ಭರತನು ನಂದಿಗ್ರಾಮವನ್ನು ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲೆ ಪ್ರತಿಷ್ಠಿಸಿದನು

ಶ್ರೀರಾಮನ ಪಾದುಕೆಗಳನ್ನು ನೆತ್ತಿಯಲ್ಲಿ ಹೊತ್ತುಕೊಂಡು ಭರತನು ಶತ್ರುಘ್ನನೊಡನೆ ರಥವೇರಿದನು. ಸಕಲ ಪರಿವಾರವೂ ಆತನನ್ನು ಹಿಂಬಾಲಿಸಿತು. ಎಲ್ಲರೂ ಹಿಂತಿರುಗಿ ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಭರತನು ಭಾರದ್ವಾಜಾಶ್ರಮವನ್ನು ಪ್ರವೇಶಿಸಿ ಆ ಮಹರ್ಷಿಗಳಿಗೆ ತಾನೇ ಶ್ರೀರಾಮನನ್ನು ಕಂಡು ಬಂದ ಸಮಾಚಾರವನ್ನು ತಿಳಿಸದನು. ‘ಪೂಜ್ಯ ಅಣ್ಣನಾದ ಶ್ರೀರಾಮಚಂದ್ರಮೂರ್ತಿ ಅಯೋಧ್ಯೆಗೆ ಹಿಂತಿರುಗಲು ಒಪ್ಪಲಿಲ್ಲ. ತಂದೆಯ ಆಜ್ಞೆಯಂತೆ ಹದಿನಾಲ್ಕು ವರ್ಷಗಳು ವನವಾಸಮಾಡಬೇಕೆಂಬ ಆತನ ನಿಶ್ಚಲ ಪ್ರತಿಜ್ಞೆಯನ್ನು ಕದಲಿಸುವುದು ನನ್ನಿಂದಾಗಲಿಲ್ಲ. ಆದರೆ ನಾನು ಆತನಿಗಾಗಿ ಕೊಂಡೊಯ್ದಿದ್ದ ಈ ಬಂಗಾರದ ಪಾದುಕೆಗಳನ್ನು ಆತನು ಒಮ್ಮೆ ಮೆಟ್ಟಿ ನನಗೆ ಅನುಗ್ರಹಿಸಿದ್ದಾನೆ. ಅವುಗಳನ್ನೆ ಸಿಂಹಾಸನದಲ್ಲಿ ಪ್ರತಿಷ್ಠಿಸುವುದಕ್ಕಾಗಿ ಕೊಂಡುಬಂದಿದ್ದೇನೆ” ಎಂದು ಹೇಳಿ ಅವುಗಳನ್ನು ತೋರಿಸಿದನು. ಮಹಾನುಭಾವನಾದ ಭರತನ ಈ ಮಾತುಗಳನ್ನು ಕೇಳಿ ಭರದ್ವಾಜರಿಗೆ ಪರಮಾನಂದವಾಯಿತು. ಆತನನ್ನು ಕುರಿತು ಆ ಮಹರ್ಷಿ “ಎಲಯ ಪುರುಷಶ್ರೇಷ್ಠ, ನಿನ್ನ ಶ್ರೇಷ್ಠವಾದ ಶೀಲಕ್ಕೆ ಉಚಿತವಾಗಿಯೆ ಇದೆ ನಿನ್ನ ಆಚರಣೆ. ತಗ್ಗಿನಲ್ಲಿ ನೀರು ನಿಲ್ಲುವುದು ಹೇಗೆ ಸ್ವಾಭಾವಿಕವೊ ಹಾಗೆ ಜೇಷ್ಠಾನುವರ್ತನೆ ನಿನಗೆ ಸ್ವಾಭಾವಿಕವಾಗಿದೆ. ನಿನ್ನಂತಹ ಸತ್ಪುತ್ರನನ್ನು ಪಡೆದು ದಶರಥ ಮಹಾರಾಜನು ಧನ್ಯನಾದನು. ಆತನು ಮೃತನಾದರೂ ಬದುಕಿದ್ದಂತೆಯೆ ಸರಿ” ಎಂದರು. ಭರತನು ಆತನಿಗೆ ಪ್ರದಕ್ಷಿಣ ನಮಸ್ಕಾರ ಮಾಡಿ, ಆತನಿಂದ ಬೀಳ್ಕೊಂಡು ಪಯಣದ ಮೇಲೆ ಪಯಣ ಮಾಡುತ್ತಾ ಅಯೋಧ್ಯೆಗೆ ಬಂದು ಸೇರಿದನು.

ಶ್ರೀರಾಮನ ವನಗಮನಾನಂತರ ಕಳೆಗೆಟ್ಟ ಅಯೋಧ್ಯೆ, ಆತನು ಹಿಂದಿರುಗಿ ಬರಲಿಲ್ಲ ಎಂಬುದನ್ನು ಕೇಳಿ ಮತ್ತಷ್ಟು ಕಳೆಗೆಟ್ಟಿತು. ಕಿವಿಗಿಂಪಾದ ಗಾನವಾಗಲಿ, ಮನೋಹರವಾದ ವಾದ್ಯಘೋಷವಾಗಲಿ ಎಲ್ಲಿಯೂ ಕೇಳಿಬರದು. ಮುಗುಳ್ನಗೆಯಿಂದ ಕಳಕಳಿಸುತ್ತಿದ್ದ ಮುಖಗಳೆಲ್ಲ ಈಗ ದುಃಖದಿಂದ ಮಲಿನವಾಗಿವೆ. ಪುರಜನರಲ್ಲಿ ಒಬ್ಬರಿಗಾದರೂ ಗಂಧ ಪುಷ್ಪಾದಿ ಸಿಂಗರವಸ್ತುಗಳ ಮೇಲೆ ಅಭಿಲಾಷೆಯೆ ಇಲ್ಲ. ಸೂರ್ಯನಿಲ್ಲದ ಹಗಲಿನಂತೆ ಆ ಅರಸೂರು ಹಾಳು ಸುರಿಯುತ್ತಿತ್ತು. ಭರತನಿಗೆ ತನ್ನ ಅಣ್ಣನು ಹಿಂದಿರುಗಿ ಬರುವತನಕ ಆ ಪಟ್ಟಣದಲ್ಲಿರುವುದ ಅಸಹ್ಯವೆನಿಸಿತು. ಆದ್ದರಿಂದ ನಂದಿಗ್ರಾಮವೆಂಬ ಹಳ್ಳಿಗೆ ಹೋಗಿ ಅಲ್ಲಿ ಏಕಾಂತದಲ್ಲಿದ್ದುಕೊಂಡು ಶ್ರೀರಾಮನ ಪುನರಾಗಮನವನ್ನೆ ನಿರೀಕ್ಷಿಸುತ್ತಿರಬೇಕೆಂದು ನಿಶ್ಚಯಿಸಿದನು. ತನ್ನ ಈ ಅಭಿಪ್ರಾಯವನ್ನು ವಸಿಷ್ಠರಿಗೆ ತಿಳಿಸಿ, ಅವರ ಒಪ್ಪಿಗೆಯನ್ನು ಪಡೆದು, ಆತನು ಶ್ರೀರಾಮನ ಪಾದುಕಗಳನ್ನು ತೆಗೆದುಕೊಂಡು ಮಿತಪರಿವಾರದೊಡನೆ ನಂದಿಗ್ರಾಮಕ್ಕೆ ಹೊರಟು ಹೋದನು.

ಭರತನು ನಂದಿಗ್ರಾಮವನ್ನು ಸೇರಿದೊಡನೆಯೆ ಶ್ರೀರಾಮಪಾದುಕೆಗಳನ್ನು ಸಿಂಹಾಸನದ ಮೇಲೆ ಪ್ರತಿಷ್ಠಿಸಿದನು. ಆ ಸಮಯದಲ್ಲಿ ನೆರೆದಿದ್ದ ಮಂತ್ರಿ ಸಾಮಂತರನ್ನೂ ಪುರಜನರನ್ನೂ ಕುರಿತು ಆತನು “ಎಲೈ ಮಂತ್ರಿಗಳೆ, ಪ್ರಜೆಗಳೆ, ನನ್ನ ಅಗ್ರಜನಾದ ಶ್ರೀರಾಮಚಂದ್ರನು ರಾಜ್ಯವನ್ನು ಪರಿಪಾಲಿಸುವಂತೆ ನನಗೆ ಆಜ್ಞೆಯನ್ನಿತ್ತು ಈ ಪಾದುಕೆಗಳನ್ನು ನನ್ನ ವಶಕ್ಕೆ ಒಪ್ಪಿಸಿದ್ದಾನೆ. ಇವುಗಳೇ ಇನ್ನು ಮುಂದೆ ಈ ರಾಜ್ಯದ ಯೋಗಕ್ಷೇಮವನ್ನು ವಹಿಸುತ್ತವೆ. ಛತ್ರ ಚಾಮರಗಳನ್ನು ಇವುಗಳಿಗೇ ಸಲ್ಲಿಸಿ. ನಾನು ಈ ಪವಿತ್ರಪಾದಗಳ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುತ್ತೇನೆ. ಅಣ್ಣನಾದ ರಾಮಚಂದ್ರನು ಹಿಂದಿರುಗಿದೊಡನೆಯೆ ನಾನು ರಾಜ್ಯಭಾರವನ್ನು ಆತನಿಗೆ ವಹಿಸಿ ಆತನ ಪಾದಸೇವೆಯಲ್ಲಿ ನಿರತನಾಗುತ್ತೇನೆ. ಆ ಸುದಿನವನ್ನೆ ನಾವು ನಿರೀಕ್ಷಿಸುತ್ತಿರೋಣ” ಎಂದು ಹೇಳಿದನು.

ಅಂದಿನಿಂದ ಭರತನು ಆ ಪಾದುಕೆಗಳ ಹೆಸರಿನಲ್ಲಿ ರಾಜ್ಯಭಾರ ನಡೆಸಲು ಮೊದಲುಮಾಡಿದನು. ಅಣ್ಣನು ಹಿಂದಿರುಗಿ ಬರುವ ದಿನದವರೆಗೂ ಆತನು ಜಟಾವಲ್ಕಲಧಾರಿಯಾಗಿ ನಂದಿಗ್ರಾಮದಲ್ಲಿಯೆ ವಾಸವಾಗಿದ್ದನು. ಸಾಮಂತರಾಜರಿಂದ ಬಂದ ಕಪ್ಪಕಾಣಿಕೆಗಳಾಗಲಿ, ಇತರ ಗೌರವಗಳಾಗಲಿ ಶ್ರೀರಾಮನ ಪಾದುಕೆಗಳಿಗೆ ಸಲ್ಲುತ್ತಿದ್ದುವೆ ಹೊರತು ಭರತನು ಅವುಗಳನ್ನು ಸ್ವೀಕರಿಸುತ್ತಿರಲಿಲ್ಲ. ಯಾವ ರಾಜಕಾರ್ಯವನ್ನು ನೆರವೇರಿಸಬೇಕಾದರೂ ಭರತನು ಮೊದಲು ಆ ಪಾದುಕೆಗಳಿಗೆ ನಿವೇದಿಸಿ, ತರುವಾಯ ಆ ಕಾರ್ಯವನ್ನು ಕೈಗೊಳ್ಳುವ ಸಾಧನೆಯ ಭಕ್ತಿಯೋಗವನ್ನು ಅಭ್ಯಾಸ ಮಾಡುತ್ತಿದ್ದರು.

* * *