ಅತ್ತ ರಾವಣನು ಕಣ್ಮರೆಯಾಗುತ್ತಲೆ ಇತ್ತ ರಾಕ್ಷಸಿಯರು ಸೀತೆಯನ್ನು ಸುತ್ತಿಕೊಂಡು ಅವಳನ್ನು ಗೋಳುಹೊಯ್ದುಕೊಳ್ಳಲು ಆರಂಭಿಸಿದರು. ಅದರಲ್ಲಿ ಒಬ್ಬಳು ಆಕೆಯನ್ನು ಕುರಿತು

“ಎಲೈ ಸೀತೆ, ರಾವಣ ಸಾರ್ವಭೌಮನೆಂದರೆ ಏನೆಂದು ತಿಳಿದುಕೊಂಡೆ. ಆತನು ಪುಲಸ್ತ್ಯಬ್ರಹ್ಮನ ವಂಶದಲ್ಲಿ ಹುಟ್ಟಿದ ಮಹನೀಯ! ಆತನಿಗೆ ಹತ್ತು ತಲೆ. ಅಂತಹವನಿಗೆ ಭಾರ್ಯೆಯಾಗಲು ಸಮ್ಮತಿಯಿಲ್ಲವೆ? ಚೆನ್ನಾಯಿತು!” ಎಂದಳು.

ಮತ್ತೊಬ್ಬಳು “ಎಲೆ ಸೀತೆ, ಪುಲಸ್ತ್ಯ ಎಂದರೆ ಯಾರು ಗೊತ್ತೆ? ಮರೀಚಿಯೇ ಮೊದಲಾದ ಆರು ಮಂದಿ ಬ್ರಹ್ಮರಲ್ಲಿ ಆತನೂ ಒಬ್ಬ. ಆತನ ಮಾನಸಪುತ್ರರಾದ ವಿಶ್ವವಸ್ಸು ನಮ್ಮ ರಾವಣೇಶ್ವರನ ತಂದೆ. ನಮ್ಮ ರಾವಣೇಶ್ವರನೆಂದರೆ ರಾಕ್ಷಸ ವಂಶಕ್ಕೆಲ್ಲಾ ಚಕ್ರವರ್ತಿ. ಇವನಿಗೆ ನೀನು ಪತ್ನಿಯಾಗಿರಲೊಲ್ಲೆಯಾ? ನಿನಗೇನು ಅವಿವೇಕ? ಈಗಲಾದರೂ ನನ್ನ ಮಾತು ಕೇಳು. ನಿನ್ನ ಹಿತಕ್ಕಾಗಿಯೆ ನಾನು ಹೇಳುತ್ತಿರುವುದು. ಆದ್ದರಿಂದ ನನ್ನ ಮಾತನ್ನು ತಿರಸ್ಕರಿಸಬೇಡ. ರಾವಣೇಶ್ವರನನ್ನು ವರಿಸಿ ಸುಖವಾಗಿರು” ಎಂದಳು.

ಅಷ್ಟರಲ್ಲಿ ಬೆಕ್ಕಿನ ಕಣ್ಣಿನ ‘ಹರಿಜಟೆ’ಯೆಂಬವಳು “ಎಲೆ ಸೀತಾ, ರಾವಣನ ಪರಾಕ್ರಮ ಎಂತಹುದು ಗೊತ್ತೆ? ಮೂವತ್ತು ಮೂರು ಕೋಟಿ ದೇವತೆಗಳಿಗೂ ದೊರೆಯಾದ ಇಂದ್ರನೇ ಆತನ ಕೈಲಿ ಸೋತು ಹೋಗಿದ್ದಾನೆ. ಇಂತಹ ಶೂರನನ್ನು ಕೈಹಿಡಿಯಲು ಪುಣ್ಯ ಪಡೆದಿರಬೇಕು” ಎಂದಳು.

ಅನಂತರ ಪ್ರಘಸೆ ಎಂಬುವಳು “ಏ, ಹುಚ್ಚಿ, ರಾವಣೇಂದ್ರನಿಗೆ ಹೆಂಡತಿಯರು ಗತಿಯಿಲ್ಲದುದಕ್ಕಾಗಿ ನಿನಗೆ ಸೋತು ಬಾಯ್ಬಿಟ್ಟಿರುವನೆಂದು ಭಾವಿಸಿದೆಯಾ? ಆತನಿಗೆ ಎಷ್ಟೋ ಮಂದಿ ಮಡದಿಯರುಂಟು. ಅವರಿಗೆಲ್ಲಾ ಪ್ರಮುಖಳಾದ ಮಂಡೋದರಿಯೆಂಬ ಪಟ್ಟದ ರಾಣಿಯೂ ಉಂಟು. ಅವರೆಲ್ಲರನ್ನೂ ಕಡೆಗಣಿಸಿ ನಿನ್ನನ್ನು ಕಾಮಿಸಿ ಬಂದಿದ್ದಾನೆ. ಆತನನ್ನು ಸೇರಿದರೆ ನೀನೇ ಅಂತಃಪುರದ ಒಡತಿಯಾಗುತ್ತಿ. ”

ಅವಳಾದ ಮೇಲೆ ವಿಕಟೆಯೆಂಬ ಬೇರೆ ರಾಕ್ಷಸಿ ಹೇಳಿದಳು – “ಅಯ್ಯೋ, ರಾವಣನಂತಹ ಮಹಾ ಶೂರನನ್ನು ಸೇರುವುದಕ್ಕೂ ಪುಣ್ಯ ಬೇಕಲ್ಲ!”

ದುರ್ಮುಖಿ ವಿಕಟೆಯ ಮಾತನ್ನು ಮುಂದುವರಿಸುತ್ತಾ “ಅಷ್ಟಲ್ಲದೆ ಏನು? ರಾವಣ ಸಾರ್ವಭೌಮನನ್ನು ಕಂಡರೆ ಸೂರ್ಯ ಹೆದರಿ ತಣ್ಣಗಾಗುತ್ತಾನೆ; ವಾಯು ನಡುಗಿ ನಿಧಾನವಾಗಿ ನಡೆಯುತ್ತಾನೆ; ಮರಗಳು ಹೆದರಿ ಹೂ ಮಳೆ ಕರೆಯುತ್ತವೆ; ಮೇಘಗಳು ಹೆದರಿ ನೀರನ್ನು ಸುರಿಸುತ್ತವೆ. ಅಂತಹ ಮಹನೀಯನಿಗೆ ಭಾರ್ಯೆಯಾಗಲು ಇವಳಿಗೇಕೆ ಬುದ್ಧಿ ಹುಟ್ಟಲೊಲ್ಲದು? ಸೀತೆ ನಾವು ಯಥಾರ್ಥವಾದ ಸಂಗತಿಗಳನ್ನು ನಿನಗೆ ಹೇಳಿದ್ದೇವೆ. ನಮ್ಮ ಮಾತಿನಂತೆ ನಡೆದೆಯೋ, ನೀನು ಉಳಿದುಕೊಳ್ಳುತ್ತಿ; ಇಲ್ಲವೋ ನಿನ್ನ ಪ್ರಾಣಗಳು ಉಳಿಯುವುದು ಕಷ್ಟ” ಎಂದಳು.

ನರಿಗಳು ಬಳ್ಳಿಕ್ಕಿದರೆ ದೇವಲೋಕ ಹಾಳೆ? ಸೀತಾದೇವಿ ಅವರ ಮಾತುಗಳನ್ನು ಕೇಳಿ ‘ಉಂ’ ಎನಲಿಲ್ಲ. ‘ಉಃ’ ಎನಲಿಲ್ಲ. ಅದನ್ನು ಕಂಡು ಅವಳನ್ನು ಮುತ್ತಿದ ರಾಕ್ಷಸಿಯರಿಗೆ ಬಹು ಕೋಪ ಬಂದಿತು. ಅವರು ಆಕೆಯನ್ನು ಕಠೋರ ರೀತಿಯಲ್ಲಿ ನಿಂದಿಸುತ್ತಾ

“ಎಲೆ ಸೀತೆ, ಅತ್ಯುತ್ತಮ ಶಯನಾಸನಗಳಿಂದ ಶೋಭಿಸುವ ರಾವಣನ ಅಂತಃಪುರ ನಿನಗೆ ರುಚಿಸದೆ ಹೋಯಿತೆ? ದುರದೃಷ್ಟದಿಂದ ಒಮ್ಮೆ ಮನುಷ್ಯ ಮಾತ್ರರ ಹೆಂಡತಿಯಾದ ಮಾತ್ರಕ್ಕೆ ಕಡೆಯವರೆಗೂ ಅವರ ಹೆಂಡತಿಯಾಗಿಯೇ ಉಳಿಯಬೇಕೆ? ಆ ದರಿದ್ರರಾಮನಿಂದ ನಿನ್ನ ಮನಸ್ಸನ್ನು ತಿರುಗಿಸು. ಇನ್ನು ನೀನು ರಾಮನನ್ನು ಕಾಣುವುದು ಸಾಧ್ಯವೆ? ಆ ಆಸೆಯನ್ನು ತ್ಯಜಿಸು. ಮೂರು ಲೋಕದ ಐಶ್ವರ್ಯಕ್ಕೂ ಒಡೆಯನಾದ ರಾವಣೇಶ್ವರನೆಲ್ಲಿ? ರಾಜ್ಯಭ್ರಷ್ಟನಾದ ಆ ದೀನ ರಾಮನೆಲ್ಲಿ? ನೀನೋ ಕುಂದಿಲ್ಲದ ಸೌಂದರ್ಯಕ್ಕೆ ಒಡತಿ. ನಿನಗೆ ಸರಿಯಾದ ಗಂಡನೆಂದರೆ ರಾವಣೇಶ್ವರನೇ. ಆದ್ದರಿಂದ ನಿನ್ನ ಮರುಳಾಟವನ್ನು ಬಿಟ್ಟು, ರಾವಣೇಶ್ವರನಲ್ಲಿ ಸೇರಿ ಇಷ್ಟಬಂದಂತೆ ವಿಹರಿಸು” ಎಂದರು.

ಗಂಡನ ದೂಷಣೆಯನ್ನು ಕೇಳಿ ಸೀತೆಯ ಪದ್ಮನೇತ್ರಗಳಲ್ಲಿ ಕಂಬನಿದುಂಬಿದುವು. ಆಕೆ ಗಳಗಳನೆ ಅಳುತ್ತಾ ಆ ರಾಕ್ಷಸಿಯರನ್ನು ಕುರಿತು

“ನೀವು ಆಡುತ್ತಿರುವ ಆ ಅಸಹ್ಯಕರವಾದ ಮಾತುಗಳು ಪಾಪಕರವೆಂದು ನಿಮಗೆ ಏಕೆ ತೋರುತ್ತಿಲ್ಲ? ನಿಮ್ಮ ನುಡಿಗಳನ್ನು ನಾನು ಕಿವಿಯಿಂದ ಕೇಳಲಾರೆ. ನೀವೆಲ್ಲರೂ ಸೇರಿ ನನ್ನನ್ನು ಕಿತ್ತುತಿಂದರೂ ಚಿಂತೆಯಿಲ್ಲ. ನಾನು ಬೇರೆ ನಿಮ್ಮ ಇಷ್ಟದಂತೆ ನಡೆಯಲಾರೆ. ದರಿದ್ರನಾಗಲಿ ರಾಜ್ಯಭ್ರಷ್ಟನಾಗಿರಲು ನನ್ನನ್ನು ಕೈಹಿಡಿದಾತನು ನನ್ನ ಪಾಲಿನ ದೇವರು. ಆರುಂಧತಿ ವಷಿಷ್ಠನನ್ನು, ಸಾವಿತ್ರಿ ಸತ್ಯವಾನನನ್ನು, ದಮಯಂತಿ ನಳಮಹಾರಾಜನನ್ನು ಅನುವರ್ತಿಸಿದಂತೆ ನಾನೂ ನನ್ನ ಪತಿಯನ್ನು ಅನುಸರಿಸುವವಳೇ ಸರಿ” ಎಂದಳು.

ಅವಳ ಮಾತುಗಳಿಂದ ರಾಕ್ಷಸಿಯರಿಗೆ ಬಹಳ ಕೋಪ ಬಂದಿತು. ತುಟಿಗಳನ್ನು ಕಡಿಯುತ್ತಾ ಕೈಲಿದ್ದ ಗಂಡುಗೊಡಲಿಗಳನ್ನು ಎತ್ತಿ ತೋರಿಸುತ್ತಾ “ರಾವಣೇಶ್ವರನನ್ನು ವರಿಸುವ ಭಾಗ್ಯ ಈ ನತದೃಷ್ಟಳಿಗೆಲ್ಲಿಯದು?” ಎಂದು ಹೀಯಾಳಿಸಿದರು. ಸೀತಾದೇವಿ ಅವರ ಅವಾಚ್ಯಶಬ್ದಗಳನ್ನು ಕೇಳಲಾರದೆ ಅಲ್ಲಿಂದೆದ್ದು ಹನುಮಂತನು ಕುಳಿತಿದ್ದ ಮರದ ಕೆಳಕ್ಕೆ ಹೊರಟುಹೋದಳು. ಬೆನ್ನಟ್ಟಿ ಬರುವ ಪ್ರಾರಬ್ಧದಂತೆ ಆ ರಾಕ್ಷಸಿಯರೂ ಆಕೆಯ ಹಿಂದೆಯೆ ಅಲ್ಲಿಗೆ ಹೋದರು. ಅವರಲ್ಲಿ ವಿನತೆಯೆಂಬ ಬತ್ತಿದ ಹೊಟ್ಟೆಯ ಭಯಂಕರ ರಾಕ್ಷಸಿ ಸೀತೆಯನ್ನು ಕುರಿತು, “ಎಲೌ ಮಂಗಳಾಂಗಿ, ನೀನು ನಿನ್ನ ಪತಿಪ್ರೇಮವನ್ನು ಬಹು ಚೆನ್ನಾಗಿ ಪ್ರದರ್ಶಿಸಿರುವೆ. ಇದರಿಂದ ನಾನು ಅತ್ಯಂತ ಸುಪ್ರೀತಳಾಗಿರುವೆನು. ಆದ್ದರಿಂದ ನಿನ್ನ ಮೇಲ್ಮೆಗಾಗಿ ನಾನೊಂದು ಮಾತು ಹೇಳುತ್ತೇನೆ. ಕೇಳು. ಇಲ್ಲಿ ನೋಡು; ಅತಿಯಾಗಿ ಯಾವುದನ್ನೂ ಮಾಡುವುದು ಅವಿವೇಕ. ಇನ್ನು, ರಾಮ, ರಾಮ ಎಂದು ಹಾಳು ರಾಮನಿಗಾಗಿ ಹಲುಬುವುದನ್ನು ನಿಲ್ಲಿಸು. ಮಹಾತ್ಮನಾದ ನಮ್ಮ ರಾವಣೇಶ್ವರನನ್ನು ವರಿಸು. ದಿವ್ಯವಾದ ಗಂಧವನ್ನು ಲೇಪಿಸಿಕೊಂಡು, ದಿವ್ಯವಾದ ಆಭರಣಗಳನ್ನು ಧರಿಸಿ, ಇಂದು ಮೊದಲಾಗಿ ಸಮಸ್ತ ಲೋಕಗಳಿಗೂ ಮಹಾರಾಣಿಯಾಗು. ಇಷ್ಟನ್ನೂ ನಿನ್ನ ಹಿತಕ್ಕಾಗಿ ಹೇಳುತ್ತಿದ್ದೇನೆ. ನಿನ್ನ ಹಿತ ನಿನಗೆ ಬೇಡವಾದರೆ ಇದೋ ನಾವೆಲ್ಲರೂ ಸೇರಿ ನಿನ್ನನ್ನು ಭಕ್ಷಿಸಿಬಿಡುತ್ತೇವೆ” ಎಂದಳು.

ಅವಳು ಮಾತಾಡಿ ಮುಗಿಸುವಷ್ಟರಲ್ಲಿ ಜೋಲುದೇಹದ ವಿಕಟೆ ತನ್ನ ಬೆರಳುಗಳನ್ನೆಲ್ಲಾ ಮಡಿಚಿ, ಮುಷ್ಟಿಯನ್ನು ಮೇಲಕ್ಕೆತ್ತಿಕೊಂಡು ಅಬ್ಬರಿಸುತ್ತಾ “ಎಲೆ ದುರಾತ್ಮಳೆ, ನಿನ್ನ ಕೆಡುನುಡಿಗಳನ್ನು ಕೇಳಿಕೊಂಡು ಎಷ್ಟು ತಾಳ್ಮೆಯಿಂದಿದ್ದರೂ ನೀನು ನಿನ್ನ ಹಟವನ್ನು ಬಿಡುವಂತೆ ಕಾಣುತ್ತಿಲ್ಲ. ಇನ್ನು ನಾವು ದಯೆ ತೋರುವುದು ಸಾಧ್ಯವಿಲ್ಲ. ನಿನ್ನ ಕಣ್ಣೀರನ್ನು ಕಂಡು ನಾವು ಕರಗುತ್ತೇವೆಂದು ತಿಳಿದುಕೊಂಡೆಯಾ? ಹಾಗೇನೂ ಭಾವಿಸಬೇಡ. ನಿನ್ನ ಗಂಡ ಸಮುದ್ರವನ್ನು ದಾಟಿ ಬಂದು ರಾವಣನ ಅಂತಃಪುರದಲ್ಲಿ ನಮ್ಮ ಕಾವಲಿನಲ್ಲಿರುವವಳನ್ನು ಬಿಡಿಸಿಕೊಂಡು ಹೋಗುವನೆಂಬ ಭ್ರಾಂತಿ ನಿನಗಿನ್ನೂ ಇದ್ದರೆ ನಿನ್ನಂತಹ ಅವಿವೇಕಿಗಳು ಇನ್ನಾರೂ ಇಲ್ಲ. ಯೌವನ ಅಸ್ಥಿರವಾದುದು. ಅದು ಕಳೆದು ಹೋಗುವುದಕ್ಕೆ ಮೊದಲೇ ಸಮಸ್ತ ಸುಖಗಳನ್ನೂ ಅನುಭವಿಸುವುದು ವಿವೇಕಿಯ ಲಕ್ಷಣ. ಪ್ರಭುವಾದ ರಾವಣೇಶ್ವರನೊಡನೆ ಉದ್ಯಾನವನಗಳಲ್ಲಿಯೂ ಪರ್ವತ ಪ್ರದೇಶಗಳಲ್ಲಿಯೂ ನದಿಯ ತೀರಗಳಲ್ಲಿಯೂ ಯಥೇಚ್ಛವಾಗಿ ವಿಹರಿಸುತ್ತಾ ಆನಂದಿಸು. ಇದಕ್ಕೆ ಒಪ್ಪಲಿಲ್ಲವೋ, ಇಲ್ಲಿ ನೋಡು, ಈಗಲೇ ನಿನ್ನ ಗುಂಡಿಗೆಯನ್ನು ಕಿತ್ತು ತಿಂದುಬಿಡುತ್ತೇನೆ” ಎಂದಳು. ಚಂಡೋದರಿಯೆಂಬ ಮತ್ತೊಬ್ಬ ರಾಕ್ಷಸಿ ಅಲ್ಲಿದ್ದವರೆಲ್ಲರನ್ನೂ ಕುರಿತು “ಎಲೆ, ಗೆಳತಿಯರಿರಾ, ಇವಳನ್ನು ಕಂಡಾಗಿನಿಂದ ನನಗೊಂದು ಹಿರಿಬಯಕೆ – ತಾವರೆಯ ಮೊಗ್ಗಿನಂತಿರುವ ಆ ಸ್ತನಗಳೆರಡನ್ನೂ, ಹೃದಯ ಭಾಗವನ್ನೂ ಕಿತ್ತು ತಿನ್ನಬೇಕೆಂಬುದು” ಎಂದಳು.

ಆಗ ಪ್ರಘಸೆಯೆಂಬುವಳು “ಎಲೆ, ಒಂದು ಉಪಾಯ ಮಾಡೋಣ. ಓ ಕಠಿಣಚಿತ್ತೆಯಾದ ಸೀತೆಯ ಕತ್ತು ಹಿಸಿಕಿಬಿಡೋಣ. ಆಮೇಲೆ ರಾಕ್ಷಸೇಶ್ವರನ ಬಳಿಗೆ ಹೋಗಿ, ‘ಈ ಮನುಷ್ಯಸ್ತ್ರೀ ಸತ್ತುಹೋದಳು’ ಎಂದು ಹೇಳಿಬಿಡೋಣ. ಆತನು ಅವಳನ್ನು ತಿಂದುಬಿಡಿರಿ ಎಂದು ಹೇಳುತ್ತಾನೆ. ಇದರಲ್ಲಿ ಸಂದೇಹವೇ ಇಲ್ಲ” ಎಂದಳು.

ಅದನ್ನು ಕೇಳಿ ಅಜಾಮುಖಿಯೆಂಬುವಳು, ಆಗಲೇ ರಾವಣನಿಂದ ಅಪ್ಪಣೆ ಬಂದವಳಂತೆ “ಎಲೆ ಸಖಿಯರೆ! ಈ ಸೀತೆಯನ್ನು ಸಣ್ಣ ತುಂಡುಗಳಾಗಿ ಹೆಚ್ಚಿ ರಾಶಿಹಾಕಿರಿ. ಜೇನುತುಪ್ಪವನ್ನು ತಂದು ಅದಕ್ಕೆ ಸುರಿಯೋಣ. ಆಮೇಲೆ ಮದ್ಯವನ್ನು ತಂದಿಟ್ಟುಕೊಂಡು ಊಟಕ್ಕೆ ಆರಂಭಿಸೋಣ” ಎಂದಳು. ಶೂರ್ಪನಖಿ ಎಂಬುವಳು ಸೀತೆಯನ್ನು ತಿಂದುಮುಗಿಸಿದ ಮೇಲೆ ಗ್ರಾಮದೇವತೆಯಾದ ನಿಕುಂಭಿಲೆಯ ಪ್ರೀತ್ಯರ್ಥವಾಗಿ ನರ್ತನ ಮಾಡಬೇಕೆಂದು ಸಲಹೆಯಿತ್ತಳು.

ರಾಕ್ಷಸಿಯರ ಈ ಮಾತುಗಳನ್ನು ಕೇಳಿ ಸೀತೆಯ ಜೀವ ತಲ್ಲಣಿಸಿತು. ಆಕೆ ಮುಂದೋರದೆ ಕಳವಳಪಡುತ್ತಾ ಆ ರಾಕ್ಷಸಿಯರನ್ನು ಕುರಿತು “ಎಲೌ ರಾಕ್ಷಸಿಯರೇ, ಮನುಷ್ಯಸ್ತ್ರೀ ರಾಕ್ಷಸನಿಗೆ ಪತ್ನಿಯಾಗುವುದೆಂತು? ಅದು ಉಚಿತವಲ್ಲ. ನೀವು ನನ್ನನ್ನು ಭಕ್ಷಿಸುವುದಾದರೆ ಅಗತ್ಯವಾಗಿಯೂ ಹಾಗೆ ಮಾಡಬಹುದು” ಎಂದಳು. ಹಿಂಡು ತಪ್ಪಿ ತೋಳಗಳ ಗುಂಪಿಗೆ ಸಿಕ್ಕಿ ಬಿದ್ದಿದ್ದ ಜಿಂಕೆಯ ಮರಿಯಂತೆ ಆಕೆ ತಲ್ಲಣಿಸುತ್ತಾ ಎದ್ದುನಿಂತು ಮರದ ಕೊಂಬೆಯೊಂದನ್ನು ಹಿಡಿದುಕೊಂಡು ಗೋಳೋ ಎಂದು ಅತ್ತಳು. “ಹಾ ರಾಮ! ಹಾ ಲಕ್ಷ್ಮಣಾ! ಅಯ್ಯೋ ಅತ್ತೆ, ಕೌಸಲ್ಯೆ! ಸುಮಿತ್ರೆ!” ಎಂಬ ಮಾತುಗಳು ಆಕೆಯ ಬಾಯಿಂದ ಅಪ್ರಯತ್ನವಾಗಿಯೆ ಹೊರಬಿದ್ದುವು. ತನಗೆ ಮರಣ ಬಂದರೆ ಸಾಕೆನಿಸಿತು. ಆಕೆಗೆ. “ಕಾಲ ಬರದೆ ಮರಣ ಬರದು; ನಾನು ಅಲ್ಪ ಪುಣ್ಯೆ, ಮರಣ ಬರುವಂತಿಲ್ಲ. ನಾನೇನು ತಾನೆ ಮಾಡಲಿ? ನನ್ನ ಸ್ವಾಮಿಯಾದ ರಾಮಚಂದ್ರಮೂರ್ತಿಯನ್ನು ಕಾಣುವ ಭಾಗ್ಯ ನಿರ್ಭಾಗ್ಯಳಾದ ನನಗೆ ಇಲ್ಲವಾಗಿದೆ. ಆತ್ಮವೇತ್ತನಾದ ಆತನನ್ನು ಅಗಲಿ, ಈ ಪರಿಯಾದ ದುಃಖಕ್ಕೆ ಒಳಗಾಗಬೇಕಾದರೆ ನಾನು ಪೂರ್ವಜನ್ಮದಲ್ಲಿ ಮಾಡಿರುವ ಪಾಪ ಸಾಧಾರಣವಾದುದಾಗಿರಲಾರದು. ಥೂ, ನಾನೇಕೆ ಬದುಕಿರಬೇಕು? ಸಾಯುವುದು ಖಂಡಿತವಾಗಿಯೂ ನನ್ನ ಕರ್ತವ್ಯ. ಆದರೆ ಪರಾಧೀನಳಾಗಿರುವ ನಾನು ಸಾಯುವುದಕ್ಕೂ ಸ್ವಾತಂತ್ರ್ಯವಿಲ್ಲದವಳಾಗಿದ್ದೇನೆ” ಎಂದು ಮನಸ್ಸಿನಲ್ಲಿಯೆ ತನ್ನನ್ನು ತಾನೇ ಧಿಕ್ಕರಿಸಿಕೊಂಡಳು: “ಧಿಕ್ ಈ ಮನುಷ್ಯತೆಗೆ! ಧಿಕ್ ಈ ಸ್ತ್ರೀ ಜನ್ಮಕ್ಕೆ! ಧಿಕ್ ಈ ಪರವಶತೆಗೆ!”