ಸೀತಾದೇವಿಯಿಂದ ಬೀಳ್ಕೊಂಡು ಸ್ವಲ್ಪದೂರ ಹೊರಟುಬಂದೊಡನೆಯೆ ಹನುಮಂತನ ಮನಸ್ಸಿನಲ್ಲಿ ಒಂದು ಹೊಸಯೋಚನೆ ಹುಟ್ಟಿತು. “ಸೀತಾದೇವಿಯನ್ನೇನೊ ಕಂಡುದಾಯಿತು. ಆದರೆ ರಾವಣನ ಬಲಾಬಲಗಳನ್ನು ಅರಿತುಕೊಂಡು ಮಹಾರಾಜನಾದ ಸುಗ್ರೀವನಿಗೆ ಅರಿಕೆಮಾಡಿದರೆ ಆಗ ನಾನು ಬಂದುದಕ್ಕೂ ಸಾರ್ಥಕವಾಗುತ್ತದೆ. ಆದರೆ ಅದನ್ನು ಸಾಧಿಸಬೇಕಾದರೆ ಈ ರಾಕ್ಷಸರಲ್ಲಿ ದಂಡೋಪಾಯವೊಂದೇ ದಾರಿ. ಈ ರಾಕ್ಷಸರೊಡನೆ ಹೋರಾಡಿ ಕೆಲವರನ್ನಾದರೂ ಸಂಹರಿಸಿದರೆ ಇವರು ಸ್ವಲ್ಪ ಹದಕ್ಕೆ ಬರುತ್ತಾರೆ. ಆದರೆ ಇವರೊಡನೆ ಯುದ್ಧಕ್ಕೆ ನೆಪವಾವುದನ್ನು ಹುಡುಕಲಿ? ಯುದ್ಧವಾಗದ ಹೊರತು ಈ ರಾವಣನ ಬಲಾಬಲ ಸ್ವರೂಪ ಗೊತ್ತಾಗುವಂತಿಲ್ಲವಲ್ಲಾ” ಎಂದು ಆತನು ಕ್ಷಣಕಾಲ ಮನಸ್ಸಿನಲ್ಲೆ ಗುಣಿಸಿ ನೋಡಿದನು. ಉಪಾಯ ಹೊಳೆಯಿತು. “ಹೌದು! ರಾವಣನ ಬಹಿಃಪ್ರಾಣದಂತಿರುವ ಈ ಅಶೋಕವನವನ್ನು ಧ್ವಂಸಮಾಡುತ್ತೇನೆ! ಈ ವನವೆಂದರೆ ಕಣ್ಣಿಗೆ ಆನಂದ, ಮನಸ್ಸಿಗೆ ಇಂಪು. ಅಮೂಲ್ಯವಾದ ಪುಷ್ಪಗಳಿಂದಲೂ ಲತಾವಿತಾನಗಳಿಂದಲೂ ಇಂದ್ರನ ನಂದನವನವನ್ನೂ ಮೀರಿಸುವಂತಿದೆ. ಕಾಳ್ಕಿಚ್ಚು ಒಣಗಿನಿಂತಿರುವ ಕಾಡನ್ನು ಸುಟ್ಟು ಬೂದಿಮಾಡುವಂತೆ ಇದನ್ನು ತೊತ್ತಳದುಳಿದು ಹಾಳುಮಾಡುತ್ತೇನೆ. ಆಗ ರಾವಣನು ತನ್ನ ಸೈನ್ಯವನ್ನು ನನ್ನ ಮೇಲೆ ಯುದ್ಧಕ್ಕೆ ಕಳುಹಿಸುತ್ತಾನೆ. ಅವನ ಸತ್ವ ಪರೀಕ್ಷೆಯನ್ನು ಮಾಡಿ ನಾನು ಕಿಷ್ಕಿಂಧೆಗೆ ಹಿಂದಿರುಗುತ್ತೇನೆ” ಎಂದು ಹನುಮಂತನು ನಿಶ್ಚಯಿಸಿದನು.

ಹೇಗಿದ್ದರೂ ಹನುಮಂತನು ಹಿಂದಿರುಗುವುದಕ್ಕಾಗಿ ಬೃಹದಾಕಾರವನ್ನು ತಾಳಿದ್ದನು. ಆ ಆಕಾರ ಈ ಕಾರ್ಯಕ್ಕೆ ಅನುಕೂಲವಾಯಿತು. ಪ್ರಚಂಡ ಪರಾಕ್ರಮಿಯಾದ ಆತನು ಮರಗಳನ್ನೆಲ್ಲಾ ಮುರಿಮುರಿದು ಬೀಸಾಡಿದನು. ತಿಳಿಗೊಳಗಳನ್ನೆಲ್ಲಾ ಕಲಕಿಹಾಕಿದನು. ಕೃತಕಪರ್ವತಗಳನ್ನೆಲ್ಲಾ ಪುಡಿಪುಡಿಮಾಡಿದನು. ಲತಾವಿತಾನಗಳನ್ನು ಧ್ವಂಸಮಾಡಿದನು. ಎಲ್ಲಿನೋಡಿದರೂ ಬಿಸಿಲಿನಲ್ಲಿ ಬಾಡಿ ಹಾಳು ಹಾಳು ಸುರಿಯುತ್ತಿರುವ ಗಿಡ ಮರ ಬಳ್ಳಿಗಳಾದುವು. ಅಲ್ಲಿ ವಾಸವಾಗಿದ್ದ ಹಕ್ಕಿಗಳೆಲ್ಲಾ ಕಿಟ್ಟನೆ ಕಿರಿಚಿಕೊಳ್ಳುತ್ತಾ ಹಾರಿಹೋದುವು. ಲತಾಗೃಹಗಳೆಲ್ಲವೂ ಬಟ್ಟಬಯಲಾದುವು; ಚಿತ್ರಗೃಹಗಳು ಹಾರಿಹೋದುವು; ಅಲ್ಲಲ್ಲಿದ್ದ ಕಲ್ಲಿನ ಮಂಟಪಗಳು ನೆಲಸಮವಾದುವು. ಉದ್ಯಾನವನವೆಲ್ಲವೂ ಹಾಳು ಬಿಟ್ಟ ಬೆಂಗಾಡಾಯಿತು, “ಕುಂಬಾರನಿಗೆ ಒಂದು ವರ್ಷ, ದೊಣ್ಣೆಗೆ ಒಂದು ನಿಮಿಷ” ಎಂಬಂತಾಯಿತು. ಹೀಗೆ ಅಶೋಕವನದ ಸರ್ವನಾಶವನ್ನು ಮಾಡಿ ಆ ತೋಟದ ಹೊರಬಾಗಿಲಿನಲ್ಲಿ ಬಂದು ನಿಂತನು.

ಅಶೋಕವನದಲ್ಲಿದ್ದ ಹಕ್ಕಿಗಳ ಶೋಕಧ್ವನಿಯೂ ಮರಗಳು ಮುರಿದ ಶಬ್ದವೂ ಲಂಕಾನಗರಿಗೆಲ್ಲಾ ಕೇಳಿಸಿತು. ಆ ವನದಲ್ಲಿದ್ದ ಮೃಗಪಕ್ಷಿಗಳೆಲ್ಲವೂ ದಿಕ್ಕುದಿಕ್ಕಿಗೆ ಪಲಾಯನಮಾಡುತ್ತಿರುವುದು ಅವರಿಗೆ ಕಾಣಿಸಿತು. ಆ ವೇಳೆಗೆ ಸರಿಯಾಗಿ ರಾಕ್ಷಸನಾಶವನ್ನು ಸೂಚಿಸುವ ಅನೇಕ ದುರ್ನಿಮಿತ್ತಗಳಾದುವು. ಇದರಿಂದ ರಾಕ್ಷಸರೆಲ್ಲರಿಗೂ ಗಾಬರಿಯಾಯಿತು. ಅಶೋಕವನದಲ್ಲಿ ಕಾವಲು ಕಾಯುತ್ತಿದ್ದ ರಾಕ್ಷಸಿಯರಿಗೆ ಎಚ್ಚರವಾಯಿತು. ಅವರು ಎದ್ದು ನೋಡುತ್ತಾರೆ: ಎಲ್ಲೆಲ್ಲಿಯೂ ಸರ್ವನಾಶ! ಇದಿರಿಗೆ ಬೆಟ್ಟದಂತೆ ಭಯಂಕರಾಕಾರವುಳ್ಳ ವಾನರ ಬೇರೆ; ಅವರಿಗೆ ಅವನನ್ನು ಕಂಡು ಬಲು ಭಯವಾಯಿತು. ಅವರೆಲ್ಲರೂ ಸೀತೆಯ ಬಳಿಗೆ ಓಡಿಹೋಗಿ, “ಅಮ್ಮಾ! ಇದೇನು? ಇವನು ಯಾರು? ಯಾರ ಮಗ? ಎಲ್ಲಿಂದ ಬಂದಿರುವನು? ಏತಕ್ಕೋಸ್ಕರ ಇಲ್ಲಿಗೆ ಬಂದಿದ್ದಾನೆ?” ಎಂದು ಕೇಳಿದರು. ಸೀತಾದೇವಿ “ಚೆನ್ನಾಯಿತು, ನಾನೇನು ಬಲ್ಲೆ? ರಾಕ್ಷಸರು ಮಾಯಾರೂಪಿಗಳು. ಹಾವಿನ ಹೆಜ್ಜೆಯನ್ನು ಹಾವೇ ಬಲ್ಲುದೆಂಬಂತೆ ಈ ಮಾಯಾಸ್ವರೂಪಿಯ ವಿಷಯವನ್ನು ನೀವು ಬಲ್ಲಿರಿ, ಅಷ್ಟೆ. ಇವನನ್ನು ನೋಡಿ ನನಗೂ ಭಯವಾಗುತ್ತದೆ. ಇವನಾರೋ ನೀವೇ ಹೇಳಿರಿ; ನಿಮ್ಮಲ್ಲಿಯೆ ಯಾವನೋ ಒಬ್ಬನಿರಬೇಕು” ಎಂದಳು. ಈ ನುಡಿಯಿಂದ ಆ ರಾಕ್ಷಸರಿಗೆ ದಿಕ್ಕೆ ತೋಚದಂತಾಯಿತು. ಅವರಲ್ಲಿ ಕೆಲವರು ಅಲ್ಲಿಯೆ ಸೀತಾದೇವಿಯ ಬಳಿಯಲ್ಲಿ ಅಡಗಿಕೊಂಡರು. ಕೆಲವರು ಒಂದೇ ಉಸಿರಿಗೆ ಓಡಿಹೋಗಿ ರಾವಣನಿಗೆ ಸುದ್ದಿ ಮುಟ್ಟಿಸಿದರು – “ಮಹಾರಾಜ, ಸರ್ವನಾಶವಾಯಿತು! ಭಯಂಕರಾಕಾರದ ವಾನರನು ಅಶೋಕವನಕ್ಕೆ ಬಂದಿದ್ದಾನೆ. ಕ್ಷಣಕಾಲ ಅವನು ಸೀತೆಯೊಡನೆ ಮಾತನಾಡುತ್ತಿದ್ದು ಈಗ ಅಲ್ಲಿಯೆ ವನಮಧ್ಯದಲ್ಲಿದ್ದಾನೆ. ಅವನು ಸಾಮಾನ್ಯನಂತೂ ಅಲ್ಲ. ಅವನ ಆಕಾರವನ್ನು ನೋಡಿದರೆ ಜೀವ ಝಲ್ಲೆನ್ನುತ್ತದೆ. ಆತನು ಯಾರೆಂದು ಸೀತಾದೇವಿಯನ್ನು ಕೇಳಿದರೆ ತನಗೇನೂ ತಿಳಿಯದೆಂದು ಹೇಳಿದಳು. ಅವನು ಎಲ್ಲೋ ದೇವೇಂದ್ರನ ದೂತನೋ ಕುಬೇರನ ದೂತನೋ ಇರಬೇಕೆಂದು ತೋರುತ್ತದೆ. ಅಥವಾ ಶ್ರೀರಾಮನೆ ಸೀತೆಯನ್ನು ಹುಡುಕುವುದಕ್ಕಾಗಿ ಅವನನ್ನು ಕಳುಹಿಸಿದ್ದರೂ ಕಳುಹಿಸಿರಬಹುದು. ಆ ಘೋರ ವಾನರನು ಮನೋಹರವಾದ ನಮ್ಮ ಅಶೋಕವನವನ್ನೆಲ್ಲಾ ನಾಶಮಾಡಿಬಿಟ್ಟಿದ್ದಾನೆ. ಸೀತಾದೇವಿ ಇರುವ ಪ್ರದೇಶವನ್ನು ಬಿಟ್ಟು ಉಳಿದ ವನವೆಲ್ಲವೂ ಹೇಳ ಹೆಸರಿಲ್ಲದಂತಾಗಿದೆ. ಮಹಾರಾಜ, ಆ ಪಾಪಿಯನ್ನು ಹಿಡಿದು ಚೆನ್ನಾಗಿ ಶಿಕ್ಷಿಸಬೇಕು. ನೀನು ಬಯಸಿರುವ ಆ ಸೀತಾದೇವಿಯೊಡನೆ ಆ ನೀಚನು ಮಾತನಾಡುವುದೆಂದರೇನು? ಜೀವದಮೇಲೆ ಆಶೆ ಇಲ್ಲವೆಂದು ತೋರುತ್ತದೆ!” ಎಂದರು.

ರಾಕ್ಷಸಿಯರ ನುಡಿಗಳು ಕಿವಿಯಲ್ಲಿ ಬೀಳುತ್ತಾ ಹೋದಂತೆ ರಾವಣೇಶ್ವರನು ಕೋಪದಿಂದ ಕಾಯತ್ತಾ ಹೋಗಿ ರೋಷಪಾವಕನಾದನು. ಹಲ್ಲುಗಳನ್ನು ಕಟಕಟ ಕಡಿಯುತ್ತಾ, ಯುದ್ಧವೀರರಾದ ‘ಕಿಂಕರ’ರೆಂಬ ರಾಕ್ಷಸರನ್ನು ಕರೆದು “ಈಗಲೇ ಹೋಗಿ ಈ ಕೋತಿಯನ್ನು ಬಲಿಹಾಕಿರಿ!” ಎಂದು ಅಪ್ಪಣೆಮಾಡಿದನು. ಮಹಾಬಲಶಾಲಿಗಳಾದ ಐವತ್ತು ಸಹಸ್ರಜನ ‘ಕಿಂಕರ’ರು ಶೂಲ ಮುದ್ಗರಾದಿ ಆಯುಧಗಳನ್ನು ಹಿಡಿದು ‘ಜೀವಸಹಿತವಾಗಿಯೆ ಆ ಕೋತಿಯನ್ನು ಹಿಡಿದುತರೋಣ’ ಎಂದುಕೊಂಡು ಹೊರಟರು. ಅಶೋಕವನದ ಬಾಗಿಲಿನಲ್ಲಿಯೆ ನಿಂತಿದ್ದ ಹನುಮಂತನನ್ನು ಕಾಣುತ್ತಲೆ ಅವರೆಲ್ಲರೂ ಒಂದೇ ಸಲ ಆತನಮೇಲೆ ಎರಗಿದರು. ಆದರೇನು? ಕಾಳ್ಗಿಚ್ಚಿನ ಮೇಲೆ ಮಿಡತೆಗಳು ಬಂದು ಬಿದ್ದಂತಾಯಿತು. ಹನುಮಂತನು ಅವರ ಪ್ರಹಾರಗಳನ್ನು ಲೆಕ್ಕಿಸದೆ ಒಮ್ಮೆ ಬಾಲವನ್ನು ನೆಲಕ್ಕೆ ಬಡಿದು ಸಿಂಹನಾದ ಮಾಡಿದನು. ಅನಂತರ ಒಂದುಸಲ ಭುಜಾಸ್ಫಾಲನಮಾಡಿದನು. ಅದರಿಂದ ಹೊರಟ ಶಬ್ದ ದಿಕ್ಕುದಿಕ್ಕುಗಳಲ್ಲಿಯೂ ಪ್ರತಿಧ್ವನಿತವಾಯಿತು; ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿಗಳು ಗಿರಗಿರನೆ ತಿರುಗಿ ನೆಲಕ್ಕೆ ಬಿದ್ದುವು. ಆಗ ಹನುಮಂತನು ಗಟ್ಟಿಯಾಗಿ “ಅತಿಬಲನಾದ ಶ್ರೀರಾಮನಿಗೆ ಜಯವಾಗಲಿ! ಶೂರನಾದ ಲಕ್ಷ್ಮಣನಿಗೆ ಜಯವಾಗಲಿ! ರಘುರಾಮನಿಂದ ಪಾಲಿತನಾದ ಸುಗ್ರೀವಮಹಾರಾಜನಿಗೆ ಜಯವಾಗಲಿ! ದುಸ್ಸಾಧ್ಯವಾದ ಕಾರ್ಯಗಳನ್ನು ಸುಲಭವಾಗಿಯೆ ಸಾಧಿಸಬಲ್ಲ ಶ್ರೀರಾಮಚಂದ್ರನ ದೂತನು ನಾನು. ನನ್ನ ಹೆಸರು ಹನುಮಂತ. ವಾಯುಪುತ್ರನಾದ ನಾನು ಶತ್ರುಗಳನ್ನು ಲೆಕ್ಕಿಸತಕ್ಕವನಲ್ಲ. ಸಹಸ್ರಮಂದಿ ರಾವಣರು ನನ್ನೆದುರಿಗೆ ಯುದ್ಧಕ್ಕೆ ಬಂದರೂ ನನಗೆ ಸಮಾನವಾಗಲಾರರು. ಕಲ್ಲು ಮರಗಳೇ ನನ್ನ ಆಯುಧ. ಅವುಗಳಿಂದ ಎಷ್ಟು ಸಹಸ್ರ ರಾಕ್ಷಸರನ್ನಾದರೂ ನಾನು ಸಂಹರಿಸಬಲ್ಲೆ. ಇಗೋ, ಹೀಗೆಯೆ ನೋಡುನೋಡುತ್ತಿರುವಂತೆ ಈ ಲಂಕಾಪಟ್ಟಣವನ್ನೆಲ್ಲಾ ಧ್ವಂಸಮಾಡಿ ನನ್ನ ಪ್ರಭುಪತ್ನಿಯಾದ ಮೈಥಿಲಿಗೆ ಮಣಿದು ನನ್ನ ಸ್ವಾಮಿಯ ಬಳಿಗೆ ಹಿಂದಿರುಗುವೆನು” ಎಂದು ಕೂಗಿ ಹೇಳಿದನು.

ಹನುಮಂತನ ಸಿಂಹಗರ್ಜನೆಯನ್ನು ಕೇಳಿಯೆ ಕಿಂಕರರಿಗೆ ಧೈರ್ಯ ಉಡುಗಿತ್ತು. ಆದರೂ ತಮ್ಮ ಪ್ರಭುವಿನ ಅಪ್ಪಣೆಯನ್ನು ಮೀರಲಾರದೆ ತಾವು ಧರಿಸಿದ್ದ ನಾನಾವಿಧವಾದ ಆಯುಧಗಳಿಂದ ಮಾರುತಿಯನ್ನು ಪ್ರಹರಿಸಲು ಮೊದಲುಮಾಡಿದರು. ಹನುಮಂತನು ಅವರನ್ನು ಸದೆಬಡಿಯುವುದಕ್ಕಾಗಿ ಆಯುಧವೊಂದನ್ನು ಪಡೆಯಲು ಸುತ್ತಲೂ ನೋಡಿದನು. ವನದ ಹೆಬ್ಬಾಗಿಲಿಗೆ ಹಾಕುವ ದೊಡ್ಡ ಕಬ್ಬಿಣದ ಅಗುಳಿ ಕಾಣಿಸಿತು. ಅದನ್ನೆ ತೆಗೆದುಕೊಂಡು ರಾಕ್ಷಸರನ್ನು ಪ್ರಹರಿಸಲು ಮೊದಲುಮಾಡಿದನು. ಕ್ಷಣಮಾತ್ರದಲ್ಲಿ ‘ಕಿಂಕರ’ರೆಲ್ಲರೂ ನಾಮಾವಶೇಷವಾಗಿಹೋದರು. ಮತ್ತಾರು ಬರುವರೊ ನೋಡೋಣವೆಂದು ಆತನು ತನ್ನ ಆಯುಧದೊಡನೆ ಹೊರಬಾಗಿಲಿನಲ್ಲಿ ಕಾದುನಿಂತನು. ಆತನ ಹೊಡೆತಕ್ಕೆ ಸಿಕ್ಕದೆ ಓಡಿ ಹೋದ ಒಬ್ಬಿಬ್ಬರು ರಾಕ್ಷಸರು ರಾವಣನ ಬಳಿಗೆ ಹೋಗಿ ‘ಕಿಂಕರ’ರೆಲ್ಲರೂ ನಿಶ್ಶೇಷವಾಗಿ ಹತವಾದ ಸುದ್ದಿಯನ್ನು ಅರಿಕೆಮಾಡಿದರು. ಅದನ್ನು ಕೇಳಿ ರಾವಣನು ಕೋಪದಿಂದ ಕಿಡಿಕಿಡಿಯಾಗುತ್ತಾ ತನ್ನ ಮಂತ್ರಿಯಾದ ಪ್ರಹಸ್ತನ ಮಗ ಜಂಬುಮಾಲಿಯನ್ನು ಈ ಘೋರ ಕಪಿಯಮೇಲೆ ಯುದ್ಧಕ್ಕಟ್ಟಿದನು.

ತೋಟದ ಹೆಬ್ಬಾಗಿಲಿನಲ್ಲಿ ಕೆಲಸವಿಲ್ಲದೆ ನಿಂತಿದ್ದ ಹನುಮಂತನಿಗೆ ತೋಟದಲ್ಲಿದ್ದ ಚೈತ್ಯಪ್ರಾಸಾದ ಕಾಣಿಸಿತು. ಅದು ರಾಕ್ಷಸರ ದೇವತೆಯ ಗುಡಿ; ಬಹು ಭಯಂಕರವಾದುದು. ಹನುಮಂತನು ಆ ಗುಡಿಯ ಶಿಖರಕ್ಕೆ ಏರಿಹೋಗಿ ಉದಿಸುವ ಸೂರ್ಯನಂತೆ ಅಲ್ಲಿ ಕುಳಿತು ಭುಜಾಸ್ಫಾಲನೆಮಾಡುತ್ತಾ ಮತ್ತೊಮ್ಮೆ ಗಟ್ಟಿಯಾಗಿ ಘೋಷಿಸಿದನು. “ಬಾಹುಶಾಲಿಯಾದ ಶ್ರೀರಾಮನಿಗೆ ಜಯವಾಗಲಿ! ಲಕ್ಷ್ಮಣಸ್ವಾಮಿಗೆ ಜಯವಾಗಲಿ! ರಾಮಸಹಾಯಕನಾದ ರಾಜಾ ಸುಗ್ರೀವನಿಗೆ ಜಯವಾಗಲಿ! ನಾನು ಕೋಸಲದೇಶದ ಶ್ರೀರಾಮನ ದೂತ! ನನ್ನ ಹೆಸರು ಹನುಮಂತ! ವಾಯುಪುತ್ರನಾದ ನಾನು ಮಹಾ ಬಲಶಾಲಿ! ಒಬ್ಬ ರಾವಣನಲ್ಲ, ಸಹಸ್ರ ರಾವಣರು ಬಂದರೂ ಅವರನ್ನು ಯುದ್ಧದಲ್ಲಿ ಸಂಹರಿಸಬಲ್ಲೆ. ನಾನು ಈಗ ಈ ಲಂಕಾನಗರವನ್ನೆಲ್ಲಾ ನಾಶಮಾಡಿ ನನ್ನ ಸ್ವಾಮಿಪತ್ನಿಯಾದ ಮೈಥಿಲಿಗೆ ನಮಸ್ಕರಿಸಿ ನನ್ನ ಪ್ರಭುವಿನ ಬಳಿಗೆ ಹಿಂದಿರುಗುತ್ತೇನೆ.” ಆತನ ಘೋಷಣೆಯನ್ನು ಕೇಳಿ, ಆ ಚೈತ್ಯದ ನೂರು ಜನ ಕಾವಲುಗಾರರು ಈಟಿ ಭಲ್ಲೆ ಗಂಡುಗೊಡಲಿಗಳನ್ನು ಹಿಡಿದು ಆತನಮೇಲೆ ಯುದ್ಧಕ್ಕೆ ಬಂದರು. ಅವರೆಲ್ಲರೂ ಏಕಕಾಲದಲ್ಲಿಯೆ ಮೇಲೆ ಕುಳಿತಿದ್ದ ಹನುಮಂತನಿಗೆ ಅಂಬಿನ ಮಳೆಯನ್ನು ಕರೆದರು. ಇದನ್ನು ಕಂಡು ಹನುಮಂತನಿಗೆ ಕೋಪವುಕ್ಕಿತು. ಕುಳಿತಲ್ಲಿಂದಲೆ ಆ ಚೈತ್ಯಪ್ರಾಸಾದದ ಕಂಭವೊಂದನ್ನು ಕಿತ್ತುಕೊಂಡು ಅದನ್ನು ಗರಗರ ತಿರುಗಿಸಿದನು. ಆ ವೇಗಕ್ಕೆ ಬೆಂಕಿಹುಟ್ಟಿ ಅದರಿಂದ ಆ ಪ್ರಾಸಾದವೆಲ್ಲಾ ಸುಟ್ಟುಹೋಯಿತು. ಅನಂತರ ಆತನು ಅದೇ ಕಂಭದಿಂದಲೆ ಆ ನೂರು ಮಂದಿಯನ್ನೂ ಹೊಡೆದು ಕೊಂದುಹಾಕಿದನು. ಹೀಗೆ ಆ ರಾಕ್ಷಸರನ್ನೆಲ್ಲಾ ಸಂಹರಿಸಿದ ಮೇಲೆ ಆಕಾಶದಲ್ಲಿ ನೆಗೆದು ನಿಂತು ಲಂಕೆಯ ರಾಕ್ಷಸರಿಗೆಲ್ಲಾ ಕೂಗಿ ಹೇಳಿದನು: “ಎಲೆ ರಾಕ್ಷಸಾಧಮರಿರಾ, ನನ್ನಂತೆಯೆ ಮಹಾ ಪರಾಕ್ರಮಿಗಳೂ ಮಹಾಕಾಯರೂ ಆದ ಸಾವಿರಾರು ಮಂದಿ ನಮ್ಮ ರಾಜನ ಬಳಿ ಇದ್ದಾರೆ. ಅವರೆಲ್ಲರೂ ಸೀತಾಮಾತೆಯನ್ನು ಅರಸುತ್ತಾ ದಿಕ್ಕುದಿಕ್ಕಿಗೆ ಹೋಗಿರುವರು. ನಮ್ಮ ಮಹಾರಾಜನು ಇಷ್ಟರಲ್ಲಿಯೆ ಅವರೆಲ್ಲರನ್ನೂ ಕರೆದುಕೊಂಡು ಬಂದು ಈ ಲಂಕೆಯನ್ನು ಮುತ್ತುತ್ತಾನೆ. ನಿಮಗೆಲ್ಲರಿಗೂ ಮೃತ್ಯು ಹತ್ತಿರಕ್ಕೆ ಬಂದಿದೆ. ಮಹಾತ್ಮನಾದ ಶ್ರೀರಾಮನಲ್ಲಿ ದ್ವೇಷ ಬೆಳಸಿದ ನೀವೂ ನಿಮ್ಮ ಲಂಕಾನಗರವೂ ಆತನ ಬಾಣದ ಬೆಂಕಿಯಲ್ಲಿ ದಗ್ಧವಾಗಿ ಹೋಗುವುದು ಖಂಡಿತ. ಆಗ ನಿಮ್ಮ ದೊರೆಯಾದ ರಾವಣನಿಗೂ ಮೃತ್ಯು ತಪ್ಪಿದುದಲ್ಲ.”

ಹನುಮಂತನ ಘೋಷಣೆ ಮುಗಿವವೇಳೆಗೆ ರಾವಣನು ಕಳುಹಿಸಿದ ಜಂಬುಮಾಲಿ ಅಲ್ಲಿಗೆ ಬಂದನು. ಜಂಬುಮಾಲಿಯೇನೂ ಸಾಮಾನ್ಯನಲ್ಲ; ಮಹಾಪರಾಕ್ರಮಿಯೆಂದು ಆತನು ಪ್ರಸಿದ್ಧನಾಗಿದ್ದನು. ಆತನ ದೊಡ್ಡ ದೇಹವೂ ಚಕ್ರದಂತಿದ್ದ ದುಂಡುಕಣ್ಣುಗಳೂ ಭಯಂಕರವಾಗಿದ್ದುವು. ರಾಕ್ಷಸವೀರನು ಇಂದ್ರನ ಧನುಸ್ಸಿಗೆ ಸಮಾನವಾದ ದೊಡ್ಡ ಬಿಲ್ಲನ್ನು ಹಿಡಿದು ಟಂಕಾರಮಾಡುತ್ತಾ ತನ್ನ ಹೇಸರಕತ್ತೆಗಳ ರಥದಲ್ಲಿ ಕುಳಿತು ಹನುಮಂತನ ಬಳಿಗೆ ಧಾವಿಸಿದನು. ಅವನನ್ನು ಕಾಣುತ್ತಲೆ ಹನುಮಂತನು ಸಿಂಹನಾದ ಮಾಡಿದನು. ಜಂಬುಮಾಲಿ ಅವನ ಸೊಕ್ಕನ್ನು ಅಡಗಿಸುವೆನೆಂದುಕೊಂಡು ಭಯಂಕರವಾದ ಬಾಣಗಳನ್ನು ಹೂಡಿ ಹನುಮಂತನ ಮೇಲೆ ಪ್ರಯೋಗಿಸಿದನು. ಹನುಮಂತನ ದೇಹವೆಲ್ಲವೂ ಬಾಣಗಳ ಮಳೆಯಲ್ಲಿ ಮುಳುಗಿಹೋಯಿತು. ಆತನ ಹಣೆಗೆ ಗಾಯವಾಗಿ ಮುಖದ ಮೇಲೆಲ್ಲಾ ರಕ್ತ ಹರಿಯಿತು. ಇದರಿಂದ ಕನಲಿದ ವಾನರವೀರನು ಸುತ್ತಲೂ ನೋಡಿ ಸಮೀಪದಲ್ಲಿದ್ದ ಒಂದು ದೊಡ್ಡ ಬಂಡೆಯನ್ನು ಎತ್ತಿ ತನ್ನ ಎದುರಾಳಿಯ ಮೇಲೆ ಒಗೆದನು. ಆದರೆ ಆ ಬಂಡೆ ಜಂಬುಮಾಲಿಯ ಬಾಣಾಘಾತಕ್ಕೆ ಸಿಕ್ಕಿ ಚೂರುಚೂರಾಯಿತು. ಇದನ್ನು ಕಂಡು ಮಾರುತಿಯ ಕೋಪ ಮತ್ತಷ್ಟು ಹೆಚ್ಚಿತು. ಸಮೀಪದಲ್ಲಿಯೆ ಇದ್ದ ಸಾಲವೃಕ್ಷವೊಂದನ್ನು ಕಿತ್ತು ಅದರಿಂದ ತನ್ನ ಶತ್ರುವನ್ನು ಅಪ್ಪಳಿಸ ಹೊರಟನು. ಆದರೆ ವೀರನಾದ ಜಂಬುಮಾಲಿ ಅದನ್ನು ತನ್ನ ಬಾಣಪರಂಪರೆಯಿಂದ ನಿವಾರಿಸಿ ಹನುಮಂತನನ್ನು ತನ್ನ ಬಾಣಗಳಲ್ಲಿ ಹೂಳಿದನು. ಬಾಣಾಘಾತದಿಂದ ನೊಂದಿದ್ದ ಮಾರುತಿ ತನ್ನ ಮೊದಲ ಆಯುಧವಾದ ಕಬ್ಬಿಣದ ಅಗುಳಿಯನ್ನೆ ತೆಗೆದುಕೊಂಡು ಗರಗರ ತಿರುಗಿಸಿ ಜಂಬುಮಾಲಿಯ ಕಡೆ ಎಸೆದನು. ಅಲ್ಲಿಗೆ ಮುಗಿಯಿತು ಯುದ್ಧ. ಜಂಬುಮಾಲಿಯಾಗಲಿ ಅವನ ರಥವಾಗಲಿ ಅದಕ್ಕೆ ಕಟ್ಟಿದ್ದ ಹೇಸರಕತ್ತೆಗಳಾಗಲಿ ಗುರುತಿಸಲಾರದಷ್ಟು ರೂಪುಗೆಟ್ಟು ನೆಲಕ್ಕೆ ಬಿದ್ದುಹೋದುವು.