ರಾಮನ ಮಾತನ್ನು ಕೇಳಿ ಲಕ್ಷ್ಮಣನು ಕತ್ತಿ ಹಿರಿದು ಶೂರ್ಪನಖಿಯ ಕಿವಿ ಮೂಗುಗಳನ್ನು ಕತ್ತರಿಸಿಬಿಟ್ಟನು.

ಶ್ರೀರಾಮನು ಸೀತಾಲಕ್ಷ್ಮಣರೊಡನೆ ಕೆಲವು ಕಲ ಪಂಚವಟಿಯಲ್ಲಿ ಕಳೆದನು. ರಾಮಲಕ್ಷ್ಮಣನು ಪಂಚವಟಿಯಲ್ಲಿದ್ದ ಕಾರಣ ಋಷಿಗಳಿಗೆ ಎಷ್ಟೋ ಧೈರ್ಯ! ಈ ಸಮಯದಲ್ಲಿ ಒಮ್ಮೊಮ್ಮೆ, ಅಯೋಧ್ಯೆಯಲ್ಲಿ ತಮ್ಮಂತೆಯೆ ಕಷ್ಟಪಡುತ್ತಿದ್ದ ಭರತನ ನೆನಪುಂಟಾಗಿ, ಆ ಅಣ್ಣತಮ್ಮಂದಿರ ಕಣ್ಣು ಹನಿಗೂಡುತ್ತಿದ್ದುವು. ಕೆಲವು ಕಾಲ ಹೀಗೆ ಕಳೆಯಿತು. ಒಮ್ಮೆ ಶ್ರೀರಾಮನು ಪಂಚವಟಿಯಲ್ಲಿ ಸೀತೆಯೊಡನೆ ಕುಳಿತು ಚಿತ್ತಾ ನಕ್ಷತ್ರದಿಂದ ಕೂಡಿದ ಚಂದ್ರನಂತೆ ಶೋಭಿಸುತ್ತಿದ್ದನು. ಹಾಗೆ ಕುಳಿತುಕೊಂಡು ಲಕ್ಷ್ಮಣನೊಡನೆ ಮಾತನಾಡುತ್ತಿರುವಾಗ ರಾವಣನ ತಂಗಿ ಶೂರ್ಪನಖಿಯೆಂಬೊಬ್ಬ ರಾಕ್ಷಸಿ ಆ ಸ್ಥಳಕ್ಕೆ ಬಂದಳು. ಸಿಂಹದಂತೆ ಎದೆ, ಉದ್ದವಾದ ತೋಳುಗಳು, ಕಮಲದಂತೆ ಕಣ್ಣು, ಆನೆಯಂತೆ ನಡಿಗೆ, ಚೆಲುವಾದ ರೂಪ ಇವುಗಳುಳ್ಳ ರಾಮನನ್ನು ನೋಡಿ ಶೂರ್ಪನಖಿ ಅವನಲ್ಲಿ ಮೋಹಗೊಂಡಳು. ಶೂರ್ಪಣಖಿಯದೊ ವಕ್ರವಾದ ಮುಖ, ದೊಡ್ಡ ಹೊಟ್ಟೆ, ಕೆಂಗೂದಲು ಮತ್ತು ಭಯಂಕರವಾದ ಧ್ವನಿ. ಆ ಘೋರರೂಪಿಣಿ ಜಟೆಯನ್ನು ಧರಿಸಿದ ಪ್ರಿಯವಾದಿಯೂ ಯುವಕನೂ ಆದ ಆ ರಾಮನನ್ನು ನೋಡಿ, ಮೋಹದಿಂದ ಹತ್ತಿರ ಬಂದು “ಎಲೈ ಪುರುಷನೆ, ಬಿಲ್ಲುಬಾಣಗಳನ್ನು ಹಿಡಿದು, ರಾಕ್ಷಸರಿಂದ ಕೂಡಿದ ಈ ಭಯಂಕರವಾದ ಕಾಡಿಗೆ ಹೆಂಡತಿಯೊಡನೆ ಹೇಗೆ ಬಂದೆ? ನಿಜವನ್ನು ನುಡಿ” ಎಂದಳು. ಋಜುಬುದ್ದಿಯುಳ್ಳವನೂ ಮಹಾಸತ್ವನೂ ಕಂದರ್ಪಸದೃಶನೂ ಆದ ಶ್ರೀರಾಮನು ಆಕೆಗೆ ತಾನು ಕಾಡಿಗೆ ಬಂದ ಕಾರಣವನ್ನು ತಿಳಿಸಿದನು.

ಆಗ ಶೂರ್ಪನಖಿ ರಾಮನನ್ನು ಕುರಿತು “ರಾಮ, ಸತ್ಯವಾದ ಮಾತನ್ನು ಹೇಳುತ್ತೇನೆ ಕೇಳು. ಕಾಮರೂಪಿಣಿಯಾದ ನನ್ನ ಹೆಸರು ಶೂರ್ಪನಖಿ. ಭಯಂಕರವಾದ ಈ ಕಾಡಿನಲ್ಲಿ ನಾನೊಬ್ಬಳೆ ಸಂಚರಿಸುತ್ತಿದ್ದೇನೆ. ಪ್ರಸಿದ್ಧನೂ ವೀರನೂ ಆದ ರಾವಣನು ನನ್ನ ಅಣ್ಣ. ನಿದ್ದೆಯಲ್ಲಿಯ ಮನಸ್ಸುಳ್ಳ ಕುಂಭಕಣ್ಣನು ನನ್ನ ಇನ್ನೊಬ್ಬ ಅಣ್ಣ. ರಾಕ್ಷಸನಾದರೂ ರಾಕ್ಷಸರಂತೆ ನಡತೆಯಿಲ್ಲದ ವಿಭೀಷಣನೂ ನನ್ನ ಇನ್ನೊಬ್ಬ ಅಣ್ಣ. ಪ್ರಖ್ಯಾತರಾದ ಖರದೂಷಣರೂ ನನ್ನ ಅಣ್ಣಂದಿರೆ! ಆದರೆ ಅವರೆಲ್ಲರನ್ನೂ ತ್ಯಾಗಮಾಡಿ, ಸುಂದರನಾದ ನಿನ್ನನ್ನು ಗಂಡನನ್ನಾಗಿ ಮಾಡಿಕೊಳ್ಳ ಬಯಸಿ ಇಲ್ಲಿಗೆ ಬಂದಿದ್ದೇನೆ. ಯಾರ ಅಡ್ಡಿಯೂ ಇಲ್ಲದೆ, ಯಾವ ಸ್ಥಳದಲ್ಲಿಯಾದರೂ ತಡೆಯಿಲ್ಲದೆ ಹೋಗಲು ಶಕ್ತಿಯುಳ್ಳ ನನ್ನನ್ನು ಮದುವೆಯಾಗು. ಈ ಸೀತೆಯಿಂದ ನಿನಗೇನಾಗಬೇಕು? ನಿನಗೆ ಅನುರೂಪಳಾದ ನನ್ನನ್ನು ನೋಡು. ಕುರೂಪಿಯೂ ಜೋಲಾಡುವ ಹೊಟ್ಟೆಯುಳ್ಳವಳೂ ಆದ ಇವಳನ್ನು ಲಕ್ಷ್ಮಣನನ್ನೂ ಭಕ್ಷಿಸುತ್ತೇನೆ. ಆ ಬಳಿಕ ನಾವು ಬೆಟ್ಟಗಳ ಕೋಡುಗಲ್ಲುಗಳಲ್ಲಿ, ವನಗಳಲ್ಲಿ ನಾನಾ ರೀತಿಯಲ್ಲಿ ವಿಹರಿಸೋಣ” ಎಂದು ಬೇಡಿಕೊಂಡಳು.

ಶೂರ್ಪನಖಿಯ ಮಾತನ್ನು ಕೇಳಿ ಮಾತನಾಡುವುದರಲ್ಲಿ ನಿಪುಣನಾದ ರಾಮನು ಮುಗುಳುನಗೆ ನಕ್ಕು “ಪೂಜ್ಯಳೆ, ನಾನಾದರೊ ಮದುವೆಯಾದವನು. ನಿನ್ನನ್ನು ಮದುವೆಯಾಗಿ ಇಲ್ಲಿರುವವಳಿಗೆ ಸವತಿಯೊಬ್ಬಳನ್ನು ತಂದು, ಅವಳನ್ನು ದುಃಖಕ್ಕೆ ಗುರಿಪಡಿಸುವ ಬಯಕೆ ನನಗಿಲ್ಲ. ಸುಶೀಲನೂ ಸುಂದರನೂ ಆದ ನನ್ನ ತಮ್ಮನು ಹೆಂಡತಿಲ್ಲದವನಾಗಿದ್ದಾನೆ. ಇದುವರೆಗೆ ಆತನು ಹೆಂಡತಿಯಿಂದ ಸುಖವನ್ನೇ ಕಂಡುದಿಲ್ಲ. ಯುವಕನಾದ ಆತನಿಗೆ ಹೆಂಡತಿಯೊಬ್ಬಳು ಬೇಕಾಗಿದ್ದಾಳೆ. ನಿನ್ನ ರೂಪಕ್ಕೆ ತಕ್ಕ ಗಂಡ ಅವನು. ಸವತಿಯ ಕಾಟವಿಲ್ಲದೆ, ಮೇರುಪರ್ವತವನ್ನು ಸೂರ್ಯನ ಕಾಂತಿ ಸೇವಿಸುವಂತೆ ಆತನನ್ನು ಸೇರಿ ಸುಖಿಸು” ಎಂದು ನುಡಿದನು. ಕಾಮಮೋಹಿತಳಾದ ಆಕೆ ಶ್ರೀರಾಮನ ಮಾತನ್ನು ಕೇಳಿ ಲಕ್ಷ್ಮಣನ ಬಳಿಗೆ ಬಂದು “ನಾನು ನಿನಗೆ ಹೆಂಡತಿಯಾಗಲು ಬಂದಿದ್ದೇನೆ. ನನ್ನನ್ನು ಪರಿಗ್ರಹಿಸಿ ದಂಡಕಾರಣ್ಯದಲ್ಲಿ ಸುಖವಾಗಿ ವಿಹರಿಸು” ಎಂದಳು.

ಲಕ್ಷ್ಮಣ ಮಾತನಾಡುವುದರಲ್ಲಿ ಬಹು ಚತುರ. ರಾಕ್ಷಸಿಯ ಮಾತನ್ನು ಕೇಳಿ ನಕ್ಕು, “ಭದ್ರೆ, ವಿಶಾಲಾಕ್ಷಿ, ನಾನಾದರೊ ಶ್ರೀರಾಮನಿಗೆ ದಾಸ. ದಾಸನ ಹೆಂಡತಿಯಾಗಿ ಸೀತೆಯ ಶುಶ್ರೂಷೆಯನ್ನು ಮಾಡಬಯಸುವೆಯಾ ನೀನು? ರಾಮನಿಗೇ ಹೆಂಡತಿಯಾಗಿ ಸಂತೋಷಹೊಂದು. ನಿನ್ನನ್ನು ಕೈಹಿಡಿದ ರಾಮನು ತನ್ನ ಮೊದಲಿನ ಮುದಿ ಹೆಂಡತಿಯನ್ನು ಬಿಟ್ಟು ನಿನ್ನನ್ನೆ ಸೇವಿಸುವನು. ಬುದ್ಧಿಶಾಲಿಯಾದ ಯಾವನು ತಾನೆ ನಿನ್ನನ್ನು ಬಿಟ್ಟು ಮಾನವ ಸ್ತ್ರೀಯನ್ನು ಬಯಸುತ್ತಾನೆ” ಎಂದನು. ಲಕ್ಷ್ಮಣನ ಮಾತು ಯುಕ್ತವೆಂದು ಶೂರ್ಪನಖಿಗೆ ತೋರಿತು. ಲಕ್ಷ್ಮಣನ ಮಾತಿನ ಹಿಂದೆ ಅಡಗಿದ್ದ ಹಾಸ್ಯವನ್ನು ತಿಳಿಯದೆ ಅವಳು ರಾಮನ ಬಳಿಗೆ ಮತ್ತೆ ಬಂದು ಕಾಮಮೋಹಿತಳಾಗಿ “ರಾಮ, ಮುದಿ ಹೆಂಡತಿಯನ್ನು ಮೇಲೇರಿಸಿಕೊಂಡು ನನ್ನನ್ನೇಕೆ ನೀನು ಶ್ಲಾಘಿಸುವುದಿಲ್ಲ? ನೀನು ನೋಡುತ್ತಿರುವಂತೆಯೆ ಈಕೆಯನ್ನು ಭಕ್ಷಿಸಿ, ಸವತಿಯಿಲ್ಲದವಳಾಗಿ ನಿನ್ನೊಡನೆ ಸುಖವಾಗಿ ವಿಹರಿಸುವೆನು” ಎಂದು ನುಡಿದು ಕೋಪದಿಂದ ಕ್ರೂರ ಗ್ರಹವು ರೋಹಿಣಿಯನ್ನಟ್ಟಿ ಬರುವಂತೆ ಸೀತೆಯನ್ನಟ್ಟಿ ಬಂದಳು. ಮೃತ್ಯುಪಾಶದಂತೆ ಮೇಲೆ ಬೀಳಲು ಬಂದ ಆಕೆಯನ್ನು ನೋಡಿ ಶ್ರೀರಾಮನು ಲಕ್ಷ್ಮಣನನ್ನು ಕುರಿತು “ಅನಾರ್ಯರೊಡನೆ ಹಾಸ್ಯ ಮಾಡುವುದು ಯುಕ್ತವಲ್ಲ. ಹೇಗಾದರೂ ಇವಳಿಂದ ಸೀತೆಯನ್ನು ಬದುಕಿಸಬೇಕು. ಈಕೆಯನ್ನು ವಿರೂಪಳನ್ನಾಗಿ ಮಾಡಿ ಕಳುಹಿಸು” ಎಂದನು.

 

(ಚಿತ್ರ ೧೨)
ಖರನ ಮಾತನ್ನು ಕೇಳಿ ಎಚ್ಚರಗೊಂಡ ಶೂರ್ಪಣಕಿ ಕಣ್ಣೀರು ಸುರಿಸುತ್ತಾ ತನ್ನ ವೃತ್ತಾಂತವನ್ನೆಲ್ಲಾ ಹೇಳಿದಳು.

 

ರಾಮನ ಮಾತನ್ನು ಕೇಳಿ ಲಕ್ಷ್ಮಣನು ಕತ್ತಿಯನ್ನು ಹಿರಿದು ಶೂರ್ಪನಖಿಯ ಕಿವಿ ಮೂಗುಗಳನ್ನು ಕತ್ತರಿಸಿಬಿಟ್ಟನು. ಮಳೆಗಾಲದ ಮೇಘದಂತೆ ರಕ್ತದಿಂದ ನೆನೆದ ಆಕೆ ಗುಡುಗಿನಂತೆ ಮೊಳಗಿ ಕೂಗುತ್ತ ತೋಳೆತ್ತಿಕೊಂಡು ಅರಣ್ಯವನ್ನು ಹೊಕ್ಕಳು; ರಕ್ಕಸರ ಗುಂಪಿಗೆ ಒಡೆಯನಾಗಿದ್ದ ತನ್ನಣ್ಣನಾದ ಖರನ ಮುಂದೆ ಆಕಾಶದಿಂದ ಎರಗುವ ಸಿಡಿಲಿನಂತೆ ಭೂಮಿಗೆ ಬಿದ್ದಳು.

ನೆತ್ತರದಿಂದ ತೊಯ್ದು ಭೂಮಿಯ ಮೇಲೆ ಬಿದ್ದಿದ್ದ ಆ ವಿಕಾರ ರೂಪಿಣಿಯಾದ ತಂಗಿಯನ್ನು ನೋಡಿ ಖರನು ಕೋಪದಿಂದ ಉರಿದೆದ್ದು “ಭದ್ರೆ, ಏಳು. ಚಿತ್ತಚಾಂಚಲ್ಯವನ್ನು ಪ್ರಜ್ಞಾಹೀನತೆಯನ್ನೂ ಬಿಟ್ಟು ನಿನಗೆ ಈ ವಿರೂಪವೊದಗಲು ಕಾರಣವನ್ನು ತಿಳಿಸು. ಯಾರ ಗೋಜಿಗೂ ಹೋಗದ ಕೃಷ್ಣಸರ್ಪವನ್ನು ಬೆರಳ ತುದಿಯಲ್ಲಿ ಆಡಿಸಲೂ, ಯಮಪಾಶವನ್ನು ಕಂಠದಲ್ಲಿ ಧರಿಸಲೂ ಯಾವನು ತಾನೆ ಬಯಸುತ್ತಾನೆ? ನಿನ್ನನ್ನು ವಿರೂಪದಮಾಡಿದವರು ದೇವಗಂಧರ್ವರಲ್ಲಿ ಯಾರೇ ಆಗಿರಲಿ, ನೀರಿನೊಡನೆ ಸೇರಿರುವ ಹಾಲನ್ನು ಸಾರಸಪಕ್ಷಿಗಳು ಬೇರೆ ಮಾಡಿ ಹಾಲನ್ನು ಹೀರುವಂತೆ, ಅವರ ಪ್ರಾಣಗಳನ್ನು ಹೀರಿಬಿಡುತ್ತೇನೆ. ಈ ಕಾಡಿನಲ್ಲಿ ಈ ಅವಿನಯವನ್ನಾಚರಿಸಿದವನಾರು ಹೇಳು?” ಎಂದನು. ಅಣ್ಣನ ಮಾತನ್ನು ಕೇಳಿ ಎಚ್ಚರ ತಿಳಿದ ಶೂರ್ಪನಖಿ ಕಣ್ಣಿರು ಸುರಿಸುತ್ತಲೆ ಹೇಳಿದಳು. “ದಶರಥನ ಮಕ್ಕಳಾದ ರಾಮಲಕ್ಷ್ಮಣರೆಂಬ ಅಣ್ಣತಮ್ಮಂದಿರಿಬ್ಬರು ಈ ಕಾಡಿನಲ್ಲಿದ್ದಾರೆ. ಅವರು ಧರ್ಮಾತ್ಮರೂ ರೂಪಸಂಪನ್ನರೂ ಯೌವನವಂತರೂ ಆಗಿದ್ದಾರೆ, ಗೆಡ್ಡೆಗೆಣಸುಗಳನ್ನು ತಿನ್ನುತ್ತ ಅವರು ಋಷಿವೃತ್ತಿಯಿಂದಿದ್ದಾರೆ. ಅವರ ಬಳಿ ತರುಣಿಯೂ ರೂಪವತಿಯೂ ಆದ ಸೀತೆಯೆಂಬ ಸ್ತ್ರೀಯೊಬ್ಬಳಿದ್ದಾಳೆ. ಅವಳಿಂದಲೆ ನನಗೆ ಈ ಗತಿಯುಂಟಾಯಿತು. ರಾಮಲಕ್ಷ್ಮಣರನ್ನು ನೀನು ಯುದ್ಧದಲ್ಲಿ ಕೊಲ್ಲುವುದಾದರೆ, ಅವರ ನೊರೆ ನೆತ್ತರನ್ನು ಕುಡಿಯಬಯಸುತ್ತೇನೆ. ”

* * *