ಶಬರಿ ದಿವ್ಯವಾದ ವಿಮಾನದಲ್ಲಿ ಕುಳಿತು ಸ್ವರ್ಗಕ್ಕೆ ಹೋದಮೇಲೆ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಸುಗ್ರೀವನೆಂಬ ಕಪಿಶ್ರೇಷ್ಠನಿದ್ದ ಋಷ್ಯಮೂಕಪರ್ವತದ ಸಮೀಪಕ್ಕೆ ಬಂದರು. ಆ ಪರ್ವತದ ಸಮೀಪದಲ್ಲಿಯೆ ತಾವರೆಗಳಿಂದಲೂ ಕನ್ನೈದಿಲೆಗಳಿಂದಲೂ ಮೀನುಗಳಿಂದಲೂ ಕೂಡಿ ಶೋಭಿಸುತ್ತಿದ್ದ ಪಂಪಾಸರೋವರವನ್ನು ಆ ಅಣ್ಣತಮ್ಮಂದಿರು ನೋಡಿದರು. ನಿರ್ಮಲವಾದ ಆ ಸರೋವರವನ್ನು ನೋಡಿದೊಡನೆಯೆ ರಾಮನ ಮನಸ್ಸು ಸೀತೆಯನ್ನು ನೆನೆದು ಚಂಚಲವಾಯಿತು. ಲಕ್ಷ್ಮಣವನ್ನು ಕುರಿತು ರಾಮನು “ವತ್ಸ, ಲಕ್ಷ್ಮಣ ಈ ಸರೋವರದ ನೀರು ವೈಢೂರ್ಯದ ಮಣಿಯಂತೆ ನಿರ್ಮಲವಾಗಿದೆ. ಈ ಸರೋವರದ ಸುತ್ತಲೂ ಇರುವ ಕಾಡು ರಮಣೀಯವಾಗಿದೆ. ಈ ಕಾಡಿನಲ್ಲಿರುವ ಮರಗಳಾದರೊ ಎತ್ತರವಾದ ಶಿಖರಗಳಿಂದ ಒಪ್ಪುವ ಪರ್ವತಗಳಂತೆ ಶೋಭಿಸುತ್ತಿವೆ. ಈಗ ತಾನೆ ಮೂಡಿಬಂದಿರುವ ವಸಂತಕಾಲವೋ ಭರತನ ಮತ್ತು ಸೀತೆಯ ದುಃಖದಿಂದ ಪೀಡಿತನಾದ ನನ್ನನ್ನು ಇನ್ನಷ್ಟು ಪೀಡಿಸುವುದಕ್ಕಾಗಿಯೆ ಬಂದಂತಿದೆ. ಈ ಸರೋವರದ ಮೇಲೆ ಬೀಸುತ್ತಿರುವ ತಂಗಾಳಿಯಿಂದ ನನ್ನ ಮನಸ್ಸೆಲ್ಲವೂ ಸೀತೆಯನ್ನು ನೆನೆದು ವಿಕಾರಗೊಂಡಿದೆ. ಇಲ್ಲಿಯ ಮರಗಳೆಲ್ಲವೂ ಗಾಳಿಯ ಉಯ್ಯಾಲೆಗೆ ಸಿಲುಕಿ, ಶಿಲಾತಲಗಳ ಮೇಲೆ ಹೂವನ್ನು ಎರಚಿವೆ. ದುಂಬಿಗಳು ಜೇನುಂಡು ಮದಿಸಿಹೋಗಿ ಹೂವುಗಳಲ್ಲಿ ಮೊರೆಯುತ್ತಿವೆ. ಸೀತೆಯ ವಿರಹದಿಂದ ನನಗೆ ಇಲ್ಲಿರುವ ನಾನಾವಿಧವಾದ ಪಕ್ಷಿಗಳ ಧ್ವನಿ ದುಃಖವನ್ನುಂಟುಮಾಡುತ್ತಿದೆ. ಹರ್ಷಗೊಂಡ ಕೋಗಿಲೆ ದುಃಖಿತನಾದ ನನ್ನನ್ನು ಮೂದಲಿಸಿ ಕರೆಯುವಂತಿದೆ. ಈ ಕಾಡಿನ ಝರಿಗಳಲ್ಲಿ ಹರ್ಷದಿಂದ ನಲಿಯುತ್ತ ಕೂಗುತ್ತಿರುವ ಕಾಡುಕೋಳಿ ನನ್ನ ದುಃಖವನ್ನು ಹೆಚ್ಚಿಸುತ್ತಿದೆ. ಹಿಂದೆ ಕಾಡುಕೋಳಿಯ ಧ್ವನಿಯನ್ನು ಕೇಳಿ ಹರ್ಷಗೊಂಡ ಸೀತೆ ನನ್ನನ್ನು ಕರೆದು ಸಂತೋಷಗೊಂಡುದು ಈಗ ನೆನಪಾಗುತ್ತಿದೆ. ಈ ವಿರಹಾಗ್ನಿಯಿಂದ ನಾನು ಬಹುಬೇಗ ಸುಟ್ಟುಹೋಗುವಂತೆ ತೋರುತ್ತದೆ. ಗಾಳಿ ವೇಗವಾಗಿ ಬೀಸುವುದರಿಂದ ಸ್ಫಟಿಕಮಣಿಗಳಿಂದ ಮಾಡಿದ ಕಿಟಕಿಗಳಂತಿರುವ ತಮ್ಮ ಗರಿಗೆದರಿ, ಹೆಣ್ಣು ನವಿಲುಗಳಿಂದ ಸುತ್ತುವರಿದು ಕುಣಿಯುತ್ತಿರುವ ಈ ಗಂಡು ನವಿಲುಗಳನ್ನು ನನ್ನ ಕಾಮವನ್ನು ಹೆಚ್ಚಿಸುತ್ತಿವೆ. ಹೆಣ್ಣು ನವಿಲಿನ ಒಡನಾಟದಲ್ಲಿರುವ ಈ ಗಂಡು ನವಿಲಿನ ಕುಣಿತ ನನ್ನನ್ನು ನೋಡಿ ಹಾಸ್ಯಮಾಡುವಂತಿದೆ. ಅಯ್ಯೋ! ಈ ಹೆಣ್ಣು ನವಿಲು ರಾಕ್ಷಸರಿಂದ ಅಪಹೃತಳಾಗದ ಕಾರಣ ಈ ಗಂಡು ನವಿಲು ಇಷ್ಟು ಸಂತೋಷದಿಂದ ಇರುವುದಲ್ಲವೆ? ಈಗ ಸೀತೆಯಿರುವ ಕಡೆಯೂ ಬಂದಿರುವ ಈ ವಸಂತವನ್ನು ನನ್ನನ್ನು ಆಗಲಿರುವ ಆಕೆ ಹೇಗೆ ಸಹಿಸುತ್ತಾಳೆ? ನನ್ನನ್ನು ಅಗಲಿದ ವಿಶಾಲಾಕ್ಷಿಯೂ ಯುವತಿಯೂ ಆದ ಆಕೆ ನಿಜವಾಗಿಯೂ ಮರಣ ಹೊಂದುವುರದಲ್ಲಿ ಸಂದೇಹವೇ ಇಲ್ಲ. ಈ ಪ್ರದೇಶದಲ್ಲಿ ತಮ್ಮ ನಲ್ಲೆಯರೊಂದಿಗೆ ಸಂಚರಿಸುತ್ತಿರುವ ಕಿನ್ನರರನ್ನು ನೋಡಿದೊಡನೆಯೆ ನನಗೆ ಸೀತೆಯ ನೆನಪಾಗುತ್ತದೆ. ಹಂಸಕಾರಂಡಗಳಿಂದಲೂ ತಾವರೆಗಳಿಂದಲೂ ಈ ಸರೋವರ ಶೋಭಿಸುತ್ತಿದೆ. ಕಮಲಗಳೆಂದರೆ ಸೀತೆಗೆ ತುಂಬ ಆಸೆ. ಈ ಕಮಲಗಳನ್ನು ನೋಡಿ, ಸೀತೆಯಿಲ್ಲದ ನಾನು ಹೇಗೆತಾನೆ ಬದುಕಲಿ? ಸೀತೆ ನನ್ನೊಡನಿದ್ದಾಗ ಪ್ರಿಯವಾದ ವಸ್ತುಗಳು ಈಗ ನನಗೆ ಪ್ರೀತಿಯನ್ನುಂಟುಮಾಡುವಂತಿಲ್ಲ. ಈ ತಾವರೆಯ ದಳಗಳನ್ನು ಕಂಡೊಡನೆಯೆ ನನಗೆ ಸೀತೆಯ ಕಣ್ಣುಗಳು ನೆನಪಾಗುತ್ತವೆ. ತಾವರೆಯಲ್ಲಿರುವ ಧೂಳನ್ನು ಸೋಂಕಿ ಬರುವ ನರುಗಂಪಿನಿಂದ ಕೂಡಿದ ಈ ತಂಗಾಳಿ ನನ್ನ ಪ್ರಿಯೆಯ ನಿಶ್ವಾಸದಂತೆ ಹಿತಕರವಾಗಿದೆ. ಅಲ್ಲದೆ ಈ ಭೂಭಾಗವೆಲ್ಲ ಉದುರಿರುವ ಹೂವುಗಳಿಂದ ಕೂಡಿ, ಮಲಗಲು ಅನುಕೂಲವಾದ ಹಾಸಗೆಯಂತೆ ತೋರುತ್ತಿದೆ. ಈ ಪ್ರದೇಶದಲ್ಲಿ ಸೀತೆ ನನಗೆ ದೊರಕುವುದಾದರೆ, ನನಗೆ ಅಯೋಧ್ಯೆಯೂ ಬೇಡ, ಇಂದ್ರಪದವಿಯೂ ಬೇಡ. ಸುಂದರವಾದ ಈ ಪ್ರದೇಶದಲ್ಲಿ ನಾವಿಬ್ಬರೂ ವಾಸಮಾಡುತ್ತೇವೆ. ಆದರೆ ಈಗ ಸೀತೆಯಿಲ್ಲದೆ ನಾನು ಅಯೋಧ್ಯೆಯನ್ನು ಹೇಗೆ ಹೋಗಲಿ? ಕೌಸಲ್ಯೆ ಬಂದು ‘ನನ್ನ ಸೊಸೆಯಲ್ಲಿ?’ ಎಂದು ನನ್ನನ್ನು ಕೇಳಿದರೆ ತಾಯಿಗೆ ಏನೆಂದು ಉತ್ತರ ಕೊಡಲಿ? ವತ್ಸ, ನೀನೊಬ್ಬನೆ ಅಯೋಧ್ಯೆಗೆ ಹಿಂದಿರುಗಿ ಭರತನೊಂದಿಗೆ ಸುಖವಾಗಿರು. ಸೀತೆಯಿಲ್ಲದೆ ನಾನು ಬದುಕಲಾರೆ” ಎಂದು ದೀನನಂತೆ ಪ್ರಲಾಪಿಸಿದನು.

ಅನಾಥನಂತೆ ಅಳುತ್ತಿರುವ ಅಣ್ಣನನ್ನು ನೋಡಿ, ಅವನನ್ನು ಸಂತೈಸಲು ಲಕ್ಷ್ಮಣನು ಮೃದುವಾದ ಮಾತುಗಳನ್ನಾಡಿದನು: “ಅಣ್ಣ, ಪುರುಷಶ್ರೇಷ್ಠನಾದ ನೀನು ಈ ರೀತಿ ದುಃಖಿಸಬಾರದು. ಧೈರ್ಯವನ್ನು ಹಿಡಿ. ಅದರಿಂದ ಖಂಡಿತವಾಗಿ ಹಿಡಿದ ಕೆಲಸ ಕೈಗೂಡುತ್ತದೆ. ರಾವಣನಿರುವ ತಾಣ ಗೊತ್ತಾದರೆ ಸಾಕು; ಅವನು ಪಾತಾಳದಲ್ಲಿರಲಿ, ಅದಿತಿಯ ಬಸಿರಿನಲ್ಲಿರಲಿ; ಅವನನ್ನು ಕೊಂದು ಸೀತೆಯನ್ನು ತರುತ್ತೇನೆ. ಎಲ್ಲ ಕಾರ್ಯಗಳಿಗೂ ಉತ್ಸಾಹವೆ ಮೂಲ. ಉತ್ಸಾಹಕ್ಕಿಂತಲೂ ಬೇರೊಂದು ಶಕ್ತಿ ಮತ್ತೊಂದಿರುವುದಿಲ್ಲ. ಯಾವ ಕಾರ್ಯದಲ್ಲಿಯೆ ಆಗಲಿ ಉತ್ಸಾಹವನ್ನು ತಳೆದ ಮನುಷ್ಯರು ದುಃಖಿತರಾಗುವುದಿಲ್ಲ. ನಮ್ಮಲ್ಲಿರುವ ಉತ್ಸಾಹದಿಂದಲೇ ನಾವು ಸೀತೆಯನ್ನು ಪಡೆಯುತ್ತೇವೆ. ಕಾಮವನ್ನೂ ಶೋಕವನ್ನೂ ತಡೆಗಟ್ಟಿ. ಮನಸ್ಸನ್ನು ಸ್ಥಿರಪಡಿಸಿಕೊ. ಅಣ್ಣ, ನೀನೇನು ಸಾಮಾನ್ಯನೆ? ಮಹಾ ಧೈರ್ಯಶಾಲಿ. ಇಂದ್ರಿಯಗಳನ್ನು ಗೆದ್ದ ಮಹಾನುಭಾವನಲ್ಲವೆ ನೀನು?”

ಲಕ್ಷ್ಮಣನ ಮಾತುಗಳನ್ನು ಕೇಳಿ ಶ್ರೀರಾಮನು ಶೋಕವನ್ನು ಮೋಹವನ್ನೂ ತೊರೆದನು; ಧೈರ್ಯವನ್ನು ತಂದುಕೊಂಡನು. ಅನಂತರ ಆ ಅಣ್ಣತಮ್ಮಂದಿರಿಬ್ಬರೂ ಕಾಡುಗಳನ್ನೂ ಬೆಟ್ಟಗಳನ್ನೂ ಗುಹೆಗಳನ್ನೂ ದಾಟಿ ಮುಂದೆ ನಡೆದರು. ದುಃಖದಿಂದ ಉದ್ವೇಗಗೊಂಡ ರಾಮನ ಹಿಂದೆ ಲಕ್ಷ್ಮಣನು ಎಚ್ಚರಿಕೆಯಿಂದಲೂ ಭಕ್ತಿಯಿಂದಲೂ ನಡೆಯುತ್ತ ಅಣ್ಣನನ್ನು ಆ ಸ್ಥಿತಿಯಲ್ಲಿ ಕಾಪಿಟ್ಟನು. ಋಷ್ಠಮೂಕಪರ್ವತದ ಪ್ರದೇಶದಲ್ಲಿಯೆ ಆ ವೀರರು ಸುಗ್ರೀವನಿಗಾಗಿ ಸಂಚರಿಸುತ್ತಿದ್ದರು.

ತನ್ನ ಪರಿಚಯವನ್ನೂ, ತಾನು ಬಂದ ಕಾರ್ಯ ಮತ್ತು ಉದ್ದೇಶಗಳನ್ನೂ ಆಂಜನೇಯನು ಸವಿಸ್ತಾರವಾಗಿ ತಿಳಿಸಿದನು.

 

ಕಪಿಶ್ರೇಷ್ಠನಾದ ಸುಗ್ರೀವನು ಅಣ್ಣನ ಭಯದಿಂದ ತನ್ನ ನಾಲ್ವರು ಮಂತ್ರಿಗಳೊಡನೆ ಆ ಋಷ್ಯಮೂಕಪರ್ವತದಲ್ಲಿಯೆ ವಾಸಮಾಡುತ್ತಿದ್ದನು. ಪರ್ವತದ ತಪ್ಪಲಲ್ಲಿಯೆ ತಿರುಗಾಡುತ್ತಿದ್ದ ಶೂರರು ಆಯುಧಪಾಣಿಗಳೂ ಆದ ರಾಮಲಕ್ಷ್ಮಣರನ್ನು ನೋಡಿ ಆತನು ಹೆದರಿದನು. ಯಾವ ಸ್ಥಳದಲ್ಲಿಯೂ ನಿಲ್ಲಲಾರದಷ್ಟರಮಟ್ಟಿಗೆ ಅವನ ಮನಸ್ಸು ಚಂಚಲವಾಯಿತು. ವಾಲಿಗೆ ಪ್ರವೇಶಿಸಲು ಆಗದ ಸ್ಥಳ ಇದು. ಅಂತಹ ಪ್ರದೇಶದಲ್ಲಿ ನಾರುಮುಡಿಯನ್ನುಟ್ಟು ಬಿಲ್ಲುಬಾಣಗಳನ್ನು ಧರಿಸಿದ್ದ ಅವರು ತಿರುಗಾಡುತ್ತಿದ್ದುದನ್ನು ಕಂಡು, ಕಪಟವೇಷವನ್ನು ಧರಿಸಿಬಂದ ವಾಲಿಯ ಗೂಢಚಾರರೆ ಅವರೆಂದು ಆ ಕಪಿವೀರನು ಶಂಕಿಸಿದನು. ಹೆದರಿ ಸುಗ್ರೀವನು ಆ ಬೆಟ್ಟದ ಬೇರೊಂದು ಶಿಖರಕ್ಕೆ ಬಂದನು. ಮತಂಗಾಶ್ರಮದಲ್ಲಿ ಭಯದಿಂದ ಅಡಗಿದ್ದ ಅವನ ಅನುಚರರು, ಹೂಬಿಟ್ಟ ಮರಗಳನ್ನು ಮುರಿಯುತ್ತ, ಜಿಂಕೆ ಹುಲಿ ಮೊದಲಾದ ಮೃಗಗಳನ್ನು ಭಯಗೊಳಿಸುತ್ತ, ಸ್ಥಳದಿಂದ ಸ್ಥಳಕ್ಕೆ ನೆಗೆಯುತ್ತ ಅವನ ಸುತ್ತಲೂ ನೆರೆದು ನಿಂತರು.

ಆಗ ಮಾತನಾಡುವುದರಲ್ಲಿ ನಿಪುಣನಾದ ಹನುಮಂತನು ಹೆದರಿದ್ದ ಸುಗ್ರೀವನನ್ನು ಕುರಿತು “ಎಲೈ ಸೌಮ್ಯನೆ, ವಾಲಿಗಾಗಿ ಏಕೆ ಭಯಪಡುವೆ? ಈ ಋಷ್ಯಮೂಕಪರ್ವತದಲ್ಲಿ ವಾಲಿಯ ಭಯವೆಲ್ಲಿ ಬಂತು? ಚಪಲಚಿತ್ತನಾದ ನಿನ್ನನ್ನು ಶಾಖಾಮೃಗವೆಂದು ಹೇಳುವುದರಲ್ಲಿ ಸೋಜಿಗವೆಲ್ಲಿ ಬಂತು? ರಾಜನು ಬುದ್ಧಿ ಮತ್ತು ಜ್ಞಾನಗಳಿಂದ ಕೂಡಿದವನಾಗಿರಬೇಕು. ಹಾಗಿಲ್ಲದವನು ಪ್ರಜೆಗಳನ್ನು ರಂಜಿಸಲು ಹೇಗೆ ತಾನೆ ಸಾಧ್ಯ?” ಎಂದನು. ಹನುಮಂತನ ಮಾತುಗಳಿಂದ ಧೈರ್ಯಗೊಂಡ ಸುಗ್ರೀವನು ಅವನನ್ನು ಕುರಿತು “ಈ ಪುರುಷಶ್ರೇಷ್ಠರಿಗೆ ಅಗಲವಾದ ಕಣ್ಣುಗಳಿವೆ, ನೀಳವಾದ ತೋಳುಗಳಿವೆ. ಬಿಲ್ಲುಬಾಣಗಳನ್ನು ಧರಿಸಿರುವ ಅವರು ದೇವೇಂದ್ರನಿಗೆ ಸಮಾನರಾಗಿದ್ದಾರೆ. ಅವರನ್ನು ನೋಡಿದರೆ ಯಾರಿಗೆ ತಾನೆ ಭಯವಾಗದು? ಅವರನ್ನು ನಾನು ವಾಲಿಯ ಗೂಢಚಾರರೆಂದೆ ತಿಳಿಯುತ್ತೇನೆ. ಯಾರಿಗೆ ಹಗೆಗಳುಂಟೊ ಅಂಥವರು ತಮ್ಮ ಹಗೆಗಳು ಕಪಟವೇಷಗಳಿಂದ ಸಂಚರಿಸುತ್ತಿರುವರೆಂಬುದನ್ನು ತಿಳಿದಿರಬೇಕು. ಮೇಲಾಗಿ ಆ ವಾಲಿ ಮೇಧಾವಿ; ಹಾಗೂ ದೂರದರ್ಶಿ. ಆದ್ದರಿಂದ ನೀನು ಸಾಮಾನ್ಯನಂತೆ ವೇಷವನ್ನು ಧರಿಸಿ ಆ ವೀರರ ಇಂಗಿತವನ್ನು ತಿಳಿದು ಬಾ. ಅವರನ್ನು ಚೆನ್ನಾಗಿ ಪರಿಶೀಲಿಸಿ ಅವರ ಸ್ವಭಾವವನ್ನು ಅರಿಯಬೇಕು” ಎಂದನು. ಸುಗ್ರೀವನ ಅಪ್ಪಣೆಯಂತೆ ಹನುಮಂತನು ಋಷ್ಯಮೂಕ ಪರ್ವತದಿಂದ ರಾಮಲಕ್ಷ್ಮಣರಿದ್ದ ಸ್ಥಳಕ್ಕೆ ಹಾರಿ, ಕಪಿರೂಪವನ್ನು ಬಿಟ್ಟು ಭಿಕ್ಷುರೂಪವನ್ನು ಧರಿಸಿದನು. ಅನಂತರ ರಾಮಲಕ್ಷ್ಮಣರ ಬಳಿಗೆ ಬಂದು ವಿನಯದಿಂದ ಅವರಿಗೆ ನಮಸ್ಕರಿಸಿ, ಮಾತನಾಡುವುದರಲ್ಲಿ ಚತುರನಾದ ಹನುಮಂತನು ಈ ರೀತಿ ನುಡಿದನು:

“ತಾಪಸವೇಷವನ್ನು ಧರಿಸಿ ರಾಜ ಋಷಿಗಳಂತಿರುವ ನೀವು ಆರು? ಕಾಡಿನಲ್ಲಿ ಸಂಚರಿಸುತ್ತ ನೀವು ಈ ಪ್ರದೇಶಕ್ಕೆ ಏಕೆ ಬಂದಿರಿ? ಹೊಂಬಣ್ಣದ ನಾರುಡೆಗಳನ್ನು ನೀವು ಉಟ್ಟಿರುವಿರಿ; ಆದರೂ ನೀವು ನಿಟ್ಟುಸಿರು ಬಿಡುವುದೇಕೆ? ರೂಪಸಂಪನ್ನರೂ ತೇಜಸ್ವಿಗಳೂ ಆದ ನೀವೇಕೆ ಬಿಲ್ಲುಬಾಣಗಳನ್ನು ಹಿಡಿದು ಕಾಡಿಗೆ ಬಂದಿರುವಿರಿ? ನಿಮ್ಮ ಬರುವಿಕೆಯಿಂದ ಈ ಋಷ್ಯಮೂಕಪರ್ವತ ಕಾಂತಿಯುಕ್ತವಾಯಿತು. ರಾಜ್ಯಭಾರಮಾಡಲು ಯೋಗ್ಯರಾದ ನೀವು ಇಲ್ಲಿಗೆ ಬಂದಿರುವುದು ಯಾರ ಕುತೂಹಲವನ್ನಾದರೂ ಕೆರಳಿಸುತ್ತದೆ. ಭೂಮಿಗೆ ಇಳಿದು ಬಂದ ಸೂರ್ಯ ಚಂದ್ರರಂತಿರುವ ನಿಮಗೆ ಈ ಜಟೆಯೇಕೆ? ನಿಮ್ಮನ್ನು ನೋಡಿದರೆ ಸಕಲ ಲೋಕವನ್ನು ಕಾಪಾಡಲು ಯೋಗ್ಯರಾಗಿರುವಂತೆ ಕಾಣುವಿರಿ. ಅಣ್ಣನಾದ ವಾಲಿಗೆ ಹೆದರಿ ಅವನಿಂದ ವಂಚಿತನಾಗಿರುವ ಅವನ ತಮ್ಮ ಸುಗ್ರೀವನು ನಿಮ್ಮ ಬಳಿಗೆ ನನ್ನನ್ನು ಕಳುಹಿಸಿದ್ದಾನೆ. ವಾಯುಪುತ್ರನಾದ ನಾನು ಧರ್ಮಾತ್ಮನಾದ ಸುಗ್ರೀವನ ಮಂತ್ರಿ. ನನ್ನ ಹೆಸರು ಹನುಮಂತ. ನಿಮ್ಮ ಸ್ನೇಹವನ್ನು ಬಯಸಿ ಆತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದನು. ಕಾಮರೂಪಿಯಾದ ನಾನು ಭಿಕ್ಷುರೂಪವನ್ನು ಧರಿಸಿ ನಿಮ್ಮಲಿಗೆ ಬಂದಿದ್ದೇನೆ” ಎಂದು ಮೊದಲಾಗಿ ತನ್ನ ಪರಿಚಯವನ್ನೂ ತಾನು ಬಂದ ಕಾರ್ಯವನ್ನೂ ತಿಳಿಸಿ ಆಂಜನೇಯನು ಸುಮ್ಮನಾದನು.

ಹನುಮಂತರನ ಮಾತನ್ನು ಕೇಳಿ ರಾಮನ ಮುಖ ಸಂತೋಷದಿಂದ ಅರಳಿತು. ಆಗ ರಾಮನು ಲಕ್ಷ್ಮಣನನ್ನು ನೋಡಿ “ವತ್ಸ, ನಾವು ಯಾವ ಸುಗ್ರೀವನನ್ನು ಹುಡುಕುತ್ತಿದ್ದೆವೊ ಆ ಸುಗ್ರೀವನ ಮಂತ್ರಿಯಾದ ಆಂಜನೇಯನೆ ನಮ್ಮ ಬಳಿಗೆ ಬಂದಿದ್ದಾನೆ. ಮಧುರವೂ ಸ್ನೇಹಪೂರ್ಣವೂ ಆದ ಇವನ ಮಾತುಗಳನ್ನು ಕೇಳಿದರೆ ಈತನು ನಾಲ್ಕು ವೇದಗಳನ್ನೂ ಅಧ್ಯಯನ ಮಾಡಿದಂತೆ ತೋರುತ್ತದೆ. ಇವನ ನುಡಿಯಲ್ಲಿ ಅಪಶಬ್ದ ಬಾರದಿರುವ ಕಾರಣ, ಇವನು ವ್ಯಾಕರಣವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದಾನೆ. ಇಂತಹ ಮಂತ್ರಿಯನ್ನು ಪಡೆದ ಯಾವ ಅರಸನ ಕಾರ್ಯಗಳು ತಾನೆ ನೆರವೇರವು? ಯುಕ್ತವಾದ ಮಾತುಗಳಿಂದ ನಮ್ಮ ವಿಷಯವನ್ನು ಈತನಿಗೆ ತಿಳಿಸು” ಎಂದನು.

ಅನಂತರ ಲಕ್ಷ್ಮಣನು ಹುನುಮಂತನನ್ನು ಕುರಿತು “ಕಪಿಶ್ರೇಷ್ಠ, ವಾನರ ವೀರನಾದ ಸುಗ್ರೀವನ ಗುಣಗಳು ಈ ಮೊದಲೆ ನಮಗೆ ತಿಳಿದು ಬಂದಿದ್ದುವು. ವೀರನಾದ ಆತನನ್ನೆ ನಾವು ಹುಡುಕುತ್ತ ಹೊರಟ್ಟಿದ್ದೆವು. ಸುಗ್ರೀವನ ಸ್ನೇಹ ಬೆಳೆಸಲು ನಮಗೂ ಇಷ್ಟವುಂಟು. ಮಹಾತ್ಮನೂ ಧರ್ಮವತ್ಸಲನೂ ಆದ ದಶರಥನೆಂಬ ಚಕ್ರವರ್ತಿಯಿದ್ದನು. ಬಹು ಯಜ್ಞಗಳನ್ನು ಮಾಡಿ ದೇವತೆಗಳನ್ನು ಆತನು ತೃಪ್ತಿಗೊಳಿಸಿದನು. ಆ ದಶರಥನ ಹಿರಿಯ ಮಗನೆ ಈ ಶ್ರೀರಾಮಚಂದ್ರ. ತಂದೆಯ ಅಪ್ಪಣೆಯನ್ನು ಪಾಲಿಸಲು ರಾಜ್ಯ ತ್ಯಾಗಮಾಡಿ ನನ್ನೊಡನೆ ಈತನು ಕಾಡಿಗೆ ಬಂದಿದ್ದಾನೆ. ಸೂರ್ಯನನ್ನು ಕಾಂತಿ ಅನುಸರಿಸುವಂತೆ, ಇವನ ಹೆಂಡತಿಯಾದ ಸೀತೆ ಈ ಮಹಾತ್ಮನನ್ನು ಅನುಸರಿಸಿ ಬಂದಳು. ಈತನ ದಾಸ ನಾನು. ನನ್ನನ್ನು ಲಕ್ಷ್ಮಣನೆಂದು ಕರೆಯುತ್ತಾರೆ. ಐಶ್ವರ್ಯಹೀನನಾಗಿ, ರಾಜ್ಯಭ್ರಷ್ಟನಾದ ಈತನ ಹೆಂಡತಿಯನ್ನು ರಾಕ್ಷಸರು ಕದ್ದುಕೊಂಡು ಹೋಗಿದ್ದಾರೆ. ಎಷ್ಟು ಹುಡುಕಿದರೂ ಆ ರಾಕ್ಷಸನಾರೆಂಬುದು ಇದುವರೆಗೂ ನಮಗೆ ತಿಳಿದುಬರಲಿಲ್ಲ. ಸೀತೆಯನ್ನು ಹುಡುಕಿಸುವ ಕಾರ್ಯಕ್ಕೆ ಸುಗ್ರೀವನೇ ತಕ್ಕವನೆಂದು ಕಬಂಧನು ನುಡಿಯಲು, ಆ ಕಪಿವೀರನನ್ನು ಹುಡುಕುತ್ತ ಇಲ್ಲಿಗೆ ಬಂದಿದ್ದೇವೆ. ಲೋಕದ ಜೀವಿಗಳೆಲ್ಲರಿಗೂ ಆಶ್ರಯನಾದ ಶ್ರೀರಾಮನು ಸುಗ್ರೀವನ ರಕ್ಷಣೆಯನ್ನು ಬಯಸಿ ಬಂದಿದ್ದಾನೆ!” ಎಂದನು. ಲಕ್ಷ್ಮಣನ ಮಾತಿನಿಂದ, ಸುಗ್ರೀವನ ಕಾರ್ಯ ಸಿದ್ಧಿಸಿತೆಂದು ಹುನುಮಂತನು ಸಂತೋಷಪಟ್ಟನು.

ಪ್ರತ್ಯುತ್ತರವಾಗಿ ಹುನುಮಂತನು “ಬುದ್ಧಿಶಾಲಿಗಳು ಇಂದ್ರಿಯಗಳನ್ನು ಗೆದ್ದವರೂ ಆದ ನೀವು ಸುಗ್ರೀವನ ಅದೃಷ್ಟದಿಂದ ಕಣ್ಣಿಗೆ ಬಿದ್ದಿರಿ. ಸುಗ್ರೀವನೂ ಶ್ರೀರಾಮಚಂದ್ರನಂತೆಯೆ ರಾಜ್ಯಭ್ರಷ್ಟನಾಗಿದ್ದಾನೆ. ಅಣ್ಣನಾದ ವಾಲಿಗೂ ಸುಗ್ರೀವನಿಗೂ ತುಂಬ ದ್ವೇಷ. ಅಲ್ಲದೆ ವಾಲಿ ಸುಗ್ರೀವನ ಹೆಂಡತಿಯನ್ನು ಬೇರೆ ಅಪಹರಿಸಿದ್ದಾನೆ. ಸೂರ್ಯಪುತ್ರನಾದ ಆತನು ಸೀತೆಯನ್ನು ಹುಡುಕುವ ಕಾರ್ಯದಲ್ಲಿ ನಿಮಗೆ ನಿಸ್ಸಂದೇಹವಾಗಿ ನೆರವಾಗುತ್ತಾನೆ” ಎನ್ನಲು ಅವನ ಮಾತನ್ನು ಕೇಳಿ ಸಂತೋಷಗೊಂಡ ರಾಮಲಕ್ಷ್ಮಣರು ಆತನ ಸೂಚನೆಯಂತೆಯೆ ಅವನ ಹೆಗಲನ್ನೇರಿ ಸುಗ್ರೀವನ ಬಳಿಗೆ ಬಂದನು.

ಹನುಮಂತನ ಮಾತನ್ನು ಕೇಳಿ ರಾಮ ಲಕ್ಷ್ಮಣರ ವಿಷಯದಲ್ಲಿ ಸುಗ್ರೀವನಿಗಿದ್ದ ಹೆದರಿಕೆ ಬಿಟ್ಟುಹೋಯಿತು.

ಪರ್ವತದ ಶಿಖರವನ್ನು ಸೇರಿ, “ಕಾಡಿನಲ್ಲಿ ಹೆಂಡತಿಯನ್ನು ಕಳೆದುಕೊಂಡು, ಸುಗ್ರೀವನ ಸ್ನೇಹವನ್ನು ಬಯಸಿ, ದಶರಥನ ಮಗನಾದ ಶ್ರೀರಾಮಚಂದ್ರನು ತಮ್ಮನಾದ ಲಕ್ಷ್ಮಣನೊಡನೆ ಬಂದಿದ್ದಾನೆ” ಎಂದು ಹನುಮಂತನು ಸುಗ್ರೀವನಿಗೆ ತಿಳಿಸಿದನು. ಹನುಮಂತನ ಮಾತನ್ನು ಕೇಳಿ ರಾಮಲಕ್ಷ್ಮಣರ ವಿಷಯದಲ್ಲಿ ಸುಗ್ರೀವನಿಗಿದ್ದ ಹೆದರಿಕೆ ಬಿಟ್ಟು ಹೋಯಿತು. ತನ್ನಲ್ಲಿಗೆ ಬಂದ ರಾಮನಿಗೆ ಸುಗ್ರೀವನು “ರಾಮಚಂದ್ರ, ನೀನು ಧರ್ಮಾತ್ಮ ಹಾಗೂ ಪರಾಕ್ರಮಿ. ವಾಯುಪುತ್ರನಾದ ಆಂಜನೇಯನು ನಿನ್ನ ಗುಣಗಳನ್ನು ನನಗಾಗಲೆ ತಿಳಿಸಿದ್ದಾನೆ. ನೀನು ನನ್ನ ಸ್ನೇಹವನ್ನು ಬಯಸಿ ಬಂದಿರುವೆಯಲ್ಲವೇ? ಇಗೋ ಈ ನನ್ನ ಭುಜಗಳನ್ನು ಪ್ರಸರಿಸಿದ್ದೇನೆ; ನನ್ನನ್ನು ಆಲಿಂಗಿಸಿಕೊ. ನನ್ನ ಕೈಯನ್ನು ಹಿಡಿದು, ನಿನ್ನ ಸ್ನೇಹವನ್ನು ಸ್ಥಿರಪಡಿಸು!” ಎಂದನು.

ಸುಗ್ರೀವನ ಮಾತನ್ನು ಕೇಳಿ ತೃಪ್ತಿಗೊಂಡ ಶ್ರೀರಾಮನು ಅವನ ಕೈಯನ್ನು ಹಿಡಿದುಕೊಂಡು ಅವನನ್ನು ದೃಢವಾಗಿ ಆಲಿಂಗಿಸಿಕೊಂಡನು. ಆ ಸಮಯದಲ್ಲಿ ಹನುಮಂತನು ತನ್ನ ನಿಜರೂಪವನ್ನು ಧರಿಸಿ ಅಗ್ನಿಯನ್ನು ಪ್ರಜ್ವಲಗೊಳಿಸಿದನು. ಗಂಧಪುಷ್ಪಗಳಿಂದ ಪೂಜಿಸಿದ ಅಗ್ನಿಯನ್ನು ಆಂಜನೇಯನು ಅವರ ನಡುವೆ ಇಟ್ಟನು. ರಾಮಸುಗ್ರೀವರು ಅಗ್ನಿಯನ್ನು ಪ್ರದಕ್ಷಿಣೆ ಮಾಡಿ ಅಗ್ನಿಸಾಕ್ಷಿಕವಾಗಿ ತಮ್ಮ ಸ್ನೇಹವನ್ನು ದೃಢಪಡಿಸಿಕೊಂಡರು. ಆಗ ಸುಗ್ರೀವನು “ನೀನು ನನಗೆ ಪ್ರಿಯತಮನಾದ ಸ್ನೇಹಿತನಾಗಿರುವೆ. ಇನ್ನು ಮುಂದೆ ನಾವಿಬ್ಬರೂ ಸುಖದಲ್ಲಿ ಸಮಾನರಷ್ಟೆ” ಎಂದು ಪ್ರತಿಜ್ಞೆ ಮಾಡಿದನು. ಶ್ರೀರಾಮನೂ ಅದೇ ರೀತಿಯಾಗಿ ಪ್ರತಿಜ್ಞೆಮಾಡಿದನು. ನೆಲದ ಮೇಲೆ ಪಸರಿಸಿದ ಹೂ ತುಂಬಿದ ತಳಿರು ಕೊಂಬೆಯ ಮೇಲೆ ಅವರೆಲ್ಲರೂ ಕುಳಿತ ತರುವಾಯ ಸುಗ್ರೀವನು ಶ್ರೀರಾಮನನ್ನು ಕುರಿತು “ರಾಮಚಂದ್ರ, ವಾಲಿಯಿಂದ ನಾನು ವಂಚಿತನಾಗಿದ್ದೇನೆ. ಅವನಿಂದ ನನ್ನ ಹೆಂಡತಿ ಅಪಹೃತಳಾಗಿದ್ದಾಳೆ. ಅಣ್ಣನಾದ ವಾಲಿಗೆ ಹೆದರಿ ನಾನು ಕಾಡಿನಲ್ಲಿ ವಾಸಿಸುತ್ತಿದ್ದೇನೆ. ವಾಲಿಯ ಭಯ ನಿನಗಿಲ್ಲದಂತೆ ಮಾಡುವೆನೆಂದು ನನಗೆ ಅಭಯವನ್ನು ಕೊಡು” ಎಂದನು. ಶ್ರೀರಾಮನು ಮುಗುಳುನಗೆ ಸೂಸುತ್ತ ಸುಗ್ರೀವನಿಗೆ “ವಾನರಶ್ರೇಷ್ಠ, ವಜ್ರಾಯುಧಕ್ಕೆ ಸಮಾನವಾದ ನನ್ನ ಬಾಣಗಳು ರೋಷಗೊಂಡ ಸರ್ಪಗಳಂತೆ ವಾಲಿಯ ಮೇಲೆ ಬಿದ್ದು ಅವನನ್ನು ನೆಲಕ್ಕೆ ಕೆಡಹುವುದನ್ನು ನೀನೇ ನೋಡುವೆ” ಎಂದು ನಂಬುಗೆಯಿತ್ತನು. ಶ್ರೀರಾಮನ ನುಡಿ ಕೇಳಿ ಸುಗ್ರೀವನು ಹರ್ಷಗೊಂಡನು. ರಾಮಸುಗ್ರೀವರಿಗೆ ಸ್ನೇಹವಾದ ಕಾಲದಲ್ಲಿಯೆ ಸೀತೆಗೂ ಮತ್ತು ರಾವಣನಿಗೂ ಎಡಗಣ್ಣು ಏಕಕಾಲದಲ್ಲಿ ಅದುರಿತು.

* * *