ಈ ಅಧ್ಯಯನ ಪ್ರಬಂಧದಲ್ಲಿ ಹೈ.ಕ.ಪ್ರ.ದಲ್ಲಿನ ಅಭಿವೃದ್ಧಿಯ ಜನರನ್ನು ಒಳಗೊಳ್ಳುವ ಸ್ವರೂಪವನ್ನು ಕುರಿತಂತೆ ಚರ್ಚೆ ಮಾಡಲು ಪ್ರಯತ್ನಿಸಲಾಗಿದೆ. ಈ ಸಂಗತಿಯನ್ನು ವಿವಿಧ ನೆಲೆಗಳಲ್ಲಿ ವಿಶ್ಲೇಷಿಸಲಾಗಿದೆ. ಜನರನ್ನು ಒಳಗೊಳ್ಳುವ ಅಭಿವೃದ್ಧಿಯನ್ನು ಇಲ್ಲಿ ಅಮರ್ತ್ಯಸೆನ್ ರೂಪಿಸಿರುವ ‘ಸ್ವಾತಂತ್ರ್ಯವಾಗಿ ಅಭಿವೃದ್ಧಿ’ ಎಂಬ ವಿಚಾರ ಪ್ರಣಾಳಿಕೆಯ ಚೌಕಟ್ಟಿನಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ಇಲ್ಲಿ ಮುಖ್ಯ ಒತ್ತು ಅಭಿವೃದ್ಧಿಯೆಂಬುದು ಕೇವಲ ವರಮಾನಕ್ಕೆ ಸಂಬಂಧಿಸಿದ ಸಂಗತಿಯಲ್ಲ ಎಂಬುದರ ಮೇಲಿದೆ. ಅದನ್ನು ಸಾಕ್ಷರತೆ, ಆರೋಗ್ಯ, ಲಿಂಗ ಸಮಾನತೆ, ಆಹಾರ ಭದ್ರತೆ, ಕುಡಿಯುವ ನೀರು ಮುಂತಾದ ಸಂಗತಿಗಳ ನೆಲೆಯಲ್ಲಿ ಹಿಡಿದಿಡಬೇಕು ಎಂಬ ವಾದವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ವರಮಾನ ವರ್ಧನೆಯ ನೆಲೆಯಲ್ಲಿ ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಇಲ್ಲಿ ಅದನ್ನು ಜನರ ಧಾರಣಾ ಸಾಮರ್ಥ್ಯದಲ್ಲಿ ಕಂಡುಕೊಳ್ಳುವ ದೃಷ್ಟಿಕೋನವಿದೆ. ಇಂದು ಅಭಿವೃದ್ಧಿಯನ್ನು, ಸರ್ಕಾರಿ ಕಾರ್ಯಕ್ರಮಗಳನ್ನು ‘ಹಂಗಿ’ನ, ‘ದಾನ’ದ, ‘ದತ್ತಿ’ಯ ಪರಿಭಾಷೆಯಲ್ಲಿ ಪರಿಭಾವಿಸಿಕೊಳ್ಳುವ ಪರಿಯು ಮುಂಚೂಣಿಗೆ ಬರುತ್ತಿದೆ. ಪಾರಮಾರ್ಥಿಕ ಪರಿಭಾಷೆಯು ಮೆರೆದಾಡುತ್ತಿರುವ ಕಾಲ ಇದು. ಆದರೆ ಇದು ಹಕ್ಕಿನ ಪರಿಭಾಷೆಯ ದೃಷ್ಟಿಯಿಂದ ಒಪ್ಪತಕ್ಕುದಲ್ಲ. ಅಭಿವೃದ್ಧಿಯೆಂಬುದು ಅನುಕಂಪೆಯ ಸಂಗತಿಯಲ್ಲ. ಅದು ಬದ್ಧತೆಯ, ಹಕ್ಕಿನ ಸಂಗತಿಯಾಗಿದೆ. ಈ ಅಧ್ಯಯನ ಪ್ರಬಂಧವನ್ನು ನಿರ್ದೇಶಿಸಿರುವ ಸಂಗತಿಯೆಂದರೆ ಹಕ್ಕಿನ ಪರಿಭಾಷೆ. ಅಭಿವೃದ್ಧಿಯನ್ನು ಕುರಿತ ಚರ್ಚೆಗಳಲ್ಲಿ ವರಮಾನದ ಹಂಚಿಕೆ ಬಗ್ಗೆ ಹೆಚ್ಚು ಮಾತನಾಡಲಾಗುತ್ತದೆ. ಆದರೆ ಅಭಿವೃದ್ಧಿಯು ಹಂಚಿಕೆಗೆ ಸಂಬಂಧಿಸಿದ ಸಂಗತಿಯಲ್ಲ. ಅಭಿವೃದ್ಧಿಯಲ್ಲಿ ವರಮಾನದ ಸಮಾನ ಹಂಚಿಕೆಯ ಪ್ರಶ್ನೆಯು ತುಂಬಾ ಮುಖ್ಯ, ನಿಜ. ಆದರೆ ಅಭಿವೃದ್ಧಿಯು ಉತ್ತರಿಸಬೇಕಾದುದು ವಿತರಣೆಯ ಪ್ರಶ್ನೆಯನ್ನಲ್ಲ. ಅದಕ್ಕಿಂತ ಮುಖ್ಯವಾಗಿ ಏರಿಕೆಯಾದ ವರಮಾನವನ್ನು ಜನರು ತಮ್ಮದನ್ನಾಗಿ ಮಾಡಿಕೊಳ್ಳಲು ಎಷ್ಟು ಸಮರ್ಥರಾಗಿದ್ದಾರೆಂಬುದು, ಅದನ್ನು ದಕ್ಕಿಸಿಕೊಳ್ಳಲು ಅವರು ಎಷ್ಟು ಸಾಮರ್ಥ್ಯ ಉಳ್ಳವರಾಗಿದ್ದರೆಂಬುದು ತುಂಬಾ ಆಯಕಟ್ಟಿನ ಸಂಗತಿಯಾಗಿದೆ. ಜನರು ಸ್ವಸಾಮರ್ಥ್ಯದಿಂದ ಅಭಿವೃದ್ಧಿಯನ್ನು ತಮ್ಮದಾಗಿಸಿಕೊಳ್ಳಬೇಕು. ಇದು ಮೂಲಭೂತವಾಗಿ ರಾಜಕೀಯದ ಪ್ರಶ್ನೆ. ಏರಿಕೆಯಾದ ವರಮಾನ, ಹೆಚ್ಚಿಗೆಯಾದ ಆಹಾರ ಉತ್ಪಾದನೆ, ಕೈಗಾರಿಕೀಕರಣದ ಫಲ, ನಗರೀಕರಣದ ಅನುಕೂಲಗಳು, ವೈಜ್ಞಾನಿಕ ಸಂಶೋಧನೆಗಳ ಉಪಯೋಗ ಮುಂತಾದವು ಜನರ ಬದುಕಾಗಿ ಪರಿವರ್ತನೆಯಾಗಬೇಕು. ಅದು ಅಭಿವೃದ್ಧಿ, ಅದು ಜನರನ್ನು ಒಳಗೊಳ್ಳುವ ಅಭಿವೃದ್ಧಿ.

ಒಳಗಣದವರು – ಹೊರಗಣದವರು

ಇವು ವಚನಕಾರರ ಪರಿಕಲ್ಪನೆಗಳು. ವಚನಕಾರರು ಈ ಪದಗಳನ್ನು ಇಂದು ನಾವು ಯಾವ ಅರ್ಥದಲ್ಲಿ ಬಳಸುತ್ತಿದ್ದೇವೆಯೋ ಆ ಅರ್ಥದಲ್ಲಿ ಅವರಿಗೆ ಬಳಸಿರಲಿಕ್ಕಿಲ್ಲ. ಆದರೆ ಇಂದು ನಾವು ಬಳಸುತ್ತಿರುವ ಅರ್ಥಛಾಯೆ ಅವುಗಳಲ್ಲಿ ನಿಚ್ಚಳವಾಗಿ ಕಂಡು ಬರುತ್ತಿದೆ. ‘ಆನು ದೇವ ಹೊರಗಣದವನು’ ಎಂದು ಬಸವಣ್ಣ ತನ್ನನ್ನು ತಾನು ಕರೆದುಕೊಂಡಾಗ ಅದನ್ನು ಅವನು ಪ್ರಧಾನಧಾರೆಯಿಂದ ಹೊರಗಿರುವವನು ಎಂಬ ಅರ್ಥದಲ್ಲೇ ಬಳಸಿದ್ದಾನೆ. ಅಭಿವೃದ್ಧಿಯಲ್ಲೂ ಹೀಗೆ ಹೊರಗಣದವರಿದ್ದಾರೆ. ಈ ಹೊರಗಣದವರನ್ನು ಒಳಗಣದವರನ್ನಾಗಿ ಮಾಡುವುದು ಹೇಗೆ ಎಂಬುದು ಆಯಕಟ್ಟಿನ ಸಂಗತಿಯಾಗಿದೆ. ಇಂದು ಅಭಿವೃದ್ಧಿ ಕುರಿತ ಸಿದ್ಧಾಂತಗಳಲ್ಲಿ ಈ ಪರಿಭಾಷೆಯು ತೀವ್ರ ಚರ್ಚೆಗೆ ಒಳಗಾಗಿದೆ. ಈ ಪರಿಭಾಷೆಯನ್ನಿಟ್ಟುಕೊಂಡು ಇಲ್ಲಿನ ಚಿಂತನೆಯನ್ನು ಬೆಳಸಲಾಗಿದೆ. ಹೈ.ಕ.ಪ್ರ.ದಲ್ಲಿ ಯಾಕೆ ಜನರು ಅಭಿವೃದ್ಧಿಯ ಹೊರಗುಳಿದಿದ್ದಾರೆ ಎಂಬುದನ್ನು ಸ್ಥೂಲವಾಗಿ ತೋರಿಸಲು ಪ್ರಯತ್ನಿಸಲಾಗಿದೆ.

ಲಿಂಗ ಸಂಬಂಧಿ ನೆಲೆಗಳು

ಅಭಿವೃದ್ಧಿ ಕುರಿತ ಚರ್ಚೆಗಳಲ್ಲಿ ಇಂದು ಲಿಂಗ ಸಂಬಂಧಗಳನ್ನು ಕುರಿತಂತೆ ಹೆಚ್ಚು ಮಾತನಾಡಲಾಗುತ್ತಿದೆ. ಇದು ತುಂಬಾ ಮುಖ್ಯ. ಸಾಂಪ್ರದಾಯಿಕವಾಗಿ ಅಭಿವೃದ್ಧಿ ಕುರಿತ ಸಿದ್ಧಾಂತಗಳ ಲಿಂಗ ನಿರಪೇಕ್ಷ ಧೋರಣೆಯ ನೆಲೆಯುಳ್ಳವಾಗಿವೆ. ಪುರುಷಶಾಹಿ ನೆಲೆಯಲ್ಲಿ ಅಭಿವೃದ್ಧಿ ಕುರಿತ ಚರ್ಚೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಪುರುಷಶಾಹಿ ಚಿಂತನೆಗಳು ಇಡೀ ಜನಸಮೂಹವನ್ನು ಪ್ರತಿನಿಧಿಸುತ್ತವೆ ಎಂಬ ಧೋರಣೆಯಲ್ಲಿ ಸಿದ್ಧಾಂತಗಳನ್ನು ರೂಪಿಸಿಕೊಂಡು ಬರಲಾಗಿದೆ. ಈ ಬಗೆಯ ಸಂಗತಿಗಳು ಇಂದು ಪ್ರಶ್ನೆಗೊಳಗಾಗುತ್ತಿವೆ. ಲಿಂಗಸಂಬಂಧವೆಂಬುದು ಇಂದು ಎಲ್ಲ ಜ್ಞಾನಶಿಸ್ತುಗಳನ್ನು ಪ್ರವೇಶಿಸುತ್ತಿದೆ. ಪ್ರಸ್ತುತ ಪ್ರಬಂಧದಲ್ಲಿ ಅಭಿವೃದ್ಧಿಯ ಲಿಂಗಸಂಬಂಧಿ ನೆಲೆಗಳನ್ನು ಹೈ.ಕ.ಪ್ರ.ಕ್ಕೆ ಸಂಬಂಧಿಸಿದಂತೆ ಅನಾವರಣ ಮಾಡಲಾಗಿದೆ. ಇದೊಂದು ಲಿಂಗ ಸಂವೇದಿ ಕೃತಿಯಾಗಿದೆ. ಅಭಿವೃದ್ಧಿಯ ಪ್ರತಿ ಸೂಚಿಗೆ ಸಂಬಂಧಿಸಿದಂತೆ ಇಲ್ಲಿ ಲಿಂಗ ಸಂಬಂಧ ನೆಲೆಯಲ್ಲಿ ವಿಶ್ಲೇಷಣೆ ನಡೆಸಲಾಗಿದೆ. ಪ್ರತಿ ಅಭಿವೃದ್ಧಿ ಸೂಚಿಯಲ್ಲೂ ಮಹಿಳೆಯರು ತಾರತಮ್ಯ ಅನುಭವಿಸುತ್ತಿರುವುದು ಡಾಳಾಗಿ ಕಂಡುಬರುತ್ತಿದೆ. ಸಂಘಟಿತ ದುಡಿಮೆಗಾರರಿಗೆ ಸಂಬಂಧಿಸಿದಂತೆ ಪುರುಷರ ಪ್ರಮಾಣ ಅಧಿಕವಾಗಿದ್ದರೆ ಅಸಂಘಟಿತ ದುಡಿಮೆಗಾರರಲ್ಲಿ ಅಂದರೆ ದಿನಗೂಲಿ ಮಾರುಕಟ್ಟೆಯಲ್ಲಿ ಮಾತ್ರ ಮಹಿಳಾ ದುಡಿಮೆಗಾರರ ಪ್ರಮಾಣ ಅಧಿಕವಾಗಿದೆ. ಅಕ್ಷರಸ್ಥರಲ್ಲಿ ಪುರುಷರ ಪ್ರಮಾಣ ಅಧಿಕವಾಗಿದ್ದರೆ ಅನಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣ ಅಧಿಕವಾಗಿದೆ. ಯಾಕೆ ಹೀಗೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದೇ ಕುತೂಹಲಕಾರಿ ಸಂಗತಿಯಾಗಿದೆ. ಈ ಬಗೆಯ ಪ್ರಶ್ನೆಗಳು ಹೊಸ ಬಗೆಯಲ್ಲಿ ಸಮಸ್ಯೆಯನ್ನು ಕುರಿತಂತೆ ಚಿಂತಿಸಲು ಅನುವು ಮಾಡಿಕೊಡುತ್ತವೆ. ಬಡವರಿಗೆ ಸಂಬಂಧಿಸಿದ ಸಂಗತಿಗಳು ಯಾವಾಗಲೂ ಸಂಶೋಧನೆಯ, ಅದನ್ನು ಕುರಿತ ಚರ್ಚೆಯ ಮುಂಚೂಣಿಯಲ್ಲಿರಬೇಕು. ಈ ಹಿನ್ನೆಲೆಯಲ್ಲಿ ಇಲ್ಲಿನ ಅಧ್ಯಯನ ಪ್ರಬಂಧವನ್ನು ಓದುಗರು ನೋಡಬೇಕೆಂದು ಕೇಳಿಕೊಳ್ಳುತ್ತೇನೆ.

ಶಿಷ್ಟ – ಪರಿಶಿಷ್ಟ ಆಯಾಮಗಳು

ಇದರಷ್ಟೇ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ರೋಚಕವಾದ ಸಂಗತಿಯೆಂದರೆ ಅಭಿವೃದ್ಧಿಯ ಶಿಷ್ಟ – ಪರಿಶಿಷ್ಟ ನೆಲೆಗಳು. ಜೀನ್ ಡ್ರೀಜ್ ಮತ್ತು ಅಮರ್ತ್ಯಸೆನ್ ಕೂಡಿ ರಚಿಸಿರುವ ಭಾರತ ಕುರಿತ ಕೃತಿಯಲ್ಲಿ (2002) ಅಭಿವೃದ್ಧಿಯು ಯಾಕೆ ಜನರ ಬದುಕಾಗಿ ಪರಿವರ್ತನೆಯಾಗುತ್ತಿಲ್ಲ ಎಂಬುದನ್ನು ವಿಶ್ಲೇಷಣೆ ಮಾಡುತ್ತಾ ಅದಕ್ಕೆ ನಮಲ್ಲಿ ಅನೂಚಾನವಾಗಿ ಹರಿದುಕೊಂಡು ಬರುತ್ತಿರುವ ಸಾಮಾಜಿಕ ಅಸಮಾನತೆಗಳ ಮತ್ತು ಪಾರಮಾರ್ಥಿಕ ಅನಿಷ್ಟಗಳು ಕಾರಣ ಎಂಬ ವಾದವನ್ನು ಮಂಡಿಸಿದ್ದಾರೆ. ನಮ್ಮ ಸಂದರ್ಭದಲ್ಲಿ ಅಭಿವೃದ್ಧಿಯನ್ನು ಕುರಿತ ಚರ್ಚೆಯಲ್ಲಿ ಸಾಮಾಜಿಕ ಸಂಗತಿಗಳನ್ನು ಪರಿಶೀಲಿಸಿದರೆ ಬೇರೆ ಮಾರ್ಗವಿಲ್ಲವಾಗಿದೆ. ಈ ಸಾಮಾಜಿಕ ಸಂಗತಿಗಳನ್ನು ಪರಿಗಣಿಸದೆ ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಈ ಕಾರಣಕ್ಕೆ ಇಲ್ಲಿ ಜನರನ್ನು ಒಳಗೊಳ್ಳುವ ಅಭಿವೃದ್ಧಿಯನ್ನು ಶಿಷ್ಟ – ಪರಿಶಿಷ್ಟ ನೆಲೆಯಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ.

ಸಂಶೋಧನೆಯಿಂದ ಉಪಯೋಗವೇನು?

ಈ ಪ್ರಬಂಧದ ಎರಡನೆಯ ಭಾಗದಲ್ಲಿ ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಸರ್ಕಾರವು ಮಾಡಿದ ಒಂದು ವಿಕೃತಿಯನ್ನು ಮತ್ತು ಅದನ್ನು ಸರಿಪಡಿಸುವಂತೆ ನಾವು, ಅಂದರೆ ನಾನು ಮತ್ತು ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯ ಸದಸ್ಯರಲ್ಲೊಬ್ಬರಾದ ಡಾ. ಬಿ.ಶೇಷಾದ್ರಿ, ನಡೆಸಿದ ಪ್ರಯತ್ನ ಹಾಗೂ ಅದಕ್ಕೆ ದೊರೆತ ಜಯ ಮತ್ತು ಅದರಿಂದ ಗುಲಬರ್ಗಾ ವಿಭಾಗಕ್ಕೆ ಉಂಟಾಗುತ್ತಿದ್ದ ರೂ.1309 ಕೋಟಿ ಅನುದಾನ ಕಡಿತವನ್ನು ಉಳಿಸಿದ್ದು ಮುಂತಾದ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಸಂಶೋಧನೆಯ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು ಅದರ ನೀತಿಯಲ್ಲಿರುವ ತಪ್ಪುಗಳನ್ನು ಸರಿಪಡಿಸುವಂತೆ ಮಾಡಬಹುದು ಎಂಬುದಕ್ಕೆ ನಮ್ಮ ಪ್ರಯತ್ನವು ಒಂದು ನಿದರ್ಶನವಾಗಬಲ್ಲದು. ನಮ್ಮ ಅಧ್ಯಯನ ಮತ್ತು ಒತ್ತಡವನ್ನು ಮನ್ನಿಸಿ ಸರ್ಕಾರವು ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಂಡಿತು. ಸಂಶೋಧನೆಯಿಂದ ಪ್ರಯೋಜನವುಂಟು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವೆಂದು ಅಭಿಧಾನ ಪಡೆದಿರುವ ಗುಲಬರ್ಗಾ ವಿಭಾಗದಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ನಾವು ಸದರಿ ಪ್ರದೇಶಕ್ಕೆ ಉಂಟಾಗುತ್ತಿದ್ದ ರೂ. 1309 ಕೋಟಿ ಹಾನಿಯನ್ನು ತಡೆದಿದ್ದೇವೆ. ಇದು ಸಣ್ಣ ಸಾಧನೆಯಲ್ಲ. ಇದು ಕನ್ನಡ ವಿಶ್ವವಿದ್ಯಾಲಯಕ್ಕೆ, ಅಲ್ಲಿನ ಅಭಿವೃದ್ಧಿ ಅಧ್ಯಯನ ವಿಭಾಗಕ್ಕೆ ಸಂದ ಜಯವಾಗಿದೆ. ಇದೊಂದು ನಮ್ಮ ಜವಾಬುದಾರಿಯೆಂದು ಕೆಲಸ ಮಾಡಿದ್ದೇವೆ.

ಸರ್ಕಾರದ ಮೇಲೆ ನಾವು ಹೇಗೆ ಒತ್ತಡ ತಂದೆವು, ಅದಕ್ಕೆ ಯಾವ ಯಾವ ಪ್ರಯತ್ನ ನಡೆಸಿದೆವು ಮತ್ತು ಸರ್ಕಾರವು ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಏನು ತಪ್ಪು ಮಾಡಿತ್ತು ಮುಂತಾದ ಸಂಗತಿಗಳಿಗೆ ಇಲ್ಲಿ ದಾಖಲೆಗಳನ್ನು ಮತ್ತು ಪುರಾವೆ ಒದಗಿಸಲಾಗಿದೆ. ಇಷ್ಟಾದರೂ ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಮುಗಿದಿಲ್ಲ. ಈ ಸಮಿತಿಯ ಬಹು ಮುಖ್ಯ ಶಿಫಾರಸ್ಸಾದ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಗೆ ಸರ್ಕಾರವು ಒದಗಿಸುತ್ತಿರುವ ಅನುದಾನ ಹೆಚ್ಚುವರಿಯಾದುದಲ್ಲ. ಸಮಿತಿಯು ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಬೇಕೆಂದು ಶಿಫಾರಸ್ಸು ಮಾಡಿದೆ. ಇದನ್ನು ಸರಿಪಡಿಸುವ ದಿಶೆಯಲ್ಲಿ ಪ್ರಯತ್ನ ನಡೆಯಬೇಕು. ಮತ್ತೊಂದು ಸಮಸ್ಯೆಯೆಂದರೆ ಈ ಕಾರ್ಯಕ್ರಮದಲ್ಲಿ ಕ್ರಿಯಾಯೋಜನೆ ರೂಪಿಸುವ ಜವಾಬುದಾರಿಯನ್ನು ಸರ್ಕಾರವು ರಾಜ್ಯಮಟ್ಟದ ಇಲಾಖಾಧಿಕಾರಿಗಳಿಗೆ ವಹಿಸಿಕೊಟ್ಟಿದೆ. ಇದು ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ಪ್ರತಿಪಾದಿಸಿರುವ ತತ್ವಕ್ಕೆ ಮತ್ತು ವಿಕೇಂದ್ರೀಕರಣ ಸಿದ್ಧಾಂತಕ್ಕೆ ವಿರುದ್ಧವಾದುದು. ಇದನ್ನು ಸರಿಪಡಿಸುವ ದಿಶೆಯಲ್ಲಿ ಕೆಲಸವಾಗಬೇಕಾಗಿದೆ. ಈ ದಿಶೆಯಲ್ಲಿ ಪ್ರಸ್ತುತ ಕೃತಿಯು ಪ್ರೇರಣೆ ನೀಡುತ್ತದೆಯೆಂದು ಭಾವಿಸಲಾಗಿದೆ.