ಶೂರನಾದ ಶತಬಲಿ ಉತ್ತರದಿಕ್ಕಿಗೂ, ವಿನತನು ಪೂರ್ವದಿಕ್ಕಿಗೂ, ಅಂಗದನು ದಕ್ಷಿಣಕ್ಕೂ, ಸುಷೇಣನು ಪಶ್ಚಿಮಕ್ಕೂ ತಮ್ಮ ತಮ್ಮ ಸೇನೆಗಳೊಡನೆ ಸೀತೆಯನ್ನು ಹುಡುಕಲು ಹೊರಟರು. ಸೀತೆಯನ್ನು ಹುಡುಕುವ ಕಾರ್ಯಕ್ಕೆ ಸಮರ್ಥರಾದ ವಾನರರನ್ನು ಕಳುಹಿಸಿಕೊಟ್ಟ ಮೇಲೆ ಸುಗ್ರೀವನ ಮನಸ್ಸು ಸ್ವಲ್ಪ ಸಮಾಧಾನ ಹೊಂದಿತು. ಇತ್ತ ಅನ್ವೇಷಣ ಕಾರ್ಯಕ್ಕಾಗಿ ಹೊರಟವರ ಉತ್ಸಾಹವಾದರೊ ಮುಗಿಲನ್ನು ಮುಟ್ಟುವಂತಿತ್ತು. ‘ನಾನೊಬ್ಬನೇ ಸೀತೆಯನ್ನು ಹುಡುಕಿ ತರುತ್ತೇನೆ.’ ‘ದುಷ್ಟನಾದ ರಾವಣನನ್ನು ತೀರಿಸಿಯೆ ಬಿಡೋಣ.’ ‘ಯುದ್ಧದಲ್ಲಿ ರಾವಣನನ್ನು ತೀರಿಸಲು ನಾನೊಬ್ಬನೆ ಸಾಕು.’ ‘ಸೀತೆ ಪಾತಾಳದಲ್ಲಿದ್ದರೂ ಆಕೆಯನ್ನು ತರುವ ಶಕ್ತಿ ನನಗುಂಟು.’ ‘ಬೆಟ್ಟಗಳನ್ನೆ ಸೀಳುವ ಸಾಮರ್ಥ್ಯ ನನಗಿದೆ.’ ‘ನೂರು ಯೋಜನಗಳನ್ನಾದರು ನಾನು ಹಾರಬಲ್ಲೆ’. ಎಂದು ವಾನರವೀರರು ತಂತಮ್ಮ ಪ್ರತಾಪಗಳನ್ನು ಕೊಚ್ಚಿಕೊಳ್ಳುತ್ತ, ಸಿಂಹನಾದ ಮಾಡುತ್ತ, ಪ್ರತಿಜ್ಞೆಯನ್ನು ಘೋಷಿಸುತ್ತಾ ಹೊರಟರು.

ಸುಗ್ರೀವಾಜ್ಞೆಯಿಂದ ಕಟ್ಟುಗೊಂಡ ವಾನರರು ಬೆಟ್ಟಗಳಲ್ಲಿ, ಕಾಡುಗಳಲ್ಲಿ, ನದೀದುರ್ಗಗಳಲ್ಲಿ, ಗುಹೆಗಳಲ್ಲಿ ಸೀತೆಯನ್ನು ಹುಡುಕತೊಡಗಿದರು. ಹಗಲೆಲ್ಲ ಸೀತೆಯನ್ನು ಹುಡುಕಿ ರಾತ್ರಿಯ ಕಾಲದಲ್ಲಿ ಅವರೆಲ್ಲ ಒಂದೆಡೆ ಸೇರಿ ಮಲಗುತ್ತಿದ್ದರು. ದೇಶದೇಶಗಳಲ್ಲಿ ಅವರು ದೇವಿಯನ್ನು ಹುಡುಕುತ್ತಿದ್ದಾಗ ಹಣ್ಣುಗಳಿಂದಿಡಿದ ಮರಗಳೆ ರಾತ್ರಿಯ ವೇಳೆ ಅವರಿಗೆ ಹಾಸಗೆಯಾಗುತ್ತಿದ್ದವು. ಹೀಗೆ ಒಂದು ತಿಂಗಳು ಕಾಲ ಹುಡುಕಿದರೂ ಸೀತೆಯನ್ನು ಕಾಣದೆ, ಶತಬಲಿ, ವಿನತ, ಸುಷೇಣರು ತಮ್ಮ ತಮ್ಮ ಸೇನೆಗಳೊಡನೆ ಉತ್ತರ, ಪೂರ್ವ, ಪಶ್ಚಿಮ ದಿಕ್ಕುಗಳಿಂದ ಹಿಂದಿರುಗಿ ಬಂದು ಸುಗ್ರೀವನನ್ನು ಕಂಡರು. ಹಾಗೆ ಬಂದ ಅವರು ಸುಗ್ರೀವನಿಗೆ ತಾವು ಎಲ್ಲೆಡೆಯಲ್ಲಿಯೂ ಹುಡುಕಿ ಸೀತೆಯನ್ನು ಕಾಣದೆ ವಿಫಲರಾದುದನ್ನು ವಿಷಾದದಿಂದ ಅರುಹಿದರು. ಇವರ ಮಾತನ್ನು ಕೇಳಿ ಸುಗ್ರೀವ ನಿರಾಶೆಗೊಳ್ಳಲಿಲ್ಲ. ಸೀತೆಯನ್ನು ಹುಡುಕುವ ಕಾರ್ಯ ದಕ್ಷಿಣಕ್ಕೆ ಹೋದ ಅಂಗವಾದಿಗಳಿಂದ ನೆರವೇರಬಹುದೆಂದು ಆತನು ಸಮಾಧಾನ ಹೊಂದಿದನು.

ಇತ್ತ ಹನುಮಂತನು ಸುಗ್ರೀವಾಜ್ಞೆಯಂತೆ ಅಂಗದನೊಡನೆ ವಿಂಧ್ಯಪರ್ವತದ ಪ್ರದೇಶಕ್ಕೆ ಬಂದನು. ಅಲ್ಲಿನ ಗುಹೆ, ಕಾಡು, ನದಿ, ಪೊದೆಗಳಲ್ಲಿ ಅವರು ಸೀತೆಯನ್ನು ಹುಡುಕತೊಡಗಿದರು. ಸುಗ್ರೀವನು ಸೂಚಿಸಿದ ಪ್ರದೇಶಗಳಲ್ಲಿ ಸೀತೆಯನ್ನು ಹುಡುಕಿದರೂ ಆಕೆ ದೊರೆಯಲಿಲ್ಲ. ಅಲ್ಲದೆ ಅವಳಿದ್ದ ನೆಲೆಯೂ ತಿಳಿದುಬರಲಿಲ್ಲ; ಸುಳಿವೂ ಕಾಣಿಸಲಿಲ್ಲ. ಆ ಕಾಲದಲ್ಲಿ ಹನುಮಾದಿಗಳು ನೋಡದ ಬೆಟ್ಟಗಳಿರಲಿಲ್ಲ; ಹುಡುಕದ ಕಾಡುಗಳಿರಲಿಲ್ಲ; ಕಾಣದ ಮೃಗಗಳಿರಲಿಲ್ಲ. ವಾನರ ವೀರರು ನದಿಗಳಲ್ಲಿ ಸೀತೆಯನ್ನು ಅರಸಿದರು. ಪ್ರವೇಶಿಸಲು ಅಸಾಧ್ಯವಾದ ಸ್ಥಳಗಳನ್ನು ಹೊಕ್ಕು ಹುಡುಕಿದರು. ಆದರೇನು? ಕೊನೆಗೆ ಅವರಿಗೆ ದುಃಖವೇ ಕೈಗಟ್ಟಿತು. ಹೀಗೆ ಹುಡುಕುತ್ತ ಅವರು ಮುಂದೆಮುಂದೆ ನಡೆಯಲು, ಬಳ್ಳಿಗಳಿಂದಲು ಪೊದೆಗಳಿಂದಲೂ ಸುತ್ತುವರಿದ ಒಂದು ಸ್ಥಳದಲ್ಲಿ ದೇವತೆಗಳಿಗೂ ಹೆದರದಿದ್ದ ಕ್ರೂರಿಯಾದ ಒಬ್ಬ ರಾಕ್ಷಸನನ್ನು ಕಂಡರು. ಆ ರಾಕ್ಷಸನಾದರೊ ಬೆಟ್ಟದಂತೆ ದೇಹವುಳ್ಳವನು! ವಾನರರನ್ನು ಕುರಿತು ಅವನು: “ನೀವು ಇಲ್ಲಿಗೆ ಬಂದುದೇ ಆದರೆ ನಾಶಹೊಂದುವಿರಿ” ಎಂದು ಗರ್ಜಿಸುತ್ತ ಅವರನ್ನು ಅಟ್ಟಿ ಬಂದನು. ಅವನನ್ನು ನೋಡಿ ಅಂಗದನು ಅವನೇ ರಾವಣನೆಂದು ಬಗೆದು ತನ್ನ ಅಂಗೈಯಿಂದ ಅವನ ತಲೆಯ ಮೇಲೆ ಬಲವಾಗಿ ಒಂದು ಪೆಟ್ಟು ಕೊಟ್ಟನು. ಆ ಆಘಾತದ ರಭಸವನ್ನು ತಡೆಯಲಾರದೆ ರಕ್ಕಸನು ನೆತ್ತರು ಕಾರುತ್ತ ಪ್ರಾಣಬಿಟ್ಟನು. ಬಳಿಕ ಜಯಶಾಲಿಗಳಾದ ವಾನರರು ಆ ಪ್ರದೇಶಗಳಲ್ಲಿ ಸೀತೆಯನ್ನು ಹುಡುಕಿದರು. ಆದರೆ ದೇವಿ ಅವರಿಗೆ ಕಾಣಿಸಲಿಲ್ಲ. ಎಲ್ಲರೂ ದುಃಖಿತರಾಗಿ ಒಂದು ಮರದಡಿಯಲ್ಲಿ ಚಿಂತೆಯ ಚಪ್ಪಡಿಗಳನ್ನೆ ತಲೆಯ ಮೇಲೆ ಹೊತ್ತಂತೆ ಕುಳಿತುಬಿಟ್ಟರು.

ಆಗ ಬುದ್ಧಿವಂತನಾದ ಅಂಗದನು ಬಳಲಿದ ವಾನರವೀರರನ್ನು ಇನಿವಾತುಗಳಿಂದ ಸಂತೈಸಿದನು. ಅವರನ್ನು ಅನ್ವೇಷಣಕಾರ್ಯದಲ್ಲಿ ಹುರಿದುಂಬಿಸಲು “ವೀರರೇ, ಪರ್ವತಗಳಲ್ಲಿ, ಅರಣ್ಯಗಳಲ್ಲಿ, ನದೀದುರ್ಗಗಳಲ್ಲಿ, ದೇಶ ದೇಶಗಳಲ್ಲಿ ಹುಡುಕಿದರೂ ನಮಗೆ ಸೀತೆ ದೊರಕಲಿಲ್ಲ. ದೇವಕನ್ನಿಕೆಯಂತಿರುವ ಸೀತೆಯನ್ನು ಕದ್ದೊಯ್ದ ರಾವಣನ ನೆಲೆಯೂ ಸಿಕ್ಕಲಿಲ್ಲ. ಸುಗ್ರೀವನು ನಮಗೆ ಕೊಟ್ಟ ಅವಧಿಯಾದರೋ ಕಳೆದುಹೋಯಿತು. ಸುಗ್ರೀವನ ಉಗ್ರಶಾಸನವನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ಆದರೇನು? ನೀವೆಲ್ಲರೂ ನಿದ್ರೆ ಶೋಕ ಆಲಸ್ಯಗಳನ್ನು ತೊರೆದು ಮತ್ತೊಮ್ಮೆ ಸೀತೆಯನ್ನು ಹುಡುಕಬೇಕು. ಉತ್ಸಾಹ, ಧೈರ್ಯ ಮತ್ತು ಸಾಹಸ ಈ ಮೂರು ಗುಣಗಳು ಕಾರ್ಯಸಿದ್ಧಿಗೆ ಕಾರಣಗಳು. ಆದ್ದರಿಂದ ವೈರಾಗ್ಯವನ್ನೂ ಆಲಸ್ಯವನ್ನೂ ಬದಿಗಿಟ್ಟು ಮತ್ತೊಮ್ಮೆ ಸೀತೆಯನ್ನು ಹುಡುಕಲು ತೊಡಗಿದರೆ ಕಾರ್ಯ ಕೈಗೂಡುವುದರಲ್ಲಿ ಸಂದೇಹವೇ ಇಲ್ಲ. ಮೇಲಾಗಿ ಸುಗ್ರೀವನು ಉಗ್ರಕೋಪಿ; ಅವಧಿ ಮೀರಿ ಸೀತೆಯ ಸುದ್ದಿಯನ್ನು ಒಯ್ಯದ ನಮ್ಮನ್ನು ಆತನು ಶಿಕ್ಷಿಸದೆ ಬಿಡುವುದಿಲ್ಲ. ಸುಗ್ರೀವನಿಗೂ ಶ್ರೀರಾಮನಿಗೂ ಹೆದರಿ ಈ ಕಾರ್ಯದಲ್ಲಿ ಯತ್ನಿಸಬೇಕು. ನನ್ನ ಮಾತು ನಿಮಗೆ ರುಚಿಸಿದರೆ, ಈ ಕಾರ್ಯವನ್ನು ಮತ್ತೊಮ್ಮೆ ಕೈಕೊಳ್ಳಿ” ಎಂದನು.

ಅಂಗದನ ಮಾತನ್ನು ಕೇಳಿ ವಾನರರಲ್ಲಿ ಹೊಸ ಉತ್ಸಾಹ ಉಕ್ಕಿತು. ಗಂಧಮಾದನನೆಂಬ ವಾನರನು ಹಸಿವು ನೀರಡಿಕೆಗಳಿಂದ ಬಳಲಿದ್ದರೂ ತಡವರಿಸುತ್ತ ಈ ರೀತಿ ನುಡಿದನು : “ವೀರರೇ, ಅಂಗದನು ಹಿತವಾದ ಮಾತುಗಳನ್ನೇ ಆಡಿದ್ದಾನೆ. ಅವನು ನುಡಿದಂತೆ ಮತ್ತೊಮ್ಮೆ ದೇವಿಯನ್ನು ಹುಡುಕುವ ಕಾರ್ಯದಲ್ಲಿ ತೊಡಗಿ ಮಹಾತ್ಮನಾದ ಸುಗ್ರೀವನ ಕಾರ್ಯವನ್ನು ಕೊನೆಮುಟ್ಟಿಸೋಣ.” ಈ ಮಾತನ್ನು ಕೇಳಿ ಉತ್ಸಾಹಗೊಂಡ ವಾನರರು ಮತ್ತೊಮ್ಮೆ ಆ ಪ್ರದೇಶಗಳಲ್ಲಿ ಹೊಕ್ಕು ಹರಿದು ಹುಡುಕಿದರು. ಆದರೇನು ಅವರ ಉತ್ಸಾಹಕ್ಕೆ ಶ್ರಮಕ್ಕೆ ತಕ್ಕ ಫಲ ದೊರಕಲಿಲ್ಲ.

ಅಂಗದಾದಿಗಳು ವಿಂಧ್ಯಪರ್ವತದ ಗುಹೆಗಳಲ್ಲಿ ಕಾಡುಮೇಡುಗಳಲ್ಲಿ ಸೀತೆಯನ್ನು ಹುಡುಕುತ್ತಿರಲು ಸುಗ್ರೀವನು ಕೊಟ್ಟ ಅವಧಿ ಕೆಳದು ಹೋಯಿತು. ಆದರೂ ಅವರು ತಮ್ಮ ಕರ್ತವ್ಯವನ್ನು ಬಿಡದೆ, ಸೀತೆಯನ್ನು ಹುಡುಕುತ್ತ ಋಕ್ಷಬಿಲವೆಂಬ ಗುಹೆಯ ಬಳಿಗೆ ಬಂದರು. ಮಯನಿಂದ ರಕ್ಷಿತವಾದ ಆ ಗುಹೆಯನ್ನು ಹೊಗಲು ಯಾರಿಗೂ ಸಾಧ್ಯವಿರಲಿಲ್ಲ. ಆ ಗುಹೆಯ ಬಳಿಗೆ ಬರುವ ವೇಳೆಗೆ ಅವರೆಲ್ಲರೂ ಹಸಿವು ನೀರಡಿಕೆಗಳಿಂದ ಬಳಲಿಹೋಗಿದ್ದರು. ವಾನರರು ಆ ಬಿಲದ ಬಳಿ ನಿಂತು ನೋಡುತ್ತಿರುವಂತೆಯೆ ಅಲ್ಲಿಂದ ಕ್ರೌಂಚ, ಹಂಸ, ಚಕ್ರವಾಕ ಪಕ್ಷಿಗಳು ಹೊರಗೆ ಬಂದುವು. ಇದನ್ನು ಕಂಡು ವಾನನರಿಗೆ ಸೋಜಿಗವಾಯಿತು. ಆ ಕಪಿಗಳು ಹನುಮಂತನನ್ನು ಮುಂದಿಟ್ಟುಕೊಂಡು ಕತ್ತಲೆಕವಿದ ಆ ಗುಹೆಯನ್ನು ಹೊಕ್ಕರು. ಹಾಗೆ ಹೋಗುತ್ತಿರುವಾಗ ದೂರದಲ್ಲಿ ಒಂದು ಮನೋಹರವಾದ ಪ್ರದೇಶ ಅವರಿಗೆ ಕಾಣಿಸಿತು. ಕತ್ತಲಿಂದ ಇಡಿದು, ಪ್ರವೇಶಿಸಲು ದುಃಸಾಧ್ಯವಾದ ಆ ಬಿಲದಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಒಂದು ಯೋಜನ ದೂರ ನಡೆದರು. ಆಯಾಸದಿಂದ ಬಳಲಿದ ಅವರಿಗೆ ಬದುಕುವ ಆಸೆಯೆ ಇರಲಿಲ್ಲ. ಹೀಗೆ ನಡೆದೂ ನಡೆದೂ ಅವರು ಆ ಬೆಳಕಿನ ಪ್ರದೇಶಕ್ಕೆ ಬಂದರು. ಅಲ್ಲಿ ಸಂಪಗೆ ತಾಳೆ ಸುರಹೊನ್ನೆ ತಾವರೆ ಮುಂತಾದ ಹೂವುಗಳು ಗಿಡಗಳಲ್ಲಿ ಅರಲಿ ನಗುತ್ತಿದ್ದುವು. ವೈಡೂರ್ಯದಿಂದ ರಚಿತವಾದ ಜಗುಲಿಗಳು ಅಲ್ಲಿದ್ದುವು. ಚಿನ್ನದ ಮೆಟ್ಟಿಲುಗಳುಳ್ಳ, ವೈಡೂರ್ಯದಿಂದ ರಚಿತವಾದ ಮನೆಗಳು ಅವರಿಗೆ ಗೋಚರಿಸಿದುವು. ಬಾಯಾರಿದ್ದ ಅವರಿಗೆ ನಿರ್ಮಲವಾದ ನೀರಿನಿಂದ ಕೂಡಿದ ಸರೋವರವೊಂದು ಕಾಣಿಸಿತು. ಅದನ್ನು ಕಂಡು ವಾನರರಿಗೆ ಸ್ವರ್ಗವೇ ಕೈಸೇರಿದಂತಾಯಿತು. ಅಷ್ಟೇ ಅಲ್ಲದೆ ಆ ಸ್ಥಳದಲ್ಲಿ ಪೀಠಗಳಿಗಾಗಲಿ ವಾಹನಗಳಿಗಾಗಲಿ ರತ್ನಾಭರಣಗಳಿಗಾಗಲಿ ಪಾತ್ರೆಗಳಿಗಾಗಲಿ ಕೊರತೆಯೆ ಕಾಣಿಸಲಿಲ್ಲ. ಹಣ್ಣಿನಿಂದ ಜಗ್ಗುತ್ತಿದ್ದ ಮರಗಳನ್ನೂ ಜೇನುಗೂಡಗಳನ್ನೂ ಕಂಡು ವಾನರರ ಬಾಯಲ್ಲಿ ನೀರು ಕರೆಯಿತು. ಇಂಥ ಮನೋಹರವಾದ ಪ್ರದೇಶದಲ್ಲಿ ವಾನರರು ಸೀತೆಯನ್ನು ಹುಡುಕುತ್ತಿರಲು, ಅವರ ಸಮೀಪದಲ್ಲಿ ಹೆಂಗಸೊಬ್ಬಳು ಕಾಣಿಸಿಕೊಂಡಳು. ತಪೋನಿರತಳು ಮಿತಾಹಾರಿಯೂ ತೇಜಸ್ವಿನಿಯೂ ಆದ ಆ ಮಹಾತ್ಮಳನ್ನು ಕಂಡು ವಾನರರು ಭಯದಿಂದಲೂ ಆಶ್ಚರ್ಯದಿಂದಲೂ ಅಲ್ಲಿಯೆ ನಿಂತರು. ಆಗ ಹನುಮಂತನು ಆಕೆಗೆ ನಮಸ್ಕರಿಸಿ “ತಾಯೆ, ಈ ಬಿಲ ಯಾರದು? ನೀನಾರು? ಈ ರತ್ನಾಭರಣಗಳು ಯಾರವು?” ಎಂದು ಪ್ರಶ್ನಿಸಿದನು.

ಹನುಮಂತನ ಪ್ರಶ್ನೆಗೆ ಉತ್ತರವಾಗಿ ಆಕೆ ಈ ರೀತಿ ನುಡಿದಳು: “ಮಯನೆಂಬ ದಾನವನು ಈ ಕಾಂಚನವನವನ್ನು ನಿರ್ಮಿಸಿದನು. ಈ ಅರಮನೆಯಲ್ಲಿ ಆತನು ಸಾವಿರ ವರ್ಷಗಳು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದನು. ಇದರ ಫಲವಾಗಿ ಅವನು ಬ್ರಹ್ಮನಿಂದ ಶಿಲ್ಪಶಾಸ್ತ್ರದಲ್ಲಿ ಪಾಂಡಿತ್ಯವನ್ನು ವರವಾಗಿ ಪಡೆದನು. ಅನಂತರ ಅವನು ಹೇಮಾ ಎಂಬ ಅಪ್ಸರೆಯೊಡನೆ ಕೆಲವುಕಾಲ ಇಲ್ಲಿ ಸುಖದಿಂದಿದ್ದನು. ದಾನವನಾದ ಮಯನು ಅಪ್ಸರೆಯೊಡನಿದ್ದುದನ್ನು ಕಂಡು, ಕೋಪಗೊಂಡ ದೇವೇಂದ್ರನು ತನ್ನ ವಜ್ರಾಯುಧದಿಂದ ಅವನನ್ನು ಹೊಡೆದು ಕೊಂದುಬಿಟ್ಟನು. ಆ ಬಳಿಕ ಬ್ರಹ್ಮನು ಸುಂದರವಾದ ಪ್ರದೇಶವನ್ನೂ ಅರಮನೆಯನ್ನೂ ಹೇಮೆಗೇ ಕೊಟ್ಟುಬಿಟ್ಟನು. ನಾನು ಮೇರುಸಾವರ್ಣಿಯ ಮಗಳು. ನನ್ನ ಹೆಸರು ಸ್ವಯಂಪ್ರಭೆ. ನೃತ್ಯಗೀತೆಗಳಲ್ಲಿ ಹೆಸರಾದ ಹೇಮೆ ನನಗೆ ಪ್ರಿಯಸಖಿ. ಅವಳ ಈ ಅರಮನೆಯನ್ನು ನಾನು ಕಾಪಾಡುತ್ತಿದ್ದೇನೆ. ಈ ಕಾಡಿನಲ್ಲಿ ನೀವೇಕೆ ಅಲೆಯುತ್ತಿರುವಿರಿ? ಯಾವ ಕಾರ್ಯಸಾಧನೆಗಾಗಿ ನೀವು ಈ ಬಿಲವನ್ನು ಹೊಕ್ಕಿರಿ? ಯಾರಿಗೂ ಹೋಗಲು ಸಾಧ್ಯವಿಲ್ಲದ ಈ ಗುಹೆ ನಿಮಗೆ ಹೇಗೆ ಕಾಣಿಸಿತು? ನೀವು ಬಳಲಿದ್ದೀರಿ. ಈ ಕಂದಮೂಲಗಳನ್ನು ತಿಂದು ತಣಿದು, ನಿಮ್ಮ ವೃತ್ತಾಂತವನ್ನು ತಿಳಿಸಿ. ”

ಸ್ವಯಂಪ್ರಭೆಯ ಮಾತಿಗೆ ಹನುಮಂತನು: “ಅಮ್ಮ, ದಶರಥನ ಮಗನಾದ ಶ್ರೀರಾಮನ ಹೆಂಡತಿಯಾದ ಸೀತೆಯನ್ನು ರಾವಣನು ಕದ್ದೊಯ್ದನು. ಆಕೆಯನ್ನು ಹುಡುಕಲು ವಾನರಾಧಿಪನಾದ ಸುಗ್ರೀವನು ನಮ್ಮನ್ನು ದಕ್ಷಿಣ ದಿಕ್ಕಿಗೆ ಕಳುಹಿಸಿದನು. ಹಾಗೆ ಹುಡುಕುತ್ತ ಬರುತ್ತಿರುವಾಗ ಗಿಡಬಳ್ಳಿಗಳಿಂದ ಮುಚ್ಚಿಹೋಗಿದ್ದ ಈ ಬಿಲವನ್ನು ಕಂಡೆವು. ಈ ಬಿಲದಿಂದ ಹಂಸಕಾರಂಡಗಳು ಹೊರಟುಬಂದುದನ್ನು ಕಂಡು ನೀರಡಸಿದ ನಾವು ಇಲ್ಲಿ ಸರೋವರವಿರಬಹುದೆಂದೆಣಿಸಿ ಇದನ್ನು ಹೊಕ್ಕೆವು” ಎಂದು ತಿಳಿಸಿದನು. ಹನುಮಂತನ ಮಾತಿನಿಂದ ಸ್ವಯಂಪ್ರಭೆ ಹರ್ಷಗೊಂಡಳು. ಆಕೆ ಪ್ರೀತಿಯಿಂದ ಕೊಟ್ಟ ಕಂದಮೂಲಗಳನ್ನು ತಿಂದು, ನೀರನ್ನು ಕುಡಿದು ವಾನರರು ತಣಿದರು.

ಅನಂತ ಹನುಮಂತನು ಸ್ವಯಂ ಪ್ರಭೆಯನ್ನು ಕುರಿತು : “ಅಮ್ಮ ನಿನ್ನ ಉಪಚಾರದಿಂದ ನಮಗೆ ತೃಪ್ತಿಯುಂಟಾಯಿತು. ಇತ್ತ ಸುಗ್ರೀವನು ಕೊಟ್ಟ ಅವಧಿಯಾದರೊ ಕಳೆದುಹೋಯಿತು. ನಮ್ಮಲ್ಲಿ ನೀನು ಪ್ರಸನ್ನಳಾಗಿ ಈ ಭಯಂಕರವಾದ ಬಿಲದಿಂದ ದಾಟಿಸಬೇಕು. ಈ ಶಕ್ತಿ ನಿನಗೊಬ್ಬಳಿಗೇ ಉಂಟು. ಸುಗ್ರೀವನ ಭಯದಿಂದ ನಮ್ಮನ್ನು ಕಾಪಾಡಲು ನೀನೇ ಶಕ್ತಳು” ಎಂದನು. ಹನುಮಂತನ ಮಾತನ್ನು ಕೇಳಿ ಸ್ವಯಂಪ್ರಭೆ ಎಲ್ಲರೂ ತಮ್ಮ ತಮ್ಮ ಕಣ್ಣುಮುಚ್ಚಿಕೊಳ್ಳಬೇಕೆಂದು ಹೇಳಿದಳು. ಆಮೇಲೆ ಮಹಾತ್ಮಳಾದ ಸ್ವಯಂಪ್ರಭೆ ನಿಮಿಷ ಮಾತ್ರದಲ್ಲಿ ಅವರನ್ನು ತನ್ನ ಪ್ರಭಾವದಿಂದ ಬಿಲದ ಹೊರಗೆ ತಂದುಬಿಟ್ಟಳು. ಸೀತೆಯನ್ನು ಹುಡುಕುವ ಕಾರ್ಯದಲ್ಲಿ ಅವರಿಗೆ ಮಂಗಳವಾಗಲಿ ಎಂದು ಹರಸಿ ತಿರುಗಿ ಆ ತಪಸ್ವಿನಿ ಬಿಲವನ್ನು ಹೊಕ್ಕಳು.

* * *