ಹನುಮಂತನು ಸಂತೋಷಿತನಾಗಿ ತಾನು ರಾಮನಿಂದ ತಂದಿದ್ದ ಮುದ್ರೆಯುಂಗುರವನ್ನು ಆಕೆಯ ಕೈಗೆ ಕೊಟ್ಟನು.

ಸೀತಾದೇವಿಯ ಮುಖ ಸುಪ್ರಸನ್ನವಾಯಿತು. ಆಕೆಯ ಭಯ ಶಂಕೆ ದೂರವಾದುವು. ಇದನ್ನು ಕಂಡು ಹನುಮಂತನು ಸಂತೋಷಿತನಾಗಿ ತಾನು ರಾಮನಿಂದ ತಂದಿದ್ದ ಮುದ್ರಿಕೆಯನ್ನು ಆಕೆಯ ಕೈಗೆ ಕೊಡುತ್ತಾ “ಎಲೌ ಮಹಾಭಾಗ್ಯೆ, ನಾನು ನಿಜವಾಗಿಯೂ ವಾನರನೆಂದು, ರಾಮದೂತನೆಂದು ನಿನಗೆ ನಂಬುಗೆಯಾಯಿತಷ್ಟೆ! ಇಗೊ ಇನ್ನೇನಾದರೂ ಸಂದೇಹವಿದ್ದರೆ ಅದೂ ನಿವಾರಣೆಯಾಗಲಿ. ಈ ಶ್ರೀರಾಮನಾಮಾಂಕಿತವಾದ ಮುದ್ರೆಯುಂಗುರವನ್ನು ತೆಗೆದುಕೊ. ಇದನ್ನು ನಿನಗೆ ನಂಬುಗೆಯನ್ನುಂಟು ಮಾಡುವುದಕ್ಕಾಗಿಯೇ ತಂದಿರುವೆನು. ಮಹಾತ್ಮನಾದ ಶ್ರೀರಾಮನೆ ಇದನ್ನು ಕೊಟ್ಟು ಕಳುಹಿಸಿರುವನು. ಇದನ್ನು ಕಂಡಮೇಲೆ ಇನ್ನು ಯಾವ ಭಯಕ್ಕೂ ಕಾರಣವಿಲ್ಲವಷ್ಟೆ. ತೆಗೆದುಕೊ. ನಿನಗೆ ಮಂಗಳವಾಗಲಿ!” ಎಂದನು.

ಸೀತಾದೇವಿಗೆ ಶ್ರೀರಾಮಮುದ್ರಿಕೆಯನ್ನು ಕಂಡು ಶ್ರೀರಾಮಚಂದ್ರನನ್ನೇ ಕಂಡಷ್ಟು ಸಂತೋಷವಾಯಿತು. ಆಕೆಯ ಮುಖಚಂದ್ರ ರಾಹುಮುಕ್ತವಾಯಿತು. ಪುಳಕಿತ ಗಾತ್ರೆಯಾದ ಆಕೆಗೆ ಲಜ್ಜೆಯುದಿಸಿತು. ಮನಸ್ಸಿನ ಹಿಗ್ಗು ಹೆಚ್ಚಿ ಹನುಮಂತನ ಸ್ತೋತ್ರ ಬಾಯಿಂದ ಉಕ್ಕಿತು. “ಎಲೈ ಮಹನೀಯನಾದ ಆಂಜನೇಯನೇ, ನಿರ್ಭಯನಾಗಿ ಈ ಲಂಕಾನಗರಿಯನ್ನು ಪ್ರವೇಶಿಸಿದ ನಿನ್ನ ಶೌರ್ಯ ಧೈರ್ಯಗಳು ಅಸದೃಶವಾದುವು. ನಿನ್ನ ಬುದ್ಧಿ ಅಪಾರವಾದುದು. ಮಹಾಸಮುದ್ರ ನಿನಗೊಂದು ಗೋಷ್ಪದಜಲದಂತಾಯಿತಲ್ಲವೆ? ರಾವಣನ ಭಯವೇ ಸ್ವಲ್ಪವೂ ಇಲ್ಲದಿರುವ ನೀನು ಸಾಮಾನ್ಯನೆ? ಶ್ರೀರಾಮದೂತನಾದ ನಿನ್ನೊಡನೆ ಮಾತನಾಡಬೇಕೆಂದರೆ ನನಗೆ ಬಹಳ ಆನಂದ. ಶ್ರೀರಾಮ ಲಕ್ಷ್ಮಣರ ಕುಶಲವಾರ್ತೆಯನ್ನು ತಂದ ಪುಣ್ಯಸ್ವರೂಪಿಯಾದ ಮಾರುತಿ, ಶ್ರೀರಾಮಚಂದ್ರನು ದುಃಖದಲ್ಲಿ ಮುಳುಗಿ ಮುಂಗಾಣದೆ ಕುಳಿತಿಲ್ಲವಷ್ಟೆ? ತನ್ನ ಕಾರ್ಯದಲ್ಲಿ ಆತನು ಜಾಗರೂಕನಾಗಿರುವನಷ್ಟೆ? ಆತನು ಬಹುಬೇಗ ಬಂದು ನನ್ನನ್ನು ಈ ದುಃಖದಿಂದ ಬಿಡಿಸುವನಷ್ಟೆ? ದುಃಖದಿಂದ ಆ ನನ್ನ ಪ್ರಿಯನು ಬಹಳ ಕೃಶನಾಗಿ ಹೋಗಿರುವನೆ? ನನಗೋಸ್ಕರ ಆತನು ಬಹುವಾಗಿ ಪರಿತಪಿಸುತ್ತಿದ್ದಾನೆಯೆ? ಆತನು ನನ್ನಲ್ಲಿ ಕುಪಿತನಾಗಿಲ್ಲವಷ್ಟೆ? ನನ್ನಲ್ಲಿಯೇ ನಟ್ಟ ಪ್ರಾಣಗಳುಳ್ಳವನಾಗಿದ್ದಾನೆಯೆ, ಆ ಕರುಣಾಕರ? ವೀರಮಾರುತಿ, ಶ್ರೀರಾಮನಿಗೆ ನನ್ನಲ್ಲಿ ಎಷ್ಟು ಪ್ರೇಮ! ತಾಯಿತಂದೆಗಳಲ್ಲಾಗಲಿ ಬಂಧು ಬಾಂಧವರಲ್ಲಾಗಲಿ ಆತನಿಗೆ ನನ್ನಷ್ಟು ಪ್ರೀತಿಪಾತ್ರರಾದವರು ಯಾರೂ ಇಲ್ಲ. ನನಗಂತೂ ಆತನೇ ಜೀವ, ಆದ್ದರಿಂದ ಆತನು ಬಂದು ನನ್ನನ್ನು ಬಂಧಮುಕ್ತಳನ್ನಾಗಿ ಮಾಡುವವರೆಗೂ ಜೀವವನ್ನು ಹಿಡಿದುಕೊಂಡಿರುತ್ತೇನೆ” ಎಂದಳು. ಆಕೆಯ ಮಧುರವಾದ ಮಾತುಗಳನ್ನು ಕೇಳಿ ಹನುಮಂತನಿಗೆ ಆಕೆಯಲ್ಲಿದ್ದ ಭಕ್ತಿ ಹೆಚ್ಚಾಯಿತು. ಮತ್ತೊಮ್ಮೆ ಆಕೆಗೆ ತಲೆಬಾಗಿ ವಂದಿಸಿ, “ತಾಯೇ, ಏನೂ ಸಂದೇಹಪಡಬೇಡ. ಶ್ರೀರಾಮಚಂದ್ರನಿಗೆ ನೀನಿರುವ ಎಡೆ ತಿಳಿಯದು. ಈಗ ನಾನು ಹೋಗಿ ಹೇಳಿದೊಡನೆಯೆ ಅಪಾರವಾದ ಸೈನ್ಯದೊಡನೆ ಇಲ್ಲಿಗೆ ಹೊರಟುಬರುವನು. ಆತನು ತನ್ನ ಬಾಣಪರಂಪರೆಯಿಂದ ಈ ಸಮುದ್ರವನ್ನು ಸ್ತಂಭಿಸಿ ಲಂಕೆಯನ್ನು ಪ್ರವೇಶಿಸುವನು. ಒಡನೆಯೆ ರಾಕ್ಷಸರೆಲ್ಲರೂ ನಾಶವಾಗಿ ಹೋಗುವರು. ಪ್ರತ್ಯಕ್ಷ ಯಮನೆ ಎದ್ದು ಬಂದರೂ ಶ್ರೀರಾಮನನ್ನು ತಡೆಯಲಾರನು. ಆದ್ದರಿಂದ ಕ್ಷಿಪ್ರದಲ್ಲಿಯೆ ನೀನು ಶ್ರೀರಾಮಚಂದ್ರನ ಮುಖಕಮಲವನ್ನು ಕಾಣುತ್ತೀಯೆ. ದೇವಿ, ನಿನ್ನನ್ನು ಅಗಲಿದ ಮೇಲೆ ಇಂದಿನವರೆಗೆ ಆತನು ಮಾಂಸವನ್ನು ಭಕ್ಷಿಸಿಲ್ಲ; ಮಧುವನ್ನು ಸೇವಿಸಿಲ್ಲ. ಕೇವಲ ಕಂದಮೂಲಗಳನ್ನು ಭಕ್ಷಿಸುತ್ತಾ ಋಷಿಜೀವನವನ್ನು ನಡಸುತ್ತಿರುವನು. ಆತನಿಗೆ ನಿದ್ರೆಯೆಂಬುದೆ ಇಲ್ಲ. ಅಕಸ್ಮಾತ್ತಾಗಿ ಕಣ್ಣು ಮುಚ್ಚಿದರೂ ‘ಸೀತೆ! ಸೀತೆ!’ ಎಂದು ಕನವರಿಸುತ್ತಾ ಮೇಲಕ್ಕೇಳುತ್ತಾನೆ. ಸುಂದರವಾದ ಪುಷ್ಪವನ್ನೊ ಫಲವನ್ನೊ ಕಾಣುತ್ತಲೆ ‘ಹಾ ಪ್ರಿಯೆ, ಈ ವಸ್ತುವನ್ನು ಅನುಭವಿಸಲು ನೀನಿಲ್ಲವಲ್ಲಾ!’ ಎಂದು ಕಣ್ಣೀರ್ಗರೆಯುತ್ತಾನೆ” ಎಂದು ಹೇಳಿದನು. ಇದನ್ನು ಕೇಳಿ ಸೀತೆಗೆ ಒಂದು ಬಗೆಯಿಂದ ಮನಸ್ಸಿಗೆ ಹರ್ಷವುಂಟಾದರೂ ತನಗಾಗಿ ರಾಮಚಂದ್ರನು ಸಂಕಟಪಡುತ್ತಿರುವುದನ್ನು ಕೇಳಿ ಮನಸ್ಸು ಮುರುಟಿ, ಮುಖ ಬಾಡಿತು. ಆತನು ಪಡುತ್ತಿರಬಹುದಾದ ಸಂಕಟವನ್ನು ಆಕೆಯ ಹೃದಯವೂ ಆ ಮುಹೂರ್ತದಲ್ಲಿ ಸಾಕ್ಷಾತ್ತಾಗಿ ಅನುಭವಿಸಿತು.