ಖರದೂಷಣರೊಡನೆ ಹದಿನಾಲ್ಕು ಸಾವಿರ ರಾಕ್ಷಸರು ಶ್ರೀರಾಮನಿಂದ ಹತರಾಗಿ ರಣರಂಗದಲ್ಲಿ ಮಲಗಿದರು. ಇದನ್ನು ಕಂಡು ಅಕಂಪನನೆಂಬ ಗೂಢಚಾರನು ಲಂಕೆಗೆ ಬಂದು ರಾವಣನಿಗೆ ಕೈಮುಗಿದು “ರಾಜನ್, ಜನಸ್ಥಾನದಲ್ಲಿ ಶ್ರೀರಾಮನಿಂದ ಬಹುಮಂದಿ ರಾಕ್ಷಸರು ಹತರಾದರು. ಖರನು ಯುದ್ಧದಲ್ಲಿ ಮಡಿದನು. ಬಹುಕಷ್ಟದಿಂದ ನಾನು ನಿನ್ನಲ್ಲಿಗೆ ಬಂದೆನು” ಎಂದು ನುಡಿದನು. ಚಾರನ ಮಾತನ್ನು ಕೇಳಿ ಕೋಪದಿಂದ ಕೆರಳಿದ ರಾವಣನು “ನಾನಾದರೋ ಯಮನಿಗೆ ಯಮ. ಯಾವ ಮನುಷ್ಯನು ತಾನೆ ನನಗೆ ಅಪ್ರಿಯವನ್ನು ಮಾಡಿ ಉಳಿಯಲು ಸಾಧ್ಯ?” ಎಂದು ಗರ್ಜಿಸಿದನು. ರಾವಣನಿಂದ ಅಭಯ ಪಡೆದ ಅಕಂಪನನು ವೀರನಾದ ದಶರಥನ ಮಗ ಶ್ರೀರಾಮನು ಈ ಕೆಲಸವನ್ನು ಮಾಡಿದನೆಂದು ನಿವೇದಿಸಿದನು.

ಅಕಂಪನನ ಮಾತನ್ನು ಕೇಳುತ್ತಲೆ ರಾವಣನು ಆದಿಶೇಷನಂತೆ ಬುಸುಗುಟ್ಟುತ್ತ ತತ್‌ಕ್ಷಣವೆ ಜನಸ್ಥಾನಕ್ಕೆ ಹೋಗಿ ರಾಮಲಕ್ಷ್ಮಣರನ್ನು ವಧಿಸಿ ಬರಬೇಕೆಂದು ಬಯಸಿದನು. ಆಗ ಅಕಂಪನನು ರಾವಣನನ್ನು ಕುರಿತು “ರಾಕ್ಷಸೇಂದ್ರ, ಪುರುಷಶ್ರೇಷ್ಠನಾದ ರಾಮನನ್ನು ನಿನ್ನಿಂದ ಜಯಿಸಲು ಸಾಧ್ಯವಿಲ್ಲ. ಅಲ್ಲದೆ ಆತನಿಗೆ ಸೀತೆಯೆಂಬ ಹೆಂಡತಿಯಿದ್ದಾಳೆ. ಆಕೆ ಸುಂದರಿ; ಹಾಗೂ ಯುವತಿ. ಆಕೆಗೆ ಸಮಾನಳಾದ ಹೆಂಗಸು ದೇವತೆಗಳಲ್ಲಾಗಲಿ, ಗಂಧರ್ವರಲ್ಲಾಗಲಿ, ಅಪ್ಸರೆಯರಲ್ಲಾಗಲಿ ಇಲ್ಲವೆ ಇಲ್ಲ. ಅವಳನ್ನು ನೀನು ಅಪಹರಿಸಿಕೊಂಡು ಬರುವುದಾದರೆ, ಸೀತೆಯಿಲ್ಲದ ಕಾಮುಕ ರಾಮ ಜೀವ ಬಿಡುತ್ತಾನೆ” ಎಂದನು.

ಆಕಂಪನನ ಮಾತು ರಾವಣನಿಗೆ ರುಚಿಸಿತು. ಅವನ ಮಾತನ್ನು ಒಪ್ಪಿ, ಮಾರನೆಯ ದಿನ ಸಾರಥಿಯೊಡನೆ ಒಬ್ಬನೆ ಹೋಗಿ ಸೀತೆಯನ್ನು ಕದ್ದುತರಬೇಕೆಂದು ತನ್ನಲ್ಲಿಯೆ ನಿಶ್ಚೈಸಿಕೊಂಡನು. ಅದರಂತೆ ರಥದಲ್ಲಿ ಕುಳಿತು ಆಕಾಶಮಾರ್ಗದಲ್ಲಿ ಬರುತ್ತಾ ರಾವಣನು ಮಾರೀಚನ ಆಶ್ರಮದ ಬಳಿಗೆ ಬಂದನು. ತನ್ನಲ್ಲಿಗೆ ಬಂದ ರಾಕ್ಷಸೇಂದ್ರನನ್ನು ಮಾರೀಚನು ಉಪಚರಿಸಿ ಅವನು ಬಂದ ಕಾರಣವೇನೆಂದು ಕೇಳಿದನು. ಅದಕ್ಕೆ ರಾವಣನು “ವತ್ಸ, ಜನಸ್ಥಾನದಲ್ಲಿದ್ದ ನನ್ನವರೆಲ್ಲ ಯುದ್ಧದಲ್ಲಿ ರಾಮನಿಂದ ಹತರಾದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಇರುವ ಉಪಾಯ ಒಂದೇ. ಆದಕಾರಣ ರಾಮನನ್ನು ಕೊಂದು ಅವನ ಹೆಂಡತಿಯನ್ನು ಕದ್ದು ತರಬಯಸಿದ್ದೇನೆ. ಈ ಕಾರ್ಯದಲ್ಲಿ ನೀನು ನನಗೆ ಸಚಿವನಾಗಿ ನಿಂತು ಸಹಾಯ ಮಾಡು” ಎಂದು ಬೇಡಿಕೊಂಡನು. ರಾಮಬಾಣದ ರುಚಿಯನ್ನರಿತಿದ್ದ ಮಾರೀಚನು ರಾವಣನ ಮಾತಿಗೆ “ರಾಕ್ಷಸೇಂದ್ರ, ನಿನಗೆ ಸೀತೆಯ ವಿಷಯವನ್ನು ತಿಳಿಸಿದವರಾರು? ಹಾಗೆ ತಿಳಿಸಿದವನು ಮಿತ್ರರೂಪದ ಶತ್ರುವೇ ಆಗಿರಬೇಕು. ಸೀತೆಯನ್ನು ಕದ್ದುತರಲು ನಿನಗೆ ಸಲಹೆಯನ್ನು ಕೊಟ್ಟವರಾರು? ರಾಕ್ಷಸಲೋಕದ ಐಶ್ವರ್ಯವನ್ನು ನಾಶಗೊಳಿಸಲು ಯಾವನೋ ಒಬ್ಬನು ನಿನ್ನ ಮನಸ್ಸಿನಲ್ಲಿ ಈ ದುರ್ಬೋಧನೆಯನ್ನು ತುಂಬಿರಬೇಕು. ಕ್ರೂರಸರ್ಪದ ಹಲ್ಲುಗಳನ್ನು ಕೀಳಲು ನಿನ್ನನ್ನು ಯಾರು ಪ್ರೇರಿಸಿದರು? ಶ್ರೀರಾಮನು ಉತ್ತಮ ಕುಲದಲ್ಲಿ ಹುಟ್ಟಿದವನು; ಮೇಲಾಗಿ ಮಹಾಪರಾಕ್ರಮಿ. ಅವನನ್ನು ಯುದ್ಧದಲ್ಲಿ ಎದುರಿಸಲು ಯಾರಿಗೂ ಸಾಧ್ಯವಿಲ್ಲ. ಪುರುಷಸಿಂಹನಾದ ರಾಮನನ್ನು ನೀನು ಕೆಣಕುವುದು ಉಚಿತವಲ್ಲ. ನಡೆಯಬಾರದ ಕೆಟ್ಟ ಹಾದಿಯಲ್ಲಿ ನೀನು ಅಡಿಯಿಟ್ಟಿರುವೆ. ಲಂಕೇಶ್ವರ, ನನ್ನ ವಿಷಯದಲ್ಲಿ ಪ್ರಸನ್ನನಾಗಿ, ಸೀತೆಯನ್ನು ಕದ್ದುತರುವ ಯೋಚನೆಯನ್ನು ಬಿಟ್ಟು ಲಂಕೆಗೆ ಹಿಂದಿರುಗು. ನೀನು ನಿನ್ನ ಹೆಂಡತಿಯೊಡನೆ ಸುಖವಾಗಿ ರಮಿಸು; ರಾಮನು ತನ್ನ ಭಾರ್ಯೆಯೊಡನೆ ಸುಖವಾಗಿ ಕಾಡಿನಲ್ಲಿ ವಿಹರಿಸಲಿ” ಎಂದು ಬುದ್ಧಿ ಹೇಳಿದನು. ಮಾರೀಚನ ನೀತಿವಾಕ್ಯಗಳಿಗೆ ಕಿವಿಗೊಟ್ಟು ರಾವಣನು ಲಂಕೆಗೆ ಹಿಂದಿರುಗಿ ಬಂದನು.

ಆದರೆ ವಿಧಿ ಮಾತ್ರ ರಾವಣನ ಬೆನ್ನು ಬಿಟ್ಟಿರಲಿಲ್ಲ. ರಾಮನು ಖರ, ತ್ರಿಶಿರಸ್ಸು, ದೂಷಣರೊಡಗೂಡಿದ ಹದಿನಾಲ್ಕು ಸಾವಿರ ರಾಕ್ಷಸರನ್ನು ಕೊಂದುದನ್ನು ಕಂಡ ಶೂರ್ಪನಖಿ ಭಯದಿಂದ ದೊಡ್ಡದಾದಿ ಅರಚಿಕೊಂಡಳು. ಅವಳ ಮನಸ್ಸು ಉದ್ವಿಗ್ನವಾಯಿತು. ಕೂಡಲೆ ಆಕೆ ಅಣ್ಣನಾದ ರಾವಣನನ್ನು ನೆನೆದು ಲಂಕೆಗೆ ಓಡಿಬಂದಳು. ಶೂರ್ಪನಖಿ ಅಣ್ಣನ ಬಳಿಗೆ ಬಂದಾಗ ದೇವತೆಗಳಿಂದ ಸುತ್ತುವರಿದ ಇಂದ್ರನಂತೆ, ಮಂತ್ರಿಗಳ ನಡುವೆ ಪುಷ್ಪಕವಿಮಾನದಲ್ಲಿ ರಾವಣನು ರಂಜಿಸುತ್ತಿದ್ದನು. ರಾವಣನೇನು ಸಾಮಾನ್ಯನೆ? ದೇವದಾನವ ಗಂಧರ್ವರಿಗೂ ಅವನು ಅಜೇಯನಾದವನು. ಜ್ವಲಿಸುವ ಅಗ್ನಿಯಂತೆ ತೇಜಸ್ವಿಯಾದವನು. ಅವನಿಗೆ ಹತ್ತು ತಲೆ; ಇಪ್ಪತ್ತು ತೋಳುಗಳು. ಅಗಲವಾದ ಎದೆಯಿಂದ ಕೂಡಿ ರಾಜಲಕ್ಷಣಗಳಿಂದ ಶೋಭಿತನಾದವನು ರಾವಣ. ಅವನ ಪರಾಕ್ರಮವನ್ನು ಏನೆಂದು ಬಣ್ಣಿಸುವುದು? ದೇವತೆಗಳನ್ನು ಯುದ್ಧಯಲ್ಲಿ ಮರ್ದಿಸಿದವನು; ಕುಬೇರನನ್ನು ಯುದ್ಧದಲ್ಲಿ ಸೋಲಿಸಿ ಅವನ ಪುಷ್ಪಕವನ್ನು ಸೆಳೆದು ತಂದವನು. ಹಿಂದೆ ಹತ್ತುಸಾವಿರ ವರ್ಷಗಳ ಕಾಲ ತಪಸ್ಸನ್ನು ಆಚರಿಸಿ, ಬ್ರಹ್ಮನಿಗೆ ತನ್ನ ತಲೆಗಳನ್ನೇ ಅರ್ಪಿಸಿದವನು; ತಪಸ್ಸಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ವರಗಳನ್ನು ಕೊಡಲು ಅದರಿಂದ ಕೊಬ್ಬಿದವನು; ಋಷಿಗಳ ಯಜ್ಞಗಳಿಗೆ ಕಂಟಕನಾಗಿ, ಲೋಕವನ್ನೇ ಗೋಳಿಗೆ ಈಡುಮಾಡಿದವನು. ಈ ತೆರವಾದ ಸಾಮರ್ಥ್ಯವನ್ನು ಹೊಂದಿ ಯಮನಂತಿದ್ದ ರಾವಣನನ್ನು ನೋಡಿದೊಡನೆಯೆ ಶೂರ್ಪನಖಿಯ ದುಃಖ ಮರುಕೊಳಿಸಿತು. ಜನಸ್ಥಾನದಲ್ಲಿ ರಾಮನ ತೋರಿಸಿದ ಸಾಹಸವನ್ನು ನೆನೆದು ಆಕೆ ಹಾಗೆಯೆ ಎಚ್ಚರ ತಪ್ಪಿ ಬಿದ್ದುಬಿಟ್ಟಳು.

ರಾವಣನು ತಂಗಿಯನ್ನು ಸಮಾಧಾನಗೊಳಿಸಿದನು. ಮೆಲ್ಲಗೆ ಮೂರ್ಛೆ ತಿಳಿದ ಮೇಲೆ ಶೂರ್ಪನಖಿ ಮಂತ್ರಿಗಳ ನಡುವಿದ್ದ ರಾವಣನನ್ನು ಕುರಿತು ಈ ರೀತಿ ಚುಚ್ಚುಮಾತುಗಳನ್ನು ಆಡಿದಳು. ರಾಕ್ಷಸೇಂದ್ರ, ಕಾಮಭೋಗಗಳಿಂದ ಪ್ರಮತ್ತನಾಗಿ ಯಾರ ತಡೆಯೂ ಇಲ್ಲದ ನೀನು ಈಗ ನಮಗೆ ಒದಗಿಬಂದಿರುವ ಭಯವನ್ನು ಅರಿಯದಾಗಿರುವೆ. ಶ್ಮಶಾನದ ಅಗ್ನಿಯನ್ನೆಂತೊ ಅಂತು ಅಲ್ಪವಾದ ಭೋಗಗಳಲ್ಲಿ ಮುಳುಗಿ ಹೋಗಿರುವ ರಾಜನನ್ನು ಪ್ರಜೆಗಳು ಮನ್ನಿಸರು. ಸ್ತ್ರೀಯರಿಗೆ ವಶನಾಗದೆ ಕಾಲಕಾಲಕ್ಕೆ ಮಾಡಬೇಕಾದ ಕೆಲಸವನ್ನು ರಾಜನು ನಡೆಸಬೇಕು. ಹಾಗೆ ಮಾಡದ ರಾಜನಿಂದ ನದಿಯ ಕೆಸರನ್ನು ಕಂಡು ಓಡಿಹೋಗುವ ಆನೆಗಳಂತೆ ಪ್ರಜೆಗಳು ದೂರವಾಗುತ್ತಾರೆ. ದೇವ ಗಂಧರ್ವರ ಹಗೆತನವನ್ನು ನೀನು ಬೆಳಸಿಕೊಂಡಿರುವೆ. ಆದರೆ ವಿಷಯವನ್ನು ಸಂಗ್ರಹಿಸಲು ಗೂಢಚಾರರನ್ನು ನಿಯಮಿಸಿಕೊಂಡಿರುವುದಿಲ್ಲ. ಮೇಲಾಗಿ ನೀನು ಬಾಲಭಾವವುಳ್ಳವನು. ನೀನು ಹೇಗೆ ತಾನೆ ರಾಜನೆಂಬ ಹೆಸರಿಗೆ ಅರ್ಹನಾಗುವೆ? ಜನಸ್ಥಾನದಲ್ಲಿ ನಿನ್ನವರಾದ ಖರದೂಷಣರು ಹದಿನಾಲ್ಕು ಸಾವಿರ ರಾಕ್ಷಸರೊಡನೆ ಏಕಾಂಗವೀರನಾದ ರಾಮನೊಬ್ಬನಿಂದಲೆ ಹತರಾದರು. ರಾಮನ ಈ ಕಾರ್ಯದಿಂದ ಇನ್ನು ಮುಂದೆ ಋಷಿಗಳು ಯಾವ ಅಡ್ಡಿಯೂ ಇಲ್ಲದೆ ಯಾರ ಭಯವೂ ಇಲ್ಲದೆ ತಪಸ್ಸನ್ನಾಚರಿಸಬಹುದು. ನೀನಾದರೊ ಇಲ್ಲಿ ಮೂರ್ಖ ಮಂತ್ರಿಗಳಿಂದ ಸುತ್ತಿಚರಿದವನಾಗಿ ಸ್ತ್ರೀಯರಿಗೆ ವಶನಾಗಿರುವೆ. ಉಟ್ಟು ಕಳೆದ ವಸ್ತ್ರದಂತೆ, ಮುಡಿದ ಹೂವಿನಂತೆ ನಿನ್ನಿಂದ ಯಾರಿಗೆ ತಾನೆ ಉಪಯೋಗ? ನಿನ್ನವರ ನಾಶ ಹೊಂದಿರುವುದನ್ನು ತಿಳಿಯದೆ, ಭೋಗದಿಂದ ಕೊಬ್ಬಿ ಹೋಗಿರುವ ನೀನು ಬಹು ಬೇಗ ನಾಶಹೊಂದುವುದರಲ್ಲಿ ಸಂದೇಹವೆನು?”

ಶೂರ್ಪನಖಿಯ ಮಾತುಗಳು ರಾವಣನನ್ನು ಚಿಂತೆಗೆ ಒಳಗುಮಾಡಿದುವು. ರಾವಣನು ಕ್ಷಣಕಾಲ ಯೋಚಿಸಿ, ರಾಮನ ಸಾಮರ್ಥ್ಯವನ್ನು ತನೆ ತಿಳಿಸಬೇಕೆಂದು ತಂಗಿಯನ್ನು ಕೇಳಿಕೊಂಡನು. ಕ್ರೋಧದಿಂದ ಹುಚ್ಚೆದ್ದ ಶೂರ್ಪನಖಿ ರಾವಣನನ್ನು ಕುರಿತು ಈ ಮಾತುಗಳನ್ನು ಮತ್ತೆ ಹೇಳಿದಳು. “ದಶರಥನ ಮಗನಾದ ಶ್ರೀರಾಮನು ದೀರ್ಘಬಾಹು ಮತ್ತು ವಿಶಾಲಾಕ್ಷ ರೂಪದಲ್ಲಂತೂ ಆತನು ಸಾಕ್ಷಾತ್ ಮನ್ಮಥನಂತಿದ್ದಾನೆ. ಶರಸಂಧಾನದಲ್ಲಿ ಅವನಂತಿರುವ ಬೇರೊಬ್ಬರನ್ನು ನಾನು ಕಾಣೆ. ಬಿಲ್ಲೆಳೆದು, ಬಾಣ ಹೂಡಿ ಬಿಡುವುದನ್ನು ನಾನು ನೋಡಲೆ ಇಲ್ಲ. ಅವನ ಕೈಚಳಕ ಅಂಥದು. ಕಣ್ಣು ಮುಚ್ಚಿ ತೆರೆಯುವುದರಲ್ಲಿ ಹದಿನಾಲ್ಕು ಸಾವಿರ ರಾಕ್ಷಸರು ಖರದೂಷಣರೊಡನೆ ಹತರಾದರು. ಹೆಣ್ಣೆಂದು ತಿಳಿದು ರಾಮನು ನನ್ನನ್ನು ಕೊಲ್ಲಲಿಲ್ಲ. ರಾಮನಿಗೆ ಸಮಾನವಾದ ಗುಣವುಳ್ಳ, ಅಣ್ಣನಲ್ಲಿ ಅನುರಕ್ತನಾದ ಲಕ್ಷ್ಮಣನೆಂಬೊಬ್ಬ ತಮ್ಮನು ರಾಮನಿಗಿದ್ದಾನೆ. ಅವನು ರಾಮನ ಹೊರಗಿನ ಪ್ರಾಣವೆಂದು ತಿಳಿ. ರಾಮನಿಗೆ ಸೀತೆಯೆಂಬ ಹೆಂಡತಿಯಿದ್ದಾಳೆ. ಹುಣ್ಣಿಮೆಯ ಚಂದ್ರನಂತೆ ಮುಖ, ಬೊಗಸೆಗಣ್ಣು. ಉದ್ದವಾದ ಕೇಶವುಳ್ಳ ಆ ಸೀತೆ ಪುಟವಿಟ್ಟ ಬಂಗಾರದಂತೆ ಹೊಳೆಯುತ್ತಿದ್ದಾಳೆ. ಸೀತೆಯಂಥ ರೂಪವುಳ್ಳ ಸ್ತ್ರೀಯರು ದೇವತೆಗಳಲ್ಲಿ, ಗಂಧರ್ವರಲ್ಲಿ, ಮನುಷ್ಯರಲ್ಲಿ ಇಲ್ಲವೆಂದೆ ನನ್ನ ಭಾವನೆ. ಆಕೆಯನ್ನು ಹೆಂಡತಿಯನ್ನಾಗಿ ಪಡೆದ ಪುರುಷನೇ ಪರಮಸುಖಿ. ರೂಪದಿಂದ ಗುಣದಿಂದ ಜಾನಕಿ ಪರಮಶ್ಲಾಘ್ಯಳು. ನಿನಗೆ ಆಕೆ ಅನುರೂಪಳಾದ ಸೀತೆಯನ್ನು ನೀನು ಒಮ್ಮೆ ನೋಡಿದರೆ ಸಾಕು; ಮನ್ಮಥನೂ ಸಹ ಬಾಣಗಳಿಗೆ ಗುರಿಯಾಗುವುದರಲ್ಲಿ ಸಂದೇಹವೇ ಇಲ್ಲ. ಖರದೂಷಣರ ಸಾವಿನ ಸೇಡನ್ನು ತೀರಿಸಿಕೊಳ್ಳಬೇಕೆನ್ನುವ ಬಯಕೆ ನಿನಗಿದ್ದರೆ, ಸೀತೆ ಹೆಂಡತಿಯಾಗಬೇಕೆಂಬ ಆಸೆ ನಿನಗಿದ್ದರೆ, ರಾಮಲಕ್ಷ್ಮಣರನ್ನು ಕೊಲ್ಲಲು ಈ ಕ್ಷಣವೆ ಜನಸ್ಥಾನಕ್ಕೆ ಹೊರಡು. ಈ ವಿಷಯದಲ್ಲಿ ಯೋಚಿಸಿ ಕೆಲಸಮಾಡು.”

ಮೈನವಿರೇಳಿಸುವ ಶೂರ್ಪನಖಿಯ ಮಾತು ರಾವಣನ ಮನಸ್ಸಿನಲ್ಲಿ ಬಾಣದಂತ ಬಲವಾಗಿ ನಾಟಿತು. ತಂಗಿಯನ್ನೂ ಮಂತ್ರಿಗಳನ್ನೂ ಕಳುಹಿಸಿಕೊಟ್ಟು ಲಂಕೇಶ್ವರನು ಅಂತಃಪುರಕ್ಕೆ ತೆರಳಿದನು. ಅಲ್ಲಿ ರಾವಣನು ಮುಂದೆ ಮಾಡತಕ್ಕ ಕಾರ್ಯದ ಬಲಾಬಲಗಳನ್ನು ತೂಗಿ ನೋಡಿ, ಮಾಡತಕ್ಕ ಕಾರ್ಯವನ್ನು ನಿಶ್ಚೈಸಿದನು. ಅವನ ಅಪ್ಪಣೆಯಂತೆ ಹೊಂದೇರು ಸಿದ್ಧವಾಗಿ ಬರಲು, ವೇಗವಾಗಿ ಹೋಗುವ ಆ ರಥವನ್ನು ಹತ್ತಿ ರಾಕ್ಷಸೇಂದ್ರನು ಜನಸ್ಥಾನದ ಕಡೆಗೆ ಹೊರಟನು. ಬೆಳ್ಗೊಡೆಯ ನೆರಳಿನಲ್ಲಿದ್ದ ರಾವಣನು ರತ್ನಾಭರಣಗಳಿಂದ ಅಲಂಕೃತನಾಗಿ, ಮಿಂಚುಗಳಿಂದ ಕೂಡಿದ ಮೇಘದಂತೆ ನೋಡಲು ಮನೋಹರವಾಗಿ ಕಾಣುತ್ತಿದ್ದನು. ಜನಸ್ಥಾನದ ಕಡೆಗೆ ಹೊರಟ ರಾವಣನು ಸಮುದ್ರದ ಮೇಲೆ ಹಾಯ್ದುಬರುತ್ತ, ಮಾರೀಚನ ಆಶ್ರಮದ ಬಳಿಗೆ ಬಂದನು. ಆಶ್ರಮದಲ್ಲಿ ಆಲದಮರದ ಕೆಳಗಡೆ ಕುಳಿತಿದ್ದ ಮಾರೀಚನು, ಮತ್ತೆ ತನ್ನ ಬಳಿಗೆ ಬಂದ ರಾವಣನ್ನು ಆದರದಿಂದ ಬರಮಾಡಿಕೊಂಡನು.

ಆ ಬಳಿಕ ರಾವಣನು ಮಾರೀಚನನ್ನು ಕುರಿತು “ಮಾರೀಚ, ನನ್ನ ಮಾತನ್ನು ಕೇಳು. ಈಗ ನಾನು ಮಹಾವ್ಯಸನದಿಂದ ಕೂಡಿದ್ದೇನೆ. ನನಗೆ ನೀನೇ ಗತಿ. ಜನಸ್ಥಾನದಲ್ಲಿ ಹದಿನಾಲ್ಕು ಸಾವಿರ ರಾಕ್ಷಸರೊಡನೆ ಸುಖವಾಗಿ ಬಾಳುತ್ತಿದ್ದ ಖರದೂಷಣರು ಯುದ್ಧದಲ್ಲಿ ರಾಮನಿಂದ ಹತರಾದರಷ್ಟೆ. ಕಾಮುಕನಾದ ಆ ರಾಮನು ಯಾವ ವೈರಕಾರಣವೂ ಇಲ್ಲದೆ ನನ್ನ ತಂಗಿಯಾದ ಶೂರ್ಪನಖಿಯ ಕಿವಿಮೂಗುಗಳನ್ನು ಕತ್ತರಿಸಿ ವಿರೂಪಳನ್ನಾಗಿ ಮಾಡಿದ್ದಾನೆ. ಆ ರಾಮನ ಹೆಂಡತಿಯಾದ ಸೀತೆಯನ್ನು ಜನಸ್ಥಾನದಿಂದ ಕದ್ದು ತರಲು ನೀನು ಸಹಾಯ ಮಾಡು. ಬಿಳಿಯಮಚ್ಚೆಗಳಿಂದ ಕೂಡಿದ ಬಂಗಾರದ ಜಿಂಕೆಯ ಆಕಾರವನನು ಧರಿಸಿ ರಾಮನ ಆಶ್ರಮದಲ್ಲಿ ಸೀತೆಯ ಎದುರಿನಲ್ಲಿ ಸುಳಿದಾಡುತ್ತಿರು. ತನಗೆ ಆ ಮೃಗವು ಬೇಕೆಂದು ಸೀತೆ ಸ್ವಲ್ಪವೂ ಅನುಮಾನವಿಲ್ಲದೆ ರಾಮಲಕ್ಷ್ಮಣರನ್ನು ಕೇಳಿಕೊಳ್ಳುವಳು. ರಾಮಲಕ್ಷ್ಮಣರು ಸೀತೆಯಿಂದ ದೂರವಾಗುತ್ತಲೆ, ರಾಹು ಚಂದ್ರನ ಕಾಂತಿಯನ್ನು ಅಪಹರಿಸುವಂತೆ, ಸೀತೆಯನ್ನು ಕದ್ದೊಯ್ಯುವೆನು. ಸೀತಾಪಹರಣದಿಂದ ಕಂದಿ ಕುಂದಿಹೋದ ರಾಮನು ಯುದ್ಧಕ್ಕೆ ಬಂದರೆ ಸುಲಭವಾಗಿ ಹೊಡೆದು ಹಾಕುತ್ತೇನೆ” ಎಂದನು.

ರಾವಣನ ಮಾತುಗಳನ್ನು ಕೇಳಿ ಮಾರೀಚನ ಮುಖ ಭಯದಿಂದ ಬಾಡಿಹೋಯಿತು. ಒಣಗಿದ ತುಟಿಗಳನ್ನು ನಾಲಗೆಯಿಂದ ಸವರಿಕೊಳ್ಳತೊಡಗಿದನು. ಸತ್ತವನಂತೆ ರೆಪ್ಪೆ ಹೊಡೆಯದೆ ದೀನನಾದ ಮಾರೀಚನು ರಾವಣನಿಗೆ ಕೈಮುಗಿದು “ರಾಜನ್, ತಾತ್ಕಾಲಿಕವಾಗಿ ಹಿತವನ್ನುಂಟುಮಾಡುವ ಮಾತುಗಳನ್ನಾಡುವ ಜನರು ದೊರಕುವುದು ಸುಲಭ. ಪರಿಣಾಮದಲ್ಲಿ ಹಿತವನ್ನುಂಟುಮಾಡುವ ಮಾತುಗಳನ್ನು ಹೇಳುವ ಜನರು ದೊರಕುವುದು ಕಷ್ಟ. ರಾಮನು ಇಂದ್ರನಿಗೂ ವರುಣನಿಗೂ ಸಮಾನವಾದ ಪರಾಕ್ರಮವುಳ್ಳವನು. ಅವನು ಕೋಪಗೊಂಡರೆ ಲೋಕದಲ್ಲಿ ರಾಕ್ಷಸರೆ ಇಲ್ಲದಂತಾಗುವುದರಲ್ಲಿ ಸಂದೇಹವೇನು? ಶ್ರೀರಾಮನಿಂದ ರಕ್ಷಿತಳಾದ ಸೀತೆಯನ್ನು ಕದ್ದು ತರಲು ನಿನಗೆ ಹೇಗೆ ತಾನೆ ಸಾಧ್ಯವಾದೀತು? ಒಂದುವೇಳೆ ಸೀತೆಯನ್ನು ಅಪಹರಿಸಿ ತಂದೆಯಾದರೆ ರಾಮನ ಬಾಣಗಳಿಂದ ನೀನು ಬಹುಬೇಗ ನಾಶಹೊಂದುವೆ. ಪರಪತ್ನಿಯನ್ನು ಕದ್ದು ತರುವುದು ಲಂಕೇಶ್ವರನಾದ ನಿನಗೆ ನಿಶ್ಚಯವಾಗಿಯೂ ತಕ್ಕುದಲ್ಲ. ಈ ವಿಷಯವನ್ನು ನೀನು ಮಂತ್ರಿಗಳೊಡನೆ ಆಲೋಚಿಸಿ, ಹಾಗೂ ಶ್ರೀರಾಮನ ಬಲವನ್ನು ನೆನೆದು ಅನಂತರ ಉಚಿತವಾದ ಕೆಲಸವನ್ನು ಮಾಡು. ಹಿಂದೆ ನಾನು ಸಾವಿರ ಆನೆಗಳ ಬಲವನ್ನು ಹೊಂದಿ ದಂಡಕಾರಣ್ಯದಲ್ಲಿ ಋಷಿಗಳ ಮಾಂಸವನ್ನು ತಿನ್ನುತ್ತ ಸಂಚರಿಸುತ್ತಿದ್ದೆ. ಆಗ ಧರ್ಮಾತ್ಮನಾದ ವಿಶ್ವಾಮಿತ್ರ ಋಷಿ ನನ್ನ ಭಯವನ್ನು ನಿವಾರಿಸುವುದರ ಸಲುವಾಗಿ, ದಶರಥನನ್ನು ಬೇಡಿ ರಾಮನನ್ನು ಕರೆತಂದನು. ಆಗ ಶ್ರೀರಾಮಚಂದ್ರನಿಗೆ ಇನ್ನೂ ಹನ್ನೆರಡು ವರ್ಷ. ಶಸ್ತ್ರಾಸ್ತ್ರಗಳ ಪ್ರಯೋಗವನ್ನೇ ಅರಿಯದ ಮಗನನ್ನು ಕಳುಹಲು ದಶರಥನು ಹಿಂದುಮುಂದು ನೋಡಲು, ವಿಶ್ವಾಮಿತ್ರನು ರಾಜನಿಗೆ ರಾಮನ ಮಹಿಮೆಯನ್ನು ತಿಳಿಸಿ ಅವನನ್ನು ಕರೆತಂದನು. ಋಷಿಯ ಯಾಗವನ್ನು ಕೆಡಿಸಲು ಬಂದ ನನ್ನನ್ನು ನೋಡಿ ರಾಮನು ಹೆದರಲಿಲ್ಲ. ಆದರೆ ಒಂದೇ ಒಂದು ಬಾಣದಿಂದ ನೂರು ಯೋಜನ ವಿಸ್ತಾರವಾದ ಸಮುದ್ರದಲ್ಲಿ ನನ್ನನ್ನು ಎಸೆದನು. ನನ್ನನ್ನು ಹಿಂಬಾಲಿಸಿ ಬಂದಿದ್ದವರು ರಾಮನಿಂದ ಧ್ವಂಸರಾಗಿ ಹೋದರು. ನಾನಾದರೂ ಪ್ರಜ್ಞೆ ಬಂದಮೇಲೆ ಲಂಕಾಪಟ್ಟಣವನ್ನು ಸೇರಿಕೊಂಡೆ. ಆದ್ದರಿಂದ ರಾಮನನ್ನು ನೀನು ಕೆಣಕಿದರೆ ಖಂಡಿತವಾಗಿ ನಾಶಹೊಂದುವೆ. ಉಪ್ಪರಿಗೆಯ ಮನೆಗಳಿಂದ ಶೋಭಿಸುವ ರತ್ನಾಭರಣಗಳಿಂದ ತುಂಬಿದ ಕನಕಲಂಕೆಯನ್ನು ಸೀತೆಯ ನಿಮಿತ್ತವಾಗಿ ಹಾಳುಮಾಡಬೇಡ. ರಾಮನ ಪರಾಕ್ರಮವನ್ನು ನೆನೆದರೆ ದಂಡಕಾರಣ್ಯದ ತುಂಬ ನನಗೆ ರಾಮರೇ ಕಾಣುತ್ತಾರೆ. ಈ ಕಾರ್ಯದಲ್ಲಿ ನಾನು ನಿನ್ನನ್ನು ಹಿಂಬಾಲಿಸಲಾರೆ!” ಎಂದು ಬುದ್ಧಿ ಹೇಳಿದನು.

ಸಾಯಬಯಸುವವನಿಗೆ ಔಷಧಿ ಸೇರದಂತೆ, ಮಾರೀಚನ ಬುದ್ಧಿಯ ಮಾತುಗಳು ರಾವಣನಿಗೆ ರುಚಿಸಲಿಲ್ಲ. ವಿಧಿಯಿಂದ ಪ್ರೇರಿತನಾದ ರಾವಣನು ಮಾರೀಚನನ್ನು ಕುರಿತು “ಮಾರೀಚ, ಬಂಜರು ಭೂಮಿಯಲ್ಲಿ ನೆಟ್ಟ ಬೀಜದಂತೆ ನಿನ್ನ ಬುದ್ಧಿಯ ಮಾತು ನಿಷ್ಫಲ. ಕೇವಲ ಮನುಷ್ಯನಾದ ರಾಮನನ್ನು ಹೊಗಳಿ ನನ್ನನ್ನು ಹೆದರಿಸಬಯಸುವೆಯಾ? ಅದು ಎಂದಿಗೂ ಸಾಧ್ಯವಾಗದ ಮಾತು. ಖರನನ್ನು ಕೊಂದ ರಾಮನ ಪ್ರಿಯತಮೆಯನ್ನು ಅವಶ್ಯಕವಾಗಿ ಕದ್ದು ತರಬೇಕಾದದ್ದೆ. ಈ ಕಾರ್ಯ ನಿನಗೆ ಇಷ್ಟವೊ ಅನಿಷ್ಟವೊ ಅದನ್ನು ನಾನರಿಯೇ. ನಾನು ಮಾಡಬೇಕೆಂದು ನಿಶ್ಚಯಿಸಿರುವ ಕಾರ್ಯದಿಂದ ನನ್ನನ್ನು ಹಿಂದಿರುಗಿಸಲು ದೇವದಾನವರಿಂದಲೂ ಸಾಧ್ಯವಿಲ್ಲ. ನಾನು ಮಾಡಬೇಕೆಂದಿರುವ ಕಾರ್ಯದ ಗುಣದೋಷಗಳನ್ನು ಕುರಿತು ನಿನ್ನನ್ನು ನಾನು ಕೇಳಲಿಲ್ಲ. ಈಗ ನೀನು ಮಾಡಬೇಕಾಗಿರುವ ಕಾರ್ಯ ಇದು. ಚಿನ್ನದ ಜಿಂಕೆಯಾಗಿ ನೀನು ಸೀತೆಯ ಮುಂದೆ ಸುಳಿ. ಅದನ್ನು ನೋಡಿ ಮೋಹಗೊಂಡ ಸೀತೆ ಜಿಂಕೆಯನ್ನು ತರುವಂತೆ ರಾಮನನ್ನು ಕೇಳಿಕೊಳ್ಳುವಳು. ನಿನ್ನನ್ನು ಹಿಡಿಲು ಬೆನ್ನಟ್ಟಿ ಬಂದ ರಾಮನನ್ನು ಬಹುದೂರ ಸೆಳೆದುಕೊಂಡು ಹೋಗಿ, ಆ ಬಳಿಕ ರಾಮನ ಧ್ವನಿಯನ್ನು ಅನುಕರಿಸಿ ಹಾ ಸೀತೆ, ಹಾ ಲಕ್ಷ್ಮಣ ಎಂದು ಕೂಗು. ಆ ಕೂಗನ್ನು ಕೇಳಿ ಲಕ್ಷ್ಮಣನು ಅತ್ತಿಗೆಯ ಮಾತಿನಿಂದಲೂ ಅಣ್ಣನಲ್ಲಿರುವ ಸ್ನೇಹದಿಂದಲೂ ರಾಮನನ್ನು ಅನುಸರಿಸಿ ಹೋಗುತ್ತಾನೆ. ಆ ಬಳಿಕ ನಾನು ಸೀತೆಯನ್ನು ಅಪಹರಿಸುತ್ತೇನೆ. ಕಾರ್ಯ ಮುಗಿದ ಮೇಲೆ ನಿನ್ನ ಮನಸ್ಸು ಬಂದ ಕಡೆಗೆ ತೆರಳೂ. ಈ ಕಾರ್ಯಕ್ಕಾಗಿ ನಿನಗೆ ಅರ್ಧ ರಾಜ್ಯವನ್ನು ಕೊಡುತ್ತೇನೆ. ಇಗೋ ನಾನು ದಂಕಾರಣ್ಯಕ್ಕೆ ಹೊರಟೆ. ನಿನಗೆ ಮಂಗಳವಾಗಲಿ. ಈ ಕೆಲಸಮಾಡಲು ನೀನು ಒಪ್ಪದಿದ್ದರೆ ನಿನ್ನನ್ನು ಇಲ್ಲಿಯೆ ಕೊಲ್ಲುತ್ತೇನೆ” ಎಂದನು.

ರಾವಣನಿಂದ ಸಾಯುವುದಕ್ಕಿಂತ ರಾಮನಿಂದ ಸಾಯುವುದೆ ಮೇಲೆಂದು ಬಗೆದು, ಮಾರೀಚನು ರಾವಣನ ಮಾತಿಗೆ ಒಪ್ಪಿಗೆಯನ್ನಿತ್ತನು. ಆ ಬಳಿಕ ಅವನು ರಾವಣನೊಡನೆ ರಥವನ್ನೇರಿ, ಗಿರಿದುರ್ಗಗಳನ್ನು ಕಳೆದು ದಂಡಕಾರಣ್ಯವನ್ನು ಹೊಕ್ಕನು. ಇಬ್ಬರೂ ರಥದಿಂದ ಇಳಿದು ದೂರದಿಂದಲೆ ರಾಮನ ಆಶ್ರಮವನ್ನು ನೋಡಿದರು. ಬಂದ ಕಾರ್ಯವನ್ನು ಬೇಗ ಮಾಡೆಂದು ರಾವಣನು ಮಾರೀಚನನ್ನು ತ್ವರೆಗೊಳಿಸಿದನು. ಆಗ ಮಾರೀಚನು ಒಂದು ದೊಡ್ಡ ಚಿನ್ನದ ಜಿಂಕೆಯ ರೂಪವನ್ನು ಧರಿಸಿದನು. ಅದರ ಮುಖ ತುಸು ಕಪ್ಪು ತುಸು ಬಿಳುಪು ಬಣ್ಣದಿಂದ ಶೋಭಿಸುತ್ತಿತ್ತು. ತುಟಿಯ ಮೇಲುಗಡೆ ಕೆಂದಾವರೆಯ ಬಣ್ಣ, ಕೆಳಭಾಗದಲ್ಲಿ ಕನ್ನೈದಿಲೆಯ ಚೆಲ್ವು. ಇಂದ್ರನೀಲಮಣಿ ಮತ್ತು ಮಧೂಕಪುಷ್ಪ ಇವುಗಳ ಕಾಂತೆಗೆ ಸಮನಾಗಿ ಕಿವಿ ರಂಜಿಸುತ್ತಿತ್ತು. ಅದರ ಗೊರಸಿನ ಕಾಂತಿ ವೈಡೂರ್ಯ, ಇಂದ್ರಚಾಪದಂತೆ ನಿಮಿರಿದ ಬಾಲ. ಮಲ್ಲಿಗೆಯ, ವಜ್ರದ ಮತ್ತು ಚಂದ್ರನ ಶೋಭೆಯಿಂದ ಮಿರುಗುತ್ತಿತ್ತು ಅದರ ಹೊಟ್ಟೆ. ಇಂತಹ ಮನೋಹರ ರೂಪವನ್ನು ಧರಿಸಿ ಮಾರೀಚನು ಸೀತೆಯನ್ನು ಪ್ರಲೋಭನಗೊಳಿಸುವುದಕ್ಕಾಗಿ ರಾಮನ ಆಶ್ರಮದಲ್ಲಿ ತರತರಹದ ನರ್ತನಗತಿಗಳಿಂದ ಎಂಬಂತೆ ನಲಿನಲಿದು ಸುಳಿಯುತ್ತಾ ಎಳೆದು ಹುಲ್ಲನ್ನು ಭಕ್ಷಿಸುತ್ತಾ ತಿರುಗಾಡತೊಡಗಿದನು. ನಾನಾ ವಿಧವಾಗಿ ಅಲ್ಲಲ್ಲಿ ಕ್ರೀಡಿಸತೊಡಗಿದನು.

* * *