. ಅವನ್ನು ದಾಟುವುದು ಅಸಾಧ್ಯ. ರಾವಣನಿಗೆ ಯುದ್ಧವೆಂದರೆ ತುಂಬ ಆಸಕ್ತಿ. ಆದ್ದರಿಂದ ಸೈನ್ಯಗಳ ವಿಚಾರವನ್ನು ತಾನೇ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾನೆ. ಅವನು ಪ್ರಮತ್ತನಲ್ಲ. ಲಂಕಾನಗರಿ ತ್ರಿಕೂಟಾಚಲದ ಮೇಲಿರುವುದರಿಂದ ಆ ಪರ್ವತವನ್ನು ಏರಿ ಲಂಕೆಯನ್ನು ಪ್ರವೇಶಿಸುವುದು ದೇವತೆಗಳಿಂದಲೂ ಆಗದ ಕೆಲಸ. ಮೇಲಾಗಿ ದಕ್ಷಿಣ ಸಮುದ್ರವೇ ಲಂಕಾನಗರಕ್ಕೆ ಒಂದು ಬಲವಾದ ರಕ್ಷಣೆಯಂತಿದೆ. ಇಂಥ ನಗರವನ್ನು ನಾನಾಗಲೆ ಸುಟ್ಟು ಬಂದಿದ್ದೇನೆ. ರಾವಣನ ಸೈನ್ಯದ ಮುಖ್ಯರಾದ ರಾಕ್ಷಸರನ್ನು ಕೊಂದು ಬಂದಿದ್ದೇನೆ. ಈ ಕಡಲನ್ನು ದಾಟಿದರೆ ರಾವಣನು ಈ ವಾನರವೀರರಿಂದ ನಾಶವಾದನೆಂದೇ ತಿಳಿ. ಶುಭಮುಹೂರ್ತದಲ್ಲಿ ಚೈತ್ರಯಾತ್ರೆ ಹೊರಡಲು ಅಪ್ಪಣೆಮಾಡು.”

ಹನುಮಂತನ ಮಾತುಗಳನ್ನು ಕೇಳಿ ತೇಜಸ್ವಿಯಾದ ಶ್ರೀರಾಮಚಂದ್ರನು ಸುಗ್ರೀವನನ್ನು ಕುರಿತು “ಎಲೈ ಸುಗ್ರೀವನೆ, ಈಗ ಸೂರ್ಯನು ಆಕಾಶದ ಮಧ್ಯದಲ್ಲಿದ್ದಾನೆ. ಚೈತ್ರಯಾತ್ರೆಗೆ ಪ್ರಯಾಣಮಾಡಲು ಇದೇ ಒಳ್ಳೆಯ ಮುಹೂರ್ತವಾಗಿದೆ. ಈ ಮುಹೂರ್ತದಲ್ಲಿ ಪ್ರಯಾಣಮಾಡಿದರೆ ನಮಗೆ ಜಯ ಸಿದ್ಧ. ಅಲ್ಲದೆ ಈಗ ಒಳ್ಳೆಯ ಶಕುನಗಳಾಗುತ್ತಿವೆ. ನನ್ನ ಬಲಗಣ್ಣು ಹಾರುತ್ತಿದೆ” ಎಂದು ನುಡಿದನು. ಆ ಬಳಿಕ ಮಹಾತ್ಮನಾದ ಶ್ರೀರಾಮನು ಗಡ್ಡೆಗೆಣಸುಗಳನ್ನೂ ಹಣ್ಣು ಹಂಪಲುಗಳನ್ನೂ ಸರೋವರಗಳನ್ನೂ ರಕ್ಷಿಸಲೂ ರಾಕ್ಷಸರ ಗುಟ್ಟನ್ನು ಅರಿಯಲೂ ಅನುಕೂಲವಾಗುವಂತೆ ಶೂರರಾದ ಲಕ್ಷಮಂದಿ ವಾನರರೊಡನೆ ಮಾರ್ಗಶೋಧನೆಗಾಗಿ ನೀಲನೆಂಬ ಸೇನಾಪತಿಯನ್ನು ಕಳುಹಿಸಿಕೊಟ್ಟನು. ಅನಂತರ ರಾಮಲಕ್ಷ್ಮಣರು ಸುಗ್ರೀವನೊಡನೆಯೂ ಬಲಿಷ್ಠ ವಾನರಸೈನ್ಯದೊಡನೆಯೂ ಕೂಡಿ ದಕ್ಷಿಣ ದಿಕ್ಕನ್ನು ಕುರಿತು ವಿಜಯಯಾತ್ರೆಗೆ ಹೊರಟರು.

ವಿಜಯಯಾತ್ರೆಗೆಂದು ಹೊರಟ ವಾನರಸೇನೆಯ ಉತ್ಸಾಹ ಮುಗಿಲನ್ನು ಮುಟ್ಟುವಂತಿತ್ತು. ಹಾರುತ್ತ, ನೆಗೆಯುತ್ತ, ಹಣ್ಣುಗಳನ್ನು ತಿನ್ನುತ್ತ, ವೀರಜನಕವಾದ ವಾಕ್ಯಗಳನ್ನಾಡುತ್ತ ವಾನರಸೇನೆ ಮುಂದೆ ನಡೆಯಿತು. ನೀಲನು ಸೇನಾಪ್ರಯಾಣಕ್ಕಾಗಿ ಮಾರ್ಗವನ್ನು ಸರಿಪಡಿಸಿದನು. ಹತ್ತು ಕೋಟಿ ವಾನರರಿಂದ ಸುತ್ತುವರಿದ ಶತಬಲಿ ವಾನರಸೇನೆಯ ರಕ್ಷಕನಾಗಿ ನಡೆದನು. ಗಜ, ಅರ್ಕ, ಜಾಂಬವ ಮುಂತಾದ ವೀರರು ಆ ಮಹಾಸೇನೆಯ ಒಂದೊಂದು ಭಾಗವನ್ನು ರಕ್ಷಿಸುತ್ತ ಮುಂದೆ ನಡೆದರು. ಐರಾವತವನ್ನು ಏರಿದ ದೇವೇಂದ್ರನಂತೆ ಶ್ರೀರಾಮ ಲಕ್ಷ್ಮಣರು ಹನುಮಂತ ಅಂಗದರ ಹೆಗಲನ್ನೇರಿ ಶುಕ್ರ ಬೃಹಸ್ಪತಿಗಳಿಂದ ಕೂಡಿದ ಸೂರ್ಯಚಂದ್ರರಂತೆ ಹೊಳೆಯುತ್ತ ಪ್ರಯಾಣ ಹೊರಟರು. ಸಮುದ್ರದ ಪ್ರವಾಹಕ್ಕೆ ಸಮಾನವಾದ ವಾನರ ಸೇನೆಯಿಂದ ನಗರಗಳಿಗಾಗಲಿ ಜನರಿಗಾಗಲಿ ತೊಂದರೆಯುಂಟಾಗಲಿಲ್ಲ. ಈ ವಿಜಯಯಾತ್ರೆಯ ಸಮಯದಲ್ಲಿ ದಿಕ್ಕುಗಳು ನಿರ್ಮಲವಾಗಿ ಬೆಳಗಿದುವು. ಗಾಳಿ ಹಿತಕರವಾಗಿ ಬೀಸಿತು. ಹಕ್ಕಿ ಇಂಪಾಗಿ ಹಾಡಿದುವು.

ಹೀಗೆ ಮಹತ್ತಾದ ವಾನರಸೇನೆಯಿಂದ ಕೂಡಿ ಶ್ರೀರಾಮನು ನಡೆದು ಮಹೇಂದ್ರ ಪರ್ವತವನ್ನು ಸೇರಿದನು. ಆ ಪರ್ವತದ ಶಿಖರವನ್ನೇರಿ ನೋಡಿದೊಡನೆಯೆ ವಿಸ್ತಾರವಾದ ಸಾಗರ ಅವನ ಕಣ್ಣನ್ನು ಸೆಳೆಯಿತು. ಸಮುದ್ರವನ್ನು ಕಂಡೊಡನೆಯೆ ಶ್ರೀರಾಮನಿಗೆ ಸಂತೋಷವಾಗಿ, ಸುಗ್ರೀವ ಲಕ್ಷ್ಮಣರೊಡಗೂಡಿ ಆ ಪರ್ವತ ಶಿಖರವನ್ನಿಳಿದು ಸಮುದ್ರತೀರಕ್ಕೆ ಬಂದನು. ಸಮುದ್ರದ ತೀರದಲ್ಲಿ ನಿಂತು ಸುಗ್ರೀವನನ್ನು ಕುರಿತು “ಎಲೈ ಸುಗ್ರೀವನೆ, ನಾವು ಸಮುದ್ರತೀರವನ್ನೇನೊ ಸೇರಿದೆವು. ಇದರ ದಡವೇ ನನಗೆ ಕಾಣಿಸದು. ಈಗ ಇದನ್ನು ದಾಟುವ ಉಪಾಯವನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಸೇನೆಯನ್ನು ದಡದಲ್ಲಿಯೆ ಇಳಿಸು” ಎಂದನು. ಶ್ರೀರಾಮನ ಅಪ್ಪಣೆಯಂತೆ ಸಮುದ್ರದ ತೀರದಲ್ಲಿ ವಾನರ ಸೈನ್ಯ ಬೀಡಾರ ಮಾಡಿತು. ಆಗ ವಾನರರು ಮಾಡಿದ ಉತ್ಸಾಹದ ಧ್ವನಿ ಎರಡನೆಯ ಸಮುದ್ರಘೋಷದಂತೆ ಕೇಳಿಬರುತ್ತಿತ್ತು. ಕ್ರೂರ ಜಂತುಗಳಿಂದ ಕೂಡಿ ಗರ್ಜಿಸುತ್ತಲೂ ಚಂದ್ರೋದಯಕಾಲದಲ್ಲಿ ನೊರೆಯಿಂದ ಕೂಡಿ ನಗುತ್ತಿರುವುದೊ ಎಂಬಂತೆಯೂ ಇದ್ದ ಆ ಸಮುದ್ರವನ್ನು ನೋಡಿ ವಾನರರು ಸಂತೋಷಗೊಂಡರು. ಹಾಗೆಯೆ ಈ ಆಳವಾದ ಜಲರಾಶಿಯನ್ನು ದಾಟುವುದು ಹೇಗೆಂಬ ಚಿಂತೆ ಅವರನ್ನು ಆವರಿಸಿತು. ಆಕಾಶದಂತೆ ಇದ್ದ ಅದರ ವಿಸ್ತಾರ, ವಾಯುವಿನ ಹೊಡೆತದಿಂದ ಎದ್ದು ಬಿದ್ದು ಬರುತ್ತಿದ್ದ ತರಂಗರಾಶಿಗಳ ಶಬ್ದ ಇವುಗಳಿಂದ ವಾನರರು ಆಶ್ಚರ್ಯಗೊಂಡು ಸಮುದ್ರವನ್ನೇ ನೋಡುತ್ತ ಕುಳಿತುಕೊಂಡರು. ಆಗ ದಳಪತಿಯಾದ ನೀಲನು ಆ ಮಹಾ ಸೈನ್ಯವನ್ನು ಸಮುದ್ರದ ಉತ್ತರತೀರದಲ್ಲಿ ಚೆನ್ನಾಗಿ ನಿಲ್ಲಿಸಿ, ಮೈಂದ ಮತ್ತು ದ್ವಿವಿದರೆಂಬ ವಾನರೋತ್ತಮರನ್ನು ಅವರ ರಕ್ಷಣೆಗಾಗಿ ನಿಯಮಿಸಿದನು. ನೀಲನ ಅಪ್ಪಣೆಯಂತೆ ಅವರು ಸುತ್ತ ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸತೊಡಗಿದರು.