ರಾಮಲಕ್ಷ್ಮಣರು ಸೀತೆಯನ್ನು ಹುಡುಕುವುದಕ್ಕಾಗಿ ವನದಲ್ಲಿ ಸಂಚಾರ ಮಾಡುತ್ತಿದ್ದರು. ಆಗ ನೆತ್ತರು ನಾಂದ ಭೂಮಿಯಲ್ಲಿ ಬಿದ್ದು, ಬೆಟ್ಟದ ಕೋಡುಗಲ್ಲಿನಂತೆ ಹೊಳೆಯುತ್ತಿದ್ದ ಪುಣ್ಯವಂತನಾದ ಜಟಾಯುವನ್ನು ಕಂಡರು. ಜಟಾಯುವನ್ನು ಕಂಡಕೂಡಲೇ ಶ್ರೀರಾಮನು ಆ ಪಕ್ಷಿಯೆ ಸೀತೆಯನ್ನು ಕೊಂದುತಿಂದು ಕುಳಿತಿದೆಯೆಂದು ಕ್ರೋಧಗೊಂಡು ಅದನ್ನು ಸಂಹರಿಸಲು ಅಟ್ಟಿಬಂದನು. ಶ್ರೀರಾಮನನ್ನು ನೋಡಿ ದೀನನಾದ ಜಟಾಯು ರಕ್ತವನ್ನು ಕಾರುತ್ತ ಕುಗ್ಗಿ ನುಡಿದನು: “ಹೇ ಆಯುಷ್ಮನ್, ಸೀತಾದೇವಿಯನ್ನೂ ಮತ್ತು ನನ್ನ ಪ್ರಾಣಗಳನ್ನೂ ರಾವಣನು ಅಪಹರಣ ಮಾಡಿದನು. ರಾವಣನು ಎತ್ತಿಕೊಂಡಿದ್ದ ಸೀತೆಯನ್ನು ಬಿಡಿಸಲು ಹೋಗಿ ಅವನ ರಥ ಸಾರಥಿ ಬಿಲ್ಲುಗಳನ್ನು ಮುರಿದೆ. ಇದನ್ನು ನೋಡಿ ಕ್ರೋಧದಿಂದ ಸಂತೃಪ್ತನಾದ ರಾವಣನು ಮುಪ್ಪಿನಿಂದ ಮುದಿಯಾದ ನನ್ನ ರೆಕ್ಕೆಗಳನ್ನು ಕತ್ತರಿಸಿ ಸೀತೆಯನ್ನು ಅಪಹರಿಸಿಕೊಂಡು ಹೋದನು. ರಾಕ್ಷಸನಿಂದ ಮೊದಲೇ ಗಾಯಗೊಂಡಿರುವ ನನ್ನನ್ನು, ರಾಮಾ ಹೊಡೆಯಬೇಡ.”

ಜಟಾಯುವಿನ ಪ್ರಿಯವಾದ ಮಾತುಗಳನ್ನು ಕೇಳಿ ಶ್ರೀರಾಮನು ಕಣ್ಣೀರು ತುಂಬಿದನು. ಬಿಲ್ಲನ್ನು ನೆಲದ ಮೇಲೆ ಎಸೆದು, ಪಕ್ಷಿರಾಜನನ್ನು ಅಪ್ಪಿಕೊಂಡು ಲಕ್ಷ್ಮಣನೊಡನೆ ಗಟ್ಟಿಯಾಗಿ ಅತ್ತನು. ಇಕ್ಕಟ್ಟಾದ ದಾರಿಯಲ್ಲಿ ಒಬ್ಬನೇ ಅಸಹಾಯನಾಗಿ ಬಹುಕಷ್ಟದಿಂದ ನಿಟ್ಟುಸಿರುಬಿಡುತ್ತಿದ್ದ ಜಟಾಯುವನ್ನು ನೋಡಿ ರಾಮನು ಲಕ್ಷ್ಮಣನಿಗೆ “ವತ್ಸ, ರಾಜ್ಯ ಹೋಗಿ ನನಗೆ ವನವಾಸ ಉಂಟಾಯಿತು. ಸೀತೆ ಅಪಹೃತಳಾದಳು. ಮಿತ್ರನಾದ ಜಟಾಯು ರಾವಣನಿಂದ ಹೊಡೆಯಲ್ಪಟ್ಟನು. ಬೆಂಕಿ ಎಲ್ಲವನ್ನೂ ಸುಡುವಂತೆ, ಪಾಪಕರ್ಮಗಳು ನನ್ನನ್ನು ಸುಡುತ್ತಿವೆ. ನನ್ನ ದುಃಖವನ್ನು ಶಮನ ಮಾಡಿಕೊಳ್ಳಲು ನಾನು ಸಮುದ್ರವನ್ನು ಹೊಕ್ಕರೂ ನನ್ನ ದುಃಖದಿಂದ ಸಮುದ್ರವೇ ಶೋಷಿಸಿ ಹೋಗಿಬಿಡಬಹುದು. ಲೋಕದಲ್ಲಿ ನನ್ನಂತೆ ನಿರ್ಭಾಗ್ಯರು ಮತ್ತೊಬ್ಬರಿಲ್ಲ. ತಂದೆಗೆ ಸಮಾನನೂ ತಂದೆಗೆ ಪ್ರಿಯಸ್ನೇಹಿತನೂ ಆದ ಜಟಾಯು ನಮ್ಮ ದೌರ್ಭಾಗ್ಯದಿಂದ ಹೋರಾಡಿ ಬಿದ್ದಿದ್ದಾನೆ” ಎನ್ನುತ್ತ ತಂದೆಯಲ್ಲಿದ್ದ ಸ್ನೇಹದಿಂದ ಆತನ ದೇಹವನ್ನು ಸವರಿದನು. ಕತ್ತರಿಸಿದ ಆತನ ರೆಕ್ಕೆಗಳನ್ನೂ ರಕ್ತದಿಂದ ತೊಯ್ದ ದೇಹವನ್ನೂ ನೋಡಿ ರಾಮನು ‘ಸೀತೆ ಎಲ್ಲಿ?’ ಎಂದು ಕೇಳುತ್ತ ಮೂರ್ಛೆ ಹೋದನು.

ಮೂರ್ಛೆ ತಿಳಿದೆದ್ದ ರಾಮನು ಗತಪ್ರಾಣನಾಗುತ್ತಾ ಬರುತ್ತಿದ್ದ ಜಟಾಯುವನ್ನು ಸೀತೆಯ ವಿಷಯವಾಗಿ ಮತ್ತೆ ಕೇಳಿದನು. ಅದಕ್ಕೆ ಜಟಾಯು ಅಳುತ್ತಿದ್ದ ರಾಮನನ್ನು ಕಣ್ಣೆತ್ತಿ ನೋಡಿ “ವತ್ಸ ರಾಮಚಂದ್ರ, ರಾವಣನು ತನ್ನ ಸಾಮರ್ಥ್ಯದಿಂದ ಮೇಘಗಳನ್ನು ಸೃಷ್ಟಿಮಾಡಿ ಕತ್ತಲನ್ನುಂಟು ಮಾಡಿದನು. ಆ ಬಳಿಕ ಬಳಲಿದ ನನ್ನ ರೆಕ್ಕೆಗಳನ್ನು ಕತ್ತರಿಸಿ ಸೀತೆಯನ್ನು ಕೊಂಡೊಯ್ದನು. ಅವನು ದಕ್ಷಿಣಕ್ಕೆ ಹೋದನೆಂದು ತೋರುತ್ತದೆ. ವತ್ಸ, ಸೀತೆಗಾಗಿ ವ್ಯಸನಪಡಬೇಡ. ಬಹುಬೇಗ ರಾವಣನನ್ನು ಕೊಂದು, ಸೀತೆಯನ್ನು ಪಡೆದು ನೀನು ಸುಖಿಯಾಗುವೆ. ರಾಮ, ನನ್ನ ಪ್ರಾಣಗಳು ಊರ್ಧ್ವಮುಖವಾಗುತ್ತಿವೆ. ನೋಟ ಮಂದವಾಗುತ್ತಿದೆ. ರಾವಣನು ವಿಶ್ರವಸ್ಸಿನ ಮಗ; ಕುಬೇರನ ತಮ್ಮ” ಎಂದು ಹೇಳುತ್ತಿರುವಾಗಲೆ ಜಟಾಯುವಿನ ಪ್ರಾಣವಾಯು ಹಾರಿಹೋಯಿತು.

ಪ್ರಾಣಬಿಟ್ಟ ಜಟಾಯುವನ್ನು ನೋಡಿ ಶ್ರೀರಾಮನು ಲಕ್ಷ್ಮಣನಿಗೆ “ಲಕ್ಷ್ಮಣ, ಸೀತೆಯನ್ನು ನೀಚನಾದ ರಾವಣನಿಂದ ಬಿಡಿಸಹೋಗಿ ನನಗಾಗಿ ಜಟಾಯು ಪ್ರಾಣಬಿಟ್ಟನು. ಪಕ್ಷಿರಾಜನ ಸಾವಿನಿಂದ ಉಂಟಾಗಿರುವ ದುಃಖ ಸೀತಾಪಹರಣದಿಂದಲೂ ನನಗೆ ಉಂಟಾಗಲಿಲ್ಲ. ಈ ಪಕ್ಷಿರಾಜನು ಮಾನನೀಯನೂ ಮತ್ತು ಶ್ಲಾಘ್ಯನೂ ಆಗಿದ್ದಾನೆ. ನಮಗೆ ಈತನು ತಂದೆಗೆ ಸಮಾನ. ಬೇಗನೆ ಚಿತೆಯನ್ನು ಸಿದ್ದಗೊಳಿಸು; ಈತನಿಗೆ ದಹನಕ್ರಿಯೆಯನ್ನು ನಡಸೋಣ; ಉತ್ತಮ ಕರ್ಮಗಳನ್ನು ಆಚರಿಸಿದವರಿಗೆ ಉಂಟಾದ ಗತಿ ಈತನಿಗಾಗಲಿ” ಎಂದನು.

ರಾಮನ ಅಪ್ಪಣೆಯಂತೆ ಲಕ್ಷ್ಮಣನು ಒಣಗಿದ ಕಟ್ಟಿಗೆಗಳಿಂದ ಚಿತೆಯನ್ನು ಸಿದ್ಧಗೊಳಿಸಿದನು. ತನ್ನ ಬಂಧುವೊಬ್ಬನ ಸಾವಿನಂತೆ ದುಃಖಗೊಂಡ ಶ್ರೀರಾಮನು ಪಕ್ಷಿರಾಜನನ್ನು ಉರಿಯುತ್ತಿದ್ದ ಚಿತೆಯ ಮೇಲಿಟ್ಟು ಮಂತ್ರಪೂರ್ವಕವಾಗಿ ದಹನಮಾಡಿದನು. ಅನಂತರ ಅಣ್ಣತಮ್ಮಂದಿರು ಗೋದಾವರಿಯಲ್ಲಿ ಮಿಂದು ಆತನಿಗೆ ತರ್ಪಣಕೊಟ್ಟು, ಮೃಗದ ಮಾಂಸದಿಂದ ಪಿಂಡಪ್ರದಾನಮಾಡಿದರು. ಇಂತು ಜಟಾಯುವಿಗೆ ಮಂತ್ರಪೂರ್ವಕವಾಗಿ ಸಂಸ್ಕಾರಮಾಡಿ, ಆತನಿಗೆ ಪುಣ್ಯಲೋಕಗಳನ್ನು ಒದಗಿಸಿ ಕೊಟ್ಟು, ಸೀತೆಯನ್ನು ಹುಡುಕಲು ಆ ರಾಜಕುಮಾರರು ಮುಂದಣ ಅರಣ್ಯವನ್ನು ಹೊಕ್ಕರು.

* * *