ಶ್ರೀರಾಮ ವಿಭೀಷಣನಿಗೆ ಅಭಯ ಕೊಟ್ಟೊಡನೆಯೆ ಆ ರಾಕ್ಷಸ ಶ್ರೇಷ್ಠನು ಮಂತ್ರಿಗಳೊಡನೆ ಧರೆಗಿಳಿದನು.

ಆಕಾಶಮಾರ್ಗದಲ್ಲಿ ತನ್ನ ಮಂತ್ರಿಗಳೊಡನೆ ತಮ್ಮೆಡೆಗೆ ಬರುತ್ತಿದ್ದ ವಿಭೀಷಣನನ್ನು ವಾನರರು ಕಂಡು ತಮ್ಮೊಡನೆ ಅವನು ಯುದ್ಧಕ್ಕಾಗಿ ಬರುತ್ತಿರುವನೆಂದು ಶಂಕಿಸಿ ಮರದ ಕೊಂಬೆಗಳನ್ನೂ ಬಂಡೆಗಳನ್ನೂ ಹಿಡಿದು ನಿಂತು ಯುದ್ಧಮಾಡಲು ಸುಗ್ರೀವನ ಅಪ್ಪಣೆಯನ್ನು ಬೇಡಿದರು. ಆಗ ವಿಭೀಷಣನು ಅವರನ್ನು ಕುರಿತು “ಅವಿವೇಕಿಯೂ ದುರ್‌ವೃತ್ತನೂ ಆದ ರಾವಣನ ಕಿರಿಯ ತಮ್ಮನೆ ನಾನು. ನನ್ನ ಹೆಸರು ವಿಭೀಷಣನೆಂದು. ಅದಿರಲಿ, ತಾನು ಕದ್ದುತಂದ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸಬೇಕೆಂದು ಹೇಳಿದರೂ ಕಾಲಬೋದಿತನಾದ ಅವನು ತನ್ನ ಹಿತವಚನವನ್ನು ಲಕ್ಷಿಸಲಿಲ್ಲ. ಆ ರಾವಣನಿಂದ ದಾಸನಂತೆ ಅವಮಾನ ಹೊಂದಿದ ನಾನು ಮಹಾತ್ಮನಾದ ಶ್ರೀರಾಮನನ್ನು ಶರಣುಹೋಗಲು ಬಂದಿದ್ದೇನೆ. ಈ ನನ್ನ ಮಾತನ್ನು ಜಾಗ್ರತೆಯಾಗಿ ಆತನಿಗೆ ತಿಳಿಸಿ” ಎಂದನು.

ವಿಭೀಷಣನು ತನ್ನ ನಾಲ್ವರು ಮಂತ್ರಿಗಳೊಡನೆ ಬಂದಿರುವುದನ್ನು ಸುಗ್ರೀವನು ಶ್ರೀರಾಮನಿಗೆ ತಿಳಿಸಿ, ಶತ್ರುವಿನ ತಮ್ಮನಾದ ಅವನು ಕಪಟಿಯಾಗಿರಬಹುದೆಂದೂ, ಅವನು ತಮ್ಮ ರಹಸ್ಯವನ್ನು ತಿಳಿಯುವ ಮುನ್ನ ಅವನನ್ನು ಸಂಹರಿಸುವುದು ಯೋಗ್ಯವೆಂದೂ ನುಡಿದನು. ಆಗ ಶ್ರೀರಾಮನ ಸಮೀಪದಲ್ಲಿದ್ದ ಹನುಮಂತನು ವಾನರವೀರರನ್ನು ಕುರಿತು ಈ ರೀತಿ ಹೇಳಿದನು: “ಶ್ರೀರಾಮಚಂದ್ರ, ನಾನು ದೊಡ್ಡವನೆಂಬ ಅಭಿಮಾನದಿಂದ ಈ ಮಾತುಗಳನ್ನು ಆಡುತ್ತಿಲ್ಲ. ನಾನು ಲಂಕೆಗೆ ಹೋಗಿದ್ದಾಗ ಕಂಡುದರಿಂದ ಹೇಳುತ್ತಿದ್ದೇನೆ. ವಿಭೀಷಣನನ್ನು ಪರಿಗ್ರಹಿಸುವ ವಿಷಯದಲ್ಲಿ ಉಳಿದ ಮಂತ್ರಿಗಳು ಆಡಿದ ಮಾತುಗಳನ್ನು ಕೇಳಿದ್ದೇನೆ. ವಿಭೀಷಣನಲ್ಲಿಗೆ ಗೂಢಚಾರರನ್ನು ಕಳುಹಿಸಿ ಅವನ ಗುಟ್ಟನ್ನು ಭೇದಿಸುವುದು ಯೋಗ್ಯವಲ್ಲ. ರಾವಣನಲ್ಲಿರುವ ದುಷ್ಟತನವನ್ನು ಕಂಡು ರೋಸಿ, ನಿನ್ನಲ್ಲಿರುವ ಸುಗುಣಗಳನ್ನೂ ಪರಾಕ್ರಮವನ್ನೂ ಕಂಡು ಮೆಚ್ಚಿ, ಇಲ್ಲಿಗೆ ವಿಭೀಷಣನು ಬಂದಿದ್ದಾನೆ. ಅವನ ಪ್ರಸನ್ನವಾದ ಮುಖವನ್ನು ನೋಡಿದರೆ ಅವನ ಮನಸ್ಸಿನಲ್ಲಿ ಯಾವ ಕೆಟ್ಟಭಾವವೂ ಇರುವಂತೆ ತೋರುವುದಿಲ್ಲ. ಅವನ ಮಾತು ಸ್ಪಷ್ಟವಾಗಿದೆ. ನಿನ್ನ ಯುದ್ಧೋದ್ಯೋಗವನ್ನು ರಾವಣನ ದುಷ್ಟ ನಡತೆಯನ್ನೂ ಕಂಡು, ವಾಲಿವಧೆ ಸುಗ್ರೀವಾಭೀಷೇಕವನ್ನು ಕೇಳಿ ತಾನೂ ರಾಜ್ಯವನ್ನು ಬಯಸಿ ನಿನ್ನಲ್ಲಿಗೆ ಬಂದಿರಬಹುದೆಂದು ತಿಳಿಯುತ್ತೇನೆ. ಆದ್ದರಿಂದ ವಿಭೀಷಣನನ್ನು ಪರಿಗ್ರಹಿಸುವುದೇ ಲೇಸೆಂದು ನನಗೆ ತೋರುತ್ತದೆ.”

ಆ ಬಳಿಕ ಶ್ರೀರಾಮನು ಸುಗ್ರೀವನನ್ನು ಕುರಿತು “ಸುಗ್ರೀವ, ನನ್ನ ಬೆರಳ ತುದಿಯಿಂದಲೆ ಸಮಸ್ತ ಲೋಕವನ್ನೂ ನಾಶಮಾಡುವ ಶಕ್ತಿಯುಳ್ಳ ನನಗೆ ಯಾರಿಂದಲೂ ಹೆದರಿಕೆಯೆಂಬುದೇ ಇಲ್ಲ. ತನ್ನಲ್ಲಿಗೆ ಬಂದ, ತನಗೆ ಹಗೆಯಾದ ಬೇಡನಿಗೆ ತನ್ನ ಶರೀರಮಾಂಸವನ್ನು ಕೊಟ್ಟು ಕಪೋತವೂ ತೃಪ್ತಿಪಡಿಸಿತಂತೆ! ಹಾಗಿರುವಲ್ಲಿ ಶರಣಾಗತನಾಗಿ ಬಂದಿರುವವನನ್ನು ನಾನು ರಕ್ಷಿಸಬೇಡವೆ? ಒಮ್ಮೆ ನನಗೆ ಶರಣುಬಂದಿರುವೆನೆಂದವನಿಗೆ ಅಭಯವನ್ನು ಕೊಡುವುದೆ ನನ್ನ ವ್ರತ. ಈಗ ರಾವಣನೆ ಬಂದರೂ ಅವನಿಗೆ ಅಭಯ ಕೊಡುತ್ತೇನೆ. ಹೀಗಿರುವಲ್ಲಿ ವಿಭೀಷಣನ ಮಾತೇನು? ಅವನನ್ನು ಜಾಗ್ರತೆಯಾಗಿ ಕರೆದುಕೊಂಡು ಬಾ” ಎಂದನು.

ಶ್ರೀರಾಮನು ವಿಭೀಷಣನಿಗೆ ಅಭಯವನ್ನು ಕೊಟ್ಟೊಡನೆಯೆ, ಆ ರಾಕ್ಷಸ ಶ್ರೇಷ್ಠನು ತನ್ನ ನಾಲ್ವರು ಮಂತ್ರಿಗಳೊಡನೆ ಭೂಮಿಗೆ ಇಳಿದು, ಶ್ರೀರಾಮನಲ್ಲಿಗೆ ಬಂದು ಅವನಿಗೆ ನಮಸ್ಕಾರ ಮಾಡಿದನು. “ನಾನು ರಾವಣನ ತಮ್ಮ. ಅಣ್ಣನಿಂದ ಅವಮಾನಿತವಾಗಿ ಈಗ ನಿನ್ನನ್ನು ಶರಣು ಹೋಗಲು ಬಂದಿದ್ದೇನೆ. ಸ್ನೇಹಿತರು ಬಂಧುಬಾಂಧವರು ಧನ ಧಾನ್ಯ ಇವೆಲ್ಲವನ್ನೂ ತ್ಯಾಗಮಾಡಿ ಬಂದಿರುವ ನನ್ನ ಕ್ಷೇಮ ನಿನ್ನನ್ನೆ ಸೇರಿದೆ. ಅಲ್ಲದೆ ರಾಕ್ಷಸರನ್ನು ಸಂಹರಿಸುವ ಕಾರ್ಯದಲ್ಲಿ ನನ್ನ ಶಕ್ತಿಯಿರುವ ಮಟ್ಟಿಗೆ ನಿನಗೆ ಸಹಾಯ ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿದನು. ವಿಭೀಷಣನ ಮಾತನ್ನು ಕೇಳಿ ಪ್ರಸನ್ನಗೊಂಡ ಶ್ರೀರಾಮನು ಲಕ್ಷ್ಮಣನಿಂದ ಕಡಲ ನೀರನ್ನು ತರಿಸಿ, ಎಲ್ಲ ವಾನರರೆದುರಿಗೆ ಲಂಕಾ ರಾಜ್ಯದ ಪಟ್ಟವನ್ನು ವಿಭೀಷಣನಿಗೆ ಕಟ್ಟಿಸಿದನು. ಶ್ರೀರಾಮನ ಅನುಗ್ರಹವನ್ನು ಕಂಡು ವಾನರರು ಅವನ ಕಾರ್ಯವನ್ನು ಬಾಯಿತುಂಬ ಹೊಗಳಿದರು.

ಇಷ್ಟೆಲ್ಲ ಮುಗಿದ ಮೇಲೆ ಸಮುದ್ರವನ್ನು ದಾಟುವ ಚಿಂತೆ ವಾನರರಿಗೆ ಬಲವಾಯಿತು. ವರುಣನನ್ನು ಶ್ರೀರಾಮನು ಶರಣುಹೋಗುವುದೆ ಸಾಗರವನ್ನು ದಾಟಲು ಉಪಾಯವೆಂದು ವಿಭೀಷಣನು ಸೂಚಿಸಿದನು. ಬುದ್ಧಿವಂತನಾದ ವಿಭೀಷಣನ ಮಾತು ಶ್ರೀರಾಮನಿಗೂ ರುಚಿಸಿತು. ವೇದಿಯಲ್ಲಿರುವ ಅಗ್ನಿಯಂತೆ ದರ್ಭೆಯ ಹಾಸಿಗೆಯ ಮೇಲೆ ಸಮುದ್ರದ ತೀರದಲ್ಲಿ ವರುಣವನ್ನು ಪ್ರಾರ್ಥಿಸುವ ಸಲುವಾಗಿ ಕುಳಿತುಕೊಂಡನು.

ಪ್ರಳಯಕಾಲದ ಅಗ್ನಿಯಂತೆ ಕೋಪಗೊಂಡ ಶ್ರೀರಾಮಚಂದ್ರನು ತನ್ನ ಬಿಲ್ಲಿನಲ್ಲಿ ಬ್ರಹ್ಮಾಸ್ತ್ರವನ್ನು ತೊಟ್ಟು ಅಭಿಮಂತ್ರಿಸಿದ. . . . ಆಗ ಸಾಗರದ ಮಧ್ಯದಲ್ಲಿ ವರುಣನು ಕಾಣಿಸಿಕೊಂಡನು.

ಹೀಗೆ ಶ್ರೀರಾಮನು ಪರಿಶುದ್ಧನಾಗಿ ತನ್ನ ತೋಳನ್ನೆ ತಲೆದಿಂಬನ್ನಾಗಿ ಮಾಡಿಕೊಂಡು ‘ಸಾಯುತ್ತೇನೆ. ಇಲ್ಲ ಕಡಲನ್ನು ದಾಟುತ್ತೇನೆ!’ ಎಂದು ನಿಶ್ಚಯಿಸಿ, ದರ್ಭೆಯ ಹಾಸಿಗೆಯಲ್ಲಿದ್ದು ಮೂರು ದಿನಗಳು ಹಗಲೆನ್ನದೆ ರಾತ್ರಿಯೆನ್ನದೆ ವರುಣನನ್ನು ಪ್ರಾರ್ಥಿಸಿದನು. ಇಷ್ಟಾದರೂ ವರುಣನು ಶ್ರೀರಾಮನ ವಿಷಯದಲ್ಲಿ ಪ್ರಸನ್ನನಾಗಲಿಲ್ಲ. ಇದನ್ನು ಕಂಡು ಶ್ರೀರಾಮನು ಲಕ್ಷ್ಮಣನನ್ನು ಕುರಿತು “ಲಕ್ಷ್ಮಣ, ವರುಣನ ಈ ಗರ್ವವನ್ನು ನೋಡಿದೆಯಾ? ಕೋಪವಿಲ್ಲದಿರುವಿಕೆ, ಸಹನೆ, ಒಳ್ಳೆಯ ಮಾತುಗಳನ್ನಾಡುವುದು ಇವೇ ಮೊದಲಾದ ಸತ್ಪುರುಷರ ಲಕ್ಷಣಗಳನ್ನು ದುಷ್ಟರಾದವರು ಶಕ್ತಿ ಹೀನತೆಯೆಂದು ತಿಳಿಯುತ್ತಾರೆ. ದುಷ್ಟನೂ ದಯಾಶೂನ್ಯನೂ ಆದವನನ್ನೆ ಸತ್ಪುರುಷನೆಂದು ಲೋಕ ಗೌರವಿಸುತ್ತದೆ. ಯಶಸ್ಸು, ರಣದಲ್ಲಿ ಜಯ ಇವುಗಳನ್ನು ಒಳ್ಳೆಯತನದಿಂದ ಹೊಂದಲು ಈ ಲೋಕದಲ್ಲಿ ಸಾಧ್ಯವಿಲ್ಲ. ಈಗ ನನ್ನ ಬಾಣಗಳಿಂದ ಈ ಸಮುದ್ರವನ್ನು ಶೋಷಿಸಿಬಿಟ್ಟು ದಾರಿ ಮಾಡುತ್ತೇನೆ. ಕಪಿಗಳು ಕಾಲುನಡಗೆಯಿಂದಲೇ ಈ ಸಮುದ್ರವನ್ನು ದಾಟಿ ಹೋಗಲಿ. ನನ್ನನ್ನು ಶಕ್ತಿಹೀನನೆಂದು ತಿಳಿದಿರುವ ಈ ವರುಣನ ವಿಷಯದಲ್ಲಿ ಸಹನೆಯನ್ನು ತೋರಕೂಡದು. ನನ್ನ ಬಿಲ್ಲುಬಾಣಗಳನ್ನು ಜಾಗ್ರತೆಯಾಗಿ ತೆಗೆದುಕೊಂಡು ಬಾ” ಎಂದನು.

ಹೀಗೆಂದು ನುಡಿದು ಪ್ರಳಯಕಾಲದ ಅಗ್ನಿಯಂತೆ ಕೋಪಗೊಂಡ ಶ್ರೀರಾಮಚಂದ್ರನು ತನ್ನ ಬಿಲ್ಲಿನಲ್ಲಿ ಬ್ರಹ್ಮಾಸ್ತ್ರವನ್ನು ತೊಟ್ಟು, ಅಭಿಮಂತ್ರಿಸಿ, ಅದನ್ನು ಕಿವಿಯವರೆಗೂ ಸೆಳೆದನು. ಆಗ ಬೆಟ್ಟ ನಡುಗಿದುವು. ಭೂಮಿ ಆಕಾಶದಲ್ಲಿ ಬಿರುಕುಬಿಟ್ಟಂತಾಯಿತು. ಕತ್ತಲೆ ಲೋಕವನ್ನು ಮುಸುಕಿತು. ನದಿಗಳೂ ಸರೋವರಗಳೂ ಕ್ಷೋಭೆಗೊಂಡವು. ಆಕಾಶದಿಂದ ಧೂಮಕೇತುಗಳು ನೆಲಕ್ಕುರುಳಿದುವು. ಬಿರುಗಾಳಿ ಮರಗಳನ್ನೂ ಬೆಟ್ಟದ ಶಿಖರಗಳನ್ನೂ ಉರುಳಿಸುತ್ತ ಬಲವಾಗಿ ಬೀಸಿತು. ಪ್ರಾಣಿಗಳು ಭಯಗೊಂಡು ಭಯಂಕರವಾಗಿ ಕೂಗಿದುವು. ಆಗ ಭೀಮಾಕಾರದ ಅಲೆಗಳಿಂದ ಕೂಡಿ ನೋಡುವವರಿಗೆ ಹೆದರಿಕೆಯನ್ನುಂಟುಮಾಡುತ್ತಿದ್ದ ಆ ಸಾಗರವು ತನ್ನ ಎಲ್ಲೆಯಿಂದ ಒಂದು ಗಾವುದ ಹಿಂದಕ್ಕೆ ಸರಿಯಿತು. ಆಗ ಸಾಗರದ ಮಧ್ಯದಲ್ಲಿ, ಮೇರುಪರ್ವತದ ತುದಿಯಲ್ಲಿ ಹುಟ್ಟುವ ಸೂರ್ಯನಂತೆ, ವರುಣನು ಕಾಣಿಸಿಕೊಂಡನು. ಸುಂದರವಾದ ದೇಹ, ಹೊಳೆಯುತ್ತಿರುವ ಮುಖ, ಅಗಲವಾದ ಕಣ್ಣುಗಳು ಇವುಗಳಿಂದ ನೋಡಲು ಮನೋಹರವಾದ ವರುಣನು ಕೆಂಪುವಸ್ತ್ರ ಮತ್ತು ಹೂವುಗಳನ್ನು ಧರಿಸಿ ನಾನಾ ರತ್ನಗಳಿಂದ ಅಲಂಕೃತನಾಗಿ, ಗೈರಿಕಾದಿಧಾತುಗಳಿಂದ ಶೋಭಿತನಾದ ಹಿಮವಂತನಂತೆ ಕಾಣಿಸಿಕೊಂಡನು. ಗಂಗಾ ಸಿಂಧೂ ನದಿಗಳಿಂದ ಸುತ್ತುವರಿದ ವರುಣನು ಶ್ರೀರಾಮನ ಬಳಿಗೆ ಬಂದು ಕೈಮುಗಿದು ಈ ಮಾತುಗಳನ್ನು ನುಡಿದನು: “ರಾಮಚಂದ್ರ, ನನ್ನಲ್ಲಿ ಪ್ರಸನ್ನನಾಗು. ಅಗಾಧವಾಗಿಯೂ ಅನೇಕ ಪ್ರಾಣಿಗಳಿಂದ ಕೂಡಿಯೂ ಇರುವ ಈ ನೀರನ್ನು ನಾನು ಹಿಡಿದು ನಿಲ್ಲಿಸಲಾರೆ. ಇದು ನನ್ನ ಸ್ವಭಾವ. ದಂಡನೆಯ ಭಯದಿಂದಲೂ ಹಾಗೆ ಮಾಡಲು ಸಾಧ್ಯವಿಲ್ಲ. ನಿನ್ನ ಸೈನ್ಯಗಳೂ ಈ ಸಾಗರವನ್ನು ದಾಟುವವರೆಗೆ ನನ್ನಿಂದಾಗಲಿ ನನ್ನಲ್ಲಿರುವ ಪ್ರಾಣಿಗಳಿಂದಾಗಲಿ ನಿನಗೆ ತೊಂದರೆ ಉಂಟಾಗುವುದಿಲ್ಲ. ತಂದೆಗೆ ಸಮನಾದ ಶಕ್ತಿಯುಳ್ಳ, ವಿಶ್ವಕರ್ಮನ ಮಗನಾದ ನಳನು ಈ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲಿ. ನನಗೆ ಉತ್ತರದಲ್ಲಿ ದ್ರುಮಕುಲ್ಯವೆಂಬ ಪ್ರದೇಶವಿದೆ. ಪುಣ್ಯತಮವಾದ ಆ ಪ್ರದೇಶದಲ್ಲಿ ಅಭೀರರೆಂಬ ದಸ್ಯುಗಳು ನನ್ನ ನೀರನ್ನು ಕುಡಿದು ಭಯಂಕರವಾದ ಕೃತ್ಯಗಳಲ್ಲಿ ತೊಡಗಿದ್ದಾರೆ. ಅವರ ಸಂಪರ್ಕವನ್ನು ನಾನು ಸಹಿಸಲಾರೆ. ನಿನ್ನ ಈ ಅಸ್ತ್ರವನ್ನು ಅವರಲ್ಲಿ ಪ್ರಯೋಗಿಸಿ ನನಗೆ ಸುಖವನ್ನುಂಟುಮಾಡು” ಹೀಗೆಂದು ಹೇಳಿ ವರುಣನು ಅದೃಶ್ಯನಾದನು.