ಆಶ್ರಮದ ಸುತ್ತಲೂ ಸೀತೆಯನ್ನು ಹುಡುಕಿಕೊಂಡು ಶ್ರೀರಾಮನು ಹುಚ್ಚನಂತೆ ತಿರುಗಾಡಿದನು.

ಶ್ರೀರಾಮನು ಮಾರೀಚನನ್ನು ಕೊಂದು ಸೀತೆಯನ್ನು ನೋಡಲು ಕಾತರನಾಗಿ ಆಶ್ರಮಕ್ಕೆ ಹಿಂದಿರುಗಿದನು. ಉದ್ವಿಗ್ನನಾದ ರಾಮನ ಹಿಂದೆ ನರಿಯೊಂದು ಕೂಗಿತು. ಆ ಕೂಗನ್ನು ಕೇಳಿ ಶ್ರೀರಾಮನು ಅಮಂಗಳವನ್ನು ಶಂಕಿಸಿದನು: “ಸೀತೆಯನ್ನು ರಾಕ್ಷಸರು ಭಕ್ಷಿಸಿರಬಹುದೆ? ನನ್ನಂತೆಯೆ ಕೂಗಿದ ಮಾರೀಚನ ಧ್ವನಿಯನ್ನು ಕೇಳಿ ಸೀತೆಯೊಬ್ಬಳನ್ನೆ ಬಿಟ್ಟು ಲಕ್ಷ್ಮಣನು ನನ್ನಲ್ಲಿಗೆ ಬರುತ್ತಿರಬಹುದೆ? ಈ ಕಾಂಚನಮೃಗ ನನ್ನನ್ನು ಬಹುದೂರ ಸೆಳೆದು ತಂದಿತು. ಜನಸ್ಥಾನದಲ್ಲಿರುವ ನನಗೂ ರಾಕ್ಷಸರಿಗೂ ಬದ್ದವೈರ ಬೇರೆ ಉಂಟಾಗಿದೆ. ಸೀತಾಲಕ್ಷ್ಮಣರು ಕ್ಷೇಮದಿಂದಿರುವರೊ ಇಲ್ಲವೊ!”

ಹೀಗೆ ಚಿಂತಿಸುತ್ತಾ ಬರುತ್ತಿದ್ದ ರಾಮನಿಗೆ ಘೋರವಾದ ದುಶ್ಯಕುನಗಳು ಕಾಣಿಸಿಕೊಂಡವು. ಇವುಗಳಿಂದ ವ್ಯಥೆಗೊಂಡ ರಾಮನು ಆಶ್ರಮಕ್ಕೆ ವೇಗವೇಗವಾಗಿ ಬರುತ್ತ ದಾರಿಯಲ್ಲಿ ಕಾಂತಿಹೀನನಾದ ಲಕ್ಷ್ಮಣನನ್ನು ಕಂಡನು. ಸೀತೆಯೊಬ್ಬಳನ್ನೆ ಕಾಡಿನಲ್ಲಿ ಬಿಟ್ಟು ಬಂದ ಲಕ್ಷ್ಮಣನನ್ನು ಕುರಿತು ರಾಮನು “ಲಕ್ಷ್ಮಣ, ಸೀತೆ ಕ್ಷೇಮದಿಂದಿರುವಳೆ? ಅವಳೊಬ್ಬಳನ್ನೆ ಕಾಡಿನಲ್ಲಿ ಬಿಟ್ಟು ಬಂದುದು ತಪ್ಪಾಯಿತು. ನಾವು ಆಶ್ರಮಕ್ಕೆ ಹೋಗುವವರೆಗೆ ರಾಕ್ಷಸರಿಂದ ಭಕ್ತಿತಳಾಗದೆ ಸೀತೆ ಕ್ಷೇಮದಿಂದಿರುವಳೆ? ಈ ದುಶ್ಯಕುನಗಳನ್ನು ನೋಡಿದರೆ ಸೀತೆ ಕ್ಷೇಮವಾಗಿರಳೆಂದೆ ನನ್ನ ನಂಬಿಕೆ. ನನ್ನನ್ನು ಮೋಸಗೊಳಿಸಿದ ಮಾರೀಚನೇನೊ ಮೃತನಾದನು. ಆದರೆ ನನ್ನ ಮನಸ್ಸು ಕುಗ್ಗಿದೆ. ಎಡಗಣ್ಣು ಬೇರೆ ಅದುರುತ್ತಿದೆ. ಲಕ್ಷ್ಮಣ, ನಾವು ಆಶ್ರಮಕ್ಕೆ ಹೋಗುವ ವೇಳೆಗೆ ಸೀತೆ ಮೃತಳಾಗಿರುತ್ತಾಳೆ; ಇಲ್ಲವೆ ರಾಕ್ಷಸರಿಂದ ಅಪಹೃತಳಾಗಿರುತ್ತಾಳೆ. ಇದರಲ್ಲಿ ಸಂದೇಹವೇ ಇಲ್ಲ. ಸೀತೆಯನ್ನು ಬಿಟ್ಟು ನಾನು ಕ್ಷಣಕಾಲವೂ ಬದುಕಿರಲಾರೆ. ವತ್ಸ, ಸೀತೆ ಬದುಕಿರುವಳೋ ಇಲ್ಲವೊ ಅದನ್ನು ಮೊದಲು ಹೇಳು. ಈಗ ಉಂಟಾಗಿರುವ ವ್ಯಸನದಿಂದ ನನಗೆ ಏನು ಮಾಡುವುದಕ್ಕೂ ತೋರದಾಗಿದೆ. ಖರನ ಮರಣದೀಂದ ಸಂತಾಪಗೊಂಡ ರಾಕ್ಷಸರು ಈ ಸಮಯವನ್ನೆ ಕಾಯ್ದು ಆಕೆಯನ್ನು ಭಕ್ಷಿಸಿರಬೇಕು. ಈ ವಿಧವಾದ ದುಃಖವನ್ನು ನಾನು ಅನುಭವಿಸಬೇಕೆಂಬುದು ವಿಧಿಸಂಕಲ್ಪವೆಂದು ತೋರುತ್ತದೆ. ” ಹೀಗೆಂದು ನುಡಿದು ಹಸಿವು ನೀರಡಿಕೆ ಆಯಾಸಗಳಿಂದ ಕೂಡಿದ ರಾಮನು ಲಕ್ಷಣನೊಡನೆ ಆಶ್ರಮಕ್ಕೆ ಬಂದನು.

ಪರ್ಣಶಾಲೆಯಲ್ಲಿ ಸೀತೆ ಕಾಣಬರಲಿಲ್ಲ. ಶ್ರೀರಾಮನು ಸೀತೆಯ ವಿಹಾರಸ್ಥಾನಗಳನ್ನು ಹುಡುಕಿ ನೋಡಿದನು ಆದರೇನು? ಸೀತೆ ಸಿಕ್ಕುವಳೆ? ಘೋರವಾದ ದುಃಖದಿಂದ ಪೀಡಿತನಾದ ರಾಮನು ಮತ್ತೆ “ಲಕ್ಷ್ಮಣ, ಸೀತೆಯೊಬ್ಬಳನ್ನೆ ಕಾಡಿನಲ್ಲಿ ಏತಕ್ಕಾಗಿ ಬಿಟ್ಟು ಬಂದೆ? ನಿನ್ನನ್ನು ನೋಡಿದೊಡನೆಯೆ ನನ್ನ ಎಡಗಣ್ಣೂ ಭುಜವೂ ಚಲಿಸಿದುವು” ಎಂದನು. ಲಕ್ಷಂಣನು ರಾಮನನ್ನು ಕುರಿತು ಹೇಳಿದನು: “ಅಣ್ಣ, ದೇವಿಯ ಚುಚ್ಚು ಮಾತುಗಳನ್ನು ಕೇಳಿ ತಡೆಯಲಾರದೆ ಮನಸ್ಸಿಲ್ಲದ ಮನಸ್ಸಿನಿಂದ ನಿನ್ನೆಡೆಗೆ ಬಂದೆ . ಹಾ ಸೀತೆ! ಓ ಲಕ್ಷ್ಮಣಾ! ಎಂಬ ಧ್ವನಿಯನ್ನು ಕೇಳಿ ಭಯದಿಂದ ನಡುಗಿ ಅತ್ತಿಗೆ ನಿನ್ನ ಬಳಿಗೆ ಹೋಗುವಂತೆ ನನಗೆ ಹೇಳಿದಳು. ಇದು ರಾಕ್ಷಸರ ಧ್ವನಿ, ರಾಮನನ್ನು ಗೆಲ್ಲಲು ದೇವಾಸುರರಿಂದಲೂ ಸಾಧ್ಯವಿಲ್ಲ, ಈ ವಿಷಯದಿಂದ ಹೆಚ್ಚು ಉತ್ಸುಕಗಳಾಗದಿರು” ಎಂದು ನಾನು ಎಷ್ಟು ಹೇಳಿದರೂ ದೇವಿ ನನ್ನನ್ನು ಹೊಂದಬೇಕೆಂದು ಭರತನಿಂದ ಪ್ರೇರಿತನಾಗಿ ಬಂದಿರುವೆ. ಆದರೆ ಅದು ಎಂದಿಗೂ ಸಾಧ್ಯವಾಗದೆ ಮಾತು ಎಂದು ಚುಚ್ಚಿ ನುಡಿದಳು. ಆ ಮಾತುಗಳನ್ನು ಕೇಳಿ ತಾಳಲಾರದೆ, ಕೋಪದಿಂದ ಹೊರಟು ಬಂದೆ” ಎಂದನು. “ಲಕ್ಷ್ಮಣ, ಸೀತೆಯನ್ನು ನೀನು ಒಂಟಿಯಾಗಿ ಬಿಟ್ಟು ಬಂದುದು ಅಕಾರ್ಯವಾಯಿತು. ಸೀತೆಯ ಮಾತನ್ನು ಕೇಳಿ ಕೋಪಕ್ಕೆ ವಶನಾಗಿ ನನ್ನ ಆಜ್ಞೆಯನ್ನು ಮೀರಿದೆ” ಎಂದು ನುಡಿದು ರಾಮನು ಅವನೊಡನೆ ಆಶ್ರಮವನ್ನು ಹೊಕ್ಕನು.

ಶ್ರೀರಾಮನಿಗೆ ಮತ್ತೆ ದುಶ್ಯಕುನಗಳಾದುವು. ಎಡಗಣ್ಣು ಅದುರಿತು; ದೇಹ ಕಂಪಿಸಿತು; ಕಾಲು ಜಾರಿತು. ಸೀತೆಯಿಲ್ಲದ ಆಶ್ರಮ ಹೇಮಂತ ಋತುವಿನಲ್ಲಿ ಕಾಂತಿಹೀನವಾದ ಕಮಲದಂತೆ ಕಾಣಿಸಿತು. ಆಶ್ರಮದ ಸುತ್ತಲೂ ಇದ್ದ ಗಿಡಮರಗಳೂ ಪಕ್ಷಿಗಳೂ ರೋದಿಸುತ್ತಿರುವಂತೆ ಕಂಡು ಬಂದುವು. ದರ್ಭೆಗಳೂ ಕೃಷ್ಣಾಜಿನಗಳೂ ನೆಲದ ಮೇಲೆ ಅಸ್ತ್ಯವ್ಯಸ್ತವಾಗಿ ಬಿದ್ದಿದ್ದುವು. ಸೀತೆಯಿಲ್ಲದ ಆಶ್ರಮವನ್ನು ನೋಡಿ ರಾಮನ ಮನಸ್ಸಿನಲ್ಲಿ ನಾನಾ ರೀತಿಯ ಯೋಚನೆಗಳು ಮೂಡಿದವು. “ಸೀತೆಯನ್ನು ಯಾರೋ ಕದ್ದೊಯ್ದಿರಬೇಕು. ಇಲ್ಲವೆ ಆಕೆ ರಾಕ್ಷಸರಿಂದ ಭಕ್ಷಿತಳಾಗಿರಬೇಕು. ಹಾಗಲ್ಲದೆ ಭಯದಿಂದ ಎಲ್ಲಿಯಾದರೂ ಅವಿತುಕೊಂಡಿರಬೇಕು. ಅಥವಾ ಹೂವನ್ನು ಕೊಯ್ಯಲೋ ನದಿಗೋ ಹೋಗಿರಬೇಕು” ಹೀಗೆಂದು ಚಿಂತಿಸುತ್ತಿದ್ದ ರಾಮನು ಉನ್ಮತ್ತನಂತೆ ಕಾಣಿಸಿಕೊಂಡನು.

ಆಶ್ರಮದ ಸುತ್ತಲೂ ಶ್ರೀರಾಮನು ಹುಚ್ಚನಂತೆ ತಿರುಗಾಡಿದನು. ಮಲ್ಲಿಗೆ ಸಂಪಿಗೆ ತಾವರೆ ಕರ್ಣಿಕಾರ ಮುಂತಾದ ವೃಕ್ಷಗಳ ಬಳಿಗೆ ಹೋಗಿ ‘ಜನಕಸುತೆಯನ್ನು ಕಂಡಿರಾ?’ ಎಂದು ಅವುಗಳನ್ನು ಅಂಗಲಾಚಿ ಬೇಡಿಕೊಂಡನು. ಜಿಂಕೆಯ ಬಳಿಗೆ ಹೋಗಿ ಬೇಡಿದನು “ಎಲೈ ಮೃಗವೆ, ಮೃಗಶಾಬಾಕ್ಷಿಯಾದ ಸೀತೆಯನ್ನು ಕಂಡೆಯಾ? ನನ್ನ ಪ್ರಿಯೆ ಯಾವಾಗಲೂ ಹೆಣ್ಣು ಜಿಂಕೆಯೊಡಗೂಡಿರುತ್ತಿದ್ದಳು.” ಆನೆಯ ಬಳಿಗೆ ಹೋಗಿ “ಎಲೈ ಗಜವೆ, ನಿನ್ನ ಸೊಂಡಿಲುಗಳಂತೆ ತೊಡೆಗಳುಳ್ಳ ಸೀತೆಯನ್ನು ಕಂಡೆಯಾ? ಆಕೆ ಎಲ್ಲಿರುವಳೆಂಬುದು ನಿನಗೆ ತಿಳಿದಿರಬೇಕು.” “ಎಲೈ ಶಾರ್ದೂಲ, ಚಂದ್ರಮುಖಿಯಾದ ಸೀತೆಯನ್ನು ಕಂಡೆಯಾ? ಅದನ್ನು ಧೈರ್ಯವಾಗಿ ನನಗೆ ತಿಳಿಸು.” ಹೀಗೆಂದು ನಾನಾಕಡೆ ಸುತ್ತಾಡುತ್ತಾ “ಜಾನಕಿ, ಎಲ್ಲಿರುವೆ? ನನಗೆ ಉತ್ತರಕೊಡು. ಮರೆಯಲ್ಲಿ ಏಕೆ ಅಡಗಿಕೊಂಡಿರುವೆ?” ಎಂದು ಹಂಬಲಿಸುತ್ತ ಕಾಡಿನಿಂದ ಕಾಡಿಗೆ ಅಲೆದನು. ಉನ್ಮತ್ತನಂತೆ ಬೆಟ್ಟ ಹೊಳೆಗಳನ್ನು ದಾಟಿ ಕಾಡಿನ ಉಬ್ಬುತಗ್ಗುಗಳನ್ನು ಲಕ್ಷಿಸದೆ ಸಂಚರಿಸಿದನು.

ಆದರೂ ಸೀತೆ ಕಾಣಿಸದಿರಲು ರಾಮನು ಹುಚ್ಚನಂತೆ ಮತ್ತೆ “ಲಕ್ಷ್ಮಣ, ಸೀತೆ ಎಲ್ಲಿ? ಯಾವ ಕಡೆ ಹೋದಳು? ಓ ಪ್ರಿಯೆ, ಗಿಡದ ಮರೆಯಲ್ಲಿ ಅಡಗಿ ನನ್ನನ್ನು ಹಾಸ್ಯಮಾಡುವುದು ಸಾಕು. ನಿನ್ನನ್ನು ಬಿಟ್ಟು ನಾನು ಬದುಕಿರಲಾರೆ. ಸತ್ತು ಸ್ವರ್ಗವನ್ನೇರಿದರೆ ‘ವನವಾಸದ ಅವಧಿ ಮುಗಿಯದೆ ನೀನೇಕೆ ಇಲ್ಲಿಗೆ ಬಂದೆ?’ ಎಂದು ತಂದೆ ಕೇಳುವುದಿಲ್ಲವೇ? ವೈದೇಹಿ, ನನ್ನನ್ನು ಬಿಟ್ಟು ಎಲ್ಲಿಗೆ ಹೋಗುವೆ?” ಎಂದು ಗೋಳಾಡತೊಡಗಿದನು. ಆಗ ಲಕ್ಷ್ಮಣನು ಅಣ್ಣನನ್ನು ಸಮಾಧಾನಗೊಳಿಸಿ ಅವನೊಡನೆ ಗುಹೆಗಳಲ್ಲಿಯೂ ಬೆಟ್ಟದ ತಪ್ಪಲುಗಳಲ್ಲಿಯೂ ಸರೋವರಗಳಲ್ಲಿಯೂ ಸೀತೆಯನ್ನು ಹುಡುಕಿದನು. ಆದರೆ ಎಲ್ಲಿಯೂ ಸೀತೆ ಕಾಣಬರಲಿಲ್ಲ.

ಶ್ರೀರಾಮನು ಮತ್ತೆ ಗಟ್ಟಿಯಾಗಿ ರೋದಿಸುತ್ತಾ “ಲಕ್ಷ್ಮಣ, ಈ ಜಿಂಕೆಗಳ ಹನಿಗೂಡಿದ ಕಣ್ಣುಗಳನ್ನು ನೋಡಿದರೆ, ಸೀತೆ ನಷ್ಟಳಾಗಿರಬೇಕೆಂದೇ ತೋರುತ್ತದೆ. ಕೈಕೆಯ ಬಯಕೆ ಇಂದಿಗೆ ಕೈಗೂಡಿತು. ಸೀತೆಯೊಡನೆ ಕಾಡಿಗೆ ಬಂದ ನಾನು ಈಗ ಅವಳಿಲ್ಲದೆ ಅಯೋಧ್ಯೆಯ ಅಂತಃಪುರವನ್ನು ಹೇಗೆ ಹೋಗಲಿ? ಜಾನಕಿಯಿಲ್ಲದೆ ಜನಕರಾಜನನ್ನು ನಾನು ಹೇಗೆ ತಾನೆ ನೋಡಲಿ? ಸೀತೆಯಿಲ್ಲದೆ ನಾನು ಅಯೋಧ್ಯೆಯನ್ನು ಹೋಗಲಾರೆ. ಲಕ್ಷ್ಮಣ, ಅಯೋಧ್ಯೆಗೆ ಹೋಗಿ ಭರತನೇ ಈ ಭೂಮಿಯನ್ನು ಪಾಲಿಸಬೇಕೆಂಬ ನನ್ನ ಅಪ್ಪಣೆಯನ್ನು ಅವನಿಗೆ ತಿಳಿಸು. ನನ್ನ ತಾಯಿಯಾದ ಕೌಸಲ್ಯೆಯನ್ನು ಹೇಗಾದರೂ ಸಮಾಧಾನಪಡಿಸು” ಎಂದು ಉಸುರಿದನು. ಅಣ್ಣನ ಮಾತುಗಳನ್ನು ಕೇಳಿ ಲಕ್ಷ್ಮಣನಿಗೆ ದುಃಖ ಒತ್ತರಿಸಿ ಬಂದು ಕಣ್ಣಿನಲ್ಲಿ ನೀರು ಧಾರಾಕಾರವಾಗಿ ಹರಿಯತೊಡಗಿತು. ಅದನ್ನು ನೋಡಿ ರಾಮನು ಇನ್ನೂ ಹೆಚ್ಚು ದುಃಖಗೊಂಡವನಾದನು. “ವತ್ಸ, ನನ್ನಂತೆ ದುಃಖಿಗಳು ಈ ಲೋಕದಲ್ಲಿ ಮತ್ತೊಬ್ಬರಿಲ್ಲವೆಂದು ತೋರುತ್ತದೆ. ರಾಜ್ಯ ತ್ಯಾಗ, ಬಂಧುಜನಗಳ ಅಗಲಿಕೆ, ತಂದೆಯ ಸಾವು ಇವು ನನ್ನ ದುಃಖವನ್ನು ಪೂರ್ಣಗೊಳಿಸಿದುವು. ಸೀತೆಯ ಅಗಲಿಕೆ ನನ್ನ ದೇಹವನ್ನೇ ಸುಡುತ್ತಿದೆ, ರಾಹುಗ್ರಸ್ತನಾದ ಚಂದ್ರನಂತೆ ರಾಕ್ಷಸರ ನಡುವೆ ಸೀತೆ ಶೋಭಿಸಳು, ಲಕ್ಷ್ಮಣ, ಈ ಶಿಲಾತಳದ ಮೇಲೆ ಸೀತೆ ನನ್ನೊಡನೆ ಕುಳಿತುಕೊಂಡು ನಿನಗೆ ಪ್ರಿಯವಾದ ಮಾತುಗಳನ್ನಾಡಿದಳು. ಈ ಗೋದಾವರಿ ನನ್ನ ಪ್ರಿಯೆಗೆ ಪ್ರಿಯವಾದುದು. ಸೂರ್ಯಚಂದ್ರರೆ, ವಾಯುವೆ, ನನ್ನ ಪ್ರಿಯೆ ಎಲ್ಲಿರುವಳೆಂಬುದನ್ನು ಸತ್ಯವಾಗಿ ಹೇಳಿ” ಎಂದು ರಾಮನು ಪ್ರಲಾಪಿಸತೊಡಗಿದನು. ಆಗ ಲಕ್ಷ್ಮಣನು ಶೋಕವನ್ನು ಬಿಡುವಂತೆ ಅಣ್ಣನಿಗೆ ಧೈರ್ಯ ಹೇಳಿ, ಸೀತೆ ಗೋದಾವರಿಗೆ ಹೋಗಿರಬಹುದೆಂದೆಣೆಸಿ ಅವನೊಡನೆ ಅಲ್ಲಿಗೆ ಹೋದನು. ಆದರೇನು? ಸೀತೆ ಅಲ್ಲಿರುವಳೆ? ಜಿಂಕೆಗಳು ಅಲ್ಲಿ ಸೀತೆ ಹೋದ ದಾರಿಗೇ ಮುಖ ತಿರುಗಿಸಿಕೊಂಡು ನೋಡುತ್ತ ಕಣ್ಣೀರು ಬಿಡುತ್ತಿದ್ದುವು. ರಾಮಲಕ್ಷ್ಮಣರು ಜಿಂಕೆಗಳು ಕಣ್ಣು ತಿರುಗಿಸಿಕೊಂಡಿದ್ದ ದಿಕ್ಕಿನ ಕಡೆಗೆ ಹೋಗುತ್ತ ನೆಲದಲ್ಲಿ ಬಿದ್ದಿದ್ದ ಹೂಮಾಲೆಯನ್ನು ನೋಡಿದರು. ರಾಮನು ಅವು ಸೀತೆ ಮುಡಿದ ಹೂಗಳೆಂದೇ ತಿಳಿದನು. ಮುಂದೆ ಹೋಗುತ್ತಾ ‘ಸೀತೆಯನ್ನು ಕಂಡೆಯಾ?’ ಎಂದು ಬೆಟ್ಟವನ್ನು ಕೇಳಿದನು; ಬೆಟ್ಟ ಮರುದನಿಗೊಟ್ಟಿತು. ಕೋಪದಿಂದ “ಈ ಬೆಟ್ಟವನ್ನು ಬೂದಿಮಾಡುತ್ತೇನೆ; ಈ ನದಿಯನ್ನು ಶೋಷಿಸುತ್ತೇನೆ” ಎಂದು ನುಡಿಯುತ್ತಿದ್ದ ರಾಮನಿಗೆ ರಾಕ್ಷಸನ ದೊಡ್ಡದಾದ ಕಾಲುಗುರುತು ಕಾಣಿಸಿತು. ಹಾಗೆಯೆ ಮುರಿದ ರಥ, ಬೆಳ್ಗೊಡೆ ಚಾಮರಗಳು ಕಾಣಿಸಿದುವು. “ಲಕ್ಷ್ಮಣ, ಈ ಗುರುತುಗಳನ್ನೂ ರಕ್ತದ ಕಲೆಗಳನ್ನೂ ನೋಡಿದರೆ ಸೀತೆಗಾಗಿ ಇಬ್ಬರು ರಾಕ್ಷಸರಿಗೆ ದೊಡ್ಡ ಯುದ್ಧ ನಡೆಯಿತೆಂದೆಣಿಸುತ್ತೇನೆ. ಈ ಬೆಳ್ಗೊಡೆ ಚಾಮರ ಬಿಲ್ಲು ಇವು ಯಾರವೊ? ಸೀತೆ ಅಪಹೃತಳಾಗಿದ್ದರೆ, ಇಲ್ಲವೆ ಒಂದುವೇಳೆ ಭಕ್ಷಿತಳಾಗಿದ್ದದರೆ, ವತ್ಸ, ನನ್ನ ಶಾಂತಗುಣ, ಕರುಣೆ ಇವೆಲ್ಲ ಕ್ರೋಧ ರೂಪವಾಗಿ ಪರಿಣಮಿಸಿತೆಂದೇ ತಿಳಿ. ಆಗ ದೇವದಾನವರಾಗಲಿ, ಮನುಷ್ಯರಾಗಲಿ ಸುಖವನ್ನು ಹೊಂದಲಾರರು. ದೇವತೆಗಳು ಈ ಕ್ಷಣವೇ ಸೀತೆಯನ್ನು ನನಗೆ ತಂದೊಪ್ಪಿಸದಿದ್ದರೆ, ಲೋಕವನ್ನೇ ದಹಿಸುತ್ತೇನೆ; ಲೋಕದಲ್ಲಿ ರಾಕ್ಷಸರೇ ಇಲ್ಲದಂತೆ ಮಾಡುತ್ತೇನೆ” ಎಂದು ಬಿಲ್ಲಿನಲ್ಲಿ ಬಾಣವನ್ನು ಹೂಡಿ ಶ್ರೀರಾಮನು ಕ್ರೋಧಸಂತೃಪ್ತನಾದನು.

ಪ್ರಳಯಕಾಲದ ಅಗ್ನಿಯಂತೆ ಲೋಕವನ್ನು ನಾಶಮಾಡಲು ಬಯಸಿ ರಾಮನು ಉಗ್ರರೂಪವನ್ನು ಧರಿಸಿದಂತೆ ಲಕ್ಷ್ಮಣನಿಗೆ ತೋರಿತು. ಕ್ರೋಧದಿಂದ ನಿಟ್ಟಿಸಿರು ಬಿಡುತ್ತಿದ್ದ ರಾಮನನ್ನು ನೋಡಿ ಲಕ್ಷ್ಮಣನು ಕೈಮುಗಿದು “ಅಣ್ಣ, ಮೃದುಸ್ವಭಾವನಾದ ನೀನು ಕೋಪಕ್ಕೆ ಒಳಗಾಗುವುದು ಉಚಿತವಲ್ಲ. ಚಂದ್ರನ ಕಾಂತಿ, ಸೂರ್ಯನ ತೇಜಸ್ಸು, ವಾಯುವಿನ ವೇಗ, ಭೂದೇವಿಯ ಕ್ಷಮೆ ಈ ಗುಣಗಳೆಲ್ಲ ನಿನ್ನಲ್ಲಿ ಒಟ್ಟುಗೂಡಿವೆ. ಯಾವನೊ ಒಬ್ಬ ದುಷ್ಟನಿಗಾಗಿ ಲೋಕವನ್ನೆ ಸುಡುವುದು ನಿನಗೆ ಉಚಿತವಲ್ಲ. ಈ ತೇರು, ಈ ಬಿಲ್ಲು ಯಾರವೊ ತಿಳಿಯದು. ನೆತ್ತರೂ ಸುರಿದಿರುವ ಈ ಸ್ಥಳವಂತೂ ನೋಡಲು ಬಲು ಘೋರವಾಗಿದೆ. ಈ ಯುದ್ಧವನ್ನು ನಡೆಸಿದ ಯಾವನೊ ಒಬ್ಬ ನೀಚನಿಗಾಗಿ ಸರ್ವಭೂತಶರಣ್ಯನಾದ ನೀನು ಲೋಕವನ್ನು ನಾಶಗೊಳಿಸುವುದೇ? ನಿನಗೆ ಅಪ್ರಿಯವನ್ನುಂಟುಮಾಡಿ ಬದುಕಲು ಯಾವನಿಗೆ ತಾನೆ ಸಾಧ್ಯವಾದೀತು; ಬೆಟ್ಟ, ಕಾಡು, ಗುಹೆ, ಹೆಚ್ಚೇಕೆ ಮೂರು ಲೋಕಗಳಲ್ಲಿಯೂ ಸೀತೆಯನ್ನು ಹುಡುಕೋಣ. ನಯಭಯಗಳಿಂದ ದೇವತೆಗಳು ಸೀತೆಯನ್ನು ತಂದೊಪ್ಪಿಸಿದರೆ ಸರಿ; ಇಲ್ಲವಾದರೆ ಆ ಬಳಿಕ ನಿನಗೆ ಮನಬಂದಂತೆ ಮಾಡು. ಪುರುಷಶ್ರೇಷ್ಠನಾದ ನೀನೇ ಈ ದುಃಖವನ್ನು ಸಹಿಸದೆ ಹೋದರೆ ಪ್ರಜೆಗಳು ಇನ್ನಾರನ್ನು ಮರೆಹೋಗಬೆಕು? ದುಃಖವನ್ನು ಅನುಭವಿಸುವುದೆ ಲೋಕದ ಸ್ವಭಾವ. ನಮ್ಮ ಕುಲ ಪುರೋಹಿತರಾದ ವಸಿಷ್ಠರು ನೂರು ಜನ ಮಕ್ಕಳನ್ನು ಕಳೆದುಕೊಳ್ಳಲಿಲ್ಲವೆ? ಲೋಕಕ್ಕೆ ಕಣ್ಣುಗಳಂತಿರುವ ಸೂರ್ಯಚಂದ್ರರನ್ನು ರಾಹು ಪೀಡಿಸುವುದಿಲ್ಲವೆ? ಬುದ್ಧಿಯಲ್ಲಿ ನೀನು ಬೃಹಸ್ಪತಿಗೆ ಸಮನಾದವನು. ಇಂಥ ನಿನಗೆ ನಾನು ಬುದ್ಧಿ ಹೇಳಬೇಕೆ? ಸೀತೆಯನ್ನು ಕದ್ದೊಯ್ದ ಹಗೆಯನ್ನು ಬೇರುಸಹಿತ ಕಿತ್ತೊಗೆಯಲು ಯತ್ನಿಸು. ಈ ದುಃಖವನ್ನೂ ಕ್ರೋಧವನ್ನೂ ತಡೆದುಕೊ” ಎಂದು ಸಮಾಧಾನಪಡಿಸಿದನು.

ತಮ್ಮನ ಪ್ರಿಯಕರವಾದ ಮಾತು ಅಣ್ಣನಿಗೆ ಸಮಾಧಾನವನ್ನು ತಂದಿತು. ಆಗ ರಾಮನು ಕ್ರೋಧವನ್ನು ಅಡಗಿಸಿ, ಬಿಲ್ಲನ್ನು ಅಪ್ಪಿಕೊಂಡು, ಸೀತೆಯನ್ನು ಹುಡುಕಲು ಉಪಾಯವೇನೆಂದು ಲಕ್ಷ್ಮಣನನ್ನು ಕೇಳಿದನು. ಅಣ್ಣನ ಮಾತಿಗೆ ಲಕ್ಷ್ಮಣನು “ಅಣ್ಣ, ಜನಸ್ಥಾನದ ಎಲ್ಲ ಪ್ರದೇಶಗಳಲ್ಲಿಯೂ ಸೀತೆಯನ್ನು ಹುಡುಕೋಣ. ಈ ವಿಪತ್‌ಕಾಲದಲ್ಲಿ ನಿನ್ನಂತಹ ಧೀರರು ಬೆಟ್ಟದಂತೆ ಅಚಲರಾಗಿರಬೇಕು” ಎಂದು ಸಲಹೆಕೊಟ್ಟನು. ಆಗ ಆ ಅಣ್ಣ ತಮ್ಮಂದಿರು ಬಿಲ್ಲು ಬಾಣಗಳನ್ನು ಧರಿಸಿ ತಮಗೆ ಚಿರಪರಿಚಿತವಾದ ಆ ಜನಸ್ಥಾನದಲ್ಲಿ ಸೀತೆಯನ್ನು ಹುಡುಕತೊಡಗಿದರು.

* * *