ಜಂಬುಮಾಲಿ ಹತನಾದ ಸುದ್ದಿ ರಾವಣನಿಗೆ ಗೊತ್ತಾದೊಡನೆಯೆ ಆತನು ಕೋಪದಿಂದ ಕಣ್ಣುಗಳಲ್ಲಿ ಕೆಂಡವನ್ನು ಕೆದರುತ್ತಾ ಜಂಬುಮಾಲಿಗೆ ಸಮಾನ ಬಲರಾದ ಏಳು ಜನ ಮಂತ್ರಿ ಪುತ್ರರನ್ನು ಕರೆದು “ನೀವು ಈಗಲೆ ಹೋಗಿ ಆ ಕಪಿಯನ್ನು ಹಿಡಿದು ತನ್ನಿರಿ” ಎಂದು ಅಪ್ಪಣೆಮಾಡಿದನು. ಅವರು ಆತನ ಆಜ್ಞೆಗೆ ವಿಧೇಯರಾಗಿ ದೊಡ್ಡ ಸೈನ್ಯದೊಡನೆ ಹನುಮಂತನನ್ನು ಹಿಡಿತರಲು ಹೊರಟರು. ದಿವ್ಯಮಾರ್ಗಣಗಳನ್ನು ಧರಿಸಿ, ಪ್ರತ್ಯೇಕ ಪ್ರತ್ಯೇಕವಾದ ದೊಡ್ಡ ರಥಗಳಲ್ಲಿ ಕುಳಿತು ಗರ್ವದಿಂದ ಬೀಗಿ ಬಿರಿಯುತ್ತಾ ಬರುತ್ತಿರುವ ಆ ರಾಕ್ಷಸರನ್ನು ಹನುಮಂತನು ದೂರದಿಂದಲೆ ನೋಡಿದನು. ನೋಡುನೋಡುವಷ್ಟರಲ್ಲಿ ಆ ರಾಕ್ಷಸರು ಆತನನ್ನು ಸಮೀಪಿಸಿ ಬಾಣಗಳ ಮಳೆಯನ್ನು ಕರೆಯಲು ಮೊದಲುಮಾಡಿದರು. ಅದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆತನು ಅಂತರಿಕ್ಷಕ್ಕೆ ಹಾರಿದನು. ಆ ರಾಕ್ಷಸರೇನು ಸಾಮಾನ್ಯರೆ? ತಾವೂ ಅಂತರಿಕ್ಷಕ್ಕೆ ಹಾರಿ ಅವನನ್ನು ಘಾತಿಸಲು ಮೊದಲುಮಾಡಿದರು. ಇದನ್ನು ಕಂಡು ಮಾರುತಿ ಒಮ್ಮೆ ಸಿಂಹನಾದಮಾಡಿ ಅವರ ಮೇಲೆ ಕವಿದುಬಿದ್ದನು. ಅವರಲ್ಲಿ ಒಬ್ಬನನ್ನು ಆತ ತನ್ನ ಅಂಗೈಯಿಂದ ಅಪ್ಪಳಿಸಿ ಕೆಡಹಿದನು. ಮತ್ತೊಬ್ಬನು ಕಾಲ ತುಳಿತಕ್ಕೆ ಸಿಕ್ಕಿ ಜಜ್ಜಿಹೋದನು. ಇನ್ನೊಬ್ಬನು ಮುಷ್ಟಿಯ ಹೊಡೆತದಿಂದ ಮೃತಿಹೊಂದಿದನು. ಬೇರೊಬ್ಬನನ್ನು ಆತನು ತನ್ನ ಉಗುರಿನಿಂದ ಸಿಗಿದು ಹಾಕಿದನು. ಆತನು ಮೇಲೆ ಬಿದ್ದ ರಭಸಕ್ಕೆ ಮತ್ತೊಬ್ಬನು ಸತ್ತನು. ಉಳಿದವರು ಆತನ ಸಿಂಹನಾದವನ್ನು ಕೇಳಿಯೆ ಸತ್ತರು. ತಮ್ಮ ನಾಯಕರಿಗೆ ಆದ ಗತಿಯನ್ನು ಕಂಡು ಅಳಿದುಳಿದಿದ್ದ ಸೈನ್ಯದವರು ಓಡಿಹೋಗಿ ಆ ಸಂಗತಿಯನ್ನು ರಾಣಾಸುರನಲ್ಲಿ ಬಿನ್ನವಿಸಿದರು.

ಮಂತ್ರಿಪುತ್ರ ಸಪ್ತಕವು ಒಮ್ಮೆಗೇ ಮಡಿದುದನ್ನು ಕೇಳಿ ರಾವಣನ ಮನಸ್ಸಿಗೆ ಬಹು ಆತಂಕ ತಟ್ಟಿತು. ಆದರೂ ಅದನ್ನು ಹೊರದೋರದೆ ವಿರೂಪಾಕ್ಷ ಯೂಪಾಕ್ಷ ದುರ್ಧರ ಪ್ರಘಸ ಭಾಸಕರ್ಣ ಎಂಬ ಐವರು ಸೇನಾಪತಿಗಳನ್ನು ಕರೆದು “ಎಲೈ, ಶೂರರಾದ ಸೇನಾಪತಿಗಳೆ, ನೀವು ನಿಮ್ಮ ನಿಮ್ಮ ಚತುರಂಗ ಸೈನ್ಯಗಳೊಡನೆ ಹೊರಟು ನಮ್ಮ ಅಶೋಕವನಕ್ಕೆ ಬಂದಿರುವ ಆ ಘೋರಕಪಿಯನ್ನು ಹೇಗಾದರೂ ಮಾಡಿ ಸಂಹರಿಸಿ ಬರತಕ್ಕದ್ದು. ಅವನನ್ನು ಸಾಮಾನ್ಯ ಕಪಿಯೆಂದು ಭಾವಿಸಿ ಮೋಸಹೋದೀರಿ. ಬಹುಶಃ ದೇವೇಂದ್ರನು ದೊಡ್ಡ ತಪಸ್ಸನ್ನು ಮಾಡಿ ನಮ್ಮ ನಿಗ್ರಹಕ್ಕಾಗಿ ಈ ಭೂತವನ್ನು ಸೃಷ್ಟಿಮಾಡಿದ್ದರೂ ಮಾಡಿರಬಹುದು. ವಾಲಿ ಸುಗ್ರೀವ ಜಾಂಬವಂತ ಮೊದಲಾದ ಕಪಿವೀರರನ್ನೆಲ್ಲಾ ನಾನು ಬಲ್ಲೆ; ಅವರಾರೂ ಇಂತಹ ಬಲಶಾಲಿಗಳಲ್ಲ. ಈ ವಾನರನು ಮಾಯಾರೂಪಿಯಾಗಿರುವಂತೆ ತೋರುತ್ತದೆ. ಆದುದರಿಂದ ಮೈಯೆಲ್ಲಾ ಕಣ್ಣಾಗಿ ವ್ಯವಹರಿಸಬೇಕು.” ಎಂದು ಎಚ್ಚರಿಸಿ, ಅವರನ್ನು ಹನುಮಂತನ ಮೇಲೆ ಯುದ್ಧಕ್ಕೆ ಅಟ್ಟಿದನು. ಅವರೆಲ್ಲರೂ ಮಹಾ ಸಡಗರದಿಂದ ತಮ್ಮ ತಮ್ಮ ಸೈನ್ಯಗಳನ್ನು ಸಜ್ಜುಗೊಳಿಸಿಕೊಂಡು ಭಯಂಕರವಾದ ಆಯುಧಕೋಟಿಗಳನ್ನು ತಮ್ಮ ರಥಗಳಲ್ಲಿ ತುಂಬಿಕೊಂಡು ಆ ವಾನರ ವೀರನ ಮೇಲೆ ಯುದ್ಧಕ್ಕೆ ಹೊರಟರು. ಉಪವನದ ಬಾಗಿಲಿನಲ್ಲಿ ಅವರ ಪಾಲಿನ ಯಮನಂತೆ ಕುಳಿತಿದ್ದ ಹನುಮಂತನನ್ನು ಕಾಣುತ್ತಲೆ ದುರ್ಧರನು ಹರಿತವಾದ ಐದು ಬಾಣಗಳನ್ನು ಹನುಮಂತನ ಮೇಲೆ ಪ್ರಯೋಗಿಸಿದನು. ಅವು ತನುವನ್ನು ತಾಕುತ್ತಲೆ ಆತನು ಸಿಂಹನಾದ ಮಾಡುತ್ತಾ ಆಕಾಶಕ್ಕೆ ಹಾರಿದನು. ದುರ್ಧರನೂ ಆತನ ಹಿಂದೆಯೆ ರಥದೊಡನೆ ಹಾರಿ ಆತನ ಮೇಲೆ ಬಾಣದ ಮಳೆಯನ್ನು ಕರೆಯಲು ಮೊದಲುಮಾಡಿದನು; ಆಗ ಆ ವಾಯುಪುತ್ರನು ತನ್ನ ದೇಹವನ್ನು ಮತ್ತಷ್ಟು ಪರ್ವತೋಪಮವಾಗಿ ಬೆಳಸಿಕೊಂಡು ಅವನ ರಥದ ಮೇಲೆ ಬಿದ್ದನು. ಒಡನೆಯೇ ರಥಕ್ಕೆ ಕಟ್ಟಿದ್ದ ಎಂಟು ಕುದುರೆಗಳೂ ಸತ್ತುಹೋದುವು. ರಥ ನೆಲಕ್ಕೆ ಬಿದ್ದು ಪುಡಿಪುಡಿಯಾಯಿತು. ಅದರೊಳಗೆ ಕುಳಿತಿದ್ದ ದುರ್ಧರನೂ ಸತ್ತು ನೆಲಕ್ಕುರುಳಿದನು.

ದುರ್ಧರ ಸತ್ತುದನ್ನು ಕಂಡು ವಿರೂಪಾಕ್ಷ ಯೂಪಾಕ್ಷರಿಬ್ಬರೂ ಕೋಪೋದ್ದೀಪಿತರಾಗಿ ಕಣ್ಣುಗಳಿಂದ ಕೆಂಡವನ್ನು ಕಾರುತ್ತಾ ಹಲ್ಲುಗಳನ್ನು ಕಟಕಟ ಕಡಿಯುತ್ತಾ ಆಕಾಶಕ್ಕೆ ಹಾರಿ ಮುಸಲಾಯುಧಗಳಿಂದ ಹನುಮಂತನ ಎದೆಗೆ ಹೊಡೆದರು. ಬರಿಗೈಲಿದ್ದ ಹನುಮಂತನು ಭೂಮಿಗೆ ಅವತರಿಸಿ ಸಮೀಪದಲ್ಲಿದ್ದ ಸಾಲವೃಕ್ಷವೊಂದನ್ನು ಕಿತ್ತು ಅದರಿಂದ ಅವರಿಬ್ಬರನ್ನೂ ಒಟ್ಟಿಗೆ ಅಪ್ಪಳಿಸಿದನು. ಇಬ್ಬರೂ ರಕ್ತಕಾರಿಕೊಂಡು ನೆಲಕ್ಕುರುಳಿ ಸತ್ತರು. ಇದನ್ನು ಕಂಡು ಪ್ರಘಸನು ಹನುಮಂತನಿಗೆ ಇದಿರಾದನು. ಅವರಿಬ್ಬರೂ ಯುದ್ಧಕ್ಕೆ ತೊಡಗಿರುವಾಗ ಭಾಸಕರ್ಣನುಬಂದು ಪ್ರಘಸನಿಗೆ ಸಹಾಯವಾಗಿ ನಿಂತನು. ಒಬ್ಬನು ಕತ್ತಿಯಿಂದ ಹೊಡೆಯುತ್ತಿದ್ದಾನೆ, ಮತ್ತೊಬ್ಬನು ಶೂಲದಿಂದ ತಿವಿಯುತ್ತಿದ್ದಾನೆ. ಹನುಮಂತನ ದೇಹವೆಲ್ಲಾ ರಕ್ತಮಯವಾಯಿತು. ಕೂಡಲೆ ಹನುಮಂತನು ಅಲ್ಲಿಯೇ ಸಮೀಪದಲ್ಲಿದ್ದ ಕೃತಕಪರ್ವತವೊಂದರ ಶಿಖರವನ್ನು ಕಿತ್ತುಕೊಂಡು ಅದರಿಂದ ಆ ಇಬ್ಬರನ್ನೂ ಅಪ್ಪಳಿಸಿದನು. ಇಬ್ಬರೂ ಸತ್ತು ನೆಲಕ್ಕುರುಳಿದರು. ಅವರ ಜೊತೆಯಲ್ಲಿ ಬಂದಿದ್ದ ಸೈನ್ಯವೆಲ್ಲವೂ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಹನುಮಂತನ ಹೊಡೆತಕ್ಕೆ ಸಿಕ್ಕ ನಾಶವಾಗಿ ಹೋಯಿತು. ಎತ್ತನೋಡಿದರೂ ಸತ್ತ ಆನೆ, ಮುರಿದ ರಥ, ಮಡಿದ ಕುದುರೆ, ಗತಜೀವಿಗಳಾದ ರಾಕ್ಷಸರು, ಹನುಮಂತನೊ ಯಥಾಪ್ರಕಾರ ತೋಟದ ಬಾಗಿಲಿನಲ್ಲಿ! ಪುನರಾಯಾನ್ ಮಹಾ ಕಪಿಃ!

ತನ್ನ ಶೂರ ಸೇನಾನಿಗಳೈವರೂ ಮಡಿದ ಸುದ್ದಿಯನ್ನು ಕೇಳಿ ರಾವಣೇಶ್ವರನು ಚಿಂತಾಮಗ್ನನಾಗಿ ತನ್ನ ಇದಿರಿಗೆ ಕುಳಿತಿದ್ದ ಅಕ್ಷಕುಮಾರನನ್ನು ನೋಡಿದನು. ಇಂಗಿತಜ್ಞನಾದ ಅಕ್ಷಕುಮಾರನು ತನ್ನ ತಂದೆಯ ಅಭಿಪ್ರಾಯವನ್ನು ಅರಿತವನಾಗಿ ಹವಿಸ್ಸುಂಡ ಅಗ್ನಿ ಜ್ವಲಿಸುವಂತೆ ಧಿಗ್ಗನೆ ಮೇಲಕ್ಕೆದ್ದು ಹನುಮಂತನ ಮೇಲೆ ಯುದ್ಧಕ್ಕೆ ಹೊರಡಲು ಸಿದ್ಧನಾದನು. ಸುವರ್ಣಾಲಂಕೃತವಾದ ಆತನ ರಥ ತತ್‌ಕ್ಷಣವೆ ಸಿದ್ಧವಾಯಿತು. ಮನೋವೇಗದ ಎಂಟು ಉತ್ತಮಾಶ್ವಗಳಿಂದ ಕೂಡಿದ ಆ ರಥದಲ್ಲಿ ಬಾಣಗಳಿಂದ ತುಂಬಿದ ಬತ್ತಳಿಕೆಗಳೂ ಎಂಟು ಮೂಲೆಗಳಲ್ಲಿ ಎಂಟು ಕತ್ತಿಗಳೂ ನೇತಾಡುತ್ತಿದ್ದುವು. ಬೇರೆಬೇರೆ ಕವಚಗಳೂ ಧನಸ್ಸುಗಳೂ ಅದರಲ್ಲಿ ಅಣಿಮಾಡಿ ಇಡಲ್ಪಟ್ಟಿದ್ದುವು. ಭೂಮ್ಯಾಕಾಶಗಳಲ್ಲಿ ಸಮಾನವಾಗಿಯೆ ಸಂಚರಿಸಬಲ್ಲ ಈ ರಥವನ್ನು ಅಕ್ಷಕುಮಾರನು ಆರೋಹಿಸಿ ಅಶೋಕವನದ ಕಡೆಗೆ ಹೊರಟನು. ಪ್ರಜಾಕ್ಷಯಕ್ಕಾಗಿ ಹೊರಟ ಪ್ರಳಯ ರುದ್ರನಂತೆ ದೇದೀಪ್ಯಮಾನವಾಗಿ ಬೆಳಗುತ್ತಿದ್ದ ಆ ರಾಜಕುಮಾರನು ಹನುಮಂತನನ್ನು ಕಾಣುತ್ತಲೆ ಆತನ ಅದ್ಭುತಾಕಾರವನ್ನು ಕಂಡು ಆಶ್ಚರ್ಯಪಡುತ್ತಾ ತನ್ನ ಪರಾಕ್ರಮಕ್ಕೆ ತನ್ನ ಪ್ರತಿದ್ವಂದಿ ದೊರೆತನೆಂದು ಸಂತೋಷಿಸಿದನು.

ತಾನು ಸಮೀಪಿಸಿದರೂ ಸ್ವಲ್ಪವೂ ಲಕ್ಷ್ಯವೆ ಇಲ್ಲದೆ ಕುಳಿತಿದ್ದ ಹನುಮಂತನನ್ನು ಕಂಡು ಅಕ್ಷಕುಮಾರನಿಗೆ ಅಚ್ಚರಿಯಾಯಿತು. ಆತನು ಆ ಮಹಾಕಪಿಯನ್ನು ಕೆರಳಿಸುವುದಕ್ಕಾಗಿ ಮೂರು ತೀಕ್ಷ್ಣವಾದ ಬಾಣಗಳನ್ನು ಅವನ ಮೇಲೆ ಪ್ರಯೋಗಿಸಿದನು. ಕೂಡಲೆ ಹನುಮಂತನು ಕೆರಳಿ ಮೇಲಕ್ಕೆದ್ದನು. ಅದನ್ನು ಕಂಡು ಅಕ್ಷಕುಮಾರನು ಅಮೋಘವಾದ ಬಾಣಗಳ ಮಳೆಯನ್ನೆ ಸುರಿಸಿದನು. ಅಕ್ಷಕುಮಾರನ ದೊಡ್ಡ ನೀಲದೇಹ, ಆತನು ಕೈಲಿ ಹಿಡಿದಿದ್ದ ಇಂದ್ರಧನುಸ್ಸಿನಂತಹ ವಿಚಿತ್ರ ಕಾರ್ಮುಕ, ಆತನು ಸುರಿಸುತ್ತಿದ್ದ ಶರವರ್ಷ, ಪರ್ವತಾಕಾರದ ಹನುಮಂತ – ಇದನ್ನು ನೋಡಿದರೆ ಮೇಘವು ಬೆಟ್ಟದ ಮೇಲೆ ಮಳೆಸುರಿಸುವಂತೆ ಕಾಣುತ್ತಿತ್ತು. ಇಬ್ಬರೂ ತಮ್ಮ ಇದಿರಾಳಿಗಳನ್ನು ಕಂಡು ಮನಸ್ಸಿನಲ್ಲೇ ಮೆಚ್ಚಿಕೊಂಡರು. ಹನುಮಂತನು ತನ್ನ ಸಂತೋಷವನ್ನು ದೊಡ್ಡದೊಂದು ಸಿಂಹನಾದದ ಮೂಲಕ ಹೊರದೋರಿದನು. ಅಕ್ಷಕುಮಾರನು ವೀರ್ಯದ ಕೊಬ್ಬಿನಿಂದ ಮುಂದೆ ನುಗ್ಗಿದನು, ಹುಲ್ಲುಮುಚ್ಚಿದ ಹಳೆಯ ಬಾವಿಯ ಮೇಲೆ ಅವಿವೇಕದಿಂದ ಕಾಡಾನೆ ನುಗ್ಗುವಂತೆ! ಇದನ್ನು ಕಂಡು ಹನುಮಂತನು ಮೇಘವು ಗುಡುಗುವಂತೆ ಒಮ್ಮೆ ಸಿಂಹನಾದ ಮಾಡಿ ತೋಳುಗಳನ್ನೂ ತೊಡೆಗಳನ್ನೂ ಬೀಸುತ್ತಾ ಆಕಾಶಕ್ಕೆ ಹಾರಿದನು. ಅಕ್ಷಕುಮಾರನೂ ಹಿಂದೆಯೆ ಹಾರಿ ಅವನ ಮೇಲೆ ಬಾಣಗಳನ್ನು ಸುರಿಸಿದನು ವಾಯುಪುತ್ರನಾದರೋ ಆ ಬಾಣಗಳ ಮಧ್ಯದಲ್ಲಿಯೆ ಗಾಳಿಯಂತೆ ತೂರುತ್ತಾ ಅವುಗಳಿಂದ ತಪ್ಪಿಸಿಕೊಳ್ಳುತ್ತಿದ್ದನು. ಆದರೆ ಬಹುಕಾಲ ಹಾಗೆ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲವೆನಿಸಿತು, ಆತನಿಗೆ. “ಈ ರಾಜಕುಮಾರನ ಬಾಣಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?” ಎಂಬ ಚಿಂತೆಯೂ ಆಂಜನೇಯನ ಮನಸ್ಸಿನಲ್ಲಿ ಉದಿಸಿತು. ಬಾಲನಾದರೂ ಅಕ್ಷಕುಮಾರನು ಅತುಲ ಸಾಹಸಿ; ಅಮಿತ ಧೈರ್ಯಶಾಲಿ; ಯುದ್ಧವಿದ್ಯಾವಿಶಾರದ. ಆತನ ಉತ್ಸಾಹವು ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದಿತು. ಇದನ್ನು ಕಂಡು ಹನುಮಂತನು “ಓಹೋ, ಉರಿಯುವ ಬೆಂಕಿಯನ್ನು ಆರಿಸದೆ ಬಿಡುವುದು ಕ್ಷೇಮವಲ್ಲ” ಎಂದುಕೊಂಡನು. ಹೀಗೆಂದುಕೊಂಡು ಆತನು ಆ ರಾಕ್ಷಸನ ರಥಾಶ್ವಗಳೆಂಟನ್ನೂ ಒಂದು ಅಂಗೈಯಿಂದ ಹೊಡೆದು ಕೆಳಕ್ಕೆ ಕೆಡವಿದನು; ಮತ್ತೊಂದು ಕೈಯಿಂದ ರಥವನ್ನು ಅಪ್ಪಳಿಸಿದನು. ರಥವೂ ಪುಡಿಪುಡಿಯಾಗಿ ಕುದುರೆಗಳೊಡನೆಯೆ ನೆಲಕ್ಕುದುರಿತು. ಒಡನೆಯೆ ಅಕ್ಷಕುಮಾರನು ರಥದಿಂದ ಕೆಳಕ್ಕೆ ಹಾರಿ ತಪೋಮಹಿಮೆಯಿಂದ ದೇವಲೋಕವನ್ನು ಅಡರುವ ಮಹರ್ಷಿಯಂತೆ ಆಕಾಶಕ್ಕೆ ಹಾರಿದನು. ಹೀಗೆ ಹಾರಿ ತನ್ನ ಬಳಿಗೆ ಬರುತ್ತಿರುವ ಅವನನ್ನು ಹನುಮಂತನು ಥಟ್ಟನೆ ಸಮೀಪಿಸಿ ಅವನ ಕಾಲುಗಳೆರಡನ್ನೂ ಭದ್ರವಾಗಿ ಹಿಡಿದುಕೊಂಡನು. ಅನಂತರ ಗರುಡನು ಮಹಾಸರ್ಪವನ್ನು ಎಳೆಯುವಂತೆ ಆ ರಾಕ್ಷಸನ ಕಾಲುಗಳನ್ನು ಹಿಡಿದೆಳೆದು ಅಂತರಿಕ್ಷದಲ್ಲಿ ಗಿರಿಗರನೆ ತಿರುಗಿಸಿ ನೆಲಕ್ಕೆ ಕುಕ್ಕಿದನು. ಇದರಿಂದ ಆ ರಾಕ್ಷಸನ ತಲೆಯೊಡೆದು ಅವಯವಗಳೆಲ್ಲವೂ ಸಿಡಿದುಬಿದ್ದುವು. ಹನುಮಂತನು ಆ ಶವವನ್ನು ನೆಲಕ್ಕೆ ತಿಕ್ಕಿ ಮಾಂಸದ ಒಂದು ಉಂಡೆಯನ್ನಾಗಿ ಮಾಡಿಬಿಟ್ಟನು. ಇಷ್ಟಾದಮೇಲೆ ಮತ್ತೆ ಮೊದಲಿನಂತೆ ಬಂದು ನಿಂತನು, ತೋರಣದ್ವಾರದಲ್ಲಿ!