ಕಾಮರೂಪಿಗಳಾದ ವಾನರು ಕೋಟಿ ಸಂಖ್ಯೆಯಲ್ಲಿ ಮೇಘದಂತೆ ಗಂಭೀರ ಧ್ವನಿಗೈಯ್ಯುತ್ತ ಸುಗ್ರೀವನ ಸುತ್ತ ನೆರೆದರು.

ಶ್ರೀರಾಮನನ್ನು ಕಾಣುತ್ತಲೇ ಸುಗ್ರೀವನು ಪಲ್ಲಕ್ಕಿಯಿಂದಿಳಿದು, ಕೈ ಮುಗಿದುಕೊಂಡೆ ಅವನ ಬಳಿಗೆ ನಡೆದು ನಿಂತನು. ತಾವರೆಯ ಮೊಗ್ಗುಗಳಿಂದ ಕಿಕ್ಕಿರಿದ ಕೊಳದಂತೆ ಬಹುಸಂಖ್ಯೆಯಲ್ಲಿ ಆತನನ್ನು ಹಿಂಬಾಲಿಸುತ್ತಿದ್ದ ಆ ದೊಡ್ಡ ವಾನರಸೇನೆಯನ್ನು ನೋಡಿ ಶ್ರೀರಾಮನಿಗೆ ಕೋಪವಡಗಿತು; ಸುಗ್ರೀವನದಲ್ಲಿ ಮೈತಿಯುಂಟಾಯಿತು. ತನ್ನ ಪಾದಗಳನ್ನು ಹಿಡಿದು ನಮಸ್ಕರಿಸಿದ ಸುಗ್ರೀವನನ್ನು ಮೇಲಕ್ಕೆತ್ತಿ ಶ್ರೀರಾಮನು ಅವನನ್ನು ದೃಢವಾಗಿ ಅಪ್ಪಿಕೊಂಡನು. ಸುಗ್ರೀವನನ್ನು ಪೀಠದಲ್ಲಿ ಕುಳ್ಳಿರಿಸಿದ ಬಳಿಕ ಶ್ರೀರಾಮನು ಅವನನ್ನು ಕುರಿತು: “ಮಿತ್ರನೆ, ಯುದ್ದಕ್ಕೆ ಹೊರಡಲು ಈಗ ಸಕಾಲವಾಗಿದೆ. ಈ ವಿಷಯವನ್ನು ಕುರಿತು ಮಂತ್ರಿಗಳೊಡನೆ ಚೆನ್ನಾಗಿ ಯೋಚಿಸು” ಎಂದನು. ಶ್ರೀರಾಮನ ಮಾತನ್ನು ಕೇಳಿ ಸುಗ್ರೀವನು: “ರಾಮಚಂದ್ರ, ನಿನ್ನ ಅನುಗ್ರಹದಿಂದ ನನಗೆ ವಾನರರಾಜ್ಯ ದೊರಕಿತು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡದವನು ಪುರುಷಾಧಮನಲ್ಲವೆ? ಇಗೋ! ಬೆಟ್ಟ ಗುಡ್ಡಗಳಲ್ಲಿ, ಕಾಡುಗಳಲ್ಲಿ ವಾಸಮಾಡುವ, ಮೇರು ಪರ್ವತಕ್ಕೆ ಸಮನಾದ ಧೈರ್ಯವುಳ್ಳ, ಯುದ್ಧದಲ್ಲಿ ರಾವಣನನ್ನು ಕೊಲ್ಲಲು ಶಕ್ತರಾದ ಈ ವಾನರರು ನಿನ್ನ ಕಾರ್ಯಸಾಧನೆಗಾಗಿ ಕೋಟಿಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸೀತೆಯನ್ನು ಹುಡುಕುವ ಕಾರ್ಯದಲ್ಲಿ ಇನ್ನು ನಾವು ತೊಡಗಬಹುದು.” ಸುಗ್ರೀವನ ಮಾತನ್ನು ಕೇಳಿ ಅವನ ಕಾರ್ಯೋದ್ಯೋಗವನ್ನು ಕಂಡು ಶ್ರೀರಾಮನ ಕಣ್ಣುಗಳು ಹರ್ಷದಿಂದ ಅರಳಿದುವು.

ಅನಂತರ ಶ್ರೀರಾಮನು ಸುಗ್ರೀವನನ್ನು ನೋಡಿ “ವಾನರೇಶ್ವರ ದೇವೇಂದ್ರನು ಮಳೆಗರೆಯುವುದೂ ಸೂರ್ಯನು ಕತ್ತಲೆಯನ್ನು ಕಳೆಯುವುದೂ ಬೆಳದಿಂಗಳಿಂದ ಚಂದ್ರನು ಲೋಕವನ್ನು ಸಂತೋಷಗೊಳಿಸುವುದೂ ಹೇಗೆ ಸಹಜವೂ ಹಾಗೆಯೆ ಉಪಕಾರವೆಸಗಿದವರಿಗೆ ನೀನು ಪ್ರತ್ಯುಪಕಾರವೆಸಗುವುದೊಂದು ಆಶ್ಚರ್ಯವಲ್ಲ. ನಿನ್ನ ಸಹಾಯವೊಂದಿದ್ದರೆ ಯುದ್ಧದಲ್ಲಿ ಜಯಿಸುವುದೊಂದು ಕಷ್ಟವೇ? ಈ ಕಷ್ಟಕಾಲದಲ್ಲಿ ನೀನೇ ನನ್ನ ಆಪದ್‌ಬಂಧು. ತನ್ನ ನಾಶಕ್ಕಾಗಿಯೇ ರಾವಣನು ಸೀತೆಯನ್ನು ಅಪಹರಿಸಿದನು. ನನ್ನ ಹರಿತವಾದ ಬಾಣಗಳಿಂದಲೂ ನಿನ್ನ ನೆರವಿನಿಂದಲೂ ಇಂದ್ರನು ಪುಲೋಮನನ್ನು ಸಂಹರಿಸಿದಂತೆ ರಾವಣನನ್ನು ನಾಶಮಾಡುತ್ತೇನೆ?” ಎಂದನು.

ಶ್ರೀರಾಮನು ಹೀಗೆ ನುಡಿಯುತ್ತಿದ್ದಾಗಲೆ ಸೂರ್ಯನ ಕಾಂತಿ ಕಾಣದಂತೆ ಎಲ್ಲೆಲ್ಲಿಯೂ ಧೂಳು ಮುಸುಗಿತು. ಬೆಟ್ಟ ಕಾಡು ಭೂಮಿಗಳೆಲ್ಲವೂ ನಡುಗಿಹೋದುವು. ಕ್ಷಣಮಾತ್ರದಲ್ಲಿಯೆ ಕಾಮರೂಪಿಗಳಾದ ವಾನರರು ಕೋಟಿ ಸಂಖ್ಯೆಯಲ್ಲಿ ಮೇಘದಂತೆ ಗಂಭೀರವಾಗಿ ಧ್ವನಿಗೈಯುತ್ತ ಸುಗ್ರೀವನ ಸುತ್ತಲೂ ನೆರೆದುನಿಂತರು. ರಾಮಲಕ್ಷ್ಮಣರು ನೋಡುತ್ತಿರುವಂತೆಯೆ ಭೂಮಿಯೆಲ್ಲವೂ ವಾನರರಿಂದ ಮುಚ್ಚಿಹೋಯಿತು. ಶತಬಲಿ, ಸುಷೇಣ, ತಾರ, ಹನುಮಂತ, ನೀಲ, ಗಜ, ಕರಡಿಗಳ ಒಡೆಯರಾದ ಧೂಮ್ರ ಮತ್ತು ಜಾಂಬವ ಇವರೆಲ್ಲರೂ ತಮ್ಮ ಅಪಾರವಾದ ಸೇನಾಬಲದೊಡನೆ ಸುಗ್ರೀವನನ್ನು ಬಂದು ಸೇರಿದರು. ಹೀಗೆ ಬಂದು ನೆರೆದ ವಾನರರನ್ನು ಎಣಿಸಲು ಸಾವಿರ ಬಾಯ ಶೇಷನಿಗೂ ಅಸಾಧ್ಯವಾಯಿತು. ಹೀಗೆ ಬಂದ ವಾನರರು ಸುಗ್ರೀವನಿಗೆ ನಮಸ್ಕರಿಸಿ ಅವನ ಅಪ್ಪಣೆಯನ್ನು ಹಾರೈಸುತ್ತ ಕೈಕಟ್ಟಿಕೊಮಡು ನಿಂತರು.

ಆಗ ಪರಬಲಭಯಂಕರನಾದ ಸುಗ್ರೀವನು ಪುರುಷಸಿಂಹನಾದ ರಾಮನನ್ನು ಕುರಿತು: “ರಾಮಚಂದ್ರ, ಈಗ ನೆರೆದಿರುವ ವಾನರರಿಗೆ ಬೀಡು ಬಿಡಿಸಲು ಸ್ಥಳವಿಲ್ಲದಾಗಿದೆ. ಅವರ ಸಂಖ್ಯೆ ಅಷ್ಟು ಅಪರಿಮಿತವಾಗಿದೆ. ಇವರು ದೈತ್ಯರಂತೆ ಶೂರರು. ಸಂಚರಿಸುವುದರಲ್ಲಿ ವಾಯುವಿಗೆ ಸಮಾನರು. ಹಾರುವುದರಲ್ಲಿ ಇವರನ್ನು ಮೀರಿಸಿದವರೇ ಇಲ್ಲ. ಇಲ್ಲಿ ನೆರೆದಿರುವ ಕಪಿಗಳೆಲ್ಲರೂ ನಿನ್ನ ಅಪ್ಪಣೆಯನ್ನು ತಲೆಯಮೇಲಡ ಹೊತ್ತು ನಡೆಸಲು ಇಲ್ಲಿಗೆ ಬಂದಿರುವರು. ಇವರು ಮಾಡತಕ್ಕ ಕೆಲಸವನು ಅಪ್ಪಣೆ ಕೊಡಿಸು” ಎಂದನು. ಸುಗ್ರೀವನ ಮಾತನ್ನು ಕೇಳಿ ಹರ್ಷಗೊಂಡು ಶ್ರೀರಾಮನು ಅವನನ್ನು ಅಪ್ಪಿಕೊಂಡು ಈ ರೀತಿ ನುಡಿದನು: “ನೀತಿಕುಶಲನಾದ ಸುಗ್ರೀವ, ಮೊದಲು ವೈದೇಹಿ ಬದುಕಿರುವಳೊ ಇಲ್ಲವೊ ಎಂಬುದನ್ನು ತಿಳಿಯಬೇಕು. ಆ ಬಳಿಕ ರಾವಣನ ದೇಶವನ್ನು ಗೊತ್ತುಪಡಿಸಬೇಕು. ಸೀತೆ ಮತ್ತು ರಾವಣರ ವಿಷಯವನ್ನು ಅರಿತ ಬಳಿಕ ಮುಂದೆ ಮಾಡಬೇಕಾದ ಕಾರ್ಯವನ್ನು ನಿನ್ನೊಡನೆ ಯೋಚಿಸುತ್ತೇನೆ. ಆದ್ದರಿಂದ ಈ ಕಪಿವೀರರು ಈಗ ಮಾಡಬೇಕಾಗಿರುವ ಕಾರ್ಯವನ್ನು ನೀನೇ ಆಜ್ಞಾಪಿಸು. ನಿನ್ನಂಥ ಒಳ್ಳೆಯ ಮಿತ್ರ; ಪರಾಕ್ರಮಿಯಾದ ಲಕ್ಷ್ಮಣನು ಇರುವಲ್ಲಿ ನನ್ನ ಕಾರ್ಯ ಕೈಗೂಡುವುದರಲ್ಲಿ ಸಂದೇಹವೇನು?”

ಶ್ರೀರಾಮನ ಮಾತನ್ನು ಕೇಳಿ ವಾನರೇಶ್ವರನಾದ ಸುಗ್ರೀವನು ವಿನತನೆಂಬ ಸೇನಾಪತಿಯನ್ನು ಕರೆದು ಈ ರೀತಿ ಅಪ್ಪಣೆ ಮಾಡಿದನು: “ಅಯ್ಯಾ ವಿನತ, ನೀನು ದೇಶಕಾಲಗಳನ್ನು ತಿಳಿದವನು. ನೀತಿನಿಪುಣನಾದ ನೀನು ಶೂರರಾದ ಲಕ್ಷವಾನರರಿಂದ ಕೂಡಿ ಪೂರ್ವದಿಕ್ಕಿಗೆ ತೆರಳು. ಆ ದಿಕ್ಕಿನಲ್ಲಿರುವ ಕಾಡುಮೇಡುಗಳಲ್ಲಿ, ಲತಾಕುಂಜಗಳಲ್ಲಿ, ನದಿತೀರಗಳಲ್ಲಿ ಸೀತೆಯನ್ನು ಹುಡುಕತಕ್ಕದ್ದು. ಹಾಗೆಯೇ ರಾವಣನ ದೇಶವಾವುದೆಂಬುದನ್ನು ನೀವು ತಿಳಿದು ಬರಬೇಕು. ಮಾಳವ, ಮಗಧ, ವಂಗ ದೇಶಗಳಲ್ಲಿ ಸೀತೆಯನ್ನು ಹುಡುಕಿ. ಈ ಅನ್ವೇಷಣ ಕಾಲದಲ್ಲಿ ಎಲ್ಲ ಮನೆಗಳನ್ನೂ ನಾನಾಬಗೆಯ ಜನರನ್ನೂ ಪರೀಕ್ಷಿಸುವುದು ಅವಶ್ಯಕ. ಬೆಟ್ಟದಿಂದ ಬೆಟ್ಟಕ್ಕೆ, ಕಾಡಿನಿಂದ ಕಾಡಿಗೆ, ಕೋಟೆಯಿಂದ ಕೋಟೆಗೆ ಹಾರಿ ನಿಮ್ಮ ಕಾರ್ಯವನ್ನು ತ್ವರೆಗೊಳಿಸಿ. ಗರುಡನ ಅರಮನೆಯಲ್ಲಿ, ವರುಣನ ರಾಜಮಂದಿರದಲ್ಲಿ ಸೀತೆಯನ್ನು ಹುಡುಕಲು ಯತ್ನಿಸಿ ಹಾಗೆಯೆ ಘೋರ ರೂಪಿಗಳಾದ ರಾಕ್ಷಸರನ್ನೂ ನೀವು ಶೋಧಿಸದೆ ಬಿಡಕೂಡದು. ಈ ಕೆಲಸವನ್ನು ಪೂರೈಸಲು ನಿಮಗೆ ಕೊಟ್ಟಿರುವ ಅವಧಿ ಒಂದೇ ಒಂದು ತಿಂಗಳು ಮಾತ್ರ. ಆ ಅವಧಿಯಲ್ಲಿ ನೀವು ಎಲ್ಲೆಡೆಗಳಲ್ಲಿಯೂ ಹುಡುಕಿ ಸೀತೆಯಿರುವ ಸ್ಥಳವನ್ನು ತಿಳಿದು ಬರಬೇಕು. ಆ ಕಾಲವನ್ನು ಮೀರಿದವರು ವಧಾರ್ಹರಾಗುತ್ತಾರೆ. ”

ವಿನತನನ್ನು ಪೂರ್ವದಿಕ್ಕಿಗೆ ಕಳುಹಿದ ಮೇಲೆ, ಸುಗ್ರೀವನು ನೀಲ, ಹನುಮಂತ, ಜಾಂಬವಂತ, ಅಂಗದ, ಸುಷೇಣ ಮುಂತಾದ ವೀರರನ್ನು ಕರೆದು ದಕ್ಷಿಣದಿಕ್ಕಿಗೆ ಹೋಗುವಂತೆ ಅಪ್ಪಣೆಮಾಡಿದನು. ದಕ್ಷಿಣದಿಕ್ಕಿಗೆ ಹೊರಟು ನಿಂತ ಆ ಕಪಿವೀರರನ್ನು ಕುರಿತು ಸುಗ್ರೀವನು: “ವಾನರ ವೀರರ, ವಿಂಧ್ಯಪರ್ವತದಲ್ಲಿ, ನರ್ಮದಾ ಗೋದಾವರೀ ವರದಾ ನದಿಗಳಲ್ಲಿ, ಅವಂತಿಯೇ ಮೊದಲಾದ ಪಟ್ಟಣಗಳಲ್ಲಿ, ವಿದರ್ಭ ಮಹಿಷ ಕೇರಳ ಪಾಂಡ್ಯ ಮೊದಲಾದ ದೇಶಗಳಲ್ಲಿ ಸೀತೆಯನ್ನು ಹುಡುಕಿ ಆಕೆಯ ಸಮಾಚಾರವನ್ನು ನೀವು ತರಲೇಬೇಕು. ಮಲಯಪರ್ವತದಲ್ಲಿ ಅಗಸ್ತ್ರಯೃಷಿಯನ್ನು ಕಂಡು, ಅಲ್ಲಿಂದ ಮುಂದೆ ನಡೆದು, ಕಾವೇರಿ ಮತ್ತು ತಾಮ್ರಪರ್ಣಿ ನದಿಗಳಲ್ಲಿ ಸೀತೆಯನ್ನು ಹುಡುಕಿ. ಆ ಬಳಿಕ ಸಮುದ್ರತೀರವನ್ನು ಸೇರಿ ಅಲ್ಲಿ ನೀವು ಮಾಡಬೇಕಾದ ಕಾರ್ಯವನ್ನು ಯೋಚಿಸಿ. ಸಮುದ್ರದ ನಡುವೆ ಮಹೇಂದ್ರಪರ್ವತವಿದೆ. ಅಲ್ಲಿಯೂ ಸೀತೆಯನ್ನು ಹುಡುಕಿ. ಸಮುದ್ರದ ಸಮುದ್ರದ ಆಚೆಯ ದಡದಲ್ಲಿ ನೂರುಯೋಜನ ವಿಸ್ತೀರ್ಣವುಳ್ಳ ದ್ವೀಪದಲ್ಲಿ ನೀವು ಸೀತೆಯನ್ನು ಚೆನ್ನಾಗಿ ಹುಡುಕಬೇಕು. ದುರಾತ್ಮನಾದ ರಾವಣನಿಗೆ ಅದು ವಾಸಸ್ಥಾನ. ಇಷ್ಟೇ ಅಲ್ಲದೆ ಸೂರ್ಯವಂತ, ವೈದ್ಯುತಿ, ಕುಂಜರ ಮುಂತಾದ ಪರ್ವತಗಳಲ್ಲಿಯೂ, ಸರ್ಪಗಳಿಗೆ ವಾಸಸ್ಥಾನವಾದ ಭೋಗವತಿಯಲ್ಲಿಯೂ, ಸೀತೆಯನ್ನು ಹುಡುಕಿ. ವೀರರಿರಾ, ಈ ಪ್ರದೇಶಗಳಲ್ಲಿ ಹುಡುಕಿ ಒಂದು ತಿಂಗಳಲ್ಲಿ ಹಿಂದಿರುಗಿ ಬನ್ನಿ. ಸೀತೆಯ ಸಮಾಚಾರವನ್ನು ತಂದವರು ಒಂದುವೇಳೆ ಅಪರಾಧಮಾಡಿದರೂ ನನಗೆ ಪ್ರಿಯರಾಗುತ್ತಾರೆ” ಎಂದು ಅಪ್ಪಣೆ ಮಾಡಿ ಅವರನ್ನು ಬೀಳ್ಕೊಟ್ಟನು.

ಆಮೇಲೆ ಸುಗ್ರೀವನು ತಾರೆಯ ತಂದೆಯೂ ತನ್ನ ಮಾವನೂ ಆದ ಸುಷೇಣನಿಗೆ ನಮಸ್ಕರಿಸಿ, ಕೈಮುಗಿದು ಆತನಿಗೆ ಈ ರೀತಿ ನುಡಿದನು: “ವಾನರೋತ್ತಮರೇ, ನೀವೆಲ್ಲರೂ ಪಶ್ಚಿಮದಿಕ್ಕಿಗೆ ಹೋಗಿ ಸೀತೆಯನ್ನು ಹುಡುಕಬೇಕು. ಸೌರಾಷ್ಟ್ರ ಬಾಹ್ಲಿಕ ದೇಶಗಳನ್ನು ಕುರಿತು ಹೋಗಿ ಅಲ್ಲಿನ ಗ್ರಾಮಗಳನ್ನೂ ವನಗಳನ್ನೂ ಎಲೆವನಗಳನ್ನೂ ಚೆನ್ನಾಗಿ ಶೋಧಿಸಿ ಅಲ್ಲಿಂದ ಮುಂದೆ ಪಶ್ಚಿಮ ಸಮುದ್ರತೀರವನ್ನು ಸೇರಿ ಅಲ್ಲಿ ಸೀತೆಯನ್ನು ಹುಡುಕಿ. ಸಿಂಧೂನದಿ ಸಾಗರವನ್ನು ಸೇರುವಲ್ಲಿಯೂ ಹೇಮಗಿರಿಯಲ್ಲಿಯೂ ಸೀತೆಯನ್ನು ಹುಡುಕಬೇಕು. ವರಾಹ ಸುವರ್ಣಶೃಂಗಗಳೆಂಬ ಬೆಟ್ಟಗಳು ಬಿಮ್ಮ ಶೋಧನೆಗೆ ಯೋಗ್ಯವಾದುವು. ಹಾಗೆಯೆ ಪ್ರಾಗ್‌ಜ್ಯೋತಿಷ್ಯ ನಗರವನ್ನೂ ಶೋಧನೆ ಮಾಡಿ. ಈ ಪ್ರದೇಶಗಳಲ್ಲೆಲ್ಲ ಹುಡುಕಿ ಸೀತೆಯ ರಾವಣನ ವರ್ತಮಾನವನ್ನು ತನ್ನಿ. ಸೀತೆಯನ್ನು ಹುಡುಕುವ ಕಾರ್ಯದಲ್ಲಿ ನಿಮಗೆ ಸಹಾಯಕನಾಗಿ ನಿಮ್ಮೊಡನೆ ನನ್ನ ಮಾವನಾದ ಸುಷೇಣನು ಬರುತ್ತಾನೆ. ಸುಷೇಣನು ನಮ್ಮೆಲ್ಲರಿಗೂ ಹಿರಿಯನು ಹಾಗೂ ಗುರು. ಈತನನ್ನು ಮುಂದಿಟ್ಟುಕೊಂಡು. ಈತನ ಅಪ್ಪಣೆಯ್ನು ಪಾಲಿಸುತ್ತ ಪಶ್ಚಿಮ ದಿಕ್ಕಿನಲ್ಲೆಲ್ಲ ಹುಡುಕಿ ಬನ್ನಿ. ಶ್ರೀರಾಮನಿಂದ ನಮಗಾದ ಉಪಕಾರಕ್ಕೆ ಪ್ರತಿಯಾಗಿ ಸೀತೆಯನ್ನು ಹುಡುಕಿಕೊಟ್ಟು ಧನ್ಯರಾಗೋಣ. ” ಹೀಗೆಂದು ಹೇಳಿ ಸುಷೇಣನನ್ನು ಪಶ್ಚಿಮದಿಕ್ಕಿಗೆ ಕಳುಹಿಸಿಕೊಟ್ಟನು.

ಅನಂತರ ಸುಗ್ರೀವನು ಶತಬಲಿಯೆಂಬ ವಾನರನನ್ನು ಕರೆದು ಮೃದು ಮಾತಿನಿಂದಲೆ ಅವನಿಗೆ ಈ ರೀತಿ ಅಪ್ಪಣೆ ಮಾಡಿದನು: “ನಿನ್ನಂತೆ ಶೂರರಾದ ಲಕ್ಷವಾನರರೊಡಗೂಡಿ ಸೀತಾನ್ವೇಷಣಕ್ಕಾಗಿ ಉತ್ತರಕ್ಕೆ ತೆರಳು. ನಮ್ಮಿಂದ ಈ ಕಾರ್ಯ ಪೂರ್ಣವಾದುದೆ ಆದರೆ ಶ್ರೀರಾಮನ ಋಣದಿಂದ ಬಿಡುಗಡೆಹೊಂದಿ ನಾವು ಧನ್ಯರಾಗುತ್ತೇವೆ. ಆಗ ನಮ್ಮ ಬಾಳು ಸಫಲವೆನಿಸುತ್ತದೆ. ಉಪಕಾರಿಯಲ್ಲದ ಯಾಚಕನ ಕೆಲಸವನ್ನು ಮಾಡಿಕೊಡುವುದರಿಂದ ಬಾಳು ಸಫಲವಾಗುತ್ತದೆ. ಹೀಗೆಂದು ಮೇಲೆ ಉಪಕಾರಮಾಡಿದವರಿಗೆ ಪ್ರತಿಯಾಗಿ ಉಪಕಾರಮಾಡಿದರೆ ಹೇಳತಕ್ಕದ್ದೇನು? ಇದನ್ನು ನೆನಪಿನಲ್ಲಿಟ್ಟು ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು. ಮ್ಲೇಚ್ಛ, ಮದ್ರ, ಕಾಂಭೋಜ, ಕುರು, ಇವೇ ಮೊದಲಾದ ದೇಶಗಳಲ್ಲಿಯೂ ಕಾಡು ಬೆಟ್ಟಗಳಲ್ಲಿಯೂ ಸೀತೆಯನ್ನು ಹುಡುಕಿ, ಉತ್ತರಕ್ಕೆ ನೀವು ಹೋದುದೇ ಆದರೆ ನಿಮಗೆ ಕೈಲಾಸ ಪರ್ವತ ಸಿಗುವುದು. ಅಲ್ಲಿ ದೇವಶಿಲ್ಪಿಯಾದ ವಿಶ್ವಕರ್ಮನು ಕಟ್ಟಿರುವ ಕುಬೇರನ ಅರಮನೆ ಇದೆ. ಸಿರಯೊಡೆಯನಾದ ಕುಬೇರನು ಯಕ್ಷರೊಡನೆ ಅಲ್ಲಿ ರಮಿಸುವನು. ಆ ಕೈಲಾಸದ ಗುಹೆಗಳಲ್ಲಿ ನೀವು ಸೀತೆಯನ್ನು ಹುಡುಕತಕ್ಕದ್ದು ಇದೂ ಅಲ್ಲದೆ ಉತ್ತರ ಸಮುದ್ರದವರೆಗೆ ಇರುವ ಪ್ರದೇಶಗಳಲ್ಲೆಲ್ಲ ಚೆನ್ನಾಗಿ ಹುಡುಕಿ ಸೀತೆಯ ಹೆಜ್ಜೆಯನ್ನು ಕಂಡುಹಿಡಿಯಿರಿ. ನಾನು ಹೇಳದೆ ಬಿಟ್ಟಿರುವ ದೇಶಗಳಿಗೂ ಹೋಗಿ ನೀವು ಕಾರ್ಯಸಾಧನೆ ಮಾಡಿ, ನೀವು ದೇವಿಯ ಸಮಾಚಾರವನ್ನು ತಂದುದಾದರೆ ಶ್ರೀರಾಮನು ಸುಪ್ರೀತನಾಗುವನು, ನನಗೂ ಅದಕ್ಕಿಂತ ಹೆಚ್ಚು ಪ್ರಿಯವಾದ ಕಾರ್ಯ ಮತ್ತೊಂದಿಲ್ಲ. ” ಹೀಗೆಂದು ನುಡಿದು ಅವರನ್ನು ಕಳುಹಿಸಿಕೊಟ್ಟನು.

ನಾಲ್ಕು ದಿಕ್ಕುಗಳಿಗೂ ಶೂರರಾದ ವಾನರರನ್ನು ಕಳುಹಿಸಿಕೊಟ್ಟ ಮೇಲೆ ಸೀತೆಯನ್ನು ಹುಡುಕುವ ಕಾರ್ಯ ಹನುಮಂತನಿಂದಲೇ ನೆರವೇರುವುದೆಂದು ಸುಗ್ರೀವನು ಅರಿತನು. ಪರಾಕ್ರಮಿಯಾದ ಹನುಮಂತನನ್ನು ಕರೆದು ಸುಗ್ರೀವನು ಈ ರೀತಿ ನುಡಿದನು: “ಎಲೈ ವಾನರವೀರ, ಭೂಮಿಯಲ್ಲಾಗಲಿ ಆಕಾಸದಲ್ಲಾಗಲಿ ನಿನ್ನ ಸಂಚಾರಕ್ಕೆ ತಡೆಯ ಇಲ್ಲ. ವೇಗದಲ್ಲಿ, ತೇಜಸ್ಸಿನಲ್ಲಿ, ಹಾರುವಿಕೆಯಲ್ಲಿ ನೀನು ನಿನ್ನ ತಂದೆ ವಾಯುದೇವನಿಗೆ ಸಮಾನನೆನಿಸಿರುವೆ. ಬುದ್ಧಿಯಲ್ಲಿ, ನೀತಿ ಕುಶಲತೆಯಲ್ಲಿ. ನಿನ್ನನ್ನು ಮೀರಿಸಿದವರು ಮತ್ತೊಬ್ಬರಿಲ್ಲ. ಸೀತಾದೇವಿ ಯಾವ ಉಪಾಯದಿಂದಲಾದರೂ ದೊರಕುವಂತೆ ಮಾಡುವ ಭಾರ ನಿನ್ನದಾಗಿದೆ. ” ಸುಗ್ರೀವನ ಮಾತಿನಿಂದ ಹಿಡಿದ ಕೆಲಸವನ್ನು ಕೊನೆ ಮುಟ್ಟಿಸುವ ಶಕ್ತಿ ಮಾರುತಿಯಲ್ಲಿರುವುದೆಂದು ಶ್ರೀರಾಮನು ತಿಳಿದನು. ಸಂತೋಷದಿಂದ ಅವನನ್ನು ತನ್ನ ಬಳಿಗೆ ಬರಮಾಡಿಕೊಡು, ತನ್ನ ಮುದ್ರೆಯುಂಗುರವನ್ನು ಸೀತೆಗೆ ಗುರುತಿಗಾಗಿ ಕೊಡಲು ಅವನಿಗೆ ಕೊಟ್ಟನು. “ಎಲೈ ವಾನರಶ್ರೇಷ್ಠ, ಈ ಉಂಗುರವನ್ನು ನೋಡಿದೊಡನೆಯೆ ಸೀತೆ ಭಯಪಡದೆ ನೀನು ನನ್ನ ಕಡೆಯಿಂದ ಬಂದವನೆಂದು ತಿಳಿಯುತ್ತಾಳೆ. ನಿನ್ನ ಉದ್ಯೋಗ ಪರಾಕ್ರಮ ಇವುಗಳನ್ನು ನೋಡಿದರೆ ನಿನ್ನಿಂದಲೇ ಈ ಕಾರ್ಯ ನೆರವೇರುವಂತೆ ತೋರುತ್ತದೆ” ಎಂದು ನುಡಿದನು. ಆ ಮುದ್ರೆಯುಂಗುರವನ್ನು ತಲೆಯಲ್ಲಿ ಧರಿಸಿ, ಶ್ರೀರಾಮನಿಗೆ ನಮಸ್ಕರಿಸಿ ಹನುಮಂತನು ಪಯಣಹೊರಡಲು ಸಿದ್ಧನಾದನು.

ರಾಮಕಾರ್ಯಸಿದ್ಧಿಗಾಗಿ ಸುಗ್ರೀವನು ಮತ್ತೊಮ್ಮೆ ಎಲ್ಲ ವಾನರರನ್ನೂ ಕರೆದು, ತಾನು ಹೇಳಿದ ರೀತಿಯಲ್ಲಿ ಅವರೆಲ್ಲರೂ ಅನ್ವೇಷಣ ಕಾರ್ಯವನ್ನು ಸಾಧಿಸಬೇಕೆಂದು ಕಟ್ಟಪ್ಪಣೆ ಮಾಡಿದರು. ಸುಗ್ರೀವನ ಉಗ್ರಶಾಸನವನ್ನು ವಾನರೆಲ್ಲರೂ ಮನಸ್ಸಿಗೆ ತಂದುಕೊಂಡು, ಮಿಡತೆಗಳಂತೆ ಭೂಮಿಯೆಲ್ಲವನ್ನೂ ಮುಚ್ಚಿ ರಾಮಕಾರ್ಯಸಾಧನೆಗೆ ಹೊರಟರು. ಶ್ರೀರಾಮನು ಸೀತೆಯ ವೃತ್ತಾಂತವನ್ನೇ ನಿರೀಕ್ಷಿಸುತ್ತ ಲಕ್ಷ್ಮಣನೊಡನೆ ಮತ್ತೊಂದು ತಿಂಗಳು ಕಾಲ ಆ ಪ್ರಸ್ರವಣಗಿರಿಯಲ್ಲಿ ನಿಂತನು.

* * *