ಭರತನು ಹಿಂದಿರುಗಿದ ಮೇಲೆಯೂ ಕೆಲವುಕಾಲ ಶ್ರೀರಾಮನು ಚಿತ್ರಕೂಟದಲ್ಲಿಯೆ ವಾಸವಾಗಿದ್ದನು. ಆದರೆ ಇತ್ತೀಚೆಗೆ ಅಲ್ಲಿಯ ಋಷಿಗಳೆಲ್ಲರೂ ಏನೋ ಕಳವಳದಿಂದ ಕೂಡಿದವರಂತೆ ಕಾಣುತ್ತಿದ್ದರು. ಅದರಲ್ಲಿಯೂ ತನ್ನ ಪರ್ಣಶಾಲೆಗೆ ಕೇವಲ ಸಮೀಪದಲ್ಲಿದ್ದ ಆಶ್ರಮವಾಸಿಗಳು ಹೆಚ್ಚು ಭಯಗ್ರಸ್ತರಾಗಿರುವಂತೆ ಕಾಣಿಸಿತು. ಬಾಯಿಬಿಟ್ಟು ಅವರು ಏನೂ ಹೇಳದಿದ್ರೂ ಆಗಾಗ ಕಣ್ಸನ್ನೆಯಿಂದ ತಮ್ಮ ತಮ್ಮಲ್ಲಿಯೆ ಪರಸ್ಪರ ಅಭಿಪ್ರಾಯಗಳನ್ನು ಸೂಚಿಸುವುದೂ, ಗುಟ್ಟಾಗಿ ಗುಜುಗುಟ್ಟುವುದೂ ಶ್ರೀರಾಮನ ಕಣ್ಣಿಗೆ ಬಿತ್ತು. ಇದರ ಅರ್ಥ ಅವನಿಗಾಗಲೊಲ್ಲದು, ತಾನಾಗಲಿ ಸೀತಾಲಕ್ಷ್ಮಣರಾಗಲಿ ಶ್ರೀರಾಮನ ಏನಾದರೂ ತಪ್ಪು ಮಾಡಿರಬಹುದೆ? ಎನ್ನಿಸಿತು ಆತನಿಗೆ. ಆದ್ದರಿಂದ ನೇರವಾಗಿ ಆ ಋಷಿಗಳಿಗೆಲ್ಲಾ ಪ್ರಮುಖರಾದವರ ಬಳಿಗೆ ಹೋಗಿ ಆತನನ್ನು ಕೇಳಿದನು. “ಪೂಜ್ಯರ, ನಾನಿಲ್ಲಿರುವುದರಿಂದ ನಿಮಗೇನಾದರೂ ಬಾಧೆಯಾಗಿರುವುದೆ? ನನ್ನ ತಮ್ಮನಾಗಲಿ ಹೆಂಡತಿಯಾಗಲಿ ಏನಾದರೂ ಅಪಚಾರ ಎಸಗಿದರೆ? ಈಚೆಗೆ ಋಷಿಗಳಿಗೆಲ್ಲ ಏನೋ ಅಸಮಾಧಾನವಾಗಿರುವಂತೆ ತೋರುತ್ತದೆಯಲ್ಲಾ! ಇದಕ್ಕೆ ಕಾರಣವೇನು?” ಪ್ರಶ್ನೆಗಳಿಗೆ ಜ್ಞಾನವೃದ್ಧನಾದ ಆ ತಾಪಸನು ಉತ್ತರ ಹೇಳುತ್ತಾ “ಅಯ್ಯಾ, ನಮ್ಮ ಕಳವಳಕ್ಕೆ ಕಾರಣವೆ ಬೇರೆ. ನೀನು ಇಲ್ಲಿರುವುದರಿಂದ ನಿನ್ನ ಮೇಲಿನ ದ್ವೇಷದಿಂದ ರಾಕ್ಷಸರು ತಪಸ್ವಿಗಳನ್ನು ಹಿಂಸಿಸುವುದಕ್ಕೆ ಆರಂಭಿಸಿದ್ದಾರೆ. ಈ ಕಾಡಿನಲ್ಲಿ ರಾವಣನ ತಮ್ಮನಾದ ಖರನೆಂಬ ರಾಕ್ಷಸನು ವಾಸಿಸುತ್ತಾನೆ. ಅವನು ಯಾರಿಗೂ ಹೆದರುವವನಲ್ಲ; ಮಹಾಘಾತುಕ, ನರಭಕ್ಷಕ. ನೀನು ಬಂದಂದಿನಿಂದಲೂ ಅವರ ಕಡೆಯ ರಾಕ್ಷಸರು ಋಷಿಗಳ ತಪಸ್ಸಿಗೆ ಭಂಗವನ್ನುಂಟು ಮಾಡಲು ಆರಂಭಿಸಿದ್ದಾರೆ. ಅವರ ಹಿಂಸೆಯನ್ನು ತಡೆಯಲಾರದೆ ಋಷಿಗಳೆಲ್ಲರೂ ಬೇರೊಂದು ಸುರಕ್ಷಿತವಾದ ಪ್ರದೇಶಕ್ಕೆ ಹೊರಟುಹೋಗಬೇಕೆಂದು ನಿಶ್ಚಯಿಸಿದ್ದಾರೆ. ಪಾಪಿಯಾದ ಆ ಖರನಿಂದ ನಿನಗೂ ತೊಂದರೆಯಾಗಬಹುದು. ಆದ್ದರಿಂದ ನೀನೂ ತಮ್ಮನೊಡನೆ ಈ ಪ್ರದೇಸವನ್ನು ತೊರೆದು ಹೊರಟು ಬಾ” ಎಂದನು. ಶ್ರೀರಾಮನು ಆತನನ್ನೂ ಇತರ ಋಷಿಗಳನ್ನೂ ಎಷ್ಟು ಸಮಾಧಾನಪಡಿಸಿದರೂ ಅವರು ಅಲ್ಲಿರಲು ಒಪ್ಪದೆ ಬೇರೊಂದು ದೂರದ ಅರಣ್ಯಪ್ರದೇಶಕ್ಕೆ ಹೊರಟುಹೋದರು.

ಋಷಿಗಳೆಲ್ಲರೂ ಬಿಟ್ಟು ಹೊರಟುಹೋದುದರಿಂದ ಶ್ರೀರಾಮನಿಗೆ ಆ ಚಿತ್ರಕೂಟವಾಸ ಬೇಸರವಾಯಿತು. ಅಲ್ಲದೆ ಅಲ್ಲಿ “ಇದೋ ಇಲ್ಲಿ ಭರತನನ್ನು ನೋಡಿದೆ; ಅಲ್ಲಿ ತಾಯಿಯವರು ನಿಂತಿದ್ದರು; ಆ ಮರದ ಸಮೀಪದಲ್ಲಿಯೆ ಸುಮಂತ್ರನನ್ನು ಕಂಡುದು” ಎಂಬ ಸ್ಮರಣೆ ಆಗಾಗ ಬಂದು ಆತನ ಮನಸ್ಸು ಸಂತಾಪಗೊಳ್ಳುತ್ತಿತ್ತು. ಭರತನ ಪರಿವಾರ ಬಂದು ಹೊರಟುಹೋದ ಮೇಲೆ ಆಶ್ರಮ ಪ್ರದೇಶವೆಲ್ಲವೂ ಕೊಳಕಾಗಿ ಹೋಗಿರುವಂತೆಯೂ ಕಂಡುಬಂತು. ಆದ್ದರಿಂದ ಆ ಸ್ಥಳವನ್ನು ಬಿಟ್ಟು ಸೀತಾಲಕ್ಷ್ಮಣರೊಡನೆ ದಂಡಕಾರಣ್ಯವನ್ನು ಪ್ರವೇಶಿಸಿ ಅತ್ರಿ ಮುನಿಗಳ ಆರ್ಶರಮವನ್ನು ಸೇರಿದನು. ತನ್ನ ಆಶ್ರಮಕ್ಕೆ ಅತಿಥಿಗಳಾಗಿ ಬಂದ ಶ್ರೀರಾಮಾದಿಗಳನ್ನು ಆ ಮುನಿ ಆದರೋಪಚಾರಗಳಿಂದ ತಣಿಸಿ ಅನಂತರ ಲೋಕೋತ್ತರ ತಪಸ್ವಿನಿಯಾದ ತನ್ನ ಮಡದಿಯನ್ನು ಪರಿಚಯಮಾಡಿಕೊಟ್ಟನು. ಪುಣ್ಯಕರ್ಮಗಳನ್ನೆ ಸದಾ ಆಚರಿಸುತ್ತಾ ಸ್ವಲ್ಪವೂ ಅಸೂಯೆಯಿಲ್ಲದುದರಿಂದ ಆಕೆಗೆ ಅನಸೂಯೆಯೆಂಬ ಹೆಸರು ಅನ್ವರ್ಥನಾಮವಾದಂತಾಗಿತ್ತು. ಹಣ್ಣು ಹಣ್ಣು ಮುದುಕಿಯಾಗಿ ಗಾಳಿಗೆ ತೂಗಾಡುವ ಬಾಳೆಯಂತೆ ನಡಗುತ್ತಿದ್ದ ಆಕೆಯನ್ನು ಸೀತಾದೇವಿ ಕಾಲುಮುಟ್ಟಿ ನಮಸ್ಕರಿಸಿದಳು. ಹೀಗೆ ನಮಸ್ಕರಿಸಿದ ರಾಜಕುಮಾರಿಯನ್ನು ಆ ವೃದ್ಧ ತಾಪಸಿ ಬಾಚಿತಬ್ಬಿಕೊಂಡು ಮೈಯ್ಯನ್ನೆಲ್ಲಾ ಸವರುತ್ತಾ ಪಾತಿವ್ರತ್ಯದ ಮಹಿಮೆಯನ್ನು ವಿವರಿಸಿ ಹೇಳಿದಳು. ಅದನ್ನು ಭಕ್ತಿಶ್ರದ್ಧೆಗಳಿಂದ ಕೇಳಿದ ಸೀತೆ ತನ್ನ ತಾಯಿಯನ್ನು ಕಂಡಷ್ಟು ಸಂತೋಷವಾಯಿತು; ಮಯಚಳಿಬಿಟ್ಟು ಮಾತನಾಡುವ ಸಲುಗೆಯಾಯಿತು. ತನ್ನ ತಂದೆಯ ಮನೆಯ ಸುದ್ಧಿಯನ್ನೂ, ಗಂಡನ ಮನೆಯ ಸುದ್ಧಿಯನ್ನೂ ಸವಿಸ್ತಾರವಾಗಿ ತಿಳಿಸಿ ಶ್ರೀರಾಮನಿಗೆ ತನ್ನಲ್ಲಿರುವ, ತನಗೆ ಆತನಲ್ಲಿರುವ ಅಗಾಧವಾದ ಪ್ರೇಮವನ್ನು ವರ್ಣಿಸಿ ಹೇಳಿದಳು. ಮುದ್ದು ಮುದ್ದಾದ ಆಕೆಯ ಅನೇಕ ಮಾತುಗಳಿಂದ ಸುಪ್ರೀತಳಾದ ಅನಸೂಯೆ ಆಕೆಗೆ ಅನೇಕ ದಿವ್ಯಾಭರಣಗಳನ್ನು ಬಹುಮಾನವಾಗಿ ಕೊಟ್ಟು ಆಶೀರ್ವದಿಸಿದಳು.

ಸೀತಾರಾಮಲಕ್ಷ್ಮಣರು ಒಂದು ರಾತ್ರಿಯನ್ನು ಅತ್ರಿ ಋಷಿಗಳು ಆಶ್ರಮದಲ್ಲಿಯೆ ಕಳೆದರು. ಮರುದಿನ ಬೆಳಿಗ್ಗೆ ಮೂವರೂ ಮಹರ್ಷಿಗಳಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ತಾವು ಮುಂದೆ ಹೋಗಲು ಅಪ್ಪಣೆ ಬೇಡಿದರು. ಅತ್ರಿ ಋಷಿಗಳು ಅವರನ್ನು ಆಶೀರ್ವದಿಸಿ ಬೀಳ್ಕೊಳ್ಳುತ್ತಾ ಶ್ರೀರಾಮನನ್ನು ಕುರಿತು “ಎಲೈ ಸತ್ಯಸಂಧನಾದ ರಾಮಚಂದ್ರನೆ, ಮುಂದೆ ಕಾಣುವ ಘೋರಾರಣ್ಯ ರಾಕ್ಷಸರಿಗೆ ಆವಾಸಸ್ಥಾನ. ಹಣ್ಣುಹಂಪಲುಗಳಿಗೆಂದೊ ಗೆಡ್ಡೆ ಗೆಣಸುಗಳಿಗಾಗಿಯೊ ಆ ಅರಣ್ಯವನ್ನು ಪ್ರವೇಶಿಸಿ ಅನೇಕ ಋಷಿಗಳು ಆ ರಾಕ್ಷಸರಿಗೆ ತುತ್ತಾಗಿದ್ದಾರೆ. ಆದ್ದರಿಂದ ನೀನು ಮೈಯೆಲ್ಲ ಕಣ್ಣಾಗಿ ವ್ಯವಹರಿಸಬೇಕು. ನಿನಗೆ ಮಂಗಳವಾಗಲಿ, ಹೋಗಿ ಬಾ!” ಎಂದರು. ಅವರ ಮಾತುಗಳಿಗೆ ‘ಹಸಾದ’ವೆಂದು ಹೇಳಿ ಶ್ರೀರಾಮನು ಆ ಅರಣ್ಯ ಪ್ರವೇಶ ಮಾಡಿದನು.

* * *