ಸುಗ್ರೀವನು ಉತ್ತರೀಯದಲ್ಲಿ ಕಟ್ಟಿರಿಸಿದ್ದ ಸೀತೆಯ ಒಡವೆಗಳನ್ನು ತರಿಸಿದನು.

ಆ ಬಳಿಕ ಸುಗ್ರೀವನು “ಸೀತಾದೇವಿ ಸ್ವರ್ಗದಲ್ಲಿರಲಿ; ಎಲ್ಲಿದ್ದರೂ ಆಕೆಯನ್ನು ಸತ್ಯವಾಗಿ ಜಾಗ್ರತೆಯಾಗಿ ತರಿಸಿಕೊಡುತ್ತೇನೆ” ಎಂದು ಪ್ರತಿಜ್ಞೆ ಮಾಡಿದನು. ಅಲ್ಲದೆ ರಾವಣನು ಸೀತೆಯನ್ನು ಕೊಂಡೊಯ್ಯುತ್ತಿದ್ದಾಗ, ಆಕೆ ರಾಮಾ ಲಕ್ಷ್ಮಣಾ ಎಂದು ಗೋಳಿಡುತ್ತಾ ಬೆಟ್ಟದ ತುದಿಯಲ್ಲಿದ್ದ ತಮ್ಮನ್ನು ನೋಡಿ, ಸೆರಗಿನಲ್ಲಿ ಸುತ್ತಿ ಆಭರಣಗಳನ್ನು ತಮ್ಮ ಕಡೆ ಎಸೆದಳೆಂದೂ ಅವು ತಮ್ಮ ಬಳಿ ಇರುವುವೆಂದೂ ಬಿನ್ನೈಸಿಕೊಂಡನು. ಈ ಶುಭಸಮಾಚಾರವನ್ನು ಕೇಳಿದೊಡನೆಯೆ ತನ್ನ ಪ್ರಿಯೆಯ ಆಭರಣಗಳನ್ನು ನೋಡಲು ಶ್ರೀರಾಮನ ಮನಸ್ಸು ತವಕಗೊಂಡಿತು. ರಾಮನ ಕಾತುರವನ್ನು ಕಂಡು ಸುಗ್ರೀವನು ಉತ್ತರೀಯದಲ್ಲಿ ಕಟ್ಟಿರಿಸಿದ್ದ ಆ ಒಡವೆಗಳನ್ನು ತರಿಸಿದನು.

ಒಡವೆಗಳನ್ನು ನೋಡುತ್ತಲೆ ಮಂಜುಮುಸುಕಿದ ಚಂದ್ರನಂತೆ ಶ್ರೀರಾಮನು ಕಂಬನಿದುಂಬಿದನು. ಸೀತೆಯಲ್ಲಿದ್ದ ಪ್ರೇಮದಿಂದ ಶ್ರೀರಾಮಚಂದ್ರನು ಕಣ್ಣೀರುಬಿಡುತ್ತ, ಕ್ಷತ್ರಿಯನಿಗೆ ಸಹಜವಾದ ಧೈರ್ಯವನ್ನು ಕಳೆದುಕೊಂಡು ಭೂಮಿಯಲ್ಲಿ ಬಿದ್ದುಬಿಟ್ಟನು. ಸ್ವಲ್ಪಕಾಲದ ಮೇಲೆ ಚೇತರಿಸಿಕೊಂಡು. ಹುತ್ತದಲ್ಲಿರುವ ಹಾವಿನಂತೆ ನಿಟ್ಟುಸಿರು ಬಿಡುತ್ತ, “ಲಕ್ಷ್ಮಣ, ಸೀತೆಯ ಉತ್ತರೀಯವನ್ನೂ ಮತ್ತು ಆಭರಣಗಳನ್ನೂ ನೋಡು” ಎಂದು ಗೋಳಾಡತೊಡಗಿದನು. ರಾಮನ ಮಾತಿಗೆ ಲಕ್ಷ್ಮಣನು ಹೇಳಿದನು: “ಅಣ್ಣ, ನಾನು ದೇವಿಯ ಕರ್ಣಭೂಷಣಗಳನ್ನಾಗಲಿ ಕೇಯೂರಗಳನ್ನಾಗಲಿ ಕಂಡರಿಯೆ. ದಿನದಿನವೂ ಅತ್ತಿಗೆಯ ಪಾದಗಳಿಗೆ ನಮಸ್ಕರಿಸುತ್ತಿದ್ದ ನನಗೆ ನೂಪುರಗಳ ಪರಿಚಯ ಮಾತ್ರ ಉಂಟು. ”

ಅನಂತರ ರೋಷದಿಂದ ಕುದಿದುಹೋದ ರಾಮನ ಸುಗ್ರೀವನನ್ನು ಕುರಿತು “ಸುಗ್ರೀವ, ರಾಕ್ಷಸನು ಕದ್ದುಕೊಂಡು ಹೋಗುತ್ತಿದ್ದ ನನ್ನ ಪ್ರಿಯೆಯನ್ನು ನೀನೆಲ್ಲಿ ನೋಡಿದೆ? ಹೇಳು. ಆ ಕ್ರೂರ ರಕ್ಕಸನು ಎಲ್ಲಿರುವನು? ಸೀತೆಯನ್ನು ಕದ್ದೊಯ್ದ ಅವನು ತನ್ನ ನಾಶಕ್ಕಾಗಿ ಮೃತ್ಯುವಿನ ಮನೆಯ ಬಾಗಿಲನ್ನೆ ತೆರೆದುಕೊಂಡು ಹೋಗಿದ್ದಾನೆ!” ಹೀಗೆಂದು ನುಡಿದು ಮತ್ತೆ ಕಣ್ಣೀರುದುಂಬಿದನು.

ರಾಮನ ಮಾತನ್ನು ಕೇಳಿ ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಂಡು ಗದ್ಗದಸ್ವರದಿಂದ ಸುಗ್ರೀವನು ಹೇಳಿದನು: “ಎಲೈ ಅರಿಂದಮ, ಆ ರಾಕ್ಷಸನಿರುವ ಸ್ಥಳವನ್ನಾಗಲಿ ಅವನ ವಂಶವನ್ನಾಗಲಿ ನಾನು ಅರಿಯೆ. ಆದರೆ ಸೀತೆಯನ್ನು ನೀನು ಮರಳಿ ಪಡೆಯಲು ಯತ್ನಿಸುತ್ತೇನೆಂದು ಮಾತ್ರ ಪ್ರತಿಜ್ಞೆಮಾಡುತ್ತೇನೆ. ಆದ್ದರಿಂದ ಶೋಕವನ್ನು ಬಿಡು. ರಾವಣನನ್ನು ಕೊಂದು ನಿನ್ನ ಪೌರುಷವನ್ನು ಮರೆಯಲು ಬಹುಬೇಗ ಅವಕಾಶವನ್ನು ಕಲ್ಪಿಸಿಕೊಡುತ್ತೇನೆ. ನಿನ್ನಂಥವನು ದೈನ್ಯವೃತ್ತಿಯನ್ನು ಬಿಟ್ಟು ಧೈರ್ಯವನ್ನು ಅವಲಂಬಿಸಬೇಕು. ನಿನ್ನಂತೆ ನನ್ನ ಹೆಂಡತಿ ಅಪಹೃತಳಾಗಿದ್ದರೂ ನಾನು ಶೋಕಿಸುತ್ತ ಕುಳಿತಿಲ್ಲ; ಧೈರ್ಯವನ್ನು ಬಿಟ್ಟಿರುವುದಿಲ್ಲ. ಸಾಮಾನ್ಯ ಕಪಿಯಾದ ನಾನೇ ಹೀಗಿರುವಲ್ಲಿ ಮಹಾತ್ಮನೂ ವಿನೀತನೂ ಧೈರ್ಯಶಾಲಿಯೂ ಆದ ನೀನು ಕಣ್ಣೀರು ಬಿಡುವುದು ಯೋಗ್ಯವಲ್ಲ. ಆದ್ದರಿಂದ ಪೌರುಷರನ್ನು ಆಶ್ರಯಿಸು; ದುಃಖಕ್ಕೆ ಸ್ಥಳಕೊಡಬೇಡ, ಏಕೆಂದರೆ ದುಃಖಿಗಳಿಗೆ ಸುಖಿಲ್ಲ. ರಾಮಚಂದ್ರ, ಸ್ನೇಹಭಾವದಿಂದ ಈ ಮಾತುಗಳನ್ನು ನಿನಗೆ ಹೇಳಿದೆನೆ ಹೊರತು ಉಪದೇಶದ ಉದ್ದೇಶದಿಂದಲ್ಲ. ”

ಸುಗ್ರೀವನ ಮಧುರವಾದ ಮಾತುಗಳು ರಾಮನಿಗೆ ಸಮಾಧಾನವನ್ನು ತುಂದವು. ವಸ್ತ್ರದ ಕೊನೆಯಿಂದ ಮುಖವನ್ನು ಒರೆಸಿಕೊಂಡು ರಾಮನು ಸುಗ್ರೀವನನ್ನು ಬಿಗಿಯಾಗಿ ಅಪ್ಪಿಕೊಂಡನು. “ಅಯ್ಯಾ, ಕಪಿವರ, ನನಗೆ ನಿನ್ನಂಥ ಬಂಧು ದೊರಕುವುದು ದುರ್ಲಭ್ಯ. ಸೀತೆಯನ್ನು ಹುಡುಕಿಸಲು ಎಲ್ಲ ಪ್ರಯತ್ನಗಳನ್ನೂ ಮಾಡು. ಮಳೆಗಾಲದಲ್ಲಿ ನೆನೆದ ಭೂಮಿಯಂತೆ ನಿನ್ನ ಕಾರ್ಯವೆಲ್ಲ ಫಲಿಸುತ್ತದೆ. ನಾನೂ ನನ್ನ ಪ್ರತಿಜ್ಞೆಯನ್ನು ನಡೆಸಿಕೊಡುತ್ತೇನೆ. ”

ಈ ಮಾತುಗಳನ್ನು ಕೇಳಿ ಹರ್ಷಗೊಂಡ ಸುಗ್ರೀವನು ರಾಮನಲ್ಲಿ ತನ್ನ ದುಃಖವನ್ನು ತೋಡಿಕೊಂಡನು. “ರಾಮಚಂದ್ರ, ನಿನ್ನ ಸಹಾಯವೊಂದಿದ್ದರೆ ಸ್ವರ್ಗವನ್ನೇ ಪಡೆಯುವ ಯೋಗ್ಯತೆಯುಂಟಾಗುವಾಗ ಈ ಕಪಿರಾಜ್ಯ ಸಂಪಾದನೆ ಎಷ್ಟರದು! ಈಗ ನಾನು ಅಣ್ಣನಾದ ವಾಲಿಯಿಂದ ರಾಜ್ಯಭ್ರಷ್ಟನಾಗಿದ್ದೇನೆ. ನನ್ನ ಹೆಂಡತಿಯನ್ನು ಅವನು ಅಪಹರಿಸಿದ್ದಾನೆ. ವಾಲಿಯ ಭಯದಿಂದ ನಾನು ಈ ಋಷ್ಯಮೂಕಪರ್ವತದಲ್ಲಿ ಸಂಚರಿಸುತ್ತಿದ್ದೇನೆ. ಅವನ ವಿಷಯದಲ್ಲಿ ನೀನು ನನಗೆ ಅಭಯವನ್ನು ಕೊಡಬೇಕು. ” ಹೀಗೆ ನುಡಿಯುತ್ತಿದ್ದಂತೆಯೆ ಆ ಕಪಿವೀರನ ಕೆನ್ನೆಯ ಮೇಲೆ ಕಣ್ಣೀರ ಹೊಳೆ ನೆರೆಯುಕ್ಕಿದಂತೆ ಹರಿಯಿತು. ಮತ್ತೆ ಬಾಯಿಂದ ಮಾತು ಹೊರಡಲಿಲ್ಲ. ಒತ್ತಿಬರುವ ದುಃಖವನ್ನು ಹೇಗೋ ತಡೆದುಕೊಂಡು ತಾನು ಬದುಕುವುದೂ ಸುಖವಾಗಿರುವುದೂ ವಾಲಿವಧೆಯನ್ನೇ ಅವಲಂಬಿಸಿದೆಯೆಂದು ಹೇಳಿಕೊಂಡನು. ರಾಮನು ಸುಗ್ರೀವನಿಗೆ ಅಭಯಕೊಟ್ಟು, ಅಣ್ಣತಮ್ಮಂದಿರಿಗೆ ವೈರವುಂಟಾಗಲು ಕಾರಣವನ್ನು ವಿಶದವಾಗಿ ತಿಳಿಸಬೇಕೆಂದು ಕೇಳಿದನು. ಶ್ರೀರಾಮನ ಕೋರಿಕೆಯಂತೆ ಸುಗ್ರೀವನು ತನ್ನ ಪೂರ್ವ ವೃತ್ತಾಂತವನ್ನು ಈ ರೀತಿಯಾಗಿ ತಿಳಿಸಿದನು:

“ಅಣ್ಣನಾದ ವಾಲಿ ನನಗೂ ನನ್ನ ತಂದೆಗೂ ಅತ್ಯಂತ ಪ್ರಿಯನಾಗಿದ್ದನು. ನನ್ನ ತಂದೆ ಋಕ್ಷರಜಸ್ಸು ಕಾಲವಾಗಲು ಮಂತ್ರಿಗಳು ವಾಲಿಯನ್ನು ಕಪಿರಾಜ್ಯದಲ್ಲಿ ಅಭಿಷೇಕಮಾಡಿದರು. ತಾತಮುತ್ತಾತಂದಿರ ಕಾಲದಿಂದ ಬಂದ ರಾಜ್ಯವನ್ನು ಕಾಪಾಡುತ್ತಿದ್ದ ಅಣ್ಣನಿಗೆ ನಾನು ಎಲ್ಲ ಕಾಲಗಳಲ್ಲಿಯೂ ವಿಧೇಯನಾಗಿಯೇ ಇದ್ದೆ. ಹೀಗಿರಲು ಅಣ್ಣನಾದ ವಾಲಿಗೂ ದುಂದುಭಿಯೆಂಬ ರಾಕ್ಷಸನಿಗೂ ಕಡುಹಗೆಯುಂಟಾಯಿತು. ಒಮ್ಮೆ ದುಂದುಭಿ ಕಿಷ್ಕಿಂಧೆಯ ಹೆಬ್ಬಾಗಿಲ ಬಳಿಗೆ ಬಂದು ಯುದ್ಧಕ್ಕೆ ಬರಬೇಕೆಂದು ವಾಲಿಯನ್ನು ಕರೆದು ಸಿಂಹನಾದಮಾಡಿದನು. ಆಗ ಎಲ್ಲರೂ ಮಲಗಿ ನಿದ್ರೆ ಹೋಗುತ್ತಿದ್ದ ಸಮರಾತ್ರಿಯಾಗಿತ್ತು. ಆ ಭಯಂಕರವಾದ ಧ್ವನಿಯನ್ನು ಕೇಳಿ ರೋಷದಿಂದ ಹುಚ್ಚೆದ್ದ ವಾಲಿ, ನಾನೂ ಹೆಂಗಸರೂ ಅವನನ್ನು ತಡೆಯುತ್ತಿದ್ದರೂ ನಮ್ಮನ್ನು ಒತ್ತರಿಸಿ ಯುದ್ಧಕ್ಕೆ ಹೊರಟನು. ಅಣ್ಣನಲ್ಲಿದ್ದ ಸಹಜವಾದ ಪ್ರೇಮದಿಂದ ನಾನೂ ಅವನನ್ನು ಹಿಂಬಾಲಿಸಿದೆ. ನಮ್ಮಿಬ್ಬರನ್ನು ನೋಡಿದೊಡನೆಯೆ ಆ ರಾಕ್ಷಸನು ಓಡತೊಡಗಿದನು. ಅವನನ್ನು ಹಿಂಬಾಲಿಸಿ ನಾವೂ ಓಡತೊಡಗಿದೆವು. ಆಗ ಮಾರ್ಗವೂ ಚಂದ್ರನಿಂದ ಪ್ರಕಾಶಮಾನವಾಗಿತ್ತು. ಓಡುತ್ತಿದ್ದ ರಾಕ್ಷಸನು ದುರ್ಗಮವಾದ ಮತ್ತು ಹುಲ್ಲಿನಿಂದ ತುಂಬಿದ ದೊಡ್ಡದೊಂದು ಬಿಲವನ್ನು ಹೊಕ್ಕನು. ನಾವೂ ಆ ಬಿಲದ ಬಳಿಗೆ ಬಂದೆವು. ಆಗ ಕೋಪಗೊಂಡ ವಾಲಿ ‘ಸುಗ್ರೀವ, ನಾನು ಬಿಲವನ್ನು ಹೊಕ್ಕು ಈ ರಾಕ್ಷಸನನ್ನು ಕೊಂದು ಬರುವವರೆಗೆ ನೀನು ಆತಂಕಗೊಳ್ಳದೆ ಇಲ್ಲಿಯೆ ಇರು’ ಎಂದು ಅಪ್ಪಣೆಮಾಡಿದನು. ನಾನು ಅವನನ್ನು ಹಿಂಬಾಲಿಸುವೆನೆಂದು ಎಷ್ಟೇ ಬೇಡಿಕೊಂಡರು ಒಪ್ಪದೆ ನನ್ನ ಮೇಲೆ ಆಣೆಯಿಟ್ಟು ವಾಲಿ ಬಿಲವನ್ನು ಹೊಕ್ಕನು. ಬಿಲವನ್ನು ಹೊಕ್ಕ ನಮ್ಮಣ್ಣ ಒಂದು ವರ್ಷವಾದರೂ ಬಿಲದಿಂದ ಹಿಂದಿರುಗಲಿಲ್ಲ. ಅಣ್ಣನಲ್ಲಿದ್ದ ಪ್ರೇಮದಿಂದ ಅವನಿಗೆ ಕೇಡಾಗಿರಬಹುದೆಂದು ನಾವು ಊಹಿಸಿದೆ. ಬಿಲದಿಂದ ಹೊರಟ ನೊರೆ ನೆತ್ತರು ನನ್ನ ಊಹೆಯನ್ನು ಬಲಪಡಿಸಿತು. ಅಲ್ಲದೆ ಬಿಲದಿಂದ ರಾಕ್ಷಸರ ಭಯಂಕರವಾದ ಗರ್ಜನೆಯ ಧ್ವನಿ ಕೇಳಿಬರುತ್ತಿತ್ತು. ಬಿಲದಿಂದ ಹೊರಟುಬರುತ್ತಿದ್ದ ರಕ್ತವನ್ನು ಕಂಡು, ಧ್ವನಿಯನ್ನು ಕೇಳಿ ವಾಲಿ ಮಡಿದನೆಂದೇ ನಿಶ್ಚೈಸಿದನು. ಆ ಬಿಲದ ಬಾಗಿಲಿಗೆ ದೊಡ್ಡದೆಂದು ಬಂಡೆಯನ್ನೊಡ್ಡಿ, ಬಹುಸಂಕಟದಿಂದ ರಾಜಧಾನಿಗೆ ಹಿಂದುರುಗಿ ಬಂದೆ. ಈ ವರ್ತಮಾನವನ್ನು ಕೇಳಿ ಮಂತ್ರಿಗಳು ನನ್ನನ್ನೇ ರಾಜ್ಯದಲ್ಲಿ ಅಭಿಷೇಕಿಸಿದರು. ಆದರೆ ವಾಲಿ ಕೆಲಕಾಲದ ಮೇಲೆ ರಾಕ್ಷಸನನ್ನು ಕೊಂದು ನಗರಿಗೆ ಹಿಂದಿರುಗಿ ಬಂದು, ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದ ನನ್ನನ್ನು ನೋಡಿ ಕೋಪಗೊಂಡನು. ನನ್ನ ಮಂತ್ರಿಗಳನ್ನು ಸೆರೆಯಲ್ಲಿಡಿಸಿದನು. ಆಡಬಾರದ ಮಾತುಗಳನ್ನು ಆಡಿದನು. ಅಣ್ಣನನ್ನು ಮರ್ಯಾದೆಯಿಂದ ಕಂಡು ಆತನಿಗೆ ನಮಸ್ಕರಿಸಿದರೂ ಕೋಪಗ್ರಸ್ತನಾದ ಅವನು ನನ್ನನ್ನು ಹರಸಲಿಲ್ಲ. ಅನುಗ್ರಹಿಸಲಿಲ್ಲ.

“ಅನಂತರ ರೋಷಗೊಂಡ ವಾಲಿಯನ್ನು ಸಮಾಧಾನಗೊಳಿಸಿ, ನಡೆದ ವಿಷಯವನ್ನು ಅವನಿಗೆ ತಿಳಿಸಿ, ಅಣ್ಣನ ಕ್ಷಮೆಯನ್ನು ಬೇಡಿದೆ. ಅವನ ರಾಜ್ಯವನನು ಅವನಿಗೊಪ್ಪಿಸುವೆನೆಂದೆ. ಆದರೆ ವಾಲಿ ನನ್ನನ್ನು ಪರಿಪರಿಯಾಗಿ ನಿಂದಿಸಿದನು. ಮಂತ್ರಿಗಳನ್ನೂ ಪುರಜನರನ್ನೂ ಬರಮಾಡಿಕೊಂಡು, ಹಿಂದೆ ನಡೆದುದೆಲ್ಲವನ್ನೂ ಅವರಿಗೆ ತಿಳಿಸಿ ನಮ್ಮ ಅಣ್ಣ ಮತ್ತೆ ಈ ರೀತಿ ನುಡಿದನು: “ಆ ಮಾಯಾವಿಯಾದ ರಾಕ್ಷಸನನ್ನು ಹುಡುಕುವುದರಲ್ಲಿಯೇ ಒಂದು ವರ್ಷ ಕಳೆದುಹೋಯಿತು. ಆ ಬಳಿಕ ಅವನನ್ನೂ ಇನ್ನುಳಿದ ರಾಕ್ಷಸರನ್ನೂ ಸುಲಭವಾಗಿ ಕೊಂದುಬಿಟ್ಟೆ. ಹಗೆಯನ್ನು ಕೊಂದು ಬಿಲದ ಬಾಗಿಲಬಳಿಗೆ ಬರುವ ವೇಳೆಗೆ ದೊಡ್ಡ ಬಂಡೆಯಿಂದ ಅದು ಮುಚ್ಚಿಹೋಗಿತ್ತು. ‘ಸುಗ್ರೀವ, ಸುಗ್ರೀವ’ ಎಂದು ಕೂಗಿದರೂ ಉತ್ತರವೆ ಬರಲಿಲ್ಲ. ಇದರಿಂದ ದುಃಖಗೊಂಡ ನಾನು ಬಂಡೆಯನ್ನೊದ್ದು ಹೊರಗೆ ಬಂದೆ. ಒಡಹುಟ್ಟಿದವರಲ್ಲಿರಬೇಕಾದ ಪ್ರೇಮವನ್ನು ತೊರೆದು ಈ ದ್ರೋಹಿ ನನ್ನ ರಾಜ್ಯವನ್ನು ಅಪಹರಿಸಿದ್ದಾನೆ” ಹೀಗೆಂದು ನುಡಿದು ವಾಲಿ ಏಕವಸ್ತ್ರದಿಂದ ನನ್ನನ್ನು ರಾಜ್ಯದಿಂದ ಹೊರಡಿಸಿದನು. ಅಲ್ಲದೆ ನನ್ನ ಹೆಂಡತಿಯನ್ನೂ ಅಪಹರಿಸಿದನು. ವಾಲಿಯ ಭಯದಿಂದ ನಾನು ಋಷ್ಯಮೂಕಪರ್ವತದಲ್ಲಿ ಅವನನ್ನು ನಿಗ್ರಹಿಸಿ, ರಾಮಚಂದ್ರ, ನನ್ನನ್ನು ಅನುಗ್ರಹಿಸು. ”

ಸುಗ್ರೀವನ ಮಾತನ್ನು ಕೇಳಿ ಶ್ರೀರಾಮನು ಮುಗುಳುನಗೆ ಸೂಸುತ್ತ “ಸೂರ್ಯನಂತೆ ಪ್ರಕಾಶವುಳ್ಳ ನನ್ನ ಬಾಣಗಳೂ ಕೆಟ್ಟನಡತೆಯಲ್ಲಿ ತೊಡಗಿರುವ ವಾಲಿಯನ್ನು ಬಹುಬೇಗ ಕೊಲ್ಲುತ್ತವೆ. ನಿನ್ನ ಹೆಂಡತಿಯನ್ನು ಕದ್ದಿರುವ ಆ ಪಾಪಿ ನನ್ನ ಕಣ್ಣಿಗೆ ಬೀಳುವವರೆಗೆ ಮಾತ್ರ ಜೀವಿಸಿರುತ್ತಾನೆ. ನನ್ನಂತೆ ಹೆಂಡತಿಯನ್ನು ಕಳೆದುಕೊಂಡು ಆಕೆಯ ಅಗಲಿಕೆಯಿಂದ ಸಂಕಟಪಡುತ್ತಿರುವ ನಿನ್ನನ್ನು ಈ ದುಃಖದಿಂದ ದಾಟಿಸಿ ನಿನ್ನ ಕೋರಿಕೆಯನ್ನು ಈಡೆರಿಸುತ್ತೇನೆ” ಎಂದು ಅಭಯವನ್ನು ನೀಡಿದನು. ಆ ಭರವಸೆಯ ಮಾತನ್ನು ಕೇಳಿ ಸುಗ್ರೀವನ ಮುಖ ಸಂತೋಷದಿಂದ ಅರಳಿತು.

ಆದರೂ ರಾಮನ ಸಾಮರ್ಥ್ಯದಲ್ಲಿ ಶಂಕೆಗೊಂಡು ಸುಗ್ರೀವನು ಮತ್ತೆ ನುಡಿದನು: “ಪ್ರಳಯಕಾಲದ ಸೂರ್ಯನಂತೆ ಲೋಕಗಳನ್ನು ದಹಿಸುವ ಶಕ್ತಿ ನಿನ್ನ ಬಾಣಗಳಿಗೆ ಉಂಟೆಂಬುದನ್ನು ನಾನು ಕೇಳಿಬಲ್ಲೆ; ಆದರೆ ವಾಲಿಯ ಧೈರ್ಯ ಮತ್ತು ಸ್ಥೈರ್ಯಗಳು ಲೋಕಪ್ರಸಿದ್ಧವಾಗಿವೆ. ಆತನು ಅನುದಿನವೂ ನಿತ್ಯಕರ್ಮಗಳನ್ನು ಆಚರಿಸಲು ನಾಲ್ಕು ಸಮುದ್ರಗಳಿಗೂ ಅನಾಯಾಸವಾಗಿ ಹಾರಿಹೋಗುತ್ತಾನೆ. ಬೆಟ್ಟವನ್ನು ಏರಿ ಅದರ ಶಿಖರಗಳನ್ನು ಅವು ಎಷ್ಟೇ ದೊಡ್ಡವಾದರೂ ಮೇಲಕ್ಕೆ ಹಾರಿಸಿ ಮತ್ತೆ ಅವುಗಳನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾನೆ. ವಾಲಿಯ ಪರಾಕ್ರಮದಿಂದ ಕಾಡಿನಲ್ಲಿ ಭಗ್ನವಾದ ಮರಗಳೆಷ್ಟೊ! ಸಾವಿರ ಆನೆಗಳ ಬಲವುಳ್ಳ, ವರುಣ ಹಿಮವಂತರನ್ನು ಹೆದರಿಸಿದ ದುಂದುಭಿಯೆಂಬ ರಾಕ್ಷಸನನ್ನು ವಾಲಿ ಯುದ್ಧದಲ್ಲಿ ನಿರಾಯಾಸವಾಗಿ ಕೊಂದುಹಾಕಿದ್ದಾನೆ. ಕೊಂದ ಬಳಿಕ ಆ ರಕ್ಕಸನ ದೇಹವನ್ನು ಒಂದು ಗಾವುದ ಎತ್ತರಕ್ಕೆ ಚಿಮ್ಮಿ, ಅದು ಮತಂಗಮುನಿಯ ಆಶ್ರಮದಲ್ಲಿ ಬೀಳುವಂತೆ ಮಾಡಿದ್ದಾನೆ. ವಾಲಿಯ ಈ ಅಕಾರ್ಯವನ್ನು ಕಂಡು ಅವನು ಆ ಆಶ್ರಮವನ್ನು ಪ್ರವೇಶಿಸಿದುದೇ ಆದರೆ ಸಾವೈದುವನೆಂದು ಋಷಿ ಶಪಿಸಿದನು. ಅಂದಿನಿಂದ ಋಷಿಯ ಶಾಪಕ್ಕೆ ಅಂಜಿ ವಾಲಿ ಋಷ್ಯಮೂಕಪರ್ವತದ ಪ್ರದೇಶವನ್ನು ಪ್ರವೇಶಮಾಡುವುದಿಲ್ಲ. ಆದ್ದರಿಂದಲೆ ನಾನು ಈ ವನದಲ್ಲಿ ಮಂತ್ರಿಗಳೊಡನೆ ಅಳಲ ಹೊರೆ ಹೊತ್ತು ಸಂಚರಿಸುತ್ತಿದ್ದೇನೆ. ರಾಮಚಂದ್ರ, ಅಲ್ಲಿ ನೋಡು, ವಾಲಿಯ ಪರಾಕ್ರಮದಿಂದ ಕೆಳಕ್ಕೆ ಬಿದ್ದಿರುವ ಪರ್ವತಕ್ಕೆ ಸಮನಾದ ದುಂದುಭಿಯ ಶರೀರ ಕಾಣಿಸುತ್ತಿದೆ. ಅಲ್ಲದೆ ಇಲ್ಲಿಗೆ ಕಾಣಿಸುತ್ತಿರುವ ಆ ವಿಪುಲವಾಗಿ ಬೆಳೆದಿರುವ ಸಪ್ತ ಸಾಲವೃಕ್ಷಗಳಲ್ಲಿ ಒಂದು ವೃಕ್ಷವನ್ನು ಒಂದೇ ಬಾಣದಿಂದ ಒಂದೇ ಬಾರಿಗೆ ಎಲೆಗಳಿಲ್ಲದಂತೆ ಉದುರಿಸುವ ಸಾಮರ್ಥ್ಯ ವಾಲಿಗಿದೆ. ಈ ತೆರನಾದ ಪರಾಕ್ರಮವನ್ನು ಪಡೆದ ವಾಲಿಯನ್ನು ಕೊಲ್ಲಲು ನೀನು ಹೇಗೆ ಸಮರ್ಥನಾಗುವೆ? ಈ ಸಂಶಯ ನನ್ನನ್ನು ಕಾಡುತ್ತಿದೆ. ”

ವಾಲಿಯನ್ನು ಕೊಲ್ಲುವ ವಿಷಯದಲ್ಲಿ ಸುಗ್ರೀವನಿಗೆ ನಂಬಿಕೆಯನ್ನುಂಟುಮಾಡಲು, ಶ್ರೀರಾಮನು ದುಂದುಭಿಯ ದೇಹವನ್ನು ತನ್ನ ಕಾಇನ ಹೆಬ್ಬೆರಳಿನಿಂದ ಅಲುಗಿಸಿ, ಅದನ್ನು ಹತ್ತು ಗಾವುದದ ಎತ್ತರಕ್ಕೆ ಚಿಮ್ಮಿದನು. ಆದರೆ ಒಣಗಿದ ಆ ದೇಹವನ್ನು ಅಷ್ಟುದೂರ ಚಿಮ್ಮಿದರೂ ರಾಮಚಂದ್ರನ ಕಾರ್ಯ ಅಷ್ಟು ಅಧಿಕವಾಗಿ ಕಾಣಿಸದೆ ಸುಗ್ರೀವನಿಗೆ ನಂಬಿಕೆಯನ್ನುಂಟುಮಾಡಲಿಲ್ಲ. ಆದಕಾರಣ ಸಾಲವೃಕ್ಷಭೇದನದಿಂದ ರಾಮನ ಪರಾಕ್ರಮವನ್ನು ಅಳೆದು, ವಾಲಿವಧೆಯ ವಿಷಯದಲ್ಲಿ ನಂಬಿಕೆಯನ್ನು ಪಡೆಯಲು ಆ ಕಪಿವೀರನು ಬಯಸಿದನು. ಈ ವಿಷಯದಲ್ಲಿ ಸುಗ್ರೀವನಿಗೆ ನಂಬಿಕೆಯನ್ನುಂಟುಮಾಡಲು ರಾಮನು ಬಿಲ್ಲನ್ನು ಸೆಳೆದು ಸಾಲವೃಕ್ಷಗಳಿಗೆ ಗುರಿಯಿಟ್ಟು ಹರಿತವಾದ ಬಾಣವೊಂದನ್ನು ಬಿಟ್ಟನು. ಆ ಬಾಣವು ಸಾಲಾಗಿ ನಿಂತ ಆ ಏಳು ವೃಕ್ಷಗಳನ್ನೂ ಭೇದಿಸಿ ಭೂಮಿಯನ್ನು ಹೊಕ್ಕು ಹಿಂದಿರುಗಿ ಬಂದು ಬತ್ತಳಿಕೆಯನ್ನು ಸೇರಿತು.

ರಾಮನ ಬಾಣವೇಗದಿಂದ ಭೇದಿಸಲ್ಪಟ್ಟ ಆ ಏಳು ಸಾಲವೃಕ್ಷಗಳನ್ನು ಕಂಡು ಸುಗ್ರೀವನಿಗೆ ಆಶ್ಚರ್ಯವೂ ಸಂತೋಷವೂ ಏಕಕಾಲದಲ್ಲಿ ಮೂಡಿದುವು. “ದೇವತೆಗಳಿಂದ ಕೂಡಿ ಇಂದ್ರನೇ ನಿನ್ನನ್ನು ಎದುರಿಸಿದರೂ ಅವನನ್ನು ಧ್ವಂಸಮಾಡಲು ನೀನು ಶಕ್ತನಿರುವೆ. ಹೀಗಿರುವಲ್ಲಿ ವಾಲಿ ಎಷ್ಟುಮಾತ್ರದವನು? ಮಹೇಂದ್ರ ವರುಣರಿಗೆ ಸಮಾನವಾದ ನಿನ್ನಿಂದ ನನ್ನ ಶೋಕ ತೊಡೆದುಹೋಯಿತು” ಎಂದು ಕಪಿವೀರನು ರಾಮನನ್ನು ಹೊಗಳಿದನು. ಆಗ ರಾಮನು ಸುಗ್ರೀವನನ್ನು ಗಾಢವಾಗಿ ಅಪ್ಪಿಕೊಂಡು, ಕಿಷ್ಕಿಂಧೆಗೆ ತೆರಳಿ ವಾಲಿಯನ್ನು ಯುದ್ಧಕ್ಕೆ ಕರೆಯುವಂತೆ ಪ್ರೇರಿಸಿದನು.

* * *