ಸ್ವಯಂಪ್ರಭೆಯಿಂದ ಬೀಳ್ಕೊಂಡ ವಾನರರು ಮುಂದೆ ನಡೆದು ಹೇರಲೆಗಳಿಂದ ಕೂಡಿ ಭೋರ್ಗರೆಯುತ್ತಿದ್ದ, ದಡವೇ ಕಾಣಿಸಿದಿದ್ದ ಮಹಾ ಸಾಗರವನ್ನು ಕಂಡರು. ಗಿಡಗಳಲ್ಲಿ ಅರಳಿದ್ದ ಹೂವುಗಳನ್ನು ನೋಡಿ, ವಸಂತ ಋತು ಕಾಲಿಟ್ಟುದನ್ನು ಅವರು ಅರಿತರು. ಗಿಡಮರಗಳಲ್ಲಿ ಚಿಗುರು ಹೂವುಗಳನ್ನು ಕಂಡ ಅವರು ಸುಗ್ರೀವನ ಶಾಸನವನ್ನು ನೆನೆದು ಭಯದಿಂದ ಭೂಮಿಯಲ್ಲಿ ಬಿದ್ದು ಬಿಟ್ಟರು. ಮತ್ತೆ ಕೆಲವರು ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದರು. ಅವರನ್ನು ಕಂಡು ಯುವರಾಜನಾದ ಅಂಗದನು “ವಾನರ ವೀರರೇ, ಬಿಲದಲ್ಲಿದ್ದ ನಮಗೆ ತಿಂಗಳಾದುದೇ ತಿಳಿಯಲಿಲ್ಲ. ಬುದ್ಧಿವಂತರೂ ನೀತಿನಿಪುಣರೂ ಆದ ನೀವು ನಮ್ಮನ್ನು ಮುಂದಿಟ್ಟುಕೊಂಡು ಈ ಕಾರ್ಯಕ್ಕಾಗಿ ಬಂದಿರಿ. ಈಗ ಅವಧಿ ಮೀರಿ ಹೋಗಿರುವಾಗ ಸುಗ್ರೀವನ ಬಳಿಗೆ ಹೋಗಲು ಹೇಗೆ ತಾನೆ ಸಾಧ್ಯ? ಅಪರಾಧಿಗಳಾದ ನಮ್ಮನ್ನು ಸುಗ್ರೀವನು ಖಂಡಿತವಾಗಿಯೂ ಕ್ಷಮಿಸನು. ಆದ್ದರಿಂದ ನಾವೆಲ್ಲರೂ ಪ್ರಾಯೋಪವೇಶ ಮಾಡುವುದೇ ಸರಿಯೆಂದು ತೋರುತ್ತದೆ. ಸೀತೆಯ ಸಮಾಚಾರ ನಮಗೆ ತಿಳಿದುಬಂದಿದ್ದರೆ ವಿಷಯವೇ ಬೇರೆಯಾಗುತ್ತಿತ್ತು. ಕಾಲಮೀರಿ ಸುಗ್ರೀವನ ಸಮೀಪಕ್ಕೈದಿ ಸಾಯುವುದಕ್ಕಿಂತ ಪ್ರಾಯೋಪವೇಶವೇ ಮೇಲಲ್ಲವೆ? ಸ್ವಭಾವದಿಂದ ಸುಗ್ರೀವನು ಮುಂಗೋಪಿ. ಸೀತೆಯ ವಿಷಯವನ್ನು ತಿಳಿದುಬರದ ನಮ್ಮನ್ನು ಕಂಡು ಶ್ರೀರಾಮನು ನಿರಾಶನಾಗುವನು. ಹೀಗಿರುವಲ್ಲಿ ಅಪರಾಧಿಗಳಾದ ನಮ್ಮನ್ನು ಸುಗ್ರೀವನು ಕೊಲ್ಲಿಸುವುದರಲ್ಲಿ ಸಂದೇಹವಿಲ್ಲ. ವಾಲಿಯ ಮಗನಾದ ನನ್ನನ್ನು ಕಂಡರೆ ಸುಗ್ರೀವನಿಗೆ ಬದ್ಧವೈರ. ಆದಕಾರಣ ಅಪರಾಧಿಗಳು ಸ್ವಾಮಿಯ ಬಳಿಗೆ ಹೋಗುವುದು ಉಚಿತವಲ್ಲ. ಸುಗ್ರೀವನಿಂದ ಸಾಯುವುದಕ್ಕಿಂತ ಪುಣ್ಯಕರವಾದ ಸಮುದ್ರದ ತೀರದಲ್ಲಿಯೇ ನಾನಂತೂ ಸಾಯುತ್ತೇನೆ” ಎಂದು ತನ್ನ ನಿಶ್ಚಯವನ್ನು ತಿಳಿಸಿದನು. ಅಂಗದನ ಮಾತಿಗೆ ತಾರನೆಂಬ ವಾನರನು, ರಾಮ ಸುಗ್ರೀವರ ಭಯವಿಲ್ಲದ ಈ ಗುಹೆಯಲ್ಲಿಯೆ ವಾಸಮಾಡಬಹುದೆಂದು ಸೂಚಿಸಿದನು. ಅಂತೂ ಸುಗ್ರೀವನ ಕಠೋರ ಶಾಸನವನ್ನು ನೆನೆದು ವಾನರರೆಲ್ಲ ನಡುಗಿಹೋದರು.

ಬುದ್ಧಿವಂತನಾದ ಅಂಗದನ ಮಾತಿನ ಒಳಗುಟ್ಟನ್ನು ಹನುಮಂತನು ಗ್ರಹಿಸಿದನು. ಯುವರಾಜನು ಸುಗ್ರೀವನಲ್ಲಿ ಭೇದೋಪಾಯವನ್ನು ಅನುಸರಿಸುತ್ತಿರುವನೆಂದು ಆ ಕಪಿವೀರನು ತಿಳಿದನು. ಸುಗ್ರೀವನಿಗೆ ಹಿತವನ್ನುಂಟುಮಾಡುವ ಸಲುವಾಗಿ, ಉಳಿದ ವಾನರರು ಅಂಗದನ ಮಾತಿಗೆ ಕಿವಿಗೊಡದಂತೆ, ಸಮಾಧಾನಗಳಿಂದ ಹನುಮಂತನು ಅವರಿಗೆ ತಿಳಿಯ ಹೇಳಿದನು. ಆ ಬಳಿಕ ಅಂಗದನನ್ನು ಕುರಿತು ಕೋಪದಿಂದ “ಅಂಗದ, ವಾಲಿಯಂತೆ ನೀನೂ ಶೂರ. ಕಪಿರಾಜ್ಯವನ್ನು ವಹಿಸಬಲ್ಲ ಶಕ್ತಿ ನಿನಗುಂಟು. ಕಪಿಯ ಚಿತ್ತ ಚಂಚಲ. ಆದ್ದರಿಂದ ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿರುವ ಯಾರೂ ನಿನ್ನ ಮಾತನ್ನು ನಡೆಸರು. ಚತುರೋಪಾಯಗಳಿಂದಲೂ ಈ ನೀಲ, ಈ ಸುಹೋತ್ರ, ಈ ಜಾಂಬವಂತ ಇವರನ್ನು ಸುಗ್ರೀವನಿಂದ ತೊರೆಸಿ ನಿನ್ನ ಕಡೆ ಸೆಳೆದುಕೊಳ್ಳಲಾರೆ. ಮುಚ್ಚುಮರೆಯಿಲ್ಲದೆ ನಿನ್ನೆದುರಿಗೆ ಸತ್ಯವನ್ನೇ ನುಡಿಯುತ್ತಿದ್ದೇನೆ. ಬಲಿಷ್ಠರೊಡನೆ ಬಲಹೀನರು ವೈರವನ್ನು ಕಟ್ಟಿಕೊಳ್ಳಕೂಡದು. ನೀನು ಈ ಗುಹೆಯನ್ನು ಹೊಕ್ಕರೇನಾಯಿತು? ಅದನ್ನು ಭೇಧಿಸುವ ಶಕ್ತಿ ರಾಮಲಕ್ಷ್ಮಣರ ಬಾಣಗಳಿಗುಂಟು. ಆಗ ವಾನರರೆಲ್ಲರೂ ಹೆಂಡತಿ ಮಕ್ಕಳನ್ನು ನೆನೆದು ನಿನ್ನನ್ನು ಕೈಬಿಡುವರು. ಬಂಧುಗಳಿಂದ ಸ್ನೇಹಿತರಿಂದ ದೂರನಾದ ನೀನು ಹುಲ್ಲಿಗಿಂತಲೂ ಕಡೆಯಾಗುವೆ. ಆದ್ದರಿಂದ ನಮ್ಮೊಡನೆ ನೀನು ನಮ್ರನಾಗಿ ಹಿಂದಿರುಗಿದರೆ ಸುಗ್ರೀವನು ನಿನ್ನನ್ನು ಮನ್ನಿಸುವನು. ನಿನ್ನ ತಾಯಿಯನ್ನು ಪ್ರೀತಿಸುತ್ತಿರುವ ಸುಗ್ರೀವನು ನಿನ್ನನ್ನು ಕೊಲ್ಲುವನೆ? ಸಂತಾನವಿಲ್ಲದ ಸುಗ್ರೀವನಿಗೆ ನೀನೇ ಮಗನಲ್ಲವೆ? ಆದ್ದರಿಂದ ನಾವೆಲ್ಲರೂ ಸುಗ್ರೀವನ ಬಳಿಗೆ ಹೋಗುವುದೇ ಉಚಿತ” ಎಂದು ಹಿತವಚನಗಳನ್ನಾಡಿದನು.

ಸ್ವಾಮಿಭಕ್ತನಾದ ಹನುಮಂತನು ಆಡಿದ ಮಾತುಗಳನ್ನು ಕೇಳಿ ಅಂಗದನು ಇಂತೆಂದನು : “ಸುಗ್ರೀವನಲ್ಲಿ ಕೃತಜ್ಞತೆ, ಶುಚಿತ್ವ, ಸರಳ ಸ್ವಭಾವ, ಧೈರ್ಯ ಇವಾವ ಗುಣಗಳೂ ಇರುವುದಿಲ್ಲ. ಅಣ್ಣ ಬದುಕಿರುವಾಗಲೆ ತಾಯಿಗೆ ಸಮಾನಳಾದ ಅತ್ತಿಗೆಯನ್ನು ಪರಿಗ್ರಹಿಸಿದವನಲ್ಲವೆ ಸುಗ್ರೀವ? ವಾಲಿ ದುಂದುಭಿಯೊಡನೆ ಕದನವಾಡುತ್ತಿರುವಾಗಲೆ ಬಿಲದ ಬಾಗಿಲಿಗೆ ಬಂಡೆಯನ್ನು ಮುಚ್ಚಿಬಂದವನಲ್ಲವೆ ಅವನು? ತನಗೆ ಉಪಕಾರ ಮಾಡಿದ ಶ್ರೀರಾಮನ ಕಾರ್ಯವನ್ನು ಮರೆತವನು ಆ ಸುಗ್ರೀವ. ಧರ್ಮಕ್ಕೆ ಕಟ್ಟುಬಿದ್ದು ಅವನೇನು ಅನ್ವೇಷಣ ಕಾರ್ಯಕ್ಕೆ ತೊಡಗಿರುವನೇ? ಅಲ್ಲ, ಲಕ್ಷ್ಮಣನ ಬಾಣಕ್ಕೆ ಹೆದರಿ. ಕೃತಘ್ನನೂ ಚಪಲಚಿತ್ತನೂ ಆದ ಸುಗ್ರೀವನಲ್ಲಿ, ಬದುಕಿ ಬಾಳಬೇಕೆನ್ನುವ ಯಾವನು ತಾನೆ ವಿಶ್ವಾಸವನ್ನಿಟ್ಟಾನು? ಮುಂದೆ ಹುಟ್ಟುವ ತನ್ನ ಮಗನಿಗಲ್ಲದೆ ನನಗೆ ಹೇಗೆ ತಾನೆ ಅವನು ರಾಜ್ಯವನ್ನು ಕೊಡುತ್ತಾನೆ? ಕಿಷ್ಕಿಂಧೆಗೆ ಹೋಗಿ ಸಾಯುವುದಕ್ಕಿಂತ ಪ್ರಾಯೋಪವೇಶವೇ ಮೇಲು, ನೀವೆಲ್ಲರೂ ನನಗೆ ಸಾಯಲು ಅನುಜ್ಞೆ ಕೊಟ್ಟು, ನಿಮ್ಮ ಮನೆಗಳಿಗೆ ತೆರಳಿ. ರಾಜಧಾನಿಗೆ ಹೋಗದೆ ನಾನು ಇಲ್ಲಿಯೆ ಸಾಯುತ್ತೇನೆ. ರಾಮಲಕ್ಷ್ಮಣರಿಗೂ ಸುಗ್ರೀವನಿಗೂ ನನ್ನ ನಮಸ್ಕಾರಗಳನ್ನು ತಿಳಿಸಿ, ಸ್ವಭಾವದಿಂದ ಕೋಮಲಳಾದ ನನ್ನ ತಾಯಿ ತನ್ನ ಮುದ್ದುಮಗನ ಸಾವನ್ನು ಕೇಳಿ ಪ್ರಾಣಬಿಡುವುದರಲ್ಲಿ ಸಂದೇಹವಿಲ್ಲ. ”

ಹೀಗೆಂದು ಹೇಳಿ ಅಂಗದನು ವೃದ್ಧರಾದ ವಾನರರಿಗೆ ನಮಸ್ಕರಿಸಿ, ಕಣ್ಣೀರುಬಿಡುತ್ತ ದರ್ಭೆಯನ್ನು ಹಾಸಿ ಅದರ ಮೇಲೆ ಮಲಗಿದನು. ಅಂಗದನನ್ನು ನೋಡಿ ಉಳಿದ ವಾನರರೆಲ್ಲ ಕಂಬನಿದುಂಬಿ ಅವನನ್ನು ಸುತ್ತುಗಟ್ಟಿ ತಾವೂ ಪ್ರಾಯೋಪವೇಶ ಮಾಡಲು ನಿಶ್ಚೈಸಿದರು. ಹೀಗೆ ನಿಶ್ಚೈಸಿ, ವಾನರರು ದರ್ಭೆಗಳನ್ನು ಹಾಸಿ, ನೀರನ್ನು ಮುಟ್ಟಿ, ಉತ್ತರಾಭಿಮುಖವಾಗಿ ಸಮುದ್ರ ತೀರದಲ್ಲಿ ಮಲಗಿದರು. ಹೀಗೆ ಪ್ರಾಯೋಪವೇಶದಲ್ಲಿ ದೃಢ ಮನಸ್ಸು ಮಾಡಿದ ವಾನರರು ಶ್ರೀರಾಮನ ವನವಾಸ, ಸೀತಾಪಹರಣ, ಸುಗ್ರೀವ ಸಖ್ಯ, ವಾಲಿವಧೆ ಇವೇ ಮೊದಲಾದ ವಿಷಯಗಳನ್ನು ಕುರಿತು ಮಾತನಾಡುತ್ತಿರಲು ಆ ಗುಜುಗುಜು ಧ್ವನಿ ಪರ್ವತಪ್ರದೇಶವನ್ನೆಲ್ಲ ತುಂಬಿ ಹೋಯಿತು.

* * *