ಗಂಡನ ಒಡಲನ್ನು ಅಪ್ಪಿಕೊಂಡು ತಾರೆ ಬಹುವಿಧವಾಗಿ ಗೋಳಿಡುತ್ತಿರಲು, ನೀಲನೆಂಬ ಕಪಿವೀರನು, ಬೆಟ್ಟದ ಗುಹೆಯಲ್ಲಿ ಅಡಗಿರುವ ಸರ್ಪವನ್ನು ಹೊರಗೆಳೆಯುವಂತೆ, ವಾಲಿಯ ಎದೆಯಲ್ಲಿ ನೆಟ್ಟ ಬಾಣವನ್ನು ಹೊರಗೆಳೆದು ತೆಗೆದನು. ಆಗ ವಾಲಿಯ ಮೈಯಿಂದ ರಕ್ತ ಗೈರಿಕಾದಿ ಧಾತುಗಳಿಂದ ಕೂಡಿದ ಜಲಧಾರೆಗಳಂತೆ ಧಾರೆಧಾರೆಯಾಗಿ ಹರಿಯತೊಡಗಿತು. ಆಗ ತಾರೆ ವಾಲಿಯ ಮೈಮೇಲಿನ ಧೂಳನ್ನು ತೊಡೆಯತ್ತ, ಕಂಬನಿಯಿಂದ ಅವನ ದೇಹವನ್ನು ನೆನಸುತ್ತ, ತನ್ನ ಮುದ್ದುಮಗನಾದ ಅಂಗದನನ್ನು ಹತ್ತಿರಕ್ಕೆ ಕರೆದು “ವತ್ಸ, ನಿನ್ನ ತಂದೆ ಮರಣಹೊಂದಿದನು. ವೈರಕ್ಕೆ ತಕ್ಕಗತಿ ವೀರನಾದ ವಾಲಿಗುಂಟಾಯಿತು. ಯಮಪುರಿಗೆ ತೆರಳುತ್ತಿರುವ ಮಾನವಂತನಾದ ನಿನ್ನ ತಂದೆಗೆ ನಮಸ್ಕರಿಸು” ಎಂದಳು. ತಾಯಿಯ ಮಾತಿನಂತೆ ಅಂಗದನು ಮೇಲೆದ್ದು ತನ್ನೆರಡು ಕೈಗಳಿಂದ ತಂದೆಯ ಪಾದಗಳನ್ನು ಹಿಡಿದುಕೊಂಡು ‘ಅಂಗದನಾದ ನಾನು ನಮಸ್ಕರಿಸುತ್ತೇನೆ’ ಎಂದು ನಮಸ್ಕರಿಸಿದನು. ಆಗ ದುಃಖವನ್ನು ತಡೆಯಲಾರದೆ ತಾರೆ “ಪ್ರಿಯನೆ, ನಮಸ್ಕರಿಸುವ ಅಂಗದನನ್ನು ಕುರಿತು ಮೊದಲಿನಂತೆ, ‘ವತ್ಸ ದೀರ್ಘಾಯುವಾಗು’ ಎಂದು ಏಕೆ ಹರಸದಿರುವೆ? ನೀನು ಸಾವೈದಲು ಇಂದಿಗೆ ನನ್ನ ಸೌಭಾಗ್ಯವೆಲ್ಲ ಹಾಳಾಯಿತು” ಎಂದು ಮತ್ತೆ ಗೋಳಿಟ್ಟಳು.

ತಾರೆಯ ದುಃಖವನ್ನು ಕಂಡೊಡನೆಯ ಅಣ್ಣನ ಮರಣದ ಸಂಕಟ ಹೆಚ್ಚಿದಂತಾಗಿ ಕಂಬನಿದುಂಬಿ ಸುಗ್ರೀವನು ಅತ್ತನು. ಅವನ ಧೈರ್ಯ ಸ್ಥೈರ್ಯಗಳು ಕುಸಿದುಬಿದ್ದವು. ಶ್ರೀರಾಮನ ಬಳಿಗೆ ಬಂದು ಅವನನ್ನು ಕುರಿತು ಸುಗ್ರೀವನು ಹೇಳಿದನು: “ರಾಮಚಂದ್ರ, ನೀನೇನೊ ನಿನ್ನ ಪ್ರತಿಜ್ಞೆಯಂತೆ ಕಾರ್ಯಮಾಡಿ ಮುಗಿಸಿದೆ. ಆದರೆ ಈಗ ನನ್ನ ಮನಸ್ಸು ಭೋಗಗಳಿಂದ ಹಿಮ್ಮೆಟ್ಟಿದೆ. ಅಣ್ಣನಾದ ವಾಲಿ ಮಡಿದನು. ತಾರೆ ಗಂಡ ಮಡಿದ ಸಂಕಟದಿಂದ ಬಹುವಾಗಿ ಗೋಳಿಡುತ್ತಿದ್ದಾಳೆ. ತಂದೆಯ ಸಾವಿನಿಂದ ಅಂಗದನು ಬದುಕುವನೊ ಇಲ್ಲವೊ ಎಂಬ ಸಂಶಯವುಂಟಾಗಿದೆ. ಪಟ್ಟಣಿಗರ ಗೋಳಂತೂ ಹೇಳತೀರದಾಗಿದೆ. ಈ ನೋಟವನ್ನು ಕಂಡು ಎದೆಗರಗಿ ನನಗೆ ರಾಜ್ಯವೆ ಬೇಡವಾಗಿದೆ. ನನಗುಂಟಾದ ಅಪಮಾನಕ್ಕೆ ವಾಲಿವಧೆ ನನಗೆ ಹಿತವೆನಿಸಿದ್ದರೂ, ಈಗ ಇದಕ್ಕಾಗಿ ಪರಿತಪಿಸುತ್ತಿದ್ದೇನೆ. ರಾಜ್ಯವಾಳುವುದಕ್ಕಿಂತ ಈ ಋಷ್ಯಮೂಕಪರ್ವತದಲ್ಲಿ ವಾಸಿಸುವುದೆ ಹೆಚ್ಚು ಶ್ರೇಯಸ್ಕರವೆಂದು ಭಾವಿಸುತ್ತೇನೆ. ಮಹಾತ್ಮನಾದ ವಾಲಿ ಎಷ್ಟೋ ಬಾರಿ ನನ್ನನ್ನು ಕೊಲ್ಲದೆ ‘ನಿನ್ನ ಮನ ಬಂದಂತೆ ಚರಿಸು ಹೋಗು’ ಎಂದು ಹೇಳುತ್ತಿದ್ದನು. ಮಹಾತ್ಮನಾದ ಆತನಿಗೆ ಅನುವಾದ ಮಾತು ಅದು. ಗುಣಾಡ್ಯನಾದ ಅಂಥ ಅಣ್ಣನನ್ನು ಕೊಲ್ಲಿಸಿದ ನಾನು ಈ ರಾಜ್ಯವನ್ನು ಹೇಗೆ ಆಳಲಿ? ಅಣ್ಣನ ಸಾವಿನಿಂದ ನನಗೆ ಘೋರವಾದ ಪಾಪವುಂಟಾಯಿತು. ಈ ಪಾಪವನ್ನು ಆಚರಿಸಿರುವ ನಾನು ಪ್ರಜೆಗಳಿಗೆ ಹೇಗೆ ಪ್ರಿಯನಾದೇನು? ಚಿನ್ನವನ್ನು ಬೆಂಕಿಯಲ್ಲಿ ಕಾಯಿಸಿದರೆ, ತನ್ನ ಕಲ್ಮಷವನ್ನು ಕಳೆದುಕೊಂಡು ಅದು ಶುಭವಾಗುವಂತೆ ಬೆಂಕಿಯಲ್ಲಿ ಬಿದ್ದು ನಾನು ಈ ಪಾಪವನ್ನು ಕಳೆದುಕೊಳ್ಳುತ್ತೇನೆ. ಇನ್ನಾವ ದೇಶದಲ್ಲಿ ತಾನೆ ಇಂಥ ಅಣ್ಣನನ್ನು ಕಾಣಲಾದೀತು? ಅಂಗದನು ಬದುಕಿದರೆ ತಾರೆ ಬದುಕುತ್ತಾಳೆ. ಆದರೆ ಮಗನನ್ನು ಕಳೆದುಕೊಂಡ ದೇವಿ ಬದುಕಳೆಂದೇ ತೋರುತ್ತದೆ. ನಾನು ಅಗ್ನಿಪ್ರವೇಶ ಮಾಡಿದರೂ ಈ ವಾನರ ವೀರರು ನಿನ್ನ ಕಾರ್ಯವನ್ನು ನೆರವೇರಿಸಿಕೊಡುತ್ತಾರೆ. ಕುಲನಾಶಕನೂ ಬದುಕಲು ಯೋಗ್ಯನಲ್ಲದವನೂ ಆದ ನನಗೆ ಅಗ್ನಿಪ್ರವೇಶಮಾಡಲು ಅಪ್ಪಣೆ ಕೊಡು. ”

ದೀನನಾದ ಸುಗ್ರೀವನ ನುಡಿಗೇಳಿ, ಕಂಬನಿದುಂಬಿ. ವೀರನಾದ ಶ್ರೀರಾಮನಿಗೂ ಕ್ಷಣಕಾಲ ಏನುಮಾಡಲೂ ತೋರದಾಯಿತು. ಬಳಿಕ ರಾಮನು ಶೋಕದಲ್ಲಿ ಮುಳುಗಿಹೋದ ತಾರೆಯನ್ನು ಸಂತೈಸಲು ಯತ್ನಿಸಿದನು. ಸೂರ್ಯನಂತೆ ತೇಜಸ್ವಿಯಾದ ರಾಮನನ್ನು ಕಂಡು, ಅವನೇ ರಾಮನೆಂದು ಅರಿತ ತಾರೆ ಅವನಿಗೆ “ರಾಮಚಂದ್ರ, ನೀನು ಜಿತೇಂದ್ರಿಯ; ಧರ್ಮಜ್ಞ. ಉತ್ತಮವಾದ ಕೀರ್ತಿಯನ್ನು ಪಡೆದವನು. ಯುಕ್ತಾಯುಕ್ತಗಳನ್ನು ತಿಳಿದವನು. ಆದ್ದರಿಂದ ಯಾವ ಒಂದು ಬಾಣದಿಂದ ನನ್ನ ಗಂಡನನ್ನು ಹೊಡೆದು ಕೊಂದೆಯೋ ಅದೇ ಬಾಣದಿಂದ ನನ್ನನ್ನು ಹೊಡೆದು ಕೊಲ್ಲು. ಏಕೆಂದರೆ ನನ್ನನ್ನು ಅಗಲಿ ವಾಲಿ ಇರುವುದಿಲ್ಲ. ನನ್ನನ್ನು ಕೊಲ್ಲುವುದರಿಂದ ಸ್ತ್ರೀಹತ್ಯಾದೋಷ ಬರುವುದೆಂದು ಶಂಕಿಸಬೇಡ. ನಾನು ವಾಲಿಯ ಅರ್ಧ ಅಂಶಗಳೆಂದು ತಿಳಿದು ಹೊಡೆದರೆ ನಿನಗೆ ಹೇಗೆತಾನೆ ದೋಷವುಂಟಾದೀತು? ನನಗೆ ಪ್ರಿಯವನ್ನುಂಟುಮಾಡುವ ಬಯಕೆ ನಿನಗಿದ್ದರೆ ನನ್ನನ್ನು ಕೊಂದು ವಾಲಿಯ ಬಳಿಗೆ ಕಳುಹು” ಎಂದು ಗೋಳಿಟ್ಟಳು. ಶ್ರೀರಾಮನು ಆಕೆಯನ್ನು ಸಂತೈಸಿ “ವೀರಪತ್ನಿಯಾದ ನೀನು ಈ ರೀತಿ ಶೋಕಿಸಕೂಡದು. ವಿಧಿನಿಯಮದಂತೆ ಮನುಷ್ಯರು ಸುಖದುಃಖಗಳನ್ನು ಅನುಭವಿಸುವರು. ನಿನ್ನ ಮಗನಾದ ಅಂಗದನು ಯುವರಾಜನಾಗುತ್ತಾನೆ. ಆ ಸಂತೋಷವನ್ನು ಕಂಡು ಈ ದುಃಖವನ್ನು ಮರೆತುಬಿಡು” ಎಂದನು. ಶ್ರೀರಾಮನ ವಾಣಿಯ ಧೈರ್ಯ ತಾರೆಯ ಹೃದಯಕ್ಕೂ ತಗುಲಿದಂತಾಗಿ ಆಕೆಯ ಮನಸ್ಸು ಒಯ್ಯನೊಯ್ಯನೆ ಸಮಾಧಾನಹೊಂದಿತು.

ತಾರೆಯನ್ನು ಸಂತೈಸಿ, ಶ್ರೀರಾಮನು ಮುಂದೆ ಮಾಡಬೇಕಾದ ಕಾರ್ಯಗಳಿಗಾಗಿ ಸುಗ್ರೀವ ಅಂಗದರನ್ನು ಕುರಿತು “ನೀವು ಹೀಗೆ ಅಳುತ್ತಿದ್ದರೆ ವಾಲಿಗೆ ಉತ್ತಮವಾದ ಲೋಕಗಳು ಲಭಿಸವು. ಸತ್ತವರಿಗಾಗಿ ನೀವು ಕಂಬನಿ ಸುರಿಸದಿರಿ. ಈಗ ವಾಲಿಗೆ ಸಂಸ್ಕಾರಮಾಡಲು ತಕ್ಕ ಏರ್ಪಾಟುಗಳನ್ನು ಮಾಡಬೇಕು. ವಿಧಿನಿಯಮದಂತೆ ಈ ಕೆಲಸ ನಡೆದಿದೆ. ಯುದ್ಧದಲ್ಲಿ ಮಡಿದ ವಾಲಿಗೆ ಅವನ ಪಾಪಗಳೆಲ್ಲ ನಾಶವಾಗಿ ಸ್ವರ್ಗವುಂಟಾಗುವುದರಲ್ಲಿ ಸಂದೇಹವಿಲ್ಲ. ಮೇಲಾಗಿ ಮಹಾತ್ಮನಾದ ವಾಲಿ ಮೃತಿ ಹೊಂದಿದ ಕಾಲವೂ ಮಂಗಳಕರವಾದುದು. ಆದ್ದರಿಂದ ಮುಂದಿನ ಕೆಲಸ ನಡೆಯಲಿ” ಎಂದನು. ಅನಂತರ ಪ್ರಜ್ಞೆಯಿಲ್ಲದೆ ಬಿದ್ದಿದ್ದ ಸುಗ್ರೀವನನ್ನು ಲಕ್ಷ್ಮಣನು ಎಚ್ಚರಗೊಳಿಸಿ ವಾಲಿಯ ದಹನಕ್ರಿಯೆಗೆ ಏರ್ಪಡಿಬೇಕೆಂದು ತಿಳಿಯಹೇಳಿದನು.

ಲಕ್ಷ್ಮಣನ ನುಡಿಗೇಳಿದ ವಾನರರು ಉತ್ತಮವಾದ ಆಸನದಿಂದ ಕೂಡಿ, ಚಿತ್ರಗಳಿಂದ ಅಲಂಕಾರಗೊಂಡು ಸಿದ್ಧಪುರುಷರ ವಿಮಾನದಂತಿದ್ದ ಮನೋಹರವಾದ ಪಲ್ಲಕ್ಕಿಯನ್ನು ಕಿಷ್ಕಿಂಧೆಯಿಂದ ಹೊತ್ತು ತಂದರು. ಹೂಗಳಿಂದಲೂ ಕಿರುಗಂಟೆಗಳಿಂದಲೂ ಅಲಂಕೃತವಾದ ಆ ಪಲ್ಲಕ್ಕಿ ಬಾಲಸೂರ್ಯನಂತೆ ಹೊಳೆಯುತ್ತಿತ್ತು. ಅದನ್ನು ನೋಡಿ ಶ್ರೀರಾಮನು ದಹನಕಾರ್ಯಕ್ಕಾಗಿ ವಾಲಿಯ ಶವವನ್ನು ಅದರಲ್ಲಿಟ್ಟು ಹೊತ್ತು ತರುವಂತೆ ಅಜ್ಞಾಪಿಸಿದನು. ಶ್ರೀರಾಮನ ಅಪ್ಪಣೆಯಂತೆ ವಾನರರು ವಾಲಿಯನ್ನು ನಾನಾಬಗೆಯ ಹೂಮಾಲೆಗಳಿಂದಲೂ ವಸ್ತ್ರಗಳಿಂದಲೂ ಆಭರಣಗಳಿಂದಲೂ ಅಲಂಕರಿಸಿದರು. ಅನಂತರ ರಾಜನಿಗೆ ತಗುವ ರೀತಿಯಲ್ಲಿ ಸಂಸ್ಕಾರ ಮಾಡುವ ಉದ್ದೇಶದಿಂದ, ಗೋಳಾಡುತ್ತಿದ್ದ ವಾನರರು ಆ ದೇಹವನ್ನು ಪಲ್ಲಕ್ಕಿಯಲ್ಲಿಟ್ಟು, ನಾನಾವಿಧವಾದ ರತ್ನಗಳನ್ನು ದಾನಮಾಡುತ್ತ ಅದನ್ನು ಹೊತ್ತು ನಡೆದರು. ಆ ವಾಹನದ ಹಿಂದೆ ವಾಲಿಯ ಬಂಧುಗಳೂ ತಾರೆಯೂ ಅಂಗದನೂ ಪ್ರಲಾಪಿಸುತ್ತ ನಡೆದರು. ವಾನರ ಸ್ತ್ರೀಯರ ಮತ್ತು ಬಂಧುಗಳ ಪ್ರಲಾಪಗಳಿಂದ ಕಾಡುಗಳೂ ಬೆಟ್ಟಗಳೂ ರೋದಿಸುವಂತೆ ತೋರುತ್ತಿದ್ದುವು. ಹೀಗೆ ಬಲಶಾಲಿಗಳಾದ ವಾನರರು ಆ ಪಲ್ಲಕ್ಕಿಯನ್ನು ಹೊತ್ತು ನಡೆದು, ಜನರಹಿತವಾದ ಒಂದು ಬೆಟ್ಟದ ನದಿಯ ಮರಳುದಿಣ್ಣೆಯಲ್ಲಿ ಅದನ್ನು ಇಳುಹಿ ಚಿತೆಯನ್ನು ಹೂಡಿದರು.

ತಾರೆ ವಾಲಿಯ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಮತ್ತೆ “ಹಾ ವಾನರಮಹಾರಾಜ! ಹಾ ನಾಥ! ಮಹಾಬಾಹೋ! ನನ್ನನ್ನು ನೋಡಿ ಏಕೆ ಮಾತನಾಡದಿರುವೆ? ಶ್ರೀರಾಮನ ಒಂದು ಬಾಣ ನಿನಗೆ ಮೃತ್ಯುವಾಗಿ ಪರಿಣಮಿಸಿತೆ? ಆ ಒಂದು ಬಾಣದಿಂದ ಎಷ್ಟು ಜನ ವಾನರ ಸ್ತ್ರೀಯರಿಗೆ ವೈಧವ್ಯವುಂಟಾಯಿತು! ನಿನ್ನನ್ನು ಸುತ್ತುಗಟ್ಟಿ ನಿಂತಿರುವ ಈ ಸುಗ್ರೀವನನ್ನೂ ನನ್ನನ್ನೂ ಅಂಗದಕುಮಾರನನ್ನೂ ಮಂತ್ರಿಗಳನ್ನೂ ಪುರಪರಿಜನರನ್ನೂ ಏಕೆ ನೋಡದಿರುವೆ? ನುಡಿಸದಿರುವೆ?” ಎಂದು ಗೋಳಿಟ್ಟಳು. ಇದನ್ನು ನೋಡಿ ಉಳಿದ ವಾನರ ಸ್ತ್ರೀಯರು ಗಂಡನ ಮೇಲೆ ಬಿದ್ದು ಹೊರಳುತ್ತಿರುವ ತಾರೆಯನ್ನು ಮೇಲಕ್ಕೆ ಎಬ್ಬಿಸಿದರು. ಅಂಗದನು ಸುಗ್ರೀವನೊಡನೆ ಅಳುತ್ತಳುತ್ತಲೆ ತಂದೆಯ ದೇಹವನ್ನು ಎತ್ತಿ ಚಿತೆಯಮೇಲಿರಿಸಿದನು. ಬಳಿಕ ಯಮಲೋಕವನ್ನು ಕುರಿತು ತೆರಳುತ್ತಿರುವ ತಂದೆಯನ್ನು ಅಪ್ರದಕ್ಷಿಣೆಮಾಡಿ ಶಾಸ್ತ್ರೋಕ್ತವಾಗಿ ಅಗ್ನಿಸಂಸ್ಕಾರಮಾಡಿದನು. ಸಂಸ್ಕಾರ ಮುಗಿದ ಬಳಿಕ ಸುಗ್ರೀವನು ತಾರೆಯಿಂದಲೂ ಇತರ ವಾನರರಿಂದಲೂ ಕೂಡಿ ನದಿಯಲ್ಲಿ ಮಿಂದು ವಾಲಿಗೆ ತಿಲೋದಕ ಕೊಟ್ಟನು. ಈ ನೋಟವನ್ನು ನೋಡಿ ದಶರಥನ ಹಿರಿಯ ಮಗನಿಗೆ ದುಃಖ ಉಕ್ಕಿಬರುತ್ತಿದ್ದರೂ ಅದನ್ನು ತಡೆದು, ಸುಗ್ರೀವ ಅಂಗದರಿಂದ ಧೈರ್ಯನಿಧಿಯಾದ ಆತನು ಪ್ರೇತಕಾರ್ಯಗಳನ್ನು ಮಾಡಿಸಿದನು.

ಸಂಸ್ಕಾರಗಳೆಲ್ಲವೂ ಮುಗಿದ ಮೇಲೆ ಒದ್ದೆಬಟ್ಟೆಗಳನ್ನುಟ್ಟ ವಾನರರು ಸುಗ್ರೀವನನ್ನು ಮುಂದಿಟ್ಟುಕೊಂಡು ಶ್ರೀರಾಮನ ಬಳಿಗೆ ಬಂದರು. ಆಗ ಮೇರುಪರ್ವತಕ್ಕೆ ಸಮನಾದ ಕಾಂತಿಯ ಮತ್ತು ಬಾಲಸೂರ್ಯನಂತೆ ಹೊಳೆವ ವದನದ ಆಂಜನೇಯನು ಕೈಮುಗಿದುಕೊಂಡು ಈ ರೀತಿ ನುಡಿದನು: “ಎಲೈ ಸ್ವಾಮಿಯೆ, ನಿನ್ನ ಅನುಗ್ರಹದಿಂದ ಸುಗ್ರೀವನಿಗೆ ಈ ವಾನರ ರಾಜ್ಯ ದೊರಕಿತು. ನಿನ್ನ ಅಪ್ಪಣೆಯಂತೆ ನಿನ್ನನ್ನೂ ಇತರ ಸ್ನೇಹಿತರನ್ನೂ ಮುಂದಿಟ್ಟುಕೊಂಡು ಸುಗ್ರೀವನು ಕಿಷ್ಕಿಂಧೆಯನ್ನು ಹೋಗುತ್ತಾನೆ. ಅಲ್ಲಿ ಆತನು ಪಟ್ಟಾಭಿಷಿಕ್ತನಾಗಿ ನಿನ್ನನ್ನು ಪೂಜಿಸುವನು. ಪ್ರಯಾಣಕ್ಕೆ ಅಪ್ಪಣೆಕೊಡು. ” ಹನುಮಂತನ ಮಾತಿಗೆ ರಾಮನು “ಎಲೈ ಸೌಮ್ಯ, ತಂದೆಯ ಅಪ್ಪಣೆಯನ್ನು ಪಾಲಿಸುತ್ತಿರುವ ನಾನು ಹದಿನಾಲ್ಕು ವರ್ಷಗಳ ಕಾಲ, ಪಟ್ಟಣವನ್ನಾಗಲಿ ಗ್ರಾಮವನ್ನಾಗಲಿ ಪ್ರವೇಶಿಸುವುದಿಲ್ಲ. ಆದ್ದರಿಂದ ವಾನರ ಶ್ರೇಷ್ಠನಾದ ಸುಗ್ರೀವನಿಗೆ ಸಿರಿಯ ತವರಾದ ಕಿಷ್ಕಿಂಧೆಯಲ್ಲಿ ಅಭಿಷೇಕ ನಡೆಯಲಿ” ಎಂದನು. ಹೀಗೆಂದು ಹೇಳಿ ಮರ್ಯಾದೆಯನ್ನು ಅರಿತ ಶ್ರೀರಾಮನು ಸುಗ್ರೀವನಿಗೆ “ಸುಗ್ರೀವ, ವೀರನಾದ ಅಂಗದನನ್ನು ಯೌವ ರಾಜ್ಯದಲ್ಲಿ ಅಭಿಷೇಕಮಾಡು. ವಾಲಿಯ ಮಗನಾದ ಇವನು ಪರಾಕ್ರಮದಲ್ಲಿ ನಿನಗೆ ಸಮನಾಗಿದ್ದಾನೆ. ಈಗತಾನೆ ವರ್ಷಕಾಲ ಮೊದಲಾಗಿದೆ. ಸೀತಾನ್ವೇಷಣಕ್ಕೆ ಈ ನಾಲ್ಕು ತಿಂಗಳು ಸಕಾಲವಲ್ಲ. ಈಗ ನೀನು ಮಂಗಳಕರವಾದ ಮುಹೂರ್ತದಲ್ಲಿ ನಿನ್ನ ರಾಜಧಾನಿಗೆ ಪ್ರವೇಶಮಾಡು. ಇಗೋ ಮುಂದೆ ಕಾಣುತ್ತಿರುವ ರಮ್ಯವಾದ ಬೆಟ್ಟದ ಗುಹೆಯಲ್ಲಿ ಈ ಕಾಲವನ್ನು ಕಳೆಯುತ್ತೇನೆ. ಕಾರ್ತಿಕಮಾಸ ಬರಲು ಸೀತಾನ್ವೇಷಣ ಕಾರ್ಯದಲ್ಲಿ ಯತ್ನಮಾಡು. ಈಗ ಪಟ್ಟಣವನ್ನು ಹೊಕ್ಕು, ಪಟ್ಟಾಭಿಷಿಕ್ತನಾಗಿ ನಿನ್ನ ಸ್ನೇಹಿತರನ್ನು ಸಂತೋಷಗೊಳಿಸು” ಎಂದನು.

ವಿಧಿಯಿಲ್ಲದೆ ಶ್ರೀರಾಮನ ಮಾತನ್ನು ಒಪ್ಪಿಕೊಂಡು ಸುಗ್ರೀವನು ಮಂತ್ರಿಗಳೊಡನೆ ಕಿಷ್ಕಿಂಧೆಯನ್ನು ಹೊಕ್ಕನು. ಕಪಿಮುಖ್ಯರೆಲ್ಲರೂ ದೊರೆಯಾ ಸುಗ್ರೀವನನ್ನು ಬಂದು ಕಂಡು ನಮಸ್ಕರಿಸಿದರು. ಸುಗ್ರೀವನೂ ಸಹ ಅವರೆಲ್ಲರನ್ನು ಪ್ರೀತಿಯಿಂದ ಕಂಡು ಆದರಿಸಿದನು. ಅನಂತರ ವಾನರ ಮುಖ್ಯರು ಪಟ್ಟಾಭಿಷೇಕಕ್ಕೆ ಬೇಕಾದ ಬೆಳ್ಗೊಡೆಯನ್ನೂ ಚಿನ್ನದ ಹಿಡಿಯುಳ್ಳ ಚಾಮರಗಳನ್ನೂ ರತ್ನ ಹಾಲು ಹೂವು ಗಂಧ ಜೇನು ಮೊಸರು ಇವೇ ಮೊದಲಾದ ಪದಾರ್ಥಗಳನ್ನೂ ತರಿಸಿದರು. ಗೋರೋಜನ ಲೋಪನ ಮುಂತಾದ ಮಂಗಳದ್ರವ್ಯಗಳನ್ನೂ ತೆಗೆದುಕೊಂಡು ಶುಭಲಕ್ಷಣ ಸಂಪನ್ನೆಯರಾದ ಹದಿನಾರು ಮಂದಿ ಕನ್ನೆಯರು ಬಂದರು. ತರುವಾಯ ವೇದ ಮಂತ್ರಗಳಿಂದ ಹೋಮ ಮಾಡಿದರು. ಚಿನ್ನದ ಮೆಟ್ಟಿಲುಳ್ಳ, ನಾನಾ ವಿಧವಾದ ಹೂವುಗಳಿಂದ ಸಿಂಗರಿಸಲ್ಪಟ್ಟ ಸಿಂಹಾಸನದಲ್ಲಿ ಸುಗ್ರೀವನನ್ನು ಪೂರ್ವದಿಕ್ಕಿಗೆ ಇದಿರಾಗಿ ಕೂರಿಸಿ, ನಾನಾ ತೀರ್ಥಗಳ ನೀರಿನಿಂದ ಮಂತ್ರಪೂರ್ವಕವಾಗಿ ಪುರೋಹಿತ ವರ್ಗದವರು ಅಭಿಷೇಕಿಸಿದರು. ಆಗ ಸಿಂಹಪೀಠದಲ್ಲಿ ಕುಳಿತ ಸುಗ್ರೀವನು ದೇವೇಂದ್ರನಂತೆ ಮೆರೆದನು. ಆ ಸಮಯದಲ್ಲಿ ದಿಕ್ಕುಗಳು ಪ್ರಸನ್ನವಾದುವು. ತಂಗಾಳಿ ಬೀಸಿತು. ಗಗನ ಬಿರಿದು ಹೋಗುವಂತೆ ವಾನರರು ಹರ್ಷಧ್ವನಿಗೈದರು. ಸುಗ್ರೀವನು ಅಂಗದನನ್ನು ಯೌವರಾಜ್ಯದಲ್ಲಿ ಅಭಿಷೇಕಿಸಿದನು. ವಾನರರು ಸುಗ್ರೀವನನ್ನೂ ರಾಮಲಕ್ಷ್ಮಣರನ್ನೂ ಕೊಂಡಾಡಿದರು. ಪಟ್ಟಾಭಿಷೇಕ ಸಮಯದಲ್ಲಿ ಸಮಗ್ರ ಕಿಷ್ಕಿಂಧೆಯೂ ಸಂತೋಷ ಸಾಗರದಲ್ಲಿ ಮುಳುಗಿತು. ಉತ್ಸವ ಮುಗಿದಮೇಲೆ ಅದರ ವಿವರಗಳನ್ನು ಶ್ರೀರಾಮನಿಗೆ ನಿವೇದಿಸಿ ಸುಗ್ರೀವನು ರುಮೆಯನ್ನು ಹೊಂದಿ ಕಿಷ್ಕಿಂಧೆಯಲ್ಲಿ ಸುಖದಿಂದಿದ್ದನು.

* * *