ರಾತ್ರಿಯೆಲ್ಲವೂ ನಿದ್ದೆಗೆಟ್ಟಿದ್ದ ಆ ರಾಕ್ಷಸಿಯರಿಗೆ ಹಾಗೆಯೆ ನಿದ್ದೆಯ ಜೋಂಪು ಬಂದಂತಾಯ್ತು.

ಸೀತಾದೇವಿ ದುಃಖದಿಂದ ಹುಚ್ಚಿಯಂತಾಗಿದ್ದಳು. ಆಕೆ ನಿಲ್ಲುವುದಕ್ಕೆ ಕೂಡ ತ್ರಾಣ ಸಾಲದೆ ನೆಲದ ಮೇಲೆ ಬಿದ್ದು ಧೂಳಿಯಲ್ಲಿ ಹೊರಳಾಡಿದಳು. “ಅಯ್ಯೋ ನನ್ನ ದುರ್ವಿಧಿ ಎಷ್ಟು ಕಠೋರ. ಈ ಕ್ರೂರ ರಾಕ್ಷಸಿಯರು ನನ್ನನ್ನು ಭಯಂಕರವಾಗಿ ಭೀತಿಗೊಳಿಸುತ್ತಿರುವರು. ಶ್ರೀರಾಮನನ್ನು ಅಗಲಿ ಈ ದುರವಸ್ಥೆಯನ್ನು ಅನುಭವಿಸುತ್ತಿರುವ ನನ್ನ ಪ್ರಾಣಗಳು ಇನ್ನೂ ಹಾಗೆಯೆ ನಿಂತಿವೆಯಲ್ಲ! ನನ್ನ ಈ ಬಾಳು ಬಾಳೇನು ಅಜರಾಮರವಾದುದಾಗಿರಬಹುದೆ? ಗಂಡನನ್ನು ಅಗಲಿದರೂ ಇನ್ನೂ ಜೀವಿಸಿರುವ ಅನಾರ್ಯಳಾದ ನನ್ನ ಬಾಳಿಗೆ ಬೆಂಕಿ ಹಾಕಿತು! ಆ ಪಾಪಿ ರಾವಣನನ್ನೇನು ನಾನು ಎಡೆಗಾಲಿನಿಂದಲೂ ಮುಟ್ಟುವವಳಲ್ಲ. ಆದರೆ ಅವನು ಈ ರಾಕ್ಷಸಿಯರ ಮೂಲಕ ಕೊಡುತ್ತಿರುವ ಈ ಸಂಕಟವನ್ನು ಹೇಗೆ ಅನುಭವಿಸಲಿ?” ಎಂದು ಮನಸ್ಸಿನಲ್ಲಿಯೇ ಮಿಡುಕುತ್ತಾ ಹುಚ್ಚು ಧೈರ್ಯದಿಂದ ಆ ರಾಕ್ಷಸಿಯರನ್ನು ಕುರಿತು “ಎಲೆ ರಕ್ಕಸಿಯರಿರಾ, ನೀವು ನನ್ನನ್ನು ತುಂಡು ತುಂಡಾಗಿ ಕತ್ತರಿಸಿ, ಅಂಗಾಂಗಗಳನ್ನೇ ಕಿತ್ತು ತಿನ್ನಿರಿ, ಬೆಂಕಿಯಲ್ಲಿ ಬೇಯಿಸಿರಿ, ನಾನು ಬೇರೆ ನಿಮ್ಮ ಮಾತಿನಂತೆ ನಡೆಯಲಾರೆ. ವೃಥಾ ಏಕೆ ಪ್ರಲಾಪಿಸುವಿರಿ? ನನ್ನ ಪತಿಯಾದ ಶ್ರೀರಾಮನ ವಿಷಯ ನಿಮಗೆ ಗೊತ್ತಿಲ್ಲ. ಜನಸ್ಥಾನದಲ್ಲಿ ಒಬ್ಬನೇ ಹದಿನಾಲ್ಕು ಸಹಸ್ರ ರಾಕ್ಷಸರನ್ನು ಸಂಹರಿಸಿದನು. ಆತನಿಗೆ ಈ ರಾವಾಣಾಧಮನು ಎಷ್ಟು ಮಾತ್ರದವನು? ಸಮುದ್ರ ಮಧ್ಯದಲ್ಲಿರುವ ಈ ಲಂಕಾನಗರ ದುಷ್ಟ್ರವೇಶ್ಯವೆಂದು ತಿಳಿದಿರುವಿರೇನೊ. ಶ್ರೀರಾಮನ ಬಾಣಗಳು ಪ್ರವೇಶಿಸದ ಪ್ರದೇಶ ಈ ಲೋಕದಲ್ಲಾವುದಿದೆ? ಆತನಿಗೆ ನಾನಿರುವ ಎಡೆ ಇನ್ನೂ ಗೊತ್ತಿಲ್ಲವೆಂದು ತೋರುತ್ತದೆ. ಪಾಪ! ಜಟಾಯುವಾದರೂ ಬದುಕಿದ್ದರೆ ಆತನಿಗೆ ಈ ವಿಷಯವನ್ನು ತಿಳಿಸುತ್ತಿದ್ದನು; ಅನ್ಯಾಯವಾಗಿ ಈ ರಾವಣನಿಂದ ಆತನು ಮರಣಹೊಂದಿದನು. ಶ್ರೀರಾಮಚಂದ್ರನಿಗೆ ನಾನಿರುವ ಎಡೆಯೇನಾದರೂ ಗೊತ್ತಾಗಿದ್ದರೆ, ಆತನು ಸುತ್ತಲೂ ಇರುವ ಈ ಸಮುದ್ರವನ್ನು ಶೋಷಿಸಿ, ಲಂಕೆಯನ್ನು ಈ ವೇಳೆಗೆ ನಿರ್ಮೂಲನ ಮಾಡುತ್ತಿದ್ದನು. ಈಗ ನಾನು ಗೋಳಾಡುತ್ತಿರುವುದಕ್ಕಿಂತಲೂ ಹೆಚ್ಚಾಗಿ ಈ ಲಂಕಾನಗರದ ನಾರಿಯರೆಲ್ಲರೂ ಗಂಡಂದಿರನ್ನು ಕಳೆದುಕೊಂಡು ಗೋಳಿಡುತ್ತಿದ್ದರು. ರಾಮಲಕ್ಷ್ಮಣರ ಕಣ್ಣಿಗೆ ಬಿದ್ದ ಶತ್ರು ಅಳಿಯದೆ ಉಳಿಯುವನೆ? ಹೀಗೆಯೆ ನೋಡುತ್ತಿರಿ. ಇನ್ನು ಕೆಲವು ದಿನಗಳಲ್ಲಿಯೇ ಈ ಲಂಕಾನಗರ ಶ್ಮಶಾನವಾಗಿ ಹದ್ದುಗಳ ಕೋಲಾಹಲಕ್ಕೆ ಬೀಡಾಗುವುದು. ರಾವಣ ಸತ್ತು ಲಂಕೆ ಗಂಡಸತ್ತ ವಿಧವೆಯಂತೆ ಕಾಂತಿಹೀನವಾಗುವುದು. ಮನೆಮನೆಯಲ್ಲಿಯೂ ಭರ್ತೃವಿಯೋಗ ವ್ಯಸನದಿಂದ ಕಣ್ಣೀರು ಕರೆಯುತ್ತಾ ಗೋಳಿಡುವ ಹೆಣ್ಣುಗಳ ಆರ್ತಧ್ವನಿ ಕೇಳಿಬರುವಂತಾಗುವುದು. ಶ್ರೀರಾಮನ ಬಾಣಪರಂಪರೆಯಿಂದ ಲಂಕೆ ಭಸ್ಮವಾಗಿ ಹೋಗುವುದು. ಆದರೆ ಇದಿಷ್ಟು ಆದುದನ್ನು ನೋಡುವ ಭಾಗ್ಯ ನನಗಿದೆಯೋ ಇಲ್ಲವೋ! ಕ್ರೂರನಾದ ರಾವಣನು ನನಗೆ ಕೊಟ್ಟಿರುವ ಅವಧಿ ಮುಗಿಯುತ್ತಾ ಬಂದಿದೆ. ನಾನೇನು ರಾಕ್ಷಸರ ಆಹಾರವಾಗಬೇಕೋ, ರಾವಣನ ಬೆಳಗಿನ ಊಟಕ್ಕಾಗಿ ಪಕ್ವವಾಗಬೇಕೊ, ಯಾರಿಗೆ ಗೊತ್ತು? ಇನ್ನು ಎರಡು ತಿಂಗಳು ಬದುಕಿರುವುದೂ ನನಗೆ ಬೇಡವಾಗಿದೆ. ಯಾರಾದರೂ ಸ್ವಲ್ಪ ವಿಷವನ್ನು ತಂದು ಕೊಟ್ಟರೆ ಸುಖವಾಗಿ ಪ್ರಾಣಬಿಟ್ಟೇನು. ಶ್ರೀರಾಮಚಂದ್ರನು ಇದುವರೆಗೂ ಇಲ್ಲಿಗೆ ಬರದೆ ಏಕೆ ತಡೆದಿರಬಹುದು? ನನ್ನ ಅಗಲಿಕೆಯ ದುಃಖದಿಂದ ಆ ಪ್ರೇಮಮಯನು ಪ್ರಾಣಗಳನ್ನು ತ್ಯಜಿಸಿರಬಹುದೆ? ಹಾಗಿದ್ದಲ್ಲಿ ಆತನನ್ನು ಸದಾ ಕಾಣುತ್ತಿರುವ ದೇವತೆಗಳು ಧನ್ಯರೇ ಸರಿ. ಅಥವಾ ಆತನು ಕೇವಲ ವೈರಾಗ್ಯಪರನಾಗಿ ಶಸ್ತ್ರಸನ್ಯಾಸಮಾಡಿ ಪರಿವ್ರಾಜಕ ವೃತ್ತಿಯನ್ನು ಅವಲಂಬಿಸಿರಬಹುದೆ? ಹಾಗಲ್ಲದೆ, ಈ ದುರಾತ್ಮನಾದ ರಾವಣನು ರಾಮಲಕ್ಷ್ಮಣರೊಡನೆ ಯುದ್ಧಮಾಡಲು ಅಂಜಿ, ಕಪಟದಿಂದ ಅವರನ್ನು ಸಂಹರಿಸಿರಬಹುದೆ? ಅಯ್ಯೋ, ನನಗೆ ಒಂದೂ ತೋಚದು. ಯೋಚಿಸಿ ನನಗೆ ಹುಚ್ಚು ಹಿಡಿದಂತಾಗಿದೆ. ಹೇಗೆಹೇಗೆ ಯೋಚಿಸಿದರೂ ನನಗೆ ಮರಣವೇ ಶರಣೆಂದು ತೋರುತ್ತದೆ. ಸುಖದುಃಖಗಳಿಂದ ಮುಕ್ತರಾದ ಮಹರ್ಷಿಗಳು ಎಷ್ಟು ಧನ್ಯರು! ಪ್ರಿಯವಸ್ತುವಿರುವವರೆಗೆ ದುಃಖ ತಪ್ಪುವುದಿಲ್ಲ; ಭಯವೂ ಅಧಿಕ. ಪ್ರಿಯಾಪ್ರಿಯಗಳನ್ನು ತೊರೆದ ಮಹಾತ್ಮರೇ ಧನ್ಯರು. ನನಗೆ ಆ ಭಾಗ್ಯ ಇಲ್ಲ. ರಾಮನ ಮೇಲಿನ ಪ್ರೇಮವನ್ನು ನಾನು ತೊರೆಯಲಾರೆ, ಆದ್ದರಿಂದ ಪ್ರಾಣಗಳನ್ನು ತೊರೆಯುವುದೇ ಸರಿ” ಎಂದಳು.

ಸೀತೆಯ ವಾಕ್ಯಗಳನ್ನು ಕೇಳುತ್ತಿರುವಂತೆ ರಾಕ್ಷಸಿಯರೆಲ್ಲರೂ ಕ್ರೋಧ ಮೂರ್ಛಿತೆಯರಾದರು. “ಎಲೆ ದುಷ್ಟೆ, ಆತ್ಮಹತ್ಯಕ್ಕೂ ಹೇಸದಷ್ಟು ನೀಚತನಕ್ಕೆ ಇಳಿದೆಯಾ? ತಡೆ ಈಗಲೇ ನಿನ್ನನ್ನು ಭಕ್ಷಿಸಿಬಿಡುತ್ತೇವೆ” ಎಂದು ಆರ್ಭಟಿಸುತ್ತಾ ಅವರು ಮೇಲಕ್ಕೆದ್ದರು. ಆಗ ತ್ರಿಜಟೆಯೆಂಬ ರಾಕ್ಷಸವೃದ್ಧೆ ಅವರನ್ನು ತಡೆದು “ಎಲೆ ಪಾಪಿಗಳಾ, ನಿಮ್ಮ ನಿಮ್ಮ ಶವಗಳನ್ನು ನೀವೇ ಕಿತ್ತು ತಿನ್ನುವ ಗತಿ ನಿಮಗೆ ಪ್ರಾಪ್ತವಾಗಿರುವಾಗ ದಶರಥನ ಸೊಸೆಯಾದ ಈ ಜಾನಕಿಯನ್ನು ತಿನ್ನುವುದಕ್ಕೆ ಹವಣಿಸುವಿರಾ? ಈಗತಾನೆ ನಾನೊಂದು ಭಯಂಕರವಾದ ಸ್ವಪ್ನವನ್ನು ಕಂಡೆ. ಅದನ್ನು ಕೇಳಿ; ಕೇಳಿ ನಡುಗಿರಿ. ಸೀತಾಭರ್ತನಾದ ಶ್ರೀರಾಮಚಂದ್ರನು ಶುಕ್ಲಮಾಲ್ಯಾಂಬರಧರನಾಗಿ, ಗಜದಂತದಿಂದ ಮಾಡಿದ ವಿಮಾನವನ್ನು ಸಹಸ್ರ ಹಂಸಗಳು ಹೊತ್ತಿರಲಾಗಿ ಆಕಾಶ ಮಾರ್ಗದಲ್ಲಿ ಈ ಲಂಕಾಪಟ್ಟಣಕ್ಕೆ ಬಂದನು. ಆತನ ತಮ್ಮನಾದ ಲಕ್ಷ್ಮಣನು ಜೊತೆಯಲ್ಲಿಯೆ ಇದ್ದನು. ಈ ಸೀತಾದೇವಿಯೂ ಶುಭ್ರಧವಳವಾದ ವಸ್ತ್ರಗಳನ್ನು ಧರಿಸಿ ಶ್ವೇತಪರ್ವತದ ಮೇಲೆ ನಿಂತಿದ್ದವಳು ಸೂರ್ಯನೊಡನೆ ಬೆಳಕು ಸೇರುವಂತೆ ಶ್ರೀರಾಮನೊಡನೆ ವಿಮಾನಾರೂಢೆಯಾದಳು. ಮರುಕ್ಷಣದಲ್ಲಿಯೇ ಮತ್ತೊಂದು ದೃಶ್ಯ ಕಾಣಿಸಿತು. – ರಾಮಲಕ್ಷ್ಮಣರು ಚತುರ್ದಂತಗಳಿಂದ ಕೂಡಿದ ಆನೆಯನ್ನೇರಿ ತಮ್ಮ ತೇಜಸ್ಸಿನಿಂದ ದಿಕ್ಕುಗಳನ್ನು ಬೆಳಗುತ್ತಾ ಸೀತಾದೇವಿಯ ಬಳಿಗೆ ಬಂದರು. ಅವರು ಈಕೆಯನ್ನು ಎತ್ತಿ ಆನೆಯ ಕುಂಭ ಸ್ಥಳದಲ್ಲಿ ಕುಳ್ಳಿರಿಸಿದರು. ಆಗ ಆಕೆ ಎದ್ದು ಒಂದು ಕ್ಷಣಕಾಲ ಶ್ರೀರಾಮನ ತೊಡೆಗಳ ಮೇಲೆ ಕುಳಿತಿದ್ದು ಅನಂತರ ಕೈಗಳನ್ನು ಮೇಲಕ್ಕೆ ನೀಡಿ ಸೂರ್ಯಚಂದ್ರರನ್ನು ಕೈಲಿ ಹಿಡಿದುಕೊಂಡಳು. ಅವರು ಕುಳಿತಿದ್ದ ಬಿಳಿಯ ಆನೆ ಆ ಲಂಕಾನಗರದ ಮೇಲೆ ಹಾರಿ ಬಂದಿತು. ಶ್ರೀರಾಮ ತಮ್ಮನೊಡನೆಯೂ ಮಡದಿಯೊಡನೆಯೂ ಆನೆಯಿಂದಿಳಿದು ಎಂಟು ಬಿಳಿ ಎತ್ತುಗಳ ರಥವನ್ನು ಆರೋಹಿಸಿ ಲಂಕೆಯನ್ನು ಪ್ರವೇಶಿಸಿದನು. ಇಲ್ಲಿಗೆ ಬಂದ ಮೇಲೆ ಅವರೆಲ್ಲರೂ ಪುಷ್ಪಕ ವಿಮಾನವನ್ನೇರಿ ಉತ್ತರ ದಿಕ್ಕಿಗೆ ಪ್ರಯಾಣ ಹೊರಟರು. ಈ ಬಗೆಯಾಗಿ ಕಾಣಿಸಿದ ಶ್ರೀರಾಮಚಂದ್ರನನ್ನು ದೇವತೆಗಳಾಗಲಿ ರಾಕ್ಷಸರಾಗಲಿ ಜಯಿಸುವುದು ಎಲ್ಲಾದರೂ ಸಾಧ್ಯವೆ? ಸ್ವಪ್ನವು ಇನ್ನೂ ಮುಂದುವರಿಯಿತು. ನಮ್ಮ ದೊರೆಯಾದ ರಾವಣನು ಮೈಗೆಲ್ಲಾ ಎಣ್ಣೆ ಬಳಿದುಕೊಂಡು, ಕೆಂಪುಬಟ್ಟೆ ಉಟ್ಟು, ಕೆಂಪುಹಾರ, ಧರಿಸಿ, ಮದ್ಯಪಾನ ಮಾಡುತ್ತಾ ಮದಿಸಿ, ಪುಷ್ಪಕವಿಮಾನವನ್ನೇರಿದನು. ಅಲ್ಲಿಂದ ಕೆಳಗೆ ಬಿದ್ದು ಭೂಮಿಯ ಮೇಲೆ ಹೊರಳಾಡುತ್ತಿದ್ದನು. ಆ ದೃಶ್ಯ ಮುಗಿಯುವಷ್ಟರಲ್ಲಿ ಮತ್ತೊಮ್ಮೆ ಆತ ಕಾಣಿಸಿಕೊಂಡನು. ಆತನ ಮೈಮೇಲೆಲ್ಲಾ ಕೆಂಪು ಹೂವಿನ ಸರಗಳು; ಮೈಗೆಲ್ಲಾ ಕೆಂಪುಗಂಧ ಬಳಿದಿದೆ: ತೈಲಪಾನ ಮಾಡುತ್ತಾ ಹುಚ್ಚನಂತೆ ನಗುತ್ತಿದ್ದಾನೆ. ಈ ಅವಸ್ಥೆಗಳಲ್ಲಿ ಅವನು ಕತ್ತೆಯನ್ನು ಹೂಡಿದ ರಥವನ್ನು ಹತ್ತಿ ದಕ್ಷಿಣ ದಿಕ್ಕಿಗೆ ಪ್ರಯಾಣ ಹೊರಟನು. ಪ್ರಯಾಣ ಮುಂದುವರಿಯುವಷ್ಟರಲ್ಲಿ ಆತನು ಆ ರಥದಿಂದ ಕೆಳಕ್ಕೆ ಬಿದ್ದು, ಗಾಢಾಂಧಕಾರದಿಂದ ಕೂಡಿ ದುರ್ಗಂಧಮಯವಾಗಿದ್ದ ನರಕೋಪಮವಾದ ಮಲಪಂಕದಲ್ಲಿ ಬಿದ್ದು ಮುಳುಗಿ ಹೋದನು. ರಾವಣೇಶ್ವರನ ಮಕ್ಕಳೆಲ್ಲರೂ ಶರೀರಕ್ಕೆ ಎಣ್ಣೆಯನ್ನು ಬಳಿದುಕೊಂಡು ದಕ್ಷಿಣ ದಿಕ್ಕಿಗೆ ಪ್ರಯಾಣ ಹೊರಟರು. ವಿಭೀಷಣನೊಬ್ಬನು ಮಾತ್ರ ಶುಭ್ರವಸ್ತ್ರಗಳನ್ನು ಧರಿಸಿ, ದಿವ್ಯಲಂಕಾರಭೂಷಿತನಾಗಿ ತನ್ನ ನಾಲ್ವರು ಮಂತ್ರಿಗಳೊಡನೆ ಶ್ವೇತಚ್ಛತ್ರದ ನೆರಳಿನಲ್ಲಿ ಆನೆಯ ಮೇಲೆ ಕುಳಿತು ಆಕಾಶಮಾರ್ಗದಲ್ಲಿ ಪ್ರಯಾಣಮಾಡುತ್ತಿದ್ದನು. ಆತನ ವಿನಾ ಉಳಿದ ರಾಕ್ಷಸರೆಲ್ಲರೂ ಎಣ್ಣೆಯನ್ನು ಕುಡಿಯುತ್ತಾ ಕೆಂಪು ಬಟ್ಟೆ ಕೆಂಪು ಹಾರಗಳನ್ನು ಧರಿಸಿ ಹುಚ್ಚರಂತೆ ಕುಣಿಯುತ್ತಿದ್ದರು. ರಾವಣಪಾಲಿತವಾದ ಈ ಲಂಕಾನಗರಿಯನ್ನೆಲ್ಲಾ ಶ್ರೀರಾಮದೂತನಾದ ವಾನರವೀರನೊಬ್ಬನು ಸುಟ್ಟು ಬೂದಿಮಾಡಿದನು. ಈ ಲಂಕೆಯ ಹೆಂಗಸರೂ ಸಹ ಎಣ್ಣೆಯನ್ನು ಕುಡಿದು ಸಿಕ್ಕಿದಂತೆ ಗಹಗಹಿಸಿ ನಗುತ್ತಾ, ಲಂಕೆಯಲ್ಲೆಲ್ಲಾ ಕುಣಿದಾಡುತ್ತಿದ್ದರು. ಎಲೆ ರಾಕ್ಷಸಿಯರಿರಾ, ಈ ಸ್ವಪ್ನವು ಏನನ್ನು ಸೂಚಿಸುತ್ತದೆ ಹೇಳಿ? ನನ್ನ ಮಾತನ್ನು ಕೇಳಿ. ಈಗಲೇ ನೀವೆಲ್ಲರೂ ಊರುಬಿಟ್ಟು ಓಡಿಹೋಗಿಬಿಡಿರಿ. ಹಾಗೆ ಮಾಡಲಿಲ್ಲವೋ ಮೃತ್ಯು ತಪ್ಪಿದುದಲ್ಲ. ಶ್ರೀರಾಮನು ಸೀತಾದೇವಿಯನ್ನು ಇಲ್ಲಿಂದ ಕರೆದೊಯ್ಯುವುದು ಖಂಡಿತ. ಆತನು ಇಲ್ಲಿಗೆ ಬಂದಾಗ ಸೀತೆಯನ್ನು ಇಷ್ಟು ಗೋಳುಹೊಯ್ದುಕೊಂಡಿರುವ ನಿಮಗೆಲ್ಲರಿಗೂ ಸಾವು ಸ್ವತಃಸಿದ್ಧ. ಇಗೋ ಸಾರಿಹೇಳುತ್ತೇನೆ. ಇನ್ನು ಗೋಳುಹೊಯ್ದುಕೊಂಡಿರುವ ನಿಮಗೆಲ್ಲರಿಗೂ ಸಾವು ಸ್ವತಃಸಿದ್ಧ. ಇಗೋ ಸಾರಿಹೇಳುತ್ತೇನೆ. ಇನ್ನು ನೀವು ಸೀತಾದೇವಿಯನ್ನು ಸಾಂತ್ವನ ವಚನಗಳಿಂದ ಸಮಾಧಾನಪಡಿಸಿರಿ. ಇದರಿಂದ ಶ್ರೇಯಸ್ಸುಂಟು. ತಪ್ಪನ್ನು ಕ್ಷಮಿಸೆಂದು ಆಕೆಯ ಕಾಲಿಗೆ ಅಡ್ಡ ಬೀಳಿರಿ; ಜೀವದಾನ ಮಾಡಲಿ. ಆದ್ದರಿಂದ ಚಚ್ಚರದಿಂದ ವರ್ತಿಸಿ” ಎಂದು ತಿಳಿಸಿದಳು. ಅವಳ ಮಾತುಗಳನ್ನು ಕೇಳಿದ ರಾಕ್ಷಸಿಯರು ನಡುಗಿ ಕ್ಷಣಕಾಲ ಸ್ತಂಭಿತರಾಗಿ ಕುಳಿತರು. ರಾತ್ರಿಯೆಲ್ಲವೂ ನಿದ್ರೆಗೆಟ್ಟಿದ್ದ ಆ ರಾಕ್ಷಸಿಯರಿಗೆ ಹಾಗೆಯೆ ಜೊಂಪು ಬಂದಂತಾಯಿತು. ಕುಳಿತಲ್ಲಿಯೆ ಉರುಳಿಕೊಂಡು ಗಾಢ ನಿದ್ರಾಸಕ್ತರಾದರು.