ಸೀತಾದೇವಿ ತನ್ನ ದುರದೃಷ್ಟವನ್ನು ನಿಂದಿಸಿಕೊಳ್ಳುತ್ತಾ ತನ್ನ ಹಾಳು ಬಾಳನ್ನು ಕೊನೆಗೊಳಿಸುವುದು ಹೇಗೆಂದು ಚಿಂತಿಸಿದಳು. ಇದ್ದಕ್ಕಿದ್ದಂತೆ ಒಂದು ಉಪಾಯ ಹೊಳೆಯಿತು. ಹೇಗಿದ್ದರೂ ರಾಕ್ಷಸಿಯರು ಮಲಗಿದ್ದಾರೆ….. ನಿಡುನೀಳವಾದ ತನ್ನ ಕೇಶರಾಶಿಯನ್ನು ಕೊರಳಿಗೆ ಸುತ್ತಿಕೊಂಡು ತಾನು ಕುಳಿತಿದ್ದ ಮರಕ್ಕೇ ನೇಣುಹಾಕಿಕೊಂಡರೆ! ಮನಸ್ಸಿನಲ್ಲಿ ಹೊಳೆದುದೇ ತಡ, ಆಕೆ ಆ ಕಾರ್ಯದಲ್ಲಿ ಪ್ರವೃತ್ತೆಯಾದಳು. ಕಡೆಗಾಲದಲ್ಲಿ ಒಮ್ಮೆ ತನ್ನ ಪತಿಯನ್ನೂ ಲಕ್ಷ್ಮಣನನ್ನೂ ಹುಟ್ಟಿದ ಮತ್ತು ಸೇರಿದ ಮನೆಯ ಹಿರಿಯರನ್ನೂ ನೆನೆದುಕೊಂಡಳು. ತನ್ನವರು ಯಾರಿದ್ದರೂ ವಿಧಿಯನ್ನು ತಡೆಯಲಾರದೆ ಹೋದರೆಂದುಕೊಂಡಳು. ಕುತ್ತಿಗೆಗೆ ಜಡೆಯನ್ನು ಒಂದು ಸುತ್ತು ಹಾಕಿಕೊಂಡಳು. ಇನ್ನು ಮರದ ಕೊಂಬೆಗೆ ಎಳೆದು ಕಟ್ಟಬೇಕು; ಇದ್ದಕ್ಕಿದ್ದಂತೆಯೆ ಹಲವು ಶುಭಸೂಚನೆಗಳು ಕಾಣಬಂದುವು. ಆಕೆಯ ಎಡಗಣ್ಣು ಮೀನು ಕದಲಿಸಿದ ಕಮಲದಂತೆ ಅಲುಗಾಡಿತು. ಒಮ್ಮೆ ಶ್ರೀರಾಮನ ಆಲಿಂಗನ ಸುಖದಿಂದ ಪವಿತ್ರವಾಗಿದ್ದ ವಾಮಭುಜ ಅದುರಿತು. ಎಡತೊಡೆಯೂ ಅದುರಿತು. ಸೀತೆಗೆ ಈ ನಿಮಿತ್ತಗಳಲ್ಲಿ ಬಹು ನಂಬಿಕೆ. ಎಷ್ಟೋ ವೇಳೆ ಆಕೆಗೆ ಇವುಗಳಿಂದ ಬರುವ ಫಲ ಅನುಭವಕ್ಕೆ ಬಂದಿತ್ತು. ಆದ್ದರಿಂದ ತನ್ನ ಆತ್ಮಹತ್ಯದ ಕಾರ್ಯವನ್ನು ಅಲ್ಲಿಗೇ ನಿಲ್ಲಿಸಿದಳು. ಬಿಸಿಲಿನಿಂದ ಕೂಡಿ ಬೆಂಡಾಗಿರುವ ಬೆಳೆಗೆ ಮಳೆ ಸುರಿದಂತಾಯಿತು ಆಕೆಯ ಜೀವಕ್ಕೆ. ಶ್ರೀರಾಮಚಂದ್ರನನ್ನು ಬಹುಬೇಗ ಕಾಣುವೆಂದು ಆಕೆಯ ಮನಸ್ಸಿಗೆ ಬೋಧೆಯಾಯಿತು. ಆ ಸಂಕಟಕರವಾದ ಸನ್ನಿವೇಶದಲ್ಲಿಯೂ ಆಕೆಗೆ ದುಃಖವೆಲ್ಲ ಮರೆತುಹೋಗಿ ಮುಖದ ಮೇಲೆ ಒಂದು ಮುಗುಳ್ನಗೆ ಅಲೆಸೂಸಿತು. ರಾಹುಮುಕ್ತವಾದ ಚಂದ್ರನಂತೆ ಆಕೆಯ ಮುಖ ಕಾಂತಿಯಿಂದ ಮಿಂಚಿತು.

ಶಿಂಶುಪವೃಕ್ಷದ ಮೇಲೆ ಕುಳಿತಿದ್ದ ಹನುಮಂತನು ನಂದನವನದಲ್ಲಿನ ವನದೇವತೆಯಂತೆ ಕಾಣುತ್ತಿದ್ದ ಸೀತಾಮಾತೆಯನ್ನು ಕಂಡು ಹೀಗೆ ಆಲೋಚಿಸಿದನು – “ಯಾವ ಸುಚರಿತ್ರೆಯನ್ನು ಹುಡುಕುವುದಕ್ಕಾಗಿ ಅಸಂಖ್ಯಾತ ಕಪಿಸೈನ್ಯವು ದಿಕ್ಕು ದಿಕ್ಕುಗಳನ್ನೂ ಭೇದಿಸುತ್ತಾ ಹೊರಟಿರುವುದೋ ಆ ದೇವಿ ಇಲ್ಲಿ ಗೋಚರಿಸಿದಳು. ನಾನು ಈಕೆಗಾಗಿ ಊರನ್ನೆಲ್ಲಾ ತಿರುಗಿದುದು ವ್ಯರ್ಥವಾಗಲಿಲ್ಲ; ಶತ್ರುವಿನ ಚಲನವಲನಗಳೆಲ್ಲಾ ಗೋಚರವಾದಂತಾಯಿತು. ಇನ್ನು ನಾನು ಈಕೆಗೆ ಕಾಣಿಸಿಕೊಂಡು ಶ್ರೀರಾಮನ ಪ್ರಿಯವಾರ್ತೆಯನ್ನು ಅರುಹಿ, ಕುದಿವ ಮನಸ್ಸಿಗೆ ಸಮಾಧಾನವನ್ನುಂಟು ಮಾಡಬೇಕು. ಇಲ್ಲದಿದ್ದರೆ ರಕ್ಷಕರಿಲ್ಲದೆ ತಳಮಳಿಸುತ್ತಿರುವ ಈಕೆ ಪ್ರಾಣವನ್ನು ತ್ಯಜಿಸಬಹುದು. ಅತ್ತ ಶ್ರೀರಾಮನು ಈಕೆಯ ಸಮಾಚಾರವನ್ನು ಕೇಳಲು ಅತ್ಯಂತ ಕಾತರನಾಗಿರುವುದರಿಂದ ಬೇಗ ಹಿಂದಿರುಗುವುದೂ ಅಗತ್ಯ. ಆದರೆ ಈಗಲೇ ಆ ದೇವಿಯನ್ನು ಮಾತನಾಡಿಸುವುದು ಹೇಗೆ? ರಾಕ್ಷಸರು ಎಲ್ಲಿಯಾದರೂ ಎಚ್ಚರಗೊಂಡರೆ? ಮಾತನಾಡಿಸದೆ ಹಾಗೆಯೇ ಹಿಂತಿರುಗುವುದೂ ಅಸಾಧ್ಯ. ಇನ್ನೇನು ಬೆಳಕು ಹರಿಯುತ್ತಾ ಇದೆ. ಬೆಳಗಾಗುವುದರೊಳಗಾಗಿ ನಾನು ಈಕೆಯನ್ನು ಮಾತನಾಡಿಸಲೇ ಬೇಕು. ಇಲ್ಲದೆ ಹೋದರೆ ಹಿಂದಿರುಗಿದಾಗ ಶ್ರೀರಾಮನು ‘ಸೀತೆ ನನಗೆ ಏನು ಹೇಳಿ ಕಳುಹಿಸಿದಳು’ ಎಂದರೆ ಏನುತ್ತರ ಹೇಳುವುದು? ಇಲ್ಲ, ಇಲ್ಲ. ಸೀತಾದೇವಿಗೆ ಶ್ರೀರಾಮನ ಸಮಾಚಾರ ಕೂಡಲೇ ತಿಳಿಸಬೇಕು. ಹೇಗಿದ್ದರೂ ಮೊದಲೇ ನಾನು ಸೂಕ್ಷ್ಮದೇಹಿಯಾಗಿರುವೆನು. ಇದರ ಮೇಲೆ ವಾನರ ಬೇರೆ. ಆದ್ದರಿಂದ ಶ್ರೀರಾಮದೂತನೆಂದು ಈ ರಾಕ್ಷಸರಿಗೆ ಹೇಗೂ ಗೊತ್ತಾಗುವಂತಿಲ್ಲ. ಅದಿರಿಲಿ, ಈಗ ಈಕೆಯೊಡನೆ ಯಾವ ಭಾಷೆಯಲ್ಲಿ ಮಾತನಾಡುವುದು? ಸಂಸ್ಕೃತದಲ್ಲಿ ಮಾತನಾಡಿದರೆ ‘ಕೋತಿಗೆ ಸಂಸ್ಕೃತವೆಂದರೇನು? ಎಲ್ಲಿಯೋ ಇದು ರಾವಣನ ಮಾಯೆ’ ಎಂದುಕೊಂಡಾಳು. ಅದ್ದರಿಂದ ಕೋಸಲದೇಶದ ಜನರು ಆಡುವ ಭಾಷೆಯನ್ನು ಬಳಸುತ್ತೇನೆ. ಆದರೆ ನನ್ನ ದೇಶವನ್ನು ನೋಡಿ, ಭಾಷೆಯನ್ನು ಕೇಳಿ ಈಕೆ ಗಾಬರಿಕೊಂಡು ಗಟ್ಟಿಯಾಗಿ ಕೂಗಿಬಿಟ್ಟರೆ? ರಾಕ್ಷಸಿಯರೆಲ್ಲಾ ನನ್ನ ಸುತ್ತಲೂ ಮುತ್ತಿಕೊಂಡು ನನ್ನನ್ನು ಕೊಲ್ಲಲು ಯತ್ನಿಸಬಹುದು. ಆಗ ನಾನೇನಾದರೂ ಆತ್ಮರಕ್ಷಣೆಗೆ ಅವರಮೇಲೆ ಕೈಮಾಡಿದರೆ ದೊಡ್ಡ ರಗಳೆಯಾಗಿಬಿಡುತ್ತದೆ. ಈ ರಗಳೆಯಲ್ಲಿ ರಾಕ್ಷಸರೊಡನೆ ಹೋರಾಡುವುದರಲ್ಲಿಯೇ ನನ್ನ ಕಾಲವೆಲ್ಲಾ ವ್ಯರ್ಥವಾಗಬಹುದು. ಹೀಗಾದರೆ ನನ್ನ ಉದ್ದೇಶ ನೆರವೇರಿದಹಾಗಾಯಿತೆ? ರಾಕ್ಷಸರನ್ನೇನೊ ಅವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದರೂ ನಾನು ಧ್ವಂಸ ಮಾಡಬಲ್ಲೆ. ಆದರೆ ಅವರೊಡನೆ ಹೋರಾಡಿ ಬಳಲಿದಮೇಲೆ ಸಮುದ್ರವನ್ನು ಹಾರಿ ಹಿಂದಿರುಗುವುದೆಲ್ಲಿ ಬಂದಿತು? ಏಕೋ ಕೆಲಸ ಬಹು ಕಠಿಣವಾಗಿ ಕಾಣುತ್ತಿದೆ. ಈಗ ನಾನು ಯಾವ ದಾರಿಯನ್ನು ಹಿಡಿಯಲಿ? ಸ್ವಾಮಿಕಾರ್ಯವೂ ಕೆಡಬಾರದು; ನಾನು ಅವಿವೇಕಿ ಎನಿಸಿಕೊಳ್ಳಬಾರದು; ಬಂದ ಕಾರ್ಯವೂ ವ್ಯರ್ಥವಾಗಬಾರದು; ಜಾನಕಿದೇವಿ ನನ್ನನ್ನು ಕಂಡು ಭಯಪಡಬಾರದು; ನಾನು ಹೇಳುವ ಮಾತನ್ನು ಆಕೆ ಲಾಲಿಸಬೇಕು. ಇದಕ್ಕೆಲ್ಲಾ ಏನು ಉಪಾಯಮಾಡಲಿ!”

ಸ್ವಲ್ಪಹೊತ್ತು ಗಾಢಾಲೋಚನೆಯಲ್ಲಿ ಮುಳುಗಿದಮೇಲೆ ಆತನಿಗೆ ಒಂದು ಉಪಾಯ ಹೊಳೆಯಿತು. ಶ್ರೀರಾಮನು ಕಳುಹಿದ ಸಂದೇಹವನ್ನು ಕುಳಿತಲ್ಲಿಯೇ ಹೇಳಿ ಸೀತಾದೇವಿಯ ಕಿವಿಗೆ ಬೀಳುವಂತೆ ಮಾಡುವುದು. ಈ ಇಂಪಾದ ನುಡಿಗಳಿಂದ ಆಕೆಯ ಮನಸ್ಸು ಪ್ರಸನ್ನವಾದಾಗ ಆಕೆಗೆ ಕಾಣಿಸಿಕೊಳ್ಳುವುದು.

ಹನುಮಂತನು ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತಂದನು. ಸೀತಾದೇವಿಗೆ ಮಾತ್ರ ಕೇಳುವಂತೆ ಇಂಪಾದ ಧ್ವನಿಯಲ್ಲಿ ಇಂತು ಮಾತನಾಡಲು ಮೊದಲು ಮಾಡಿದನು: – “ದಶರಥನೆಂಬ ಪುಣ್ಯಶೀಲನು ರಥಗಜತುರಗಾದಿ ಚತುರಂಗಬಲ ಸಮೇತನಾಗಿ ಅಯೋಧ್ಯೆಯಲ್ಲಿ ರಾಜ್ಯಭಾರ ಮಾಡುತ್ತಿದ್ದನು. ಆತನು ಬಲದಲ್ಲಿ ದೇವೇಂದ್ರನಿಗೆ ಸಮಾನನಾದವನು. ಬಹು ಉದಾರಿ, ನಿಷ್ಕಪಟಿ. ಕೇವಲ ದಯಾಶಾಲಿ. ಆತನ ಮಗನೇ ಧನುರ್ಧಾರಿಗಳಲ್ಲಿ ಅತ್ಯಂತ ಶ್ರೇಷ್ಠನಾದ ಶ್ರೀರಾಮಚಂದ್ರ. ಧರ್ಮಜ್ಞನೂ ಸತ್ಯಪ್ರತಿಜ್ಞನೂ ಆದ ಆತ ತಂದೆಯ ಸತ್ಯವಾಕ್ಯವನ್ನು ಕಾಪಾಡುವುದಕ್ಕಾಗಿ ಹೆಂಡತಿಯೊಡನೆಯೂ ತಮ್ಮನೊಡನೆಯೂ ವನವಾಸವನ್ನು ಕೈಕೊಂಡನು. ಮಹಾರಣ್ಯದಲ್ಲಿ ಬೇಟೆಯಾಡುತ್ತಿರುವಾಗ ಕಾಮರೂಪಿಗಳಾದ ರಾಕ್ಷಸರೊಡನೆ ದ್ವೇಷವನ್ನು ಕಟ್ಟಿಕೊಂಡನು. ಖರದೂಷಣರೇ ಮೊದಲಾದ ಮಹಾ ಮಹಾ ರಾಕ್ಷಸರು ಆತನಿಂದ ಹತರಾರು. ಇದರಿಂದ ಕುಪಿತನಾದ ಲಂಕೇಶ್ವರ ರಾವಣನು ಮಾಯಾಮೃಗದ ನೆಪದಿಂದ ರಾಮನನ್ನು ಮೋಸಗೊಳಿಸಿ, ಆತನ ಧರ್ಮಪತ್ನಿಯಾದ ಸೀತಾದೇವಿಯನ್ನು ಕದ್ದೊಯ್ದನು. ಅತ್ತ ಶ್ರೀರಾಮನು ಪ್ರಿಯಪತ್ನಿಯನ್ನು ಕಾಣದೆ ಕೊರಗುತ್ತಾ ಅಡವಿಯಲ್ಲಿ ಅಲೆಯುತ್ತಿರುವಾಗ ಕಪಿರಾಜನಾದ ಸುಗ್ರೀವನ ಸ್ನೇಹ ಆತನಿಗೆ ದೊರೆಯಿತು. ಶತ್ರುಭಯಂಕರನಾದ ಶ್ರೀರಾಮಚಂದ್ರನು ಸುಗ್ರೀವ ಶತ್ರುವಾದ ವಾಲಿಯನ್ನು ಸಂಹರಿಸಿ, ಕಪಿರಾಜ್ಯವನ್ನು ಸುಗ್ರೀವನಿಗೆ ಕೊಟ್ಟನು. ಆ ಸುಗ್ರೀವರಾಜನ ಆಜ್ಞೆಯಿಂದ ಸಾವಿರಾರು ಕಪಿಗಳು ಸೀತಾಮಾತೆಯನ್ನು ಅರಸುತ್ತಾ ದಿಕ್ಕುದಿಕ್ಕುಗಳಿಗೂ ಹೊರಟಿರುವುವು. ನಾನೂ ಆ ಕಾರ್ಯಕ್ಕಾಗಿಯೇ ಬಂದವನು ಸಂಪಾತಿಯ ಮಾತಿನಂತೆ ಈ ಸಹಸ್ರಯೋಜನ ವಿಸ್ತೀರ್ಣ ಸಮುದ್ರವನ್ನು ದಾಟಿ ಇಲ್ಲಿಗೆ ಬಂದೆನು. ಶ್ರೀರಾಮನು ಹೇಳಿದ ರೂಪವರ್ಣಗಳು ಈ ದೇವಿಯ ದೇಹದಲ್ಲಿ ಕಾಣುತ್ತಾ ಇವೆ. ಆದ್ದರಿಂದ ಈಕೆಯೆ ಸೀತಾಮಾತೆ ಇರಬೇಕು. ” ಹೀಗೆಂದು ಹನುಮಂತನು ತನಗೆ ತಾನೆ ಹೇಳಿಕೊಳ್ಳುವಂತೆ ನುಡಿದು ಸುಮ್ಮನಾದನು. ಸೀತಾದೇವಿಯ ಕಿವಿಗೆ ಈ ಮಾತುಗಳು ಬಿದ್ದುವು. ಆಕೆಗೆ ಅತ್ಯಾಶ್ಚರ್ಯವುಂಟಾಯಿತು. ಆಕೆ ತಲೆಯೆತ್ತಿ ಮರದ ಮೇಲೆ ನೋಡಿದಳು. ಏನೂ ಕಾಣದು. ಶ್ರೀರಾಮನ ಗುಣಕೀರ್ತನೆಯನ್ನು ಕೇಳಿ ಮನಸ್ಸಿಗೆ ಬಹು ಹರ್ಷವಾಗಿತ್ತು. ಆದರೆ ಮಾತನಾಡಿದವರು ಯಾರು? ಪಕ್ಕದಲ್ಲಿ ನೋಡಿದಳು, ಮೇಲೆ ನೋಡಿದಳು, ಬಾಗಿ ನೋಡಿದಳು, ಹಣೆಯ ಮೇಲೆ ಕೈ ಅಡ್ಡ ಇಟ್ಟುಕೊಂಡು ನೋಡಿದಳು, ಮೆಟ್ಟುಂಗಾಲಿಕ್ಕಿ ಇಣುಕಿ ನೋಡಿದಳು. ಕೊನೆಗೆ ಉದಯಪರ್ವತದಲ್ಲಿನ ಸೂರ್ಯನಂತೆ ತೇಜಃಪುಂಜನಾಗಿದ್ದ ಹನುಮಂತದೇವ ಆಕೆಯ ಕಣ್ಣಿಗೆ ಕಾಣಿಸಿದ.

ಮಿಂಚಿನ ಬಳ್ಳಿಯಂತೆ ಮಿನುಗುತ್ತಿದ್ದ ಹನುಮಂತನನ್ನು ಕಂಡೊಡನೆ ಸೀತೆಯ ಹೃದಯ ನಡುಗಿಹೋಯಿತು. “ಅಬ್ಬಾ! ಇದೇನು ಕಪಿಯ ರೂಪ! ಕಣ್ಣಿನಿಂದ ನಿಟ್ಟಿಸಿ ನೋಡುವುದಕ್ಕೂ ಸಾಧ್ಯವಿಲ್ಲದಂತಿದೆಯಲ್ಲಾ!” ಎಂದುಕೊಂಡಳು. ಒಂದುಕಡೆ ಈ ನೂತನ ರೀತಿಯ ವಾನರನ ಭೀತಿ, ಮತ್ತೊಂದು ಕಡೆ ರಾಕ್ಷಸಿಯರ ಭೀತಿ, ಇದರಿಂದ ಆಕೆಯ ದನಿ ಉಡುಗಿ ಹೋಗಿ ದೀನಸ್ವರದಿಂದ “ಹಾ ರಾಮ! ಹಾ ಲಕ್ಷ್ಮಣ!” ಎಂದುಕೊಂಡಳು. “ಇದು ಕನಸಿರಬಹುದೆ? ಕನಸಿನಲ್ಲಿ ವಾನರನನ್ನು ಕಂಡರೆ ಅಶುಭವೆನ್ನುತ್ತಾರೆ. ನನಗಿನ್ನಾವ ಅಶುಭ ಕಾದಿದೆಯೊ! ಭಗವಂತ! ನನ್ನ ಪ್ರಿಯವಲ್ಲಭನಾದ ರಾಮಚಂದ್ರನಿಗೂ ಆತನ ತಮ್ಮನಾದ ಲಕ್ಷ್ಮಣನಿಗೂ ಮಂಗಳವುಂಟಾಗಲಿ! ನನ್ನ ತಂದೆಯಾದ ಜನಕನಿಗೆ ಶುಭವಾಗಲಿ. ಛೇ, ನನ್ನ ಭಯವೆ! ನನಗೆಲ್ಲಿಯ ನಿದ್ರೆ? ರಾಮವಿಯೋಗದಿಂದ ಪರಿತಪಿಸುತ್ತಿರುವ ನನಗೆ ಈ ರಾಕ್ಷಸಿಯರ ಮಧ್ಯೆ ನಿದ್ರೆಯೆ ಇಲ್ಲದ ಮೇಲೆ ಸ್ವಪ್ನವೆಲ್ಲಿಯದು? ಸದಾ ರಾಮಧ್ಯಾನದಲ್ಲಿಯೇ ತಲ್ಲೀನಳಾಗಿರುವ ನನಗೆ ಯಾರೋ ಬಂದು ಶ್ರೀರಾಮಚಾರಿತ್ರ್ಯವನ್ನು ಹೇಳುವಂತೆ ಭ್ರಾಂತಿಯಾಗಿದೆಯೆಂದು ತೋರುತ್ತದೆ. ಉಹೂ, ಹಾಗೂ ಅಲ್ಲ. ಅಗೋ ವಾನರಾಕಾರ ಸ್ಪಷ್ಟವಾಗಿ ಗೋಚರಿಸುತ್ತಲೇ ಇದೆ. ಆದರೆ ಈ ವಾನರ ನನ್ನ ಬಳಿ ಕುಳಿತು ಈ ರಾಮವಾರ್ತೆಯನ್ನು ಹೇಳುವುದಕ್ಕೆ ಕಾರಣವೇನಿರಬಹುದು. ಕಾರಣವೇನಾದರೂ ಇರಲಿ. ದೇವರೇ, ನನ್ನ ಮುಂದೆ ಈ ವಾನರ ಹೇಳಿದುದೆಲ್ಲಾ ಯಥಾರ್ಥವಾಗಲಿ” ಎಂದು ಹೇಳಿ ದೈವಕ್ಕೆ ಕೈಮುಗಿದಳು.

ಸೀತಾದೇವಿ ಕೂಗಿಕೊಳ್ಳದೆ ಸುಮ್ಮನಿದ್ದುದನ್ನು ಕಂಡು ಮಾರುತಿ ಮರದಿಂದ ಕೆಳಕ್ಕಿಳಿದನು: ಅನಂತರ ಆತನು ದೈನ್ಯದಿಂದ ಬಹು ವಿನಯವಾಗಿ ಆಕೆಗೆ ನಮಸ್ಕರಿಸಿದನು. ಮನೋಹರವಾದ ನುಡಿಗಳಿಂದ ಆಕೆಯನ್ನು ಮಾತನಾಡಿಸಿದನು – “ತಾಯೆ, ಮಲಿನವಸ್ತ್ರವನ್ನುಟ್ಟು ಈ ಮರದ ರೆಂಬೆಯನ್ನು ಒರಗಿಕೊಂಡು ನಿಂತಿರುವ ನೀನು ಯಾರು? ಏಕೆ ಹಾಗೆ ನಿಂತಿರುವೆ? ಕಮಲದಳದಲ್ಲಿ ಬಿದ್ದ ಜಲಬಿಂದು ಗಾಳಿಯಿಂದ ಚಲಿಸಿ ಕೆಳಗೆ ಬೀಳುವಂತೆ ಒಂದೇ ಸಮನಾಗಿ ಕಣ್ಣೀರು ಸುರಿಯುತ್ತಿರುವುದೇಕೆ? ನೀನೇನು ದೇವಕನ್ಯೆಯೊ, ನಾಗಕನ್ಯೆಯೊ, ಗಂಧರ್ವ ಕನ್ಯೆಯೊ? ದೇವಿ, ನಿನ್ನ ತಂದೆ ಯಾರು? ಭರ್ತನಾರು? ನೀನು ಏಕೆ ದುಃಖಿಸುತ್ತಿರುವೆ? ನಿನ್ನ ಚರ್ಯೆಯಿಂದ ನೀನು ದೇವತಾಸ್ತ್ರೀಯಲ್ಲವೆಂದೂ ರಾಜಪುತ್ರಿಯಿರಬೇಕೆಂದೂ ಕಾಣಬರುತ್ತಿದೆ. ನಿನ್ನ ಅಂಗಸೌಷ್ಠವವನ್ನೂ ಸಾಮುದ್ರಿಕ ಲಕ್ಷಣವನ್ನೂ ನೋಡಿದರೆ ನೀನು ಭೂಮಿಪಾಲನೊಬ್ಬನ ಪಟ್ಟಮಹಿಷಿಯಂತೆ ತೋರಿಬರುತ್ತಿರುವೆ. ತಾಯಿ, ಜನಸ್ಥಾನದಿಂದ ರಾವಣನು ಕದ್ದು ತಂದ ಸೀತಾದೇವಿಯೆ ನೀನು? ಹಾಗಿದ್ದರೆ ನಿನಗೆ ಮಂಗಳವಾಗಲಿ! ಅಮ್ಮಾ, ನಿನ್ನ ವ್ಯಸನವನ್ನೂ ರೂಪರಾಶಿಯನ್ನೂ ಈ ತಾಪಸ ವೇಷವನ್ನೂ ನೋಡಿದರೆ ಶ್ರೀರಾಮಚಂದ್ರನ ಭಾರ್ಯೆಯೆಂದೆ ಊಹಿಸಬೇಕಾಗುತ್ತದೆ. ಇರುವ ಸಂಗತಿಯನ್ನು ನನ್ನಲ್ಲಿ ಹೇಳು” ಎಂದನು.

ಹನುಮಂತನ ಮಾತುಗಳನ್ನು ಕೇಳಿ ಸೀತೆಯ ಮನಸ್ಸಿಗೆ ಸ್ವಲ್ಪ ಧೈರ್ಯ ಬಂದಂತಾಯಿತು. ಆಕೆ ಹೇಳಿದಳು – “ಅಯ್ಯಾ, ನಾನು ರಾಜರ್ಷಿಯಾದ ದಶರಥನ ಸೊಸೆ. ವಿದೇಹಾಧಿಪತಿಯಾದ ಜನಕನ ಮಗಳು. ನನ್ನ ಹೆಸರು ‘ಸೀತೆ’ ಎಂದು. ಧೀಮಂತನಾದ ಶ್ರೀರಾಮಚಂದ್ರನು ನನ್ನ ಪತಿ. ಹನ್ನೆರಡು ವರ್ಷಗಳ ಕಾಲ ನನ್ನ ಗಂಡನೊಡನೆ ಮಾವನ ಮನೆಯಲ್ಲಿ ಸುಖವಾಗಿದ್ದೆ. ನಮ್ಮ ಮಾವ ತನ್ನ ಜೇಷ್ಠಪುತ್ರನಾದ ರಘುರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಹವಣಿಸುತ್ತಿದ್ದನು. ಆಗ ಆತನ ಕಿರಿಯ ಹೆಂಡತಿಯಾದ ಕೈಕೆ ಹಿಂದೆ ರಾಜನು ತನಗೆ ಕೊಟ್ಟಿದ್ದ ವರಗಳನ್ನು ಮುಂದುಮಾಡಿ ರಘುರಾಮನನ್ನು ಅಡವಿಗೆ ಕಳುಹಿಸುವಂತೆ ಗಂಡನಲ್ಲಿ ಹಟ ಹಿಡಿದಳು. ಆ ಮಾತನ್ನು ನಡಸಿಕೊಡಲಾರದೆ ದಶರಥ ಮಹಾರಾಜನು ವ್ಯಸನೋನ್ಮಾದಿತನಾಗಿರುವಾಗ ರಘುರಾಮನು ತನ್ನ ತಂದೆಯ ಮಾತನ್ನು ಉಳಿಸುವುದಕ್ಕಾಗಿ ಅರಣ್ಯಕ್ಕೆ ಹೊರಟನು. ನಾನು ಆತನನ್ನು ಅಗಲಿರಲಾರದೆ ಆತನನ್ನು ಹಿಂಬಾಲಿಸಿದೆ. ಶ್ರೀರಾಮನ ತಮ್ಮನಾದ ಲಕ್ಷ್ಮಣನೂ ನಮ್ಮನ್ನೇ ಅನುಸರಿಸಿದನು. ನಾವು ಮೂವರೂ ಅಡವಿಯಲ್ಲಿರುವಾಗ ದುಷ್ಟರಾವಣನು ನನ್ನನ್ನು ಕದ್ದು ತಂದನು. ಆ ನೀಚನು ನನಗೆ ಇನ್ನೂ ಎರಡು ತಿಂಗಳು ಅವಧಿಯನ್ನು ಕೊಟ್ಟಿರುವನು. ಅದು ಕಳೆದ ಬಳಿಕ ನಾನು ಜೀವಿಸುವುದೇ ಅಸಾಧ್ಯ” ಎಂದಳು.

ಶೋಕಸಂತಪ್ತೆಯಾದ ಜಾನಕಿಯ ನುಡಿಗಳನ್ನು ಕೇಳಿ ಹನುಮಂತನಿಗೆ ಬಹು ಕನಿಕರವಾಯಿತು. ಆಕೆಯನ್ನು ಸಮಾಧಾನಪಡಿಸುತ್ತಾ “ತಾಯೆ, ನಾನು ಶ್ರೀರಾಮ ದೂತ. ಆತನ ಅಪ್ಪಣೆಯಿಂದಲೆ ನಾನೀಗ ನಿನ್ನನ್ನು ಅರಸುತ್ತಾ ಬಂದಿದ್ದೇನೆ. ದೇವಿ, ಶ್ರೀರಾಮನು ಕುಶಲದಿಂದಿರುತ್ತಾನೆ. ಆ ವಿಚಾರವನ್ನು ನಿನಗ ತಿಳಿಸುವಂತೆ ಆತನು ಆಜ್ಞಾಪಿಸಿರುವನು. ನಿನ್ನ ಪತಿಯನ್ನು ನೆರಳಿನಂತೆ ಅನುಸರಿಸುತ್ತಿರುವ ಲಕ್ಷ್ಮಣ ಸ್ವಾಮಿಯೂ ತನ್ನ ಕುಶಲವನ್ನು ಅರುಹಿ, ತನ್ನ ನಮಸ್ಕಾರಗಳನ್ನು ಸಲ್ಲಿಸುವಂತೆ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಆ ಮಾತನ್ನು ಕೇಳಿ ಸೀತಾದೇವಿಗೆ ಅಮೃತಪಾನಮಾಡಿದಷ್ಟು ಆನಂದವಾಯಿತು. “ಅಯ್ಯಾ ವಾನರೋತ್ತಮ, ‘ಮನುಷ್ಯ ಬದುಕಿದ್ದರೆ ನೂರು ವರ್ಷಕ್ಕದರೂ ಒಮ್ಮೆ ಸುಖಸಮಾಚಾರವನ್ನು ಕೇಳುತ್ತಾನೆ’ ಎಂದು ಆರ್ಯೋಕ್ತಿಯುಂಟು. ಅದು ನಿಜ. ಆಃ! ನನಗೀಗ ನಿಜವಾಗಿಯೂ ಆನಂದವಾಗಿದೆ” ಎಂದಳು. ಹೀಗೆ ಪರಸ್ಪರ ನಂಬುಗೆಗೊಂಡವರಾಗಿ ಮಾತನ್ನಾಡುತ್ತಿರುವಾಗ ಹನುಮಂತನು ಸ್ವಲ್ಪ ಸ್ವಲ್ಪವಾಗಿ ಸೀತೆಯ ಹತ್ತಿರ ಹತ್ತಿರಕ್ಕೆ ಬರುತ್ತಿದ್ದನು. ಸೀತೆಯ ಮನಸ್ಸಿನಲ್ಲಿ ಏಕೋ ಶಂಕೆ ಮೊಳೆಯಲು ಆರಂಭವಾಯಿತು. “ಇವನು ರಾವಣನೇ ಇರಬಹುದೋ? ಛೆ, ನಾನು ತಪ್ಪುಮಾಡಿದೆ. ಇವನು ರಾವಣನೇ ನಿಜ. ಹೀಗೆಂದುಕೊಂಡು ಆಕೆ ನಿಂದಿರಲಾರದೆ ನೆಮ್ಮಿದ್ದ ಮರದ ಕೊಂಬೆಯನ್ನು ಬಿಟ್ಟು ನೆಲಕ್ಕೆ ಕುಸಿದಳು. ಹನುಮಂತನಿಗೆ ಆಕೆಯ ಭಯ ಅರಿವಾಯಿತು. ಆದ್ದರಿಂದ ಆಕೆಯ ಇದಿರಿನಲ್ಲಿ ದೀರ್ಘದಂಡ ನಮಸ್ಕಾರ ಮಾಡಿದನು. ಆದರೂ ಆಕೆಗೆ ಧೈರ್ಯ ಬರದು. ಅದರಿಂದ ಆತನನ್ನು ಕುರಿತು, “ಎಲೈ ರಾಕ್ಷಸಾಧಮ, ನೀನು ಬಹಳ ಮಾಯಾವಿ. ಅಂದು ಜನಸ್ಥಾನದಲ್ಲಿದ್ದಾಗ ಸನ್ಯಾಸಿಯ ರೂಪದಲ್ಲಿ ಬಂದೆ. ಇಂದು ವಾನರ ರೂಪದಿಂದ ಬಂದಿರುವೆ. ನನ್ನನ್ನು ಇನ್ನೆಷ್ಟು ಸಂಕಟಪಡಿಸಬೇಕು ಎಂದುಕೊಂಡಿರುವೆ? ಉಪವಾಸದಿಂದ ಕೃಶಳಾಗಿ ದೀನಳಾಗಿರುವ ನನ್ನನ್ನು ಗೋಳಾಡಿಸುವುದು ನಿನಗೆ ಶ್ರೇಯಸ್ಕರವಲ್ಲ” ಎಂದಳು. ಅಷ್ಟರಲ್ಲಿ ಆಕೆಗೆ ತಾನಾಡುತ್ತಿರುವುದು ಕಾರಣವಿಲ್ಲದ ಶಂಕೆ ಎನ್ನಿಸಿತು. ಆದ್ದರಿಂದ ಮಾತನ್ನು ಬದಲಿಸಿ, “ಅಯ್ಯಾ ನಾನು ಆಡಿದುದು ಅಯುಕ್ತವೆಂದು ತೋರುತ್ತದೆ. ನೀನು ಶ್ರೀರಾಮದೂತನೆ ಆಗಿದ್ದರೆ ನಿನಗೆ ಮಂಗಳವಾಗಲಿ. ಶ್ರೀರಾಮನ ಕಥೆಯನ್ನು ಕೇಳುವುದೆಂದರೆ ನನಗೆ ಬಹಳ ಆನಂದ ಆತನ ಗುಣಗಳನ್ನು ನೀನು ಹಾಡು; ನಾನು ಕೇಳಿ ಸಂತೋಷಪಡುತ್ತೇನೆ” ಎಂದಳು. ಮತ್ತೆ “ಇವನು ರಾವಣನಾಗಿದ್ದರೆ ಗತಿ?” ಎಂದುಕೊಂಡಳು. ಹೀಗೆ ಆಕೆಯ ಮನಸ್ಸಿನಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ವೀಕ್ಷಿಸಿದ ಇಂಗಿತಜ್ಞನಾದ ಹನುಮಂತನು ಆಕೆಯನ್ನು ಕುರಿತು “ತಾಯೆ, ಜಾನಕಿ! ಶ್ರೀರಾಮನು ಸೂರ್ಯನಂತೆ ತೇಜಸ್ವಿ; ಚಂದ್ರನಂತೆ ಮನೋಹರ; ಕುಬೇರನಂತೆ ರಾಜಾಧಿರಾಜ; ದೇವಗುರುವಿನಂತೆ ಪ್ರಜ್ಞಾಶಾಲಿ; ಸಾಕ್ಷಾತ್ ವಿಷ್ಣುವಿನಂತೆ ಪರಾಕ್ರಮಶಾಲಿ. ಆತನು ಸತ್ಯವಾದಿ; ಮನ್ಮಥ ಸದೃಶವಾದ ರೂಪವಂತ; ಲೋಕೋತ್ತರವಾದ ಗುಣಗಳುಳ್ಳವನು. ಆ ಮಹಾತ್ಮನ ಬಾಹುಚ್ಛಾಯೆಯನ್ನು ಆಶ್ರಯಿಸಿ ಪ್ರಪಂಚವೆಲ್ಲವೂ ಜೀವಿಸುತ್ತಿದೆ. ಅಂತಹ ಮಹಾತ್ಮನಿಗೆ ಅಪಕಾರ ಮಾಡಬಯಸಿ, ಈ ಪಾಪಿ ರಾವಣ ನಿನ್ನನ್ನು ಅಪಹರಿಸಿ ತಂದಿದ್ದಾನೆ. ಅವನಿಗೆ ಆಗುವ ಫಲವನ್ನು ನೀನೇ ಕಣ್ಣಾರೆ ಕಾಣುವೆ. ಯಾವನು ಇಷ್ಟರಲ್ಲೆ ತನ್ನ ಕಾಲಾಗ್ನಿ ಸದೃಶವಾದ ಬಾಣಗಳಿಂದ ರಾವಣನ ಪ್ರಾಣಗಳನ್ನು ಅಪಹಾರ ಮಾಡುವನೊ ಆ ಶ್ರೀರಾಮನ ದೂತನು ನಾನು. ರಾಕ್ಷಸ ಸ್ತ್ರೀಯರ ವಶವಾಗಿದ್ದರೂ ಪುಣ್ಯಕ್ಕೆ ನೀನಿನ್ನೂ ಜೀವಂತಳಾಗಿರುವೆ. ರಾಮಲಕ್ಷ್ಮಣರನ್ನೂ ವಾನರ ಸಮೂಹವನ್ನೂ ನಮ್ಮ ರಾಜನಾದ ಸುಗ್ರೀವನನ್ನೂ ಇನ್ನು ಕೆಲವೇ ದಿನಗಳಲ್ಲಿ ನೀನು ಕಾಣುವೆಯಂತೆ. ನಾನು ಸುಗ್ರೀವ ರಾಜನ ಮುಖ್ಯಮಂತ್ರಿ. ನನ್ನ ಹೆಸರು ಹನುಮಂತ. ನಾನು ನಿನಗಾಗಿ ಈ ಮಹಾಸಾಗರವನ್ನು ದಾಟಿ ಈ ಲಂಕೆಯನ್ನು ಪ್ರವೇಶಿಸಿದ್ದೇನೆ. ನನ್ನನ್ನು ಕಾಮರೂಪಿಯಾದ ರಾವಣನೆಂದು ಶಂಕಿಸಬೇಡ. ನನ್ನ ಮಾತನ್ನು ನಂಬು” ಎಂದನು.

ಮಾರುತಿಯಾಡಿದ ಮಾತುಗಳನ್ನು ಕೇಳಿ ಸೀತಾದೇವಿಗೆ ಬಹಳ ಸಂತೋಷವಾಯಿತು. ಆತನನ್ನು ಕೇಳಿದಳು – ‘ಎಲೈ ವಾನರಪುಂಗವನೆ, ನಿನಗೂ ಶ್ರೀರಾಮನಿಗೂ ಸ್ನೇಹವಾದುದು ಹೇಗೆ? ವಾನರರಿಗೂ ನರರಿಗೂ ಈ ಬಗೆಯಾದ ಸಂಬಂಧ ಫಲಿಸಿದುದು ಹೇಗೆ? ನಾನು ನನ್ನ ಮನಶ್ಶಾಂತಿಗಾಗಿ ಈ ಮಾತುಗಳನ್ನು ಕೇಳುತ್ತಿದ್ದೇನೆ. ಜೊತೆಗೆ ನನ್ನ ಸಂದೇಹವೂ ನಿವಾರಣೆಯಾದಂತಾಗುತ್ತದೆ. ಹಾಗೆಯೆ ರಾಮಲಕ್ಷ್ಮಣರ ಆಕಾರಾದಿಗಳನ್ನು ವಿವರಿಸಿ ಹೇಳು” ಎಂದಳು. ಹನುಮಂತನು ಮೊದಲು ಶ್ರೀರಾಮನ ಅಂಗಾಂಗಗಳನ್ನು ವರ್ಣಿಸಿ ಹೇಳಿದನು. “ಆತನು ಸರ್ವಾಂಗ ಸುಂದರ. ಕಮಲಪತ್ರದಂತೆ ವಿಶಾಲವಾದ ನೇತ್ರಗಳು, ವಿಶಾಲವಾದ ಹೆಗಲು, ನೀಳವಾದ ತೋಳುಗಳು, ಶಂಕದಂತಹ ಕಂಠ, ಕಾಂತಿಯುಕ್ತವಾದ ಮುಖ. ಆತನ ಧ್ವನಿ ಭೇರಿಯ ಧ್ವನಿಯಂತೆ ಗಂಭೀರವಾದುದು. ಆತನ ನಡಿಗೆ ಸಿಂಹದೆ ನಡಿಗೆಯಂತೆ ಚುರುಕಾದುದು. ಬಹಳ ಉದ್ದವೂ ಅಲ್ಲದ ಗಿಡ್ಡವೂ ಅಲ್ಲದ ಆತನ ದೇಹದಲ್ಲಿರುವ ಅವಯವಗಳಲ್ಲಿ ಇನ್ನೂ ಕೆಲವು ವಿಶೇಷಗಳನ್ನು ಹೇಳಬಹುದು. ಎದೆ, ಮಣಿಬಂದ, ಹಿಡಿಗಳು ಇವು ಮೂರೂ ಬಲಿಷ್ಠವಾಗಿವೆ. ಹೊಟ್ಟೆ, ಹೊಕ್ಕಳು, ಎದೆ ಇವು ಮೂರು ಉಬ್ಬಿವೆ. ಕಡೆಗಣ್ಣು, ಉಗುರು, ಅಂಗೈ ಇವು ಕೆಂಪಗಿವೆ. ಆತನ ಶಿರಸ್ಸಿನಲ್ಲಿ ಶುಭಸೂಚಕಗಳಾದ ಮೂರು ಸುಳಿಗಳಿವೆ; ಅಂಗುಷ್ಟಮೂಲದಲ್ಲಿ ನಾಲ್ಕು ವೇದ ರೇಖೆಗಳಿವೆ. ಆತನ ಅಂಗೈ, ಅಂಗಾಲುಗಳಲ್ಲಿ ವಜ್ರ, ಧ್ವಜ, ಶಂಖ, ಅಂಕುಶ ಇವುಗಳ ರೇಖೆಗಳಿವೆ. ಆತನು ಸತ್ಯ ಧರ್ಮಗಳಲ್ಲಿ ಸದಾ ಆಸಕ್ತನಾದವನು. ಆತನ ಮಾತು ಮನೋಹರ. ಧರ್ಮವೇದಲ್ಲಿಯೂ ಇತರ ವೇದಗಳಲ್ಲಿಯೂ ಆತನು ಪಾರಂಗತ. ಬ್ರಹ್ಮಚರ್ಯ ವ್ರತವುಳ್ಳವನು, ವಿನಯಸಂಪನ್ನನು. ಆತನ ತಮ್ಮನಾದ ಲಕ್ಷ್ಮಣನೂ ರೂಪದಲ್ಲಿಯೂ ಗುಣದಲ್ಲಿಯೂ ಅಣ್ಣನನ್ನೇ ಹೋಲುತ್ತಾನೆ. ಪುರುಷೋತ್ತಮರಾದ ಆ ಸೋದರರೀರ್ವರೂ ನಿನ್ನನ್ನು ಅರಸುತ್ತಾ ತಿರುಗುತ್ತಿರುವಾಗ ನಮಗೂ ಅವರಿಗೂ ಪರಸ್ಪರ ಸಮಾಗಮವಾಗಿ ಸ್ನೇಹ ಬೆಳೆಯಿತು.

“ಇನ್ನು ಅವರಿಗೂ ನಮಗೂ ಸ್ನೇಹ ಬೆಳೆದ ರೀತಿಯನ್ನು ಕೇಳು. ನಮ್ಮ ರಾಜನಾದ ಸುಗ್ರೀವನು ತನ್ನ ಅಣ್ಣನಾದ ವಾಲಿಯಿಂದ ರಾಜ್ಯಭ್ರಷ್ಟನಾಗಿ ಋಶ್ಯಮೂಕಪರ್ವತದ ಬಳಿಯಲ್ಲಿ ಬಚ್ಚಿಟ್ಟುಕೊಂಡಿದ್ದನು. ಅಲ್ಲಿಗೆ ನಾರುಮಡಿಗಳನ್ನುಟ್ಟು ಧನುರ್ಧಾರಿಗಳಾಗಿದ್ದ ರಾಮಲಕ್ಷ್ಮಣರೀರ್ವರೂ ಬಂದರು. ಸುಗ್ರೀವನು ಅವರು ವಾಲಿಯ ಕಡೆಯಿಂದ ತನ್ನ ವಧೆಗಾಗಿ ಕಳುಹಲ್ಪಟ್ಟ ದೂತರೆಂದು ಭ್ರಮಿಸಿ ಪರ್ವತಶಿಖರಕ್ಕೆ ಓಡಿಹೋದನು. ಆಗ ಸಮೀಪದಲ್ಲಿಯೆ ಇದ್ದ ನನ್ನನ್ನು ಸುಗ್ರೀವನು ಹೊಸದಾಗಿ ಬಂದವರ ಸಮಾಚಾರವನ್ನು ಅರಿತು ಬರುವಂತೆ ಹೇಳಿಕಳುಹಿಸಿದನು. ನಾನು ಅವರ ಬಳಿಗೆ ಹೋಗಿ ನಮ್ಮ ಸಮಾಚಾರವನ್ನು ತಿಳಿಸಲು ಅವರು ಸುಗ್ರೀವನಿಗೆ ಸಹಾಯಮಾಡಲು ಒಪ್ಪಿದರು. ನಾನು ರಾಮಲಕ್ಷ್ಮಣರನ್ನು ಹೆಗಲಮೇಲೆ ಕೂರಿಸಿಕೊಂಡು ನಮ್ಮ ದೊರೆಯ ಬಳಿಗೆ ಕರೆದೊಯ್ದೆ. ಅವರು ಪರಸ್ಪರ ಕಲೆತು ಒಬ್ಬರಿಗೊಬ್ಬರು ಸಹಾಯಮಾಡುವುದಾಗಿ ಅಗ್ನಿಸಾಕ್ಷಿಯಾಗಿ ಸ್ನೇಹಮಾಡಿಕೊಂಡರು. ಅವರಿಗೆ ಸ್ನೇಹ ಬೆಳೆದುದು ಹೀಗೆ. ವಾಲಿ ಸುಗ್ರೀವನ ಪತ್ನಿಯನ್ನು ಪರಿಗ್ರಹಿಸಿದ್ದ ಸುದ್ದಿಯನ್ನು ಕೇಳಿ ಧರ್ಮಪರನಾದ ರಾಮಚಂದ್ರನು ಆತನನ್ನು ಸಂಹರಿಸುವುದಾಗಿ ಪ್ರತಿಜ್ಞೆ ಮಾಡಿದನು. ಆತನ ಪ್ರತಿಜ್ಞೆಯಂತೆ ಕಾರ್ಯ ನಡೆಯಿತು. ಸುಗ್ರೀವನಿಗೆ ರಾಜ್ಯ ದೊರೆಯಿತು. ಅನಂತರ ಸುಗ್ರೀವನು ಶ್ರೀರಾಮಚಂದ್ರನಿಗೆ ಮಾತು ಕೊಟ್ಟಿದಂತೆ ನಿನ್ನನ್ನು ಅರಸಲು ತನ್ನ ದೂತರನ್ನು ದಿಕ್ಕುದಿಕ್ಕಿಗೆ ಕಳುಹಿಸಿಕೊಟ್ಟನು.

“ಶ್ರೀರಾಮಚಂದ್ರನ ಭಾರ್ಯಾಪಹರಣ ವೃತ್ತಾಂತವನ್ನು ಕೇಳಿದ ವಾನರರು ತಮಗೆ ದೊರೆತಿದ್ದ ಆಭರಣಗಳನ್ನು ರಾಮಚಂದ್ರನ ಮುಂದಿಟ್ಟು ‘ಆಕಾಶಮಾರ್ಗದಲ್ಲಿ ಅಳುತ್ತಾ ಹೋಗುತ್ತಿದ್ದ ದಿವ್ಯಸುಂದರಿಯೊಬ್ಬಳು ಇವುಗಳನ್ನು ಕೆಳಗೆ ಬಿಸಾಡಿದಳು’ ಎಂದು ಹೇಳಿದರು. ಶ್ರೀರಾಮನು ಅವುಗಳನ್ನು ಸಂಭ್ರಮದಿಂದ ಕೈಗೆ ತೆಗೆದುಕೊಂಡು ಬಹುಕಾಲ ಅಳುತ್ತಿದ್ದನು. ಅನಂತರ ಸುಗ್ರೀವ ಲಕ್ಷ್ಮಣರು ಆತನನ್ನು ಸಮಾಧಾನಗೊಳಿಸಿದರು. ಆದರೂ ಆತನು ಭೂಕಂಪದಿಂದ ನಡುಗುವ ಪರ್ವತದಂತೆ ಅಡಿಗಡಿಗೂ ವ್ಯಥೆಗೊಳ್ಳುತ್ತಾ ಕಾಲಯಾಪನ ಮಾಡುತ್ತಿರುವನು. ತಾಯೆ, ನೀನಿರುವ ಸ್ಥಳವನ್ನು ತಿಳಿದ ನಾನು ತಿರುಗಿ ಹೋಗಿ ಆತನಿಗೆ ತಿಳಿಸುತ್ತಲೇ ಆತನು ಇಲ್ಲಿಗೆ ಬಂದು ರಾವಣನನ್ನು ಅವನ ಬಂಧುಮಿತ್ರಸಹಿತ ಸಂಹರಿಸಿ ನಿನ್ನ ಮನಸ್ಸನ್ನು ಸಂತೋಷಗೊಳಿಸುವನು” ಎಂದು ಹೇಳಿದನು. ಮಹಾಬಲಶಾಲಿಗಳಾದ ವಾನರರು ಸುಗ್ರೀವನ ಆಜ್ಞೆಯಂತೆ ಅಂಗದನ ಮುಂದಾಳುತನದಲ್ಲಿ ದಕ್ಷಿಣಕ್ಕೆ ಹೊರಟುದನ್ನೂ, ಸಂಪಾತಿಯಿಂದ ತಮಗೆ ಸೀತಾಮಾತೆಯ ಸುದ್ದಿ ಗೊತ್ತಾದುದನ್ನೂ ಅವರಲ್ಲಿ ಒಬ್ಬನಾದ ತಾನು ಸಮುದ್ರವನ್ನು ಹಾರಿ ಬಂದುದನ್ನೂ, ದಾರಿಯಲ್ಲಿ ತನಗೆ ಬಂದ ತೊಂದರೆಗಳನ್ನೂ ಹನುಮಂತನು ಸೀತಾದೇವಿಗೆ ವಿವರಿಸಿ ಹೇಳಿದನು. ಅಲ್ಲದೆ ತಾನು ರಾತ್ರಿಯೆಲ್ಲಾ ಲಂಕಾನಗರಿಯನ್ನು ಶೋಧಿಸಿದುದನ್ನು ವಿವರಿಸಿ, ಕಡೆಗೆ ತನ್ನ ಪುಣ್ಯದಿಂದ ಸೀತಾದೇವಿಯನ್ನು ಅಲ್ಲಿ ಕಂಡುದಾಗಿ ತಿಳಿಯಹೇಳಿದನು. ಈ ಮಾತುಗಳನ್ನೆಲ್ಲಾ ಕೇಳಿದಮೇಲೆ ಸೀತಾದೇವಿಗೆ ಎಷ್ಟೋ ನಂಬಿಕೆ ಹುಟ್ಟಿ, ಇವನು ರಾವಣನಿರಬಹುದೆಂಬ ಸಂದೇಹ ನಿವಾರಣೆಯಾಯಿತು.