ಬಿಲ್ಲಿಗೆ ಹೂಡಿದ ಅಂಬು ಹಾರಿಬರುವಂತೆ ವೇಗವಾಗಿ ಹಾರಿಬಂದ ಹನುಮಂತನು ಮಧ್ಯೆ ತೂರಿಬಂದು, ಮಾವಿನ ಮರಗಳ ಮಧ್ಯದಲ್ಲಿದ್ದ ಒಂದು ಲತಾಕುಂಜದಲ್ಲಿ ಇಳಿದನು. ಆಗ ವಸಂತಕಾಲವಾದುದರಿಂದ ಮರಗಿಡಗಳು ಪುಷ್ಪಸಮೃದ್ಧವಾಗಿದ್ದುವು. ಆದುದರಿಂದ ಆತನು ತೂರಿಬಂದ ರಭಸಕ್ಕೆ ಮರಗಿಡಗಳು ಅಲುಗಿ ಆತನ ದೇಹವೆಲ್ಲವೂ ಪುಷ್ಪಗಳಿಂದ ತುಂಬಿ, ಆ ವನಮಧ್ಯದಲ್ಲಿ ವಿಹಾರಾರ್ಥವಾಗಿ ಮಾಡಿಟ್ಟ ಹೂವಿನ ಬೆಟ್ಟದಂತೆ ಕಂಗೊಳಿಸುತ್ತಿದ್ದನು. ಹನುಮಂತನು ಭೂಮಿಗೆ ಅವತರಿಸಿದವನೇ ಒಮ್ಮೆ ಸುತ್ತಲೂ ದೃಷ್ಟಿಯನ್ನು ಚೆಲ್ಲಿದನು. ಆಹಾ! ಏನು ಚೆಲುವದು! ರಾವಣನ ರಸಿಕತೆಗೆ ಆ ಪ್ರಮದವನವೇ ಒಂದು ಹಿರಿಯ ಸಾಕ್ಷಿ ಎಂಬಂತ್ತಿತ್ತು. ಎಲ್ಲೆಲ್ಲಿ ನೋಡಿದರೂ ಫಲಪುಷ್ಪಭರಿತವಾದ ಗಿಡ, ಮರ ಬಳ್ಳಿಗಳು. ಅವೆಷ್ಟು ಬಗೆಯಾದ ವೃಕ್ಷಗಳು! ಅದೆಲ್ಲಿಂದ ಅಷ್ಟು ಸುಂದರವಾದ ವೃಕ್ಷಗಳನ್ನು ತಂದು ಅಲ್ಲಿ ನಾಟಿರಬಹುದು! ಎತ್ತಕಡೆ ನೋಡಿದರೂ ಕಣ್ಣಿಗೆ ಹಬ್ಬ! ಬಣ್ಣಬಣ್ಣದ ಹಕ್ಕಿಗಳು ತಮ್ಮ ಕೂಜಿತದಿಂದ ಕರ್ಣಾಮೃತವನ್ನು ಸುರಿಸುತ್ತಿವೆ! ಅಲ್ಲಲ್ಲಿಯೇ ಮರಗಳ ಕೊಂಬೆಗಳ ಮೇಲೆ ಕಾಮನ ಬಿಲ್ಲಿನಂತೆ ಗರಿಗೆದರಿಕೊಂಡು ಕೇಕಾಧ್ವನಿಯೊಡೆನೆ ನರ್ತಿಸುತ್ತಿರುವ ನವಿಲುಗಳು. ಮರಗಳಿಂದ ಉದುರಿದ ಹೂಗಳು ವಿಚಿತ್ರವಾದ ರಂಗವಲ್ಲಿಯಂತೆ ಕಾಣುತ್ತಿವೆ. ಹನುಮಂತನು ಆ ಶೋಭಾರಾಶಿಯನ್ನು ಕಣ್ಣುಗಳಿಂದ ಕುಡಿಯುತ್ತಾ ಕ್ಷಣಕಾಲ ಸ್ತಂಭಿತನಾಗಿ ನಿಂತುಬಿಟ್ಟನು. ಬೆಳುದಿಂಗಳ ಮಳೆಯಲ್ಲಿ ನೆನೆದು ನಿಂತಿದ್ದ ಆ ವನರಾಜಿಯ ಶೋಭೆಯನ್ನು ನೋಡುತ್ತಾ ಮೈಮರೆಯುವ ವೇಳೆಯಲ್ಲ ಅದು. ಸೀತಾದೇವಿಯ ಶೋಧನೆಗಾಗಿ ಹೊರಟಿದ್ದ ಹನುಮಂತನಿಗೆ ಆ ವನದ ಸೌಂದರ್ಯವನ್ನು ಕಂಡು ಸಂತೋಷವಾಗುವುದಕ್ಕೆ ಬದಲಾಗಿ ಕೋಪವುಕ್ಕಿತು. ಬಳಿಯಲ್ಲಿದ್ದ ಒಂದು ಅಸುಗೆಯ ಮರವನ್ನು ಹಿಡಿದು ಅಲ್ಲಾಡಿಸಿದನು. ಅದರ ಎಲೆಗಳೆಲ್ಲಾ ಬಳಬಳ ಉದುರಿ, ಜೂಜಿನಲ್ಲಿ ಸರ್ವಸ್ವವನ್ನೂ ಸೋತು ನಿರ್ಧನಿಕವಾಗಿ ನಿಂತ ಜೂಜಾಳಿನಂತೆ ಅದು ಬೋಳಾಗಿ ನಿಂತಿತು. ಅಷ್ಟರಿಂದ ಶಾಂತನಾಗದೆ ಅವನು ಒಂದೆರಡು ಮರಗಳನ್ನು ಬುಡಸಹಿತವಾಗಿ ಕಿತ್ತೆಸೆದನು. ಇಷ್ಟಾದಮೇಲೆ ತನ್ನ ಶೋಧನಕಾರ್ಯವನ್ನು ಮುಂದುವರಿಸಿದನು.

ಅದೇನು ಆ ವನದ ವೈಭವ! ರಸ್ತೆಯ ನೆಲಗಟ್ಟೆಲ್ಲವೂ ರತ್ನಖಚಿತವಾಗಿದೆ. ಅಲ್ಲಿಲ್ಲಿಯೆ ಸರೋವರಗಳು ಅವುಗಳಿಗೆಲ್ಲಾ ಸ್ಫಟಿಕನಿರ್ಮಿತವಾದ ಸೋಪಾನಗಳು. ಒಳಗೆ ತಳಕಾಣುವಂತಿರುವ ಸ್ವಚ್ಛವಾದ ತಿಳಿನೀರು; ಅಲ್ಲಲ್ಲಿಯೆ ಅರಳಿರುವ ಕನ್ನೈದಿಲೆಯ ಪುಷ್ಪಗಳು; ತಾವರೆ ನೈದಿಲೆಯೆಲೆಗಳ ಬಳಿ ವಿಶ್ರಾಂತಿಗೊಳ್ಳುತ್ತಿರುವ ಹಂಸಸಾರಸಾದಿ ಪಕ್ಷಿಗಳು. ಸರೋವರವನ್ನು ದಾಟಿ ಎರಡು ಹೆಜ್ಜೆ ಮುಂದೆ ಹೋದರೆ ಅಲ್ಲೊಂದು ಸಣ್ಣ ಪ್ರವಾಹ. ಅದರ ಎರಡು ದಂಡೆಗಳಲ್ಲಿಯೂ ಕಲ್ಪವೃಕ್ಷಗಳಂತೆ ಕಂಗೊಳಿಸುತ್ತಿರುವ ಮರಗಳ ಸಾಲು; ಬಣ್ಣಬಣ್ಣದ ಹೂಗಳಿಂದ ತುಂಬಿದ ಸಹಸ್ರಾರು ಬಳ್ಳಿಗಳು ಆ ವೃಕ್ಷಗಳನ್ನಾಲಿಂಗಿಸಿ ಬಳುಕುತ್ತಾ ನಿಂತಿವೆ. ಅವುಗಳ ಸಮೀಪದಲ್ಲಿಯೆ ಲತಾಗೃಹಗಳು. ಅವುಗಳನ್ನು ಹಾದು ಮುಂದೆ ಬಂದರೆ ಹಚ್ಚನೆಯ ಹಸುರನ್ನು ಹೊದ್ದುನಿಂತಿರುವ ಕೃತಕಪರ್ವತ. ಅದರ ನಾಲ್ಕೂ ಕಡೆಗಳಲ್ಲಿ ವಿಶ್ರಾಂತಿಗೃಹಗಳು. ಆ ಕೃತಕಪರ್ವತದಿಂದ ಸಣ್ಣ ಝರಿಯೊಂದು ಕೆಳಗಿಳಿದು ಬರುತ್ತಿದೆ. ಅದನ್ನೂ ದಾಟಿಹೋದರೆ ಸುತ್ತಲೂ ಜಗಲಿಗಳುಳ್ಳ ಸುಂದರ ವೃಕ್ಷಗಳು; ಸುವರ್ಣ ನಿರ್ಮಿತವಾದ ಸೋಪಾನಗಳು ಆ ಜಗಲಿಗಳಿಗೆ ಅಂತಹ ವೃಕ್ಷಗಳಲ್ಲಿ ಒಂದಾದ ಶಿಂಶುಪವೃಕ್ಷವೊಂದು ವನರಾಜನಂತೆ ಶೋಭಿಸುತ್ತಾ ನಿಂತಿತ್ತು. ಅದರ ಸುತ್ತಲೂ ಇದ್ದ ವೃಕ್ಷಗಳು ಸುವರ್ಣ ಕಾಂತಿಯಿಂದ ಬೆಳಗುತ್ತಿದ್ದುವು. ಹನುಮಂತನು ಆ ಶಿಂಶುಪವೃಕ್ಷವನ್ನು ಏರಿ ಕುಳಿತು, ಅಲ್ಲಿಂದ ಸೀತಾನ್ವೇಷಣೆಯಲ್ಲಿ ತತ್ಪರನಾಗುವೆನೆಂದುಕೊಂಡನು. ಸುತ್ತಲ್ಲಿದ್ದ ವೃಕ್ಷಗಳ ಕಾಂತಿಯಿಂದ ತನ್ನ ದೇಹವೆಲ್ಲವೂ ಸುವರ್ಣಮಯವಾದುದನ್ನು ಕಂಡು “ಭಲೆ! ಈಗ ನಾನೊಂದು ಚಿನ್ನದ ಕಪಿಯಾದೆ!” ಎಂದುಕೊಂಡು ಒಮ್ಮೆ ಮುಗುಳ್ನಗೆ ನಕ್ಕನು. ರಾಮನವಿರಹದಿಂದ ಕುದಿಯುತ್ತಿರುವ ಸೀತಾಮಾತೆ ದುಃಖೋಪಶಮನಕ್ಕಾಗಿ ಇಲ್ಲಿಗೆ ಬಂದರೂ ಬರಬಹುದು. ಶ್ರೀರಾಮನೊಡನಿದ್ದಾಗ ಆಕೆಗೆ ವನವಿಹಾರವೆಂದರೆ ಬಲು ಸಂತೋಷವಂತೆ! ಆದ್ದರಿಂದ ಇಷ್ಟು ರಮ್ಯವಾದ ಈ ಸ್ಥಳಕ್ಕೆ ಬಾರದೆ ಇರಳು. ಆಕೆ ಹೇಗಿದ್ದರೂ ಸಂಧ್ಯೋಪಾಸನೆಯನ್ನು ತಪ್ಪದೆ ಮಾಡತಕ್ಕವಳು. ಅದಕ್ಕಾಗಿ ಬೆಳಗು ಮುಂಜಾವಿಗೆ ಈ ನದಿಯ ಬಳಿಗೆ ಬಂದರೂ ಬರಬಹುದು. ಆಕೆ ಬದುಕಿರುವುದೇ ನಿಜವಾದರೆ ಈ ನಿರ್ಝರಿಣಿಗೆ ಬರದೆ ಇರುವುದಿಲ್ಲ” ಎಂದುಕೊಂಡು ಜಾನಕಿಯನ್ನು ಬಿಡುಗಣ್ಣಾಗಿ ನಿರೀಕ್ಷಿಸುತ್ತಾ ಹನುಮಂತನು ಆ ಮರದ ಮೇಲೆಯೇ ವಿಶ್ರಮಿಸಿದನು.