ಇತ್ತ ಲಂಕಾನಗರದಲ್ಲಿ ಮಹಾತ್ಮನಾದ ಹನುಮಂತನು ನಡೆಸಿದ ಕಾರ್ಯಗಳನ್ನು ಕಂಡು ರಾವಣನು ನಾಚಿಕೆಯಿಂದ ತಲೆತಗ್ಗಿಸಿದನು. ತನ್ನ ಸುತ್ತಲೂ ನೆರೆದಿದ್ದ ರಾಕ್ಷಸವೀರರನ್ನು ಕಂಡು ರಾವಣನು “ರಾಕ್ಷಸವೀರರೆ, ನಿರಾಯುಧನಾದ ವಾನರನೊಬ್ಬನು ಲಂಕೆಯನ್ನು ಹೊಕ್ಕು ಅದನ್ನು ಹಾಳುಮಾಡಿದನು; ಸೀತೆಯನ್ನು ನೋಡಿದನು; ರಾಕ್ಷಸವೀರರನ್ನು ಕೊಂದನು; ರಾಜಧಾನಿಯನ್ನು ಸುಟ್ಟನು. ಈಗ ನಾವು ಮಾಡಬೇಕಾದ ಕಾರ್ಯವೇನೆಂದು ತಿಳಿಸಿ. ವಿಜಯಕ್ಕೆ ಮಂತ್ರವೇ ಮೂಲವೆಂದು ಆರ್ಯರು ಹೇಳುತ್ತಾರೆ. ಆದ್ದರಿಂದ ಬುದ್ಧಿವಂತರಾದ ನೀವು ಚೆನ್ನಾಗಿ ಆಲೋಚಿಸಿ ನಾನು ಮಾಡಬೇಕಾದ ಕಾರ್ಯವನ್ನು ತಿಳಿಸಿ. ಸಾವಿರಾರು ಕಪಿಗಳಿಂದ ಕೂಡಿ ಶ್ರೀರಾಮನು ಲಂಕೆಯನ್ನು ಮುತ್ತಲು ಬರುವನು. ತನ್ನ ಪರಾಕ್ರಮದಿಂದ ನೀರನ್ನು ಶೋಷಿಸಿಯೊ ಇಲ್ಲವೆ ಬೇರೊಂದು ಕಾರ್ಯಮಾಡಿಯೊ ಈ ಕಡಲನ್ನು ದಾಟಿ ಬರಬಲ್ಲ ಶಕ್ತಿ ಅವನಿಗುಂಟೆಂಬುದನ್ನು ನಾನು ಬಲ್ಲೆ. ಆ ಸಮಯದಲ್ಲಿ ನಗರವನ್ನೂ ಸೈನ್ಯವನ್ನೂ ರಕ್ಷಿಸುವ ಉಪಾಯವನ್ನು ತಿಳಿಸಿ” ಎಂದನು.

ರಾವಣನ ಮಾತುಗಳನ್ನು ಕೇಳಿ ಬುದ್ಧಿಹೀನರೂ ನೀತಿಬಾಯಿರರೂ ಆದ ರಾಕ್ಷಸವೀರರು ಕೈಮುಗಿದು ನಿಂತು ಈ ರೀತಿ ಹೇಳಿದರು. “ಎಲೈ ರಾಜನೆ, ಆಯುಧ ಸಹಿತವಾಗಿರುವ ದೊಡ್ಡ ಸೈನ್ಯ ನಮ್ಮಲ್ಲಿರುವಾಗ ನಿನಗೇಕೆ ಚಿಂತೆ? ನೀನೇನು ಸಾಮಾನ್ಯನೆ? ಪಾತಾಳವಾಸಿಗಳನ್ನೂ ಕುಬೇರನನ್ನೂ ಗೆದ್ದವನು. ಈಶ್ವರನ ಸ್ನೇಹ ನಿನಗುಂಟು. ಕುಬೇರನ ಪುಷ್ಪಕವಿಮಾನ ನಿನ್ನ ವಶದಲ್ಲಿದೆ. ನಯನೆಂಬ ರಾಕ್ಷಸನು ನಿನ್ನ ಪರಾಕ್ರಮವನ್ನು ಕಂಡು ಹೆದರಿ ತನ್ನ ಮಗಳನ್ನು ನಿನಗೆ ಮದುವೆಮಾಡಿಕೊಟ್ಟನು. ಮಧು ಕಾಲಕೇಯ ಮುಂತಾದ ರಾಕ್ಷಸರು ನಿನ್ನ ಶಕ್ತಿಗೆ ಹೆದರಿ ವಶರಾದರು. ಹೀಗಿರುವಲ್ಲಿ ಶ್ರೀರಾಮನು ಬಲಪರಾಕ್ರಮಗಳಲ್ಲಿ ನಿನಗೆ ಸಮಜೋಡಿಯೆ? ಈ ಇಂದ್ರಜಿತುವೊಬ್ಬನೆ ಆ ಕಪಿಸೈನ್ಯವನ್ನು ನಾಶಗೊಳಿಸಲು ಸಾಕು. ಆದ್ದರಿಂದ ಆ ರಾಮನನ್ನು ಜಯಿಸಲು ಇಂದ್ರಜಿತುವನ್ನು ಕಳುಹಿಸು. ಸಾಮಾನ್ಯ ಮನುಷ್ಯನಿಗಾಗಿ ನೀನು ಇಷ್ಟು ಚಿಂತಿಸುವುದು ಯುಕ್ತವಲ್ಲ. ಶ್ರೀರಾಮನನ್ನು ಸಂಹರಿಸಲು ನೀನು ಸಮರ್ಥನಾಗಿರುವೆ. ”

ಆ ಬಳಿಕ ಪ್ರಹಸ್ತ, ದುರ್ಮುಖ, ವಜ್ರದಂಷ್ಟ್ರ ಮುಂತಾದ ರಾಕ್ಷಸವೀರರು ಉಳಿದ ರಾಕ್ಷಸವೀರರು ನುಡಿದ ಮಾತನ್ನೇ ಪುಷ್ಟೀಕರಿಸಿ ಮಾತನಾಡಿದರು. ಅಷ್ಟೇ ಅಲ್ಲದೆ ರಾಮಲಕ್ಷ್ಮಣರನ್ನು ಸಂಹರಿಸಿ ಬರುವೆನೆಂದು ಆಯುಧಪಾಣಿಗಳಾಗಿ ಪ್ರಯಾಣಕ್ಕೆ ಸಿದ್ಧರಾದರು. ಆಗ ರಾವಣನ ತಮ್ಮನಾದ ವಿಭೀಷಣನು ಆ ರಾಕ್ಷಸ ವೀರರನ್ನು ತಡೆದು. ಅವರನ್ನು ಕೂಡಿಸಿ, ಕೈಮುಗಿದು ನಿಂತು ರಾವಣನಿಗೆ ಈ ರೀತಿ ನುಡಿದನು: “ಅಣ್ಣ, ಚತುರೋಪಾಯಗಳಲ್ಲಿ ಸಾಮ ದಾನ ಭೇದಗಳು ಉಪಯೋಗಕ್ಕೆ ಬಾರದಿದ್ದಲ್ಲಿ ದಂಡಕ್ಕೆ ಕೈಯಿಡಬೇಕೆಂದು ಬಲ್ಲವರು ಹೇಳುತ್ತಾರೆ. ಎಚ್ಚರ ತಪ್ಪಿದವರಲ್ಲಿ, ದೇವಬಲವಿಲ್ಲದಿದ್ದವರಲ್ಲಿ ದಂಡೋಪಾಯ ಸಿದ್ಧಿಸಬಹುದು. ಆದರೆ ಶ್ರೀರಾಮನಲ್ಲಿ ದಂಡೋಪಾಯ ಹೇಗೆ ತಾನೆ ಸಾಧ್ಯ? ಅವನು ಜಿತಕ್ರೋಧ ಮತ್ತು ಶೂರ. ಈ ವಿಸ್ತಾರವಾದ ಸಾಗರವನ್ನು ಹನುಮಂತನು ದಾಟಿದನು. ಹೀಗೆ ಸಮುದ್ರವನ್ನು ಅವನು ದಾಡುವನೆಂದು ಯಾರಾದರೂ ಊಹಿಸಲು ಕೂಡ ಸಾಧ್ಯವಿತ್ತೆ? ಅಲ್ಲದೆ ಶತ್ರುಸೈನ್ಯ ಅಪರಿಮಿತವಾಗಿದೆ. ಈಗ ನಾವು ದುಡುಕಬಾರದು. ನೀನು ರಾಮನ ಹೆಂಡತಿಯನ್ನು ಕದ್ದು ತಂದು ಅವನಿಗೆ ಅಪಕಾರ ಮಾಡಿರುವೆ. ದುಷ್ಟನಾದ ಖರನು ಮೇಲೆ ಬಂದು ಬೀಳಲು ಪ್ರಾಣರಕ್ಷಣೆಗಾಗಿ ಅವನನ್ನು ಶ್ರೀರಾಮನು ಕೊಂದುದು ತಪ್ಪೆ? ಪರಸ್ತ್ರೀಗಮನ ಬಹು ಘೋರವಾದ ಪಾಪ. ಅದರಿಂದ ಆಯುಷ್ಯ ಕ್ಷೀಣಿಸುತ್ತದೆ; ದ್ರವ್ಯನಾಶವಾಗುತ್ತದೆ; ಅಪಕೀರ್ತಿ ಸಂಭವಿಸುತ್ತದೆ. ಸೀತೆಯನ್ನು ನೀನು ಅಪಹರಿಸಿ ತಂದಿರುವುದರಿಂದ ನಮಗೆ ಈ ತೆರನಾದ ಭಯ ಉಂಟಾಗಿದೆ. ಆದ್ದರಿಂದ ಶ್ರೀರಾಮನಲ್ಲಿ ವೈರವನ್ನು ಬಿಟ್ಟು, ಅವನ ಬಾಣಗಳಿಂದ ಜನಧನಸಮೃದ್ಧವಾದ ಈ ನಗರ ನಾಶವಾಗುವುದಕ್ಕೆ ಮುಂಚೆ, ವಾನರರು ಲಂಕೆಯನ್ನು ಮುತ್ತುವುದಕ್ಕೆ ಮುಂಚೆ, ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸಿಬಿಡು. ರಾಕ್ಷಸರು ಬದುಕಬೇಕೆಂದಿದ್ದರೆ, ಈ ನಿನ್ನ ಬಂಧುಗಳು ಬಾಳಬೇಕೆಂದಿದ್ದರೆ, ನನ್ನ ಈ ಹಿತವಾದ ಮಾತನ್ನು ಕೇಳಿ ಅದರಂತೆ ನಡೆ. ನಿನ್ನನ್ನು ಬೇಡಿಕೊಳ್ಳುತ್ತೇನೆ. ಸುಖವನ್ನೂ ಧರ್ಮವನ್ನೂ ನಾಶಗೊಳಿಸುವ ಈ ಕೋಪವನ್ನು ಬಿಡು. ನಿನ್ನ ಕೀರ್ತಿಯನ್ನು ಹೆಚ್ಚಿಸು: ಶ್ರೀರಾಮನಿಗೆ ಸೀತೆಯನ್ನೊಪ್ಪಿಸು. ಬಂಧುಬಾಂಧವರೊಡಗೂಡಿ ಸುಖವಾಗಿ ಬಾಳೋಣ. ” ವಿಭೀಷಣನ ಹಿತನುಡಿ ರಾವಣನಿಗೆ ರುಚಿಸಲಿಲ್ಲ. ಸಭೆಯನ್ನು ವಿಸರ್ಜಿಸಿ ಅಂತಃಪುರಕ್ಕೆ ಹೊರಟುಹೋದನು.

ರಾವಣನ ನಡತೆಯನ್ನು ಕಂಡು ವಿಭೂಷಣನ ಮನಸ್ಸು ಸಮಾಧಾನ ಹೊಂದಲಿಲ್ಲ. ಅಣ್ಣನಿಗೆ ನೀತಿ ಹೇಳುವುದು ಭಯಂಕರವಾದ ಕೆಲಸವೆಂದು ಅವನಿಗೆ ತಿಳಿದಿತ್ತು. ಆದರೂ ಹೆದರದೆ ಮರುದಿನ ಪ್ರಾತಃಕಾಲದಲ್ಲಿ ವಿದ್ವಾಂಸರಿಂದಲೂ ಬುದ್ಧಿವಂತರಾದ ಮಂತ್ರಿಗಳಿಂದಲೂ ಸ್ವಾಮಿಭಕ್ತರಾದ ರಾಕ್ಷಸರಿಂದಲೂ ನಿಬಿಡವಾಗಿ ದೇವತೆಗಳ ಮನೆಯಂತೆ ಸಂಪತ್‌ಸಮೃದ್ಧವಾದ ತನ್ನ ಅಣ್ಣನ ಮನೆಗೆ ವಿಭೀಷಣನು ಬಂದನು. ಅಲ್ಲಿ ವೇದವಿದರಾದ ಬ್ರಾಹ್ಮಣರು ರಾವಣನ ವಿಜಯಕ್ಕಾಗಿ ಮಂತ್ರಗಳನ್ನು ಪಠಿಸುತ್ತಿದ್ದರು. ಅವರ ಮುಂದೆ ಹಾಲು ತುಪ್ಪ ಮೊಸರು ಅಕ್ಷತೆ ಮುಂತಾದ ಪೂಜಾ ಸಾಮಗ್ರಿಗಳಿದ್ದುವು. ಅವರ ನಡುವೆ ತನ್ನ ತೇಜಸ್ಸಿನಿಂದಲೇ ಹೊಳೆಯುತ್ತ ಸಿಂಹಾಸನಾರೂಢನಾಗಿದ್ದ ಕುಬೇರನ ತಮ್ಮನಾದ ರಾವಣನನ್ನು ಕಂಡು ನಮಸ್ಕರಿಸಿದನು. ಆ ಬಳಿಕ ಪೀಠದಲ್ಲಿ ಕುಳಿತುಕೊಂಡು ಮಂತ್ರಿಗಳ ಎದುರಿನಲ್ಲಿ ಮಹಾತ್ಮನಾದ ವಿಭೀಷಣನು ರಾವಣನಿಗೆ ಹಿತಕರವಾದ ಈ ಮಾತುಗಳನ್ನು ನುಡಿದನು.

“ಅಣ್ಣ, ಸೀತೆಯನ್ನು ನೀನು ಕದ್ದುತಂದ ದಿನದಿಂದಲೂ ಲಂಕೆಯಲ್ಲಿ ಅಪಶಕುನಗಳು ತೋರುತ್ತಿವೆ. ಅಗ್ನಿ ಧೂಮದಿಂದ ಕೂಡಿ ವರ್ಧಿಸುತ್ತಿಲ್ಲ. ಅಡಿಗೆಯ ಮನೆಗಳಲ್ಲಿ ಅಗ್ನಿಹೋತ್ರಗೃಹಗಳಲ್ಲಿ ವೇದಘೋಷ ಸ್ಥಳಗಳಲ್ಲಿ ಸರ್ಪಗಳು ಕಾಣಿಸಿಕೊಳ್ಳುತ್ತಿವೆ. ಹಸುಗಳು ಚೆನ್ನಾಗಿ ಹಾಲು ಕೊಡುತ್ತಿಲ್ಲ. ಮದ್ದಾನೆಗಳು ಕುದುರೆಗಳು ದೀನವಾಗಿ ಕೂಗುತ್ತ ಹುಲ್ಲು ನೀರುಗಳನ್ನು ತೆಗೆದುಕೊಳ್ಳದಿವೆ. ಕತ್ತೆಗಳೂ ಒಂಟೆಗಳೂ ಕಣ್ಣೀರು ಬಿಡುತ್ತಿವೆ. ಬೈಗು ಬೆಳಗುಗಳಲ್ಲಿ ಪಟ್ಟಣಕ್ಕೆ ಸಮೀಪದಲ್ಲಿಯೇ ನರಿಗಳು ಅಮಂಗಳಕರವಾಗಿ ಊಳುತ್ತವೆ. ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸುವುದೆ ಇದಕ್ಕೆ ಪ್ರಾಯಶ್ಚಿತ್ತ. ನಾನು ಬದುಕಬೇಕೆಂಬ ಆಶೆಯಿಂದ ಈ ಮಾತನ್ನು ಹೇಳುತ್ತಿಲ್ಲ. ನಿನಗೂ ಮತ್ತು ಪಟ್ಟಣಿಗರಿಗೂ ಹಿತಕರವಾಗಿರುವ ಈ ಮಾತನ್ನು ಹೇಳಲು ನಿನ್ನ ಮಂತ್ರಿಗಳು ಹಿಂದೆಗೆಯುತ್ತಿದ್ದಾರೆ. ನನಗೆ ಕಂಡದ್ದನ್ನೂ ಕೇಳಿದ್ದನ್ನೂ ನಾನು ನಿನಗೆ ತಿಳಿಸಿದ್ದೇನೆ. ನ್ಯಾಯವಾದುದನ್ನು ಕುರಿತು ಯೋಚಿಸಿ ಅದರಂತೆ ನಡೆ. ”

ವಿಭೀಷಣನ ಮಾತು ರಾವಣನಿಗೆ ಹಿತವೆನಿಸಲಿಲ್ಲ. ಹಟವಾದಿಯಾದ ಅವನು ಕೋಪದಿಂದ “ನನಗೆ ಯಾರ ದೆಸೆಯಿಂದಲೂ ಭಯವಿಲ್ಲ. ರಾಮನು ಸೀತೆಯನ್ನು ಮತ್ತೆ ಹೊಂದಲಾರನು. ದೇವತೆಗಳಿಂದ ಕೂಡಿದ ಇಂದ್ರನೊಡನೆ ಬಂದರೂ ರಾಮನು ಯುದ್ಧದಲ್ಲಿ ನನ್ನನ್ನು ಗೆಲ್ಲಲಾರನು” ಎಂದು ಹೇಳಿ ಚಂಡವಿಕ್ರಮಿಯಾದ ರಾವಣನು ಹಿತವಚನವನ್ನು ಹೇಳಿದ ವಿಭೀಷಣನನ್ನು ಕಳುಹಿಸಿಕೊಟ್ಟು ಸಭಾಭವನಕ್ಕೆಂದು ಹೊರಟನು.

ರಾವಣನ ಸ್ವರ್ಣಖಚಿತವಾದ ರಥಕ್ಕೆ ಉತ್ತಮವಾದ ಕುದುರೆಗಳನ್ನು ಕಟ್ಟಲಾಗಿತ್ತು. ಇಂಥ ರಥವನ್ನು ರಾವಣನು ಹತ್ತಿ ಹೊರಡಲು ಖಡ್ಗಧಾರಿಗಳಾದ ರಾಕ್ಷಸರು. ಆ ರಥದ ಸುತ್ತಲೂ ನೆರೆದು ಹೊರಟರು. ರಥದ ಹಿಂದೆ ಆನೆ ಕುದುರೆಗಳೂ ರಥಗಳೂ ಅನುಸರಿಸಿ ಹೊರಟವು. ಶಂಖ ದುಂದುಭಿಗಳ ಘೋಷ ಆಕಾಶವನ್ನೆಲ್ಲ ಆವರಿಸಿತು. ರಾವಣನಿಗೆ ಹಿಡಿದಿದ್ದ ಬೆಳ್ಗೊಡೆ ಪೂರ್ಣಚಂದ್ರಮಂಡಲದಂತೆ ಹೊಳೆಯುತ್ತಿತ್ತು. ಬಂಗಾರದ ಹಿಡಿಯುಳ್ಳ ಸ್ಪಟಿಕದಂತೆ ನಿರ್ಮಲವಾದ ಚಾಮರಗಳು ಅವನ ಎಡಬಲದಲ್ಲಿ ಹೊಳೆಯುತ್ತಿದ್ದುವು. ನೆಲದ ಮೇಲೆ ನಿಂತಿದ್ದ ರಾಕ್ಷಸರೆಲ್ಲರೂ ಅಂಜಲಿಬದ್ಧರಾಗಿ ತಲೆಬಾಗಿ ರಾವಣನಿಗೆ ವಂದಿಸಿದರು. ಹೀಗೆ ವೈಭವದಿಂದ ಯುಕ್ತನಾದ ರಾವಣನು ವಿಶ್ವಕರ್ಮನಿರ್ಮಿತವಾದ ಆ ಸಭೆಯನ್ನು ಹೊಕ್ಕು ಸಿಂಹಾಸನದಲ್ಲಿ ಕುಳಿತನು. ಆಗ ರಾವಣನ ಅಪ್ಪಣೆಯಂತೆ ಮುಖ್ಯವಾದ ಪೌರರು, ಅಮಾತ್ಯರು, ವಿಭೀಷಣ, ಕುಂಭಕರ್ಣ, ಇಂದ್ರಜಿತು ಮೊದಲಾದ ಬಂಧುಬಾಂಧವರೂ ಸಭೆಗೆ ಬಂದು ರಾವಣನಿಗೆ ನಮಸ್ಕರಿಸಿ ಉಚಿತವಾದ ಆಸನಗಳಲ್ಲಿ ಕುಳಿತುಕೊಂಡರು. ಸ್ವಲ್ಪವೂ ಸದ್ದು ಮಾಡದೆ ಆ ರಾಕ್ಷಸವೀರರು ರಾವಣನ ಮುಖವನ್ನೇ ನೋಡುತ್ತಿದ್ದರು.

ದೇವತೆಗಳ ನಡುವೆ ಶೋಭಿಸುವ ದೇವೇಂದ್ರನಂತೆ ರಾಕ್ಷಸರ ನಡುವೆ ರಾವಣನು ಪ್ರಹಸ್ತನ ಮೂಲಕ ನಗರ ರಕ್ಷಣೆಗೆ ತಕ್ಕ ಏರ್ಪಾಡುಗಳನ್ನು ಮಾಡಿ, ಆ ಬಳಿಕ ಸಭೆಯವರನ್ನು ಕುರಿತು ಈ ರೀತಿ ನುಡಿದನು – “ಸಭಾಸದರೆ, ನಿಮ್ಮ ಮಂತ್ರಬಲದಿಂದ ಇದುವರೆಗೆ ನಾನು ಯತ್ನಿಸಿದ ಕಾರ್ಯವೊಂದೂ ನಿಷ್ಫಲವಾಗಿಲ್ಲ. ನಿಮ್ಮ ಬಲದಿಂದ ನನಗೆ ಅತುಳವಾದ ಸಂಪತ್ತು ಕೈಸೇರಿದೆ. ನಿದ್ರೆಯಲ್ಲಿಯೆ ಮುಳುಗಿಹೋಗಿರುವ ಬಲಶಾಲಿಯಾದ ಕುಂಭಕರ್ಣನಿಗೆ ನಾನು ಈ ವಿಷಯವನ್ನು ತಿಳಿಸಲಾಗಲಿಲ್ಲ. ದಂಡಕಾರಣ್ಯದಿಂದ ಬಂದ ದಿನದಿಂದಲೂ ಸೀತೆ ನನ್ನ ಹಾಸಿಗೆಯನ್ನೇರಲು ಸಮ್ಮತಿಸಲಿಲ್ಲ. ಪರಮಸುಂದರಿಯಾದ ಆಕೆಯನ್ನು ಬಿಟ್ಟರೆ ಬೇರೊಬ್ಬರಲ್ಲಿ ನನ್ನ ಮನಸ್ಸೇ ಹೋಗುತ್ತಿಲ್ಲ. ರಾಮನನ್ನೇ ನೆನೆಯುತ್ತಿದ್ದರೂ ನನ್ನನ್ನು ಸೇರಲು ಒಂದು ವರ್ಷ ಅವಧಿ ಕೇಳಿದ್ದಾಳೆ. ದಾರಿನಡೆದ ಕುದುರೆಗಳಂತೆ ಮನ್ಮಥ ಬಾಧೆಯಿಂದ ನಾನು ಬಳಲಿಹೋಗಿದ್ದೇನೆ. ಹಿಂದೆ ಬ್ರಹ್ಮನ ಬಳಿಗೆ ಹೋಗುತ್ತಿದ್ದ ಪುಂಜಿಕಸ್ಥಲೆಯೆಂಬ ಅಪ್ಸರೆಯನ್ನು ನಾನು ಬಲತ್ಕಾರದಿಂದ ಭೋಗಿಸಿದ ಕಾರಣ ‘ಈ ದಿನ ಮೊದಲ್ಗೊಂಡು ಪರಸ್ತ್ರೀಯನ್ನು ನೀನು ಬಲಾತ್ಕಾರವಾಗಿ ಭೋಗಿಸಿದರೆ ನಿನ್ನ ತಲೆ ನೂರು ಹೋಳಾಗಲಿ’ ಎಂದು ಶಪಿಸಿರುವ ಕಾರಣ, ಸೀತೆಯನ್ನು ಬಲಾತ್ಕರಿಸದನಾದ್ದೇನೆ. ಈಗ ನೀವು ರಾಮಲಕ್ಷ್ಮಣರನ್ನು ವಧಿಸುವುದಕ್ಕೂ ಸೀತೆಯನ್ನು ಒಪ್ಪಿಸುವುದಕ್ಕೂ ಉಪಾಯವನ್ನು ತಿಳಿಸಿ. ಸೀತೆಯನ್ನು ರಾಮನಿಗೆ ಒಪ್ಪಿಸಬೇಕೆ, ಇಲ್ಲವೆ ಯುದ್ಧ ಮಾಡಬೇಕೆ?”

ಕಾಮದಿಂದ ಕುರುಡನಾದ ರಾವಣನ ಅಪಲಾಪವನ್ನು ಕೇಳಿ ಕುಂಭಕರ್ಣನು ಕೋಪಗೊಂಡನು. “ಅಣ್ಣ, ರಾಮಲಕ್ಷ್ಮಣರಿಂದ ಕೂಡಿದ ಸೀತೆಯನ್ನು ಬಲಾತ್ಕಾರದಿಂದ ಕದ್ದು ತರುವುದಕ್ಕಿಂತ ಒಮ್ಮೆ ಆಲೋಚನೆ ಮಾಡಿದ್ದರೆ ನದಿ ಬೆಟ್ಟವನ್ನು ಕೊರೆಯುವಂತೆ ಚಿಂತೆ ನಿನ್ನ ಮನಸ್ಸನ್ನು ಕೊರೆಯುತ್ತಿರಲಿಲ್ಲ. ನ್ಯಾಯವಾದ ರೀತಿಯಲ್ಲಿ ರಾಜಕಾರ್ಯಗಳನ್ನು ನಡಸುವವನು ಸಂಕಟಪಡುವುದಿಲ್ಲ. ಅವಿಚಾರದಿಂದ ಸೀತಾಪಹರಣ ಕಾರ್ಯವನ್ನು ನೀನು ಮಾಡಿದೆ. ಅದೃಷ್ಟವಶದಿಂದ ಶ್ರೀರಾಮನು ನಿನ್ನನ್ನು ಹೊಡೆದು ಹಾಕದೆ ಹೋದನು. ಈಗ ಅದುದಾಯಿತು. ನಿನ್ನ ಶತ್ರುವಾದ ರಾಮನನ್ನು ಕೊಂದು ಅವನ ರಕ್ತವನ್ನು ಕುಡಿಯುತ್ತೇನೆ. ಲಕ್ಷ್ಮಣನನ್ನು ಕೊಂದು ಉಳಿದ ವಾನರರನ್ನು ತಿಂದುಬಿಡುತ್ತೇನೆ. ಆ ಬಳಿಕ ನೀನು ಸೀತೆಯನ್ನು ಸ್ವಾಧೀನಪಡಿಸಿಕೊಂಡು, ಅವಳೊಡನೆ ಸುಖವನ್ನು ಅನುಭವಿಸು” ಎಂದನು.

ಕುಂಭಕರ್ಣನ ಮಾತುಗಳನ್ನು ಕೇಳಿ ವಿಭೀಷಣನು ರಾವಣನಿಗೆ ಹಿತಕರವಾದ ಮಾತುಗಳನ್ನು ಮತ್ತೆ ನುಡಿದನು. “ಅಣ್ಣ, ಮೊನಚಾದ ಉಗುರುಗಳನ್ನೂ ಕೋರೆದಾಡೆಗಳನ್ನೂ ಉಳ್ಳ ಕಪಿಸೈನ್ಯ ಲಂಕೆಯನ್ನು ಮುತ್ತುವುದರೊಳಗಾಗಿ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸಿಬಿಡು. ವಜ್ರಾಯುಧಕ್ಕೆ ಸಮಾನವಾದ ವಾಯುವೇಗವುಳ್ಳ ರಾಮಬಾಣಗಳು ರಾಕ್ಷಸ ಶ್ರೇಷ್ಠರನ್ನು ಕೊಲ್ಲುವುದರೊಳಗಾಗಿ ಸೀತೆಯನ್ನು ಆತನಿಗೆ ಒಪ್ಪಿಸು. ಕುಂಭಕರ್ಣನಾಗಲಿ ಇಂದ್ರಜಿತುವಾಗಲಿ, ಇತರ ರಾಕ್ಷಸ ವೀರರಾಗಲಿ ಯುದ್ಧದಲ್ಲಿ ಶ್ರೀರಾಮನ ಮುಂದೆ ನಿಲ್ಲಲು ಸಮರ್ಥರಲ್ಲ. ರಾಜನು ಒಂದು ವೇಳೆ ಅಧರ್ಮದಲ್ಲಿ ಕಾಲಿಟ್ಟರೆ, ಸ್ನೇಹಿತರು ಅವನನ್ನು ರಕ್ಷಿಸಬೇಕು. ಆದ್ದರಿಂದ ಶ್ರೀರಾಮನಿಗೆ ಅವನ ಹೆಂಡತಿಯಾದ ಸೀತೆಯನ್ನು ಒಪ್ಪಿಸಿಬಿಡೋಣ. ”

ಬುದ್ಧಿಯಲ್ಲಿ ಬೃಹಸ್ಪತಿಗೆ ಸಮಾನವಾದ ವಿಭೀಷಣನ ಮಾತನ್ನು ಕೇಳಿ ತೇಜಸ್ವಿಯಾದ ಇಂದ್ರಜಿತು ತಂದೆಯನ್ನು ಕುರಿತು “ಆರ್ಯ, ನಿನಗೆ ತಮ್ಮನಾದ ವಿಭೀಷಣನು ರಾಮನಿಗೆ ಹೆದರಿ ಅಯುಕ್ತವಾದ ಮಾತನ್ನಾಡಿದನು. ಪೌಲಸ್ತ್ಯವಂಶದಲ್ಲಿ ಹುಟ್ಟಿದ ಯಾವನೂ ಇಂತಹ ಮಾತುಗಳನ್ನಾಡನು. ರಾಕ್ಷಸರಾದ ನಮಗೆ ರಾಜಪುತ್ರರಾದ ರಾಮಲಕ್ಷ್ಮಣರು ಎಷ್ಟು ಮಾತ್ರದವರು? ಹಿಂದೆ ನಾನು ಐರಾವತದಿಂದೊಡಗೂಡಿದ ಇಂದ್ರನನ್ನೇ ನೆಲಕ್ಕುರುಳಿಸಿದೆ. ದೇವತೆಗಳನ್ನು ಹೆದರಿಸಿದೆ. ಹೀಗಿರುವಲ್ಲಿ ಸಾಮಾನ್ಯರಾದ ಇಬ್ಬರು ಮನುಷ್ಯರಿಗಾಗಿ ನಾವೇಕೆ ಹೆದರಬೇಕು?” ಎಂದನು.

ಕೊನೆಯಬಾರಿ ಶೂರನಾದ ವಿಭೀಷಣನು ಇಂದ್ರಜಿತ್ತನ್ನು ಕುರಿತು “ವತ್ಸ, ರಾಜಕಾರ್ಯದಲ್ಲಿ ನಿನ್ನ ಬುದ್ಧಿ ಇನ್ನೂ ಪಕ್ವವಾಗಿಲ್ಲ; ನೀನಿನ್ನೂ ಹುಡುಗ. ಆದ್ದರಿಂದ ಅಪ್ರಯೋಜಕವಾದ ಮಾತು ನಿನ್ನ ಬಾಯಿಂದ ಹೊರಟಿತು. ರಾವಣನಿಗೆ ಮಿತ್ರನಂತೆ ತೋರುವ ನೀನು ಶತ್ರುವಾಗಿರುವೆ. ಶ್ರೀರಾಮನಿಂದಾಗುವ ಕೇಡನ್ನು ಅರಿತೂ ಯುದ್ಧವನ್ನು ಬಯಸುವ ನೀನು ವಧಾರ್ಹ. ನೀನೇ ಪಂಡಿತನೆಂದು ತಿಳಿದು ಮಾತನಾಡುತ್ತಿರುವೆ, ಕಲ ಪಾಶಕ್ಕೆ ಸಮಾನವಾದ ರಾಮಬಾಣಗಳನ್ನು ಸಹಿಸುವುದು ಹೇಗೆ ತಾನೆ ಸಾಧ್ಯ?” ಎಂದು ನುಡಿದು, ರಾವಣನ ಕಡೆಗೆ ತಿರುಗಿ ಈ ರೀತಿ ನುಡಿದನು: “ಅಣ್ಣ, ರತ್ನಾಭರಣವಸ್ತ್ರಾದಿಗಳ ಕಾಣಿಕೆಯೊಡನೆ ಸೀತೆಯನ್ನು ಕೊಂಡೊಯ್ದು ಶ್ರೀರಾಮನಿಗೆ ಒಪ್ಪಿಸು. ಆಗ ನಾವು ಶೋಕವನ್ನು ಬಿಟ್ಟು ಸುಖದಿಂದ ಇರಬಹುದು.”

ವಿಧಿಯಿಂದ ಪ್ರೇರಿತನಾದ ರಾವಣನಿಗೆ ವಿಭೀಷಣನು ನುಡಿದ ಹಿತವಚನಗಳು ರುಚಿಸಲಿಲ್ಲ. ಕೋಪಗೊಂಡ ರಾವಣನು ತಮ್ಮನನ್ನು ಕುರಿತು ಈ ರೀತಿ ಕ್ರೂರವಾದ ಮಾತುಗಳನ್ನಾಡಿದನು: “ವಿಭೀಷಣ, ಶತ್ರುವಿನೊಡನೆ, ಇಲ್ಲವೆ ಕೆರಳಿದ ಕ್ರೂರಸರ್ಪದೊಡನೆ ವಾಸಮಾಡಬಹುದು. ಆದರೆ ಶತ್ರುಪಕ್ಷಪಾತಿಯಾದ ಮಿತ್ರನೊಡನೆ ವಾಸಮಾಡಕೂಡದು. ಲೋಕದಲ್ಲಿ ದಾಯಾದಿಗಳ ಸ್ವಭಾವವೇ ಹೀಗೆ. ತಮ್ಮ ದಾಯಾದಿಗಳಿಗೆ ವ್ಯಸನ ಬಂದಾಗ ಇವರು ಸಂತೋಷಪಡುತ್ತಾರೆ. ಸ್ವಜಾತಿಯಲ್ಲಿರುವ ಶೂರನನ್ನು ಕಂಡರೆ ಅವರಿಗೆ ತಿರಸ್ಕಾರ. ಆದ್ದರಿಂದ ಅವರ ವಿಷಯದಲ್ಲಿ ಭಯಪಡಬೇಕಾದುದು ಸಹಜವಾದುದೆ. ನನ್ನ ಏಳ್ಗೆ, ಐಶ್ವರ್ಯ, ಭೋಗ ಈ ಯಾವೊಂದನ್ನೂ ನೋಡಿ ನೀನು ಸಹಿಸುವುದಿಲ್ಲವೆಂದು ತೋರುತ್ತದೆ. ಎಲಾ ನೀಚ, ನೀನು ನುಡಿದಂತೆ ಬೇರೊಬ್ಬನು ನುಡಿದಿದ್ದರೆ ಅವನು ಭೂಮಿಯಮೇಲೆ ಇರುತ್ತಲೆ ಇರಲಿಲ್ಲ. ನೀನು ನನ್ನ ಸಹೋದರನಾದುದರಿಂದ ನಿನ್ನನ್ನು ಮನ್ನಿಸಿದ್ದೇನೆ. ಕುಲಗೇಡಿಯಾದ ನೀನು ನನ್ನೆದುರಿಗೆ ನಿಲ್ಲಬೇಡ ತೊಲಗು.”

ಅಣ್ಣನ ಕ್ರೂರವಾದ ಈ ಮಾತುಗಳನ್ನು ಕೇಳಿ ನ್ಯಾಯವಾದಿಯಾದ ವಿಭೀಷಣನು ಗದಾಪಾಣಿಯಾಗಿ ತನ್ನ ನಾಲ್ವರು ಮಂತ್ರಿಗಳೊಡನೆ ಆಕಾಶಕ್ಕೆ ನೆಗೆದುಬಿಟ್ಟನು. “ರಾಜನೆ, ನೀನು ನನ್ನ ಹಿರಿಯಣ್ಣ, ತಂದೆಗೆ ಸಮಾನ, ಹಾಗೂ ಪೂಜ್ಯ. ನೀನಾಡಿದ ಕ್ರೂರವಾದ ಮಾತು ನನಗೆ ಸಲ್ಲವು. ವಿಧಿಯಿಂದ ಪ್ರೇರಿತನಾದ ನೀನು ನನ್ನ ಹಿತವಾಕ್ಯಗಳನ್ನು ಗಮನಿಸುತ್ತಿಲ್ಲ. ಇವರೆಲ್ಲ ಈಗ ಪ್ರಿಯವಾದ ಮಾತುಗಳನ್ನು ನುಡಿಯುತ್ತಿದ್ದಾರೆ. ಶ್ರೀರಾಮನು ತನ್ನ ಕ್ರೂರವಾದ ಬಾಣಗಳಿಂದ ನಿನ್ನನ್ನು ಕೊಲ್ಲುವುದನ್ನು ನೋಡಲಾರೆ. ಅಣ್ಣನೆಂಬ ಗೌರವದಿಂದ ನಿನಗೆ ಹಿತವಚನವನ್ನು ನುಡಿದೆ. ನಿನಗೆ ಮಂಗಳವಾಗಲಿ. ವಾನರರಿಂದ ರಾಮಲಕ್ಷ್ಮಣರಿಂದ ನಿನ್ನನ್ನೂ ನಿನ್ನ ಬಂಧುಗಳನ್ನೂ ನಿನ್ನ ನಗರಿಯನ್ನೂ ರಕ್ಷಿಸಿಕೊ. ಇಗೋ ನಾನು ಹೊರಡುತ್ತೇನೆ. ಮೃತ್ಯುಮುಖರಾದವರು ಮಿತ್ರರ ಹಿತವಚನವನ್ನು ಕೇಳರು.” ಹೀಗೆಂದು ನುಡಿದು ಮಂತ್ರಿಗಳೊಡನೆ ರಾಮಲಕ್ಷ್ಮಣರಿರುವಲ್ಲಿಗೆ ಬಂದುಬಿಟ್ಟನು.