ಕಮಂಡಲಧಾರಿಯಾದ ರಾವಣನು ರಾಮಲಕ್ಷ್ಮಣರಿಲ್ಲದ ಸೀತೆ ಬಳಿಗೆ ಬಂದದ್ದು ಚಂದ್ರಸೂರ್ಯರಿಲ್ಲದ ಸಂಧ್ಯೆಯ ಬಳಿ ಕತ್ತಲು ಬಂದಂತಾಯ್ತು

ಸೀತೆಯ ಮಾತಿನಿಂದ ರೋಷಗೊಂಡ ಲಕ್ಷ್ಮಣನು ರಾಮನನ್ನು ಕುರಿತು ಹೋದನೊ ಇಲ್ಲವೊ ರಾವಣನು ಸನ್ಯಾಸಿಯ ವೇಷವನ್ನು ಧರಿಸಿ ಬೇಗಬೇಗನೆ ಸೀತೆಯ ಬಳಿಗೆ ಬಂದನು. ಕಮಂಡಲುಧಾರಿಯಾದ ರಾವಣನು ರಾಮಲಕ್ಷ್ಮಣರಿಲ್ಲದ ಸೀತೆಯ ಬಳಿಗೆ ಬಂದದ್ದು ಚಂದ್ರಸೂರ್ಯರಿಲ್ಲದ ಸಂಧ್ಯೆಯ ಬಳಿ ಕತ್ತಲೆ ಬಂದಂತಾಯಿತು. ರಾವಣನನ್ನು ನೋಡಿ ಗೋದಾವರಿಯೂ ಹೆದರಿ ಹೆದರಿ ನಡೆ ತಡೆದು ಮಂದಮಂದವಾಗಿ ಚಲಿಸತೊಡಗಿದಳು. ಪೀತವಸನೆಯಾಗಿ ಬಾಷ್ಪಪೂರಿತಲೋಚನೆಯಾದ ಸೀತೆಯನ್ನು ನೋಡಿ ಮೋಹಗೊಂಡ ರಾವಣನು “ಮಂಗಳಾಂಗಿ, ನೀನಾರು? ನಿನ್ನ ಹಲ್ಲು ಸಮವಾಗಿವೆ. ಕಣ್ಣು ವಿಶಾಲವಾಗಿದೆ. ನಿನ್ನ ತೊಡೆಗಳು ಆನೆಯ ಸೊಂಡಿಲಿನಂತಿವೆ. ರತ್ನಾಭರಣಗಳಿಂದ ಕೂಡಿದ ನಿನ್ನ ಪಯೋಧರಗಳು ಬಹು ಮನೋಹರವಾಗಿವೆ. ನಿನ್ನ ಕೇಶಪಾಶ ಸುದಿರ್ಘವಾಗಿವೆ. ನಿನ್ನಂತಹ ಹೆಂಗಸನ್ನು ನಾನು ದೇವತೆಗಳಲ್ಲಾಗಲಿ ಗಂಧರ್ವರಲ್ಲಾಗಲಿ ಮನುಷ್ಯರಲ್ಲಾಗಲಿ ನೋಡಲಿಲ್ಲ. ನಿನ್ನ ರೂಪ, ವಯಸ್ಸು, ಈ ನಿನ್ನ ಕಾಡಿನ ವಾಸ ಇವೆಲ್ಲ ನನ್ನನ್ನು ಉನ್ಮಾದಗೊಳಿಸುತ್ತಿವೆ. ರಾಕ್ಷಸರ ವಾಸಕ್ಕೆ ತಕ್ಕ ಭೂಮಿ ಇದು. ಹೂಮುಡಿದು ಚಂದನಾದಿಗಳಿಂದ ಸಿಂಗರಿಸಿಕೊಂಡು ಗಂಡನೊಡನೆ ನೀನು ನಗರದಲ್ಲಿ ಸಮಸ್ತ ಸುಖಗಳನ್ನು ಅನುಭವಿಸಬೇಕು. ಹಾಗಿಲ್ಲದೆ ನೀನು ಇಲ್ಲಿರುವುದನ್ನು ನೋಡಿದರೆ ನಿನ್ನನ್ನು ದೇವತಾಸ್ತ್ರೀಯೆಂದು ತಿಳಿಯುತ್ತೇನೆ” ಎಂದನು.

ಸರಳಹೃದಯ ಸೀತಾದೇವಿಗೆ ರಾವಣನ ವಕ್ರಬುದ್ಧಿ ಗೋಚರವಾಗಲಿಲ್ಲ. ಅವನನ್ನು ನಿಜವಾದ ಯತಿಯೆಂದು ಭಾವಿಸಿ, ಉಪಚರಿಸಿ, ಭೋಜನ ಮಾಡುವಂತೆ ಪ್ರಾರ್ಥಿಸಿದಳು. ರಾವಣನಿಗಾದರೊ ಸೀತೆಯನ್ನು ಕದ್ದೋಡಬೇಕೆಂಬ ಚಿಂತೆ, ಮತ್ತು ಆತುರ, ಇತ್ತ ಸೀತೆ ಬಾರಿಬಾರಿಗೂ ರಾಮಲಕ್ಷ್ಮಣರು ಹೋದ ದಿಕ್ಕನ್ನೆ ನೋಡುತ್ತಿದ್ದಳು. ಆದರೆ ಕಂಡದ್ದು ಹೆಗ್ಗಾಡೆ ಹೊರತು ರಾಮಲಕ್ಷ್ಮಣರಲ್ಲ.

ಸೀತೆ ತಾನಾರೆಂಬುದನ್ನು ತಿಳಿಯಹೇಳಬೆಂಕೆಂದೂ ಇಲ್ಲವಾದರೆ ಯತಿಯಾದ ತಾನು ಆಕೆಯನ್ನು ಶಪಿಸುವೆನೆಂದೂ ರಾವಣನು ಹೇಳಿದನು. ಸೀತೆ ಕ್ಷಣಕಾಲ ಯೋಚಿಸಿ ರಾವಣನನ್ನು ಕುರಿತು “ಎಲೈ ದ್ವಿಜೋತ್ತಮನೆ ಜನಕರಾಯನ ಮಗಳಾದ ನನ್ನನ್ನು ಸೀತೆಯೆಂದು ಕರೆಯುತ್ತಾರೆ. ನಾನು ಶ್ರೀರಾಮಚಂದ್ರನ ಹೆಂಡತಿ. ನನ್ನ ಗಂಡನು ತಂದೆಯಾದ ದಶರಥನ ಮಾತಿನಂತೆ ಹದಿನಾಲ್ಕು ವರ್ಷ ವನವಾಸ ಮಾಡಲು ತಮ್ಮನಾದ ಲಕ್ಷ್ಮಣನೊಂದಿಗೆ ಇಲ್ಲಿಗೆ ಬಂದಿದ್ದಾನೆ. ನಾವು ಮೂವರು ಈ ಕಾಡಿನಲ್ಲಿ ಸಂಚರಿಸುತ್ತಿದ್ದೇವೆ. ಯತಿಪತಿಯೆ, ಒಂದು ಮುಹೂರ್ತಕಾಲ ಇಲ್ಲಿ ನಿಲ್ಲು. ನನ್ನ ಗಂಡನು ಬಹುಬೇಗ ಇಲ್ಲಿಗೆ ಬರುತ್ತಾನೆ. ಕಾಡಿನಲ್ಲಿ ತಿರುಗುತ್ತಿರುವ ನೀನಾರು? ನಿನ್ನ ಕುಲಗೋತ್ರಗಳನ್ನು ತಿಳಿಸು” ಎಂದು ನುಡಿದು ತಾವು ಕಾಡಿಗೆ ಬಂದ ವೃತ್ತಾಂತವನ್ನು ಅವನಿಗೆ ವಿಸ್ತಾರವಾಗಿ ತಿಳಿಸಿದಳು. ಸೀತೆಯ ಮಾತಿಗೆ ರಾವಣನು.

“ಭದ್ರೆ ರಾಕ್ಷಸೇಂದ್ರನಾದ ರಾವಣನೆಂದು ನನ್ನನ್ನು ತಿಳಿ. ದೇವಾಸುರಪನ್ನಗರು ನನ್ನನ್ನು ಕಂಡರೆ ಭಯದಿಂದ ನಡುಗುವರು. ಬಂಗಾರದ ಬಣ್ಣದ ದೇಹವುಳ್ಳವಳಾಗಿ ದಿವ್ಯವಸ್ತ್ರವನ್ನುಟ್ಟ ನಿನ್ನನ್ನು ನೋಡಿ ನನ್ನ ಹೆಂಡಿರಲ್ಲಿ ನನಗೆ ತಿರಸ್ಕಾರವುಂಟಾಗಿದೆ. ದೇವಿ, ನನ್ನ ಸ್ತ್ರೀಯರಿಗೆಲ್ಲ ನೀನು ಅಗ್ರಮಹಿಷಿಯಾಗಿ, ಸಮುದ್ರದಿಂದ ಸುತ್ತುವರಿಯಲ್ಪಟ್ಟ ಲಂಕೆಯಲ್ಲಿ ನನ್ನೊಡನೆ ವಾಸಮಾಡು. ನೀನು ನನ್ನ ಹೆಂಡತಿಯಾಗುವುದಾದರೆ ಐದು ಸಾವಿರ ಸ್ತ್ರೀಯರು ನಿನ್ನ ದಾಸಿಯರಾಗುತ್ತಾರೆ” ಎಂದು ಕಾಮಾರ್ತನಾಗಿ ನುಡಿದನು.

ರಾವಣನ ಮಾತನ್ನು ಕೇಳಿ ಕೋಪಗೊಂಡ ಸೀತೆ ಅವನನ್ನು ಧಿಕ್ಕರಿಸಿ ನುಡಿದಳು “ಮೇರುಪರ್ವತದಂತೆ ಶ್ರೀರಾಮನು ಅಚಲನು. ದೇವೇಂದ್ರನಿಗೆ ಸಮಾನನಾದವನು. ಸಾಗರದಂತೆ ಕದಲಿಸಲು ಅಸಾಧ್ಯನಾದವನು. ಅಂತಹ ಸತ್ಯಸಂಧನಾದ ಶ್ರೀರಾಮನನ್ನೇ ನಾನು ಅನುಸರಿಸುವೆನಲ್ಲದೆ ನಿನ್ನನ್ನು ಬಯಸುವೆನೆ? ನನ್ನನ್ನು ನೀನು ಬಯಸಿದ್ದು ನರಿ ಸಿಂಹಿಣಿಯನ್ನು ಬಯಸಿದಂತಾಯಿತು. ಬಂಗಾರದ ಮರಗಳನ್ನು ನೋಡಬಯಸುವುದೂ ಒಂದೆ, ನನ್ನನ್ನು ಬಯಸುವುದೂ ಒಂದೆ! ರಾವಣ, ಹಸಿದ ಸಿಂಹದ ಬಾಯಿಂದ, ಕ್ರುದ್ಧವಾದ ಸರ್ಪದ ಮುಖದಿಂದ ಕೋರೆದಾಡೆಗಳನ್ನು ಕೀಳಬಯಸುವೆಯಾ? ಕಾಲಕೂಟವಿಷವನ್ನು ಕುಡಿದು ಕ್ಷೇಮವಾಗಿ ಹಿಂದಿರುಗಲು ಸಾಧ್ಯವೆ? ಕಲ್ಲನ್ನು ಕಂಠಕ್ಕೆ ಬಿಗಿದುಕೊಂಡು ಸಮುದ್ರವನ್ನು ದಾಟಬಯಸುವವನಂತೆ ನೀನು ನಿನ್ನನ್ನು ಬಯಸಿದೆ. ಕ್ಷುದ್ರನದಿಗೂ ಸಮುದ್ರಕ್ಕೂ, ನರಿಗೂ ಸಿಂಹಕ್ಕೂ ಇರುವ ಅಂತರವೇ ನಿನಗೂ ರಾಮನಿಗೂ ಇರುವ ಅಂತರ, ಆದ್ದರಿಂದ ನೀನು ನನ್ನನ್ನು ಬಯಸುವುದು ಸರ್ವಥಾ ಉಚಿತವಲ್ಲ.”

ಇಷ್ಟು ಮಾತನ್ನು ಧೈರ್ಯದಿಂದ ಹೇಳಿದರೂ ಸೀತೆ ಬಿರುಗಾಳಿಗೆ ಸಿಲುಕಿದ ಬಾಳೆಯಂತೆ ನಡುಗಿಹೋದಳು. ಸೀತೆಯ ಮಾತನ್ನು ಲಕ್ಷಿಸದೆ ರಾವಣನು “ಮಂಗಳಾಂಗಿ, ಕುಬೇರನ ಒಡಹುಟ್ಟಿದವನು ನಾನು. ಅವನು ನನ್ನ ಮಲತಾಯಿಯ ಮಗ. ಇದಲ್ಲದೆ ದಶಕಂಠನಾದ ನನ್ನನ್ನು ನೋಡಿದರೆ ದೇವಗಂಧರ್ವರೂ ಓಡಿಹೋಗುತ್ತಾರೆ. ಕುಬೇರನ ಪುಷ್ಪಕವಿಮಾನವನ್ನು ಬಲಪ್ರಯೋಗದಿಂದಲೆ ನಾನು ಸೆಳೆದು ತಂದೆ. ನನ್ನನ್ನು ಕಂಡರೆ ವಾಯು ಹೆದರಿ ಸಂಚರಿಸುತ್ತಾನೆ ಸೂರ್ಯನು ಶೀತಕಿರಣನಾಗುತ್ತಾನೆ. ನಾನು ಕುಳಿತಕಡೆ ಗಿಡಮರಗಳು ಅಲುಗಾಡವು. ನದಿಗಳು ಗಂಭೀರವಾಗಿ ಮಂದವಾಗಿ ಹರಿಯುತ್ತವೆ. ಅಮರಾವತಿಗೆ ಸಮನಾದ ಲಂಕೆಯೆ ನನ್ನ ರಾಜಧಾನಿ. ನೀನು ಲಂಕೆಗೆ ಬಂದರೆ ಆಮೇಲೆ ಗತಾಯುವಾದ ರಾಮನನ್ನು ನೆನೆಯುವುದಿಲ್ಲ. ತಂದೆ ಭರತನನ್ನು ಸಿಂಹಾಸನದ ಮೇಲೆ ಕೂರಿಸಿ ರಾಮನನ್ನು ಕಾಡಿಗೆ ಅಟ್ಟಿದಾಗಲೆ ಅವನ ಪರಾಕ್ರಮ ತಿಳಿಯಿತು. ತಪಸ್ವಿಯಾದ ರಾಮನಿಂದ ನಿನಗೇನು ಪ್ರಯೋಜನ? ಕಾಮಾರ್ತನಾಗಿ ನಾನು ನಿನ್ನ ಬಳಿಗೆ ಬಂದಿದ್ದೇನೆ. ತ್ರೀಲೋಕೇಶ್ವರನೂ ರಾಕ್ಷಸೇಂದ್ರನೂ ಆದ ನನ್ನನ್ನು ನಿರಾಕರಿಸಬೇಡ” ಎಂದು ಆಕೆಯನ್ನು ಬೇಡಿಕೊಂಡನು. ಆದರೆ ತನ್ನನ್ನು ಬಯಸುವುದು ಮರಣಕ್ಕೆ ಮಾರ್ಗವೆಂದು ಸೀತೆ ಹೇಳಿದರೂ ರಾವಣನು ತನ್ನ ಆಸೆಯನ್ನು ಅಡಗಿಸಿಕೊಳ್ಳಲಾಗಲಿಲ್ಲ.

ಸೀತೆಯ ಮಾತನ್ನು ಅಲ್ಲಗಳೆದು, ಶೂರನಾದ ರಾವಣನು ಅಟ್ಟಹಾಸ ಮಾಡಿ ಆಕೆಗೆ ತನ್ನ ನಿಜರೂಪವನ್ನು ತೋರಿಸಿದನು. “ಹುಚ್ಚಿ, ತನ್ನ ಪರಾಕ್ರಮವನ್ನರಿಯದೆ ನೀನು ಮಾತನಾಡುತ್ತಿರುವಂತೆ ತೋರುತ್ತದೆ. ಸಮುದ್ರವನ್ನೆ ಕುಡಿಯುವ ಶಕ್ತಿ ನನಗುಂಟು. ಯಮನನ್ನೆ ಕೊಲ್ಲುವ ಸಾಮರ್ಥ್ಯ ನನಗಿದೆ. ಹಾಗಿರುವಾಗ ನೀನು ನನ್ನನ್ನು ಪತಿಯೆಂದು ಸ್ವೀಕರಿಸು” ಎಂದು ರಾವಣನು ಕೊಬ್ಬಿ ನುಡಿದನು. ಈ ಮಾತುಗಳನ್ನು ಹೇಳುತ್ತ ಹೇಳುತ್ತ ಸೂರ್ಯಕಲ್ಪನಾದ ರಾವಣನ ಕಣ್ಣುಗಳು ಕೋಪದಿಂದ ಅಗ್ನಿಯ ಜ್ವಾಲೆಯಂತೆ ಕೆಂಪಾದವು. ಆಗ ಅವನು ತನ್ನ ನಿಜಸ್ವರೂಪದಿಂದ ಅವಳೆದುರಿನಲ್ಲಿ ನಿಂತು, ತನ್ನನ್ನೇ ಗಂಡನನ್ನಾಗಿ ವರಿಸಲೆಂದು ಅವಳನ್ನು ಪೀಡಿಸುತ್ತ, ಎಡದ ಕೈಯಿಂದ ಅವಳ ಕೂದಲನ್ನೂ ಬಲದ ಕೈಯಿಂದ ತೊಡೆಗಳನ್ನೂ ಹಿಡಿದುಕೊಂಡನು. ಆಗ ಅವನ ಹೊಂದೇರು ಅಲ್ಲಿ ಕಾಣಿಸಿಕೊಂಡಿತು. ಕ್ರೂರ ವಾಕ್ಯಗಳಿಂದ ಸೀತೆಯನ್ನು ಹೆದರಿಸಿ, ಆಕೆಯನ್ನು ತೊಡೆಯಲ್ಲಿ ಕೂರಿಸಿಕೊಂಡು ರಥವನ್ನು ಏರಿದನು. ಆಗ ಸೀತೆ ಹೆದರಿ ಹುಚ್ಚೆದ್ದು “ಹಾ ರಾಮ! ಓ ಲಕ್ಷಣಾ! ಮಹಾಬಾಹೋ, ಗುರುಚಿತ್ತ ಪ್ರಸಾದಕ, ನೀಚನಾದ ಈ ರಾವಣನು ನನ್ನನ್ನು ಹೊತ್ತುಕೊಂಡೊಯ್ಯುವುದನ್ನು ಕಾಣದಿರುವೆಯಲ್ಲ! ಈ ದುಷ್ಟನನ್ನು ಕೊಲ್ಲದೆ ಏಕೆ ಸುಮ್ಮನಿರುವೆ? ಅಯೋ, ಕೈಕೆಯ ಕೋರಿಕೆ ನೆರವೇರಿತು. ಜನಸ್ಥಾನದ ವೃಕ್ಷಗಳೆ, ಪರ್ವತಗಳೆ, ಹಂಸಗಳೆ, ತಾಯಿ ಗೋದಾವರಿ, ರಾವಣನು ನನ್ನನ್ನು ಕದ್ದೊಯ್ಯುತ್ತಿರುವುದನ್ನು ಬೇಗ ರಾಮನಿಗೆ ತಿಳಿಸಿ. ಈಗೋ ನಿಮಗೆ ನಮಸ್ಕಾರ” ಹೀಗೆಂದು ಭಯದಿಂದ ನಡುಗಿ, ದೀನವದನೆಯಾಗಿ, ಕಣ್ಣೀರಿಡುತ್ತ ಗೋಳಿಟ್ಟಳು.

ಆಗ ಆಕೆಗೆ ಜಟಾಯು ಕಾಣಿಸಿಕೊಂಡನು. ಭಯದಿಂದ ಕೂಗಿಕೊಳ್ಳುತ್ತಿದ್ದ ಸೀತೆಯ ಧ್ವನಿಯಿಂದ ಮಲಗಿದ್ದ ಆತನಿಗೆ ನಿದ್ದೆ ತಿಳಿಯಿತು. ಮೊನಚಾದ ಕೊಕ್ಕುಳ್ಳ ಜಟಾಯು ರಾವಣನನ್ನು ಕುರಿತು “ರಾವಣ, ಧರ್ಮಾತ್ಮನಾದ ಶ್ರೀರಾಮನ ಹೆಂಡತಿಯನ್ನು ಕದ್ದೊಯ್ಯುವುದುನಿನಗೆ ತರವಲ್ಲ. ನಿನ್ನ ಹೆಂಡಿರನ್ನು ರಕ್ಷಿಸುವಂತೆ, ದೀನಳಾದ ಈಕೆಯನ್ನು ಕಾಪಾಡುವುದು ನಿನಗೆ ಧರ್ಮವಲ್ಲವೆ? ಈಕೆಯಲ್ಲಿಟ್ಟಿರುವ ನಿನ್ನ ಮನಸ್ಸನ್ನು ಹಿಂದಿರುಗಿಸು. ಪಾಪಪುಣ್ಯಗಳಿಗೆ ರಾಜನೆ ಮೂಲ. ಮೇಲಾಗಿ ಶ್ರೀರಾಮನು ನಿನಗಾವ ಕೆಡುಕನ್ನು ಉಂಟುಮಾಡಿದ್ದಾನೆ? ನಿನ್ನ ಕಂಠದಲ್ಲಿ ಯಮಪಾಶವಿರುವಂತೆ ತೋರುತ್ತದೆ. ಅರವತ್ತು ಸಾವಿರ ವರುಷಗಳು ಕಳೆದುಹೋದ ವೃದ್ಧ ನಾನಾಗಿದ್ದರೂ ಯುವಕನಾದ ನೀನು ಸೀತೆಯನ್ನು ಕದ್ದುಕೊಂಡು ಕ್ಷೇಮದಿಂದ ಹಿಂದಿರುಗಲಾರೆ. ನೀನು ಶೂರನೆ ಆದ ಪಕ್ಷದಲ್ಲಿ ನನ್ನೊಡನೆ ಯುದ್ಧಮಾಡು. ಒಂದು ಕ್ಷಣದಲ್ಲಿ ನಿನ್ನನ್ನು ಕೊಂದು, ಸೀತೆಯನ್ನು ಬಿಡಿಸುತ್ತೇನೆ. ಬೀಸಣಿಗೆಯಿಂದ ಹಣ್ಣನ್ನು ಕೆಡಹುವಂತೆ ನಿನ್ನನ್ನು ರಥದಿಂದ ಕೆಡವಿ, ನನ್ನ ಸ್ನೇಹಿತರಾದ ರಾಮಲಕ್ಷ್ಮಣರಿಗೆ ಹಿತವನ್ನುಂಟುಮಾಡುತ್ತೇನೆ” ಎಂದು ನುಡಿಯುತ್ತ ರಾವಣನನ್ನು ಅಟ್ಟಿಬಂದನು.

ರಾವಣ ಜಟಾಯುಗಳಿಗೆ ಘೋರವಾದ ಕಡುಗಾಳಗ ನಡೆದು ಹೋಯಿತು. ರಾವಣನು ಬಿಟ್ಟ ಬಾಣಗಳ ಏಟುಗಳನ್ನು ಸಹಿಸಿಕೊಂಡು ಜಟಾಯು ಅವನ ದೇಹದಲ್ಲಿ ತನ್ನ ಕೊಕ್ಕಿನಿಂದ ಗಾಯಗಳನ್ನುಂಟು ಮಾಡಿದನು. ಇತ್ತ ಸೀತೆ ರಥದಲ್ಲಿ ಕಂಬನಿದುಂಬಿದವಳಾಗಿ ಜಟಾಯುವಿನ ಶೌರ್ಯವನ್ನೇ ನೋಡುತ್ತ ಕುಳಿತುಕೊಂಡಿದ್ದಳು. ತನ್ನ ಮೇಲೆ ಬೀಳುತ್ತಿದ್ದ ಬಾಣಗಳನ್ನೆಲ್ಲ ತಡೆಯುತ್ತ ಜಟಾಯು ರಾಕ್ಷಸನ ಸ್ವರ್ಣಕವಚವನ್ನು ಕೊಡಹಿಬಿಟ್ಟನು. ಸಾವಿರಾರು ಬಾಣಗಳಿಂದ ಮುಚ್ಚಿಹೋದ ಜಟಾಯು ಗೂಡಿನಲ್ಲಿರುವ ಪಕ್ಷಿಯಂತೆ ಕಂಗೊಳಿಸುತ್ತಾ ರಾವಣನ ಬೆಳ್ಗೊಡೆಯನ್ನೂ ಚಾಮರಗಳನ್ನೂ ಕೆಡಹಿದನು. ಜಟಾಯು ತನ್ನ ಕೊಕ್ಕಿನಿಂದ ರಾವಣನ ಸಾರಥಿಯ ತಲೆಯನ್ನು ಕುಕಿಕೊಲ್ಲಲು, ರಥಹೀನನಾದ ರಾವಣನು ಸೀತೆಯೊಡನೆ ಭೂಮಿಗೆ ಬಿದ್ದನು. ಆಗ ರಾವಣನು ಸೀತೆಯನ್ನೆತ್ತಿಕೊಂಡು ಅಂತರಿಕ್ಷಕ್ಕೆ ಹಾರಲು, ಜಟಾಯು ಅವನನ್ನು ಅಡ್ಡಗಟ್ಟಿ ತಡೆದು “ಸೀತೆಯನ್ನು ಎತ್ತಿಕೊಂಡು ಎಲ್ಲಿಗೆ ಹೋಗುವೆ? ಮುರ್ಹೂತಕಾಲ ನಿಂತು ನನ್ನೊಡನೆ ಯುದ್ಧಮಾಡು” ಎಂದು ರಾವಣನ ಬೆನ್ನಿಗೆ ಬಲವಾಗಿ ಒದೆದನು. ಅವನ ಅಂಗಾಂಗಗಳನ್ನೆಲ್ಲ ಬಲವಾಗಿ ಗಾಯಗೊಳಿಸಿದನು; ಕೂದಲನ್ನು ಕಿತ್ತುಹಾಕಿದನು. ಜಟಾಯುವಿನ ಕಾರ್ಯದಿಂದ ಕೋಪಗೊಂಡ ರಾವಣನು ಸೀತೆಯನ್ನು ಬಿಟ್ಟು ತನ್ನ ಕಾಲುಗಳಿಂದ ಜಟಾಯುವನ್ನು ತುಳಿದನು. ಕ್ಷಣಕಾಲ ಇಬ್ಬರಿಗೂ ಭಯಂಕರವಾದ ಯುದ್ಧ ಜರುಗಿತು. ಸೀತೆಯನ್ನು ಕೊಂಡೊಯ್ಯಲು ಆತುರನಾಗಿದ್ದ ರಾವಣನು ಆಗ ಖಡ್ಗವನ್ನು ಹಿರಿದು ಪಕ್ಷಿರಾಜನ ರೆಕ್ಕೆಗಳನ್ನು ಕತ್ತರಿಸಿಬಿಟ್ಟನು. ಅಲ್ಪಜೀವಿಯಾದ ಜಟಾಯು ಭೂಮಿಗೆ ಬೀಳಲು ರಕ್ತದಿಂದ ತೊಯ್ದ ಅವನನ್ನು ಕಂಡು ಸೀತೆ ಬಂಧುಜನರ ಬಳೀಗೆ ಬರುವಂತೆ ಓಡಿಬಂದಳು. ಕಾಡು ಕಿಚ್ಚೆದ್ದು ಶಾಂತವಾಯಿತೆಂಬಂತೆ ತನಗಾಗಿ ಹೋರಾಡ ಭೂಮಿಯಲ್ಲಿ ಬಿದ್ದಿದ್ದ ಆತನನ್ನು ನೋಡಿ ಬಹುವಾಗಿ ಗೋಳಿಟ್ಟಳು.

ರಾವಣ ಜಟಾಯುಗಳಿಗೆ ಘೋರವಾಡ ಕಡುಗಾಳಗ ನಡೆದುಹೋಯ್ತು

ಜಟಾಯುವಿನ ಬಳಿಯಿದ್ದ ಸೀತೆಯನ್ನು ನೋಡಿ ರಾವಣನು ಓಡಿ ಬಂದು, ಆಕೆ ಬೇಡವೆಂದು ತಡೆಯುತ್ತಿದ್ದರೂ ತಲೆಗೂದಲನ್ನೂ ಹಿಡಿದುಕೊಂಡನು. ರಾವಣನು ಕದ್ದೊಯ್ಯುತ್ತಿದ್ದ ಸೀತೆಯನ್ನು ನೋಡಿ ಋಷಿಗಳು ವ್ಯಸನಗೊಂಡರು. ಸೂರ್ಯನು ಕಾಂತಿಹೀನನಾದನು. ಮೃಗಪಕ್ಷಿಗಳು ಗೋಳಿಟ್ಟುವು. ಸೀತೆಯ ತಲೆಯಿಂದ ಜಾರಿದ ಹೂವುಗಳು ಭೂಮಿಯಲ್ಲಿ ಉದುರಿಬಿದ್ದುವು. ಆಕಾಶದಿಂದ ಬೀಲುವ ಗಂಗೆಯಂತೆ ಅವಳ ಕಂಠದಿಂದ ರತ್ನದ ಹಾರ ಜಾರಿಬಿತ್ತು. ಸಿಂಹಗಳೂ ಹುಲಿಗಳೂ ಜಿಂಕೆಗಳೂ ರೋಷದಿಂದ ಸೀತೆಯ ನೆರಳನ್ನು ಹಿಂಬಾಲಿಸಿದುವು. ಝರಿಗಳಿಂದ ಕೂಡಿದ ಬೆಟ್ಟವೂ ಎತ್ತಿದ ಕೈಗಳಿಂದ ಸೀತಾಪಹರಣಕ್ಕಾಗಿ ಆರಚುತ್ತಿರುವಂತೆ ಕಾಣಿಸಿತು. ಕಾಡಿನ ಉದ್ದಕ್ಕೂ ಜಿಂಕೆಯ ಮರಿಗಳು ಸೀತೆಗಾಗಿ ಕಣ್ಣೀರಿಡುತ್ತಿದ್ದುವು. ರಾಕ್ಷಸನಾದರೊ ‘ರಾಮಾ ಲಕ್ಷ್ಮಣಾ!’ ಎಂದು ಕೂಗೂತ್ತಿದ್ದ ಸೀತೆಯನ್ನು ಹೊತ್ತುಕೊಂಡು ಲಂಕೆಯ ಕಡೆಗೆ ನಡೆದನು.

ಹೀಗೆ ಹೋಗುತ್ತಿದ್ದಾಗ ಉದ್ವಿಗ್ನಳಾದ ಸೀತೆ ರಾವಣನನ್ನು ಕುರಿತು “ನೀಚ ರಾವಣ, ನಾಚಿಕೆ ಇಲ್ಲವೆ ನಿನಗೆ? ರಾಮ ಲಕ್ಷ್ಮಣರಿಬ್ಬರೂ ಇಲ್ಲದ ವೇಳೆಯಲ್ಲಿ ನನ್ನನ್ನು ಕದ್ದುಕೊಂಡು ಓಡುವೆಯಾ? ಮಾಯಾಮೃಗದಿಂದ ನನ್ನ ಗಂಡನು ವಂಚಿತನಾದನು; ನಮಗೆ ಪರಮ ಮಿತ್ರಾದ ಪಕ್ಷಿರಾಜನು ಮರಣಹೊಂದಿದನು. ಕಳ್ಳತನದಿಂದ ಪರರ ಹೆಂಡಿರನನು ಕದ್ದೊಯ್ಯುವ ನಿನ್ನ ಪರಾಕ್ರಮವನ್ನು ಸುಡಲಿ! ರಾಮಲಕ್ಷ್ಮಣರ ಬಾಣಗಳ ಮಳೆಯಿಂದ ಬೆಂಕಿಯಲ್ಲಿ ಸುಟ್ಟ ಹಕ್ಕಿಯಂತೆ ನೀನು ಪ್ರಾಣಬಿಡುವ. ಇದನ್ನು ತಿಳಿದಾದರೂ ನೀನು ನನ್ನನ್ನು ಬಿಡು. ಸಾಯುವವರು ಅಪಥ್ಯಮಾಡುವಂತೆ ನೀನು ನನ್ನನ್ನು ಕೊಂಡೊಯ್ಯುತ್ತಿರುವೆ. ತನ್ನ ಪ್ರಿಯಪತ್ನಿಯನ್ನು ಕೊಂಡೊಯ್ಯುತ್ತಿರುವ ನಿನ್ನನ್ನು ಶ್ರೀರಾಮನು ಕೊಲ್ಲದಿರುವನೆ?” ಎಂದು ದಿಕ್ಕರಿಸಿ ನುಡಿದು ಬಗೆಬಗೆಯಾಗಿ ಗೋಳಿಟ್ಟಳು. ರಾವಣನು ಇದಾವುದನ್ನೂ ಗಮನಿಸದೆ, ವೇಗವೇಗವಾಗಿ ಹೋಗುತ್ತಿದ್ದನು. ಆ ಸಮಯದಲ್ಲಿ ಸೀತೆ ಬೆಟ್ದ ಕೋಡುಗಲ್ಲೊಂದರ ಮೇಲೆ ಕುಳಿತಿದ್ದ ಐವರು ಕಪಿವೀರರನ್ನು ಕಂಡಳು. ತನ್ನ ವಿಷಯವನ್ನು ಅವರು ಶ್ರೀರಾಮನಿಗೆ ತಿಳಿಸಬಹುದೆಂದು ನಂಬಿ, ತನ್ನ ರೇಷ್ಮೆಯ ಉತ್ತರೀಯದಲ್ಲಿ ಆಭರಣಗಳನ್ನು ಕಟ್ಟಿ ಅವರ ನಡುವೆ ಎಸೆದಳು. ಲಂಕೆಗೆ ಹೋಗುವ ಆತುರದಲ್ಲಿ ರಾವಣಿಗೆ ಅದು ಗೊತ್ತಾಗಲೆ ಇಲ್ಲ. ಆ ಕಪಿಗಳು ದುಃಖ ಸಂತಪ್ತಳಾದ ಸೀತೆಯನ್ನು ಕಣ್ಣರಳಿಸಿಕೊಂಡು ನೋಡಿದರು. ಪಂಪಾ ಸರೋವರವನ್ನು ದಾಟಿ ರಾವಣನು ದಕ್ಷಿಣಾಭಿಮುಖವಾಗಿ ಲಂಕೆಯ ಕಡೆಗೆ ತೆರಳಿದನು. ಸಮುದ್ರವನ್ನು ದಾಟಿ ಲಂಕೆಯನ್ನು ಹೊಕ್ಕು ತನ್ನ ಅಂತಃಪುರದಲ್ಲಿ ಸೀತೆಯನ್ನು ಇರಿಸಿದನು.

ಆ ಬಳಿಕ ರಾವಣನು ಪಿಶಾಚಸ್ತ್ರೀಯರನ್ನು ಕರೆದು “ನನ್ನ ಅಪ್ಪಣೆಯಿಲ್ಲದೆ ಯಾವ ಪುರುಷನೆ ಆಗಲಿ ಸ್ತ್ರೀಯೆ ಆಗಲಿ ಸೀತೆಯನ್ನು ನೋಡಕೂಡದು. ಆಕೆ ಬಯಸತಕ್ಕ ಬಂಗಾರ ರತ್ನ ವಸ್ತ್ರ ಆಭರಣಗಳನ್ನು ನನ್ನ ಆಜ್ಞೆಯೆಂದೇ ತಿಳಿದು ಸೀತೆಗೆ ಕೊಡಿ. ತಿಳಿದೊ ತಿಳಿಯದೆಯೊ ಯಾವ ಹೆಂಗಸೂ ಸೀತೆಗೆ ಅಪ್ರಿಯವಾದ ಮಾತನ್ನು ನುಡಿಯಕೂಡದು. ಹಾಗೆ ಮಾಡಿದವರ ಪ್ರಾಣ ಉಳಿಯದು” ಎಂದು ಅಪ್ಪಣೆಮಾಡಿ ಅಂತಃಪುರದಿಂದ ಹೊರಟುಹೋದನು. ಶ್ರೀರಾಮನ ಸಮಾಚಾರವನ್ನು ತರಲು ಎಂಟು ಜನ ಸಮರ್ಥರಾದ ರಾಕ್ಷಸರನ್ನು ಜನಸ್ಥಾನದಲ್ಲಿ ಕಾವಲಿಟ್ಟನು.

ಸೀತೆಯನ್ನು ಕದ್ದು ತಂದ ರಾವಣನಿಗೆ ಸಂತೋಷವೇನೊ ಉಂಟಾಗಿತ್ತು. ಆದರೆ ಶ್ರೀರಾಮನ ವೈರವನ್ನು ಬೆಳಸಿದೆನೆಂಬ ಭಾವದಿಂದ ಅವನಿಗೆ ನಿದ್ದೆಯ ಬರಲಿಲ್ಲ. ಆಗ ಅವನ ಮನಸ್ಸನ್ನು ಸೀತೆಯ ಸಂಪೂರ್ಣವಾಗಿ ತುಂಬಿ ಬಿಟ್ಟಿದ್ದಳು. ಮನ್ಮಥನ ಹೂಬಾಣಗಳಿಂದ ಹೊಡೆಯಲ್ಪಟ್ಟ ಅವನು ಮತ್ತೆ ಅಂತಃಪುರವನ್ನು ಹೊಕ್ಕನು: ನೀರು ತುಂಬಿದ ಕಣ್ಣುಗಳಿಂದ ಕೂಡಿ, ದುಃಖಭಾರದಿಂದ ಕುಗ್ಗಿ ತಲೆಬಗ್ಗಿಸಿ ಕುಳಿತಿದ್ದ ಸೀತೆ, ಸಮುದ್ರದ ನಡುವೆ ಮುಳುಗುತ್ತಿದ್ದ ನಾವೆಯಂತೆ ಕಂಡಳು. ಆಗ ರಾವಣನು ಶೋಕದಲ್ಲಿ ಮುಳುಗಿಹೋಗಿದ್ದ ಸೀತೆಗೆ, ಸ್ಫಟಿಕಮಯವಾದ ವಜ್ರವೈಡೂರ್ಯ ಮಣಿಗಳಿಂ ಕೂಡಿದ ಕಂಬಗಳುಳ್ಳ ಅರಮನೆಯನ್ನು ಬಲತ್ಕಾರದಿಂದಲೆ ತೋರಿಸಿದನು. ಅವಳೊಡನೆ ಚಿನ್ನದ ಸೋಪಾನಗಳನ್ನು ಏರಿ ನಡೆದನು. ನಾನಾತೆರನಾದ ಸರೋವರಗಳನ್ನೂ ಪುಷ್ಕರಿಣಿಗಳನ್ನೂ ಅವಳಿಗೆ ತೋರಿಸಿದನು. ಪಾಪಾತ್ಮನಾದ ರಾವಣನು ಸೀತೆಗೆ ಆಸೆಯ ಬಲೆಯನ್ನೊಡ್ಡಿ ಈ ರೀತೆಯಾಗಿ ಅಂಗಲಾಚಿ ಬೇಡಿಕೊಂಡನು “ವಿಶಾಲಾಕ್ಷಿ, ಸಮಸ್ತ ರಾಕ್ಷಸರೆಲ್ಲರಿಗೂ ನಾನು ಪ್ರಭು. ಆದರೆ ನೀನು ನನ್ನ ಪ್ರಾಣಗಳಿಗಿಂತಲೂ ಮೇಲೆನಿಸಿದವಳು. ನನ್ನ ಪತ್ನಿಯರಿಗೆಲ್ಲ ಸ್ವಾಮಿಯೆನಿಸಿ ನನ್ನ ಹೆಂಡತಿಯಾಗು. ನಿನಗೆ ಪ್ರಿಯವನ್ನುಂಟುಮಾಡುವ ನನ್ನ ಮಾತನ್ನು ಕೇಳಿ ನನ್ನನ್ನು ಅನುಗ್ರಹಿಸು. ದೇವಯಕ್ಷಗಂಧರ್ವರಲ್ಲಿ ನನಗೆ ಸಮಾನರೆನಿಸಿದವರು ಮತ್ತೊಬ್ಬರಿಲ್ಲ. ರಾಜ್ಯಭ್ರಷ್ಟನೂ ದೀನನೂ ತಾಪಸಿಯೂ ಆದ ರಾಮನಿಂದ ನಿನಗೇನಾಗಬೇಕೆ? ಯೌವನ ಶಾಶ್ವತವಾದುದಲ್ಲ; ಚಂಚಲವಾದುದು. ಆದಕಾರಣ ನನ್ನನ್ನು ಅನುಗ್ರಹಿಸಿ ಸಮಸ್ತ ಭೋಗಗಳನ್ನೂ ಅನುಭವಿಸು. ವಾಯುವನ್ನು ಕಟ್ಟಲು, ಜ್ವಾಲೆಯನ್ನು ಹಿಡಿಯಲು ಹೇಗೆ ಅಸಾಧ್ಯವೋ ಹಾಗೆಯೇ ಸಾಗರದಿಂದ ಸುತ್ತುವರಿದ ಲಂಕೆಯನ್ನು ಪ್ರವೇಶಿಸುವುದೂ ಅಸಾಧ್ಯ. ಆದ್ದರಿಂದ ಎಲೈ ಸೀತೆ, ರತ್ನಾಭರಣಗಳನ್ನು ಉಟ್ಟು ತೊಟ್ಟು ಪುಷ್ಪಕವನ್ನೇರಿ ನನ್ನೊಡನೆ ವಿಹರಿಸಿ.” ಚಂದ್ರಮುಖಿಯಾದ ಸೀತೆ ರಾವಣನ ಮಾತನ್ನು ಕೇಳಿ ಸೆರಗಿನಿಂದ ಮುಖವನ್ನು ಮುಚ್ಚಿಕೊಂಡು ಕಣ್ಣೀರು ಸುರಿಸಿದಳು. ರಾವಣನು ಸೀತೆಯನ್ನು ಕುರಿತು ಮತ್ತೆ “ವೈದೇಹಿ, ಧರ್ಮಲೋಪವಾಗುವುದೆಂದು ನಾಚಿಕೆಗೊಳ್ಳಬೇಡ. ಇದುವರೆಗೂ ಯಾವ ಹೆಂಗಸಿಗೂ ತಲೆಬಾಗದ ನಾನು ನನ್ನ ಹತ್ತು ತಲೆಗಳನ್ನೂ ನಿನ್ನ ಪಾದಗಳ ಮೇಲಿಡುತ್ತೇನೆ. ಇಂದಿನಿಂದ ನಾನು ನಿನ್ನ ದಾಸ, ನನ್ನನ್ನು ಅನುಗ್ರಹಿಸು” ಎಂದು ಪ್ರಾರ್ಥಿಸಿದನು.

ಸೀತೆ ದುಃಖಿತಳಾಗಿದ್ದರೂ ಸ್ವಲ್ಪವೂ ಹೆದರದೆ ನಡುವೆ ಹುಲ್ಲುಕಡ್ಡಿಯನ್ನು ಇಟ್ಟುಕೊಂಡು ಅದನ್ನು ನಿರ್ದೇಶಿಸಿ ರಾವಣನಿಗೆ ಈ ರೀತಿ ನುಡಿದಳು: “ದೀರ್ಘಬಾಹುವೂ ವಿಶಾಲಾಕ್ಷನೂ ಆದ ರಾಮನೇ ನನ್ನ ಗಂಡ; ಅವನೇ ನನ್ನ ದೈವ. ತೇಜಸ್ವಿಯಾಗದ ಆತನನ್ನು ನೀನು ಎದುರಿಸಿದ್ದರೆ ಈ ವೇಳೆಗೆ ನಿನ್ನ ಅವತಾರವೆ ಮುಗಿಯುತತಿತ್ತು. ರಾಮನು ದೇವಾಸುರರನ್ನು ಗೆದ್ದ ಪರಾಕ್ರಮಿ. ನೀನಾದರೊ ರಾಮನೊಡನೆ ದ್ವೇಷಕಟ್ಟಿಕೊಂಡು ಸಾಯಲು ಬಯಸಿದೆ. ಚಂದ್ರನನ್ನು ಅಂತರಿಕ್ಷದಿಂದ ತರಲೂ, ಸಾಗರವನ್ನು ಶೋಷಿಸಲೂ ಶಕ್ತನಾದ ರಾಮನು ನನ್ನನ್ನು ಈ ಸೆರೆಯಿಂದ ಬಿಡಿಸುವನು. ನಿನ್ನ ಪ್ರಾಣಗಳನ್ನು ತನ್ನ ಬಾಣಗಳಿಂದ ಸೆಳೆದು ಲಂಕೆಯನ್ನು ನಾಥರಿಲ್ಲದಂತೆ ಮಾಡುವನು. ಪತಿವ್ರತೆಯಾದ ನನ್ನನ್ನು ನೀನು ಮುಟ್ಟಲಾರೆ. ತಾವರೆಯ ಕೊಳದಲ್ಲಿ ರಾಜಹಂಸಗಳೊಡನೆ ಕ್ರೀಡಿಸುವ ಹಂಸಿಗೆ ನೀರುಕಾಗೆಯಮೇಲೆ ಮನಸ್ಸಾದೀತೆ? ರಾಕ್ಷಸಾಧಮ, ಈ ನನ್ನ ದೇಹವನ್ನು ಬೇಕಾದರೆ ಬಿಗಿಸು; ಇಲ್ಲವಾದರೆ ತಿನ್ನು. ಲೋಕದಲ್ಲಿ ಅಪವಾದ ಹೊಂದಿ ಬದುಕುವುದಕ್ಕೆ ಬದಲಾಗಿ ಈ ದೇಹವನ್ನೇ ಬಿಡುತ್ತೇನೆ”.

ಸೀತೆಯ ನುಡಿಗಳನ್ನು ಕೇಳಿ ಕ್ರೋಧದಿಂದ ಕುರುಡನಾದ ರಾವಣನು “ಮೈಥಿಲಿ, ನಿನಗೆ ಇನ್ನು ಹನ್ನೆರಡು ತಿಂಗಳು ಅವಧಿಯನ್ನು ಕೊಟ್ಟಿರುತ್ತೇನೆ. ಆ ಕಾಲದಲ್ಲಿ ನೀನು ನನ್ನವಳಾಗದಿದ್ದರೆ, ನಿನ್ನನ್ನು ಬೆಳಗಿನ ಊಟಕ್ಕೆ ಕತ್ತರಿಸುವಂತೆ ಹೇಳುತ್ತೇನೆ” ಎಂದು ಹೇಳಿ ಆಕೆಯನ್ನು ಅಶೋಕವನದಲ್ಲಿ ಸೆರೆಯಲ್ಲಿಟ್ಟನು. ಜಾನಕಿಯನ್ನು ನಯಭಯಗಳಿಂದ ದಾರಿಗೆ ತರಲು ಘೋರರೂಪಿಗಳಾದ ರಾಕ್ಷಸಿಯರನ್ನು ಅವಳ ಸುತ್ತಲೂ ಕಾವಲಿರಿಸಿದನು. ಹುಲಿಗಳ ನಡುವೆ ಸಿಕ್ಕ ಹೆಣ್ಣುಹುಲ್ಲೆಯಂತೆ, ಸೀತೆ ರಾಕ್ಷಸಿಯರ ಬಾಧೆಗೆ ಸಿಲುಕಿ ಶ್ರೀರಾಮನನ್ನೆ ಧ್ಯಾನಿಸುತ್ತಾ ಅಶೋಕವನದಲ್ಲಿ ಕಾಲಕಳೆಯುತ್ತಿದ್ದಳು.

* * *