ಅನಂತರ ರಾಮಲಕ್ಷ್ಮಣರು ಸುಗ್ರೀವನೊಡನೆ ಕಿಷ್ಕಿಂಧೆಗೆ ಹೊರಟು, ಆ ದುರ್ಗನಗರದ ಬಳಿಯಿದ್ದ ಕಾಡೊಂದರಲ್ಲಿ ಮರಗಳ ಹಿಂದೆ ಅವಿತು ನಿಂತರು. ಆಗ ಸುಗ್ರೀವನು ಯುದ್ಧಕ್ಕೆ ಸನ್ನದ್ದನಾಗಿ ಗಗನವನ್ನು ಭೇದಿಸುವ ಧ್ವನಿಯಿಂದ ಕಾಕು ಹಾಕಿ ವಾಲಿಯನ್ನು ಕಾಳಗಕ್ಕೆ ಕರೆದನು. ವಾಲಿ ಸ್ವಭಾವದಿಂದಲೆ ಮುಂಗೋಪಿ. ಹೀಗಿರುವಲ್ಲಿ ಸುಗ್ರೀವನ ಧ್ವನಿ ಕೇಳಿದ ಮೇಲೆ ಕೇಳಬೇಕೆ? ಉದಯಾಚಲದಿಂದ ಹೊರಟುಬರುವ ಸೂರ್ಯನಂತೆ ವಾಲಿ ಸುಗ್ರೀವನಿಗೆ ಕಾಡಿನ ಗಬ್ದದಿಂದ ಮೂಡಿದಂತೆ ಇದಿರಾಗಿ ಬಂದನು. ಆಗ ಆಕಾಶದಲ್ಲಿ ಬುಧನಿಗೂ ಮಂಗಳನಿಗೂ ಯುದ್ಧವಾಗುವಂತೆ ಅಣ್ಣತಮ್ಮಂದಿರಿಗೆ ಯುದ್ಧ ಮೊದಲಾಯಿತು. ಸಿಡಿಲಿಗೆ ಸಮಾನವಾದ ಅಂಗೈಗಳಿಂದ, ವಜ್ರಾಯುದ್ಧಕ್ಕೆ ಸರಿಯೆನಿಸುವ ಮುಷ್ಟಿಗಳಿಂದ ಒಬ್ಬರೊಬ್ಬರಿಗೆ ಯುದ್ಧ ನಡೆಯಿತು. ಇತ್ತ ಮರಗಳ ಮರೆಯಲ್ಲಿ ಅಡಗಿದ್ದ ರಾಮನಿಗೆ ಅಶ್ವಿನೀಕುಮಾರರಂತಿದ್ದ ವಾಲಿಸುಗ್ರೀವರನ್ನು ಕಂಡು ವಾಲಿ ಯಾರು, ಸುಗ್ರೀವನಾರು ಎಂಬುದು ತಿಳಿಯದಾಯಿತು. ಹೀಗೆ ಮನಸ್ಸು ಸಂಶಯದಲ್ಲಿದ್ದ ಕಾರಣ ರಾಮನು ಬಾಣಬಿಡಲಿಲ್ಲ. ಈ ನಡುವೆ ಸುಗ್ರೀವನು ವಾಲಿಯಿಂದ ಬಲವಾಗಿ ಪೆಟ್ಟು ತಿಂದು, ಶ್ರೀರಾಮನನ್ನು ಕಾಣದೆ ಋಷ್ಯಮೂಕಪರ್ವತಕ್ಕೆ ಓಡಿಹೋದನು. ತೇಜಸ್ವಿಯಾದ ವಾಲಿ ಋಷಿಶಾಪಕ್ಕೆ ಹೆದರಿ “ಇದೊಮ್ಮೆ ನಿನ್ನನ್ನು ಬಿಟ್ಟಿದ್ದೇನೆ; ಬದುಕಿಕೊ!” ಎಂದು ಹೇಳಿ ರಾಜಧಾನಿಗೆ ಹಿಂದಿರುಗಿ ಬಂದನು.

ಆಯಾಸದಿಂದ ಬಳಲಿ, ರಕ್ತದಿಂದ ಮೈ ನೆನೆದು, ಸುಗ್ರೀವನು ರಾಮನ ಬಳಿಗೆ ಬಂದು, ನಾಚಿಕೆಯಿಂದ ನೆಲವನ್ನು ನೋಡುತ್ತ ದೈನ್ಯದಿಂದ ಈ ರೀತಿ ನುಡಿದನು: “ರಾಮಚಂದ್ರ, ವಾಲಿಯನ್ನು ಕದನಕ್ಕೆ ಕರೆ ಎಂದು ನನ್ನೊಡನೆ ಹೇಳಿಕಳುಹಿಸಿದೆ. ಮೊದಲು ನಿನ್ನ ಪರಾಕ್ರಮವನ್ನು ತೋರಿ ನನಗೆ ಭರವಸೆಯನ್ನು ಕೊಟ್ಟು, ಆ ಬಳಿಕ ವಾಲಿಯಿಂದ ನನ್ನನ್ನು ಚೆನ್ನಾಗಿ ಹೊಡೆಯಿಸಿದೆ. ವಾಲಿಯನ್ನು ಕೊಲ್ಲಲಾರೆನೆಂದು ನೀನು ಮೊದಲೇ ಹೇಳಿದ್ದರೆ ಇಲ್ಲಿಂದ ನಾನು ಹೊರಡುತ್ತಲೆ ಇರಲಿಲ್ಲ. ” ದೈನ್ಯದಿಂದಲೂ ಕರುಣೆಯಿಂದಲೂ ಕೂಡಿದ ಸುಗ್ರೀವನ ಮಾತನ್ನು ಕೇಳಿ ರಾಮನು “ಅಯ್ಯಾ ಸ್ನೇಹಿತ, ನನ್ನ ಮೇಲೆ ಸಿಟ್ಟಾಗಬೇಡ. ನೀವಿಬ್ಬರೂ ಯುದ್ಧ ಮಾಡುತ್ತಿರುವಾಗ ವಾಲಿಯನ್ನು ವಧಿಸಲು ಬಾಣಬಿಡದಿರಲು ಕಾರಣವನ್ನು ಹೇಳುತ್ತೇನೆ ಕೇಳು. ಅಲಂಕಾರದಿಂದಾಗಲಿ ವೇಷದಿಂದಾಗಲಿ ನಡುಗೆಯಿಂದಾಗಲಿ ತೇಜಸ್ಸಿನಿಂದಾಗಲಿ ಕಂಠಸ್ವರದಿಂದಾಗಲಿ ಮತ್ತು ಪರಾಕ್ರಮದಿಂದಾಗಲಿ ಸರ್ವಸಮರಾಗಿರುವ ನಿಮ್ಮಿಬ್ಬರಿಗೂ ಇರುವ ಭೇದವನ್ನು ತಿಳಿಯಲಾರದೆ ಹೋದೆ. ರೂಪಸಾದೃಶ್ಯವನ್ನು ಕಂಡು, ಮೋಸ ಹೋಗಿ ಪ್ರಮಾದವಾದೀತೆಂದು ಘೋರವಾದ ಬಾಣವನ್ನು ಬಿಡಲು ನನ್ನ ಕೈಬಾರದಾಯಿತು. ಭಾಷೆಕೊಟ್ಟು ಅದರಂತೆ ನಡೆಯದಿರುವುದು ಮಹಾಪಾಪವೆಂದು ನನಗೆ ತಿಳಿಯದೆ? ನೀನು ತಿರುಗಿ ಹೋಗಿ ಯುದ್ಧಮಾಡು. ಒಂದು ಮುಹೂರ್ತದಲ್ಲಿಯೆ ಅವನನ್ನು ಕೊಂದು ಕೆಡಹುತ್ತೇನೆ” ಎಂದು ತಮ್ಮನ ಕಡೆ ತಿರುಗಿ “ಲಕ್ಷ್ಮಣ, ದ್ವಂದ್ವಯುದ್ಧದಲ್ಲಿ ಸುಗ್ರೀವನನ್ನು ಗುರುತಿಸಲು ಈ ಗಜಪುಷ್ಟವೆಂಬ ಬಳ್ಳಿಯನ್ನು ಕಿತ್ತು ಅದಿರಂದ ಸುಗ್ರೀವನ ಕೊರಳನ್ನು ಸಿಂಗರಿಸು” ಎಂದನು.

ಅಣ್ಣನ ಮಾತಿನಂತೆ ಲಕ್ಷ್ಮಣನು ಗಜಪುಷ್ಷವೆಂಬ ಬಳ್ಳಿಯಿಂದ ಸುಗ್ರೀವನ ಕೊರಳನ್ನು ಸಿಂಗರಿಸಿದನು. ತಾರೆಗಳ ಹಾರದಿಂದ ಅಲಂಕೃತನಾದ ಚಂದ್ರನಂತೆ ಕಂಗೊಳಿಸುತ್ತಿದ್ದ ಸುಗ್ರೀವನು ಸಮಾಧಾನಗೊಂಡು ರಾಮಲಕ್ಷ್ಮಣರೊಡಗೂಡಿ ಮತ್ತೆ ಕಿಷ್ಕಿಂಧೆಗೆ ಬಂದನು. ರಾಮಲಕ್ಷ್ಮಣರೂ ಸುಗ್ರೀವನ ಮಂತ್ರಿಗಳೂ ಮರಗಳ ಹಿಂದೆ ನಿಂತರು. ಸುಗ್ರೀವನಾದರೊ ಗಗನವನ್ನೇ ಸೀಳುವಂತೆ ಧ್ವನಿಗೈಯುತ್ತ ವಾಲಿಯನ್ನು ಮತ್ತೆ ಕದನಕ್ಕೆ ಕರೆದನು. ತಮ್ಮನ ಕರ್ಕಶವಾದ ಧನಿಕೇಳಿ ತನ್ನ ರಾಣೀವಾಸದಲ್ಲಿದ್ದ ವಾಲಿ ರೋಷದಿಂದ ಬುಸುಗುಟ್ಟುತ್ತ ಹೊರಗೆ ಬಂದನು. ಆಗ ಅವನ ಕಾಲುಗಳು ನಡುಗಿದವು; ಶಕ್ತಿ ಕುಗ್ಗಿದಂತೆ ತೋರಿತು. ಅಗ್ನಿಯಂತೆ ಜ್ವಲಿಸುತ್ತಿದ್ದ ವಾಲಿ ಹೊರಹೊರಟುದನ್ನು ಕಂಡು ಅವನ ಹೆಂಡತಿಯಾದ ತಾರೆ ಪ್ರೇಮದಿಂದ “ಆರ್ಯಪುತ್ರ, ನದಿಯ ವೇಗದಂತೆ ಬಂದಿರುವ ಈ ಕೋಪವನ್ನು ಬಿಡು. ಈ ಪ್ರಾತಃಕಾಲದಲ್ಲಿ ನೀನು ಸುಗ್ರೀವನೊಡನೆ ಯುದ್ಧಕ್ಕೆ ಹೊರಟಿರುವುದು ನನಗೆ ರುಚಿಸದು. ಈ ಮೊದಲೆ ನಿನ್ನಿಂದ ಏಟು ತಿಂದು ಹೋದ ಸುಗ್ರೀವನು ಮತ್ತೆ ಈಗ ಯುದ್ಧಕ್ಕೆ ಬಂದಿರುವುದನ್ನು ನೋಡಿದರೆ ಅವನು ಅಸಹಾಯನಾಗಿ ಬಂದಿರಲಾರನು. ಪ್ರಳಯಕಾಲದ ಅಗ್ನಿಗೆ ಸಮಾನರಾದ ಇಕ್ಷ್ವಾಕುವಂಶದ ಅರಸರಾದ ರಾಮಲಕ್ಷ್ಮಣರು ಸುಗ್ರೀವನಿಗೆ ಸಹಾಯಕರಾಗಿ ಬಂದಿರುವೆಂದು ಅಂಗದಕುಮಾರನು ನನಗೆ ಹೇಳಿದನು. ಧೀರನೂ ಗುಣಸಂಪನ್ನನೂ ಆದ ರಾಮನಲ್ಲಿ ವೈರ ಉಚಿತವಲ್ಲ. ಆದ್ದರಿಂದ ಶ್ರೀರಾಮನಲ್ಲಿ ಸ್ನೇಹವನ್ನು ಬೆಳಸಿ. ಸುಗ್ರೀವನಲ್ಲಿ ಕೋಪವನ್ನು ಬಿಟ್ಟು ಅವನನ್ನು ತಾಯಿನೆಲಕ್ಕೆ ಮತ್ತೆ ಕರೆಸಿಕೊಂಡು ಯೌವರಾಜ್ಯದಲ್ಲಿ ಅಭಿಷೇಕಮಾಡು. ನನ್ನನ್ನು ನಿನ್ನ ಪ್ರಿಯಳೆಂದು ನೀನು ಭಾವಿಸುವುದಾದರೆ, ಸುಗ್ರೀವನಲ್ಲಿ ಕೋಪವನ್ನು ಬಿಟ್ಟು ನನ್ನ ಮಾತನ್ನು ನಡೆಸು” ಎಂದು ಪ್ರಾರ್ಥಿಸಿಕೊಂಡಳು.

ವಿನಾಶಕಾಲದಲ್ಲಿ ಹಿತವಾದ ಮಾತು ಯಾರಿಗೂ ರುಚಿಸುವುದಿಲ್ಲವಷ್ಟೆ. ಹಾಗೆಯೆ ತಾರೆಯ ಇನಿವಾತು ವಾಲಿಗೆ ಹಿತವೆನಿಸಲಿಲ್ಲ. ಆಕೆಯನ್ನು ಗದರುತ್ತ “ಚಂದ್ರಮುಖಿ, ನನಗೆ ಹಗೆಯಾದ ಸುಗ್ರೀವನ ಆಟೋಪವನ್ನು ಹೇಗೆ ಸಹಿಸಲಿ? ಯುದ್ಧಕ್ಕೆ ಕರೆ ಬಂದಿರುವಾಗ, ಆ ಕರೆಗೆ ಓಗೊಡದಿರುವುದು ವೀರರಿಗೆ ಸಾವಿಗೆ ಸಮ. ಅಲ್ಲದೆ ಎಲ್ಲ ಧರ್ಮಗಳನ್ನೂ ತಿಳಿದ ಶ್ರೀರಾಮನು ಹೇಗೆತಾನೆ ಪಾಪಕಾರ್ಯ ಮಾಡುತ್ತಾನೆ? ನಿನ್ನ ಪ್ರಾಣಗಳ ಮೇಲೆ ಆಣೆಯಿಟ್ಟು ಹೇಳುತ್ತೇನೆ. ದುರಾತ್ಮನಾದ ಸುಗ್ರೀವನನ್ನು ಯುದ್ಧದಲ್ಲಿ ಗೆದ್ದು, ಹಿಂತಿರುಗವೆನೇ ಹೊರತು ಅವನನ್ನು ಕೊಲ್ಲುವುದಿಲ್ಲ. ನೀನು ಅಂಜಬೇಡ” ಎಂದು ನುಡಿದು, ಮೆಲ್ಲಗೆ ಆಕೆಯನ್ನು ಬೀಳ್ಕೊಟ್ಟನು, ತಾರೆ ವಾಲಿಯನ್ನು ಅಪ್ಪಿಕೊಂಡು, ಮೃದುಮಾತುಗಳನ್ನಾಡಿ, ಮೆಲ್ಲಗೆ ಅಳುತ್ತ ಅವನನ್ನು ಪ್ರದಕ್ಷಿಣೆ ಮಾಡಿ, ಜಯಕೋರಿ, ಕಣ್ಣೀರುತುಂಬಿ, ಭಾರವಾದ ಮನಸ್ಸಿನಿಂದ ಅವನನ್ನು ಬೀಳ್ಕೊಟ್ಟು ಸಖಿಯರೊಡನೆ ಅಂತಃಪುರವನ್ನು ಹೊಕ್ಕಳು.

* * *