ಗಂಡನ ಮನೋವ್ಯಥೆಯಿಂದ ಕಳವಳಗೊಂಡ ಸೀತಾದೇವಿ ಹನುಮಂತನನ್ನು ಕುರಿತು “ಮಾರುತಿ, ನಿನ್ನ ಮಾತುಗಳು ನನ್ನ ಕಿವಿಗೆ ಅಮೃತದಂತಿವೆಯಾದರೂ ಅವು ವಿಷಮಿಶ್ರವಾಗಿವೆ. ಶ್ರೀರಾಮನು ವ್ಯಸನಗೊಂಡಿರುವನೆಂಬುದೇ ಆ ವಿಷ. ದೈವದ ಮುಂದೆ ಮನುಷ್ಯರ ಆಟ ಏನು ನಡೆಯಬಲ್ಲುದು? ರಾಮಲಕ್ಷ್ಮಣರೂ ನಾನೂ ಸಂಕಟಕ್ಕೆ ಸಿಲುಕಿರುವುದು ವಿಧಿವಿಲಾಸವಲ್ಲದೆ ಮತ್ತೇನು? ಸಮುದ್ರ ಮಧ್ಯದಲ್ಲಿ ಹಡಗೊಡೆದು ಆಧಾರವಿಲ್ಲದವನಂತೆ ದುಃಖದಲ್ಲಿ ಮುಳುಗಿಹೋದ ರಾಮಚಂದ್ರನು ದಡವನ್ನು ಸೇರುವುದೆಂದು? ಆತನು ಈ ಲಂಕೆಗೆ ಯಾವಾಗ ಬರುವನೊ, ಈ ರಾಕ್ಷಸರನ್ನೆಲ್ಲಾ ಯಾವಾಗ ಒಕ್ಕಲಿಕ್ಕುವನೊ! ರಾವಣಸಂಹಾರ ನಡೆಯುವುದೆಂದೊ! ನಾನು ಆತನನ್ನು ಕಾಣುವುದೆಂದೊ! ಅವಧಿ ಮುಗಿಯುವುದರೊಳಗಾಗಿ ನೀನು ಆತನನ್ನು ಇಲ್ಲಿಗೆ ಕರೆದುಕೊಂಡು ಬಾ. ಇಲ್ಲದಿದ್ದರೆ ಅನ್ಯಾಯವಾಗಿ ನಾನು ಈ ರಾಕ್ಷಸರಿಗೆ ತುತ್ತಾಗಿ ಹೋಗುತ್ತೇನೆ. ಆತನ ಬಾಣಾಗ್ನಿಯಿಂದ ಈ ರಾಕ್ಷಸಬಲ ಜಲವೆಲ್ಲವೂ ಬತ್ತುವುದೇನೊ ನಿಜ. ಆದರೆ ಅದಾಗುವುದು ಎಂದಿಗೋ?” ಎಂದಳು. ಆಕೆಯ ಆತುರವನ್ನು ಕಂಡು ಹನುಮಂತನಿಗೆ ಹೇಗೆ ಸಮಾಧಾನ ಹೇಳಬೇಕೊ ತಿಳಿಯದಾಯಿತು. “ತಾಯಿ, ಶ್ರೀರಾಮನು ಶೀಘ್ರವಾಗಿಯೆ ಇಲ್ಲಿಗೆ ಬರುತ್ತಾನೆ. ನೀನು ಅಲ್ಲಿಯವರೆಗೆ ತಡೆಯಲಾರೆಯಾದರೆ, ಇಗೋ ಈಗಲೇ ನಿನ್ನ ಇಷ್ಟಾರ್ಥವನ್ನು ನೆರವೇರಿಸುತ್ತೇನೆ. ಬಾ ನನ್ನ ಬೆನ್ನಮೇಲೆ ಏರು. ನಿನ್ನನ್ನು ಕರೆದುಕೊಂಡು ಕ್ಷಣಮಾತ್ರದಲ್ಲಿ ಈ ಸಮುದ್ರವನ್ನು ದಾಟುತ್ತೇನೆ. ನನ್ನ ಶಕ್ತಿಯ ವಿಚಾರದಲ್ಲಿ ನೀನು ಸಂದೇಹಪಡಬೇಕಾದುದಿಲ್ಲ. ಆಕಾಶದಲ್ಲಿ ಬಹು ಎತ್ತರಕ್ಕೆ ನಿನ್ನೊಡನೆ ಹಾರಿಹೋಗುತ್ತಿರುವಾಗ ಚಂದ್ರನೊಡನೆಯೂ ಸೂರ್ಯನೊಡನೆಯೂ ಸಂಭಾಷಿಸುವವಳಂತೆ ನೀನು ಸಮುದ್ರ ಆಕಾಶಗಳೆರಡನ್ನೂ ಕ್ಷಣಮಾತ್ರದಲ್ಲಿ ದಾಟುವೆ. ನನ್ನ ವೇಗವನ್ನು ತಡೆಯಲು ಈ ಲಂಕೆಯಲ್ಲಿ ಇರುವವರಾರಿಗೂ ಸಾಧ್ಯವಿಲ್ಲ” ಎಂದನು.

ಹನುಮಂತನ ಅದ್ಭುತವಾದ ಮಾತುಗಳನ್ನು ಕೇಳಿ ಸೀತಾದೇವಿಗೆ ನಗು ಬಂದಿತು. “ಅಯ್ಯಾ ಹನುಮಂತ, ನೀನು ಅತ್ಯಲ್ಪ ಶರೀರಿ. ಇಂತಹ ನೀನು ನನ್ನನ್ನು ಹೊತ್ತುಕೊಂಡು ಹೋಗುವುದೆಂತು? ನೀನು ನಿನ್ನ ಕಪಿತ್ವವನ್ನು ತೋರಿಸಿಕೊಂಡೆಯಲ್ಲಾ!” ಎಂದಳು. ಆಕೆಯ ನಗೆನುಡಿಗಳನ್ನು ಕೇಳಿ ಹನುಮಂತನಿಗೆ ತನ್ನ ಸ್ವರೂಪವನ್ನು ಆಕೆಗೆ ಸ್ವಲ್ಪ ಪರಿಚಯಮಾಡಿಕೊಡಬೇಕೆನ್ನಿಸಿತು. ತಾನು ನಿಂತಲ್ಲಿಂದ ಸ್ವಲ್ಪ ದೂರಕ್ಕೆ ಹಾರಿನಿಂತು ತನ್ನ ದೇಹವನ್ನು ಬೆಳೆಯಿಸಲು ಉಪಕ್ರಮಿಸಿದನು. ನೋಡು ನೋಡುತ್ತಿದ್ದಂತೆ ಆತನು ಒಂದು ಜ್ವಲಿಸುವ ಬೆಟ್ಟದಂತೆ ಉಜ್ವಲವಾದ ರೂಪದಿಂದ ಬೆಳೆದು ನಿಂತನು. ಕೆಂಪಾದ ಮುಖ; ವಜ್ರಕ್ಕೆ ಸಮಾನವಾದ ಕೋರೆಹಲ್ಲುಗಳು, ದಾಡೆಗಳು. ಬಿಟ್ಟ ಕಣ್ಣರಳಿ ತನ್ನನ್ನು ನೋಡುತ್ತಿದ್ದ ಸೀತಾದೇವಿಯನ್ನು ಕುರಿತು ಆತನು “ತಾಯಿ, ಸೀತಾದೇವಿ, ನೋಡು ನನ್ನ ಈ ರೂಪವನ್ನು. ನಿನ್ನನ್ನು ಮಾತ್ರವೆ ಅಲ್ಲ; ಕೋಟೆಕೊತ್ತಲಗಳಿಂದ ಸಹಿತವಾದ ಈ ಲಂಕೆಯನ್ನೆ ನಾನು ಕಿತ್ತು ಎತ್ತಿಕೊಂಡು ಹೋಗಬಲ್ಲೆ. ಆದ್ದರಿಂದ ಧೈರ್ಯವಾಗಿ ನನ್ನೊಡನೆ ಬರುವವಳಾಗು” ಎಂದನು.

ಹನುಮಂತನ ಪರಾಕ್ರಮದ ವಿಷಯದಲ್ಲಿ ಈಗ ಸಂದೇಹವೇನೂ ಉಳಿಯಲಿಲ್ಲ. ಆದರೂ ಸೀತಾದೇವಿ, ಆತನೊಡನೆ ಹಾಗೆ ಹೋಗಲು ಒಪ್ಪಲಿಲ್ಲ. ಆತನನ್ನ೮ಉ ಕುರಿತು, “ಎಲೈ ಮಾರುತಿಯೆ, ನೀನು ಶಕ್ತನಾದರೂ ನಾನು ನಿನ್ನೊಡನ ಬರುವುದು ಯುಕ್ತವಲ್ಲ. ನೀನು ವಾಯುವೇಗದಿಂದ ಆಕಾಶಮಾರ್ಗದಲ್ಲಿ ಹೋಗುವಾಗ ನಾನು ಭಯದಿಂದ ಕೆಳಕ್ಕೆ ಬಿದ್ದುಹೋಗಬಹುದು. ಹಾಗಾದಲ್ಲಿ ಸಮುದ್ರದ ಪ್ರಾಣಿಗಳಿಗೆ ಆಹಾರವಾಗಿ ಹೋದೇನು! ಇದೂ ಅಲ್ಲದೆ ನೀನು ನನ್ನನ್ನು ಎತ್ತಿಕೊಂಡು ಹೊರಟೊಡನೆಯೆ ರಾಕ್ಷಸರು ನಿನ್ನನ್ನು ಬೆನ್ನಟ್ಟುವುದು ನಿಶ್ಚಯ. ಆಗ ನೀನು ನನ್ನನ್ನು ರಕ್ಷಿಸಿಕೊಂಡು ಅವರೊಡನೆ ಯುದ್ಧ ಮಾಡುವುದೆಂದರೆ ಬಹುಕಷ್ಟವಾದ ಕೆಲಸ. ಅದನ್ನು ನೋಡಲಾರದೆ ನಾನು ದಿಗ್ಬ್ರಾಂತಳಾಗಿ ಕೆಳಕ್ಕೆ ಬಿದ್ದರೂ ಸರಿಯೆ! ಆದ್ದರಿಂದ ಆ ಕಾರ್ಯ ಬೇಡ. ನೀನೇನೋ ಮಹಾಶೂರನೇ ಸರಿ; ಎದುರಾದ ರಾಕ್ಷಸರನ್ನೆಲ್ಲಾ ನೀನು ಸಂಹರಿಸುವ ವಿಚಾರದಲ್ಲಿ ನನಗೆ ಸಂದೇಹವೆ ಇಲ್ಲ. ಆದರೇನು? ನೀನೇ ಅವರನ್ನೆಲ್ಲಾ ಸಂಹರಿಸಿದರೆ ಶ್ರೀರಾಮನ ಕೀರ್ತಿಗೆ ಕಳಂಕ ಬರುವುದಿಲ್ಲವೆ? ಆದ್ದರಿಂದ ನೀನು ಈಗ ಇಲ್ಲಿಂದ ಆದಷ್ಟು ಬೇಗ ಹೊರಟುಹೋಗಿ ಶ್ರೀರಾಮನನ್ನು ಇಲ್ಲಿಗೆ ಕರೆತರುವ ಪ್ರಯತ್ನ ಮಾಡು. ನೀನು ನನ್ನನ್ನು ಕರೆದುಕೊಂಡು ಹೋಗಲು ಪ್ರಯತ್ನಪಟ್ಟು, ಅದರಿಂದ ಏನಾದರೂ ಅಪಾಯ ಸಂಭವಿಸಿದರೆ ರಾಮ ಲಕ್ಷ್ಮಣರು ಬಹಳವಾಗಿ ಪರಿತಾಪ ಪಡುವುದಿಲ್ಲವೆ? ಈ ಎಲ್ಲಾ ಕಾರಣಗಳಿಗಿಂತಲೂ ಹೆಚ್ಚಾಗಿ ಪತಿಪರಾಯಣೆಯಾದ ನಾನು ಪರಪುರುಷರ ದೇಹವನ್ನು ಮುಟ್ಟುವುದು ಕೇವಲ ನಿಷಿದ್ಧ. ‘ರಾವಣನು ಮುಟ್ಟಲಿಲ್ಲವೆ?’ ಎಂದು ಕೇಳಬಹುದು. . ಆದರೆ ಅದು ಅನಿವಾರ್ಯವಾಗಿತ್ತು. ನಾನು ಪರಾಧೀನೆಯಾಗಿದ್ದೆ. ರಾಮಲಕ್ಷ್ಮಣರು ಅಗ್ನಿವಾಯುಗಳಂತೆ ಸೇರಿಕೊಂಡು ಈ ರಾಕ್ಷಸರನ್ನೆಲ್ಲಾ ದಹಿಸಲಿ. ಆ ವೀರರನ್ನು ಬೇಗನೆ ಇಲ್ಲಿಗೆ ಕರೆದು ತಂದು ನನ್ನ ಮನಸ್ಸನ್ನು ಸಂತೋಷಪಡಿಸುವ ಕಾರ್ಯಭಾರ ನಿನ್ನ ಮೇಲೆ ಬಿದ್ದಿದೆ. ಹಾಗೆ ಮಾಡಿ ನನ್ನನ್ನು ಸಂತೋಷಪಡಿಸುವ ಹೊಣೆ ನಿನ್ನನ್ನು ಸೇರಿದುದು” ಎಂದಳು.

ಸೀತಾದೇವಿಯ ಮಾತುಗಳನ್ನು ಕೇಳಿ ಮಾರುತಿ ‘ಅದು ಸರಿ’ ಎಂದು ಒಪ್ಪಿಕೊಂಡನು. “ನನ್ನ ಭುಜವನ್ನೇರಿ ಶತಯೋಜನ ವಿಸ್ತೀರ್ಣವಾದ ಸಾಗರವನ್ನು ದಾಟುವುದು ಕೋಮಲೆಯಾದ ನಿನಗೆ ಕಷ್ಟಸಾಧ್ಯವಾದ ಕೆಲಸ. ಅಲ್ಲದೆ, ‘ಶ್ರೀರಾಮನನ್ನುಳಿದು ಇತರರಾರನ್ನೂ ನಾನು ಮುಟ್ಟುವುದಿಲ್ಲ’ ಎಂಬ ನಿನ್ನ ಮಾತೂ ಸಾಧ್ವಿಯಾದ ನಿನ್ನ ನಡತೆಗೆ ತಕ್ಕುದೇ ಸರಿ. ನಾನು ಒಡನೆಯೆ ಶ್ರೀರಾಮನ ಬಳಿಗೈದಿ ಇಲ್ಲಿನ ಸಮಸ್ತವನ್ನೂ ಆತನಿಗೆ ವಿಸ್ತಾರವಾಗಿ ತಿಳಿಯಹೇಳುವೆನು. ನಿನ್ನನ್ನು ಕೊಂಡೊಯ್ಯುವೆನೆಂದು ನಾನು ಆಡಿದ ಅಪಚಾರದ ವಾಕ್ಯಗಳನ್ನು ಮನ್ನಿಸು. ಕೇವಲ ಶ್ರೀರಾಮನನ್ನು ಸಂತೋಷಗೊಳಿಸಬೇಕೆಂಬ ಉತ್ಸಾಹದಲ್ಲಿ ಮುಂದನ್ನರಿಯದೆ ಹಾಗೆ ಮಾತನಾಡಿದೆ. ಆದರೆ, ತಾಯಿ, ನಾನು ನಿನ್ನನ್ನು ಕಂಡೆನೆಂದು ಶ್ರೀರಾಮನಿಗೆ ಕುರುಹುದೋರುವಂತೆ ಯಾವುದಾದರೊಂದು ಗುರುತನ್ನು ದಯಪಾಲಿಸು ಎಂದನು.

ಹನುಮಂತನ ಮಾತುಗಳನ್ನು ಕೇಳಿ ಜಾನಕಿಗೆ ಹಿಂದೆ ತಾನು ಶ್ರೀರಾಮನ ಬಳಿಯಲ್ಲಿ ಏಕಾಂತವಾಗಿದ್ದಾಗ ನಡೆದ ಒಂದು ಸಂಗತಿ ಸ್ಮರಣೆಗೆ ಬಂದಿತು. ಆ ನೆನಪಿನೊಡನೆ ಕಣ್ಣೀರೂ ಹೊರಗುಕ್ಕಿತು. ಗದ್ಗದ ಸ್ವರದಿಂದ ಹನುಮಂತನಿಗೆ ಹೇಳಿದಳು – “ಮಾರುತಿ, ಬಹು ಒಳ್ಳೆಯ ಒಂದು ಗುರುತನ್ನು ಹೇಳುತ್ತೇನೆ ಕೇಳು – ಚಿತ್ರಕೂಟ ಪರ್ವತದ ಸಮೀಪದಲ್ಲಿರುವ ಮಂದಾಕಿನೀ ತೀರದಲ್ಲಿ ಒಂದು ಸುಂದರವಾದ ಉಪವನವಿದೆ. ನಾನು ಒಮ್ಮೆ ಶ್ರೀರಾಮನೊಡನೆ ಅದರಲ್ಲಿ ವಿಹರಿಸುತ್ತಾ ಆಯಾಸಗೊಂಡು ಒಂದು ವೃಕ್ಷಮೂಲದಲ್ಲಿ ಶ್ರೀರಾಮನ ತೊಡೆಯಮೇಲೆ ವಿಶ್ರಾಂತಿಗೊಳ್ಳುತ್ತಿದ್ದೆನು. ಆಗ ಒಂದು ಕಾಗೆ ಮಾಂಸದಾಸೆಯಿಂದ ನನ್ನ ಎದೆಯನ್ನು ಕುಕ್ಕಿತು. ನಾನು ಆಗ ಒಂದು ಮಣ್ಣು ಹೆಂಟೆಯಿಮದ ಆ ಕಾಗೆಯನ್ನು ಹೊಡೆದು ಅದನ್ನು ಅಟ್ಟಲು ಪ್ರಯತ್ನಿಸಿದೆನು. ಆದರೆ ಅದು ಬಹು ಮೊಂಡು ಕಾಗೆ. ಎಷ್ಟು ಹೊಡೆದರೂ ದೂರಹೋಗದೆ ಸಮೀಪದಲ್ಲಿಯೆ ಕುಳಿತು, ಮೇಲಿಂದ ಮೇಲೆ ನನ್ನ ಸ್ತನತಟವನ್ನು ಕುಕ್ಕುವುದಕ್ಕೆ ಮೊದಲುಮಾಡಿತು. ನಾನು ಎಷ್ಟು ಪ್ರಯತ್ನಿಸಿದರೂ ಆ ಕಾಗೆ ಓಡಿಹೋಗದುದನ್ನು ಕಂಡು ಶ್ರೀರಾಮನು ನನ್ನನ್ನು ಹಾಸ್ಯಮಾಡಿದನು. ನಾನು ಲಜ್ಜೆಯಿಂದ ತಲೆಬಾಗಿ ನಿಂತಿದ್ದೆ. ಅಷ್ಟರಲ್ಲಿ ಆ ಕಾಗೆ ಪುನಃ ಬಂದು ನನ್ನನ್ನು ಕುಕ್ಕಿತು. ಆಗ ನಾನು ನೋವಿನಿಂದಲೂ ವ್ಯಥೆಯಿಂದಲೂ ಕೂಡಿ ಪುನಃ ಶ್ರೀರಾಮನ ತೊಡೆಯಮೇಲೆ ಕುಳಿತುಕೊಂಡೆನು. ಆಗ ಶ್ರೀರಾಮನು ಮೃದುನುಡಿಗಳಿಂದ ನನ್ನನ್ನು ಸಮಾಧಾನಗೊಳಿಸಿ ಕಾಗೆಯನ್ನು ಓಡಿಸಿದನು. ಕಾಗೆಯನ್ನು ಓಡಿಸಲು ನಾನು ಮಾಡಿದ ಪ್ರಯತ್ನಗಳಿಂದ ಬಳಲಿದವಳಾಗಿ ಹಾಗೆಯೆ ಶ್ರೀರಾಮನು ಮೃದುನುಡಿಗಳಿಂದ ನನ್ನನ್ನು ಸಮಾಧಾನಗೊಳಿಸಿ ಕಾಗೆಯನ್ನು ಓಡಿಸಿದನು. ಕಾಗೆಯನ್ನು ಓಡಿಸಲು ನಾನು ಮಾಡಿದ ಪ್ರಯತ್ನಗಳಿಂದ ಬಳಲಿದವಳಾಗಿ ಹಾಗೆಯೆ ಶ್ರೀರಾಮನ ತೊಡೆಗಳಮೇಲೆ ಒರಗಿಕೊಂಡು ನಿದ್ರೆಮಾಡಿದೆನು. ನಾನು ಎದ್ದಮೇಲೆ ಶ್ರೀರಾಮನು ನನ್ನ ತೊಡೆಯ ಮೇಲೆ ತಲೆಯಿಟ್ಟುಕೊಂಡು ಮಲಗಿ ನಿದ್ರೆಹೋದನು. ಆ ಸಮಯವನ್ನು ಸಾಧಿಸಿ ಪುನಃ ಆ ಪಾಪಿ ಕಾಗೆ ಬಂದು ನನ್ನನ್ನು ಹಿಂಸಿಸಲು ಮೊದಲು ಮಾಡಿತು. ಸ್ತನಾಗ್ರವೆಲ್ಲವೂ ಗಾಯವಾಗಿ ರಕ್ತದ ತೊಟ್ಟುಗಳೆರಡು ಮಲಗಿದ್ದ ನನ್ನ ಪ್ರಿಯನ ಮೇಲೆ ಬಿದ್ದುವು. ನಾನು ಗತ್ಯಂತರವನ್ನು ಕಾಣದೆ, ನಾಥನನ್ನು ಎಬ್ಬಿಸಿದೆ. ಆತನು ನನ್ನ ದೇಹದಲ್ಲಿನ ಗಾಯವನ್ನು ಕಾಣುತ್ತಲೆ ಕನಲಿ ಕಾಳಸರ್ಪದಂತೆ ನಿಟ್ಟುಸಿರಿಡುತ್ತಾ “ಯಾವನು ಈ ಅಕಾರ್ಯ ಮಾಡಿದವನು?” ಎಂದನು. ಅಲ್ಲಿಯೆ ಸಮೀಪದಲ್ಲಿದ್ದ ಕಾಗೆ ಆತನಿಗೆ ಕಾಣಿಸಿತು. ಅದನ್ನು ಕಾಣುತ್ತಲೆ ರಾಮಚಂದ್ರನ ಕಣ್ಣಾಲಿಗಳು ಕೆಂಡವನ್ನು ಕಾರಿದುವು. ತಾನು ಕುಳಿತಿದ್ದ ದರ್ಭಾಸನದಿಂದ ಒಂದು ದರ್ಭೆಯನ್ನು ಎಳೆದುಕೊಂಡು ಬ್ರಹ್ಮಾಸ್ತ್ರ ಮಂತ್ರದಿಂದ ಅಭಿಮಂತ್ರಿಸಿ ಕಾಗೆಯ ಮೇಲೆ ಪ್ರಯೋಗಿಸಿದನು. ಅದು ಕಾಗೆಯನ್ನು ಬೆನ್ನಟ್ಟಿ ಹೊರಟಿತು. ಆ ಕಾಗೆ ಬರಿಯ ಕಾಗೆಯಲ್ಲ; ಇಂದ್ರಪುತ್ರನೆ ಆ ವೇಷದಿಂದ ಬಂದಿದ್ದನಂತೆ! ಆ ಅವಿಚಾರಿ ತನ್ನನ್ನು ಯಾರಾದರೂ ರಕ್ಷಿಸಿಯಾರೆ ಎಂದು ಆರ್ತನಾಗಿ ಲೋಕವನ್ನೆಲ್ಲಾ ತೊಳಲಿದ. ಶ್ರೀರಾಮನ ಬಾಣದಿಂದ ಅವನನ್ನು ಸಂರಕ್ಷಿಸುವವರಾರು? ಅದು ಎಲ್ಲೆಲ್ಲಿಯೂ ರಕ್ಷಣೆ ಕಾಣದೆ ಕಡೆಗೆ ಶ್ರೀರಾಮನ ಬಳಿಗೇ ಹಾರಿ ಬಂದು, ಆತನ ಕಾಲಮೇಲೆ ಬಿದ್ದು ಮರೆಹೊಕ್ಕಿತು. ಶರಣಾಗತವತ್ಸಲನಾದ ನನ್ನ ಪ್ರಿಯನು ಅದಕ್ಕೆ ಜೀವದಾನವನ್ನೇನೊ ಮಾಡಿದನು. ಆದರೆ ಆತನ ಬಾಣ ವ್ಯರ್ಥವಾಗತಕ್ಕುದಲ್ಲ. ಆದ್ದರಿಂದ ಅದರ ಬಲಗಣ್ಣು ಆ ಬಾಣಕ್ಕೆ ಆಹುತಿಯಾಗಬೇಕಾಯಿತು. ಈ ಕಥೆ ಶ್ರೀರಾಮನಿಗೆ ಮತ್ತು ನನಗೆ ಮಾತ್ರ ಗೊತ್ತು. ನನ್ನನ್ನು ನೀನು ಕಂಡುದಕ್ಕೆ ಈ ಕಥೆಯೆ ಗುರುತು. ನಾನು ಹೇಳಿದೆನೆಂಬುದಾಗಿ ಈ ಕಥೆಯನ್ನು ತಿಳಿಸಿ ‘ಪ್ರಭೂ, ನನಗಾಗಿ ಕಾಗೆಯ ಮೇಲೆ ಬ್ರಹಾಮಸ್ತ್ರವನ್ನೆ ಪ್ರಯೋಗಿಸಿದ ನೀನು ಈ ರಾವಣನನ್ನು ಹೇಗೆ ಕ್ಷಮಿಸುತ್ತಾ ಕುಳಿತಿರುವೆ? ಪ್ರಿಯಸತಿಯಾದ ನನ್ನಲ್ಲಿ ಕನಿಕರವನ್ನು ತೋರಿ ನನ್ನನ್ನು ಉದ್ಧರಿಸಬಾರದೆ?’ ಎಂದು ನಾನು ಆರ್ತಳಾಗಿ ಬೇಡಿದೆನೆಂದು ಶ್ರೀರಾಮನಲ್ಲಿ ನಿವೇದಿಸು” ಎಂದು ಹೇಳಿ, “ನನ್ನಲ್ಲಿ ಆತನೂ ಲಕ್ಷ್ಮಣನೂ ನಿರ್ದಯರಾಗಿರುವುದರಿಂದ ನಾನು ಏನು ಅಪರಾಧಮಾಡಿರುವೆನೊ ಎಂದು ನನ್ನ ಮನಸ್ಸು ತಳಮಳಿಸುತ್ತಿದೆ” ಎಂದು ಮತ್ತೊಮ್ಮೆ ಕಂಬನಿದುಂಬಿದಳು.

ಮತ್ತೆ ದತ್ತೆ ಹೀಗೆ ದುಃಖ ಮರುಕೊಳಿಸುತ್ತಿರುವ ಸೀತಾದೇವಿಯನ್ನು ಕಂಡು ಹನುಮಂತನಿಗೆ ಮನಸ್ಸು ಕರಗಿತು. ಆಕೆಯನ್ನು ಕುರಿತು “ಅಮ್ಮಾ, ನನ್ನ ಮಾತನ್ನು ನಂಬು, ಆಣೆಯಿಟ್ಟು ಹೇಳುತ್ತೇನೆ – ಶ್ರೀರಾಮನಿಗೆ ನಿನ್ನಲ್ಲಿ ಅಪಾರವಾದ ಪ್ರೀತಿಯಿದೆ. ನಿನಗಾಗಿ ಆತನು ಹಗಲಿರುಳೂ ಹಲುಬಿ ಹಂಬಲಿಸುತ್ತಿದ್ದಾನೆ. ನಿನ್ನಲ್ಲಿ ಎಂದಿಗೂ ನಿರ್ದಯನಾಗಿಲ್ಲ. ಲಕ್ಷ್ಮಣಸ್ವಾಮಿಯೂ ನಿನಗಾಗಿ ಪರಿತಪಿಸುತ್ತಿದ್ದಾನೆ. ನಿನ್ನ ನಡವಳಿಕೆ ನಿರ್ದುಷ್ಟವಾದುದು. ಅದನ್ನು ಯಾರು ಶಂಕಿಸಿಯಾರು? ಇನ್ನು ಕ್ಷಿಪ್ರದಲ್ಲಿಯೆ ಅವರು ಇಲ್ಲಿಗೆ ಬರುವರು. ನಿನ್ನ ಉದ್ಧಾರವಾಗುವುದು. ನೀನು ಇನ್ನು ವ್ಯಥೆಯನ್ನು ಬಿಡು. ನೀನು ಸಂತೋಷಪಡಬೇಕಾದ ಕಾಲ ಸನ್ನಿಹಿತವಾಗಿದೆ. ಶ್ರೀರಾಮಚಂದ್ರನಿಗೆ ನೀನು ಏನು ಸಂದೇಶವನ್ನು ಕೊಡಬೇಕೆಂದಿರುವೆಯೋ ಅದನ್ನು ತಿಳಿಸು. ನಾನು ಹೊರಡಬೇಕು” ಎಂದನು. ಅದಕ್ಕೆ ಸೀತಾದೇವಿ “ಅಪ್ಪಾ ಮಾರುತಿ, ಲೋಕನಾಥನೂ ಕೌಸಲ್ಯಾ ಪುತ್ರನೂ ಆಗಿರುವ ನನ್ನ ನಾಥನಿಗೆ ನನ್ನ ಕುಶಲವನ್ನು ತಿಳಿಸು. ನನ್ನ ನಮಸ್ಕಾರವನ್ನು ಆತನಿಗೆ ಅರ್ಪಿಸು. ಅಣ್ಣನನ್ನು ನೆರಳಿನಂತೆ ಅನುಸರಿಸಿ ಅರಣ್ಯವಾಸವನ್ನು ಕೈಕೊಂಡ ಲಕ್ಷ್ಮಣನು ಸಹ ನನ್ನನ್ನು ತಾಯಿಯಂತೆಯೇ ಕಾಣುತ್ತಿದ್ದನು. ಆತನಿಗೆ ನನ್ನ ದುರವಸ್ಥೆಯನ್ನು ತಿಳಿಸು. ನನ್ನನ್ನು ಉದ್ಧಾರಮಾಡುವಂತೆ ಶ್ರೀರಾಮನನ್ನು ಪ್ರಚೋದನೆಗೊಳಿಸುವ ಕಾರ್ಯ ನಿನ್ನದು. ಅದಕ್ಕೆ ಏನೇನು ಮಾಡಬಹುದೊ ಅದೆಲ್ಲವನ್ನೂ ನೀನು ನಡಸಬೇಕು. ಇನ್ನು ಒಂದು ತಿಂಗಳೊಳಗಾಗಿ ಶ್ರೀರಾಮನು ಇಲ್ಲಿಗೆ ಬರದಿದ್ದಲ್ಲಿ ನಾನು ಜೀವಂತಳಾಗಿರುವುದಿಲ್ಲವೆಂದು ಆತನಿಗೆ ನಿವೇದಿಸು. ಇಂದ್ರನ ಸಂಪತ್ತು ಪಾತಾಳಕ್ಕೆ ಇಳಿದುಹೋಗಿರಲು ಮಹಾ ವಿಷ್ಣುವು ಅದನ್ನು ಪುನಃ ಸಂಪಾದಿಸಿ ಇಂದ್ರನಿಗೆ ಕೊಟ್ಟಂತೆ ಶ್ರೀರಾಮಚಂದ್ರನು ರಾಕ್ಷಸವಶವಾಗಿರುವ ಈ ಪ್ರಾಣವನ್ನು ಉದ್ಧರಿಸಿ ನನ್ನನ್ನು ಕಾಪಾಡಲಿ. ಈ ಮಾತನ್ನು ರಾಮಚಂದ್ರನಿಗೆ ಮೇಲಿಂದಮೇಲೆ ತಿಳಿಸು. ” ಇಷ್ಟು ಹೇಳಿ ಆಕೆ ತನ್ನ ಸೆರಗಿನಲ್ಲಿ ಗಂಟುಹಾಕಿಕೊಂಡಿದ್ದ ಚೂಡಾರತ್ನವನ್ನು ಹನುಮಂತನ ಕೈಗೆ ಕೊಟ್ಟಳು. “ಮಾರುತಿ, ಇದನ್ನು ಶ್ರೀರಾಮನಿಗೆ ಕೊಡು” ಎಂದಳು. ಆ ವೇಳೆಗೆ ಸೂಕ್ಷ್ಮರೂಪವನ್ನು ಧರಿಸಿದ್ದ ಮಾರುತಿ ಅದನ್ನು ತನ್ನ ಅಂಗುಲಿಯಲ್ಲಿ ಯೋಜಿಸಿದನು. ಅನಂತರ ಸೀತಾದೇವಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ, ಬಹಳ ನಮ್ರತೆಯಿಂದ ತಲೆಬಾಗಿ ನಿಂತನು. ಆತನ ದೇಹ ಅಲ್ಲಿ ನಿಂತಿತ್ತು; ಆದರೆ ಮನಸ್ಸು ಆಗಲೆ ಶ್ರೀರಾಮನ ಪಾದಾರವಿಂದಗಳನ್ನು ಸೇರಿತ್ತು.

ತಲೆಬಾಗಿ ತನ್ನೆದುರಿಗೆ ನಿಂತಿದ್ದ ಹನುಮಂತನನ್ನು ಕುರಿತು ಸೀತಾದೇವಿ “ಮಗು ಮಾರುತಿ, ನಾನೀಗ ಕೊಟ್ಟಿರುವ ಚೂಡಾಮಣಿಯನ್ನು ಕಾಣುತ್ತಲೆ ರಾಮಚಂದ್ರನು ತನ್ನ ತಾಯಿಯನ್ನೂ ತಂದೆಯನ್ನೂ ನನ್ನನ್ನೂ ಸ್ಮರಿಸಿಕೊಳ್ಳುವನು. ಆತನನ್ನು ಆದಷ್ಟು ಬೇಗ ಇಲ್ಲಿಗೆ ಕರೆತರುವ ಭಾರ ನಿನ್ನದು. ನಾನು ನಿನ್ನನ್ನೆ ನೆರೆನಂಬಿದ್ದೇನೆ” ಎಂದು ಹೇಳಿದಳು. ಹನುಮಂತನು ಮತ್ತೊಮ್ಮೆ “ತಾಯಿ, ನೀನು ಚಿಂತಿಸಬೇಡ. ನಾನು ಅಗತ್ಯವಾಗಿಯೂ ಆ ಕಾರ್ಯವನ್ನು ನೆರವೇರಿಸುತ್ತೇನೆ” ಎಂದು ನಂಬುಗೆಕೊಟ್ಟು ಅಲ್ಲಿಂದ ಹೊರಡಲು ಸಿದ್ಧನಾದನು. ಆತನು ಇನ್ನು ಹೊರಡುವನಲ್ಲಾ ಎಂದು ಸೀತಾದೇವಿಗೆ ದುಃಖ ಒತ್ತರಿಸಿ ಬಂತು. ಗದ್ಗದ ಸ್ವರದಿಂದ ಆಕೆ ಅವನನ್ನು ಕುರಿತು, “ಆಂಜನೇಯ, ರಾಮಲಕ್ಷ್ಮಣರಿಗೆ ನನ್ನ ಕುಶಲವನ್ನು ತಿಳಿಸು. ಕಪಿರಾಜನಾದ ಸುಗ್ರೀವನಿಗೆ ಆತನ ಕುಶಲವನ್ನು ಕೇಳಿರುವೆನೆಂದು ಹೇಳು. ಅಲ್ಲಿರುವ ಕಪಿವೀರರಿಗೆಲ್ಲಾ ನಾನು ಕುಶಲವನ್ನು ಕೇಳಿದೆನೆಂದು ತಿಳಿಸು. ಮತ್ತೊಮ್ಮೆ ನಿನ್ನನ್ನು ಕೇಳಿಕೊಳ್ಳುತ್ತೇನೆ. ಶ್ರೀರಾಮನನ್ನು ಇಲ್ಲಿಗೆ ಕರೆತಂದು ಪುಣ್ಯವನ್ನು ಕಟ್ಟಿಕೊ” ಎಂದಳು. ಮತ್ತೆ ಮತ್ತೆ ಆಕೆಯ ಬಾಯಿಂದ ಬಂದ ಆ ಪ್ರಾರ್ಥನಾ ವಾಕ್ಯಗಳಿಗೆ ಹನುಮಂತನೂ ಮತ್ತೆ ಮತ್ತೆ ಸಮಾಧಾನ ಹೇಳಿದನು. ಕಡೆಗೆ ಸೀತಾದೇವಿ “ಮಗೂ, ನೀನು ಇಂದು ತಾನೆ ಇಲ್ಲಿಗೆ ಬಂದಿರುವೆ ಪ್ರಯಾಣದಿಂದ ಬಹು ಆಯಾಸಗೊಂಡಿರಬೇಕು. ನಿನ್ನ ಇಷ್ಟಬಂದರೆ ಈ ದಿನ ಇಲ್ಲಿಯೇ ಇದ್ದು ವಿಶ್ರಮಿಸಿಕೊಂಡು ನಾಳೆ ಹೊರಡಬಹುದು! ಅಲ್ಪಭಾಗ್ಯಳಾದ ನಾನು ನಿನ್ನ ಸಾನ್ನಿಧ್ಯದಲ್ಲಿ ಈ ಅಪಾರ ದುಃಖವನ್ನು ಕ್ಷಣಕಾಲ ಮರೆತಿರಬಹುದು. ನಿನ್ನನ್ನು ಅಗಲುವುದೆಂದರೆ, ನಿನ್ನನ್ನು ಕಾಣುವುದಕ್ಕಿಂತಲೂ ಮೊದಲಿದ್ದ ದುಃಖಕ್ಕಿಂತಲೂ ಅತಿಶಯ ದುಃಖಪ್ರಸಂಗವಾಗಿರುವಂತೆ ತೋರುತ್ತಿದೆ. ಇನ್ನೊಂದು ಮುಹೂರ್ತ ಹೀಗೆಯೆ ಮಾತನಾಡುತ್ತಿರೋಣ. ಹೇಳು, ನೀನೇನೊ ಅಸಹಾಯ ಶೂರ. ಆದ್ದರಿಂದ ಈ ಸಮುದ್ರವನ್ನು ದಾಟಿ ಬಂದೆ. ವಾನರ ಸೈನ್ಯದಲ್ಲಿ ಉಳಿದವರಿಗೆ ಈ ಶಕ್ತಿಯೆಲ್ಲಿಯದು? ಅವರು ಈ ಅಪಾರವಾದ ಸಾಗರವನ್ನು ದಾಟಿಬರುವುದೆಂತು? ನೀನು ಪೂರ್ವಾಪರಗಳನ್ನು ಯೋಚಿಸಿರುವವನು. ಇದಕ್ಕೆ ಏನು ಹೇಳುವೆ?” ಎಂದಳು. ಹನುಮಂತನು ಆಕೆಯ ಮನಸ್ಸಿಗೆ ಅಪ್ಯಾಯಮಾನವಾಗುವಂತೆ “ತಾಯೆ, ಸುಗ್ರೀವರಾಜನ ಬಳಿಯಲ್ಲಿ ಇರುವವರೆಲ್ಲರೂ ಮಹಾ ಶೂರರೆ. ನಾನೆ ಎಲ್ಲರಿಗಿಂತಲೂ ಕೀಳು. ಉಳಿದವರೆಲ್ಲರೂ ನನಗಿಂತಲೂ ಹೆಚ್ಚು ಬಲಶಾಲಿಗಳು. ನಾನೇ ಇಲ್ಲಿಗೆ ಬಂದಿರುವಾಗ ಉಳಿದವರು ಬರುವುದೇನಾಶ್ಚರ್ಯ! ಇನ್ನು ರಾಮಲಕ್ಷ್ಮಣರು. ಅವರು ನನ್ನ ಹೆಗಲಮೇಲೆ ಕುಳಿತು ಇಲ್ಲಿಗೆ ಬರುವರು. ಇದರ ವಿಚಾರದಲ್ಲಿ ನೀನು ಯಾವ ಚಿಂತೆಯನ್ನೂ ಹಚ್ಚಿಕೊಳ್ಳಬೇಕಾದುದಿಲ್ಲ. ಯಾವುದಕ್ಕೂ ಕಾಲ ಬರಬೇಕು; ಬರುತ್ತದೆ. ನೀನು ಅದನ್ನು ಇದಿರು ನೋಡುತ್ತಿರು. ಪ್ರಜ್ವಲಿಸುವ ಅಗ್ನಿಹೋತ್ರದಂತೆ ಪ್ರಕಾಶಿಸುವ ಶ್ರೀರಾಮಚಂದ್ರನನ್ನು ಕ್ಷಿಪ್ರದಲ್ಲಿಯೆ ನೀನು ಕಾಣುವೆ. ನಿನಗೆ ಮಂಗಳವಾಗಲಿ!” ಎಂದನು.

ಹನುಮಂತನ ಮಾತುಗಳಿಂದ ಸೀತೆಯ ಮನಸ್ಸಿಗೆ ಬಹು ಸಂತೋಷವಾಯಿತು. ಹೋಗುವ ಅವನನ್ನು ಕ್ಷಣಕಾಲ ಕರೆದು ನಿಲ್ಲಿಸುವುದಕ್ಕಾಗಿ ಆತನನ್ನು ಕುರಿತು, “ಮಾರುತಿ, ಶ್ರೀರಾಮನು ಕಾಗೆಯಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ ಕಥೆಯನ್ನು ಶ್ರೀರಾಮನಿಗೆ ಮರೆಯದಂತೆ ತಿಳಿಸು. ಹಾಗೆಯೆ ಶ್ರೀರಾಮನು ಒಂದು ದಿನ ನನಗೆ ಮಣಿಶಿಲೆಯನ್ನು ತಿಲಕವಾಗಿ ಮಾಡಿ ಹಣೆಗಿಟ್ಟಿದ್ದನು. ಅದನ್ನೂ ಆತನಿಗೆ ಜ್ಞಾಪಿಸು. ರಾಮನಿಗೆ ನನ್ನ ಪ್ರಣಾಮಗಳನ್ನು ಅರ್ಪಿಸು. ಲಕ್ಷ್ಮಣ ಸುಗ್ರೀವರಿಗೆ ನನ್ನ ಪ್ರಾರ್ಥನೆಯನ್ನು ಸಲ್ಲಿಸು. ನಿನಗೆ ಮಾರ್ಗದಲ್ಲಿ ವಿಘ್ನಗಳಾವುವೂ ಸಂಭವಿಸದಿರಲಿ. ನಿನಗೆ ಮಂಗಳವಾಗಲಿ!” ಎಂದು ಹರಸಿದಳು. ಅನಂತರ ಹನುಮಂತನು, ಮತ್ತೊಮ್ಮೆ ಆಕೆಗೆ ಮನಸಾ ವಂದಿಸಿ ಅಲ್ಲಿಂದ ಬೀಳ್ಕೊಂಡನು.