ಪುಣ್ಯಭೂಮಿಯಾದ ಭಾರತದ ಉತ್ತರ ಭಾಗದಲ್ಲಿ ಕುರು ಎಂಬ ದೇಶವಿತ್ತು. ಹಸ್ತಿನಾಪುರ ಇದರ ರಾಜಧಾನಿ. ಪಾಂಡವರ ವಂಶದಲ್ಲಿ ಹುಟ್ಟಿದ ಪರೀಕ್ಷಿತನೆಂಬ ರಾಜನು ಈ ದೇಶವನ್ನು ಆಳುತ್ತಿದ್ದನು. ಈತನು ತುಂಬ ಧರ್ಮಾತ್ಮ ಮತ್ತು ದೈವಭಕ್ತ. ಈತನ ಹೆಂಡತಿಯ ಹೆಸರು ಮಾದ್ರವತಿ.

ಪರೀಕ್ಷಿತ ಮಹಾರಾಜನಿಗೆ ಬಹುಕಾಲದವರೆಗೆ ಮಕ್ಕಳಾಗಲಿಲ್ಲ. ತನ್ನ ಪ್ರಜೆಗಳನ್ನೇ ಮಕ್ಕಳಂತೆ ಅವನು ಪ್ರೀತಿಯಿಂದ ಪಾಲಿಸುತ್ತಿದ್ದನು. ಆದ್ದರಿಂದಲೇ ಪ್ರಜೆಗಳಿಗೂ ಆತನಲ್ಲಿ ಬಹಳ ಭಕ್ತಿ. ಆದರೂ ರಾಣಿಯಾದ ಮಾದ್ರವತಿಗೆ ಮನಸ್ಸಿನಲ್ಲಿ ಮಕ್ಕಳಿಲ್ಲವಲ್ಲ ಎಂಬ ಚಿಂತೆಯಿತ್ತು. ಆಕೆಯು ಸ್ವಾಮಿಯಾದ ಶ್ರೀಕೃಷ್ಣನನ್ನು ಸದಾ ಪೂಜಿಸಿ “ದೇವರೇ, ನಮಗೊಬ್ಬ ಸುಪುತ್ರನನ್ನು ಕೊಟ್ಟು ಕಾಪಾಡು” ಎಂದು ಬೇಡುತ್ತಿದ್ದಳು.

ಕೊನೆಗೆ ಮಾದ್ರವತಿಯ ಆಸೆ ಫಲಿಸಿತು. ಆಕೆಗೆ ತೇಜಸ್ವಿಯಾದ ಒಬ್ಬ ಮಗ ಹುಟ್ಟಿದನು. ಪ್ರಜೆಗಳಿಗೂ ರಾಜನಿಗೂ ಸಂತೋಷವಾಯಿತು. ರಾಜನು ಅನೇಕ ದಾನಧರ್ಮಗಳನ್ನು ಮಾಡಿ ಮಗನಿಗೆ ಜನಮೇಜಯ ಎಂದು ಹೆಸರಿಟ್ಟನು.

ಕಾಲಕ್ರಮದಲ್ಲಿ ಪರೀಕ್ಷಿತನಿಗೆ ಇನ್ನೂ ಮೂರು ಮಂದಿ ಪುತ್ರರಾದರು.

ಬಾಲಕ ಜನಮೇಜಯನಿಗೆ ಕಥೆ ಕೇಳುವುದೆಂದರೆ ಬಹಳ ಇಷ್ಟ ಅದೊಂದಿದ್ದರೆ ಅವನಿಗೆ ಇನ್ನೇನೂ ಬೇಡ.

ಮಾದ್ರವತಿಯು ಮಗನಿಗೆ ಎಷ್ಟೋ ಕಥೆಗಳನ್ನು ಹೇಳುತ್ತಿದ್ದಳು. ಧರ್ಮಾತ್ಮರ ಮತ್ತು ವೀರರ ಕಥೆಗಳನ್ನು ಕೇಳಿದಾಗ ತಾನೂ ಅವರಂತೆ ಆಗಬೇಕೆಂದು ಅವನಿಗೆ ಅನ್ನಿಸುತ್ತಿತ್ತು. ಪರೀಕ್ಷಿತ ಮಹಾರಾಜನನ್ನು ಕಾಣಲು ಆಗಾಗ ಬರುತ್ತಿದ್ದ ಋಷಿಗಳೂ ವಿದ್ವಾಂಸರೂ ಅನೇಕ ವಿಷಯಗಳನ್ನು ಹೇಳುತ್ತಿದ್ದರು. ಅವನ್ನೆಲ್ಲಾ ಜನಮೇಜಯ ಆಸಕ್ತಿಯಿಂದ ಕೇಳುತ್ತಿದ್ದ.

‘ನಾನೂ ಧರ್ಮಾತ್ಮನಾಗುವೆ’

ಮಾದ್ರವತಿಯು ಒಂದು ಸಂಜೆ ಪೂಜಾಮಂದಿರದಲ್ಲಿ ಶ್ರೀಕೃಷ್ಣನನ್ನು ಪೂಜಿಸುತ್ತಿದ್ದಳು. ಜನಮೇಜಯನು ತಾಯಿಯು ಮಾಡಿದಂತೆ ತಾನೂ ಶ್ರೀಕೃಷ್ಣನ ವಿಗ್ರಹಕ್ಕೆ ಹೂವುಗಳನ್ನು ಅರ್ಪಿಸಿದನು. ಆದರೆ ಮನಸ್ಸಿನಲ್ಲಿ ಸಂದೇಹ ಮೂಡಿತು. ಅವನು ತಾಯಿಯನ್ನು ಪ್ರಶ್ನಿಸಿದ :

“ಅಮ್ಮಾ, ಈ ಸ್ವಾಮಿ ಯಾರು?”

“ಮಗೂ, ಈತನೇ ಭಗವಾನ್ ಶ್ರೀಕೃಷ್ಣ, ಲೋಕವನ್ನು ಕಾಪಾಡುವ ದೇವರು. ಅಷ್ಟೇ ಅಲ್ಲ, ನಿನ್ನ ತಂದೆ ಮತ್ತು ಅಜ್ಜಂದಿರನ್ನೆಲ್ಲಾ ಕಷ್ಟಕಾಲದಲ್ಲಿ ಕಾಪಾಡಿದ ಸ್ವಾಮಿ.”

“ಅಮ್ಮಾ, ಹಾಗಾದರೆ ನೀನು ನನಗೆ ಅಜ್ಜಂದಿರ ಕಥೆ ಹೇಳಲೇ ಇಲ್ಲವಲ್ಲ?”

ಮಾದ್ರವತಿಗೆ ನಗೆ ಬಂದಿತು. ಮಗನ ಕೆನ್ನೆಗೆ ಮುದ್ದಿಟ್ಟು ಆಕೆ ಹೇಳತೊಡಗಿದಳು :

“ಜನಮೇಜಯ, ನಮ್ಮ ಈ ಹಸ್ತಿನಾಪುರದಲ್ಲಿ ಹಿಂದೆ ಧೃತರಾಷ್ಟ್ರನು ರಾಜನಾಗಿದ್ದನು. ಆತನ ತಮ್ಮನಾದ ಪಾಂಡುರಾಜನು ಅಣ್ಣನಿಗೆ ಸಹಾಯಕನಾಗಿದ್ದ. ಧೃತರಾಷ್ಟ್ರನಿಗೆ ದುರ್ಯೋಧನ ಮೊದಲಾದ ನೂರು ಮಂದಿ ಗಂಡುಮಕ್ಕಳು, ಇವರೇ ಕೌರವರು. ಪಾಂಡುರಾಜನಿಗೆ ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ ಎಂಬ ಐದೇ ಮಂದಿ ಮಕ್ಕಳು. ಇವರೇ ಪಾಂಡವರು. ಇವರೆಲ್ಲರೂ ನಿನ್ನ ಮುತ್ತಜ್ಜಂದಿರು. ಪಾಂಡುರಾಜನು ಸತ್ತ ಮೇಲೆ ಕೌರವರು ಪಾಂಡವರಿಗೆ ಅನೇಕ ಕಷ್ಟಗಳನ್ನು ಕೊಟ್ಟರು. ದುರ್ಯೋಧನನು ಅಧರ್ಮದಿಂದ ನಡೆದುಕೊಂಡ. ಪಾಂಡವರನ್ನು ಕಾಡಿಗೆ ಅಟ್ಟಿ ತಾನೇ ರಾಜನಾದ. ಅವರಿಗೆ ಕೊನೆಗೆ ಐದು ಹಳ್ಳಿಗಳನ್ನಾದರೂ ಕೊಡಲಿಲ್ಲ. ಕೊನೆಗೆ ಪಾಂಡವರಿಗೂ ಕೌರವರಿಗೂ ಕುರುಕ್ಷೇತ್ರದಲ್ಲಿ ಬಹು ದೊಡ್ಡ ಯುದ್ಧವಾಯಿತು. ಅನೇಕ ಮಂದಿ ವೀರರು ಈ ಯುದ್ಧದಲ್ಲಿ ಹೊಡೆದಾಡಿದರು. ಆಗ ಈ ಶ್ರೀಕೃಷ್ಣನೇ ಪಾಂಡವರಿಗೆ ತುಂಬ ಸಹಾಯ ಮಾಡಿದ. ಮಗೂ, ಈ ಭಯಂಕರವಾದ ಯುದ್ಧದಲ್ಲಿ ಸೈನ್ಯದ ಸಹಾಯದಿಂದ ಹೋರಾಡಿದವರೇ ಹೆಚ್ಚು ಮಂದಿ. ಆದರೆ ಒಬ್ಬ ವೀರನು ಮಾತ್ರ ಯಾರ ಸಹಾಯವೂ ಇಲ್ಲದೆ ಶತ್ರು ಸೈನ್ಯದಲ್ಲಿ ನುಗ್ಗಿ ಅನೇಕ ಮಂದಿಯನ್ನು ಧ್ವಂಸ ಮಾಡಿದ. ಆತನ ವಯಸ್ಸು ಆಗ ಹದಿನಾರೇ ವರ್ಷ!”

“ಯಾರಮ್ಮಾ ಆ ವೀರ? ಹೆಸರೇನು?” ಜನಮೇಜಯ ಕೇಳಿದ.

“ಆತ ಅರ್ಜುನನ ಮಗ. ನಿನ್ನ ತಂದೆಯ ತಂದೆ, ನಿನಗೆ ಸ್ವಂತ ಅಜ್ಜ. ಆತನ ಹೆಸರು ಅಭಿಮನ್ಯು.”

ಆ ಮಾತು ಕೇಳಿ ಜನಮೇಜಯನಿಗೆ ಹೆಮ್ಮೆಯಾಯಿತು. “ಅಬ್ಬ! ನನ್ನ ಅಜ್ಜ ಎಂತಹ ವೀರ! ಸರಿ ಸರಿ, ಆಮೇಲೆ?”

“ಆಮೇಲೇನು ಮಗೂ? ಕೌರವರು ನಾಶವಾದರು. ಧರ್ಮಾತ್ಮನಾದ ಧರ್ಮರಾಯನು ದೊರೆಯಾದನು. ಧರ್ಮರಾಯನಿಂದಲೇ ನಮಗೆ ರಾಜ್ಯ ಬಂದಿದ್ದು. ದೇವರು ಧರ್ಮಾತ್ಮರನ್ನು ಮೆಚ್ಚುತ್ತಾನೆ ಮಗೂ. ಎಷ್ಟೇ ಕಷ್ಟ ಬಂದರೂ ಧರ್ಮವನ್ನೇ ಆಚರಿಸಬೇಕು.”

ಜನಮೇಜಯನಿಗೆ ತಾನು ಆ ದಿನ ಗುರುಗಳ ಬಳಿ ಕಲಿತಿದ್ದ ಪಾಠದ ನೆನಪಾಯಿತು :

“ಹೌದಮ್ಮಾ, ಈ ದಿನ ನಮ್ಮ ಗುರುಗಳೂ ಅದನ್ನೇ ಹೇಳಿದರು- ಸತ್ಯವನ್ನೇ ಹೇಳು, ಧರ್ಮವನ್ನೇ ಆಚರಿಸು, ತಂದೆ ತಾಯಿಗಳನ್ನೂ ಗುರುಗಳನ್ನೂ ದೇವರೆಂದು ತಿಳಿ, ಇತರರನ್ನು ನೋಯಿಸದಿರುವುದೇ ಅಹಿಂಸೆಯೆಂದು ತಿಳಿ ಎಂದರು. ಅಮ್ಮಾ, ನಾನೂ ಕೂಡ ಧರ್ಮರಾಯನಂತೆ ಧರ್ಮಾತ್ಮನಾಗುವೆ……”

ಮಾದ್ರವತಿ ನಗುತ್ತಾ “ಆಗಬೇಕಪ್ಪ” ಎಂದು ಪ್ರೀತಿಯಿಂದ ಜನಮೇಜಯನನ್ನು ಮುದ್ದಾಡಿದಳು.

ಹಣ್ಣೊಳಗಿನ ಹಾವು

ಪರೀಕ್ಷಿತ ಮಹಾರಾಜನು ರಾಜಕುಮಾರನ ವಿದ್ಯಾಭ್ಯಾಸಕ್ಕೆ ಎಲ್ಲಾ ಏರ್ಪಾಟುಗಳನ್ನೂ ಮಾಡಿದ್ದನು.

ಬೆಳೆಯುವ ಪೈರು ಮೊಳಕೆಯಲ್ಲೇ ಎಂಬ ಹಾಗೆ ಜನಮೇಜನಯನ ಸದ್ಗುಣಗಳು ಎಲ್ಲರನ್ನೂ ಮೆಚ್ಚಿಸಿದ್ದುವು. ಅಷ್ಟು ಚಿಕ್ಕ ವಯಸ್ಸಿಗಾಗಲೇ ಅವನಲ್ಲಿ ಮಹಾರಾಜನಿಗೆ ಇರಬೇಕಾದ ಎಲ್ಲಾ ಗುಣಗಳೂ ಇದ್ದುವು. ಹೀಗಿರುವಾಗಲೇ ಅವನಿಗೆ ಒಂದು ದೊಡ್ಡ ಕಷ್ಟ ಬಂದಿತು.

ಪರೀಕ್ಷಿತ ಮಹಾರಾಜನು ಒಂದು ದೊಡ್ಡ ವ್ರತವನ್ನು ಮಾಡಲು ನಿರ್ಧರಿಸಿದನು. ಅದಕ್ಕಾಗಿ ಅರಮನೆಯಿಂದ ಬಹು ದೂರ ಸಮುದ್ರತೀರದಲ್ಲಿ ನೀರಿನ ನಡುವೆ ಒಂದು ಕಂಬದ ಮೇಲೆ ಪೂಜಾಮಂದಿರವನ್ನು ಕಟ್ಟಲಾಯಿತು. ರಾಜನು ಏಳು ದಿನಗಳ ಕಾಲ ಅದರಲ್ಲಿದ್ದುಕೊಂಡು ಸದಾ ದೇವರನ್ನು ಪೂಜಿಸುತ್ತಿದ್ದನು. ಶುಕನೆಂಬ ಮಹರ್ಷಿಯು ಆಗ ರಾಜನಿಗೂ ರಾಣಿಗೂ ಭಾಗವತ ಕಥೆಯನ್ನು ಹೇಳುತ್ತಿದ್ದನು.

ಏಳನೆಯ ದಿನ ಶುಕ ಮಹರ್ಷಿ ಹೊರಟುಹೋದ ಮೇಲೆ ಕೆಲವರು ಬ್ರಾಹ್ಮಣರು ಬಂದು ಪರೀಕ್ಷಿತನಿಗೆ ಕೆಲವು ಹಣ್ಣುಗಳನ್ನು ಕೊಟ್ಟು ಹೋದರು. ಪರೀಕ್ಷಿತನು ತಿನ್ನುವುದಕ್ಕಾಗಿ ಒಂದು ಹಣ್ಣನ್ನು ಎತ್ತಿಕೊಂಡನು. ಕೂಡಲೇ ಅದರೊಳಗಿನಿಂದ  ಒಂದು ಹಾವು ಹೊರಬಂದು ಅವನನ್ನು ಕಚ್ಚಿಬಿಟ್ಟಿತು. ಹಾ ದೇವರೇ ಎಂದು ರಾಜನು ನೆಲಕ್ಕೆ ಉರುಳಿದನು. ಮಾದ್ರವತಿಯು ನೋಡುತ್ತಿದ್ದಂತೆಯೇ ಆ ಹಾವು ಒಂದು ಮರದಷ್ಟು ದೊಡ್ಡದಾಗಿ ತನ್ನ ಬಾಯಿಂದ ಬೆಂಕಿಯನ್ನು ಉಗುಳಿ ಹೋಯಿತು. ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಮಂದಿರವೆಲ್ಲಾ ಧಗಧಗನೆ ಉರಿದು ಬೂದಿಯಾಯಿತು. ಮಾದ್ರವತಿಯೂ ಭಸ್ಮವಾದಳು. ಈ ಸಂಗತಿಯನ್ನು ತಿಳಿದು ಜನಮೇಜಯನು ತಮ್ಮಂದಿರೊಡನೆ ಓಡಿ ಬಂದನು. ರಾಜಪರಿವಾರದವರೂ ಪ್ರಜೆಗಳೂ ಓಡಿ ಬಂದರು.

ಜನಮೇಜಯನು ತಂದೆ-ತಾಯಿಯರಿಗಾಗಿ ತುಂಬ ಅತ್ತನು. ಮಂತ್ರಿಗಳು ಅವನನ್ನು ಸಮಾಧಾನ ಪಡಿಸುತ್ತಾ “ಯುವರಾಜ, ಕಾಲವಶದಿಂದ ಮಹಾರಾಜರು ತೀರಿಕೊಂಡರು. ಹುಟ್ಟಿದವರು ಎಂದಾದರೂ ಸಾಯಲೇಬೇಕು. ಮಹಾರಾಜರಿಗೆ ಮೊದಲೇ ಇದು ತಿಳಿದಿತ್ತು. ಶಮೀಕ ಋಷಿಯ ಮಗನಾದ ಶೃಂಗಿಯೆಂಬ ಮುನಿಯು ಏಳು ದಿನಗಳೊಳಗಾಗಿ ಸಾಯುವಂತೆ ಮಹಾರಾಜರಿಗೆ ಶಾಪವಿತ್ತಿದ್ದನು. ಮಹಾತ್ಮರ ವಾಕ್ಯದಂತೆ ಎಲ್ಲವೂ ನಡೆದು ಹೋಯಿತು. ಧರ್ಮಾತ್ಮರಾದ ಪರೀಕ್ಷಿತ ಮಹಾರಾಜರು ತೀರಿಕೊಂಡರೂ ಅವರ ಕೀರ್ತಿ ಶಾಶ್ವತ. ಇನ್ನು ಈ ರಾಜ್ಯಕ್ಕೆ ನೀವೇ ದಿಕ್ಕು” ಎಂದು ಹೇಳಿ ಜನಮೇಜಯನನ್ನು ಅರಮನೆಗೆ ಕರೆತಂದರು.

ಜನಮೇಜಯ ಮಹಾರಾಜ

ಜನಮೇಜಯನಿಗೆ ಪಟ್ಟಾಭಿಷೇಕವಾಯಿತು. ಚಿಕ್ಕ ವಯಸ್ಸಿನಲ್ಲೇ ಇಡೀ ಕುರುದೇಶದ ಮಹಾರಾಜನಾದನು.

ಕುರುದೇಶದ ಅಧೀನದಲ್ಲಿ ಸುತ್ತಮುತ್ತಲೂ ಚಿಕ್ಕ ಚಿಕ್ಕ ರಾಜ್ಯಗಳಿದ್ದವು. ಅವರು ಚಿಕ್ಕವಯಸ್ಸಿನವನಾದ ಜನಮೇಜಯನನ್ನು ಸೋಲಿಸಲು ಸಂಚು ಮಾಡಿದರು. ಆದರೆ ವೀರನಾದ ಜನಮೇಜಯನ ಮುಂದೆ ಅವರ ಆಟ ಸಾಗಲಿಲ್ಲ. ಅವನು ಸೈನ್ಯದೊಡನೆ ಹೊರಟು ರಾಜರ ಪುಂಡಾಟವನ್ನು ಅಡಗಿಸಿದನು.

ಜನಮೇಜಯನು ವಪುಷ್ಟಮೆ ಎಂಬ ರಾಜಕುಮಾರಿಯನ್ನು ಮದುವೆಯಾದ. ಅವಳೂ ಅವನಿಗೆ ತಕ್ಕ ಪತ್ನಿ.

ಜನಮೇಜಯನು ಪ್ರಜಾಕ್ಷೇಮಕ್ಕಾಗಿ ಅನೇಕ ಯಜ್ಞ ಯಾಗಗಳನ್ನೂ ದಾನಧರ್ಮಗಳನ್ನೂ ಮಾಡಿದನು. ತನ್ನ ರಾಜ್ಯದಲ್ಲಿ ಯಾರೂ ದುಃಖ ಪಡಬಾರದೆಂದು ಅವನ ಇಚ್ಛೆ.

ನಾಯಿಯ ಮರಿಗೆ ಅನ್ಯಾಯ – ಪ್ರಾಯಶ್ಚಿತ್ತ

ಒಂದು ಸಲ ಕುರುಕ್ಷೇತ್ರದಲ್ಲಿ ಒಂದು ದೊಡ್ಡ ಯಾಗವು ನಡೆಯಿತು. ಜನಮೇಜಯನು ಯಜ್ಞ ಮಂಟಪದ ರಕ್ಷಣೆಗೆ ತನ್ನ ಮೂವರು ತಮ್ಮಂದಿರನ್ನೂ ನೇಮಿಸಿದ್ದನು.

ಸಾರಮೇಯವೆಂಬ ಒಂದು ನಾಯಿಮರಿಯು ಮಧ್ಯಾಹ್ನ ಯಜ್ಞಮಂಟಪದ ಬಳಿಗೆ ಬಂದಿತು. ಅದು ದೂರದಲ್ಲೇ ನಿಂತಿದ್ದರೂ ಜನಮೇಜಯನ ತಮ್ಮಂದಿರು ಅದನ್ನು ಹಿಡಿದು ಬೆತ್ತದಿಂದ ಬಾಸುಂಡೆ ಬರುವಂತೆ ಹೊಡೆದರು. ಅದಕ್ಕೆ ಮೈತುಂಬ ಗಾಯಗಳಾಗಿ ರಕ್ತ ಸುರಿಯತೊಡಗಿತು. ಸಾರಮೇಯವು ನೋವಿನಿಂದ ಅಳುತ್ತಾ ತನ್ನ ತಾಯಿಯಾದ ಸರಮೆಯ ಬಳಿಗೆ ಓಡಿತು.

ತನ್ನ ಮರಿಗಾಗಿ ಕಾಯುತ್ತಾ ಒಂದು ಮರದ ಬಳಿ ಸರಮೆ ಕುಳಿತಿತ್ತು. ತನ್ನ ಮರಿಯ ಮೈಯಲ್ಲಿ ಗಾಯಗಳನ್ನೂ ರಕ್ತವನ್ನೂ ಕಂಡು ಸರಮೆಗೆ ಬಹಳ ದುಃಖವಾಯಿತು. ಅದು ಪ್ರೀತಿಯಿಂದ ಮಗನ ಮೈಯನ್ನು ಸವರಿ “ಮಗೂ, ನಿನ್ನನ್ನು ಯಾರು ಹೊಡೆದರು? ನೀನು ಏನು ತುಂಟತನ ಮಾಡಿದೆ?” ಎಂದು ಕೇಳಿತು. ಸಾರಮೇಯವು ನಡೆದ ಸಂಗತಿಯನ್ನು ವಿವರಿಸಿ, “ಅಮ್ಮಾ, ನಾನು ಯಾವ ತುಂಟತನವನ್ನೂ ಮಾಡಲಿಲ್ಲ. ಸುಮ್ಮನೆ ದೂರದಲ್ಲಿ ನಿಂತಿದ್ದೆ. ಅಲ್ಲಿನ ಪದಾರ್ಥಗಳನ್ನು ಕಣ್ಣೆತ್ತಿಯೂ ನೋಡಲಿಲ್ಲ. ಆದರೂ ರಾಜನ ತಮ್ಮಂದಿರು ನನ್ನನ್ನು ಹೊಡೆದರು” ಎಂದಿತು. 

'ಮಹಾರಾಜ, ನನ್ನ ಮಗನನ್ನು ಏಕೆ ಹೊಡೆದಿರಿ?'

ಸರಮೆಗೆ ಕೋಪ ಬಂದಿತು. ಮಗನೊಡನೆ ಅದು ಕೂಡಲೇ ಯಜ್ಞಮಂಟಪಕ್ಕೆ ಬಂದಿತು. ಜನಮೇಜಯನ ಎದುರಿನಲ್ಲೇ ನಿಂತು, “ಮಹಾರಾಜ, ನಿನ್ನ ತಮ್ಮಂದಿರು ಮಾಡಿರುವ ಕೆಲಸವನ್ನು ನೋಡು. ನನ್ನ ಮಗನನ್ನು ಏಕೆ ಹೊಡೆದಿರಿ?” ಎಂದಿತು.

ರಕ್ತ ಸುರಿಸುತ್ತಿರುವ ಮರಿಯನ್ನು ಕಂಡು ಜನಮೇಜಯನಿಗೂ ಸಹ ಅಯ್ಯೋ ಪಾಪ ಅನಿಸಿತು. ಅವನ ತಮ್ಮಂದಿರು ತಮ್ಮ ತಪ್ಪಿಗಾಗಿ ತಲೆಬಾಗಿ ನಿಂತಿದ್ದರು. ರಾಜನಿಗೆ ಏನು ಹೇಳುವುದಕ್ಕೂ ತೋಚಲಿಲ್ಲ. ಅಷ್ಟರಲ್ಲೇ ಸರಮೆಯು “ಮಹಾರಾಜ, ನಿರಪರಾಧಿಯಾದ ನನ್ನ ಮಗನನ್ನು ಹೊಡೆಸಿದ್ದೀರಿ. ಇದಕ್ಕೆ ತಕ್ಕ ಶಿಕ್ಷೆಯನ್ನು ದೇವರು ನಿಮಗೂ ವಿಧಿಸುತ್ತಾನೆ” ಎಂದು ಹೇಳಿ ಹೊರಟು ಹೋಯಿತು.

ಜನಮೇಜಯನಿಗೆ ತುಂಬಾ ದುಃಖವಾಯಿತು. ತಮ್ಮಂದಿರು ಮಾಡಿದ ತಪ್ಪನ್ನು ಅವನು ತನ್ನದಾಗಿಯೇ ಭಾವಿಸಿದನು. ಸೋಮಶ್ರವನೆಂಬ ಪುರೋಹಿತನನ್ನು ಕರೆಸಿ ಶಾಂತಿಪೂಜೆಯನ್ನು ಮಾಡಿಸಿದನು. ನಿಷ್ಕಾರಣವಾಗಿ ಪ್ರಾಣಿಗಳನ್ನು ಹಿಂಸಿಸುವುದು ಮಹಾಪಾಪ. ಆದ್ದರಿಂದ ಮುಂದೆ ತನ್ನ ರಾಜ್ಯದಲ್ಲಿ ಸಾಧು ಪ್ರಾಣಿಗಳನ್ನು ಯಾರೂ ಹಿಂಸಿಸಕೂಡದೆಂದು ಡಂಗುರ ಹಾಕಿಸಿದನು.

ಇದೇ ಸಮಯಕ್ಕೆ ತಕ್ಷಶಿಲೆಯಲ್ಲಿ ಗಲಭೆಗಳಾದವು. ಶತ್ರುರಾಜರ ಸೈನ್ಯಗಳು ಆ ನಗರದೊಳಕ್ಕೆ ನುಗ್ಗಿ ಬಡವರಾದ ಪ್ರಜೆಗಳನ್ನು ಹೊಡೆದು ಬಡಿದು ಸಂಪತ್ತನ್ನು ದೋಚಿಕೊಳ್ಳತೊಡಗಿದುವು. ಅಲ್ಲಿನ ಜನರು ಹಾಹಾಕಾರ ಮಾಡಿದರು. ಜನಮೇಜಯನಿಗೆ ಸರಮೆಯ ಮಾತು ಜ್ಞಾಪಕಕ್ಕೆ ಬಂದಿತು. ಒಂದು ಸಾಧು ಪ್ರಾಣಿಯನ್ನು ಹಿಂಸಿಸಿದ್ದಕ್ಕೆ ಇಷ್ಟೊಂದು ಆಪತ್ತು ಬಂದಿತೆಂದು ಅವನಿಗೆ ಆಶ್ಚರ್ಯವಾಯಿತು. ಅವನು ಶತ್ರುಗಳನ್ನು ಸೋಲಿಸಿ ಓಡಿಸಿದನು. ಸ್ವಲ್ಪ ಕಾಲ ತಕ್ಷಶಿಲೆಯಲ್ಲಿ ಹೆಂಡತಿಯೊಡನೆ ನಿಂತನು.

ತಕ್ಷಕ ನಿನ್ನ ವೈರಿ

ಜನಮೇಜಯ ಮಹಾರಾಜನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ರಾಜನು ಅನೇಕ ದಾನಗಳನ್ನು ಮಾಡಿ, ಮಕ್ಕಳಿಗೆ ಶತಾನೀಕ ಮತ್ತು ಶಂಕುಕರ್ಣರೆಂದು ಹೆಸರಿಟ್ಟನು.

ಒಂದು ದಿನ ಉತ್ತಂಕನೆಂಬ ಋಷಿಯು ಅರಮನೆಗೆ ಬಂದನು. ಜನಮೇಜಯನು ಋಷಿಯನ್ನು ವಿನಯದಿಂದ ಕೇಳಿದನು- “ಮಹಾತ್ಮ, ತಮ್ಮ ಬರುವಿಕೆಯಿಂದ ನನ್ನ ಮನೆ ಪಾವನವಾಯಿತು. ನನ್ನಿಂದ ತಮಗೆ ಏನಾಗಬೇಕು?”

“ಮಹಾರಾಜ, ಋಷಿಗಳಾದ ನಮಗೆ ಯಾರ ಮೇಲೂ ವೈರವಿಲ್ಲ. ಆದರೆ ನಾಗಲೋಕದ ತಕ್ಷಕನು ಗರ್ವದಿಂದ ನನಗೆ ಅಪಕಾರ ಮಾಡಿದ್ದಾನೆ. ದುರ್ಜನರನ್ನು ಶಿಕ್ಷಿಸಬೇಕಾದುದು ರಾಜನ ಕರ್ತವ್ಯ. ಆದ್ದರಿಂದ ನೀನು ಅವನನ್ನು ಶಿಕ್ಷಿಸಿ ಬುದ್ಧಿ ಕಲಿಸು.”

“ಮಹಾತ್ಮರೇ, ಅವನು ಮಾಡಿದ ಅಪರಾಧವೇನು?”

“ಕೇಳು, ನಾನು ಗುರುವಿನ ಬಳಿ ವೇದಗಳನ್ನೆಲ್ಲ ಕಲಿತೆ. ಗುರುವಿಗೆ ಗುರುದಕ್ಷಿಣೆ ಕೊಡಬೇಕಾಯಿತು. ಅದಕ್ಕಾಗಿ ಒಬ್ಬ ರಾಜನನ್ನು ಬೇಡಿ, ಕಿವಿಯಲ್ಲಿ ಧರಿಸುವ ಕುಂಡಲಗಳನ್ನು ಪಡೆದುಕೊಂಡೆ. ಗುರುವಿಗೆ ಅವನ್ನು ಕೊಡಲೆಂದು ತರುತ್ತಿರುವಾಗ ಬಾಯಾರಿಕೆಯಾಯಿತು. ಒಂದು ಬಾವಿಯ ದಡದಲ್ಲಿ ಕುಂಡಲಗಳನ್ನಿಟ್ಟು ನಾನು ನೀರು ಕುಡಿಯುತ್ತಿರುವಾಗ, ಈ ದುಷ್ಟನಾದ ತಕ್ಷಕನು ನನಗೆ ಗೊತ್ತಾಗದಂತೆ ಅವನ್ನು ಕದ್ದುಕೊಂಡು ನಾಗಲೋಕಕ್ಕೆ ಹೊರಟುಹೋದನು. ನಾನು ದುಃಖದಿಂದ ಎಲ್ಲೆಲ್ಲೋ ಹುಡುಕಿ ಕೊನೆಗೆ ನಾಗಲೋಕಕ್ಕೆ ಹೋಗಬೇಕಾಯಿತು. ನಾಗರಾಜನು ನನಗೆ ಕುಂಡಲಗಳನ್ನೇನ್ನೋ ಕೊಟ್ಟನು. ಆದರೆ ತಕ್ಷಕನಿಗೆ ಯಾವ ಶಿಕ್ಷೆಯನ್ನೂ ಕೊಡಲಿಲ್ಲ. ನೀನೇ ಹೇಳು, ಇದು ಸರಿಯೇ?”

ಜನಮೇಜಯನು ಯೋಚಿಸುತ್ತಾ “ತಕ್ಷಕನು ಅಪರಾಧಿಯೆಂಬ ಮಾತೇನೋ ಸರಿ. ಆದರೆ ಅವನು ಸರ್ಪಗಳ ಲೋಕದವನು. ತಮ್ಮ ಮಾತಿನಂತೆ ನಾಗರಾಜನು ಅವನನ್ನು ಶಿಕ್ಷಿಸಬೇಕಾಗಿತ್ತು. ನಾಗಲೋಕದ ಪ್ರಜೆಯ ಮೇಲೆ ನಮಗೆ ಅಧಿಕಾರವಿಲ್ಲ. ಅಂದಮೇಲೆ ತಕ್ಷಕನನ್ನು ಶಿಕ್ಷಿಸುವುದೆಂದರೆ ನಾಗಲೋಕದವರ ಮೇಲೆ ವೈರ ಕಟ್ಟಿದಂತಾಗುತ್ತದೆ. ನಮ್ಮ ರಾಜ್ಯದೊಳಕ್ಕೆ ಬಂದು ತಕ್ಷಕನು ಯಾವ ತಪ್ಪೂ ಮಾಡದಿರುವಾಗ ಇದೆಲ್ಲಾ ಸಾಧ್ಯವೇ?” ಎಂದನು.

ಉತ್ತುಂಕ ಋಷಿ ಮತ್ತೆ ಹೇಳಿದ: “ಜನಮೇಜಯ, ತಕ್ಷಕನು ನನಗೆ ಅಪರಾಧಿ. ಆದರೆ ಅವನು ನಿನಗೆ ವೈರಿ. ಧರ್ಮಾತ್ಮನಾದ ನಿನ್ನ ತಂದೆಯನ್ನು ಕಚ್ಚಿ ಕೊಂದ ವಿಷ ಸರ್ಪ ಈ ತಕ್ಷಕನೇ ಅಲ್ಲವೆ? ತಂದೆಯನ್ನೇ ಕೊಂದ ಈ ದ್ರೋಹಿಯನ್ನು ಶಿಕ್ಷಿಸಿ ತಂದೆಯ ಋಣ ತೀರಿಸದಿದ್ದರೆ ನೀನು ವೀರಪುತ್ರನಾಗಿ ಹುಟ್ಟಿದ್ದಕ್ಕೆ ಏನು ಸಾರ್ಥಕ?”

ಜನಮೇಜಯನು ಆಶ್ಚರ್ಯದಿಂದ “ನನ್ನ ತಂದೆಗೆ ಶಮೀಕ ಋಷಿಯ ಮಗನಾದ ಶೃಂಗಿಯಿಂದ ಶಾಪವಿತ್ತೆಂದು ಕೇಳಿದ್ದೆನಲ್ಲ?” ಎಂದನು.

“ಜನಮೇಜಯ, ಶಾಪವು ಕೇವಲ ನೆಪಮಾತ್ರ. ನಿನ್ನ ತಂದೆಯನ್ನು ಔಷಧದಿಂದ ಉಳಿಸಲು ಕಾಶ್ಯಪನೆಂಬ ವಿಷ ವೈದ್ಯನು ಬರುತ್ತಿದ್ದ. ತಕ್ಷಕನು ಅವನಿಗೆ ಹಣವನ್ನು ಕೊಟ್ಟು ಬರದಂತೆ ಮಾಡಿದ. ಇಲ್ಲದಿದ್ದರೆ ಧರ್ಮಾತ್ಮನೂ ದೈವಭಕ್ತನೂ ಆದ ನಿನ್ನ ತಂದೆ ಸಾಯುತ್ತಿದ್ದನೆ? ಒಟ್ಟಿನಲ್ಲಿ ನನಗೆ ತೋಚಿದ್ದು ಹೇಳಿದ್ದೇನೆ. ನಿನ್ನಿಷ್ಟ ಬಂದಂತೆ ಮಾಡು” ಎಂದು ಹೇಳಿ ಉತ್ತಂಕ ಋಷಿ ಹೊರಟುಹೋದನು.

ಈ ಮಾತುಗಳನ್ನು ಕೇಳಿ ಜನಮೇಜಯನಿಗೆ ಬಹಳ ದುಃಖವಾಯಿತು, ಕೋಪ ಬಂದಿತು.

ಆಗ ಮಂತ್ರಿಗಳೂ ಸಹ ಜನಮೇಜಯನನ್ನು ಕುರಿತು “ಪ್ರಭೂ, ಋಷಿ ಹೇಳಿದ್ದೆಲ್ಲವೂ ನಿಜ. ತಮಗೆ ತಿಳಿದರೆ ದುಃಖವಾಗುವುದೆಂದು ಆಗ ನಾವು ಹೇಳಲಿಲ್ಲ” ಎಂದರು.

ಮಂತ್ರಿಗಳ ಮಾತು ಮುಗಿಯುತ್ತಿದ್ದಂತೆ ಜನಮೇಜಯನ ಕೋಪ ಕೆರಳಿತು. ರೋಷದಿಂದ ಕಿಡಿಕಿಡಿಯಾಗಿ ಕಟಕಟನೆ ಹಲ್ಲು ಕಡಿದನು. ಅರಮನೆಯೆಲ್ಲಾ ನಡುಗುವಂತೆ ಅವನು ಗರ್ಜಿಸಿದನು –

“ಎಲಾ ದ್ರೋಹಿಯಾದ ತಕ್ಷಕ! ನಿನಗೆ ನನ್ನ ತಂದೆ ಮಾಡಿದ್ದ ಅಪರಾಧವಾದರೂ ಏನು? ಆತನು ಬದುಕಿದ್ದರೆ ನಿನಗಾಗುತ್ತಿದ್ದ ನಷ್ಟವೇನು? ನೀನಂತೂ ವಿಷಜಂತು. ಆದರೆ ಉಪಕಾರ ಮಾಡಲು ಬರುತ್ತಿದ್ದ ವೈದ್ಯನನ್ನು ಬರದಂತೆ ಮಾಡಿದ ದ್ರೋಹಕ್ಕಾಗಿ ನಿನಗೆ ಶಿಕ್ಷೆ ಮಾಡಿಯೇ ತೀರುತ್ತೇನೆ. ನಾಗಲೋಕದ ಎಲ್ಲಾ ವಿಷಸರ್ಪಗಳನ್ನೂ ಧ್ವಂಸ ಮಾಡಿ ಪ್ರಜೆಗಳಿಗೆ ಸರ್ಪಭಯವೇ ಇಲ್ಲದಂತೆ ಮಾಡುತ್ತೇನೆ. ದೇವತೆಗಳೂ ಅವರ ಒಡೆಯನಾದ ದೇವೇಂದ್ರನೇ ಅಡ್ಡ ಬಂದರೂ ನನ್ನನ್ನು ತಡೆಯಲಾರರು!”

ಈ ಧೀರಪ್ರತಿಜ್ಞೆಯ ವಿಷಯ ಲೋಕಗಳಿಗೆಲ್ಲ ಹರಡಿತು. ದೇವತೆಗಳೂ ಸಹ ‘ಅಬ್ಬ’ ಎಂದು ಆಶ್ಚರ್ಯಪಟ್ಟರು. ನಾಗಲೋಕದಲ್ಲೂ ಭಯ ಆವರಿಸಿತು. ನಾಗರಾಜನಾದ ವಾಸುಕಿಯು ಹೆದರಿದನು. ಅವನು ತಕ್ಷಕನನ್ನು ಕರೆಸಿ, “ನಿನ್ನ ಕಾರಣದಿಂದ ಈಗ ನಾಗಲೋಕಕ್ಕೇ ಆಪತ್ತು ಬಂದಿದೆ. ಜನಮೇಜಯನ ಪ್ರತಿಜ್ಞೆ ಎಂದಿಗೂ ವ್ಯರ್ಥವಾಗುವುದಿಲ್ಲ. ನೀನು ಇನ್ನು ಎಲ್ಲಾದರೂ ಹೋಗು” ಎಂದುಬಿಟ್ಟನು.

ಸರ್ಪಯಾಗ

ಜನಮೇಜಯನು ಸರ್ಪಗಳ ನಾಶಕ್ಕಾಗಿ ನಾಗಯಜ್ಞವನ್ನು ಮಾಡಲು ತೀರ್ಮಾನಿಸಿದ. ಯಜ್ಞಕ್ಕೆ ಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸುವಂತೆ ಮಂತ್ರಿಗಳಿಗೆ ಅಪ್ಪಣೆ ಮಾಡಿದ.

ತಕ್ಷಕನು ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನ ಸ್ನೇಹಿತನಾದ ಇಂದ್ರನ ಮನೆಯಲ್ಲಿ ಅವಿತುಕೊಂಡನು.

ನಾಗಯಜ್ಞವು ಪ್ರಾರಂಭವಾಯಿತು.

ಸರ್ಪಗಳ ಆಹುತಿಗೆ ಆರಂಭವಾಯಿತು. ಕೆಲವು ಚಿಕ್ಕ ಹಾವುಗಳು, ಇನ್ನು ಕೆಲವು ಆನೆಯ ಸೊಂಡಿಲಿಗಿಂತಲೂ ದೊಡ್ಡವು, ಕೆಲವಂತೂ ಒಂದು ಮರದಷ್ಟು ಗಾತ್ರ ಎಲ್ಲವೂ ಬಂದುಬಂದು ಬೆಂಕಿಗೆ ಬಿದ್ದು ಬೂದಿಯಾಗತೊಡಗಿದುವು. ತಲೆ-ಬಾಲಗಳನ್ನು ಬಡಿಯುತ್ತಾ ಒದ್ದಾಡುವಾಗ ಅವು ಮಾಡುವ ಬುಸ್ ಬುಸ್ ಎಂಬ ಭಯಂಕರ ಶಬ್ದ ಅಲ್ಲೆಲ್ಲಾ ತುಂಬಿಹೋಯಿತು. ನಾಗಲೋಕದ ಲಕ್ಷಾಂತರ ಸರ್ಪಗಳು ಹೀಗೆ ನಾಶವಾದುವು.

ಇಷ್ಟಾದರೂ ತಕ್ಷಕನು ಏಕೆ ಕಾಣಿಸುತ್ತಿಲ್ಲವೆಂದು ಜನಮೇಜಯನಿಗೆ ಯೋಚನೆಯಾಯಿತು. ಅಷ್ಟರಲ್ಲಿ ಹೋಮ ಕುಂಡದಲ್ಲಿ ಅಗ್ನಿದೇವನು ಪ್ರತ್ಯಕ್ಷನಾಗಿ “ಇಂದ್ರನು ತಕ್ಷಕನನ್ನು ತನ್ನ ಬಳಿ ರಕ್ಷಿಸಿಕೊಂಡಿದ್ದಾನೆ” ಎಂದು ಹೇಳಿ ಮತ್ತೆ ಬೆಂಕಿಯ ರೂಪ ತಾಳಿದನು. 

'ನಿಲ್ಲು ನಿಲ್ಲು' ಎಂದು ಯಾರೋ ಕೂಗಿದಂತಾಯಿತು.

ಜನಮೇಜಯನಿಗೆ ಇಂದ್ರನ ನಡತೆ ಸರಿಬೀಳಲಿಲ್ಲ. “ದುಷ್ಟರಿಗೆ ಸಹಾಯ ಮಾಡುವುದು ಅಪರಾಧ. ಇಂದ್ರನು ತಕ್ಷಕನನ್ನು ಕೈಬಿಡದಿದ್ದರೆ ಅವರಿಬ್ಬರನ್ನೂ ಜೊತೆಯಾಗಿಯೇ ಅಗ್ನಿಯಲ್ಲಿ ಬೀಳಿಸಿರಿ” ಎಂದನು.

ಈಗ ಹೋಮ ಮಾಡುತ್ತಲೇ ಮಂತ್ರಶಕ್ತಿಯು ಇಂದ್ರನನ್ನೂ ತಕ್ಷಕನನ್ನೂ ಎಳೆದುಬಿಟ್ಟಿತು. ಅವರಿಬ್ಬರೂ ಆಕಾಶದಲ್ಲಿ ಕಾಣಿಸಿದರು. ಕೂಡಲೇ ಇಂದ್ರನು ಹೆದರಿ ತಕ್ಷಕನನ್ನು ಕೈಬಿಟ್ಟು ಹೊರಟುಹೋದನು.

ಇಂದ್ರನ ಕೈಯಿಂದ ಜಾರುತ್ತಲೇ ತಕ್ಷಕನು ಭಯದಿಂದ ‘ಅಯ್ಯೋ’ ಎಂದು ಕಿರಿಚಿದನು. ಅವನಿಗೆ ಜ್ಞಾನ ತಪ್ಪಿಹೋಗಿತ್ತು. ತಲೆಕೆಳಗಾಗಿ ಆಕಾಶದಿಂದ ಬೀಳತೊಡಗಿದನು. ಅವನ ಘೋರವಾದ ಸರ್ಪಾಕಾರವನ್ನು ಕಂಡು ಎಲ್ಲರೂ ದಿಗಿಲು ಬಿದ್ದರು. ಅವನು ಬೆಟ್ಟಗಳು ನಡುಗುವಂತೆ ಶಬ್ದ ಮಾಡುತ್ತಿದ್ದನು. ಅವನು ಬುಸಬುಸನೆ ಬಿಟ್ಟ ಗಾಳಿಗೆ ಮರಗಳೇ ಉರುಳಿದುವು.

ಇನ್ನೇನು ಬೆಂಕಿಯೊಳಕ್ಕೆ ತಕ್ಷಕನು ಬೀಳಬೇಕು, ಆ ವೇಳೆಗೆ ‘ನಿಲ್ಲು ನಿಲ್ಲು’ ಎಂದು ಯಾರೋ ಕೂಗಿ ಹೇಳಿದಂತಾಯಿತು. ತಕ್ಷಕನ ಶರೀರ ಹಾಗೆಯೇ ಮೇಲ್ಭಾಗದಲ್ಲಿ ನಿಂತಿತು. ಜನಮೇಜಯನು ಆಶ್ಚರ್ಯದಿಂದ ‘ಯಾರದು?’ ಎಂದು ತಿರುಗಿ ನೋಡಿದನು. ಎದುರಿನಲ್ಲಿ ಒಬ್ಬ ತೇಜಸ್ವಿಯಾದ ಬಾಲತಪಸ್ವಿಯು ನಿಂತಿದ್ದನು. ಅಲ್ಲಿದ್ದ ಜನರೆಲ್ಲರೂ ಕೇಳುವಂತೆ ಅವನು ಹೇಳತೊಡಗಿದನು :

“ಜನಮೇಜಯ ಮಹಾರಾಜನೇ, ನೀನು ತಂದೆಯನ್ನು ಮೀರಿಸಿದ ಧರ್ಮಾತ್ಮ. ರಾಜನೇ, ನನ್ನ ಹೆಸರು ಆಸ್ತೀಕ. ಪರೋಪಕಾರಕ್ಕಾಗಿ ನಾನೂ ಸಹ ನಿನ್ನಲ್ಲಿ ಒಂದು ವರವನ್ನು ದಾನವಾಗಿ ಬೇಡಲು ಬಂದಿದ್ದೇನೆ!”

ವಯಸ್ಸು ತುಂಬಾ ಚಿಕ್ಕದಾದರೂ ಜ್ಞಾನ ಮುಖ್ಯವಲ್ಲವೆ? ಜನಮೇಜಯನು ಆತನನ್ನು ಹುಡುಗನೆಂದು ತಿರಸ್ಕಾರ ಮಾಡಲಿಲ್ಲ. ಬಹಳ ಗೌರವದಿಂದ ಅವನನ್ನು ಮಣೆಯ ಮೇಲೆ ಕುಳ್ಳಿರಿಸಿ,

“ಮಹಾನುಭಾವ, ನೋಡುವುದಕ್ಕೆ ತಾವು ಬಾಲಕನಂತಿದ್ದರೂ ಮಾತುಗಳಿಂದ ಜ್ಞಾನಿಗಳಾಗಿದ್ದೀರಿ. ದೇವರು ನಿಮ್ಮ ರೂಪದಲ್ಲಿ ಬಂದನೆಂದೇ ಭಾವಿಸಿದ್ದೇನೆ. ಏನು ಬೇಕೋ ಕೇಳಿರಿ. ಅದು ಏನೇ ಆಗಲಿ, ಕೊಡುತ್ತೇನೆ!” ಎಂದನು.

“ವೀರ ಜನಮೇಜಯ, ಈ ಯಜ್ಞದಿಂದ ಸ್ವರ್ಗದಲ್ಲಿರುವ ನಿನ್ನ ತಂದೆಯ ಋಣ ತೀರಿಸಿದ್ದೀಯೆ. ನಾಗಲೋಕದಲ್ಲಿದ್ದ ವಿಷಸರ್ಪಗಳನ್ನು ಕೊಂದು ಪ್ರಜೆಗಳಿಗೂ ಉಪಕಾರ ಮಾಡಿದ್ದೀಯೆ. ನಿನ್ನ ಯಜ್ಞವು ಮುಂದುವರಿದರೆ ನಾಗಲೋಕದಲ್ಲಿ ಈಗ ಉಳಿದಿರುವ ಸಜ್ಜನರೂ ನಾಶವಾಗುತ್ತಾರೆ. ಇದು ಸರಿಯಲ್ಲ. ಯಜ್ಞವನ್ನು ನಿಲ್ಲಿಸು, ತಕ್ಷಕನನ್ನು ಬಿಟ್ಟುಬಿಡು. ಇದೇ ನಾನು ಬೇಡುವ ವರ.”

ಆಸ್ತೀಕನು ಮತ್ತಾರೂ ಅಲ್ಲ, ನಾಗರಾಜನಾದ ವಾಸುಕಿಯ ತಂಗಿಯ ಮಗ. ನಾಗಲೋಕವನ್ನು ರಕ್ಷಿಸುವುದಕ್ಕಾಗಿ ನಾಗರಾಜನು ಸೋದರಳಿಯನ ಸಹಾಯ ಬೇಡಿದನು. ವೇದಗಳನ್ನೋದಿ ಜ್ಞಾನಿಯಾಗಿದ್ದ ಆಸ್ತೀಕನು ಪರೋಪಕಾರವೇ ಧರ್ಮವೆಂದು ತಿಳಿದವನು. ಆದ್ದರಿಂದ ಜನಮೇಜಯನಲ್ಲಿ ಹೀಗೆ ವರವನ್ನು ಕೇಳಿದನು.

ಜನಮೇಜಯನಿಗೆ ದಿಕ್ಕು ತೋರಲಿಲ್ಲ. ಬೇರೆ ಏನು ಕೊಟ್ಟರೂ ಆಸ್ತೀಕನು ಒಪ್ಪುವಂತಿಲ್ಲ. ಕೊನೆಗೆ ಜನಮೇಜಯನು ಶಾಂತನಾಗಿ, “ಸತ್ಯವೇ ದೇವರೆಂದು ವೇದ ಶಾಸ್ತ್ರಗಳು ಹೇಳುತ್ತವೆ. ಕೊಟ್ಟ ಮಾತಿಗೆ ನಾನು ತಪ್ಪುವುದಿಲ್ಲ. ಸಜ್ಜನರಿಗೆ ನನ್ನಿಂದ ಹಿಂಸೆಯಾಗುವುದು ಬೇಡ. ಈ ಯಜ್ಞ ನಿಲ್ಲಲಿ, ಆಸ್ತೀಕಮುನಿಯ ಮನಸ್ಸು ತೃಪ್ತವಾಗಲಿ” ಎಂದನು.

ಇನ್ನೂ ಯಾರೂ ಕೇಳದ ಮಹಾಭಾರತದ ಕಥೆ

ಆ ವೇಳೆಗೆ ಬದರಿಕಾಶ್ರಮದಿಂದ ಭಗವಾನ್ ವ್ಯಾಸರು ತಮ್ಮ ಶಿಷ್ಯರೊಡನೆ ಅಲ್ಲಿಗೆ ಬಂದರು. ರಾಜನು ಪರಿವಾರದೊಡನೆ ಅವರನ್ನು ಎದುರುಗೊಂಡು ಬರಮಾಡಿಕೊಂಡನು. ವ್ಯಾಸರು ಕುಳಿತ ಮೇಲೆ ಜನಮೇಜಯನು ಅವರ ಪಾದಗಳ ಬಳಿ ಕುಳಿತನು.

ವ್ಯಾಸಮಹರ್ಷಿಗಳ ಪೂರ್ಣವಾದ ಹೆಸರು ಕೃಷ್ಣದ್ವೈಪಾಯನ ವ್ಯಾಸ. ಈ ಮಹರ್ಷಿಯೇ ಒಂದಾಗಿದ್ದ ವೇದವನ್ನು ನಾಲ್ಕು ಭಾಗವಾಗಿ ವಿಂಗಡಿಸಿ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದಗಳೆಂದು ಹೆಸರಿಟ್ಟರು. ಪುರಾಣಗಳನ್ನೂ ಬೋಧಿಸಿದ್ದರು. ಇವರೇ ‘ಮಹಾಭಾರತ’ ಗ್ರಂಥವನ್ನು ರಚಿಸಿ ವೈಶಂಪಾಯನ ಮುನಿಯೆಂಬ ಶಿಷ್ಯನಿಗೆ ಬೋಧಿಸಿದ್ದರು.

ವ್ಯಾಸರು ಜನಮೇಜಯನನ್ನು ಕುರಿತು, “ಅಪ್ಪಾ ಜನಮೇಜಯ, ಹಿಂದೆ ಈ ಕುರುಭೂಮಿಯಲ್ಲಿ ದುರ್ಯೋಧನನ ತಪ್ಪಿನಿಂದ ಅನೇಕರು ನಾಶವಾಗಿದ್ದರು. ಈಗಲೂ ತಕ್ಷಕನ ಕಾರಣದಿಂದ ನಾಗಲೋಕವೆಲ್ಲಾ ಹಾಳಾಗುವುದೇನೋ ಎಂದು ನಾನು ಗಾಬರಿಯಾಗಿದ್ದೆ. ನಿನ್ನ ಸತ್ಯಪರಿಪಾಲನೆ ಮತ್ತು ತಾಳ್ಮೆಗಳಿಂದ ಇಲ್ಲಿ ಶಾಂತವಾಗಿರುವುದನ್ನು ಕಂಡು ಸಂತೋಷಪಡುತ್ತಿದ್ದೇನೆ” ಎಂದರು.

ಜನಮೇಜಯನಿಗೆ ಚಿಕ್ಕಂದಿನಲ್ಲಿ ತಾಯಿಯು ಹೇಳಿದ್ದ ಅಜ್ಜಂದಿರ ಕಥೆಯ ನೆನಪಾಯಿತು. ಅವನು ವ್ಯಾಸರಿಗೆ ನಮಸ್ಕರಿಸಿ ವಿನಯದಿಂದ ಕೇಳಿದ :

“ಅಜ್ಜ, ದುರ್ಯೋಧನನ ಕಾರಣದಿಂದ ಕುರುಕ್ಷೇತ್ರದಲ್ಲಿ ನಡೆದ ಯುದ್ಧವನ್ನು ನಾವಾರೂ ನೋಡಲಿಲ್ಲ. ತಾವು ಎಲ್ಲವನ್ನೂ ಎದುರಿನಲ್ಲಿ ಕಂಡು ‘ಮಹಾಭಾರತ’ವನ್ನು ರಚಿಸಿದ್ದೀರಿ. ನನ್ನ ಆ ಅಜ್ಜಂದಿರೆಲ್ಲರ ಚರಿತ್ರೆಯನ್ನು ಕೇಳಬೇಕೆಂದು ನನಗೆ ಕುತೂಹಲವಾಗಿದೆ. ತಾವು ರಚಿಸಿರುವ ಆ ಪವಿತ್ರ ಚರಿತ್ರೆಯನ್ನು ಇನ್ನೂ ಈ ಭೂಮಿಯಲ್ಲಿ ಯಾರೂ ಕೇಳಿಲ್ಲ. ಈ ಕೋಟಿಗಟ್ಟಲೆ ಪ್ರಜೆಗಳೆಲ್ಲರ ಪರವಾಗಿ ನಾನು ತಮ್ಮನ್ನು ಬೇಡುತ್ತಿದ್ದೇನೆ. ಮಹಾಭಾರತ ಕಥೆಯನ್ನು ನಮಗೆ ಹೇಳಿ ಅನುಗ್ರಹಿಸಬೇಕು.”

ಜನಮೇಜಯನ ಮಾತಿನಿಂದ ವ್ಯಾಸರಿಗೆ ಸಂತೋಷವಾಯಿತು. ಅವರಿಗೆ ಜನಮೇಜಯನ ಮೇಲೆ ಎಷ್ಟೋ ವಾತ್ಸಲ್ಯ. ಅವನ ಭುಜವನ್ನು ತಟ್ಟುತ್ತಾ ವ್ಯಾಸರು ನಕ್ಕು ಹೇಳಿದರು :

“ಬಹಳ ಒಳ್ಳೆಯ ಮಾತನ್ನು ಹೇಳಿದೆಯಪ್ಪಾ. ಭಾರತ ನೀನು ಮಾತ್ರವೇ ಅಲ್ಲ, ಈ ಭಾರತ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಕೇಳಬೇಕಾದ ಪುಣ್ಯಕಥೆ. ನೀನು ಕೇಳಿದ್ದೇನೋ ಒಳ್ಳೆಯದೇ. ಆದರೆ ನಾನು ವಯಸ್ಸಾದ ಮುದುಕ. ಮಹಾಭಾರತದ ಕಥೆ ಹೇಳುವುದೆಂದರೆ ಒಂದು ದಿನದ ಕೆಲಸವಲ್ಲ, ಕೆಲವು ತಿಂಗಳೇ ಹಿಡಿಯಬಹುದು. ಆದ್ದರಿಂದ ನಮ್ಮ ಶಿಷ್ಯನಾದ ಈ ವೈಶಂಪಾಯನನು ಈ ಕಥೆಯನ್ನು ಹೇಳುತ್ತಾನೆ. ಕಥೆ ಹೇಳುವುದರಲ್ಲಿ ಅವನು ನುರಿತವನು. ಇಂದಿನಿಂದ ಪ್ರಾರಂಭಿಸಿ ಪ್ರತಿ ದಿನವೂ ಸ್ವಲ್ಪ ಸ್ವಲ್ಪವಾಗಿ ಅವನು ಹೇಳಲಿ. ಜನರೆಲ್ಲರೂ ಕೇಳಿ ಆನಂದಿಸಲಿ.”

ವ್ಯಾಸರ ಮಾತನ್ನು ಕೇಳಿ ಎಲ್ಲರಿಗೂ ಆನಂದವೇ ಆನಂದ. ಋಷಿಗಳು, ವಿದ್ವಾಂಸರು, ದೊಡ್ಡವರು, ಚಿಕ್ಕವರು- ಎಲ್ಲರೂ ಕಥೆಯನ್ನು ಕೇಳಲು ಕುಳಿತರು. ಜನಮೇಜಯನೂ ಸಹ ತನ್ನ ಪರಿವಾರದೊಡನೆ ಕುಳಿತನು.

ವೈಶಂಪಾಯನನು ಮೊದಲು ಗ್ರಂಥವನ್ನು ಪೂಜಿಸಿದನು. ಲೋಕಕ್ಕೆ ಒಡೆಯನಾದ ಭಗವಂತನಿಗೆ ಮನಸ್ಸಿನಲ್ಲೇ ನಮಸ್ಕರಿಸಿದನು. ಅನಂತರ ವಿದ್ಯೆಯ ದೇವತೆಯಾದ ಸರಸ್ವತಿಗೂ, ವ್ಯಾಸಮಹರ್ಷಿಗಳಿಗೂ ಭಕ್ತಿಯಿಂದ ನಮಸ್ಕರಿಸಿದನು. ಸಭೆಯಲ್ಲಿ ಎಲ್ಲರೂ ಭಗವಂತನನ್ನು ಸ್ಮರಿಸಿ ಕಥೆ ಕೇಳಲು ಸಿದ್ಧರಾಗಿ ಕುಳಿತಿರುವುದನ್ನು ಕಂಡು, ವೈಶಂಪಾಯನನು ನಿಧಾನವಾಗಿ ಹೇಳುವುದಕ್ಕೆ ಪ್ರಾರಂಭಿಸಿದನು.

ಕೇಳು ಜನಮೇಜಯ

ಕಥೆಯನ್ನು ಕೇಳುತ್ತ ಜನಮೇಜಯನು ನಡುನಡುವೆ ಅನೇಕ ಪ್ರಶ್ನೆಗಳನ್ನು ಹಾಕುತ್ತಿದ್ದ. ವೈಶಂಪಾಯನ ಮುನಿಯು ಆ ಪ್ರಶ್ನೆಗಳಿಗೆಲ್ಲಾ ವಿವರವಾಗಿ ಉತ್ತರ ಹೇಳುತ್ತಾ ಕಥೆಯನ್ನು ಮುಂದುವರಿಸುತ್ತಿದ್ದ.

“ಜನಮೇಜಯ ಮಹಾರಾಜರೇ, ಭರತವೀರರ ಪುಣ್ಯ ಕಥೆಯಾದ್ದರಿಂದಲೇ ಇದಕ್ಕೆ ಭಾರತವೆಂದು ಹೆಸರು ಬಂದಿದೆ. ಇದರಲ್ಲಿ ಭಾರತ ಭೂಮಿಯಲ್ಲಿ ಹುಟ್ಟಿ ಬಾಳಿದ ಅನೇಕ ಮಂದಿ ವೀರರ ಮತ್ತು ಭಕ್ತರ ಕಥೆಗಳಿವೆ. ಅವರೆಲ್ಲರೂ ಧರ್ಮವನ್ನು ಬಿಡದೆ ಲೋಕಕ್ಕೆ ಒಳ್ಳೆಯದನ್ನು ಮಾಡಲು ದುಡಿದವರು. ಹೀಗೆ ವಿಸ್ತಾರವಾದ ಚರಿತ್ರೆಯಿರುವುದರಿಂದ ಇದನ್ನು ಮಹಾಭಾರತವೆಂದು ಕರೆಯಲಾಗುತ್ತದೆ. ವೇದ, ಪುರಾಣ, ಧರ್ಮಶಾಸ್ತ್ರ – ಈ ಎಲ್ಲಾ ಗ್ರಂಥಗಳ ನೀತಿಯೂ ಇದರಲ್ಲಿ ಸೇರಿದೆ. ಈ ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ. ವ್ಯಾಸ ಮಹರ್ಷಿಗಳು ಮೂರು ವರ್ಷಗಳ ಕಾಲ ಕಷ್ಟಪಟ್ಟು ಇದನ್ನು ರಚಿಸಿದ್ದಾರೆ” ಎನ್ನುತ್ತಾ ವೈಶಂಪಾಯನನು ಎಲ್ಲವನ್ನೂ ವಿವರಿಸಿದನು.

ಕಥೆಯನ್ನು ಕೇಳುತ್ತಾ ಹೋದಂತೆ ಜನಮೇಜಯನಿಗೆ ಕುರು-ಪಾಂಡವ ವೀರರೆಲ್ಲರೂ ಕಣ್ಣೆದುರಿಗೆ ಬಂದು ನಿಂತಂತೆ ಅನಿಸುತ್ತಿತ್ತು. ಆ ಮಹಾತ್ಮರಲ್ಲಿ ಒಬ್ಬೊಬ್ಬರ ಬಾಳಿನಿಂದಲೂ ಒಂದೊಂದು ನೀತಿ ತಿಳಿಯಿತು. ತಂದೆಯ ಮತ್ತು ತಮ್ಮಂದಿರ ಸುಖಕ್ಕಾಗಿ ರಾಜ್ಯವನ್ನೇ ಅಪೇಕ್ಷಿಸದೆ ಬ್ರಹ್ಮಚಾರಿಯಾಗಿ ಬಾಳಿದವನು ಭೀಷ್ಮ. ಶಿಷ್ಯರಿಗೆ ವಿದ್ಯೆಯನ್ನು ಹೇಳಿದ್ದಲ್ಲದೆ ಅವರ ಸುಖಕ್ಕಾಗಿ ಕೊನೆಗೆ ಪ್ರಾಣವನ್ನೇ ಕೊಟ್ಟ ಮಹಾತ್ಮನು ದ್ರೋಣಾಚಾರ್ಯ. ಬೇಡಿದವರಿಗೆ ಇಲ್ಲವೆನ್ನದೆ ಎಲ್ಲವನ್ನೂ ದಾನವಾಗಿ ಕೊಟ್ಟ ಮಹಾನುಭಾವನು ಕರ್ಣ. ದುರ್ಯೋಧನನು ಕೊಟ್ಟ ಹಿಂಸೆಗಳನ್ನೆಲ್ಲಾ ಸಹಿಸಿಕೊಂಡು ಧರ್ಮವನ್ನೇ ಆಚರಿಸಿದ ಪುಣ್ಯಾತ್ಮನು ಧರ್ಮರಾಯ. ಅವನ ತಮ್ಮಂದಿರಾದರೋ ಅಣ್ಣನಿಗಾಗಿ ಎಲ್ಲಾ ಕಷ್ಟಗಳನ್ನೂ ಅನುಭವಿಸುತ್ತಾ ಕಾಡಿಗೂ ಹಿಂಬಾಲಿಸಿ ಹೋದವರು. ಶ್ರೀಕೃಷ್ಣನನ್ನೇ ಸದಾ ಸ್ಮರಿಸುತ್ತಾ ಧೃತರಾಷ್ಟ್ರನಿಗೆ ಬಾರಿಬಾರಿಗೂ ನೀತಿಯನ್ನು ಬೋಧಿಸಿದವರು ವಿದುರ ಮತ್ತು ಸಂಜಯ. ಶತ್ರುಗಳೊಡನೆ ಒಬ್ಬನೇ ಹೋರಾಡುತ್ತಾ ಕೊನೆಗೆ ಪ್ರಾಣವನ್ನೇ ಅರ್ಪಿಸಿದವನು ವೀರನಾದ ಅಭಿಮನ್ಯು. ಯುದ್ಧರಂಗದಲ್ಲಿ ಬೇಸರ ಹೊಂದಿದ ಅರ್ಜುನನಿಗೆ ಸಾರಥಿಯಾಗಿ ಪವಿತ್ರವಾದ ಭಗವದ್ಗೀತೆಯ ಉಪದೇಶ ಕೊಟ್ಟವನು ಭಗವಾನ್ ಶ್ರೀಕೃಷ್ಣ. ಅವನಲ್ಲಿ ಅಪಾರ ಭಕ್ತಿ ಇಟ್ಟುಕೊಂಡ ದ್ರೌಪದಿ. ಈ ಮಹಾ ವ್ಯಕ್ತಿಗಳ ಚರಿತ್ರೆಯನ್ನು ಕೇಳಿ ಯಾರಿಗೆ ತಾನೇ ಮೈ ನವಿರೇಳುವುದಿಲ್ಲ?

ವೈಶಂಪಾಯನನು ಮಹಾಭಾರತವನ್ನು ಹೇಳಿ ಮುಗಿಸಬೇಕಾದರೆ ತಿಂಗಳುಗಳೇ ಹಿಡಿದುವು. ಸಹಸ್ರಾರು ಜನರು ಕಥೆಯನ್ನು ಕೇಳಿ ಆನಂದಪಟ್ಟರು. ಜನಮೇಜಯನು ಭಕ್ತಿಯಲ್ಲಿ ಮೈಮರೆತು ಕೇಳಿದ್ದನು. ಈ ಭಾರತ ಭೂಮಿ ಪವಿತ್ರ ಕ್ಷೇತ್ರ, ಇಲ್ಲಿ ಮಹಾಮಹಿಮರಾದ ಅನೇಕ ಮಹಾನುಭಾವರು ಹುಟ್ಟಿದರು, ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿರುವುದು ನನ್ನ ಭಾಗ್ಯ ಎಂದು ಅವನಿಗೆ ಹೆಮ್ಮೆಯುಂಟಾಗಿತ್ತು. ಯುದ್ಧದ ಘೋರವನ್ನು ಸ್ಮರಿಸಿದಾಗ ಅವನು ವೈಶಂಪಾಯನನಿಗೆ ವ್ಯಥೆಯಿಂದ ಹೀಗೆಂದ :

“ಮುನೀಶ್ವರನೇ, ಕುರುಕ್ಷೇತ್ರ ಯುದ್ಧದಿಂದ ನಿರಪರಾಧಿಗಳಾದ ಜನರೂ ಸಹ ಸತ್ತರೆಂದು ಕೇಳಿ ನನಗೆ ದುಃಖ ಇನ್ನೂ ಉಕ್ಕಿ ಬರುತ್ತಲೇ ಇದೆ. ಧರ್ಮರಾಯನು ಈ ಕೊಲೆಯ ಪಾಪವನ್ನು ಕಳೆಯಲು ಅಶ್ವಮೇಧಯಾಗವನ್ನು ಮಾಡಿದನೆಂದು ಹೇಳಿದಿರಿ. ಅದಕ್ಕೆ ಬದಲಾಗಿ ಯುದ್ಧವೇ ನಡೆಯದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು! ಈ ಭೂಮಿಯಲ್ಲಿ ಎಂದೆಂದಿಗೂ ಯುದ್ಧವೇ ನಡೆಯದಂತೆ ಮಾಡಲು ಸಾಧ್ಯವಿಲ್ಲವೆ?”

“ಜನಮೇಜಯ, ವೈರವೇ ಯುದ್ಧಕ್ಕೆ ಕಾರಣ. ಜಗತ್ತಿನ ಎಲ್ಲಾ ಜನರೂ ವೈರವನ್ನು ಬಿಟ್ಟು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಆಗ ಮಾತ್ರ ಯುದ್ಧವೇ ನಡೆಯುವುದಿಲ್ಲ. ಹಾಗೆ ಪ್ರೀತಿಸಬೇಕಾದರೆ ಎಲ್ಲರೂ ನ್ಯಾಯ ಮತ್ತು ಸತ್ಯಗಳನ್ನು ಬಿಡದೆ ಧರ್ಮವನ್ನು ಅನುಸರಿಸಿ ಬಾಳಬೇಕು.”

“ಜನಮೇಜಯನು ಮತ್ತೆ ಕೇಳಿದ –

“ಮಹಾತ್ಮ, ನೀವು ಹೇಳಿದ್ದೇನೋ ಸರಿ. ಈಗ ನಾಗಲೋಕದ ತಕ್ಷಕನ ಮೇಲೆ ವೈರವನ್ನಿಟ್ಟುಕೊಂಡಿದ್ದರಿಂದ ನಾನು ಈ ಯಜ್ಞ ಮಾಡಬೇಕಾಯಿತು. ಆದರೆ ಸ್ವರ್ಗದಲ್ಲಿರುವ ನನ್ನ ತಂದೆಗೆ ತೃಪ್ತಿಯಾಗಲೆಂದೇ ಅಲ್ಲವೆ ಇಷ್ಟನ್ನೂ ಮಾಡಿದ್ದು?”

“ರಾಜ, ನಿನ್ನ ಮಾತು ಸರಿಯಲ್ಲ. ಈ ಲೋಕದಲ್ಲಿ ವೈರ ಭಾವದಿಂದ ನಾವು ಏನೇನೋ ಮಾಡಬಹುದು. ಆದರೆ ಸ್ವರ್ಗವನ್ನು ಸೇರಿದ ಮೇಲೆ ವೈರ ಉಳಿಯುವುದಿಲ್ಲ. ನಿನ್ನ ತಂದೆಯು ಸ್ವರ್ಗದಲ್ಲಿರುವವನು. ಆತನಿಗೆ ತಕ್ಷಕನ ಮೇಲೆ ವೈರವೇನೂ ಇಲ್ಲ.”

ಮಗೂ, ನನಗೆ ಯಾರೂ ವೈರಿಗಳಿಲ್ಲ

ಈ ಮಾತುಗಳನ್ನು ಕೇಳುತ್ತಾ ಜನಮೇಜಯನು ಸ್ವಲ್ಪ ಹೊತ್ತು ಏನೂ ಮಾತನಾಡದೆ ವ್ಯಾಸಮಹರ್ಷಿಗಳ ಕಡೆಗೆ ನೋಡುತ್ತಿದ್ದನು ಅವನಿಗೆ ಗಂಟಲು ಬಿಗಿದು ದುಃಖ ಉಕ್ಕಿ ಬಂದಿತು. ಕಣ್ಣುಗಳಲ್ಲಿ ನೀರು ಸುರಿಯತೊಡಗಿತು. ವ್ಯಾಸಮಹರ್ಷಿಗಳು ಅವನ ಮೈ ತಡವುತ್ತಾ – “ಜನಮೇಜಯ, ಅಳುವುದೇಕಪ್ಪಾ?” ಎಂದರು.

“ಅಜ್ಜ, ನನಗೆ ಈಗ ತಂದೆಯನ್ನು ನೋಡುವ ಭಾಗ್ಯವನ್ನು ಕರುಣಿಸಿರಿ. ನಿಮಗೆ ಅಸಾಧ್ಯವಾದುದು ಈ ಲೋಕದಲ್ಲಿ ಯಾವುದೂ ಇಲ್ಲ. ಒಂದೇ ಒಂದು ಸಲ ನನ್ನ ತಂದೆಯನ್ನು ಕಂಡು ಮಾತನಾಡಿದರೆ ನನ್ನ ಮನಸ್ಸಿಗೆ ಶಾಂತಿ ಸಿಕ್ಕುತ್ತದೆ.”

ವ್ಯಾಸರಿಗೆ ಜನಮೇಜಯನ ವಿನಯವನ್ನೂ ತಂದೆಯ ಮೇಲಿನ ಭಕ್ತಿಯನ್ನೂ ಕಂಡು ಸಂತೋಷವಾಯಿತು. “ಹಾಗೆಯೇ ಆಗಲಪ್ಪ” ಎಂದು ಹೇಳಿ ಅವರು ಕಣ್ಣು ಮುಚ್ಚಿ ಧ್ಯಾನಿಸಿದರು.

ಸ್ವಲ್ಪ ಹೊತ್ತಿನೊಳಗಾಗಿ ಅವರ ಎದುರಿನಲ್ಲೇ ಕಣ್ಣು ಕೋರೈಸುವ ಬೆಳಕು ಕಾಣಿಸಿತು. ಆ ಬೆಳಕಿನೊಡನೆ ಪರೀಕ್ಷಿತ ಮಹಾರಾಜನೂ ಕೆಲವು ಮಂದಿ ಋಷಿಗಳೂ ಕಾಣಿಸಿದರು. ಜನಮೇಜಯನಿಗೆ ಅಪಾರ ಸಂತೋಷ.

ಪರೀಕ್ಷಿತನು ಮಗನನ್ನು ಅಪ್ಪಿಕೊಂಡು ಹೀಗೆಂದನು:

“ಮಗನೇ, ನಿನ್ನಂತಹ ಮಗನನ್ನು ಪಡೆದು ನಾನು ಧನ್ಯನಾದೆ. ದೇವಲೋಕದಲ್ಲೂ ನಿನ್ನ ಕೀರ್ತಿ ಹಬ್ಬಿದೆ. ನಿನಗೆ ಈ ಮುನಿಗಳು ಹೇಳಿದ್ದು ನಿಜ. ನನಗೆ ಯಾರೂ ವೈರಿಗಳಿಲ್ಲ. ಹುಟ್ಟಿದವರೆಲ್ಲರೂ ಸಾಯಲೇಬೇಕಲ್ಲವೆ? ತಕ್ಷಕನಾಗಲೀ ಶೃಂಗಿಯ ಶಾಪವಾಗಲೀ ಮುಖ್ಯ ಕಾರಣಗಳಲ್ಲ. ಅವು ನೆಪ ಮಾತ್ರ. ನಿನಗೆ ಇದನ್ನು ತಿಳಿಸುವುದಕ್ಕಾಗಿಯೇ ಸ್ವರ್ಗದಿಂದ ಈ ಶೃಂಗಿ ಋಷಿ ಮತ್ತು ಸಮೀಕ ಋಷಿ ಎಲ್ಲರೂ ಬಂದಿದ್ದಾರೆ ನೋಡು. ಅವರೆಲ್ಲರಿಗೂ ನಮಸ್ಕರಿಸು. ಇನ್ನು ಸರ್ಪಗಳ ಮೇಲಿನ ವೈರವನ್ನು ಬಿಡು. ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಾ ಚಿರಕಾಲ ಬಾಳು.”

ಜನಮೇಜಯನು ಎಲ್ಲರಿಗೂ ನಮಸ್ಕರಿಸಿದನು. ಸೊಸೆಯಾದ ವಪುಷ್ಟಮೆಯನ್ನೂ ಮಕ್ಕಳನ್ನೂ ಆಶೀರ್ವದಿಸಿ, ಪರೀಕ್ಷಿತ ಮಹಾರಾಜನು ಸಂಗಡಿಗರೊಡನೆ ಮರೆಯಾಗಿ ಸ್ವರ್ಗಕ್ಕೆ ಹಿಂತಿರುಗಿದನು.

ಜನಮೇಜಯನು ವ್ಯಾಸರಿಗೂ ಆಸ್ತೀಕನಿಗೂ ಮತ್ತೆ ಮತ್ತೆ ನಮಸ್ಕರಿಸಿ, “ನನ್ನ ನಾಗಯಜ್ಞದಲ್ಲಿ ಇಷ್ಟೆಲ್ಲ ಅದ್ಭುತಗಳು ನಡೆಯುವುದಕ್ಕೆ ಹಿರಿಯ ತಪಸ್ವಿಗಳಾದ ತಾವೇ ಕಾರಣರು. ನಾನು ನಿಮ್ಮ ಮಗು, ತಾವು ನನ್ನಲ್ಲಿ ತಪ್ಪುಗಳಿದ್ದರೆ ಕ್ಷಮಿಸಿ, ತಿದ್ದಬೇಕು” ಎಂದನು.

ಆಸ್ತೀಕಮುನಿ ಹೇಳಿದನು :

“ಜನಮೇಜಯ, ನೀನು ನಿಜವಾಗಿಯೂ ಮಹಾನುಭಾವ. ವ್ಯಾಸರ ಅನುಗ್ರಹ ಪಡೆದಿರುವ ನಿನ್ನ ಯಜ್ಞದಲ್ಲಿ ಈ ಅದ್ಭುತಗಳಾಗುವುದು ಆಶ್ಚರ್ಯವಲ್ಲ. ನೀನು ಏನನ್ನು ಬಯಸುತ್ತೀಯೋ ಹೇಳು.”

“ಪೂಜ್ಯರೆ, ತಮ್ಮಂತಹ ಮಹಾತಪಸ್ವಿಗಳು ಸೇರಿರುವ ಈ ಸಮಯದಲ್ಲೇ ನನ್ನ ಇಷ್ಟವನ್ನು ಹೇಳಬೇಕು. ನಾನು ಎಷ್ಟು ಯಜ್ಞಗಳನ್ನು ಮಾಡಿದರೂ ಅಶ್ವಮೇಧಯಾಗವನ್ನು ಮಾಡಲಿಲ್ಲ. ಹಿಂದೆ ಧರ್ಮರಾಯನೇ ಮೊದಲಾದ ನನ್ನ ಹಿರಿಯರೆಲ್ಲರೂ ಈ ಯಜ್ಞವನ್ನು ಮಾಡಿದ್ದರು. ನನಗೂ ಅದನ್ನು ಹಸ್ತಿನಾಪುರದಲ್ಲೇ ಮಾಡಬೇಕೆಂದು ಇಷ್ಟವಿದೆ. ತಾವೇ ಮುಂದೆ ನಿಂತು ನನ್ನ ಈ ಕೋರಿಕೆಯನ್ನು ನಡೆಸಿಕೊಡಬೇಕು.”

ಆಸ್ತೀಕಮುನಿಯೂ ವ್ಯಾಸರೂ ಒಪ್ಪಿದರು.

ನಾಗಯಜ್ಞಕ್ಕೆ ಬಂದಿದ್ದವರೆಲ್ಲರನ್ನೂ ಜನಮೇಜಯನು ಬೀಳ್ಕೊಟ್ಟನು. ತಾನೂ ಒಂದು ಶುಭದಿನದಲ್ಲಿ ಪರಿವಾರದವರೊಡನೆ ಹಸ್ತಿನಾಪುರಕ್ಕೆ ಹಿಂತಿರುಗಿದನು.

ಅನ್ನ ಯಜ್ಞ – ಜ್ಞಾನಯಜ್ಞ ಇವಕ್ಕಿಂತ ಶ್ರೇಷ್ಠ ಯಜ್ಞವಿಲ್ಲ

ಜನಮೇಜಯ ಮಹಾರಾಜನ ಮನಸ್ಸಿನಲ್ಲಿ ಎಷ್ಟೇ ಆತುರವಿದ್ದರೂ ಅಶ್ವಮೇಧಯಾಗವನ್ನು ಬೇಗನೆ ಮಾಡಲು ಆಗಲಿಲ್ಲ. ಕೆಲವು ವರ್ಷಗಳೇ ಕಳೆದುವು.

ಅಶ್ವಮೇಧಯಾಗ ಮಾಡಬೇಕಾದರೆ ವಿಶೇಷ ಲಕ್ಷಣಗಳ ಕುದುರೆ ಬೇಕು. ರಾಜನು ಶುಭದಿನದಲ್ಲಿ ಅದನ್ನು ಪೂಜಿಸಿ ಬಿಟ್ಟುಬಿಡುತ್ತಾನೆ. ಒಂದು ವರ್ಷದವರೆಗೆ ಆ ಕುದುರೆ ಎಲ್ಲಿ ಬೇಕಾದರೂ ತಿರುಗಾಡಬಹುದು. ರಾಜನ ಸೈನಿಕರು ಅದರ ಹಿಂದೆ ಹೊರಟು, ಅದನ್ನು ಯಾರೂ ಕಟ್ಟಿಹಾಕದಂತೆ ರಕ್ಷಿಸಬೇಕು. ಒಂದು ವರ್ಷವಾದ ಮೇಲೆ ಅದನ್ನು ತಂದು, ಮತ್ತೊಮ್ಮೆ ಪೂಜಿಸಿ ಯಾಗವನ್ನು ಮಾಡಬೇಕು. ಇವು ಈ ಯಾಗದ ನಿಯಮಗಳು. ಇದೊಂದು ದೊಡ್ಡ ಯಾಗ. ನೂರು ಅಶ್ವಮೇಧಯಾಗಗಳನ್ನು ಮಾಡಿದವನಿಗೆ ದೇವಲೋಕದ ಒಡೆತನ ಸಿಕ್ಕಿ ‘ಇಂದ್ರ’ನಾಗುತ್ತಾನೆ.

ಜನಮೇಜಯನು ಯಾವ ಪದವಿಗೋಸ್ಕರವೂ ಆಸೆಪಟ್ಟು ಯಾಗ ಮಾಡಲಿಲ್ಲ. ಪ್ರಜೆಗಳಿಗೆ ಅದರಿಂದ ಒಳ್ಳೆಯದಾಗಲಿ ಎಂಬುದೊಂದೇ ಅವನ ಉದ್ದೇಶ. ಯಜ್ಞಗಳಲ್ಲಿ ದೇವತೆಗಳ ಪೂಜೆ ಮಾಡಿದರೆ ಅವರು ಭೂಮಿಗೆ ಮಳೆ, ಬೆಳೆ ಕೊಡುತ್ತಾರೆ. ಯಾಗದ ಸಂದರ್ಭದಲ್ಲಿ ಬಡಬಗ್ಗರಿಗೆ ಅನ್ನ – ಬಟ್ಟೆಗಳನ್ನು ದಾನ ಮಾಡಬಹುದು. ಅನೇಕ ಮಹನೀಯರನ್ನು ಬರಮಾಡಿಕೊಂಡು ಪುರಾಣ – ಪುಣ್ಯ ಕಥೆಗಳನ್ನು ಹೇಳಿಸಿ, ಪ್ರಜೆಗಳಲ್ಲಿ ಧರ್ಮವನ್ನು ಪ್ರಚಾರ ಮಾಡಬಹುದು. ಈ ಉದ್ದೇಶದಿಂದಲೇ ಜನಮೇಜಯನು ಮುನ್ನೂರು ಯಜ್ಞಗಳನ್ನು ಮಾಡಿದ್ದನು. ಅವುಗಳಲ್ಲಿ ಕೊನೆಯದು ಈ ಅಶ್ವಮೇಧಯಾಗ.

ಹಿಂದೆ ಮಾತು ಕೊಟ್ಟಿದ್ದಂತೆ ಯಾಗಕ್ಕೆ ಆಸ್ತೀಕ ಮುನಿ, ವ್ಯಾಸರು, ವೈಶಂಪಾಯನ ಮೊದಲಾದವರೆಲ್ಲರೂ ಬಂದಿದ್ದರು. ರಾಜನು ಮೊದಲನೆಯ ದಿನ ಮಧ್ಯಾಹ್ನ ಯಜ್ಞದ ಕುದುರೆಯನ್ನು ಪೂಜಿಸಿದನು. ಹೋಮವೂ ಪ್ರಾರಂಭವಾಯಿತು. ಆ ರಾತ್ರಿ ಕುದುರೆಯನ್ನು ಅರಮನೆಯ ಪ್ರಜಾಮಂದಿರದಲ್ಲಿ ಕಟ್ಟಲಾಯಿತು. ರಾಣಿಯಾದ ವಪುಷ್ಟಮೆ ರಾತ್ರಿಯೆಲ್ಲಾ ನಿದ್ರೆ ಹೋಗದೆ ಭಕ್ತಿಯಿಂದ ಕುದುರೆಯನ್ನು ಪೂಜಿಸಬೇಕೆಂದು ನಿಯಮವಿತ್ತು.

ಇಂದ್ರನಿಗೆ ಅಶ್ವಮೇಧಯಾಗ ಮಾಡುವವರನ್ನು ಕಂಡರೆ ಹೆದರಿಕೆ. ಅವರು ತನ್ನ ಇಂದ್ರಪದವಿಯನ್ನು ಕಿತ್ತುಕೊಳ್ಳುವರೆಂದು ಸಂದೇಹ. ಈಗ ಜನಮೇಜಯನ ಬಗ್ಗೆಯೂ ಅದೇ ಸಂದೇಹ ಬಂದಿತ್ತು. ಹೇಗಾದರೂ ಯಾಗವನ್ನು ಭಂಗಪಡಿಸಲು ಯೋಚಿಸಿ, ಅವನು ಒಂದು ಉಪಾಯ ಮಾಡಿದನು. ಪೂಜೆಗಾಗಿ ಬಂದ ವಪುಷ್ಟಮೆಗೆ ತನ್ನ ಮಾಯೆಯ ಶಕ್ತಿಯಿಂದ ನಿದ್ರೆ ಬರುವಂತೆ ಮಾಡಿ ಆಕೆಯನ್ನು ಅವಮಾನಪಡಿಸಿದನು.

ಇದಾದ ಸ್ವಲ್ಪ ಹೊತ್ತಿನಲ್ಲೇ ಜನಮೇಜಯನು ಅರಮನೆಗೆ ಬಂದನು. ಪತ್ನಿಯ ಕಡೆಗೆ ನೋಡುತ್ತಲೇ ಅವನು ಕಿಡಿಕಿಡಿಯಾಗಿಬಿಟ್ಟನು. ವಪುಷ್ಟಮೆಗೂ ಸಹ ನಿಜವಾದ ಸಂಗತಿ ಆಗ ತಾನೇ ಮನಸ್ಸಿಗೆ ಬಂದಿತು. ಆಕೆ ಭಯದಿಂದ ಗಡಗಡ ನಡುಗಿ ಪತಿಯ ಪಾದಗಳಲ್ಲಿ ಬಿದ್ದಳು. ಜನಮೇಜಯನು ರೋಷದಿಂದ, “ನಿನ್ನಿಂದ ಯಾಗಕ್ಕೆ ಭಂಗ ಬಂದಿತು. ನಿನ್ನನ್ನು ಏನು ಮಾಡಿದರೂ ಪಾಪವಿಲ್ಲ. ನನ್ನ ಗೌರವವನ್ನೇ ನೀನು ಹಾಳು ಮಾಡಿದೆ. ಇನ್ನು ನಿನ್ನ ಮುಖವನ್ನೇ ನನಗೆ ತೋರಿಸಬೇಡ. ಎಲ್ಲಿ ಬೇಕಾದರೂ ಹೊರಟುಹೋಗು” ಎಂದನು.

ವಪುಷ್ಟಮೆ ತನ್ನ ಪತಿಯ ಬಾಯಿಂದ ಅಷ್ಟು ಮಟ್ಟಿಗೆ ಮಾತನ್ನು ಎಂದೂ ಕೇಳಿರಲಿಲ್ಲ. ಆಕೆಯ ಸದ್ಗುಣಗಳನ್ನು ಇಡೀ ರಾಜ್ಯವೇ ಹೊಗಳುತ್ತಿತ್ತು. ಈಗ ಜನಮೇಜಯನನ್ನು ಆಕೆ ಹೇಗೆ ಒಪ್ಪಿಸಬೇಕು? ಅಳುತ್ತಾ ಪತಿಯ ಪಾದಗಳನ್ನು ಹಿಡಿದು, “ಪ್ರಭು, ನನ್ನನ್ನು ದೂರ ಮಾಡಬೇಡಿರಿ. ನಾನು ನಿರಪರಾಧಿ” ಎಂದಳು.

ಆ ವೇಳೆಗೆ ಗಂಧರ್ವಲೋಕದಿಂದ ವಿಶ್ವಾವಸು ಎಂಬ ಗಂಧರ್ವನು ತನ್ನ ಪರಿವಾರದೊಡನೆ ಜನಮೇಜಯನಲ್ಲಿಗೆ ಬಂದು, “ಜನಮೇಜಯ, ಈಕೆ ನಿರಪರಾಧಿ. ಈಕೆಯನ್ನು ದೂರ ಮಾಡಬೇಡ. ನಿರಪರಾಧಿಯಾದ ಪತ್ನಿಯನ್ನು ರಾಜನಾದ ನೀನೇ ಹೀಗೆ ಬಿಟ್ಟುಕೊಟ್ಟರೆ, ನಿರಪರಾಧಿಯಾದ ಪತಿಯನ್ನು ಹೆಂಗಸರೂ ಬಿಟ್ಟುಹೋಗುವಂತೆ ಪ್ರಜೆಗಳಿಗೆ ಕಲಿಸಿದಂತಾಗುತ್ತದೆ. ಇದೆಲ್ಲವೂ ಇಂದ್ರನ ಕುತಂತ್ರ. ನಿನ್ನ ಯಜ್ಞವನ್ನು ಭಂಗಪಡಿಸಲು ಅವನು ವಪುಷ್ಟಮೆಯ ಮೇಲೆ ತನ್ನ ಮಾಯಾಶಕ್ತಿಯನ್ನು ಪ್ರಯೋಗಿಸಿದನು” ಎಂದನು.

“ವಿಶ್ವಾವಸು, ಇದು ನಿಜವೇ? ಇಂದ್ರನೇ ಮೊದಲಾದ ದೇವತೆಗಳ ಪೂಜೆಗಾಗಿ ಅಶ್ವಮೇಧವನ್ನು ಮಾಡುತ್ತಿರುವಾಗ ಆ ಇಂದ್ರನೇ ನನಗೆ ಅಪಕಾರ ಮಾಡಿದನೆ? ಹಾಗಿದ್ದರೆ ಮುಂದೆ ಯಾರೂ ಈ ಯಜ್ಞವನ್ನೇ ಮಾಡುವುದಿಲ್ಲ!”

ಯಾಗವು ನಿಂತಿತು. ಜನಮೇಜಯನು ವಪುಷ್ಟಮೆ ನಿರಪರಾಧಿಯೆಂದು ತಿಳಿದು ಒಳ್ಳೆಯ ಮಾತುಗಳಿಂದ ಆಕೆಯನ್ನು ಸಮಾಧಾನ ಪಡಿಸಿದನು. ಆದರೆ ತನ್ನ ಯಜ್ಞವು ನಿಂತುಹೋದುದಕ್ಕಾಗಿ ಚಿಂತಿಸುತ್ತಾ ಯಜ್ಞ ಮಂಟಪದಲ್ಲಿ ಕುಳಿತನು. ಆ ಸಮಯಕ್ಕೆ ವ್ಯಾಸರು ಹತ್ತಿರಕ್ಕೆ ಬಂದು, “ಜನಮೇಜಯ, ಇದಕ್ಕೆ ಚಿಂತೆಯೇಕೆ? ನಿನ್ನ ಅಶ್ವಮೇಧ ಯಜ್ಞ ಸಫಲವಾಗಿದೆ. ರಾಶಿರಾಶಿಯಾಗಿ ಅನ್ನದಾನ ಮಾಡಿ ನೀನು ಅನ್ನಯಜ್ಞ ಮಾಡಿದ್ದೀಯೆ. ಮಹಾಭಾರತವನ್ನು ಹೇಳಿಸಿ ಜ್ಞಾನಯಜ್ಞ ಮಾಡಿದ್ದೀಯೆ. ಇವುಗಳನ್ನು ಮೀರಿದ ಯಜ್ಞ ಯಾವ ಲೋಕದಲ್ಲೂ ಇಲ್ಲ. ಇನ್ನು ನೀನು ಮಾಡಬೇಕಾದುದು ಭಕ್ತಿಯಜ್ಞವೊಂದೇ” ಎಂದರು.

ಜನಮೇಜಯನ ಮನಸ್ಸಿಗೆ ಇದರಿಂದ ಸಮಾಧಾನವಾಯಿತು. ಅದೇ ದಿನ ಅರಮನೆಯಲ್ಲಿ ಸೊಸೆಯಾದ ವೈದೇಹಿಗೆ ಮಗನು ಹುಟ್ಟಿದನು. ಅಶ್ವಮೇಧಯಜ್ಞ ಕಾಲದಲ್ಲಿ ಹುಟ್ಟಿದ್ದರಿಂದ ಅವನಿಗೆ ಅಶ್ವಮೇಧದತ್ತನೆಂದೇ ಹೆಸರಾಯಿತು.

ಜನಮೇಜಯನು ಈಗ ಮತ್ತೊಮ್ಮೆ ವೈಶಂಪಾಯನ ಮುನಿಯನ್ನು ಕಥೆ ಹೇಳುವಂತೆ ಬೇಡಿದನು. ವೈಶಂಪಾಯನನು ಶ್ರೀಕೃಷ್ಣ ಚರಿತ್ರೆಯುಳ್ಳ ‘ಹರಿವಂಶ ಪುರಾಣ’ವನ್ನು ಹೇಳಿದನು.

ಶ್ರೀಕೃಷ್ಣಭಗವಂತನ ಪುಣ್ಯಕಥೆಯನ್ನು ಕೇಳುತ್ತಾ ಹೋದಂತೆ ಜನಮೇಜಯನ ಮನಸ್ಸು ನಿರ್ಮಲವಾಯಿತು.

ವೈಶಂಪಾಯನನು ಮಹಾಭಾರತದ ಕಥೆಯನ್ನು ಹೇಳಿದನು

ರಾಜರ್ಷಿ ತಪಸ್ಸಿಗೆ

ಜನಮೇಜಯನ ರಾಜ್ಯದಲ್ಲಿ ಚಿರಕಾಲ ಶಾಂತಿ ನೆಲೆಸಿತು. ಹಿಂದೆ ಕುರುಕ್ಷೇತ್ರದ ಯುದ್ಧದಿಂದ ನೊಂದು ಬಡವರಾಗಿದ್ದ ಪ್ರಜೆಗಳು ಈಗ ಯಾವ ಕೊರತೆಯೂ ಇಲ್ಲದೆ ಸುಖವಾಗಿದ್ದರು. ಕಳ್ಳತನ, ದರೋಡೆ, ಹಿಂಸೆ – ಇವುಗಳ ಸುದ್ದಿಯೇ ರಾಜ್ಯದಲ್ಲಿ ಇರಲಿಲ್ಲ. ಜನಮೇಜಯನಾದರೋ ಸದಾ ಪ್ರಜೆಗಳ ಕ್ಷೇಮವೇ ತನ್ನ ಕ್ಷೇಮವೆಂದು ತಿಳಿದಿದ್ದನು. ಮನೆಮನೆಯಲ್ಲೂ ದಾನ, ಧರ್ಮ, ಭಕ್ತಿಗಳು ನೆಲೆಸುವಂತೆ ಮಾಡಿ ರಾಜನು ತಾನೂ ಸಹ ದೇವರಲ್ಲಿ ಮನಸ್ಸಿಟ್ಟುಕೊಂಡಿದ್ದನು. ಹೀಗೆ ರಾಜನಾಗಿದ್ದರೂ ಋಷಿಯಂತೆ ಬಾಳಿದ್ದರಿಂದಲೇ ಜನಮೇಜಯನನ್ನು ಎಲ್ಲರೂ ‘ರಾಜರ್ಷಿ’ ಎಂದು ಕರೆದರು.

ಜನಮೇಜಯನಿಗೆ ಪದವಿ, ಅಧಿಕಾರಗಳ ಮೇಲೆ ಬಯಕೆಯಿರಲಿಲ್ಲ. ಭಕ್ತಿಯೇ ಶ್ರೇಷ್ಠವೆಂದು ಆತನು ನಂಬಿದ್ದನು. ಆತನಿಗೂ ವಯಸ್ಸಾಗುತ್ತಾ ಬಂದಿತು. ಒಂದು ಶುಭದಿನದಲ್ಲಿ ಹಿರಿಯ ಮಗನಾದ ಶತಾನೀಕನಿಗೆ ರಾಜ್ಯಪಟ್ಟಾಭಿಷೇಕ ಮಾಡಿ, ತಾನು ವಪುಷ್ಟಮೆಯೊಡನೆ ತಪಸ್ಸಿಗಾಗಿ ಋಷಿಗಳ ತಪೋವನಕ್ಕೆ ಹೊರಟನು.

ಜನಮೇಜಯ ಮಹಾರಾಜನು ಪ್ರಯತ್ನದಿಂದ ಧರ್ಮಗ್ರಂಥವಾದ ಮಹಾಭಾರತವು ಲೋಕದಲ್ಲಿ ಪ್ರಚಾರವಾಯಿತು. ಸೌತಿಯೆಂಬ ಪುರಾಣಿಕನು ನಾಗಯಜ್ಞ ಕಾಲದಲ್ಲಿ ತಕ್ಷಶಿಲೆಗೆ ಬಂದಿದ್ದನು. ಮುಂದೆ ನೈಮಿಷಾರಣ್ಯದಲ್ಲಿ ಶೌನಕನೇ ಮೊದಲಾದ ಋಷಿಗಳಿಗೂ ಈ ಕಥೆ ಹೇಳಿದನು. ಸಂಸ್ಕೃತದಲ್ಲಿರುವ ಮಹಾಭಾರತವನ್ನು ಕವಿಗಳು ಇತರ ಭಾಷೆಗಳಿಗೂ ಅನುವಾದ ಮಾಡಿದರು. ಅನೇಕ ಕವಿಗಳು ಈ ಕಥೆಯ ಆಧಾರದಿಂದ ಹೊಸಹೊಸ ಕಾವ್ಯಗಳನ್ನು ರಚಿಸಿದರು. ಕನ್ನಡದಲ್ಲೂ ಪಂಪ, ಕುಮಾರವ್ಯಾಸ ಮೊದಲಾದ ಕವಿಗಳು ಭಾರತ ಕಥೆಯನ್ನು ಹೇಳಿದ್ದಾರೆ.

ಜನಮೇಜಯನು ಲೋಕಕ್ಕೆ ಒಳ್ಳೆಯದನ್ನೇ ಮಾಡುವುದಕ್ಕಾಗಿ ದುಡಿದ ಮಹಾನುಭಾವ. ಆತನು ತನ್ನ ಒಳ್ಳೆಯ ಗುಣಗಳಿಂದ ಲೋಕವನ್ನೇ ಮೆಚ್ಚಿಸಿದನು. ನಾವೂ ಕೂಡ ಆತನಂತೆ ಭಾರತದ ಕೀರ್ತಿಯನ್ನು ಜಗತ್ತಿಗೆ ಸಾರುವ ಶ್ರೇಷ್ಠ ಭಾರತೀಯರಾಗಿ ಬಾಳೋಣ.