ಅಗೋ!! ಮರದ ಕೆಳಗೆ!. . . . . . ಕಳೆಗುಂದಿದ ಮುಖದಿಂದ ಕುಳಿತಿರುವ ಆ ದಿವ್ಯಮಂಗಳ ಮೂರ್ತಿ!

ಮಧ್ಯರಾತ್ರಿ ಮೀರಿತ್ತು. ಚಳಿಗಾಳಿ ಸುಯ್ಯೆಂದು ಬೀಸಲಾರಂಭಿಸಿತ್ತು. ಹನುಮಂತನು ತಾನು ಕುಳಿತಿದ್ದ ಶಿಂಶುಪವೃಕ್ಷದಿಂದ ಸುತ್ತಲೂ ನೋಡಿದನು. ಎಂತಹ ಮನಮೋಹಕ ದೃಶ್ಯವದು! ಬೆಳುದಿಂಗಳಲ್ಲಿ ಆ ನೋಟ ನೂರ್ಮಡಿ ಹೆಚ್ಚು ಸುಂದರವಾಗಿ ಕಂಗೊಳಿಸುತ್ತಿದೆ. ಸುತ್ತಲೂ ಪುಷ್ಪಸಮೃದ್ಧವಾದ ನೂರಾರು ಅಶೋಕವೃಕ್ಷಗಳು ಬೆಂಕಿಯ ಜ್ವಾಲೆಯಂತೆ ಬೆಳಗುತ್ತಾ, ‘ಅಶೋಕವನ’ವೆಂಬ ಆ ವನದ ಹೆಸರನ್ನು ಸಾರ್ಥಕಗೊಳಿಸಿದ್ದುವು. ಅವುಗಳ ಮಧ್ಯೆ ಅಲ್ಲಲ್ಲಿಯೆ ಕಮಲ ಕನ್ನೈದಿಲೆಗಳಿಂದ ತುಂಬಿದ ಕೊಳಗಳು; ಒಂದೊಂದು ವೃಕ್ಷದ ಕೆಳಗೂ ದಿವ್ಯವಾದ ಆಸನಗಳು; ರಸ್ತೆಗಳಿಗೆಲ್ಲಾ ಅನರ್ಘ್ಯವಾದ ರತ್ನಗಂಬಳಿಗಳನ್ನು ಹಾಸಿದೆ. ಹನುಮಂತನು ಆಶ್ಚರ್ಯದಿಂದ ಅವುಗಳನ್ನು ನೋಡುತ್ತಿರುವಲ್ಲಿ, ಮರಗಳ ಮಧ್ಯೆ ಅನತಿ ದೂರದಲ್ಲಿ ಇದ್ದ ಭವ್ಯ ಭವನವೊಂದು ಗೋಚರಿಸಿತು. ಆತನು ಹೆಚ್ಚು ಸದ್ದಿಲ್ಲದಂತೆ ಆ ಭವನವನ್ನು ಸಮೀಪಿಸಿದನು. ಸುತ್ತಲೂ ಸಾವಿರಾರು ಕಂಭಗಳನ್ನು ನಿಲ್ಲಿಸಿ ಕಟ್ಟಿದ ಉಪ್ಪರಿಗೆಯ ಮನೆ ಕೈಲಾಸದಂತೆ ಬೆಳ್ಳಗೆ ಬೆಳಗುತ್ತಿತ್ತು. ಅದರ ಸುತ್ತಲೂ ಸೋಪಾನಗಳು ಹವಳದಿಂದ ನಿರ್ಮಿತವಾದುವು. ಮನೆಯ ಮುಂದಿನ ಜಗಲಿ ಸುವರ್ಣಮಯ. ಆ ಭವನದ ದಿವ್ಯಕಾಂತಿಯಿಂದ ಹನುಮಂತನ ಕಣ್ಣುಗಳು ಕ್ಷಣಕಾಲ ಕೋರೈಸಿದಂತಾಯಿತು.

ಹನುಮಂತನಿಗೆ ಅರಮನೆಯ ದಿವ್ಯತೆಯನ್ನು ನೋಡಿ ಆಶ್ಚರ್ಯಪಡುತ್ತಾ ನಿಲ್ಲಲು ವ್ಯವಧಾನವಿರಲಿಲ್ಲ. ಅಗೋ, ಆ ಅರಮನೆಯ ಸಮೀಪದಲ್ಲಿಯೆ ಮರದ ಕೆಳಗೆ ಮಲಿನವಸ್ತ್ರಗಳನ್ನುಟ್ಟು ಕಳೆಗುಂದಿದ ಮುಖದಿಂದ ಕುಳಿತಿರುವ ಆ ದಿವ್ಯಮಂಗಳಮೂರ್ತಿ! ಅದರ ಸುತ್ತಲೂ ಕುಳಿತಿರುವ ಕರಾಳವದನೆಯರಾದ ರಾಕ್ಷಸಿಯರು. ಹನುಮಂತನು ಈ ದೃಶ್ಯವನ್ನು ಕಾಣುತ್ತಲೇ ಸ್ತಂಭಿತನಾದನು. ಅದೆಂತಹ ತೇಜೋರಾಶಿ, ಅದು! ಆ ಮಾಸಿದ ಬಟ್ಟೆಗಳು ಹೊಗೆಯಂತೆ ಆ ತೇಜೋರಾಶಿಯನ್ನು ಆವರಿಸಿವೆ. ಕಿತ್ತು ಬಿಸಿಲಿಗೆಳೆದ ಕಮಲದಂತೆ ಮುಖ ಬಾಡಿದೆ! ಕ್ಷಣಕ್ಷಣಕ್ಕೂ ಆಕೆ ನಿಟ್ಟುಸಿರು ಬಿಡುತ್ತಿದ್ದಾಳೆ! ತಲೆಗೂದಲೆಲ್ಲವೂ ಜಡೆಗಟ್ಟಿಹೋಗಿದೆ. ಹೂವಿಲ್ಲದ ಬಳ್ಳಿಯಂತೆ ಕಳೆಗೆಟ್ಟು ಆಕೆ ಕೇವಲ ಕೃಶಳಾಗಿ ಹೋಗಿದ್ದಾಳೆ! ನಾಯಿಗಳು ಮುತ್ತಿಕೊಂಡಿರುವ ಹುಲ್ಲೆಯಂತೆ ಪರಿತಪಿಸುತ್ತಿರುವ ಆ ದಿವ್ಯಮೂರ್ತಿಯನ್ನು ಕಂಡು ಹನುಮಂತನು ಆಕೆಯೇ ಸೀತಾಮಾತೆಯಿರಬೇಕೆಂದುಕೊಂಡನು. ಶ್ರೀರಾಮನು ಸೂಚಿಸಿದ್ದ ಕುರುಹುಗಳೆಲ್ಲವೂ ಆಕೆಯಲ್ಲಿ ಮೂಡಿರುವಂತೆ ಕಾಣಿಸಿತು ಆತನಿಗೆ. ಋಷ್ಯಮೂಕ ಪರ್ವತದಲ್ಲಿ ಆಕೆ ಆಭರಣಗಳನ್ನು ಕಟ್ಟಿ ಒಗೆದಿದ್ದ ಬಟ್ಟೆಯೂ ಇಲ್ಲಿ ಉಟ್ಟಿದ್ದ ಬಟ್ಟೆಯೂ ಒಂದೇ ಬಣ್ಣದವು; ಒಂದೇ ಜಾತಿಯವು. ಶ್ರೀರಾಮನು ಮಾಡಿದ ಸೀತಾಮಾತೆಯ ಅಂಗಪ್ರತ್ಯಂಗಗಳ ವರ್ಣನೆಗೂ ಇಲ್ಲಿ ಕಾಣುತ್ತಿರುವ ಸುಂದರ ವಿಗ್ರಹಕ್ಕೂ ಏನೂ ವ್ಯತ್ಯಾಸವಿಲ್ಲ. ಯಾರಿಗಾಗಿ ಶ್ರೀರಾಮಚಂದ್ರನು ಹಗಲಿರುಳೂ ಪರಿತಪಿಸುತ್ತಿರುವನೋ ಆ ತ್ರಿಭುವನಸುಂದರಿ ಈಕೆಯೆ ಎಂಬುದರಲ್ಲಿ ಏನೂ ಸಂಶಯವಿಲ್ಲ. ಈ ಸೌಕುಮಾರ್ಯವೂ ಈ ಸೌಂದರ್ಯವೂ ಈ ದೇಹ ಸೌಷ್ಠವವೂ ಮತ್ತಾರಿಗಿರಲು ಸಾಧ್ಯ? “ಆದರೆ ಈ ದೇವಿಯನ್ನು ಅಗಲಿಯೂ ಶ್ರೀರಾಮನು ದೇಹತ್ಯಾಗಮಾಡದೆ ಜೀವಧಾರಣೆ ಮಾಡಿಕೊಂಡಿರುವುದು ನಿಜವಾಗಿಯೂ ಆಶ್ಚರ್ಯವಾದುದೇ ಸರಿ! ಅದೆಂತಹ ಮಹನೀಯ ಆತ!” ಎಂದು ಮಾರುತಿ ಮನಸ್ಸಿನಲ್ಲಿಯೆ ಶ್ರೀರಾಮನನ್ನು ಶ್ಲಾಘಿಸಿದನು.

ಸೀತಾದೇವಿಯ ಶೋಚನೀಯ ಸ್ಥಿತಿಯನ್ನು ಕಂಡು ಹನುಮಂತನ ಕಣ್ಣು ಹನಿಗೂಡಿದುವು. “ಇದೆಂತಹ ಕಾಲಗತಿ! ಲೋಕಗುರುವಾದ ಶ್ರೀರಾಮನೆ ಕೈಹಿಡಿದ ಗಂಡನಾಗಿದ್ದರೂ ಈ ದೇವಿಗೆ ಇಂತಹ ದುಃಸ್ಥಿತಿ ತಪ್ಪಲಿಲ್ಲವಲ್ಲಾ! ಆದರೂ ಈಕೆಯ ಮನಸ್ಥೈರ್ಯ ಎಷ್ಟು ದೊಡ್ಡದು! ಪೂರ್ಣಪ್ರವಾಹದಿಂದ ಕೂಡಿದ ಗಂಗಾನದಿಯಂತೆ ಗಾಂಭೀರ್ಯಯುಕ್ತಳಾಗಿದ್ದಾಳೆಯಲ್ಲಾ! ತನ್ನ ಗಂಡನ ಪರಾಕ್ರಮವನ್ನೂ ಮೈದುನನ ಧೈರ್ಯ ಸ್ಥೈರ್ಯಗಳನ್ನೂ ಬಲ್ಲವಳಾದುದರಿಂದಲೇ ಈಕೆ ಇಷ್ಟು ತಾಳ್ಮೆಯಿಂದಿರುವಳು” ಎಂದು ಮನಸ್ಸಿನಲ್ಲಿ ಸಮಾಧಾನಪಟ್ಟುಕೊಳ್ಳಲು ಪ್ರಯತ್ನಿಸಿದನು. “ಶೀಲದಲ್ಲಿಯೂ ವಯಸ್ಸಿನಲ್ಲಿಯೂ ರೂಪದಲ್ಲಿಯೂ ಪರಸ್ಪರ ಅನುರೂಪವಾದ ದಾಂಪತ್ಯ ಸೀತಾರಾಮರದು” ಎಂದುಕೊಂಡನು. ಆತ. “ತನ್ನ ರೂಪಗುಣಗಳಿಂದ ಪತಿಯ ಮನಸ್ಸನ್ನು ಒಲಿಸಿಕೊಂಡಿದ್ದ ಈಕೆಗಾಗಿ ಶ್ರೀರಾಮನು ಎಷ್ಟು ಸಾಹಸಕಾರ್ಯಗಳನ್ನು ನಡಸಿಲ್ಲ? ಈಕೆಗಾಗಿಯೆ ಅಲ್ಲವೆ ರಾಮಚಂದ್ರನು ವಾಲಿಯನ್ನು ವಧಿಸಿದುದು? ವೀರ್ಯದಲ್ಲಿ ರಾವಣನಿಗೆ ಸಮಾನನಾದ ಕಬಂಧನನ್ನು ಸಂಹರಿಸಿದುದು ಈಕೆಗಾಗಿಯೆ. ಘೋರರೂಪಿಯಾದ ವಿರಾಧನು ಮೃತ್ಯುವಿಗೆ ತುತ್ತಾದುದು ಈಕೆಗಾಗಿಯೆ. ಜನಸ್ಥಾನದಲ್ಲಿದ್ದ ಅಸಂಖ್ಯಾತ ರಾಕ್ಷಸರು ನಿರ್ಮೂಲವಾದುದು ಈ ದೇವಿಗಾಗಿಯೆ. ಖರ ತ್ರಿಶಿರ ದೂಷಣ ಮೊದಲಾದ ರಾಕ್ಷಸರನ್ನು ಶ್ರೀರಾಮನು ತನ್ನ ಬಾಣಕ್ಕೆ ಆಹುತಿ ತೆಗೆದುಕೊಂಡುದೂ ಈ ಸೀತಾಮಾತೆಗಾಗಿಯೆ. ಈಕೆಗಾಗಿ ರಾಮಚಂದ್ರನು ಸಮುದ್ರಾಂತವಾದ ಸಕಲ ಭೂಮಂಡಲವನ್ನೂ ತಲೆಕೆಳಗಾಗಿ ಮಾಡಿದರೂ ಅದು ಅತಿಶಯವೇನೂ ಅಲ್ಲ. ತ್ರಿಲೋಕಾಧಿಪತ್ಯವನ್ನೂ, ಈ ಜಾನಕೀದೇವಿಯನ್ನೂ ಪರಸ್ಪರ ಹೋಲಿಸಿದಾಗ ತ್ರಿಲೋಕಾಧಿಪತ್ಯವೆಂಬುದು ಈ ಧರ್ಮಶೀಲಳ ಪಾದರೇಣುವಿಗೂ ಸಮಾನವಾಗಲಾರದು. ಅಯೋನಿಜೆಯೆಂದು ಜಗದ್ವಿಖ್ಯಾತಳಾದ ಈ ಶ್ರೀರಾಮಪತ್ನಿಗೆ ಹುಲು ರಾಕ್ಷಸಿಯರ ಕಾವಲೆ? ಸಮಸ್ತ ರಾಜಭೋಗಗಳನ್ನೂ ತೃಣವೆಂದು ಬಗೆದು ಗಂಡನನ್ನು ಹಿಂಬಾಲಿಸಿ ಅರಣ್ಯವಾಸವನ್ನು ಕೈಕೊಂಡ ಸಾಧ್ವೀಶಿರೋಮಣಿಗೆ ಈ ದುರವಸ್ಥೆಯೆ? ಪತಿ ಶುಶ್ರೂಷೆಯಲ್ಲಿಯೆ ನಿರತಳಾಗಿ, ಕಾಡಿನ ಗೆಡ್ಡೆಗೆಣಸುಗಳಿಂದಲೆ ತೃಪ್ತಿಗೊಂಡು, ಕಟ್ಟಡವಿಯಲ್ಲಿಯೂ ನಗುಮುಖದಿಂದ ಶ್ರೀರಾಮನ ಮನಸ್ಸಿಗೆ ಆನಂದದಾಯಕಳಾಗಿದ್ದ ಈ ದೇವಿಗೆ ಇಂತಹ ನರಕಯಾತನೆಯೆ? ಮುಗುಳ್ನಗೆಯ ಮೆಲುನುಡಿಗಳಲ್ಲಿ ಬೆಳದಿಂಗಳ ತಂಪೆರುಚುತ್ತಿದ್ದ ಈ ಸುಮಕೋಮಲೆ ಈ ರಾಕ್ಷಸರಿಂದಾಗುತ್ತಿರುವ ಈ ಯಾತನೆಗಳನ್ನು ಸಹಿಸಬೇಕೆ? ಈಕೆಯನ್ನು ಪುನಃ ಪಡೆದಾಗ ಶ್ರೀರಾಮನ ಸಂತೋಷಕ್ಕೆ ಪಾರವುಂಟೆ? ದಾಹದಿಂದ ದಹಿಸುತ್ತಿರುವವನು ಅರವಟಿಗೆಯನ್ನು ಕಂಡಂತೆ ಈತನು ಮತ್ತೊಮ್ಮೆ ಸೀತೆಯನ್ನು ಕಂಡಾಗ ಸಂತೋಷಗೊಳ್ಳುವನು. ಕಪ್ಪಾದ ಕುರುಳುಳ್ಳ ಈ ಕಮಲ ನೇತ್ರೆ ಸುಖಕ್ಕೆ ಅರ್ಹಳೆ ಹೊರತು ಸಂಕಟಕ್ಕೆ ಅರ್ಹಳಲ್ಲ. ಈಕೆಯನ್ನು ಕಂಡು ಕಪಿಯಾದ ನನಗೂ ಇಷ್ಟು ತಳಮಳ ಆಗುತ್ತಿರುವಾಗ ದಯಾಳುವಾದ ಶ್ರೀರಾಮನಿಗೆ ಇನ್ನೆಷ್ಟು ಸಂಕಟವಾಗುತ್ತಿರುವುದೊ! ರಾಮಲಕ್ಷ್ಮಣರ ಕಾವಲಿನಲ್ಲಿ ನಖಮಾಂಸದಂತೆ ಸುರಕ್ಷಿತಳಾಗಿದ್ದ ಈಕೆ ಈಗ ಈ ಘೋರರಾಕ್ಷಸರ ಕಾವಲಿಗೆ ಒಳಗಾಗಬೇಕಾಯಿತೆ! ಈ ವಸಂತಕಾಲದಲ್ಲಿ ಪುಷ್ಪಭಾರದಿಂದ ಬಾಗಿ ಬಳಕುತ್ತಿರುವ ಈ ಅಶೋಕವೃಕ್ಷಗಳನ್ನು ಕಂಡು ಆಕೆಯ ದುಃಖ ಎಷ್ಟು ಉಲ್ಬಣಗೊಂಡಿದೆಯೊ!” ಹೀಗೆಂದು ನೆನೆನೆನೆದ ಆ ಹನುಮಂತನ ಕಣ್ಣುಗಳಲ್ಲಿ ದಿವ್ಯಾಶ್ರು ಬಿಂದುಗಳುಕ್ಕಿ ತೊಟ್ಟಿಕ್ಕಿದುವು.

ಸೀತಾದೇವಿಯನ್ನು ಬಳಸಿ ಕುಳಿತಿದ್ದ ಆ ಘೋರ ರೂಪದ ರಕ್ಕಸಿಯರನ್ನು ಕಂಡು ಹನುಮಂತನಿಗೆ ಕೂಡ ಅಸಹ್ಯವಾಯಿತು. ಒಂದೆ ಕಣ್ಣುಳ್ಳವಳು, ಒಂದೆ ಕಿವಿಯುಳ್ಳವಳು, ಕಣ್ಣು ಕಿವಿಗಳೇ ಇಲ್ಲದವಳು, ಊರುಗೋಲಿನಂತಹ ಕಿವಿಯುಳ್ಳವಳು, ತಲೆಯಮೇಲೆ ಮೂಗುಗಳುಳ್ಳವಳು, ಜೋಲು ಹೊಟ್ಟೆಯವಳು, ಜೋಲು ತುಟಿಯವಳು, ಚಪ್ಪಟೆ ಮೂಗಿನವಳು, ಗೂನುಬೆನ್ನವಳು, ಹಂದಿಯಂತೆ ಮುಖವುಳ್ಳವಳು, ಕತ್ತೆಯ ಮುಖದವಳು, ಒಂಟೆಯ ಕಾಲಿನವಳು, ಆನೆಯ ಕಾಲಿನವಳು, ಜೋಲು ನಾಲಿಗೆಯವಳು – ಹೀಗೆ ವಿಕಾರವಿಕಾರವಾದ ಆಕಾರವುಳ್ಳ ರಾಕ್ಷಿಸಿಯರು ಶೂಲ ಮುದ್ಗರ ಮೊದಲಾದ ಆಯುಧಗಳನ್ನು ಹಿಡಿದು ಕುಳಿತಿದ್ದರು. ಕೆಲವರು ಮದ್ಯಪಾನ ಮಾಡುತ್ತಿದ್ದಾರೆ, ಕೆಲವರು ಮಾಂಸಗಳನ್ನು ಹಲ್ಲುಗಳಿಂದ ಕಿತ್ತುಕಿತ್ತು ತಿನ್ನುತ್ತಾ ಕುಳಿತಿದ್ದಾರೆ. ಕೆಲವರಿಗೆ ಮೈಕೈಗಳೆಲ್ಲಾ ರಕ್ತಮಯವಾಗಿದೆ. ಈ ಪಿಶಾಚಗಳ ಮಧ್ಯದಲ್ಲಿ ಕುಳಿತಿದ್ದ ಸೀತಾದೇವಿ ದುಃಖದಿಂದ ತಳಮಳಿಸುತ್ತಿರಲು, ಕ್ಷೀಣಪುಣ್ಯದಿಂದ ನೆಲಕ್ಕುದುರಿದ ನಕ್ಷತ್ರದಂತೆ ಕಾಣುತ್ತಿದ್ದಳು. ಸ್ವಭಾವಸುಂದರವಾದ ಆಕೆಯ ದೇಹವು ಮಲಿನವಾಗಿ ಪಂಕಮಗ್ನವಾದ ಪದ್ಮದಂತೆ ವ್ಯಕ್ತಾವ್ಯಕ್ತವಾದ ಕಾಂತಿಯಿಂದ ಕೂಡಿದ್ದಿತು. ಆಕೆಗೆ ಅಲ್ಲಿ ರಕ್ಷಕರಾರು ಇರಲಿಲ್ಲ; ಆದರೇನು? ಆಕೆಯ ಸೌಶೀಲ್ಯವೆ ಆಕೆಗೆ ಸಂರಕ್ಷಣ ಶಕ್ತಿಯಾಗಿದ್ದಿತು. ಆಕೆಯನ್ನು ನೋಡಿದಂತೆಲ್ಲಾ ಹನುಮಂತನಿಗೆ ಭಕ್ತಿ ಏರುತ್ತಾ ಹೋಯಿತು. ಮನಸ್ಸಿನಲ್ಲಿಯೇ ಆಕೆಗೆ ನಮಸ್ಕರಿಸಿ, ಶ್ರೀರಾಮ ಲಕ್ಷ್ಮಣರನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದನು.