ಒಂದು ಹುಲ್ಲುಕಡ್ಡಿಯನ್ನೇ ತನ್ನೆದುರಿಗಿಟ್ಟುಕೊಂಡು ಅದರೊಡನೆ ಮಾತನಾಡುವ ನೆಪದಿಂದ ಸೀತೆ ರಾವಣನಿಗೆ ಪ್ರತ್ಯತ್ತರ ಕೊಟ್ಟಳು.

ರಾತ್ರಿಯ ಕಡೆಯ ಜಾವದ ವೇಳೆ, ಬೆಳಗು ಮುಂಜಾವಿಗೇ ಎದ್ದು ಉಚ್ಚಕಂಠದಿಂದ ವೇದಘೋಷ ಮಾಡುತ್ತಿರುವ ಬ್ರಹ್ಮರಾಕ್ಷಸರ ಧ್ವನಿ ದೂರದಿಂದ ಕೇಳಿಬರುತ್ತಿತ್ತು. ಅರಮನೆಯಲ್ಲಿ ಮಂಗಳ ವಾದ್ಯಗಳು ಭೋರ್ಗರೆಯಲು ಮೊದಲಾಗಿವೆ. ಆ ಧ್ವನಿಯಿಂದ ರಾವಣನಿಗೆ ಎಚ್ಚರವಾಯಿತು. ಎದ್ದು ಕುಳಿತನು. ಕನಸುಮನಸಿನಲ್ಲಿಯೂ ಅವನಿಗೆ ಸೀತೆಯ ಸ್ಮರಣೆಯೇ. ಮದೋನ್ಮತ್ತನಾದ ಆ ರಾವಣ ದಿಗ್ಗನೆ ಮೇಲಕ್ಕೆದ್ದು ಸರ್ವಾಲಂಕಾರಗಳಿಂದ ಭೂಷಿತನಾದನು. ಆತನು ವಸನಭೂಸಣಗಳಿಂದ ಸಿದ್ಧನಾಗುವಷ್ಟರಲ್ಲಿ ರಾಣೀವಾಸದ ನೂರು ಜನ ಹೆಣ್ಣುಗಳು ಆತನ ಸೇವೆಗೆ ಸಜ್ಜಾದರು. ಆತನಿಗೆ ದೀವಟಿಗೆಗಳನ್ನು ಹಿಡಿದು ದಾರಿತೋರುತ್ತಾ ಕೆಲವರು, ಚಾಮರ ಹಾಕುತ್ತಾ ಮತ್ತೆ ಕೆಲವರು, ಪಾನಪಾತ್ರೆಗಳನ್ನು ಹಿಡಿದು ಮತ್ತೆ ಕೆಲವರು, ಆಯುಧಪಾಣಿಗಳಾದ ಅಂಗರಕ್ಷಕರಂತೆ ಇನ್ನು ಹಲವರು ಹೀಗೆ ಆ ಹೆಣ್ಣುಗಳು ಮೇಘವನ್ನು ಅನುಸರಿಸುವ ಮಿಂಚಿನಂತೆ ಬಳಸಿ ಬರುತ್ತಿರಲು ರಾವಣೇಶ್ವರನು ಅರಮನೆಯನ್ನು ಬಿಟ್ಟು ಹೊರಟು ಅಶೋಕವನವನ್ನು ಪ್ರವೇಶಿಸಿದನು. ಕಡೆದ ಹಾಲಿನ ನೊರೆಯಂತೆ ಬೆಳ್ಳಗೆ ಬೆಳಗುತ್ತಿದ್ದ ದುಕೂಲವನ್ನು ಧರಿಸಿ, ಠೀವಿಯಿಂದ ಬರುತ್ತಿದ್ದ ಆತನನ್ನು ನೋಡಿದರೆ, ಕುಸುಮ ಚಾಪವನ್ನು ತೊರೆದುಬಂದಿರುವ ಮದನನಂತೆ ಕಾಣುತ್ತಿದ್ದನು. ವೀರ್ಯದ ಕೆಚ್ಚಿನಿಂದಲೂ ಮಧುಪಾನ ಮದದಿಂದಲೂ ಓಲಾಡುತ್ತಾ ಬರುತ್ತಿರುವಾಗ ಹೆಗಲಮೇಲೆ ಹೊದ್ದಿದ್ದ ಬಿಳಿಯ ದುಕೂಲವು ಭುಜ ಕೀರ್ತಿಗಳಲ್ಲಿ ತಾಕಿಕೊಳ್ಳಲು ಅದನ್ನು ಅವನು ಗಾಂಭೀರ್ಯದಿಂದ ಸೆಳೆದುಕೊಳ್ಳುತ್ತಾ ಬರುತ್ತಿದ್ದನು. ಶಿಂಶುಪವೃಕ್ಷದಲ್ಲಿ ಕುಳಿತು ಸೀತಾಮಾತೆಯನ್ನು ವೀಕ್ಷಿಸುತ್ತಿದ್ದ ಹನುಮಂತನಿಗೆ ಈ ರಾಜಠೀವಿ ದೂರದಿಂದಲೆ ಕಣ್ಣಿಗೆ ಬಿತ್ತು. ಆತನು ದಟ್ಟವಾಗಿ ಎಲೆ ತುಂಬಿದ ರೆಂಬೆಗಳನ್ನು ಹುದುಗಿಕೊಂಡು, ಆಗಮಿಸುತ್ತಿರುವ ವ್ಯಕ್ತಿಯನ್ನೇ ದೃಷ್ಟಿಸಿ ನೋಡುತ್ತಾ ಕುಳಿತನು. ನೋಡುನೋಡುತ್ತಿದ್ದಂತೆ ರಾವಣನು ಅಶೋಕ ವೃಕ್ಷಗಳಿಂದ ನಿಬಿಡವಾಗಿದ್ದ ಆ ರಮ್ಯಪ್ರದೇಶವನ್ನು ಪ್ರವೇಶಿಸಿದನು. ಅವನ ವೇಷಭೂಷಣಗಳನ್ನು ಸುತ್ತಣ ಪರಿವಾರವನ್ನೂ ಕಂಡು ಹನುಮಂತನಿಗೆ ಅವನು ರಾವಣನೇ ಇರಬೇಕೆಂದು ನಿಶ್ಚಯವಾಯಿತು. ವನವನ್ನು ಪ್ರವೇಶಿಸಿದ ರಾವಣನು ನೀಲವೇಣಿಯಾದ ಸೀತೆಯ ಬಳಿಗೆ ನೇರವಾಗಿ ಬಂದನು.

ರಾವಣನನ್ನು ಕಾಣುತ್ತಲೆ ಸೀತಾದೇವಿ ಬಿರುಗಾಳಿಗೆ ಸಿಕ್ಕ ಬಾಳೆಯಂತೆ ಗಡಗಡನೆ ನಡುಗಿದಳು. ಆಕೆಯ ಕಣ್ಣುಗಳಲ್ಲಿ ನೀರು ಧಾರಕಾರವಾಗಿ ಪ್ರವಹಿಸಲು ಮೊದಲಾಯಿತು. ಗುಬ್ಬಚ್ಚಿಯಂತೆ ಮುದುರಿಕೊಂಡು ಕುಳಿತು, ಕಣ್ಣುಮುಚ್ಚಿ, ಆಕೆ ಶ್ರೀರಾಮನನ್ನು ಧ್ಯಾನಿಸಲು ಮೊದಲು ಮಾಡಿದಳು. ಬತ್ತಿದ ತೊರೆಯಂತೆ ಕಾಂತಿಹೀನಳಾಗಿದ್ದ ಆಕೆಗೆ ರಾವಣನು ಬರುತ್ತಿರುವ ಕಡೆ ಕಣ್ಣೆತ್ತಿ ನೋಡುವುದಕ್ಕೂ ಹೆದರಿಕೆ. ತನ್ನ ಕುಲದೇವತೆಗೆ ಮನಸ್ಸಿನಲ್ಲಿಯೆ ಮಣಿದು, ಈ ರೌರವದಿಂದ ತಪ್ಪಿಸುವಂತೆ ಬೇಡಿಕೊಂಡಳು.

ಸೀತೆಯ ರೂಪಕ್ಕೆ ಕರಗಿಹೋಗಿದ್ದ ರಾಣವನು ಆಕೆಯನ್ನು ಸಮೀಪಿಸುತ್ತಲೇ ತನ್ನ ಮನೋಭಿಪ್ರಾಯವನ್ನು ಆಕೆಗೆ ತಿಳಿಸಿದನು: “ಮೋಹನಾಂಗಿ, ನನ್ನನ್ನು ನೋಡಿ ಹೆದರುವುದೇಕೆ? ನಿನ್ನ ಸುಂದರವಾದ ದೇಹವನ್ನು ಹಾಗೆ ಸಂಕೋಚಗೊಳಿಸುವುದೇಕೆ? ಹೇ ವಿಶಾಲಾಕ್ಷಿ, ನಾನು ನಿನ್ನನ್ನು ಕಾಮಿಸುತ್ತಿದ್ದೇನೆ. ಪ್ರಿಯೆ ನನ್ನನ್ನು ಅನುಗ್ರಹಿಸು. ನೀನು ಸರ್ವಾಂಗ ಗುಣಸಂಪನ್ನೆ. ಸರ್ವಲೋಕ ಮನೋಹರಿ. ಅಂತಹ ನೀನು ಜಗತ್ತಿನಲ್ಲಿ ಯಾರಿಗೂ ಹೆದರಬೇಕಾದುದಿಲ್ಲ. ಎಲೈ ಭೀರುವೆ, ಪರಸ್ತ್ರೀ ಹರಣವು ರಾಕ್ಷಸರಾದ ನಮಗೆ ಕುಲಧರ್ಮ; ಆದ್ದರಿಂದ ನಿನ್ನನ್ನು ಅಪಹರಿಸಿ ತಂದಿದ್ದೇನೆ. ಅದರಿಂದಾಗಿ ನನ್ನನ್ನು ದೋಷಿಯೆಂದು ನೀನು ಭಾವಿಸಕೂಡದು. ಎಲೆ ಮೈಥಿಲಿ, ನಾನು ಅತಿಕಾಮಿ, ನಿಜ; ಆದರೆ ನೀನಾಗಿ ನನ್ನನ್ನು ಕಾಮಿಸಿದ ಹೊರತು ನಾನು ನಿನ್ನನ್ನು ಮುಟ್ಟುವುದಿಲ್ಲ. ದೇವಿ, ನನ್ನಲ್ಲಿ ನಂಬುಗೆಯನ್ನಿಡು; ನಿನ್ನ ಪ್ರೇಮವನ್ನು ನೀಡು, ಸೀತಾ! ನೀನು ದುಃಖಾಕ್ರಾಂತಳಾಗಬೇಡ. ಕೋಮಲಾಂಗಿಯಾದ ನೀನು ಹೀಗೆ ಕೊಳಕು ಬಟ್ಟೆಗಳನ್ನು ಧರಿಸಿ ಭೂಮಿಯ ಮೇಲೆ ಶಯನಿಸುತ್ತಾ, ನಿಷ್ಕಾರಣವಾಗಿ ನಿರಶನವ್ರತವನ್ನು ನಡಸುತ್ತಿರುವುದು ಯುಕ್ತವಾದುದಲ್ಲ. ಮೈಥಿಲಿ, ನೀನು ನನ್ನನ್ನು ವರಿಸು; ನನ್ನ ಅರಮನೆಯಲ್ಲಿ ನಿನಗೆ ಯಾವುದಕ್ಕೆ ಕೊರತೆಯಿದೆ? ಪರಿಮಳದ್ರವ್ಯಗಳಿಗಾಗಲಿ ವಸನಭೂಷಣಗಳಿಗಾಗಲಿ ಹಂಸತೂಲಿಕಾತಲ್ಪಗಳಿಗಾಗಲಿ ಕೊರತೆಯಿದೆಯೆ? ಹೇ ಸುಂದರಿ, ನೀನು ಸ್ತ್ರೀಯರಲ್ಲಿ ರತ್ನಪ್ರಾಯೆ. ನಿನ್ನ ಸುಂದರವಾದ ಅವಯವಗಳು ಅಲಂಕಾರವಿರಹಿತವಾಗಿ ಇರಬಾರದು! ಯೌವನವು ಜಲಪ್ರವಾಹದಂತೆ. ಒಮ್ಮೆ ಕಳೆದುಹೋದರೆ ಮತ್ತೆ ಬಂದೀತೆ? ಜಾನಕಿ, ನಿನ್ನ ಈ ಸುಂದರ ದೇಹವನ್ನು ಕಂಡು ಯಾವ ಪುರುಷನು ತಾನೆ ಮನಸ್ಸನ್ನು ಜಯಿಸಬಲ್ಲನು? ಬ್ರಹ್ಮನಿಗೂ ಕೂಡ ಅದು ಸಾಧ್ಯವಿಲ್ಲ. ಮನೋಹರಿ, ನೀನು ನನ್ನ ಮಡದಿಯಾಗು. ನನ್ನ ರಾಣಿವಾಸದಲ್ಲಿರುವ ಸುರ ಸುಂದರಿಯರೆಲ್ಲರೂ ನಿನ್ನ ದಾಸಿಯರಾಗುವರು. ನೀನು ಅವರ ಸೇವೆಯನ್ನು ಕೈಕೊಳ್ಳುತ್ತಾ ತನ್ನ ಪಟ್ಟಮಹಿಷಿಯಾಗು ನನ್ನ ಸಕಲೈಶ್ವರ್ಯವನ್ನೂ ನಿನ್ನ ಪದತಲದಲ್ಲಿ ಅರ್ಪಿಸಿದ್ದೇನೆ. ಅದನ್ನು ಸ್ವೀಕರಿಸಿ ನನ್ನನ್ನು ಉದ್ಧರಿಸು. ಸುಂದರಿ; ನಿನಗಾಗಿ ನಾನು ಏನು ಮಾಡುವುದಕ್ಕೂ ಸಿದ್ಧನಾಗಿರುವೆನು. ಈ ಜಗತ್ತನ್ನೇ ಜಯಿಸಿ ನಿನ್ನ ತಂದೆಗೆ ಕಾಣಿಕೆಯಾಗಿ ಅರ್ಪಿಸುತ್ತೇನೆ. ನನ್ನ ಪದವಿ. ಭಾಗ್ಯ, ಕೀರ್ತಿ ಇವು ಸಾಮಾನ್ಯವಾದುವೇನೂ ಅಲ್ಲ. ಇವುಗಳ ಮುಂದೆ ನಾರುಬಟ್ಟೆಯನ್ನುಟ್ಟ ಆ ಸನ್ಯಾಸಿ ರಾಮನ ಯೋಗ್ಯತೆ ಎಷ್ಟರದು? ಮತ್ತೊಮ್ಮೆ ನೀನು ಅವನನ್ನು ಕಾಣುವೆನೆಂದು ತಿಳಿಯುವುದು ಭ್ರಾಂತಿಯೇ ಸರಿ. ಸೀತೇ, ಅವನನ್ನು ಮರೆತುಬಿಡು. ದೇವಿ, ಗರುಡನು ಹಾವನ್ನು ಸೆಳೆದೊಯ್ಯುವಂತೆ ನಿನ್ನ ಆ ಕಣ್ಚೆಲುವು ನನ್ನ ಮನಸ್ಸನ್ನು ಅಪಹರಿಸಿದೆ. ಎಲೈ ಭಾಮಿನಿ, ನೀನು ನನ್ನೊಡನೆ ಸೇರಿ ಸ್ವೇಚ್ಛೆಯಾಗಿ ವಿಹರಿಸು; ವಿನೋದವಾಗಿ ಕ್ರೀಡಿಸು; ಇದೋ ನಾವಿಬ್ಬರೂ ಸೇರಿ ಈ ಸಮುದ್ರತೀರದ ತೋಟಗಳಲ್ಲಿ ಮನತಣಿಯುವಷ್ಟು ವಿಹಾರಮಾಡೋಣ.”

ಸೀತಾದೇವಿಗೆ ರಾವಣನ ಒಂದೊಂದು ಮಾತೂ ಕಾಸಿದ ಸೀಸರಸವನ್ನು ಕಿವಿಗೆ ಹೊಯ್ದಂತೆ ಕರ್ಣಕಠೋರವಾಗಿತ್ತು. ಪಾಪಿಯಾದ ಅವನನ್ನು ನೋಡುವುದಾಗಲಿ, ಅವನೊಡನೆ ಮಾತಾಡುವುದಾಗಲಿ ತನ್ನ ಘನತೆಗೆ ತಕ್ಕುದಲ್ಲವೆಂದು ಆಕೆಯ ಭಾವನೆ. ಆದುದರಿಂದ ಒಂದು ಹುಲ್ಲುಕಡ್ಡಿಯನ್ನೇ ತನ್ನೆದುರಿಗಿಟ್ಟುಕೊಂಡು ಅದರೊಡನೆ ಮಾತನಾಡುವ ನೆಪದಿಂದ ರಾವಣನ ಮಾತುಗಳಿಗೆ ಪ್ರತ್ಯುತ್ತರ ಕೊಟ್ಟಳು – “ರಾಕ್ಷಸ, ನೀನು ನನ್ನನ್ನು ಬಯಸುವುದು ಪಾಪಿ ಮುಕ್ತಿಯನ್ನು ಬಯಸಿದಂತೆ. ನಾನು ಸತ್ಕುಲ ಪ್ರಸೂತೆ; ಪವಿತ್ರವಾದ ಮತ್ತೊಂದು ಕುಲಕ್ಕೆ ಸೇರಿದ್ದೇನೆ. ಪತಿ ಪ್ರಾಣಳಾದ ನಾನು ನೀನು ಹೇಳುವ ಅಕಾರ್ಯಕ್ಕೆ ಒಪ್ಪುವುದು ಸಾಧ್ಯವಿಲ್ಲ. ನೀನು ನನ್ನ ಮೇಲಿನ ಮೋಹವನ್ನು ತ್ಯಜಿಸು. ಇದರಿಂದ ನಿನಗೂ ಶ್ರೇಯಸ್ಸು ಪರಸ್ತ್ರೀಯರನ್ನು ಕಾಮಿಸಿದವನು ಇಹಪರಗಳೆರಡರಲ್ಲಿಯೂ ಅಧೋಗತಿಗೆ ಇಳಿದುಹೋಗಬೇಕಾಗುತ್ತದೆ. ಸ್ವಲ್ಪ ಯೋಚಿಸಿನೋಡು. ನಿನ್ನ ಪತ್ನಿಯನ್ನು ನೀನು ಪರಪುರುಷರಿಂದ ರಕ್ಷಿಸುವಂತೆ ಇತರರ ಪತ್ನಿಯರನ್ನೂ ರಕ್ಷಿಸಬೇಡವೇ? ನಿನ್ನ ಪತ್ನಿಯರಲ್ಲಿ ನೀನು ರಮಿಸು. ನಿನ್ನ ರಾಜ್ಯ ಎಷ್ಟು ದೊಡ್ಡದು ಇದರಲ್ಲಿ ನಿನಗೆ ಬುದ್ಧಿವಾದ ಹೇಳುವ ಹಿರಿಯರು ಒಬ್ಬರೂ ಇಲ್ಲವೇ ಅಥವಾ ಇದ್ದರೂ ಅತಿಕಾಮಿಯಾದ ನೀನು ಅವರ ಮಾತನ್ನು ಮೀರಿ ನಡೆಯುತ್ತಿರಬಹುದು. ಅವರು ಹೇಳುವ ಮಾತುಗಳು ನಿನಗೀಗ ಪಥ್ಯವಾಗದಿದ್ದರೆ ಕೊನೆಯಲ್ಲಿ ಕೇಡು ತಪ್ಪಿದುದಲ್ಲ. ನೀನು ನಿನ್ನ ಭೋಗಸಾಮಗ್ರಿಗಳನ್ನು ತೋರಿ ನನ್ನ ಮನಸ್ಸನ್ನು ಒಲಿಸಬೇಕೆಂದು ಭ್ರಾಂತಿಪಡುವೆಯಲ್ಲಾ! ನಿನ್ನ ಆ ಐಶ್ಚರ್ಯವೆಲ್ಲಾ ಶ್ರೀರಾಮನ ಪಾದರೇಣುವಿಗೂ ಸಮನಲ್ಲ. ಆ ನನ್ನ ಸ್ವಾಮಿಯ ಭುಜದಮೇಲೆ ತಲೆಯಿಟ್ಟು ಮಲಗುತ್ತಿದ್ದ ನಾನು ಮತ್ತೊಬ್ಬರ ತೋಳನ್ನು ಸೋಂಕುವನೆ? ಜ್ಞಾನಿಗೆ ವಿದ್ಯೆ ಹೇಗೋ ಹಾಗೆ ನಾನು ಶ್ರೀರಾಮನಿಂದ ಅಭಿನ್ನೆ. ರಾವಣ, ಈಗಲೂ ಚಿಂತೆಯಿಲ್ಲ. ಆತನೊಡನೆ ನನ್ನನ್ನು ಸೇರಿಸಿ ಪುಣ್ಯಕಟ್ಟಿಕೋ. ಇಗೋ ರಾಕ್ಷಸಾ, ಸಾರಿ ಹೇಳಿದ್ದೇನೆ. ನಿನಗೆ ಜೀವಸಹಿತ ಉಳಿಯಬೇಕೆಂಬ ಆಶೆಯಿದ್ದರೆ ಶ್ರೀರಾಮಚಂದ್ರನಲ್ಲಿ ಪ್ರಸನ್ನತೆಯನ್ನು ಪಡೆ. ನೀನು ಮಹಾಪರಾಧಿಯಾದರೂ ಆ ಕರುಣಾಳು ನಿನ್ನನ್ನು ಕ್ಷಮಿಸುವನು. ನನ್ನನ್ನು ಕೊಂಡೊಯ್ದು ಆತನಿಗೆ ಒಪ್ಪಿಸಿ ಆತನಿಗೆ ಶರಣಾಗತನಾಗು. ನಿನಗೆ ಪ್ರಾಣದಾನಮಾಡುವಂತೆ ನಾನು ಆತನನ್ನು ಪ್ರಾರ್ಥಿಸುತ್ತೇನೆ. ನಾನು ಹೇಳಿದಂತೆ ನೀನು ಆಚರಿಸಲಿಲ್ಲವೋ ನಿನಗೆ ಮಾತ್ರವಲ್ಲ, ಈಲಂಕೆಯಲ್ಲಿರುವ ಪ್ರತಿಯೊಬ್ಬರಿಗೂ ಮೃತ್ಯು ತಪ್ಪಿದುದಲ್ಲ. ಶ್ರೀರಾಮನ ನಾಮಾಂಕಿತವಾದ ಬಾಣಗಳು ಸಿಡಿಲಿನ ಮಳೆಯಂತೆ ಲಂಕೆಯನ್ನೆಲ್ಲಾ ವ್ಯಾಪಿಸುವಾಗ ಅದನ್ನು ನಿವಾರಿಸುವರಾರು? ನೀನು ಇಂದ್ರನ ವಜ್ರಾಯುಧಕ್ಕೆ ಹೆದರದಿರಬಹುದು; ಯಮನ ಕಾಲಪಾಶಕ್ಕೆ ಹೆದರದಿರಬಹುದು; ಆದರೆ ಶ್ರೀರಾಮನ ಬಾಣಗಳನ್ನು ನಿತ್ತರಿಸುವುದು ಮಾತ್ರ ಅಸಾಧ್ಯ. ಆ ಪುರುಷಸಿಂಹನು ತನ್ನ ತಮ್ಮನೊಡನೆ ಆಶ್ರಮದಿಂದ ದೂರವಿದ್ದ ಸಮಯದಲ್ಲಿ ಮೋಸದಿಂದ ನನ್ನನ್ನು ಕದ್ದುತಂದೆ. ಅವರ ವಾಸನೆಯೇನಾದರೂ ಅಲ್ಲಿದ್ದರೆ ಹೆಬ್ಬುಲಿಯ ವಾಸನೆಯನ್ನು ಕಂಡು ನಾಯಿಯಂತೆ ನೀನು ಪಲಾಯನವಾಗುತ್ತಿದ್ದೆ. ಎಲೆ ಹೇಡಿ ರಾವಣಾ, ನನ್ನ ಪ್ರಾಣನಾಥನಾದ ಶ್ರೀರಾಮಚಂದ್ರನು ತನ್ನ ತಮ್ಮನೊಡನೆ ಶೀಘ್ರವಾಗಿಯೇ ಇಲ್ಲಿಗೆ ಬರುವನು. ಸೂರ್ಯನು ತನ್ನ ಪ್ರಖರ ಕಿರಣಗಳಿಂದ ತೇವವನ್ನು ಹೀರುವಂತೆ ಆತನು ತನ್ನ ಬಾಣಗಳಿಂದ ನಿನ್ನ ಪ್ರಾಣಗಳನ್ನು ಹೀರುವನು. ನಿಜವಾಗಿಯೂ ನಿನಗೆ ಕೇಡುಗಾಲ ಬಂದಿದೆ; ಅದಕ್ಕೆ ಈ ವಿಪರೀತ ಬುದ್ಧಿ ಹುಟ್ಟಿದೆ. ಮರವೆಷ್ಟು ದೊಡ್ಡದಾದರೂ ಸಿಡಿಲಿಗೆ ಸಿಕ್ಕಿ ಹೇಗೆ ಬದುಕಲಾರದೋ ಹಾಗೆ ನೀನೂ ಶ್ರೀರಾಮಬಾಣಕ್ಕೆ ಸಿಕ್ಕಿ ಉಳಿಯಲಾರೆ. ವೇಳೆ ಮೀರುವುದಕ್ಕೆ ಮುನ್ನವೆ ಎಚ್ಚತ್ತುಕೊ. ಇಲ್ಲದಿದ್ದರೆ ನೀನು ಯಾವ ದೇವರನ್ನು ಮರೆಹೊಕ್ಕರೂ, ಎಲ್ಲಿ ಬಚ್ಚಿಟ್ಟುಕೊಂಡರೂ ಮೃತ್ಯು ತಪ್ಪದು.”

ಸೀತಾದೇವಿಯ ಮಾತುಗಳನ್ನು ಕೇಳಿ ರಾವಣನ ಕೋಪ ಕೆರಳಿತು. ಆದರೂ ಅದನ್ನು ನುಂಗಿಕೊಂಡು “ಜಾನಕಿ, ಹಿತದ ನುಡಿಗಳನ್ನು ಹೇಳಿದಷ್ಟೂ ತಿರಸ್ಕರಿಸುತ್ತಾ ಹೋಗುವುದು ಸ್ತ್ರೀಯರ ಸ್ವಭಾವ. ಅದೆಷ್ಟು ನನ್ನನ್ನು ತಿರಸ್ಕರಿಸಿ ಮಾತನಾಡುವೆಯೋ ಆಡು. ಸಾರಥಿ ಹದ್ದುಮೀರಿದ ಕುದುರೆಗಳನ್ನು ಬಿಗಿ ಹಿಡಿದಂತೆ ನನ್ನ ಕೋಪವನ್ನು ನಿನ್ನ ಮೇಲಿನ ಪ್ರೇಮದಿಂದ ತಡೆದು ನಿಲ್ಲಿಸುತ್ತೇನೆ. ಕಾಮ ಹುಟ್ಟಿದ ಕಡೆ ದಯಾಪ್ರೇಮಗಳು ಹುಟ್ಟುತ್ತವೆ. ಆದ್ದರಿಂದ ನಿನ್ನ ಕಡುನುಡಿಗಳನ್ನೆಲ್ಲಾ ಕ್ಷಮಿಸುತ್ತೇನೆ. ನಿನ್ನ ಮಾನಭಂಗವಾಗಲಿ ವಧೆಯಾಗಲಿ ನನಗೊಂದು ಮಹತ್ಕಾರ್ಯವಲ್ಲ. ಆದರೆ ಹೇ ಸುಂದರೀ, ನನ್ನ ಕಾಮ ನನ್ನ ಕೋಪವನ್ನು ಹಿಡಿದು ನಿಲ್ಲಿಸಿದೆ. ಎಲೆ ಸೀತೆ, ನಿನಗೆ ನಾನು ಕೊಟ್ಟಿದ್ದ ವರ್ಷಾವಧಿಯಲ್ಲಿ ಇನ್ನೆರಡು ತಿಂಗಳು ಮಾತ್ರ ಉಳಿದಿದೆ. ಅಷ್ಟರೊಳಗೆ ನೀನು ನನ್ನ ಹಾಸಿಗೆಗೆ ಏರಲೇಬೇಕು. ಹಾಗಾಗದಿದ್ದಲ್ಲಿ ನಿನ್ನನ್ನು ನನ್ನ ಬೆಳಗಿನ ಊಟಕ್ಕಾಗಿ ಅಡುಗೆಯ ಮನೆಗೆ ಕಳುಹಿಸಬೇಕಾದೀತು!” ಎಂದನು.

ರಾವಣನ ಕಠೋರ ಶಾಸನವನ್ನು ಕೇಳಿ, ಅವನೊಡನೆ ಬಂದಿದ್ದ ದೇವಕನ್ಯೆಯರೆಲ್ಲರೂ ಸೀತೆಗಾಗಿ ಮರುಗಿ ಕಣ್ಣೀರಿಟ್ಟರು. ಅವರಲ್ಲಿ ಕೆಲವರು ಸೀತೆಗೆ ಸಂಜ್ಞೆಯಿಂದಲೆ ಸಮಾಧಾನ ಹೇಳಿದರು. ಆದರೆ ಆಕೆಗೆ ಆ ಸಮಾಧಾನದ ಆವಶ್ಯಕತೆಯೆ ಇರಲಿಲ್ಲ. ತನ್ನ ಪಾತಿವ್ರತ್ಯವೆ ತನಗೆ ಬೆಂಬಲವೆಂಬುದು ಆಕೆಯ ಧೈರ್ಯ. ಅದನ್ನು ನಂಬಿ ಧೈರ್ಯದಿಂದಲೆ ರಾವಣನಿಗೆ ಉತ್ತರಕೊಟ್ಟಳು – “ಎಲವೋ ರಾವಣಾ, ನೀನು ಎಂತಹ ನೀಚ! ಇಂದ್ರನಿಗೆ ಶಚೀದೇವಿಯಂತೆ ಧರ್ಮಾತ್ನನಾದ ಶ್ರೀರಾಮನಿಗೆ ಪತ್ನಿಯಾದಂತಹ ನನ್ನನ್ನು ಬಯಸುವವರು ಮೂರು ಲೋಕಗಳಲ್ಲಿ ನಿನ್ನ ಹೊರತೂ ಮಾತ್ತಾರೂ ಇಲ್ಲ. ಇದು ಅಧರ್ಮಕಾರ್ಯವೆಂದು ನಿನಗೆ ಬುದ್ಧಿ ಹೇಳಿ ನಿನ್ನ ಮನಸ್ಸನ್ನು ನಿರ್ಮಲಗೊಳಿಸುವವರು ನಿನಗೆ ಯಾರೂ ಇಲ್ಲವೆ? ಅಯ್ಯೋ, ರಾಕ್ಷಸಾಧಮಾ, ಶ್ರೀರಾಮಪತ್ನಿಯಾದ ನನ್ನಲ್ಲಿ ನೀನಾಡಿರುವ ಪಾಪವಚನಗಳಿಗೆ ತಕ್ಕ ಫಲ ನೀನೆಲ್ಲಿ ಹೋದರೆ ತಪ್ಪೀತು? ಮದಗಜವನ್ನು ಕೆಣಕಿದ ಮೊಲದಂತೆ ನೀನು ಶ್ರೀರಾಮನನ್ನು ಕೆರಳಿಸಿರುವೆ. ಹೇಡಿಯಾದ ನೀನು ರಾಮಬಾಣಕ್ಕೆ ಹೆದರಿ ಕಳ್ಳತನದಿಂದ ನನ್ನನ್ನು ಹೊತ್ತುಕೊಂಡು ಬಂದೆಯಲ್ಲಾ! ನನ್ನೆದುರಿಗೆ ನಿನ್ನ ಪ್ರತಾಪವನ್ನು ಕೊಚ್ಚಿಕೊಳ್ಳುವುದಕ್ಕೆ ನಿನಗೆ ನಾಚಿಕೆಯಾದರೂ ಆಗುವುದಿಲ್ಲವೆ? ನನ್ನನ್ನು ಪಾಪದ ಕಣ್ಣುಗಳಿಂದ ನೋಡುತ್ತಿರುವ ನಿನ್ನ ಕಣ್ಣುಗಳು ಉದುರಿ ಹೋಗಬಾರದೆ? ಧರ್ಮಜ್ಞನಾದ ರಾಮನ ಪತ್ನಿಯಾಗಿ, ದಶರಥನ ಸೊಸೆಯಾದ ನನ್ನಲ್ಲಿ ಅವಾಚ್ಯಗಳನ್ನಾಡುವ ನಿನ್ನ ನಾಲಗೆ ಸೀಳಿ ಹೋಗಬಾರದೆ! ನನ್ನ ಪತಿವ್ರತಾಶಕ್ತಿ ನಿನ್ನನ್ನು ಸುಟ್ಟು ಭಸ್ಮಮಾಡಬಾರದೆ! ಪಾಪಿ! ನೀನು ಅಲ್ಲ ನನ್ನನ್ನು ಇಲ್ಲಿಗೆ ಕರೆತಂದದು, ನಿನ್ನ ದುರ್ವಿಧಿ, ನಿನ್ನ ಮೃತ್ಯುವನ್ನು ಇಲ್ಲಿಗೆ ಕರೆತಂದಿದೆ. ”

ರಾವಣನು ಸೀತೆಯ ನುಡಿಗಳನ್ನು ಕೇಳಿ ಕೋಪದಿಂದ ಸಂತಪ್ತನಾದನು. ಅವನು ಕಿಡಿಗಳನ್ನು ಕಾರುತ್ತಿದ್ದ ತನ್ನ ಕಣ್ಣುಗಳಿಂದ ಆಕೆಯನ್ನು ದಹಿಸುವವನಂತೆ ದುರುಗುಟ್ಟಿಕೊಂಡು ನೋಡಿದನು. ನೀಲಮೇಘದಂತೆ ಕಪ್ಪಾದ ಆ ಮಹಾಕಾಯನು ಸ್ಮಶಾನದಲ್ಲಿನ ಮಹಾವೃಕ್ಷದಂತೆ ಭಯಂಕರನಾಗಿ ತೋರುತ್ತಾ, “ದರಿದ್ರರಾಮನಲ್ಲಿಯೆ ನೆಟ್ಟಮನಸ್ಸುಳ್ಳ, ಏ, ದರಿದ್ರಹೆಣ್ಣೇ, ಸೂರ್ಯನು ಸಂಧ್ಯಾಕಾಲದ ರೂಪಳಿಸುವಂತೆ ನಾನು ಕ್ಷಣಮಾತ್ರದಲ್ಲಿ ನಿನ್ನನ್ನು ಧ್ವಂಸಮಾಡುತ್ತೇನೆ, ತಡೆ” ಎಂದು ಗದರಿ ನುಡಿದು ಅಲ್ಲಿದ್ದ ರಾಕ್ಷಸಿಯರನ್ನು ಹತ್ತಿರಕ್ಕೆ ಕರೆದನು. ಕಾಲಿನಲ್ಲಿ ಜುಟ್ಟಿರುವವಳು, ಆನೆಯ ಕಿವಿಯವಳು, ಮೂಗಿಲ್ಲದವಳು, ಹಂದಿಯ ಮುಖದವಳು – ಇತ್ಯಾದಿ ವಿಕಾರ ರೂಪೆಯರು ಒಡನೆಯೆ ಓಡಿಬಂದರು. ರಾಣವನು ಅವರನ್ನು ಕುರಿತು “ಎಲೆ ರಾಕ್ಷಸಿಯರೆ, ನೀವು ಒಡನೆಯೆ ಸೀತೆಯನ್ನು ನನ್ನ ವಶಪಡಿಸಿರಿ. ನಯವೋ ಭಯವೋ; ಕೊನೆಗೆ ದಂಡೋಪಾಯವಾದರೂ ಚಿಂತೆಯಿಲ್ಲ” ಎಂದನು. ಮಾತನಾಡುತ್ತಾ ಆಡುತ್ತಾ ಅವನ ಕಾಮವೂ ಕೋಪವೂ ಉಲ್ಬಣಕ್ಕೇರಿದುವು. ಸೀತೆಯ ಮಾನಭಂಗಕ್ಕಾಗಿ ಆತನು ಮುಂದೆ ನುಗ್ಗಿದನು. ಅಷ್ಟರಲ್ಲಿ ಧಾನ್ಯಮಾಲಿನಿಯೆಂಬ ಆತನ ರಾಣಿ ಆತನನ್ನು ತಡೆದು, “ಮಹಾರಾಜ, ಇಷ್ಟು ಕೋಪವೇಕೆ? ಈ ಸೀತೆಯೇನು ಮಹಾ! ನೀನು ಕ್ರೀಡಿಸಬೇಕೆಂದರೆ ನಾವು ಇಲ್ಲವೆ? ಈ ನರಹುಳು ಕಂದಿ, ಕುಂದಿ, ಕೃಶವಾಗಿ ಹೋಗಿದೆ; ಅದನ್ನು ಏನೆಂದು ಕಾಮಿಸುತ್ತಿರುವೆ? ಸುಖವನ್ನು ಭೋಗಿಸುವುದಕ್ಕೂ ಪುಣ್ಯಬೇಕು. ರಾಜಾಧಿರಾಜನಾದ ನೀನು ಸ್ವತಃ ಮುಂದೆ ಬಂದು ಬೇಡಿದರೆ, ಆ ಭೋಗವನ್ನು ಅನುಭವಿಸುವುದು ಈ ಹಾಳು ಹೆಣ್ಣಿನ ಹಣೆಯಲ್ಲಿ ಬರೆದಿಲ್ಲ. ಇದಕ್ಕೆ ನೀನೇನು ಮಾಡೀಯೆ? ಕಾಮಿಸದವಳೊಡನೆ ಭೋಗಸುಖವನ್ನು ಅಪೇಕ್ಷಿಸುವುದು ವೃಥಾಶ್ರಮ. ತಾನಾಗಿಯೇ ಬಯಸಿ ಬಂದವಳೊಡನೆ ಅನುಭವಿಸುವ ಭೋಗಸುಖವೆ ಅತ್ಯಂತ ಶ್ರೇಯಸ್ಕರವಾದುದು. ಆದ್ದರಿಂದ ಅವಳಲ್ಲಿನ ಮೋಹವನ್ನು ತ್ಯಜಿಸು. ಇಗೋ ನನ್ನೊಡನೆ ಕ್ರೀಡಿಸು” ಎಂದಳು. ಅವಳ ಮಾತುಗಳನ್ನು ಕೇಳಿ ರಾವಣನ ಮನಸ್ಸು ಹರ್ಷಗೊಂಡಿತು. ಮುಗುಳ್ನಗೆ ನಗುತ್ತಾ ಧಾನ್ಯಮಾಲಿನಿಯ ಕೈಹಿಡಿದುಕೊಂಡು ಆ ರಾವಣನು ಭೂಮಿ ನಡುಗುವಂತೆ ಹೆಜ್ಜೆಗಳನ್ನಿಡುತ್ತಾ ಅಲ್ಲಿಂದ ಹಿಂದಿರುಗಿ ತನ್ನ ಅಂತಃಪುರವನ್ನು ಸೇರಿದನು. ಹೋಗುವ ಮುನ್ನ ಹೇಗಾದರೂ ಮಾಡಿ ಸೀತೆಯನ್ನು ತನ್ನ ವಶಪಡಿಸಬೇಕೆಂದು ಅಲ್ಲಿದ್ದ ಕಾವಲಿನವರಿಗೆ ಆತನು ಕಟ್ಟಾಜ್ಞೆ ಮಾಡುವುದನ್ನು ಮಾತ್ರ ಮರೆಯಲಿಲ್ಲ.