ಆ ಪ್ರದೇಶದಲ್ಲಿ ಜಟಾಯುವಿನ ಅಣ್ಣನಾದ ಸಂಪಾತಿಯೆಂಬ ಪಕ್ಷಿರಾಜನು ವಾಸ ಮಾಡಿಕೊಂಡಿದ್ದನು.

ಆ ಪ್ರದೇಶದಲ್ಲಿ ಜಟಾಯುವಿನ ಅಣ್ಣನಾದ ಸಂಪಾತಿಯೆಂಬ ಪಕ್ಷಿರಾಜನು ವಾಸಮಾಡಿಕೊಂಡಿದ್ದನು. ವಾನರಿದ್ದ ಪರ್ವತದ ಒಂದು ಗುಹೆಯಿಂದ ಆ ಪಕ್ಷಿವೀರನು ಹೊರಬಂದು, ಇವರ ಮಾತೆಲ್ಲವನ್ನೂ ಕೇಳಿದನು. ಅಲ್ಲಿಮಲಗಿದ್ದ ವಾನರರನ್ನು ನೋಡಿ ತನಗೆ ತಿನ್ನಲು ಸಾಮಗ್ರಿ ಸಿಕ್ಕಿತೆಂದು ಸಂಪಾತಿಗೆ ಸಂತೋಷವಾಯಿತು. “ದೈವವೇ ಪ್ರಾಣಿಗಳ ಕ್ಷೇಮವನ್ನು ವಿಚಾರಿಸುವುದೆಂಬ ಮಾತು ಈಗ ನಿಜವಾಯಿತು. ಹಸಿದಿರುವ ನಾನು ಈ ವಾನರರನ್ನು ತಿಂದು ತಣಿಯುತ್ತೇನೆ” ಎಂದುಕೊಂಡು, ಸಂಪಾತಿ ತನ್ನ ಅಭಿಪ್ರಾಯವನ್ನು ಅವರಿಗೆ ತಿಳಿಸಿದನು. ಸಂಪಾತಿಯ ನುಡಿಗೇಳಿ ಹದ್ದಿನ ವೇಷದಲ್ಲಿ ಯಮನೇ ತಮ್ಮನ್ನು ಕೊಲ್ಲಲು ಬಂದಿರುವನೆಂದು ವಾನರರಿಗೆ ಭಯವಾಯಿತು. ಆಗ ಅಂಗದನು “ನಾವು ಶ್ರೀರಾಮನ ಕಾರ್ಯವನ್ನು ಮಾಡಲಿಲ್ಲ. ಸುಗ್ರೀವನ ಮಾತನ್ನು ನಡಸಲಿಲ್ಲ. ಆದರೆ ನಮಗೆ ಈ ತೆರನಾದ ವಿಪತ್ತು ಬಂದೊದಗಿತು. ಹಿಂದೆ ಜಟಾಯು ಸೀತೆಗೆ ಪ್ರಿಯವನ್ನುಂಟು ಮಾಡಿದನೆಂದು ಕೇಳಿದ್ದೆವು. ಶ್ರೀರಾಮನಿಗಾಗಿ ಪಕ್ಷಿಗಳು ಕೂಡ ಪ್ರಾಣವನ್ನು ತೊರೆದುವು. ನಮಗಾದರೊ ಸುತ್ತಿ ಸುತ್ತಿ ಆಯಾಸವುಂಟಾಯಿತೇ ಹೊರತು ಸೀತೆ ಮಾತ್ರ ದೊರಕಲಿಲ್ಲ. ರಾವಣನಿಂದ ಸೀತೆಗಾಗಿ ಮಡಿದ ಜಟಾಯುವೇ ಧನ್ಯ. ಆ ಕಾರ್ಯದಿಂದ ಆತನಿಗೆ ಮೋಕ್ಷ ದೊರಕಿತು. ನಮಗಾದರೊ ಸೀತಾಪಹರಣದಿಂದ ಪ್ರಾಣಕ್ಕೆ ಸಂಚಕಾರ ಬಂತು. ಈ ಅನರ್ಥಗಳಿಗೆಲ್ಲ ದಶರಥನು ಕೈಕೆಗಿತ್ತ ವರವೇ ಮೂಲ” ಎಂದು ಸಂತಾಪಕರವಾದ ಮಾತುಗಳನ್ನಾಡಿದನು. ಈ ಮಾತುಗಳನ್ನು ಕೇಳಿ ಸಂಪಾತಿಯ ಮನಸ್ಸು ಕರಗಿತು. ಕುಗ್ಗಿದ ಧ್ವನಿಯಿಂದಲೆ ಅವನು ವಾನರರನ್ನು ಈ ರೀತಿ ನುಡಿಸಿದನು:

“ಅಯ್ಯಾ, ವಾನರರಿರ, ನನ್ನೆದೆ ನಡುಗುವಂತೆ ನನ್ನ ಪ್ರೀತಿಯ ತಮ್ಮನಾದ ಜಟಾಯುವಿನ ವಧೆಯನ್ನು ತಿಳಿಸುತ್ತಿರುವ ನೀವಾರು? ಜನಸ್ಥಾನದಲ್ಲಿ ರಾವಣನಿಗೂ ಮತ್ತು ಜಟಾಯುವಿಗೂ ಯುದ್ಧವಾದುದು ನಿಜವೇ? ಬಹಳ ಕಾಲದ ಮೇಲೆ ನನ್ನಣುಗುದಮ್ಮನಾದ ಜಟಾಯುವಿನ ಹೆಸರನ್ನು ಕೇಳಿ ನನಗೆ ಸಂತೋಷವಾಯಿತು. ಸೂರ್ಯಕಿರಣಗಳಿಂದ ರೆಕ್ಕೆಗಳು ಸುಟ್ಟುಹೋಗಿರುವ ನನ್ನನ್ನು ಈ ಕೋಡುಗಳಲ್ಲಿನಿಂದ ಕೆಳಕ್ಕಿಳಿಸಿ. ಜಟಾಯುವಿನ ಸಾವಿನ ಸಮಾಚಾರವನ್ನು ಅರಿಯಲು ನಾನು ತುಂಬ ಕಾತರನಾಗಿದ್ದೇನೆ.”

ದುಃಖದಿಂದ ಕತ್ತುಬಿಗಿದು ಸಂಪಾತಿ ತಡವರಿಸಿ ಮಾತನಾಡುತ್ತಿದ್ದರೂ ಅವನನ್ನು ವಾನರರು ನಂಬದೆಹೋದರು. ಸಂಪಾತಿಯನ್ನು ಕೆಳಕ್ಕಿಳಿಸಿದರೆ ಆತನು ತಮ್ಮನ್ನು ತಿನ್ನಬಹುದೆಂದು ಅವರು ಬಗೆದರು. ಆದರೆ ಸಾಯಲು ಸಿದ್ಧರಾದ ತಮ್ಮನ್ನು ಸಂಪಾತಿ ತಿನ್ನುವುದಾದರೆ ಅದೇ ಒಂದು ಕ್ಷೇಮವಲ್ಲವೆ? ಹೀಗೆಂದು ಬಗೆದು ಅವರು ಪಕ್ಷಿರಾಜನನ್ನು ಬೆಟ್ಟದ ತುದಿಯಿಂದ ಕೆಳಕ್ಕೆ ಇಳಿಸಿದರು. ಅನಂತರ ಅಂಗದನು ಸಂಪಾತಿಗೆ ವಾಲಿಸುಗ್ರೀವರ ವೃತ್ತಾಂತ. ಸೀತಾಪರಣ, ಜಟಾಯು ವಧೆ, ಸುಗ್ರೀವ ಸಖ್ಯ, ವಾಲಿ ವಧೆ, ತಮ್ಮ ಸೀತಾನ್ವೇಷಣ ಕಾರ್ಯ – ಈ ವಿಷಯಗಳನ್ನು ಕ್ರಮವಾಗಿ ತಿಳಿಸಿದನು. “ಸ್ವಯಂಪ್ರಭೆಯ ಬಿಲವನ್ನು ಹೊಕ್ಕ ನಮಗೆ ಅಲ್ಲಿಯೇ ಸುಗ್ರೀವನು ಕೊಟ್ಟ ಅವಧಿ ಮುಗಿದುಹೋಯಿತು. ಸುಗ್ರೀವನ ಮಾತನ್ನು ನಡಸದ ನಮಗೆ ಅವನ ದೆಸೆಯಿಂದ ಭಯವುಂಟಾಗಿದೆ. ಈಗ ನಾವು ಸುಗ್ರೀವನ ಬಳಿಗೆ ಹೋದರೂ ನಮ್ಮ ಪ್ರಾಣ ಉಳಿಯುವುದಿಲ್ಲ.”

ಸಾಯಲು ಸಿದ್ಧರಾದ ವಾನರರ ದೀನಸ್ವರವನ್ನು ಕೇಳಿ ಸಂಪಾತಿ ಕಂಬನಿದುಂಬಿದನು. “ವಾನರವೀರರೇ, ರಾವಣನಿಂದ ಯುದ್ಧದಲ್ಲಿ ಮಡಿದ ಜಟಾಯು ನನ್ನ ಪ್ರೀತಿಯ ತಮ್ಮ. ಜಟಾಯುವಿನ ಸಾವಿನ ಸುದ್ದಿಯನ್ನು ಕೇಳಿಯೂ, ರೆಕ್ಕೆಗಳಿಲ್ಲದ ನನಗೆ ಹಗೆತೀರಿಸಿಕೊಳ್ಳಲು ಶಕ್ತಿಯಿಲ್ಲದಾಗಿದೆ. ಹಿಂದೆ ಎಂದರೆ ವೃತ್ರಾಸುರನ ಸಂಹಾರಕಾಲದಲ್ಲಿ, ಹಾರುವುದರಲ್ಲಿ ಒಬ್ಬರನ್ನೊಬ್ಬರು ಗೆಲ್ಲುವ ಹುರುಡಿನಿಂದ ನಾವಿಬ್ಬರೂ ಸೂರ್ಯ ಮಂಡಲದ ಕಡೆಗೆ ಹಾರಿದೆವು. ನಾವಿಬ್ಬರೂ ವೇಗವಾಗಿ ಹೋಗುತ್ತಿರುವಾಗ ಮಧ್ಯಾಹ್ನವಾಯಿತು. ಆ ಸಮಯದಲ್ಲಿ ಜಟಾಯುವಿನ ಬಲ ಕುಗ್ಗುತ್ತಿದ್ದುದನ್ನು ಕಂಡು, ಅವನಲ್ಲಿದ್ದ ಪ್ರೇಮದಿಂದ ನನ್ನ ರೆಕ್ಕೆಗಳಿಂದ ಅವನನ್ನು ಮುಚ್ಚಿದೆನು. ಆಗ ಸೂರ್ಯನ ತಾಪದಿಂದ ನನ್ನ ರೆಕ್ಕೆಗಳು ಸುಟ್ಟುಹೋಗಿ ಈ ಪರ್ವತದ ಕೋಡುಗಲ್ಲಿನ ಮೇಲೆ ಬಿದ್ದೆ. ಇಲ್ಲಿ ಬಿದ್ದಕೂಡಲೆ ನಾನು ಪ್ರಾಣಗಳನ್ನು ತೊರೆಯಬೇಕೆಂದಿದ್ದೆ. ಆದರೆ ನಿಶಾಕರನೆಂಬ ಮುನಿ ‘ಮುಂದೆ ಸೀತೆಯನ್ನು ಹುಡುಕುವುದಕ್ಕಾಗಿ ವಾನರರು ಇಲ್ಲಿಗೆ ಬರುವರು. ಅವರಿಗೆ ನೀನು ಸೀತೆಯ ವೃತ್ತಾಂತವನ್ನು ಅರುಹು. ಆಗ ನಿನಗೆ ರೆಕ್ಕೆಗಳು ಮತ್ತೆ ಬರುವುವು’ ಎಂದು ಹೇಳಿದ್ದನು. ಸೀತೆಯ ಸಮಾಚಾರವನ್ನು ನಿಮಗೆ ತಿಳಿಸುವ ಆ ಕಾಲ ಈಗ ಬಂದಿದೆ” ಎಂದನು.

ಸಂಪಾತಿಯ ಮಾತನ್ನು ಕೇಳಿ ಆತನಿಗೆ ಸೀತೆಯ ಸಮಾಚಾರ ತಿಳಿದಿರಬಹುದೆಂದು ವಾನರರು ಆಸೆಗೊಂಡರು. ರಾವಣನಿರುವ ಸ್ಥಳ ತಿಳಿದಿದ್ದರೆ ತಮ್ಮ ಮೇಲೆ ಕೃಪೆಯಿಟ್ಟು ಅದನ್ನು ತಿಳಿಸಬೇಕೆಂದು ಅಂಗದನು ಸಂಪಾತಿಯನ್ನು ಬೇಡಿಕೊಂಡನು. ವಾನರರಿಗೆ ಸಂತೋಷವು ರೋಮಾಂಚಕಾರಕವೂ ಆದ ಆ ಸಮಾಚಾರವನ್ನು ಸಂಪಾತಿ ಅವರಿಗೆ ತಿಳಿಸಿದನು: “ವೀರರೇ, ರೆಕ್ಕೆಗಳು ಸುಟ್ಟುಹೋಗಿರುವ ನಾನು ಶ್ರೀರಾಮನಿಗೆ ಯಾವ ಸಹಾಯವನ್ನೂ ಮಾಡುವಂತಿಲ್ಲ. ಆದರೆ ನಾನು ನಿಮಗೆ ವಾಕ್‌ ಸಹಾಯ ಮಾಡುತ್ತೇನೆ. ಮುಪ್ಪಿನಿಂದ ಶಕ್ತಿ ಕುಗ್ಗಿದ್ದರೂ ನಾನು ಶ್ರೀರಾಮನ ಈ ಕೆಲಸವನ್ನು ಮೊದಲು ಮಾಡಬೇಕು. ಈಗ ಸ್ವಲ್ಪ ಕಾಲದ ಹಿಂದೆ ರಾವಣನು ಹಿಡಿದೊಯ್ಯುತ್ತಿರುವಾಗ ‘ರಾಮಾ, ರಾಮಾ’ ಎಂದು ಅಳುತ್ತಿದ್ದ ಯುವತಿಯೊಬ್ಬಳನ್ನು ಕಂಡೆ. ಬೆಟ್ಟದ ತುದಿಯಲ್ಲಿ ಹೊಳೆಯುವ ಸೂರ್ಯಕಾಂತಿಯಂತೆ, ಮೇಘದಲ್ಲಿರುವ ಮಿಂಚಿನಂತೆ ಆಕೆಯುಟ್ಟ ಸೀರೆ ಹೊಳೆಯುತ್ತಿತ್ತು. ನಿಮ್ಮ ಮಾತಿನಿಂದ ಆಕೆ ಸೀತೆಯೇ ಇರಬೇಕೆಂದು ಊಹಿಸುತ್ತೇನೆ. ವಿಶ್ರವಸ್ಸಿನ ಮಗನೂ ಕುಬೇರನ ತಮ್ಮನೂ ಆದ ರಾವಣನು ಲಂಕೆಯಲ್ಲಿ ವಾಸಮಾಡಿಕೊಂಡಿರುತ್ತಾನೆ. ಮನೋಹರವಾದ ಲಂಕೆಯ ಕೋಟೆ ದುರ್ಗಮವಾದುದು. ರಾವಣನ ಅಂತಃಪುರದಲ್ಲಿ ನಾರುಡೆಗಳನ್ನುಟ್ಟು ಕಂದಿದ ಮುಖವುಳ್ಳವಳಾಗಿ ಸೀತೆ ಇದ್ದಾಳೆ. ಸಾಗರದಿಂದ ಸುತ್ತುಗಟ್ಟಿದ. ಆ ಲಂಕೆಯಲ್ಲಿ ನೀವು ಸೀತೆಯನ್ನು ಕಾಣುವಿರಿ. ಆದ್ದರಿಂದ ನೀವು ಈ ಸಮುದ್ರವನ್ನು ದಾಟಲು ಉಪಾಯವನ್ನು ಚಿಂತಿಸಿ. ಸಾವೈದಿದ ನನ್ನಣುಗುದಮ್ಮನಿಗೆ ತಿಲೋದಕವನ್ನು ಕೊಡಲು ನನಗೆ ಆಸೆಯಾಗಿದೆ. ದಯೆಯಿಟ್ಟು ನನ್ನನ್ನು ಸಮುದ್ರತೀರಕ್ಕೆ ಕೊಂಡೊಯ್ಯಿರಿ. ”

ಸಂಪಾತಿಯ ಮಾತನ್ನು ಕೇಳಿ ಹರ್ಷಗೊಂಡ ವಾನರರು. ಸೂರ್ಯಕಿರಣಗಳಿಂದ ಬೆಂದ ರೆಕ್ಕೆಯುಳ್ಳ ಆತನನ್ನು ಸಮುದ್ರತೀರಕ್ಕೆ ಹೊತ್ತು ತಂದರು. ಅಲ್ಲಿ ಸಂಪಾತಿ ಮಡಿದ ತಮ್ಮನಿಗೆ ತಿಲೋದಕ ಕೊಟ್ಟನು. ಆ ವೇಳಗೆ ನಿಶಾಕರಮುನಿ ಹೇಳಿದ ಕಾಲ ಬರಲು ಸಂಪಾತಿಗೆ ಹೊಸ ರೆಕ್ಕೆ ಹುಟ್ಟಿದುವು. ವಾನರರ ಕಾರ್ಯಕ್ಕೆ ಮಂಗಳವನ್ನು ಕೋರಿ ತನ್ನ ಹೊಸ ರೆಕ್ಕೆಗಳ ಶಕ್ತಿಯನ್ನು ಪರೀಕ್ಷಿಸಲು ಆತುರನಾಗಿ ಆಕಾಶಕ್ಕೆ ನೆಗೆದನು. ಈ ಸೋಜಿಗವನ್ನು ನೋಡುತ್ತ ವಾನರರು ಅಲ್ಲಿಯೆ ನಿಂತರು.