ಇಷ್ಟು ಮಾತುಗಳನ್ನಾಡಿ ರಾಮಬಾಣದಿಂದಲೂ ಸುಗ್ರೀವನ ಹೊಡೆತದಿಂದಲೂ ಜರ್ಝರಿತವಾದ ದೇಹವುಳ್ಳ ವಾಲಿ ಆಯಾಸದಿಂದ ಮೂರ್ಛಿತನಾದನು. ಈ ವೇಳೆಗೆ ವಾಲಿವಧೆಯ ವೃತ್ತಾಂತವನ್ನು ಕೇಳಿದ ತಾರೆ ಹೆದರಿ ಗಂಡನಿದ್ದ ಸ್ಥಳಕ್ಕೆ ಬಂದಳು. ಶ್ರೀರಾಮನನ್ನು ಕಂಡು ಅಂಗದನ ಅನುಚರರು ಓಡಿಹೋದರು. ವಾಲಿಯ ಅನುಚರರಾದ ಅವರು ಓಡಿಹೋಗುವುದು ಅನುಚಿತವೆಂದು ತಾರೆ ಅವರನ್ನು ಬೇಡಿಕೊಂಡಳು. ತಾರೆಯನ್ನು ಸಂತೈಸುತ್ತ ಆ ಕಪಿಶ್ರೇಷ್ಠರು ಮೊದಲು ಆಕೆ ಅಂಗದನನ್ನು ಕಾಪಿಟ್ಟು, ಅವನಿಗೆ ರಾಜ್ಯಾಭಿಷೇಕಮಾಡಬೇಕೆಂದೂ ನಗರವನ್ನು ರಕ್ಷಿಸಬೇಕೆಂದೂ ಪ್ರಾರ್ಥಿಸಿಕೊಂಡರು. ಆದರೆ ವಾಲಿಯನ್ನು ಕಳೆದುಕೊಂಡ ತಾರೆಗೆ ರಾಜ್ಯವಾಗಲಿ ಮಗನಾಗಲಿ ಬೇಡವೆನಿಸಿತು. ಅದಕ್ಕೆ ಬದಲಾಗಿ ವಾಲಿಯನ್ನು ಅನುಸರಿಸಿ ಹೋಗುವುದೇ ಯುಕ್ತವೆಂದು ಆಕೆಗೆ ತೋರಿತು. ತಾರೆ ಶೋಕದಿಂದ ಅಳುತ್ತ, ತಲೆ ಕೆದರಿಕೊಂಡು ತೋಳುಗಳಿಂದ ಹೊಟ್ಟೆಯನ್ನು ಹೊಡೆದುಕೊಳ್ಳುತ್ತ ವಾಲಿಯಿದ್ದೆಡೆಗೆ ಓಡಿದಳು. ಮಾಂಸದ ಆಸೆಗಾಗಿ ಹೊಡೆಯಲ್ಪಟ್ಟ ಸಿಂಹದಂತೆ ಬಿದ್ದಿರುವ ವಾಲಿಯನ್ನೂ ಬಿಲ್ಲನ್ನು ಅಪ್ಪಿ ನಿಂತಿದ್ದ ರಾಮಲಕ್ಷ್ಮಣರನ್ನೂ ಅಣ್ಣನನ್ನು ಕೊಲ್ಲಿಸಿದ ಸುಗ್ರೀವನನ್ನೂ ತಾರೆ ಕಂಡಳು. ಆ ದೃಶ್ಯವನ್ನು ಕಂಡು ಆಕೆ ‘ಆರ್ಯಪುತ್ರ’ ಎಂದು ಕುರರ ಪಕ್ಷಿಯಂತೆ ಕೂಗುತ್ತ ಮೂರ್ಛೆಹೋದಳು. ತಾರೆಯನ್ನೂ ಅವಳ ಜೊತೆಯಲ್ಲಿ ಬಂದ ಅಂಗದನನ್ನೂ ಕಂಡು ಸುಗ್ರೀವನ ದುಃಖದಿಂದ ಕಣ್ಣೀರು ತುಂಬಿದನು.

ಮೆಲ್ಲಮೆಲ್ಲನೆ ಎಚ್ಚರ ತಿಳಿದು, ತಾರೆ ಗಂಡನನ್ನು ಅಪ್ಪಿಕೊಂಡು ವಿಲಾಪಿಸತೊಡಗಿದಳು: “ವಾನರಶ್ರೇಷ್ಠ, ದೀನಳಾದ ನನ್ನನ್ನು ಏಕೆ ಮಾತನಾಡಿಸದಿರುವೆ? ನಿನ್ನಂಥ ರಾಜೋತ್ತಮರು ಉತ್ತಮವಾದ ಹಾಸಿಗೆಯಲ್ಲಿ ಮಲಗುವುದನ್ನು ಬಿಟ್ಟು ಭೂಮಿಯಲ್ಲಿ ಮಲಗುವುದು ಯೋಗ್ಯವೆ? ಅಯ್ಯೋ, ನನಗಿಂತಲೂ ನಿನಗೆ ಈ ಭೂಮಿ ಪ್ರಿಯಳೆನಿಸಿದಳೆ? ನಿನ್ನ ಸಾವಿನಿಂದ ನಾನು ಶೋಕಸಾಗರದಲ್ಲಿ ಮುಳುಗಿಹೋದೆ. ವನಗಳಲ್ಲಿ ನಾವೆಸಗಿದ ವಿಹಾರಗಳು ಇಂದಿಗೆ ಕೊನೆಗಂಡವು. ನಿನ್ನನ್ನು ನೋಡಿ ಸಾವಿರ ಹೋಳಾಗದಿರುವ ನನ್ನ ಹೃದಯ ನಿಜವಾಗಿಯೂ ಪಾಷಾಣಕ್ಕೆ ಸಮಾನವಾದುದು. ನನ್ನ ಮಾತನ್ನು ನೀನು ಕೇಳದಾದೆ. ಆದಕಾರಣ ಸುಗ್ರೀವನ ಹೆಂಡತಿಯನ್ನು ಅಪಹರಿಸಿದುದಕ್ಕೆ ತಕ್ಕ ಫಲ ನಿನಗುಂಟಾಯಿತು. ಈಗ ನಿನ್ನನ್ನು ಹೊಂದುವ ಅಪ್ಸರೆಯರು ನನಗಿಂತಲೂ ಧನ್ಯರು. ನಾನಾದರೊ ಶೋಕದಿಂದ ಕುಗ್ಗಿ ವೈಧವ್ಯವನ್ನು ಧರಿಸಬೇಕಾಯಿತು. ಸುಗ್ರೀವನು ಕೋಪಗೊಂಡರೆ ಸುಕುಮಾರನಾದ ಅಂಗದನ ಅವಸ್ಥೆ ಏನಾಗುವುದೊ? ವತ್ಸ ಅಂಗದ, ಧರ್ಮವತ್ಸಲನಾದ ನಿನ್ನ ತಂದೆಯನ್ನು ಚೆನ್ನಾಗಿ ನೋಡು. ಇನ್ನು ಮುಂದೆ ಅವನ ದರ್ಶನ ನಿನಗೆ ದುರ್ಲಭ. ಕಪಿವೀರ, ಈ ನಿನ್ನ ಮಗನ ಮಂಡೆಯನ್ನು ಆಘ್ರಾಣಿಸಿ, ಅವನಿಗೆ ಉಚಿತವಾದ ಬುದ್ದಿಮಾತುಗಳನ್ನಾಡು. ಅಯ್ಯೋ, ನಿನ್ನನ್ನು ಹೊಡೆದು ಶ್ರೀರಾಮನು ಯಾವ ಮಹತ್ಕಾರ್ಯವನ್ನು ಸಾಧಿಸಿದನು? ಸುಗ್ರೀವ, ನಿನ್ನ ಆಶೆ ಕೈಗೂಡಿತಷ್ಟೆ. ಇನ್ನುಮುಂದೆ ಯಾರ ಭಯವೂ ಇಲ್ಲದೆ ರುಮೆಯೊಡನೆ ಈ ಕಪಿ ರಾಜ್ಯವನ್ನು ಅನುಭವಿಸು. ವಾನರಶ್ರೇಷ್ಠ, ಅಳುತ್ತಿರುವ ನನ್ನನ್ನೇಕೆ ಮಾತನಾಡಿಸಲೊಲ್ಲೆ? ನಿನಗೆ ಬಹು ಪ್ರಿಯನಾದ ಈ ಅಂಗದನನ್ನು ಬಿಟ್ಟು ನೀನೆಲ್ಲಿಗೆ ಹೋಗುವೆ? ಬಹುದೂರ ಪ್ರಯಾಣ ಹೊರಟಿರುವ ನೀನು ನನ್ನ ಅಪರಾಧಗಳನ್ನು ಮನ್ನಿಸು. ಇಗೋ ನಿನ್ನ ಪಾದಗಳ ಮೇಲೆ ತಲೆಯಿಟ್ಟು ಬೇಡುತ್ತೇನೆ. ”

ಇಷ್ಟನ್ನು ನುಡಿದು ತಾರೆ ದುಃಖವನ್ನು ತಡೆಯಲಾರದೆ ಹೋದಳು. ಪ್ರಾಯೋಪವೇಶಮಾಡಲು ನಿಶ್ಚೈಸಿ ಆಕೆ ನೆಲದ ಮೇಲೆ ಬಿದ್ದುಬಿಟ್ಟಳು. ಆಕಾಶದಿಂದ ಜಾರಿಬಿದ್ದ ನಕ್ಷತ್ರದಂತೆ ಭೂಮಿಯಮೇಲೆ ಬಿದ್ದಿದ್ದ ತಾರೆಯನ್ನು ನೋಡಿ ಹನುಮಂತನು ಆಕೆಯನ್ನು ಸಂತೈಸಲು ಈ ರೀತಿ ನುಡಿದನು: “ಲೋಕದಲ್ಲಿ ಪ್ರತಿಯೊಬ್ಬನೂ ತಾನು ಮಾಡಿದ ಕರ್ಮಗಳಿಗೆ ತಕ್ಕಂತೆ ಸುಖದುಃಖಗಳನ್ನು ಹೊಂದುತ್ತಾನೆ. ಆದಕಾರಣ ತಾನು ಮಾಡಿದ ಕರ್ಮದ ಫಲವಾಗಿ ವಾಲಿ ಸುಗ್ರೀವನಿಂದ ಹತನಾದನು. ಸತ್ತವರ ವಿಷಯವನ್ನು ಕುರಿತು ಯೋಚಿಸಿ ಫಲವಿಲ್ಲ. ಈಗ ನಿನ್ನನ್ನೇ ಕುರಿತು ನೀನು ಚಿಂತಿಸಬೇಕಾಗಿದೆ. ನೀನು ಎಲ್ಲವನ್ನೂ ತಿಳಿದವಳು. ನಿನ್ನ ಮಗನ ಮುಂದಿನ ಏಳಿಗೆಯನ್ನು ಕುರಿತು ನೀನು ಚಿಂತಿಸಬೇಡವೆ? ವಾಲಿ ಧರ್ಮದಿಂದ ರಾಜ್ಯಭಾರ ಮಾಡಿದನು. ದುಃಖಿತರಾದ ಬಂಧುಗಳನ್ನು ಸಂತೈಸಿ, ಉಪಕಾರವೆಸಗಿದನು. ಅರ್ಥಿಗಳ ಇಷ್ಟಾರ್ಥವನ್ನು ಕೈಗೂಡಿಸಿದನು. ಇಂಥ ಮಹಾತ್ಮನನ್ನು ಕುರಿತು ಚಿಂತಿಸಿ ದುಃಖಿಸಬೇಡ. ಈ ವಾನರ ರಾಜ್ಯವನ್ನು ನಿನ್ನ ಮಗನಾದ ಅಂಗದನು ಪಾಲಿಸಲಿ. ಅಂಗದನಿಂದ ವಾಲಿಗೆ ಸಂಸ್ಕಾರ ಮಾಡಿಸಿ, ಅವನನ್ನು ಸಿಂಹಾಸನದಲ್ಲಿ ಕೂರಿಸಿ ಆ ಮಗನ ಏಳ್ಗೆಯನ್ನು ಕಂಡು ನಿನ್ನ ದುಃಖವನ್ನು ಹಿಡಿದುಕೊ. ” ಹನುಮಂತನ ಮಾತಿನಿಂದ ತಾರೆಗೆ ಶಾಂತಿ ದೊರಕಲಿಲ್ಲ. ಅಂಗದನ ಪಟ್ಟಾಭಿಷೇಕದಲ್ಲಿ ಭಾಗವಹಿಸುವುದಾಗಲಿ, ವಾಲಿಗೆ ಸಂಸ್ಕಾರವೆಸಗುವುದಾಗಲಿ ಆಕೆಗೆ ರುಚಿಸಲಿಲ್ಲ. ವಾಲಿ ಸತ್ತಮೇಲೆ ಆ ಭಾರ ಸುಗ್ರೀವನಿಗೆ ಸೇರಿತಷ್ಟೆ. ಅಂಗದನಂತಹ ನೂರು ಮಕ್ಕಳನ್ನು ಸಾಕುವುದಕ್ಕಿಂತ ವೀರನಾದ ವಾಲಿಯೊಡನೆ ಸಹಗಮನವೇ ಆಕೆಗೆ ಲೇಸೆಂದು ತೋರಿತು.

ಈ ವೇಳೆಗೆ ವಾಲಿ ನಿಟ್ಟುಸಿರುಬಿಡುತ್ತ ಮೆಲ್ಲಮೆಲ್ಲನೆ ಚೇತರಿಸಿಕೊಂಡನು. ಜಯವನ್ನು ಹೊಂದಿ ತನ್ನ ಮಗನ ಮುಂದೆ ನಿಂತ ಸುಗ್ರೀವನನ್ನು ಕರೆದು ಸ್ಪಷ್ಟವಾದ ಮಾತಿನಿಂದ ಅವನಿಗೆ ಸ್ನೇಹಪೂರ್ವಕವಾಗಿ ಈ ರೀತಿ ನುಡಿದನು: “ವತ್ಸ, ನಿನ್ನ ಹೆಂಡತಿಯನ್ನು ಬಲತ್ಕಾರದಿಂದ ಸೆಳೆದೊಯ್ದು, ನಿನ್ನನ್ನು ಅಡವಿಗಟ್ಟಿದನೆಂದು ನನ್ನಲ್ಲಿ ದೋಷವನ್ನೆಣಿಸಬೇಡ. ದೈವಗತಿಯಿಂದ ನನಗೆ ಈ ಗತಿಯುಂಟಾಯಿತು. ನಾವಿಬ್ಬರೂ ಒಡಹುಟ್ಟಿದವರಾದರೂ ಪ್ರೀತಿಯಿಂದಿದ್ದು ರಾಜ್ಯವಾಳುವ ಪುಣ್ಯವನ್ನು ಪಡೆದು ಬರಲಿಲ್ಲ. ಈಗ ನೀನೆ ಈ ವಾನರ ರಾಜ್ಯವನ್ನು ಅನುಭವಿಸತಕ್ಕದ್ದು. ನಾನಾದರೋ ಈ ಐಶ್ವರ್ಯ, ಈ ರಾಜ್ಯ, ಈ ಕೀರ್ತಿಗಳನ್ನು ಬಿಟ್ಟು ಬಹುದೂರ ಪ್ರಯಾಣ ಹೊರಟಿದ್ದೇನೆ. ಈ ನನ್ನ ಮಗನಾದ ಅಂಗದನನ್ನು ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಂತೆ ಕಾಣು. ಯಾವ ವಿಧದಲ್ಲಿಯೂ ತಂದೆಯಿಲ್ಲದ ಕೊರತೆಯನ್ನು ಅವನಿಗುಂಟುಮಾಡಬೇಡ. ರಾಕ್ಷಸರ ಸಂಹಾರಕಾರ್ಯದಲ್ಲಿ ನಿನಗಿಂತಲೂ ಅವನು ಮುಂದಾಗುವನು. ಯುವಕನೂ ಬಲಶಾಲಿಯೂ ಆದ ಅಂಗದನು ಯುದ್ಧದಲ್ಲಿ ತನ್ನ ಬಲಕ್ಕೆ ಅನುರೂಪವಾದ ಕಾರ್ಯಗಳನ್ನು ಮಾಡುವನು. ಈಗ ನೀನು ಮಿತ್ರನಾದ ಶ್ರೀರಾಮನ ಕಾರ್ಯವನ್ನು ಶ್ರದ್ಧೆಯಿಂದ ಮಾಡು. ಮಿತ್ರದ್ರೋಹಕ್ಕೆ ಮಿಗಿಲಾದ ಮತ್ತೊಂದು ಪಾಪ ಈ ಲೋಕದಲ್ಲಿಲ್ಲ. ಇಗೋ, ನಾನು ಸತ್ತು, ಇದರ ತೇಜಸ್ಸು ಅಳಿಯುವುದಕ್ಕೆ ಮುಂಚೆ ನನ್ನ ಕೊರಳಿನಲ್ಲಿರುವ ಕಾಂಚನಮಾಲೆಯನ್ನು ಧರಿಸು. ”

ಅಣ್ಣನಾದ ವಾಲಿಯ ಮಾತುಗಳನ್ನು ಕೇಳಿ ಸುಗ್ರೀವನ ದುಃಖ ಉಕ್ಕೇರಿ ಬಂತು. ರಾಹು ಹಿಡಿದ ಚಂದ್ರನಂತೆ ಅವನು ದೀನನಾಗಿ ಕುಗ್ಗಿಹೋದನು. ಆದರೂ ಅಣ್ಣನ ಮಾತಿನಂತೆ ಆ ಹಾರವನ್ನು ತೆಗೆದುಕೊಂಡು ತನ್ನ ಕೊರಳಿನಲ್ಲಿ ಧರಿಸಿಕೊಂಡನು. ಅನಂತರ ಮರಣೋನ್ಮುಖವಾದ ವಾಲಿ ಮಗನಲ್ಲಿದ್ದ ಪ್ರೇಮದಿಂದ ಅಂಗದನನ್ನು ಕುರಿತು ನುಡಿದನು: “ವತ್ಸ, ನಾನು ಇಷ್ಟರಲ್ಲೆ ಪರಲೋಕವನ್ನು ಕುರಿತು ತೆರಳುತ್ತೇನೆ. ನನ್ನ ಪ್ರೇಮದಿಂದ ವಂಚಿತನಾದ ನೀನು ಇನ್ನು ಮುಂದೆ ಸುಗ್ರೀವನ ಇಷ್ಟದಂತೆ ನಡೆದುಕೊ. ಸುಗ್ರೀವನ ಹಗೆಗಳೊಡನೆ ಸ್ನೇಹ ಬೆಳೆಸಬೇಡ. ಜಿತೇಂದ್ರಿಯನಾದ ಸುಗ್ರೀವನ ಏಳಿಗೆಯನ್ನು ಹಾರೈಸುತ್ತ, ಅವನ ವಶದಲ್ಲಿರು. ”

ಹೀಗೆ ಮಾತನಾಡುತ್ತಿರುವಾಗಲೆ ರಾಮಬಾಣದ ವೇದನೆ ಪ್ರಬಲವಾಗಿ ವಾಲಿ ಹಲ್ಲು ಕಿರಿದು ಬಾಯಿತೆರೆದು ಪ್ರಾಣಗಳನ್ನು ತೊರೆದನು. ವಾನರಾಧಿಪನಾದ ವಾಲಿ ಸ್ವರ್ಗವನ್ನು ಸೇರಲು, ಎಲ್ಲ ವಾನರರೂ ಗಟ್ಟಿಯಾಗಿ ಗೋಲಳಿಟ್ಟರು. ಕಿಷ್ಕಿಂದೆ, ಬೆಟ್ಟ, ಕಾಡು ಇವೆಲ್ಲ ವಾಲಿಯ ಸಾವಿನಿಂದ ಬರಿದಾಗಿ ತೋರಿದುವು. ಕಪಿವೀರರ ಮುಖಗಳೆಲ್ಲ ಕಳೆಗುಂದಿದವು. ಸಿಂಹದಿಂದ ಕೆಳಗೆ ಬೀಳಿಸಲ್ಪಟ್ಟ ಗೂಳಿಯಂತೆ, ಭೂಮಿಯ ಮೇಲೆ ಬಿದ್ದಿದ್ದ ಮಹಾಬಲಶಾಲಿಯಾದ ವಾಲಿಯನ್ನು ಸುತ್ತುಗಟ್ಟಿ ನಿಂತ ವಾನರರು ಗೋಳಿಡುತ್ತಿದ್ದರು. ಕಡಿದುಹಾಕಿದ ದೊಡ್ಡ ವೃಕ್ಷವನ್ನು ಆಶ್ರಯಿಸಿದ ಲತೆಯಂತೆ ತಾರೆ ದುಃಖದಲ್ಲಿ ಮುಳುಗಿ ಗಂಡನನ್ನು ಅಪ್ಪಿಕೊಂಡು ಭೂಮಿಯಲ್ಲಿ ಬಿದ್ದಳು.

* * *