ಸೂರ್ಯನು ಮೇಘಮಂಡಲವನ್ನು ಪ್ರವೇಶಿಸುವಂತೆ ಶ್ರೀರಾಮಚಂದ್ರನು ಸೀತಾಲಕ್ಷ್ಮಣರೊಡನೆ ದಂಡಕಾರಣ್ಯವನ್ನು ಹೊಕ್ಕನು. ಆ ಕಾಡಿನಲ್ಲಿ ಅವನಿಗೆ ಅನೇಕ ಋಷ್ಯಾಶ್ರಮಗಳು ಕಾಣಿಸಿದುವು. ಆ ಪರ್ಣಶಾಲೆಗಳ ಹತ್ತಿರದಲ್ಲಿ ಬೆಳೆದಿದ್ದ ದರ್ಭೆಯ ಮೇಲೆ ನಾರುಮಡಿಗಳನ್ನು ಹರಡಿದ್ದುದು ಬಿಸಿಲು ಬಿದ್ದ ಬಿಳಿಯ ಮೋಡಗಳಂತೆ ರಂಜಿಸುತ್ತಿತ್ತು. ಹಣ್ಣು ತುಂಬಿದ ಮರಗಳ ಮೇಲೆ ಹಕ್ಕಿಗಳು ಕುಳಿತು ಇಂಪಾಗಿ ಹಾಡುತ್ತಿದ್ದುವು. ಋಷಿಗಳು ನಡೆಸುತ್ತಿದ್ದ ಹೋಮಗಳಿಂದ ಮೇಲೆದ್ದ ಹೊಗೆ ಬಹುದೂರದವರೆಗೆ ಕಾಣಬರುತ್ತಿತ್ತು. ಅಲ್ಲದೆ ಅವರು ಮಾಡುತ್ತಿದ್ದ ವೇದಾಧ್ಯಯನ ದಿಕ್ಕು ದಿಕ್ಕುಗಳಲ್ಲಿ ಪ್ರತಿಧ್ವನಿ ಕೊಡುತ್ತಿತ್ತು. ಅಲ್ಲಿ ವಾಸಮಾಡುತ್ತಿದ್ದ ಋಷಿಗಳು ಜಿತೇಂದ್ರಿಯರೂ ಅಗ್ನಿಸೂರ್ಯರಂತೆ ಕಾಂತಿಯುಕ್ತರೂ ಆಗಿದ್ದರು. ಆ ಮಹಾಮುನಿಗಳನ್ನು ಕಂಡು ಶ್ರೀರಾಮನು ತನ್ನ ಬಿಲ್ಲಿನ ಹಗ್ಗವನ್ನು ಸಡಿಲಿಸಿ, ಸೀತಾಲಕ್ಷ್ಮಣರೊಡನೆ ಅವಲ್ಲಿಗೆ ಬಂದು ನಮಸ್ಕರಿಸಿದನು. ದಿವ್ಯಜ್ಞಾನಿಗಳಾದ ಆ ಋಷಿಗಳು ಅವರಿಗೆ ಕಂದಮೂಲಗಳನ್ನು ಕೊಟ್ಟು ಉಪಚರಿಸಿದರು. ಆಮೇಲೆ ಅವರು ಶ್ರೀರಾಮಚಂದ್ರನನ್ನು ಕುರಿತು, “ರಾಮಚಂದ್ರ, ನೀನು ಪಟ್ಟಣದಲ್ಲಿರು ಇಲ್ಲವೆ ಕಾಡಿನಲ್ಲಿರು; ನೀನೇ ನಮಗೆ ರಾಜ. ಧರ್ಮರಕ್ಷಕನು ದುಷ್ಟರನ್ನು ಶಿಕ್ಷಿಸುವವನೂ ಆದ ನೀನು ನಮ್ಮೆಲ್ಲರಿಗೆ ತಂದೆಯಂತಿರುವೆ. ಗರ್ಭದಲ್ಲಿರುವ ಮಗುವನ್ನು ತಾಯಿ ಕಾಪಾಡುವಂತೆ, ಕಾಡಿನಲ್ಲಿ ವಾಸಮಾಡುವ ನಮ್ಮನ್ನು ನೀನು ಕಾಪಾಡು” ಎಂದು ಪ್ರಾರ್ಥಿಸಿದರು.

ಮುನಿಗಳ ಆತಿಥ್ಯವನ್ನು ಸ್ವೀಕರಿಸಿ ಶ್ರೀರಾಮನು ಆ ರಾತ್ರಿಯನ್ನು ಆಶ್ರಮದಲ್ಲಿಯೆ ಕಳೆದನು. ಬೆಳಗಾಗುತ್ತಲೆ ಮುನಿಗಳ ಅಪ್ಪಣೆಯನ್ನು ಪಡೆದು ಅವರು ಮೂವರೂ ಮತ್ತೆ ಕಾಡನ್ನು ಹೊಕ್ಕರು. ಬಗೆಬಗೆಯ ಹಕ್ಕಿಗಳಿಂದಲೂ ಹುಲಿ ತೋಳ ಮೊದಲಾದ ಮೃಗಗಳಿಂದಲೂ ತುಂಬಿದ ಆ ಕಾಡಿನ ಮಧ್ಯಭಾಗಕ್ಕೆ ಅವರು ಹೊಕ್ಕು ಮುಂಬರಿಯುತ್ತಿರಲು ಭಯಂಕರವಾದ ರಾಕ್ಷಸನೊಬ್ಬನು ಅವರಿಗೆ ಇದಿರಾದನು. ಎತ್ತಿದ ಅವನ ತೋಳ ಮುಷ್ಟಿಯಲ್ಲಿ ಒಂದು ಅಡಕೆಯ ಮರದುದ್ದದ ಶೂಲವಿತ್ತು. ಅದರ ಒಂದೊಂದು ಮುಳ್ಳಿನಲ್ಲಿಯೂ ಆನೆ ತೋಳ ಹುಲಿ ಜಿಂಕೆ ಸಿಂಹ ಇವುಗಳ ತಲೆ ಚುಚ್ಚಿಕೊಂಡದ್ದು ಕಾಣಿಸುತ್ತಿತ್ತು. ಆ ರಾಕ್ಷಸನು ತನ್ನ ಮೈಮೇಲೆ ಹೊದ್ದಿದದ ಹಸಿಯ ಹುಲಿಯ ಚರ್ಮ ಚಿತ್ರವಿಚಿತ್ರವಾಗಿತ್ತು. ಯಮನಂತೆ ಬಾಯ್‌ತೆರೆದುಕೊಂಡಿದ್ದ ಅವನು ರಾಮಲಕ್ಷ್ಮಣರ ಮೇಲೆ ಹಾಯ್ದು ಬಂದು ಇದ್ದಕ್ಕಿದ್ದಂತೆ ಸೀತೆಯನ್ನು ಎತ್ತಿಕೊಂಡು ಓಡಿದನು. ಹೋಗುತ್ತಾ ರಾಜಕುಮಾರರಿಬ್ಬರನ್ನೂ ಕುರಿತು “ಜಟೆಯನ್ನು ಧರಿಸಿ, ನಾರುಡೆಯನ್ನುಟ್ಟಿರುವ ನೀವು ಈ ಹೆಂಗಸಿನೊಡನೆ ಈ ದುರ್ಗಮವಾದ ಕಾಡನ್ನೇಕೆ ಹೊಕ್ಕಿರಿ? ಬಿಲ್ಲು ಬಾಣಗಳನ್ನು ಹಿಡಿದು ಋಷಿಗಳ ವೇಷ ಧರಿಸಿದ್ದರೂ ಅದಕ್ಕೆ ವಿರೋಧವಾದ ನಡತೆಯುಳ್ಳ ನೀವು ಯಾರು? ನನಾದರೊ ಋಷಿಗಳನ್ನೆ ತಿನ್ನುವವನು. ನನ್ನ ಹೆಸರು ವಿರಾಧ. ಈಗ ಈ ಸುಂದರಿಯನ್ನು ನನ್ನ ಹೆಂಡಿತಿಯನ್ನಾಗಿ ಮಾಡಿಕೊಳ್ಳುತ್ತೇನೆ! ಹಾಗೆಯೆ ಪಾಪಿಗಳಾದ ನಿಮ್ಮಿಬ್ಬರ ರಕ್ತವನ್ನೂ ಪಾನಮಾಡುತ್ತೇನೆ” ಎಂದು ಗರ್ಜಿಸಿದನು.

ವಿರಾಧನ ಈ ಕೆಟ್ಟ ಮಾತುಗಳನ್ನು ಕೇಳಿ ಸೀತೆ ಬಿರುಗಾಳಿಯಿಂದ ಅಲುಗಾಡುವ ಬಾಳೆಯಂತೆ ನಡುಗಿಹೋದಳು. ಸದಾಚಾರಸಂಪನ್ನಳೂ ಸುಖದಲ್ಲಿಯೆ ಬೆಳೆದವಳೂ ಆದ ಸೀತೆಯನ್ನು ವಿರಾಧನು ಎತ್ತಿಕೊಂಡು ಓಡುವುದನ್ನು ಕಂಡು ರಾಮನಿಗೆ ಬಹು ದುಃಖವಾಯಿತು. “ಲಕ್ಷ್ಮಣ, ದೂರದೃಷ್ಟಿಯ ಕೈಕೆಯ ಬಯಕೆ ಇಂದು ಕೈಗೂಡಿತು. ತಂದೆ ಸತ್ತಾಗ, ರಾಜ್ಯ ಕೈಬಿಟ್ಟಾಗ ಆಗದ ದುಃಖ ಈಗ ಸೀತೆ ಪರಪುರುಷನ ತೊಡೆಯನ್ನೇರಿದುದರಿಂದ ನನಗೆ ಉಂಟಾಯಿತು” ಎಂದು ಶ್ರೀರಾಮನು ಶೋಕದಿಂದ ಕಣ್ಣೀರು ತುಂಬಿದನು. ಕಣ್ಣೀರು ಕರೆಯುತ್ತಿರುವ ಅಣ್ಣನನ್ನು ನೋಡಿ ಮಂತ್ರದಿಂದ ಕಟ್ಟಿದ ಸರ್ಪದಂತೆ ಲಕ್ಷ್ಮಣನು “ಅಣ್ಣ, ಎಲ್ಲ ಪ್ರಾಣಿಗಳನ್ನೂ ಕಾಪಾಡುವ ಶಕ್ತಿ ನಿನಗುಂಟು. ದೇವೇಂದ್ರನಿಗೆ ಸಮಾನನಾದ ನೀನು ದಿಕ್ಕಿಲ್ಲದವನಂತೆ ಏಕೆ ಅಳುವೆ? ನಾನು ಕೋಪಗೊಂಡರೆ ಇಂದ್ರನು ಪರ್ವತಗಳ ಮೇಲೆ ವಜ್ರಾಯುಧವನ್ನೆಸೆಯುವಂತೆ ನನ್ನ ಬಾಣಗಳನ್ನು ಇವನ ಮೇಲೆಸೆದು ಇವನನ್ನು ಭೂಮಿಗೆ ಬೀಳಿಸುತ್ತೇನೆ. ನಿನ್ನ ರಾಜ್ಯವನ್ನು ಬಯಸಿದ ಭರತನ ಮೇಲಿದ್ದ ಕೋಪವನ್ನು ಇವನ ಮೇಲೆ ತೀರಿಸಿಕೊಳ್ಳುತ್ತೇನೆ” ಎಂದು ಅಣ್ಣನನ್ನು ಸಮಾಧಾನಪಡಿಸಿದನು.

ಈ ನಡುವೆ ವಿರಾಧನು “ನಾನು ಜಯನೆಂಬ ಗಂಧರ್ವನ ಮಗ. ಶತಹ್ರದೆ ನನ್ನ ತಾಯಿ. ಸೀತೆಯನ್ನು ಬಿಟ್ಟು ನೀವು ಓಡಿಹೋಗಿ. ಹಾಗಾದರೆ ನಾನು ನಿಮ್ಮ ತಂಟೆಗೆ ಬಾರೆನು” ಎಂದು ಗುಡುಗಿದನು. ವಿರಾಧನ ಮಾತನ್ನು ಕೇಳಿ ಕೋಪಗೊಂಡ ರಾಮನು ಏಳು ಬಾಣಗಳಿಂದ ಅವನನ್ನು ಹೊಡೆದನು. ಬಾಣಗಳ ಹೊಡೆತನವನ್ನು ತಿಂದ ರಾಕ್ಷಸನು ಸೀತೆಯನ್ನು ನೆಲಕ್ಕಿಳುಹಿ ಕೋಪದಿಂದ ಮೊರೆಯುತ್ತ ಶೂಲವನ್ನೆತ್ತಿ ರಾಮಲಕ್ಷ್ಮಣರನ್ನಟ್ಟಿ ಬಂದನು. ವಿರಾಧನಿಗೂ ಮತ್ತು ರಾಮಲಕ್ಷ್ಮಣರಿಗೂ ಸ್ವಲ್ಪ ಕಾಲ ಯುದ್ಧ ನಡೆಯಿತು. ಕೊನೆಗೆ ವಿರಾಧನು ತನ್ನ ತೋಳುಗಳಿಂದ ರಾಮಲಕ್ಷ್ಮಣರನ್ನಪ್ಪಿಕೊಂಡು ಹೊರಡಲು ಸಿದ್ಧನಾದನು. ರಾಕ್ಷಸನ ಅಭಿಪ್ರಯವನ್ನು ತಿಳಿದ ರಾಮನು ಲಕ್ಷ್ಮಣನನ್ನು ಕುರಿತು “ವತ್ಸ, ಇವನು ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುವನೋ ಹೋಗಲಿ. ರಾಕ್ಷಸನು ಹೋಗುವದಾರಿಯಲ್ಲಿಯೆ ನಾವು ಹೋಗಬೇಕಷ್ಟೆ” ಎಂದು ನುಡಿದನು. ವಿರಾಧನು ರಾಮಲಕ್ಷ್ಮಣರನ್ನು ಹೆಗಲಮೇಲೆ ಕೂರಿಸಿಕೊಂಡು ಭಯಂಕರವಾಗಿ ಕೂಗುತ್ತ ಪಕ್ಷಿಮೃಗಗಳಿಂದ ಕೂಡಿದ ಕಾಡನ್ನು ಹೊಕ್ಕನು.

ವಿರಾಧನು ರಾಮಲಕ್ಷ್ಮಣರನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಕಂಡು ಸೀತೆ ಭಯದಿಂದ “ಅಯ್ಯೋ! ಇನ್ನೇನು ಗತಿ! ಸ್ಯವಂತನೂ ಸದಾಚಾರಸಂಪನ್ನನ್ನೂ ಆದ ರಾಮನನ್ನೂ ಪರಾಕ್ರಮಿಯಾದ ಲಕ್ಷ್ಮಣನನ್ನೂ ಈ ರಾಕ್ಷಸನು ಎತ್ತಿಕೊಂಡು ಹೋಗುತ್ತಿದ್ದಾನೆ. ಒಬ್ಬಂಟಿಗಳಾದ ನನ್ನನ್ನು ಹುಲಿಗಳೂ ತೋಳಗಳೂ ತಿನ್ನುವುವು. ಎಲೈ ರಾಕ್ಷಸೋತ್ತಮ, ನಿನಗೆ ನಮಸ್ಕಾರ. ಈ ರಾಮಲಕ್ಷ್ಮಣರನ್ನು ಬಿಟ್ಟು ನನ್ನನ್ನು ಎತ್ತಿಕೊಂಡು ಹೋಗು” ಎಂದು ಕೂಗಿಕೊಂಡಳು. ಸೀತೆಯ ಆಕ್ರಂದವನ್ನು ಕೇಳಿ ರಾಮಲಕ್ಷ್ಮಣರು ಬಹುಬೇಗ ಅವನೆರಡು ತೋಳುಗಳನ್ನೂ ಕತ್ತರಿಸಿಬಿಟ್ಟರು. ವಜ್ರಾಯುಧದಿಂದ ಕತ್ತರಿಸಿಹೋದ ಬೆಟ್ಟದಂತೆ ಆ ರಾಕ್ಷಸನು ಕೂಡಲೆ ನೆಲಕ್ಕುರುಳಿದನು. ಆ ಬಳಿಕ ಅವರು ಆ ರಾಕ್ಷಸನನ್ನು ಕೈಗಳಿಂದ ಗುದ್ದಿ ಗುದ್ದಿ ಅವನ ದೇಹವನ್ನು ನೆಲದಲ್ಲಿ ಅರೆದರು. ಇಷ್ಟಾದರೂ ವಿರಾಧನ ಪ್ರಾಣ ಹೋಗಲಿಲ್ಲ. ಆಗ ಶ್ರೀರಾಮನು ಅವನನ್ನು ಹೂಳಬೇಕೆಂದು ಲಕ್ಷ್ಮಣನಿಗೆ ಸೂಚಿಸಿದನು. ರಾಮನ ಮಾತನ್ನು ಕೇಳಿ ಆಗ ವಿರಾಧನಿಗೆ ಜ್ಞಾನೋದಯವಾಯಿತು. ವಿನಯದಿಂದ ರಾಮನನ್ನು ಕುರಿತು ವಿರಾಧನು “ಶ್ರೀರಾಮಚಂದ್ರ, ಹಿಂದಿನ ಜನ್ಮದಲ್ಲಿ ನಾನು ತುಂಬುರನೆಂಬ ಹೆಸರಾದ ಗಂಧರ್ವ. ಕುಬೇರನ ಶಾಪದಿಂದ ನನಗೆ ಈ ಘೋರವಾದ ರಾಕ್ಷಸ ಜನ್ಮ ಉಂಟಯಿತು. ಶ್ರೀರಾಮನು ನಿನ್ನನ್ನು ಯುದ್ಧದಲ್ಲಿ ಹೊಡೆದಾಗ ನಿನಗೆ ಶಾಪವಿಮೋಚನೆಯಾಗುವುದೆಂದು ಆತನು ಹೇಳಿದ್ದನು. ಈಗ ಆ ಕಾಲ ಬಂದಿದೆ. ನಾನಿನ್ನು ಸ್ವರ್ಗಕ್ಕೆ ಹೊರಡುತ್ತೇನೆ. ಮುಂದಿರುವ ಶರಭಂಗ ಋಷಿಗಳ ಆಶ್ರಮಕ್ಕೆ ನೀನು ಹೋದರೆ ನಿನಗೆ ಶ್ರೇಯಸ್ಸುಂಟಾಗುವುದು. ದೊಡ್ಡದೊಂದು ಗುಂಡಿಯಲ್ಲಿ ನನ್ನನ್ನು ಹೂಳಿ” ಎಂದು ರಾಮಲಕ್ಷ್ಮಣರನ್ನು ಪ್ರಾರ್ಥಿಸಿಕೊಂಡನು. ವಿರಾಧನ ಮಾತನ್ನು ಕೇಳಿ ಶ್ರೀರಾಮನು ದೊಡ್ಡದೊಂದು ಗುಂಡಿಮಾಡುವಂತೆ ಲಕ್ಷ್ಮಣನಿಗೆ ಅಪ್ಪಣೆ ಮಾಡಿ, ತಾನು ಅವನ ಕೊರಳನ್ನು ಮೆಟ್ಟಿ ನಿಂತನು. ಅಣ್ಣನ ಮಾತಿನಂತೆ ಲಕ್ಷ್ಮಣನು ಮಾಡಿದ ಗುಂಡಿಯಲ್ಲಿ ವಿರಾಧನನ್ನು ಎತ್ತಿ ಹಾಕಿದರು. ಆ ಬಳಿಕ ರಾಜಕುಮಾರರು ಸೀತೆಯೊಡಗೂಡಿ ಗೊಂಡಾರಣ್ಯವನ್ನು ಸಂಚರಿಸುತ್ತಾ ಮುಂದೆ ಹೊರಟರು.

* * *