ಲಕ್ಷ್ಮಣ. . . . "ಅಣ್ಣ, ಧೀರನಾದ ನೀನು ಈ ರೀತಿ ದುಃಖಿಸ ಕೂಡದು"

ಇತ್ತ ಶ್ರೀರಾಮನು ಲಕ್ಷ್ಮಣನೊಡನೆ ಕ್ರೂರಮೃಗಗಳಿಂದ ತುಂಬಿದ ಪ್ರಸ್ರವಣಪರ್ವತಕ್ಕೆ ಬಂದನು. ಆ ಬೆಟ್ಟದ ತುದಿಯಲಿದ್ದ ವಿಸ್ತಾರವಾದ ಗುಹೆಯೊಂದರಲ್ಲಿ ವಾಸಮಾಡಲು ಆತನು ನಿಶ್ಚೈಸಿದನು. ತನ್ನ ಬಳಿಯಿದ್ದ ಲಕ್ಷ್ಮಣನನ್ನು ಕುರಿತು “ವತ್ಸ, ಈ ಗುಹೆ ರಮ್ಯವೂ ವಿಶಾಲವೂ ಆಗಿದೆ; ಗಾಳಿ ಇಲ್ಲಿ ತಂಪಾಗಿ ಬೀಸುತ್ತಿದೆ; ಬಣ್ಣಬಣ್ಣದ ಧಾತುಗಳೂ ಬಗೆಬಗೆಯ ಮರಬಳ್ಳಿಗಳೂ ಮನೋಹರವಾಗಿ ಹಾಡುವ ಹಕ್ಕಿಗಳೂ ಇಲ್ಲಿ ವಿಶೇಷವಾಗಿವೆ. ಚೆಲುವಾದ ಈ ಸ್ಥಳದಲ್ಲಿ ನೀರು ಸಮೃದ್ಧವಾಗಿದೆ. ಹತ್ತಿರದಲ್ಲಿಯೆ ದಡದ ನಾನಾವಿಧವಾದ ಗಿಡಗಳಿಂದ ಕೂಡಿ, ಒಡವೆಗಳಿಂದ ಅಲಂಕೃತಳಾದ ಹೆಂಗಸಿನಂತೆ ನದಿ ಹರಿಯುತ್ತಿದೆ. ಸುಗ್ರೀವನ ರಾಜಧಾನಿಯಾದ ಕಿಷ್ಕಿಂಧೆ ಇಲ್ಲಿಗೆ ಹತ್ತಿರವಾಗಿದೆ. ರಾಜಧಾನಿಯಲ್ಲಿ ಮೃದಂಗಧ್ವನಿಗಳೂ ವಾನರರ ಹರ್ಷಧ್ವನಿಗಳೂ ಕೇಳಿಬರುತ್ತಿವೆ. ಇವನ್ನು ಆಲಿಸಿದರೆ ಸುಗ್ರೀವನು ತನ್ನ ಹೆಂಡತಿಯೊಡನೆ ಸುಖವಾಗಿರುವಂತೆ ತೋರುತ್ತದೆ. ಈ ಮನೋಹರವಾದ ಗುಹೆಯಲ್ಲಿದ್ದು ವರ್ಷಾಕಾಲವನ್ನು ಕಳೆಯೋಣ’ ಎಂದನು.

ರಾಮಲಕ್ಷ್ಮಣರು ಆ ಗುಹೆಯಲ್ಲಿ ವಾಸಮಾಡುತ್ತ ದಿವಸಗಳನ್ನು ಕಳೆಯ ತೊಡಗಿದರು. ಪ್ರಾಣಕ್ಕಿಂತಲೂ ಪ್ರಿಯಳಾದ ಸೀತೆಯನ್ನು ಕಳೆದುಕೊಂಡ ರಾಮನಿಗೆ ಆ ಸುಂದರವಾದ ತಾಣ ಸುಖವನ್ನುಂಟುಮಾಡಲಿಲ್ಲ. ರಾತ್ರಿ ಅವನಿಗೆ ನಿದ್ದೆ ಬಾರದಾಯಿತು. ಸೀತೆಯನ್ನು ನೆನೆದು ರಾಮನು ಕಣ್ಣೀರು ಬಿಡತೊಡಗಿದನು. ದುಃಖಿತನಾದ ಅಣ್ಣನನ್ನು ನೋಡಿ ಲಕ್ಷ್ಮಣನು “ಅಣ್ಣ, ಧೀರನಾದ ನೀನು ಈ ರೀತಿ ದುಃಖಿಸಕೂಡದು. ನಿನ್ನ ಪರಾಕ್ರಮದಿಂದ ರಾವಣನನ್ನು ಕೊಂದು ಸೀತೆಯನ್ನು ಪೆಡಯಬಹುದು. ಶರತ್ಕಾಲ ಬರುತ್ತಲೆ ಆ ಕಾರ್ಯ ಸಾಧ್ಯವಾಗುವುದು. ಅಲ್ಲಿಯವರೆಗೆ ಈ ದುಃಖವನ್ನು ಸಹಿಸಿಕೊ” ಎಂದು ಸಂತೈಸಿದನು. ತಮ್ಮನ ಮಾತುಗಳಿಂದ ಸಮಾಧಾನಹೊಂದಿದ ರಾಮನು ವರ್ಷಾಕಾಲ ಕಳೆದು ಶರತ್ಕಾಲ ಬರುವುದನ್ನೆ ನಿರೀಕ್ಷಿಸತೊಡಗಿದನು. ಸುಗ್ರೀವನಿಂದ ತನಗೆ ಸಹಾಯ ಒದಗುವುದೆಂಬ ಆಸೆಯೂ ಈ ಸಮಾಧಾನಕ್ಕೆ ಕಾರಣವಾಯಿತು.

ರಾಮನು ಹೀಗೆ ಲಕ್ಷ್ಮಣನೊಡನೆ ವಾಸಮಾಡುತ್ತಿರಲು ವರ್ಷಾಕಾಲ ಮೊದಲಾಯಿತು. ಬಂಡೆಬಂಡೆಯ ಬೆಟ್ಟದಂತೆ ಗಾತ್ರಭೀಮವಾದ ಮೇಘಗಳು ಆಕಾಶವನ್ನು ಮುಚ್ಚಿ ಮರೆಮಾಡಿದುವು. ಸಂಜೆಗೆಂಪಿನಿಂದ ಕೆಂಪಾಗಿಯೂ ತುದಿಯಲ್ಲಿ ಬಿಳುಪಾಗಿಯೂ ಬಹು ಮೃದುವಾಗಿಯೂ ಇರುವ ಮೇಘಗಳೆಂಬ ಬಟ್ಟೆಯ ತುಂಡುಗಳಿಂದ ಕಟ್ಟಿದ ವ್ರಣದಂತೆ ಆಕಾಶವು ಶೋಭಿಸಿತು. ಕಾದ ಭೂಮಿಯ ಮೇಲೆ ಬಿದ್ದ ಮಳೆನೀರು ಅಗಲಿಕೆಯ ಸಂಕಟದಿಂದ ಭೂಮಿ ಕಣ್ಣೀರು ಕರೆಯುವಂತೆ ತೋರುತ್ತಿತ್ತು. ಕೇದಗೆಯ ಹೂವು ಅರಳಿ ಸುವಾಸನೆ ಬೀರತೊಡಗಿದುವು. ಕಪ್ಪಾದ ಮೇಘಗಳ ನಡುವೆ ಹೊಳೆಯುತ್ತಿದ್ದ ಮಿಂಚು ಶ್ರೀರಾಮನಿಗೆ ರಾವಣನ ತೊಡೆಯಲ್ಲಿ ದೀನಳಾಗಿ ಸಂಕಟಪಡುತ್ತಿದ್ದ ಸೀತೆಯ ನೆನಪನ್ನು ತರುತ್ತಿತ್ತು. ಧೂಳಡಗಿ ಗಾಳಿ ತಣ್ಣಗೆ ಬೀಸತೊಡಗಿತು. ಮೇಘಗಳಿಂದ ಮುಚ್ಚಿಹೋದ ಗಗನದಲ್ಲಿ ಸೂರ್ಯಚಂದ್ರರಾಗಲಿ ಗ್ರಹತಾರೆಗಳಾಗಲಿ ಕಾಣಬರಲಿಲ್ಲ. ಪ್ರಿಯರನ್ನು ನೆನೆದು ಪ್ರವಾಸಿಗಳು ಗೃಹಾಭಿಮುಖರಾಗಿ ನಡೆಯತೊಡಗಿದರು. ನೇರಿಳೆಹಣ್ಣು ಬಿರಿತು ತಿನ್ನಲು ಅನುಕೂಲವಾದುವು. ಗಾಳಿಯ ಹೊಡೆತದಿಂದ ಮಾವಿನಹಣ್ಣು ನೆಲಕ್ಕೆ ಉದುರಿದವು. ಮಳೆನೀರಿನಿಂದ ನೆನೆದು ಹುಲ್ಲೆದ್ದ ಪ್ರದೇಶಗಳಲ್ಲಿ ನವಿಲುಗಳು ನರ್ತಿಸತೊಡಗಿದುವು. ಮದ್ದಾನೆಗಳಂತಿದ್ದ ಮೇಘಗಳು ಪರ್ವತ ಶಿಖರಗಳಲ್ಲಿ ನಿಂತು ನಿಧಾನವಾಗಿ ಚಲಿಸುವ ನೋಟ ಎಲ್ಲರ ಕಣ್‌ಮನಗಳನ್ನು ಸೆಳೆಯುವಂತಿತ್ತು. ಹಾರಿಹೋಗುತ್ತಿದ್ದ ಕೊಕ್ಕರೆಗಳ ಸಾಲು ಗಗನಕ್ಕೆ ಬೆಳ್‌ದಾವರೆಯ ಮಾಲೆಯನ್ನು ಕಟ್ಟಿದಂತೆ ಒಪ್ಪುತ್ತಿತ್ತು. ಹೊಸಹುಲ್ಲೆಂಬ ಹಸುರುಡೆಯುಟ್ಟು ನಡುವೆ, ಇಂದ್ರಗೋಪವೆಂಬ ಹುಳುಗಳನ್ನುಳ್ಳ ಭೂಮಿ, ಹಸುರುಡೆಯುಟ್ಟು ಕಾಲಿಗೆ ಲಾಕ್ಷಾರಸವನ್ನು ಧರಿಸಿದ ಸ್ತ್ರೀಯಂತೆ ಕಂಗೊಳಿಸಿತು. ನೀರಿನಿಂದ ತುಂಬಿಹೋದ ನದಿಗಳು ಸಮುದ್ರವನ್ನು ಕುರಿತು ವೇಗವಾಗಿ ಹರಿಯತೊಡಗಿದುವು. ಅರಳಿದ ಹೂವುಗಳನ್ನೂ ಕುಣಿಯುವ ನವಿಲನ್ನೂ ಕಂಡು ಸ್ತ್ರೀಪುರುಷರು ತಮ್ಮ ಪ್ರಿಯರನ್ನು ನೆನೆದರು. ಮುತ್ತುದುರುವಂತೆ ಎಲೆಗಳಿಂದ ಬೀಳುತ್ತಿದ್ದ ಹನಿನೀರನ್ನು ಕುಡಿದು ಹಕ್ಕಿಗಳು ಸಂತೋಷಗೊಂಡುವು. ಮೇಘಗಳು ಸಮುದ್ರದಂತೆ ಭೋರ್ಗರೆಯುತ್ತ ಮಳೆಯನ್ನು ಸುರಿಸತೊಡಗಿದುವು. ಬೆಟ್ಟದ ಶಿಖರಗಳೂ ನೆಲವೂ ನೀರಿನಿಂದ ನೆನೆದು ಶುಚಿಯಾದುವು. ಪರ್ವತಗಳಿಂದ ಹರಿಯುತ್ತಿದ್ದ ಝರಿಗಳಿಂದ ಬೆಟ್ಟಗಳಿಗೆ ಮುತ್ತಿನ ಹಾರದ ಅಲಂಕಾರವನ್ನು ಮಾಡಿದಂತೆ ತೋರುತ್ತಿತ್ತು. ಸರೋವರಗಳಲ್ಲಿ ಕಮಲಗಳು ಅರಳಿ ಭೂದೇವಿಯ ಹರ್ಷವನ್ನು ಸೂಚಿಸುತ್ತಿದ್ದುವು.

ಮನೋಹರವಾದ ವರ್ಷಾಕಾಲವನ್ನು ನೋಡಿ ಶ್ರೀರಾಮನು ಸೀತೆಯನ್ನು ನೆನೆದು ದುಃಖಿತನಾದನು. ಸರಯೂ ನದಿಯ ಪೂರ್ಣ ಪ್ರವಾಹ, ಭರತನು ಆಚರಿಸುವ ಆಷಾಡ, ಶುದ್ಧ ಪೌರ್ಣಮಿಯ ವ್ರತ, ಆ ಸಂದರ್ಭದಲ್ಲಿ ಪಟ್ಟಣಿಗರ ಆನಂದ, ಇವೆಲ್ಲ ರಾಮನಿಗೆ ನೆನಪಾಗಿ ಅವನ ಶೋಕವನ್ನು ಇಮ್ಮಡಿಸಿದುವು. ರಾಜ್ಯ ಕೈಬಿಟ್ಟುದು, ಹೆಂಡತಿಯ ಅಪಹರಣ, ಪ್ರಬಲವಾದ ಹಗೆಯೊಡನೆ ವೈರ ಇವು ಒಂದಕ್ಕಿಂತ ಒಂದು ಸಂಕಟಗೊಳಿಸತಕ್ಕುವಾಗಿ ಶ್ರೀರಾಮನಿಗೆ ತೋರಿದುವು. ಆದರೂ ತಾನು ಮಾಡಿರುವ ಉಪಕಾರವನ್ನು ನೆನೆದು ಸುಗ್ರೀವನು ಸೀತೆಯನ್ನು ಹುಡುಕಿಸಿಕೊಡುವ ಕಾರ್ಯದಲ್ಲಿ ತನಗೆ ನೆರವಾಗುವನೆಂದು ಸಮಾಧಾನಗೊಂಡನು.

ಶರತ್ಕಾಲದ ಬರುವಿಕೆಯನ್ನೆ ಇದಿರುನೋಡತ್ತ ಶ್ರೀರಾಮನು ಮಳೆಗಾಲವನ್ನು ಕಳೆದನು. ಆಕಾಶ ನಿರ್ಮಲವಾಯಿತು. ಇತ್ತ ಸುಗ್ರೀವನಾದರೋ ರಾಜಕಾರ್ಯಗಳನ್ನು ಮಂತ್ರಿಗಳಿಗೆ ವಹಿಸಿ, ಹೆಂಡತಿಯಾದ ರುಮೆಯೊಡನೆಯೂ ತಾರೆಯೊಡನೆಯೂ ಸುಖವಾಗಿ ಕಾಲಕಳೆಯುತ್ತಿದ್ದನು. ರಾಮಕಾರ್ಯಕ್ಕಾಗಿ ಸುಗ್ರೀವನನ್ನು ಎಚ್ಚರಗೊಳಿಸಲು ಹನುಮಂತನು ಅವನ ಬಳಿಗೆ ಬಂದು ಮೃದುವಾದ ಮಾತುಗಳಿಂದ ಈ ರೀತಿ ನುಡಿದನು: “ಪ್ರಭೋ, ನಿನಗೆ ರಾಜ್ಯಕೋಶಗಳು ಕೈವಶವಾದುವು. ಮಿತ್ರರು ದೊರಕಿದರು. ನಿನ್ನ ರಾಜ್ಯಕೋಶಗಳು ಏಳಿಗೆ ಹೊಂದಬೇಕಾದರೆ ನೀನು ಉಳಿದ ಕಾರ್ಯಗಳೆಲ್ಲವನ್ನೂ ಬಿಟ್ಟು ನಿನ್ನ ಸ್ನೇಹಿತನ ಕೆಲಸವನ್ನು ಮಾಡಿಕೊಡತಕ್ಕದ್ದು. ಕಾಲ ಮೀರುವುದಕ್ಕೆ ಮುಂಚೆ ಮಹಾತ್ಮನಾದ ಶ್ರೀರಾಮನ ಕಾರ್ಯವಾಗಿರುವ ಸೀತಾನ್ವೇಷಣಕಾರ್ಯಕ್ಕೆ ಎಲ್ಲ ಸಿದ್ದತೆಯನ್ನೂ ಮಾಡು, ದೇವದಾನವರನ್ನು ದಮನಮಾಡಲು ಶಕ್ತನಾದ ಶ್ರೀರಾಮನು ನೀನು ಕೊಟ್ಟ ಮಾತನ್ನು ನಡೆಸಿಕೊಡುವುದನ್ನೇ ಇದಿರು ನೋಡುತ್ತಿದ್ದಾನೆ. ಮೂರು ಲೋಕಗಳಲ್ಲಿದ್ದರೂ ನಾವು ಸೀತೆಯನ್ನು ಹುಡುಕಿ ರಾಮನಿಗೆ ಪ್ರಿಯನ್ನುಂಟುಮಾಡಬೇಕು. ”

ಕಾಲೋಚಿತವಾದ ಹನುಮಂತನ ನುಡಿಗಳಿಂದ ರಾಮಕಾರ್ಯ ವಿಚಾರದಲ್ಲಿ ಸುಗ್ರೀವನು ಎಚ್ಚರಗೊಂಡನು. ಸೀತೆಯನ್ನು ಹುಡುಕುವ ಕಾರ್ಯಕ್ಕಾಗಿ ಸೇನಾಪತಿಯಾದ ನೀಲನನ್ನು ಕರೆಸಿ ಅವನಿಗೆ ಸುಗ್ರೀವನು “ನನ್ನ ಸೇನೆಯೆಲ್ಲವೂ ಇಲ್ಲಿಗೆ ಜಾಗ್ರತೆಯಾಗಿ ಬರುವಂತೆ ಅಜ್ಞಾಪಿಸು. ಅಲ್ಲದೆ ಉಳಿದ ವಾನರ ವೀರರೆಲ್ಲರೂ ಇಲ್ಲಿಗೆ ಬರಲಿ. ಹಾಗೆ ಬಂದ ವೀರರಿಗೆಲ್ಲ ನೀನು ಸೇನಾಪತಿಯಾಗಿ ಅವರನ್ನು ನಡಸು. ಹದಿನೈದು ದಿನ ಕಳೆದು ಹದಿನಾರನೆಯ ದಿನ ಯಾರು ಇಲ್ಲಿಗೆ ಬರುವುದಿಲ್ಲವೊ ಅವರಿಗೆ ಮರಣ ದಂಡನೆಯೆಂದು ಸಾರಿಸು. ಈ ವಿಷಯದಲ್ಲಿ ವಿಮರ್ಶೆಗೆ ಅವಕಾಶವೆ ಇಲ್ಲ. ಅಂಗದನನ್ನು ಮುಂದಿಟ್ಟುಕೊಂಡು ಈ ನನ್ನ ಆಜ್ಞೆಯನ್ನು ಜಾಂಬವನೆ ಮೊದಲಾದ ಎಲ್ಲ ವೀರರಿಗೂ ತಿಳಿಸು” ಎಂದು ಅಪ್ಪಣೆಮಾಡಿ ಅಂತಃಪುರವನ್ನು ಸೇರಿಬಿಟ್ಟನು.

ವರ್ಷಾಕಾಲ ಕಳೆದು ಮೆಲ್ಲನೆ ಶರತ್‌ಕಾಲ ಕಾಲಿಟ್ಟಿತು. ಮೋಡಗಳಿಲ್ಲದ ಆಕಾಶ ನಿರ್ಮಲವಾಯಿತು. ಚಂದ್ರಮಂಡಲ ಶುಭ್ರವಾಯಿತು. ರಾತ್ರಿಯ ಕಾಲದಲ್ಲಿ ಹಾಲುಚೆಲ್ಲಿದಂತಿದ್ದ ಬೆಳುದಿಂಗಳು ಕಾಮಿಗಳಿಗೆ ಮೋಹವನ್ನುಂಟುಮಾಡತೊಡಗಿತು. ತಂಪಾದ ಬೆಳುದಿಂಗಳು ಗೈರಿಕಾದಿ ಧಾತುಗಳಿಂದ ಸಿಂಗಾರಗೊಂಡ ಗಿರಿಶಿಖರದ ಚೆಲುವು, ಶುಭ್ರವಾದ ಮತ್ತು ನಿರ್ಮಲವಾದ ಆಕಾಶ, ಸಾರಸ ಪಕ್ಷಿಗಳ ಇಂಪಾದ ಕೂಗು, ಇವೆಲ್ಲವನ್ನೂ ನೋಡಿ ರಾಮನ ಮನಸ್ಸು ಸೀತೆಯನ್ನು ನೆನೆದು ಕರಗಿಹೋಯಿತು. ಹಿಂದೆ ಸೀತೆಯೊಡನೆ ಶರತ್ ಕಾಲದಲ್ಲಿ ತಾನು ನಡೆಯಿಸುತ್ತಿದ್ದ ವಿಹಾರವನ್ನೂ ಈಗ ತಾನಿಲ್ಲದೆ ಸೀತೆ ಕಷ್ಟಪಡುತ್ತಿರುವುದನ್ನೂ ನೆನೆದು ರಾಮನ ಮನಸ್ಸು ಚಂಚಲವಾಯಿತು. ಆಗತಾನೆ ಹಣ್ಣುಹಂಪಲುಗಳನ್ನು ಆಯ್ದು ತಂದಿದ್ದ ಲಕ್ಷ್ಮಣನನ್ನು ಕುರಿತು ಸೀತೆಯ ಅಗಲಿಕೆಯಿಂದ ದುಃಖಿತನಾದ ರಾಮನು ಕಂಬನಿದುಂಬಿ ಈ ರೀತಿ ನುಡಿದನು; “ವತ್ಸ ಲಕ್ಷ್ಮಣ, ದೇವೇಂದ್ರನು ಮಳೆ ಸುರಿಸಿ ಭೂಮಿಯನ್ನು ತೃಪ್ತಿಗೊಳಿಸಿದನು; ಸಸ್ಯಗಳನ್ನು ಪೋಷಿಸಿ ಧನ್ಯನೆನಿಸಿದನು. ಮೇಘಗಳ ವೇಗ, ಗರ್ಜನೆ ಇವು ಕಡಮೆಯಾದುವು. ನವಿಲುಗಳು ತಮ್ಮ ಕುಣಿತವನ್ನು ನಿಲ್ಲಿಸಿವೆ. ಬಾಳೆಯ ಕೊಂಬೆಯಲ್ಲಿಯೂ ನಕ್ಷತ್ರ ಚಂದ್ರಸೂರ್ಯರಲ್ಲಿಯೂ ತನ್ನ ಕಾಂತಿಯನ್ನು ಹರಡಿ ಈ ಶರತ್ಕಾಲ ಕಂಗೊಳಿಸುತ್ತಿದೆ. ಸರೋವರಗಳಲ್ಲಿ ಅರಳಿದ ಕಮಲಗಳ ಕಾಂತಿಕಂಪುಗಳು ಸೂಸುತ್ತಿವೆ. ಆಕಾಶ ಹೊಳೆಯವ ಅಲಗಿನ ಬಣ್ಣವನ್ನು ತಳೆಯಿತು. ನದಿಗಳ ಪ್ರವಾಹದ ವೇಗ ಕಡಮೆಯಾಗಿ ಅವು ಮಂದವಾಗಿ ಹರಿಯುತ್ತಿವೆ. ಹೆಣ್ಣಾನೆಗಳು ಗಂಡಾನೆಗಳನ್ನು ಅನುಸರಿಸಿ ಹೋಗುವುದನ್ನು ನೋಡು, ಸರೋವರದಲ್ಲಿ ಸಂತೋಷದಿಂದ ಹಂಸ ಪಕ್ಷಿಗಳು ಕ್ರೀಡಿಸುತ್ತಿವೆ. ಇಗೋ! ರಾಜರಿಗೆ ವಿಜಯಯಾತ್ರೆಯ ಕಾಲ ಹತ್ತಿರವಾಯಿತು. ಆದರೆ ಸೀತೆಯನ್ನು ಹುಡುಕಿಸಲು ಸುಗ್ರೀವನು ಯಾವ ಪ್ರಯತ್ನವನ್ನೂ ಮಾಡಿರುವಂತೆ ತೋರುವುದಿಲ್ಲ. ನನಗೆ ರಾಜ್ಯ ಹೋಯಿತು. ಈಗ ಹೆಂಡತಿಯಿಂದ ನಾನು ವಿರಹಹೊಂದಿದ್ದೇನೆ. ಆದರೂ ಸುಗ್ರೀವನ ದಯೆ ನನ್ನ ಮೇಲುಂಟಾಗಲಿಲ್ಲ. ದುರ್ಬುದ್ಧಿಯುಳ್ಳ ಸುಗ್ರೀವನು ಸೀತಾನ್ವೇಷಣಕ್ಕೆ ಪ್ರತಿಜ್ಞೆಮಾಡಿ, ವಿಷಯಸುಖದಲ್ಲಿ ಮತ್ತನಾಗಿ ಈಗ ಅದನ್ನು ಮರೆತಂತಿದೆ. ನೀನು ಈಗ ಕಿಷ್ಕಿಂಧೆಗೆ ಹೋಗಿ ಕಾಮಾಸಕ್ತನಾಗಿರುವ ಆ ಮೂರ್ಖ ಸುಗ್ರೀವನಿಗೆ ನನ್ನ ಈ ಮಾತನ್ನು ತಿಳಿಸು: ‘ಮೊದಲು ಆಸೆಯನ್ನು ಹುಟ್ಟಿಸಿ ಯಾರು ಆ ಬಳಿಕ ಅದನ್ನು ಭಂಗಗೊಳಿಸುವರೊ ಅವರು ಪುರುಷಾಧಮರು. ಯಾರು ಮಿತ್ರರಿಂದ ಉಪಕಾರ ಹೊಂದಿ ಆ ಬಳಿಕ ಮಿತ್ರರಿಗೆ ಉಪಕಾರಿಗಳಾಗುವುದಿಲ್ಲವೊ ಅವರ ಮಾಂಸವನು ಪಿಶಾಚಿಗಳೂ ಹದ್ದುಗಳೂ ಕೂಡ ತಿನ್ನವು.’ ನನ್ನ ಬಿಲ್ಲಿನ ಟಂಕಾರವನ್ನು ಮತ್ತೊಮ್ಮೆ ಕೇಳುವ ಬಯಕೆ ಸುಗ್ರೀವನಿಗಿರುವಂತೆ ತೋರುತ್ತದೆ. ನನ್ನ ತೋಳ್‌ಬಲವನ್ನು ಕಂಡು ಸುಗ್ರೀವನಿಗೆ ಎಚ್ಚರವುಂಟಾಗಲಿಲ್ಲ. ಸುಗ್ರೀವನಿಗಾದರೊ ತನ್ನ ಕೋರಿಕೆ ಈಡೇರಿತು. ಈಗ ಸುಖಮಗ್ನನಾದ ಅವನು ದೀನರಾದ ನಮ್ಮನ್ನು ನೆನೆದುಕೊಳ್ಳಲಿಲ್ಲವಲ್ಲ! ನಾನು ಮಿತ್ರಕಾರ್ಯಕ್ಕಾಗಿ ವಾಲಿಯೊಬ್ಬನನ್ನೆ ಹೊಡೆದು ಕೊಂದೆ. ಈಗ ಕೊಟ್ಟ ಭಾಷೆಯನ್ನು ಮೀರಿದ ಸುಗ್ರೀವನನ್ನೂ ಬಂಧುಬಾಂಧವರೊಡನೆ ಕೊಲ್ಲುವನೆಂದು ತಿಳಿಸು. ಅಲ್ಲದೆ ವ್ಯರ್ಥವಾಗಿ ಯಮನನ್ನು ಕಾಣುವುದು ಉಚಿತವಲ್ಲವೆಂದೂ ಆತನಿಗೆ ಹೇಳು. ”

ದುಃಖಭಾರದಿಂದ ಕುಗ್ಗಿಹೋದ ಅಣ್ಣನನ್ನು ನೋಡಿ ಲಕ್ಷ್ಮಣನು “ಅಣ್ಣ, ಕಪಿಗೆ ಒಳ್ಳೆಯ ನಡವಳಿಕೆ ಎಲ್ಲಿಂದ ಬಂತು? ಅಗ್ನಿಸಾಕ್ಷಿಯಾಗಿ ಸ್ನೇಹ ಬೆಳೆಸಿದ ಸುಗ್ರೀವನು ಕಾರ್ಯಸಾಧನೆಗೆ ಮನಸ್ಸು ತರಲಿಲ್ಲ. ದ್ರೋಹಿಯಾದ ಸುಗ್ರೀವನು ರಾಜನಾಗಲು ತಕ್ಕವನಲ್ಲ. ನಾನಾದರೊ ಈಗ ಕೋಪವನ್ನು ತಡೆಯಲಾರೆ. ಸುಗ್ರೀವನನ್ನು ಈಗಲೆ ಸಂಹರಿಸಿಬಿಡುತ್ತೇನೆ. ಅಂಗದವನಿಗೆ ಪಟ್ಟವನ್ನು ಕಟ್ಟುತ್ತೇನೆ. ಅವನೇ ಸೀತಾನ್ವೇಷಣ ಕಾರ್ಯದಲ್ಲಿ ತೊಡಗಲಿ” ಎಂದು ಗರ್ಜಿಸಿದನು. ಸುಗ್ರೀವನನ್ನು ಕೊಲ್ಲಲ್ಲು ಬಿಲ್ಲುಬಾಣಗಳನ್ನೆತ್ತಿದ ತಮ್ಮನ ಕೋಪವನನು ಕಂಡು ರಾಮನು “ವತ್ಸ, ನಿನಗೆ ಈ ಕೋಪ ತರವಲ್ಲ. ಸತ್ಪುರುಷರು ಮಿತ್ರವಧೆಯನ್ನು ಮಾಡಕೂಡದು. ಉಪಾಯದಿಂದಲೇ ಸುಗ್ರೀವನನ್ನು ದಾರಿಗೆ ತರಬೇಕು’ ಎಂದು ಅವನ ಕೋಪವನ್ನಿಳಿಸಿ ಅವನನ್ನು ಕಿಷ್ಕಿಂಧೆಗೆ ಕಳುಹಿಸಿಕೊಟ್ಟನು.

* * *