ಆ ವೇಳೆಗಾಗಲೇ ಆ ಮೃಗದ ಬಣ್ಣವನ್ನು ನೋಡಿ ಸೀತೆಯ ಮನಸ್ಸು ಮೋಹಗೊಂಡಿತ್ತು.

ಅಶೋಕ ಮಾವು ತಾವರೆ ಮೊದಲಾದ ಗಿಡಮರಗಳ ಹೂವುಗಳನ್ನು ಕೊಯ್ಯಲು ಸಂಚರಿಸುತ್ತಿದ್ದ ಸೀತೆ ಆ ಮಾಯಾಮೃಗವನ್ನು ನೋಡಿದಳು. ಆ ಮೃಗದ ಕಾಂತಿ ಸೀತೆಯ ಮನಸ್ಸನ್ನು ಸೆಳೆಯಿತು. ಮತ್ತೆ ಮತ್ತೆ ಅದು ಸೀತೆಗೆ ಸೋಜಿಗವನ್ನುಂಟುಮಾಡುತ್ತ ಅವಳೆದುರಿಗೆ ಸಂಚರಿಸಿತು. ಚಿನ್ನ ಬೆಳ್ಳಿಯ ಕಾಂತಿಯಿಂದ ಹೊಳೆಯುತ್ತಿದ್ದ ಆ ಮೃಗವನ್ನು ಸೀತೆ ಅರಳಿದ ಕಣ್ಣುಗಳಿಂದ ಕಂಡು ಆಯುಧಪಾಣಿಗಳಾದ ರಾಮಲಕ್ಷ್ಮಣರನ್ನು ಕೂಗಿಕೊಂಡಳು. ಪುರುಷಶ್ರೇಷ್ಠರಾದ ಅವರಿಬ್ಬರೂ ಬಂದು ಅದನ್ನು ನೋಡಿದರು. ಆಗ ಲಕ್ಷ್ಮಣನು ರಾಮನನ್ನು ಕುರಿತು ನುಡಿದನು – “ಅಣ್ಣ, ರಾಕ್ಷಸನಾದ ಮಾರೀಚನೇ ಈ ರೂಪದಿಂದ ಬಂದಿದ್ದಾನೆ. ಈ ರೀತಿ ಮೃಗವನ್ನು ಲೋಕದಲ್ಲಿ ನೀನು ಎಲ್ಲಿಯಾದರೂ ಕಂಡಿರುವೆಯಾ? ಇದು ಮಾಯಾ ಮೃಗವೆಂದು ಮೇಲೆಯೆ ಕಾಣುವುದಿಲ್ಲವೆ?”

ಈ ವೇಳೆಗಾಗಲೇ ಆ ಮೃಗದ ಬಣ್ಣವನ್ನು ನೋಡಿ ಸೀತೆಯ ಮನಸ್ಸು ಮೋಹಗೊಂಡಿತ್ತು. ಲಕ್ಷ್ಮಣನು ಮುಂದೆ ಮಾತನಾಡದಂತೆ ತಡೆದು ಸೀತೆ ಮುಗುಳುನಗೆಯನ್ನು ಬೀರುತ್ತ ರಾಮನಿಗೆ “ಆರ್ಯಪುತ್ರ, ಈ ಮೃಗದ ಚೆಲುವನ್ನು ಕಂಡು ನನ್ನ ಮನಸ್ಸು ಮರುಳುಗೊಂಡಿದೆ. ಈ ಮೃಗವನ್ನು ನೀನು ಹಿಡಿದು ತಂದರೆ, ಅದು ನಮ್ಮ ಕ್ರೀಡೆಗೆ ಒಂದು ವಸ್ತುವಾಗಿ ಪರಿಣಮಿಸುವುದು. ಜೀವಸಹಿತ ಈ ಮೃಗವನ್ನು ನೀನು ಹಿಡಿದು ತಂದರೆ, ಇದನ್ನು ನೋಡಿದ ಜನರಿಗೆ ಆಶ್ಚರ್ಯವುಂಟಾಗುವುದು; ಹಾಗೂ ಅದು ಅಂತಃಪುರಕ್ಕೆ ಒಂದು ಅಲಂಕಾರವಾಗುವುದು. ಒಂದುವೇಳೆ ಕೈಗೆ ಸಿಕ್ಕದ ಈ ಮೃಗವನ್ನು ನೀನು ಕೊಂದು ತಂದರೆ ಅದರ ಚರ್ಮದ ಮೇಲೆ ನಾವಿಬ್ಬರೂ ಕುಳಿತುಕೊಳ್ಳಬಹುದಲ್ಲವೆ?” ಎಂದು ತನ್ನ ಆಶೆಯನ್ನು ಹೊರಪಡಿಸಿದಳು. ಬಾಲಸೂರ್ಯನಂತೆ ಬಣ್ಣವನ್ನು ತಳೆದ ಆ ಮೃಗವು ರಾಮನ ಮನಸ್ಸನ್ನೂ ಅಪಹರಿಸಿತು. ಆಗ ಲಕ್ಷ್ಮಣನನ್ನು ಕುರಿತು ರಾಮನು “ಸೌಮಿತ್ರಿ, ಈ ತೆರನಾದ ಮೃಗ ಕುಬೇರನ ಉದ್ಯಾನವನದಲ್ಲಿಯೂ ಇರಲಾರದು. ಮಿಂಚಿನಂತೆ ಹೊಳೆಯುವ ಇದರ ನಾಲಗೆಯನ್ನು ನೋಡು. ಮೈಮೇಲಿರುವ ಚಿನ್ನದ ಚುಕ್ಕೆಗಳು ಹೇಗೆ ತಳತಳಿಸುತ್ತಿವೆ! ಈ ಜಿಂಕೆಯನ್ನು ಕಂಡರೆ ಯಾರ ಮನಸ್ಸು ತಾನೆ ಸೋಲದು! ಇದರ ಚರ್ಮ ನನಗೂ ಇಷ್ಟ. ನೀನು ಹೇಳುವಂತೆ ಒಂದುವೇಳೆ ಇದು ಮಾರೀಚನ ಮಾಯೆಯಾಗಿದ್ದರೆ ಈ ಮೃಗವನ್ನು ಕೊಲ್ಲುವುದೂ ನನ್ನ ಕರ್ತವ್ಯವೆ. ಏಕೆಂದರೆ ಮುನಿಹಿಂಸಕನಾದ ಮಾರೀಚನು ವಧ್ಯನೇ ಸರಿ. ಬಿಲ್ಲನ್ನು ಹಿಡಿದು ನೀನು ಸೀತೆಯನ್ನು ರಕ್ಷಿಸಿಕೊಂಡಿರು. ಈ ಮೃಗವನ್ನು ನಾನು ಜೀವಸಹಿತ ಹಿಡಿದು ತರುತ್ತೇನೆ; ಇಲ್ಲವಾದರೆ ಕೊಂದು ಇದರ ಚರ್ಮವನ್ನು ತರುತ್ತೇನೆ. ಅಪ್ರಮತ್ತನಾಗದೆ ಜಟಾಯುವಿನೊಡಗೂಡಿ ಸೀತೆಯನ್ನು ರಕ್ಷಿಸಿಕೊಂಡಿರು” ಎಂದು ಅಪ್ಪಣೆ ಮಾಡಿ ಬಿಲ್ಲು ಬಾಣಗಳನ್ನು ಹಿಡಿದು ಅದನ್ನು ಹಿಂಬಾಲಿಸಿ ಹೊರಟನು.

ರಾಮನು ತನ್ನನ್ನು ಬೆನ್ನಟ್ಟಿ ಬರಲು, ಅವನನ್ನು ಮೋಸಗೊಳಿಸ ಬಗೆದು ಮಾರೀಚನು ಅದೃಶ್ಯನಾದನು. ಮೃಗ ಎಲ್ಲಿರುವುದೋ ಎಂಬ ತವಕದಿಂದ ರಾಮನು ಹಿರಿದ ಕತ್ತಿಯಿಂದ ಧಾವಿಸಲು ಅವನ ಮುಂದೆ ಮತ್ತೆ ಅದು ಕಂಗೊಳಿಸಿತು. ರಾಮಬಾಣಕ್ಕೆ ಹೆದರಿ ಭಯದಿಂದ ಆಕಾಶದಲ್ಲಿ ನಗೆಯುತ್ತಿದೆಯೊ ಎಂಬಂತೆ ತೋರಿಸಿಕೊಳ್ಳುತ್ತ, ಮೋಡದಿಂದ ಮುಚ್ಚಿದ ಶರತ್ ಕಾಲದ ಚಂದ್ರನಂತೆ ಹೊಳೆದು ಕಾಣಿಸಿಕೊಳ್ಳುತ್ತ, ರಾಮನನ್ನು ಆಶ್ರಮದಿಂದ ಬಹುದೂರ ಕೊಂಡೊಯ್ದಿತು. ಆಯಾಸಗೊಂಡ ರಾಮನು ವಿಶ್ರಮಿಸಿಕೊಳ್ಳಲು ಮರದ ನೆರಳಿನಲ್ಲಿ ಕುಳಿತುಗೊಂಡನು. ಮೃಗಗಳ ಗುಂಪಿನಲ್ಲಿ ಮಾರೀಚನು ಮತ್ತೆ ಕಾಣಿಸಿಕೊಂಡನು. ಆ ಮೃಗದಿಂದ ಆಕರ್ಷಿತನಾದ ರಾಮನು ಮತ್ತೆ ಅದನ್ನು ಅಟ್ಟಲು, ಅದು ರಾಮನನ್ನು ವಂಚಿಸಿ ಓಡತೊಡಗಿತು. ಹೀಗೆ ತನ್ನನ್ನು ಬಾರಿ ಬಾರಿಗೂ ಮೋಸಗೊಳಿಸಲು ಯತ್ನಿಸುತ್ತಿದ್ದ ಮೃಗವನ್ನು ರಾಮನು ಹೊಡೆದು ಕೊಲ್ಲಲು ನಿಶ್ಚಯಿಸಿದನು. ಸೂರ್ಯ ಕಿರಣಗಳಿಗೆ ಸಮಾನವಾದ ಬಾಣವೊಂದನ್ನು ಸೆಳೆದು ಬಿಡಲು, ಅದು ಸಿಡಿಲೆರಗುವಂತೆ ಮಾರೀಚನ ಮೇಲೆ ಬಿದ್ದು ಅವನ ದೇಹವನ್ನು ಭೇದಿಸಿತು. ಸಾವು ಸಮೀಪಿಸಿದುದನ್ನರಿತ ಮಾರೀಚನು ಲಕ್ಷ್ಮಣನನ್ನು ಸೀತೆಯಿಂದ ಬೇರ್ಪಡಿಸುವ ಉಪಾಯವನ್ನು ನೆನೆದು, ರಾಮನ ಧ್ವನಿಯಂತೆ ‘ಹಾ ಸೀತೆ! ಓ ಲಕ್ಷ್ಮಣಾ!’ ಎಂದು ಕೂಗಿ ತನ್ನ ಮೃಗದೇಹವನ್ನು ತ್ಯಜಿಸಿ, ರಾಕ್ಷಸ ರೂಪದಿಂದಲೆ ಪ್ರಾಣಬಿಟ್ಟನು. ತನ್ನ ಎದುರಿಗೆ ಬಿದ್ದ ಘೋರಾರೂಪಿಯಾದ ರಾಕ್ಷಸನನ್ನು ನೋಡಿ ರಾಮನು ತಮ್ಮನ ಮಾತನ್ನು ನೆನೆದು “ರಾಕ್ಷಸನ ಧ್ವನಿಯನ್ನು ಕೇಳಿ ಸೀತೆ ಏನಾಗುವಳೊ, ಲಕ್ಷ್ಮಣನು ಯಾವ ಅವಸ್ಥೆಯನ್ನು ಹೊಂದುವನೊ” ಎಂದು ಯೋಚಿಸುತ್ತ ಆಶ್ರಮದ ಕಡೆಗೆ ಬೇಗಬೇಗನೆ ತೆರಳಿದನು. ಹೆಂಡತಿ ಮತ್ತು ತಮ್ಮನ ವಿಷಯದಲ್ಲಿ ಕಾತರನಾಗಿ ಬರುತ್ತಾ ದಾರಿಯಲ್ಲಿ ಸಿಕ್ಕಿದ ಮತ್ತೊಂದು ಮೃಗವನ್ನು ಹೊಡೆದು ಅದರ ಮಾಂಸವನ್ನು ತೆಗೆದುಕೊಂಡು ಬಂದನು.

ಆ ಮೃಗದಿಂದ ಆಕರ್ಷಿತನಾದ ರಾಮನು ಮತ್ತೆ ಅಟ್ಟಲು ಅದು ರಾಮನನ್ನು ವಂಚಿಸಿ ಓಡತೊಡಗಿತು.

ಇತ್ತ ಮಾರೀಚನು ಧ್ವನಿಯನ್ನು ಕೇಳಿ ಸೀತೆ ಲಕ್ಷ್ಮಣನನ್ನು ಕುರಿತು “ಲಕ್ಷಣಾ, ಆರ್ತನಾಗಿ ಕೂಗುತ್ತಿರುವ ರಾಮನ ಧ್ವನಿಯನ್ನು ಚೆನ್ನಾಗಿ ಕೇಳಿದೆ. ಅದನ್ನು ಕೇಳಿ ನನ್ನ ಜೀವವೆ ನಿಲ್ಲದಾಗಿದೆ. ದೀನನಾಗಿ ಕೂಗುತ್ತಿರುವ ರಾಮನನ್ನು ರಕ್ಷಿಸಲು ನೀನೆ ಸಮರ್ಥ. ಸಿಂಹಗಳಿಗೆ ಸ್ವಾಧೀನವಾದ ಮದಿಸಿದ ಎತ್ತಿನಂತೆ ರಾಕ್ಷಸರ ವಶವಾಗಿರುವ ನಿನ್ನ ಅಣ್ಣನ ಬಳಿಗೆ ಬೇಗ ಓಡು” ಎಂದು ಅವನನ್ನು ತ್ವರೆಗೊಳಿಸಿದಳು. ಆದರೆ ಲಕ್ಷ್ಮಣನು ರಾಮನ ಆಜ್ಞಾಧಾರಕನಾಗಿ ತಾನಿದ್ದ ಸ್ಥಳವನ್ನು ಬಿಟ್ಟು ಕದಲಲಿಲ್ಲ. ಮತ್ತೆ ಸೀತೆ “ಲಕ್ಷ್ಮಣಾ, ಅಣ್ಣನಿಗೆ ಒದಗಿರುವ ವಿಪತ್ತನ್ನು ಕಂಡೂ ಹೋಗದಿರುವ ನೀನು ಅವನಿಗೆ ಮಿತ್ರರೂಪದ ಶತ್ರುವಾಗಿರುವೆ. ನನ್ನ ಮೇಲಣ ಆಸೆಯಿಂದ ನೀನು ಅವನಲ್ಲಿಗೆ ಹೋಗಲು ಬಯಸುವುದಿಲ್ಲವೆಂದು ತಿಳಿಯುತ್ತೇನೆ. ಹಾಗಲ್ಲದಿದ್ದರೆ ನೀನು ಇಲ್ಲಿ ಸುಮ್ಮನೆ ಏಕೆ ನಿಂತಿರುವೆ?” ಎಂದು ಕಣ್ಣೀರು ಮಿಡಿಯುತ್ತ ಭೀತೆಯಾಗಿ ನುಡಿದಳು. ಅತ್ತಿಗೆಯ ಮಾತಿಗೆ ಲಕ್ಷ್ಮಣನು “ಭದ್ರೆ, ಯುದ್ಧದಲ್ಲಿ ರಾಮನನ್ನು ಗೆಲ್ಲಲು ದೇವದಾನವರಿಂದಲೂ ಸಾಧ್ಯವಿಲ್ಲ. ಇಂದ್ರನಿಗೆ ಸಮಾನನಾದ ಆತನು ವಿಪತ್ತಿಗೆ ಗುರಿಯಾಗುವುದೆಂದರೇನು? ನಿನ್ನನ್ನು ಒಬ್ಬಳನ್ನೆ ಈ ಕಾಡಿನಲ್ಲಿ ನಾನು ಬಿಟ್ಟು ಹೋಗಲಾರೆ. ತಾಯೆ, ನೀನೇಕೆ ದುಃಖಪಡುವೆ? ಆ ಮೃಗವನ್ನು ಕೊಂದು ರಾಮನು ಬಹುಬೇಗ ಇಲ್ಲಿಗೆ ಬರುತ್ತಾನೆ. ಇದು ರಾಮನ ಧ್ವನಿಯಲ್ಲ; ರಾಕ್ಷಸರ ಮೋಸದ ಧ್ವನಿ. ಖರನನ್ನು ಕೊಂದು ನಾವು ರಾಕ್ಷಸರ ಹಗೆತನವನ್ನು ಗಳಿಸಿರುವ ಕಾರಣ, ನಿನ್ನೊಬ್ಬಳನ್ನೆ ಬಿಟ್ಟು ನಾನು ಇಲ್ಲಿಂದ ಕದಲಲಾರೆ. ಈ ವಿಷಯವನ್ನು ಕುರಿತು ನೀನು ಚಿಂತಿಸಬೇಡ” ಎಂದನು.

ಲಕ್ಷ್ಮಣನು ಮಾತುಗಳನ್ನು ಕೇಳುತ್ತಲೆ ಸೀತೆಯ ಕೋಪ ಉಕ್ಕೇರಿತು. ನಿಜವನ್ನು ನುಡಿದ ಲಕ್ಷ್ಮಣನನ್ನು ಕುರಿತು ಸೀತೆ ಕ್ರೂರವಾದ ಮಾತುಗಳನ್ನು ನುಡಿಯತೊಡಗಿದಳು. “ಅನಾರ್ಯ, ಕುಲಪಾಂಸುಲ, ಸ್ವಲ್ಪವಾದರೂ ಕರುಣೆಯಿಲ್ಲವೆ ನಿನಗೆ? ರಾಮನು ವಿಪತ್ತಿನಲ್ಲಿರುವುದನ್ನು ಕಂಡು ಸ್ವಲ್ಪವೂ ಮರುಕಪಡದಿರುವೆ. ಭರತನಿಂದ ಪ್ರೇರಿತನಾಗಿ ನನ್ನನ್ನು ಕಾಮಿಸಿ ಬಂದಿರುವ ನೀನೊಬ್ಬ ಬೇಹುಗಾರನೆಂದು ತೋರುತ್ತದೆ. ನಿನಗಾಗಲಿ, ಭರತನಿಗಾಗಲಿ ನಾನು ವಶಳಾಗುವೆನೆಂದು ತಿಳಿಯಬೇಡ. ಕನ್ನೈದಿಲೆಯ ಬಣ್ಣವುಳ್ಳವನೂ ತಾವರೆಯಂತೆ ಕಣ್ಣುಳ್ಳವನೂ ಆದ ರಾಮನನ್ನು ಬಿಟ್ಟು ನಾನು ಮತ್ತೊಬ್ಬರನ್ನು ಬಯಸುವೆನೆಂದು ಬಗೆದೆಯಾ? ರಾಮನನ್ನು ಬಿಟ್ಟು ಒಂದು ಕ್ಷಣವೂ ನಾನು ಜೀವಿಸಲಾರೆ. ಇಗೋ ನಿನ್ನೆದುರಿಗೇ ಪ್ರಾಣಬಿಡುತ್ತೇನೆ.”

ದೇವಿಯ ಕ್ರೂರವಾಕ್ಯಗಳನ್ನು ಕೇಳಿ ಲಕ್ಷ್ಮಣನ ಮೈ ಜುಮ್ಮೆಂದಿತು. ಲೋಕದಲ್ಲಿ ಸ್ತ್ರೀ ಸ್ವಭಾವವೆ ಹೀಗೆಂದು ಬಗೆದು ಲಕ್ಷ್ಮಣನು ಸೀತೆಯನ್ನು ಕುರಿತು, “ಅಮ್ಮ ಜಾನಕಿ, ಕಾದ ಕಬ್ಬಿಣದಂತಿರುವ ಈ ನಿನ್ನ ಮಾತನ್ನು ಕಿವಿಯಿಂದ ಕೇಳಲಾರೆ. ನ್ಯಾಯವಾದ ಮಾತನ್ನು ಹೇಳುತ್ತಿರುವ ನನ್ನನ್ನು ನೀನು ಕಠಿಣವಾಕ್ಯಗಳಿಂದ ತಿರಸ್ಕರಿಸುತ್ತಿರುವೆ. ಇಗೋ, ನಾನಾದರೊ ರಾಮನನ್ನು ಕುರಿತು ಹೊರಟೆ. ಈಗ ಕಾಣಿಸುತ್ತಿರುವ ದುರ್ನಿಮಿತ್ತಗಳನ್ನು ನೋಡಿದರೆ ಮತ್ತೆ ನಿನ್ನನ್ನು ನೋಡುವೆನೊ ಇಲ್ಲವೊ ನಾನರಿಯೆ” ಎಂದನು. ಸೀತೆ ಮತ್ತೆ “ರಾಮನಿಲ್ಲದೆ ನಾನು ಗೋದಾವರಿಯಲ್ಲಿ ಮುಳುಗಿ ಸಾಯುತ್ತೇನೆ! ಬೆಂಕಿಗೆ ಬೀಳುತ್ತೇನೆ! ಪರಪುರುಷರನ್ನು ಕಾಲಿನಿಂದಲೂ ಮುಟ್ಟುವುದಿಲ್ಲ” ಎಂದು ಕೂಗಿಕೊಳ್ಳುತ್ತ, ಎದೆಯನ್ನು ಬಡಿದುಕೊಳ್ಳಲು ಮೊದಲುಮಾಡಿದಳು. ಲಕ್ಷ್ಮಣನನ್ನು ಕುರಿತು ಮಾತನಾಡಲೇ ಇಲ್ಲ. ಆಗ ವಿಧಿಯಿಲ್ಲದೆ ಲಕ್ಷ್ಮಣನು ಧೈರ್ಯದಿಂದ ಸೀತೆಗೆ ನಮಸ್ಕರಿಸಿ. ಆಕೆಯನ್ನೇ ಬಾರಿಬಾರಿಗೂ ನೋಡುತ್ತ, ರಾಮನ ಹೋದಕಡೆ ಹೊರಟುಹೋದನು.

* * *