ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಟಾನ : 200708 ರಿಂದ 200910

ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯು ತೀವ್ರವಾಗಿರುವುದನ್ನು ಅನೇಕ ಅಧ್ಯಯನಗಳು ಹಾಗು ವರದಿಗಳು ದೃಢಪಡಿಸಿವೆ. ಈ ದಿಶೆಯಲ್ಲಿ ಸರ್ಕಾರವು 2000ದಲ್ಲಿ ನೇಮಿಸಿದ್ದ ಡಾ. ಡಿ.ಎಮ್.ನಂಜುಂಡಪ್ಪ ಸಮಿತಿ ವರದಿಯು ವಿಸ್ತೃತ ರೂಪದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಮಾಪನ ಮಾಡಿ ಅದರ ತೀವ್ರತೆಯನ್ನು ತೋರಿಸಿಕೊಟ್ಟಿತು. ಅದಕ್ಕಾಗಿ ಸಮತಿಯು ಐದು ವಲಯಗಳಿಗೆ ಸಂಬಂಧಿಸಿದ 35 ಸೂಚಿಗಳನ್ನು ಒಳಗೊಂಡ ‘ಸಂಯುಕ್ತ ಸಮಗ್ರ ಅಭಿವೃದ್ಧಿ ಸೂಚ್ಯಂಕ’ ವೆಂಬ ಮಾಪನವನ್ನು ಬಳಸಿತು. ಅದು ಗುರುತಿಸಿದ್ದ 114 ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯೊಂದನ್ನು ಶಿಫಾರಸ್ಸು ಮಾಡಿತ್ತು. ಇದರ ಜೊತೆಗೆ ಅದು ಅನೇಕ ಇತರೆ ಶಿಫಾರಸ್ಸುಗಳನ್ನು ಮಾಡಿತ್ತು. ಆದರೆ, ಸರ್ಕಾರಗಳು ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯನ್ನು ಕೇವಲ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಗೆ ಮೊಟಕುಗೊಳಿಸಿ ಅದರ ಉಳಿದ ಶಿಫಾರಸ್ಸುಗಳನ್ನು ಮೂಲೆಗುಂಪು ಮಾಡಿದೆ. ಉದಾಹರಣೆಗೆ ಸರ್ಕಾರವು ಮೊದಲು ತನ್ನ ಪ್ರಾದೇಶಿಕ ಅಭಿವೃದ್ಧಿ ನೀತಿಯನ್ನು ಪ್ರಕಟಿಸಬೇಕೆಂದು ಸಮತಿಯು ಶಿಫಾರಸ್ಸು ಮಾಡಿತ್ತು. ಇದರ ಬಗ್ಗೆ ಯಾವ ಸರ್ಕಾರವಾಗಲಿ ಅಥವಾ ಮಂತ್ರಿ ಮಹೋದಯರಾಗಲಿ ಇದುವರೆವಿಗೂ ಚಕಾರವೆತ್ತಿಲ್ಲ. ಅಂತಹ ನೀತಿಯೊಂದರ ಅಗತ್ಯವನ್ನು ಸರ್ಕಾರಗಳು ಮನಗಂಡಿಲ್ಲವೆಂಬುದು ಅವುಗಳು ಪ್ರಾದೇಶಿಕ ಅಸಮಾನತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂಬುದಕ್ಕೆ ಅಪ್ಪಟ ಸಾಕ್ಷಿಯಾಗಿದೆ. ಸಮಿತಿಯು ತನ್ನ ವರದಿಯನ್ನು ಸಲ್ಲಿಸಿ ಆರು ವರ್ಷಗಳು ಕಳೆದರೂ ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯನ್ನು ಸದಾ ಜಪಿಸುವ ಸರ್ಕಾರಕ್ಕೆ ‘ಪ್ರಾದೇಶಿಕ ಅಭಿವೃದ್ಧಿ ನೀತಿ’ಯೊಂದನ್ನು ಪ್ರಕಟಿಸಬೇಕೆಂಬ ಅರಿವು ಉಂಟಾಗಿಲ್ಲ.

ಈ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯನ್ನು ಸರ್ಕಾರವು 2007 – 08ನೆ ಸಾಲಿನಲ್ಲಿ ಜಾರಿಗೊಳಿಸಿತು. ಅದಕ್ಕಾಗಿ ಮೊದಲ ವರ್ಷದ ಬಾಬ್ತು ರೂ.1571.50 ಕೋಟಿಯನ್ನು ಮೀಸಲಿಟ್ಟಿತ್ತು. ಅದರ ಎರಡನೆಯ ವರ್ಷದ ಬಾಬ್ತು (2008 – 09) ರೂ. 2547 ಕೋಟಿಯನ್ನು ತೆಗೆದಿರಿಸಿದೆ. ಮೂರನೆಯ ವರ್ಷ 2009 – 10ನೆಯ ಸಾಲಿನಲ್ಲಿ ಇದಕ್ಕಾಗಿ ಮೀಸಲಿಟ್ಟ ಮೊತ್ತ ರೂ. 2574 ಕೋಟಿ. ಇದನ್ನು ಸಮಿತಿ ಸೂತ್ರದ ಪ್ರಕಾರ ಅನುದಾನ ಹಂಚಿದರೆ ಹೈ.ಕ.ಪ್ರ.ಕ್ಕೆ ದೊರೆಯುವ ಮೊತ್ತವನ್ನು ವರ್ಷವಾರು ಕೋಷ್ಟಕ – 10ರಲ್ಲಿ ತೋರಿಸಿದೆ.

ಈಗ ಪ್ರಸ್ತುತ ಸರ್ಕಾರವು ಡಾ. ಡಿ.ಎಂ. ನಂಜುಂಡಪ್ಪ ಸಮತಿ ವರದಿಯ ಅನುಷ್ಟಾನದ ನಿರ್ವಹಣೆಗಾಗಿ ವಿಶೇಷ ಸಮಿತಿಯೊಂದನ್ನು ಶ್ರೀ ಸುಶೀಲ್ ನಮೋಶಿ ಎಂ.ಎಲ್.ಸಿ. ಅವರ ಅಧ್ಯಕ್ಷತೆಯಲ್ಲಿ ರಚಿಸಿವೆ. ಈಗ ಏಳುವ ಪ್ರಶ್ನೆಯೆಂದರೆ ಈ ಎಂಟವು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯೆಂಬುದು ಎಲ್ಲಿದೆ? ಅದಕ್ಕೆ ನೀಡಿರುವ ಅನುದಾನವು ಹೆಚ್ಚುವರಿಯಾದುದೊ ಅಥವಾ ರಾಜ್ಯ ಯೋಜನಾ ವೆಚ್ಚದ ಭಾಗವಾಗಿದೆಯೋ? ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸಿನಂತೆ ವಿಶೇಷ ಯೋಜನೆಯನ್ನು ಸರ್ಕಾರವು ಅನುಷ್ಟಾನಗೊಳಿಸುತ್ತಿದೆಯೇ? ಯೋಜನೆಯ ಅಸ್ತಿತ್ವವೇ ಪ್ರಶ್ನೆಗೊಳಗಾಗಿರುವಾಗ ಮತ್ತು ಅದಕ್ಕೆ ಹೆಚ್ಚುವರಿಯಾಗಿ ಅನುದಾನವೆ ಇಲ್ಲದಿರುವಾಗ ವಿಶೇಷ ಸಮಿತಿಯು ಯಾವುದೆ ನಿರ್ವಹಣೆ ಮಾಡುತ್ತದೆ? ಪ್ರಾದೇಶಿಕ ಅಸಮಾನತೆ ಬಗ್ಗೆ ಸರ್ಕಾರಕ್ಕೆ ಕಾಳಜಿಯಿರುವುದರ ಬಗ್ಗೆ ಅನುಮಾನವುಂಟಾಗುತ್ತದೆ. ಅದನ್ನು ಸರ್ಕಾರಕ್ಕೆ ಮತ್ತು ಅಧಿಕಾರಿ ವರ್ಗಕ್ಕೆ ಸರಿಯಾಗಿ ಪರಿಭಾವಿಸಿಕೊಳ್ಳಲು ಸಾಧ್ಯವಾಗಿರುವಂತೆ ಕಾಣುವುದಿಲ್ಲ.

ಇಲ್ಲಿ ಏನನ್ನು ಹೇಳಲು ಪ್ರಯತ್ನಿಸಲಾಗಿದೆಯೆಂದರೆ, ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸಿಗೂ ಮತ್ತು ಸರ್ಕಾರವು ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿರುವ ರೀತಿಗೂ ಯಾವುದೆ ಸಂಬಂಧವಿರುವಂತೆ ಕಾಣುತ್ತಿಲ್ಲ, ಕೇವಲ ಹೇಳಿಕೊಳ್ಳಲು ಮಾತ್ರ ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯ ವರದಿ. ಆದರೆ ಮಾಡುತ್ತಿರುವುದೆಲ್ಲ ಅದಕ್ಕೆ ವಿರುದ್ಧವಾದುದಾಗಿದೆ. ಈ ಕಾರಣದಿಂದಾಗಿ ಸರ್ಕಾರವು ವಿಶೇಷ ಅಭಿವೃದ್ಧಿ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿರುವ ರೀತಿಯನ್ನು ನೋಡಿದರೆ, ಅದರಿಂದ ಪ್ರಾದೇಶಿಕ ಅಸಮಾನತೆ ಇಲ್ಲವಾಗುವುದು ಅಥವಾ ಕಡಿಮೆಯಾಗುವುದು ಸಾಧ್ಯವಿಲ್ಲ. ಸಮಿತಿಯ ಶಿಫಾರಸ್ಸಿನಂತೆ ವಿಶೇಷ ಅಭಿವೃದ್ಧಿ ಯೋಜನೆಯು ಅನುಷ್ಟಾನಗೊಳ್ಳುತ್ತಿಲ್ಲ. ಅದಕ್ಕಿಂತ ಮುಖ್ಯವಾಗಿ ಈ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಗೆ ನೀಡುತ್ತಿರುವ ಅನುದಾನವು ಅದು ಹೇಳಿಕೊಳ್ಳುತ್ತಿರುವಂತೆ ‘ಹೆಚ್ಚುವರಿ’ಯಾದುದಲ್ಲ. ಅದು ನಿಯಮಿತವಾದ ಇಲಾಖೆಗಳಿಗೆ ವಾರ್ಷಿಕ ಅನುದಾನದ ಭಾಗವೇ ಆಗಿದೆ. ಅಂದಮೇಲೆ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ ಇಲ್ಲವೆಂದಾಯಿತು. ಹಾಗಿದ್ದರೆ ಶ್ರೀ ಸುಶೀಲ ನಮೋಶಿ ಅವರ ಅಧ್ಯಕ್ಷತೆಯಲ್ಲಿ ಸರ್ಕಾರವು ನೇಮಿಸಿರುವ ‘ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಅನುಷ್ಟಾನ ನಿರ್ವಹಣಾ ಸಮಿತಿ’ಯ ಕಾರ್ಯಬಾರವೇನು?. ಅದು ಏನನ್ನು ನಿರ್ವಹಿಸುತ್ತದೆ?.

ಈ ಸರ್ಕಾರವು ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸುಗಳ ಅನುಷ್ಟಾನದ ನಿರ್ವಹಣೆಗಾಗಿ ಒಂದು ವಿಶೇಷ ಸಮಿತಿಯನ್ನು 2008ರಲ್ಲಿ ರಚಿಸಿದೆ. ದೆ ಅಧ್ಯಕ್ಷರಿಗೆ ಸಂಪುಟ ಸಚಿವ ಸ್ಥಾನಮಾನ ನೀಡಿಲಾಗಿದೆ. ಈ ಉಸ್ತುವಾರಿ ಸಮಿತಿಯು ಏನು ಮಾಡುತ್ತಿದೆ?. ಅದು ನಿಜವಾಗಲೂ ವರದಿಯ ಶಿಫಾರಸ್ಸುಗಳ ಅನುಷ್ಟಾನದ ಮೇಲೆ ಉಸ್ತುವಾರಿ ಮಾಡುತ್ತಿದೆಯೇ? ಕಳೆದ ಎರಡು ವರ್ಷಗಳ ಅದರ ಕಾರ್ಯ ವೈಖರಿಯನ್ನು ನೋಡಿದರೆ ಅದು ಕೇವಲ ಹೆಸರಿಗೆ ಮಾತ್ರ ಇರುವಂತೆ ಕಾಣುತ್ತಿದೆ. ಅಲ್ಲದಿದ್ದರೆ ಅದು ಸರ್ಕಾರದ ಮೇಲೆ ಒತ್ತಡ ಹೇರಿ ಬಜೆಟ್ಟಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗಾಗಿ ‘ಹೆಚ್ಚುವರಿ’ ಅನುದಾನ ನೀಡುವಂತೆ ಮಾಡಬಹುದಿತ್ತು. ರಾಜ್ಯಮಟ್ಟದ ಇಲಾಖೆಗಳಿಗೆ ಅದರ ಬಾಬ್ತು ಕ್ರಿಯಾ ಯೋಜನೆ ರೂಪಿಸುವ ಅಧಿಕಾರವನ್ನು ತಪ್ಪಿಸಿ ಜಿಲ್ಲಾ ಪಂಚಾಯತಿಗಳಿಗೆ ಅದರ ಜವಾಬುದಾರಿಯನ್ನು ಕೊಡಿಸಬಹುದಾಗಿತ್ತು. ‘ಪ್ರಾದೇಶಿಕ ಅಭಿವೃದ್ಧಿ ನೀತಿ’ಯನ್ನು ಪ್ರಕಟಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬಹುದಿತ್ತು. ಆದರೆ ಇದಾವುದನ್ನು ಅದು ಮಾತುತ್ತಿಲ್ಲ. ಅದರಿಂದ ಇದು ಸಾಧ್ಯವಿಲ್ಲ. ಏಕೆಂದರೆ ಎಲ್ಲರಿಗೂ ತಿಳಿದಿರುವ ಗುಟ್ಟೆಂದರೆ ಅದು ಕೇವಲ ಹೆಸರಿಗೆ ಮಾತ್ರ ಇದೆ. ಅದು ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿಲ್ಲ. ಒಟ್ಟಾರೆ ಇನ್ನಾದರೂ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ‘ಮನೆಗೆ ಬೆಂಕಿಬಿದ್ದ ಮೇಲೆ ಬಾವಿ ತೋಡುವ ಕೆಲಸ’ ಮಾಡುವುದಕ್ಕೆ ಪ್ರತಿಯಾಗಿ ತಕ್ಷಣ ಪ್ರಾದೇಶಿಕ ಅಸಮಾನತೆಯ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅದರ ಬಗ್ಗೆ ಕ್ರಿಯಾಶೀಲವಾಗಬೇಕು.

ಒಟ್ಟಾರೆ ಪ್ರಾದೇಶಿಕ ಅಸಮಾನತೆಯನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಈಗಿರುವಂತೆ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯನ್ನು ಹೆಸರಿಗೆ ಮಾತ್ರ ಅನುಷ್ಟಾನಗೊಳಿಸಿದರೆ ಅದರಿಂದ ಪ್ರಾದೇಶಿಕ ಅಸಮಾನತೆಯ ನಿವಾರಣೆಯಾಗುವುದಿರಲಿ ಕಡಿಮೆ ಯಾಗುವುದು ಸಾಧ್ಯವಿಲ್ಲ. ಈ ಬಗ್ಗೆ ಗುಲಬರ್ಗಾ ವಿಭಾಗದ ಜನರು ಮತ್ತು ಜನಪ್ರತಿನಿಧಿಗಳು ಜವಾಬುದಾರಿಯಿಂದ ಯೋಚಿಸಬೇಕು. ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯನ್ನು ಅದರ ಶಿಫಾರಸ್ಸುಗಳಿಗನುಗುಣವಾಗಿ ಅನುಷ್ಟಾನಗೊಳಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಬೇಕು. ಇಲ್ಲಿ ಎತ್ತಿರುವ ಪ್ರಶ್ನೆಗಳನ್ನು ಪರಿಗಣಿಸಿ ಸೂಕ್ತ ಕ್ರಮಗಳನ್ನು ಸರ್ಕಾರವು ತೆಗೆದುಕೊಳ್ಳುತ್ತದೆಯೆಂದು ಮತ್ತು ಈ ಪ್ರಶ್ನೆಗಳಿಗೆ ಸಮಾಧಾನವನ್ನು ನೀಡುತ್ತದೆಯೆಂದು ನಾನು ಭಾವಿಸುತ್ತೇನೆ. ಅದು ನೀಡದಿದ್ದರೂ ಪರವಾಗಿಲ್ಲ. ಅದರೆ, ಅದು ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ದಿಶೆಯಲ್ಲಿ ಕ್ರಮ ತೆಗೆದುಕೊಂಡರೆ ಅದು ನಮಗೆ ಸಾಕು. ಈ ಬಗ್ಗೆ ಜನರು ಮತ್ತು ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕಾಗುತ್ತದೆ. ಈ ವಿಷಯದಲ್ಲಿ ಪ್ರಸ್ತುತ ಪ್ರಬಂಧವು ಪ್ರೇರಣೆ ನೀಡುತ್ತದೆಯೆಂದು ನಾನು ತಿಳಿದಿದ್ದೇನೆ.

ನಾವೇನು ಮಾಡಬಹುದು?

ಮೊಟ್ಟಮೊದಲನೆಯದಾಗಿ ಡಾಡಿ.ಎಮ್.ನಂಜುಂಡಪ್ಪ ಸಮಿತಿ ವರದಿಯನ್ನು ವಿವರವಾಗಿ ಅಧ್ಯಯನ ಮಾಡಬೇಕಾಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಅದೇನು ಅಂತಿಮ ಪರಿಹಾರವಲ್ಲವೆಂಬುದು ನಿಜ. ಆದರೆ ಪ್ರಾದೇಶಿಕ ಅಸಮಾನತೆಯ ಆಳ – ಹರವುಗಳನ್ನು ಅರ್ಥಮಾಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಈ ಬಗ್ಗೆ ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯ ವರದಿಯು ಪ್ರಾದೇಶಿಕ ಅಸಮಾನತೆ ಕುರಿತಂತೆ ಪ್ರಾಥಮಿಕವೆನ್ನಬಹುದಾದ ಮಾಹಿತಿಯನ್ನು ಒದಗಿಸಿಕೊಡುತ್ತದೆ. ಅದು ಮೊಟ್ಟ ಮೊದಲು ಬಾರಿಗೆ ರಾಜ್ಯದಲ್ಲಿನ ಪ್ರಾದೇಶಿಕ ಅಸಮಾನತೆಯ ವಿರಾಟ್ ಸ್ವರೂಪವನ್ನು ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ತೋರಿಸಿಕೊಟ್ಟಿತು. ಈ ವರದಿಯು ಸರಳವಾಗಿ ಅರ್ಥವಾಗುವುದಿಲ್ಲ. ಈ ಕಾರಣಕ್ಕೆ 2007 – 08ರ ಬಜೆಟ್ಟಿನಲ್ಲಿ ಗುಲಬರ್ಗಾ ವಿಭಾಗಕ್ಕೆ ಅನ್ಯಾಯ ಮಾಡುವ ರೀತಿಯಲ್ಲಿ ಅನುದಾನ ಹಂಚಿಕೆ ಸೂತ್ರವನ್ನು ಸರ್ಕಾರ ಅಳವಡಿಸಿಕೊಂಡರೂ ವಿಭಾಗದೊಂದಿಬ್ಬರೂ ಜನಪ್ರತಿನಿಧಿಗಳನ್ನು ಬಿಟ್ಟರೆ ಯಾವ ಜನಪ್ರತಿನಿಧಿಯೂ ಅದರ ಬಗ್ಗೆ ತಮ್ಮ ಆಕ್ಷೇಪವೆತ್ತಲಿಲ್ಲ. ವರದಿಯಲ್ಲಿ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯನ್ನು ಅಳೆಯಲು ಬಳಸಿರುವ ಸಂಯುಕ್ತ ಸಮಗ್ರ ಅಭಿವೃದ್ಧಿ ಸೂಚ್ಯಂಕ ಮತ್ತು ಸಂಚಯಿತ ದುಸ್ಥಿತಿ ಸೂಚ್ಯಂಕಗಳ ಗಣನೆಯನ್ನು ಹೇಗೆ ಮಾಡಬೇಕೆಂಬುದನ್ನು ತಿಳಿದುಕೊಳ್ಳಬೇಕು. ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ ಆರಂಭಗೊಂಡ ಮೊದಲನೆಯ ವರ್ಷವೇ ರೂ 128 ಕೋಟಿ ಗುಲಬರ್ಗಾ ವಿಭಾಗಕ್ಕೆ ಹಾನಿಯಾಗುತ್ತದೆ ಎಂಬುದು ಗೊತ್ತಾದ ಮೇಲೂ ವಿಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಯಾವುದೇ ಒತ್ತಡ ತರಲಿಲ್ಲ. ಅದನ್ನು ನಾನು ಮತ್ತು ಡಾ. ಬಿ.ಶೇಷಾದ್ರಿ ಸ್ವಂತ ಆಸಕ್ತಿಯಿಂದ ಮಾಡಬೇಕಾಯಿತು. ಈ ಕಾರಣಕ್ಕೆ ವರದಿಯನ್ನು ಅಧ್ಯಯನ ಮಾಡಿ ಅದರ ತಿರುಳನ್ನು ಮನದಟ್ಟು ಮಾಡಿಕೊಳ್ಳುವುದು ಬಹುಮುಖ್ಯ.

ಎರಡನೆಯದಾಗಿ ಸರ್ಕಾರವು ತಕ್ಷಣದಲ್ಲಿ ಸಮಿತಿಯ ಬಹು ಮುಖ್ಯ ಶಿಫಾರಸ್ಸಾದ ಪ್ರಾದೇಶಿಕ ಅಭಿವೃದ್ಧಿ ನೀತಿಯನ್ನು ಪ್ರಕಟಿಸುವ ನಿರ್ಣಯ ತೆಗೆದುಕೊಳ್ಳಬೇಕು. ಅದರಿಂದ ವಾರ್ಷಿಕವಾಗಿ ಪ್ರಾದೇಶಿಕ ಅಸಮಾನತೆಯ ನೆಲೆ – ಬೆಲೆಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಇದನ್ನು ಗುಲಬರ್ಗಾ ವಿಭಾಗದ ಜನಪ್ರತಿನಿಧಿಗಳು ಮುಖ್ಯವಾಗಿ ಒತ್ತಾಯಿಸಬೇಕು. ಅದರಿಂದ ಏನಾದರೂ ಉಪಯೋಗವಾದರೆ ಅದು ಗುಲಬರ್ಗಾ ವಿಭಾಗಕ್ಕೆ ದೊರೆಯುತ್ತದೆ. ಶಾಸನಸಭೆಯಲ್ಲಿ ಈ ಬಗ್ಗೆ ಜನಪ್ರತಿನಿಧಿಗಳು ಒತ್ತಾಯಿಸಬೇಕು. ಒಮ್ಮೆಯಾದರೂ ವಿಧಾನಸಭೆಯಲ್ಲಿ ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸುಗಳ ಬಗ್ಗೆ ವಿವರವಾದ ಚರ್ಚೆಯಾಗಿಲ್ಲ. ಸರ್ಕಾರವು ವರದಿಯಲ್ಲಿನ ಶಿಫಾರಸ್ಸನ್ನು ಕೇವಲ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಗೆ ಸಂಕುಚಿತಗೊಳಿಸಿಬಿಟ್ಟಿದೆ. ಈ ಬಗೆಯ ವಿಕೃತಿಗಳು ನಡೆಯದಂತೆ ನೋಡಕೊಳ್ಳುವ ಜವಾಬುದಾರಿ ಗುಲಬರ್ಗಾ ವಿಭಾಗದ ಜನಪ್ರತಿನಿಧಿಗಳ ಮೇಲಿದೆ.

ಮೂರನೆಯದಾಗಿ ಸಂಪರ್ಕ – ಸಂವಹನದ ಎಲ್ಲ ಮಾಧ್ಯಮಗಳನ್ನು ಗುಲಬರ್ಗಾ ವಿಭಾಗದ ಜನರು ಬಳಸಿಕೊಳ್ಳಬೇಕು. ಸರ್ಕಾರವು ಅನೇಕ ಹೊಸ ಕ್ರಮಗಳನ್ನು ಪ್ರಕಟಿಸುತ್ತಲೆ ಇರುತ್ತದೆ. ಉದಾಹರಣೆಗೆ ಸಂಸ್ಕೃತ ವಿಶ್ವವಿದ್ಯಾಲಯ ಅಥವಾ ಐಐಟಿ ಅಥವಾ ಕೇಂದ್ರ ಸರ್ಕಾರದ ಯಾವುದಾದರೂ ಸಂಸ್ಥೆ. ಅವುಗಳನ್ನು ಗುಲಬರ್ಗಾ ವಿಭಾಗದಲ್ಲಿ ಸ್ಥಾಪಿಸಲು ಸುದ್ಧಿ ಮಾಧ್ಯಮಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರಬೇಕು. ಉದಾಹರಣೆಗೆ ಕರ್ನಾಟಕದ ಅತ್ಯಂತ ಹಳೆಯ ಸಂಸ್ಕೃತ ವಿದ್ಯಾ ಸಂಸ್ಥೆ ಶಂಕರ ಸಂಸ್ಕೃತ ಕಾಲೇಜು ಗುಲಬರ್ಗಾ ವಿಭಾಗದ ಯಾದಗಿರ್‌ನಲ್ಲಿತ್ತು. ಹೀಗೆ ಒತ್ತಾಯ ಮಾಡದಿದ್ದರೆ ಅದು ಈಗಾಗಲೇ ಅಭಿವೃದ್ಧಿಯನ್ನು ಗುತ್ತಿಗೆ ಹಿಡಿದಿರುವ ಬೆಂಗಳೂರು – ಮೈಸೂರುಗಳಲ್ಲಿ ಸ್ಥಾಪಿನೆಯಾಗಿಬಿಡುತ್ತದೆ. ಅಲ್ಲಿ ಎಷ್ಟು ಸಂಸ್ಥೆಗಳನ್ನು ಸ್ಥಾಪಿಸುತ್ತೀರಿ? ಆ ನಗರಗಳು ಬೆಳೆದಿದ್ದು ಸಾಕು. ಈಗಾಗಲೆ ಅವು ಜನರ, ಕಟ್ಟಡಗಳ ಮತ್ತು ವಾಹನಗಳ ಒತ್ತಡದಿಂದ ಸತ್ತುಹೋಗುತ್ತಿವೆ. ಈಗ ಯಾವುದೆ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾದರೆ, ಯಾವುದೆ ಇಲಾಖೆಯನ್ನು ಆರಂಭಿಸುವುದಾದರೆ, ಅಥವಾ ಉದ್ಧಿಮೆ ಕಟ್ಟುವುದಾದರೂ ಅಥವಾ ಯಾವುದೇ ಸಂಸ್ಥೆಯನ್ನು ಶುರು ಮಾಡುವುದಾದರೆ ಅವುಗಳನ್ನು ಉತ್ತರ ಕರ್ನಾಟಕದಲ್ಲಿ, ಅದರಲ್ಲೂ ರಾಜ್ಯದ ಅತ್ಯಂತ ಹಿಂದುಳಿದ ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಸ್ಥಾಪಿಸಬೇಕು. ಎಲ್ಲವನ್ನು ಗುಲಬರ್ಗಾ ವಿಭಾಗಕ್ಕೆ ವರ್ಗಾಯಿಸಬೇಕು. ಅಂತಹ ಒತ್ತಡವನ್ನು ಜನರು ಸರ್ಕಾರದ ಮೇಲೆ ತರಬೇಕಾಗುತ್ತದೆ.

ಕೊನಯದಾಗಿ, ಗುಲಬರ್ಗಾ ವಿಭಾಗದ ಜಿಲ್ಲೆಗಳ ಮುಖ್ಯ ಸಮಸ್ಯೆ ಬಂಡವಾಳದ್ದಲ್ಲ, ತಂತ್ರಜ್ಞಾನದ್ದಲ್ಲ, ವಿಮಾನ ನಿಲ್ದಾಣದ್ದಲ್ಲ. ಸಮಸ್ಯೆಯಿರುವುದು ಅಕ್ಷರ ಸಂಸ್ಕೃತಿಯದ್ದಾಗಿದೆ. ಈ ವಿಭಾಗದ ಜಿಲ್ಲೆಗಳಲ್ಲಿನ ಸಾಕ್ಷರತೆ ಪ್ರಮಾಣವನ್ನು ಉತ್ತಮಪಡಿಸದೆ ಮತ್ತು ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸದೆ ಮತ್ತು ಅದನ್ನು ಸಮರ್ಪಕವಾಗಿ ಬೆಳೆಸದೆ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವುದು ಸಾಧ್ಯವಿಲ್ಲ. ಪ್ರಾದೇಶಿಕ ಅಸಮಾನತೆಯಿಂತಹ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವುದು ಸರಳವಾದ ಸಂಗತಿಯಲ್ಲ. ಅದಕ್ಕೆ ಏನು ಪರಿಹಾರವೆಂಬುದನ್ನು ಗುರುತಿಸುವುದು ಸುಲಭದ ಕೆಲಸವಲ್ಲ. ಈ ದಿಶೆಯಲ್ಲಿ ಸಾಕ್ಷರತೆ, ಶಿಕ್ಷಣ, ತರಬೇತಿ, ರಾಜಕೀಯ ಜಾಗೃತಿ, ಸಾಮಾಜಿಕ ಸಂಘಟನೆ ಮುಂತಾದವುಗಳ ಪಾತ್ರ ತುಂಬಾ ಮಹತ್ವದ್ದಾಗಿದೆ.

ಈ ಪ್ರದೇಶದ ಅಭಿವೃದ್ಧಿಗೆ ಡಾ. ಡಿ.ಎಂ.ನಂಜುಂಡಪ್ಪ ಸಮತಿಯ ವರದಿಯು ಮತ್ತು ಅದರಲ್ಲಿನ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯೊಂದು ಅವಕಾಶ. ಆದರೆ ಇದನ್ನು ಈ ಪ್ರದೇಶವು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತಿದೆ ಎಂಬುದರ ಬಗ್ಗೆ ಏನನ್ನು ಹೇಳದಿರುವುದೇ ವಾಸಿ !. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸ ಬೇಕಾಗಿದೆ. ಈ ಬಗ್ಗೆ ವಿವರವಾದ ಮಾಹಿತಿಯನ್ನು ಪ್ರಸ್ತುತ ಪ್ರಬಂಧದಲ್ಲಿ ನೀಡಲಾಗಿದೆ ಹಾಗೂ ಸರ್ಕಾರದ ತಪ್ಪು ನೀತಿಯಿಂದಾಗಿ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನದ ಬಾಬ್ತು ಹೈ.ಕ.ಪ್ರ.ಕ್ಕೆ ತಪ್ಪಿ ಹೋಗಬಹುದಾಗಿದ್ದ ರೂ. 1309 ಕೋಟಿ ಅನುದಾನವನ್ನು ನಮ್ಮ ವಿಶ್ವವಿದ್ಯಾಲಯದಲ್ಲಿನ ಅಭಿವೃದ್ಧಿ ಅಧ್ಯಯನ ವಿಭಾಗದ ವಿದ್ವಾಂಸರು ಹೇಗೆ ಉಳಿಸಿದರು ಎಂಬುದನ್ನು ಅನುಬಂಧ ಭಾಗ – 1ರಲ್ಲಿ ಚರ್ಚಿಸಲಾಗಿದೆ.

. ಜನರನ್ನು ಒಳಗೊಳ್ಳುವ ಅಭಿವೃದ್ಧಿ ಕಾರ್ಯತಂತ್ರ

ಇಲ್ಲಿ ನಾವು ಮೊದಲು ಗುರುತಿಸಿಕೊಳ್ಳಬೇಕಾಗಿರುವ ಸಂಗತಿಯೆಂದರೆ ಜನರಿಗಾಗಿ ಅಭಿವೃದ್ಧಿಯೇ ವಿನಾ ಅಭಿವೃದ್ಧಿಗಾಗಿ ಜನರಲ್ಲ. ಜನರು ದೇಶದ ಸಂಪತ್ತೇ ವಿನಾ ಪರಮಾಣು ಬಾಂಬಲ್ಲ. ಗ್ರೀಕ್ ತತ್ವಶಾಸ್ತ್ರಜ್ಞ ಅರಿಸ್ಟಾಟಲ್ ಹೇಳುವಂತೆ ನಾವು ಬದುಕಿನಲ್ಲಿ ಸಂಪಾದಿಸಬೇಕಾಗಿರುವುದು ಸರಕು ಸಂಪತ್ತಲ್ಲ. ಅವು ಅತ್ಯಂತ ಉಪಯುಕ್ತ. ಆದರೆ ಅವು ಬದುಕಿನಲ್ಲಿ ಮತ್ತಾವುದನ್ನೋ ಪಡೆಯಲು ಮಾತ್ರ ಉಪಯುಕ್ತ. ಆದರೆ ಸಾಕ್ಷರತೆ, ಆರೋಗ್ಯ, ಲಿಂಗ ಸಮಾನತೆ, ಅಹಾರ ಭದ್ರತೆ, ಸ್ವಾತಂತ್ರ್ಯ, ಮಾನವ ಹಕ್ಕುಗಳು, ಘನತೆ ಮುಂತಾದವು ತಮ್ಮಷ್ಟಕ್ಕೆ ತಾವು ಉಪಯುಕ್ತ. ಅವುಗಳೇ ಅಭಿವೃದ್ಧಿ. ಅವುಗಳನ್ನು ಒಳಗೊಂಡ ಪ್ರಕ್ರಿಯೆಯೇ ಅಭಿವೃದ್ಧಿ. ಹೈ.ಕ.ಪ್ರ.ದಲ್ಲಿ ನಾವು ಸಾಧಿಸಬೇಕಾಗಿರುವುದು ಇಂತಹ ಅಭಿವೃದ್ಧಿ. ಅದು ಮಾನವ ಅಭಿವೃದ್ಧಿ. ಅದು ಜನರನ್ನು ಒಳಗೊಳ್ಳುವ ಅಭಿವೃದ್ಧಿ. ಜನರ ಬದುಕು ಸಮೃದ್ಧವಾಗಬೇಕು. ಅಭಿವೃದ್ಧಿಯ ಕರ್ತೃಗಳು ಜನರೇ ಮತ್ತು ಅಭಿವೃದ್ಧಿಯನ್ನು ಅನುಭವಿಸುವವರೂ ಜನರೇ. ರಾಜ್ಯಮಟ್ಟದಲ್ಲಿ ಯಾವ ಅಭಿವೃದ್ಧಿ ತಂತ್ರವನ್ನು ಅನುಸರಿಸುತ್ತೇವೆಯೋ ಅದನ್ನೇ ಗುಲಬರ್ಗಾ ವಿಭಾಗದಲ್ಲಿ ಅನುಸರಿಸುವುದು ಸರಿಯಲ್ಲ. ಆದ್ದರಿಂದ ವಿಭಾಗ ನಿರ್ದಿಷ್ಟ ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ.

ಈ ವಿಭಾಗದ ಅಭಿವೃದ್ಧಿಗೆ ಕಾರ್ಯತಂತ್ರವನ್ನು ರೂಪಿಸಬೇಕಾದರೆ ಅಗತ್ಯವಾಗಿ ವಿಭಾಗದೊಳಗಿರುವ ಸಾಮಾಜಿಕ ಅಸಮಾನತೆಯ ನೆಲೆಗಳನ್ನು, ಪರಿಶಿಷ್ಟರ ಹಿತಾಶಕ್ತಿಗಳನ್ನು, ಮಹಿಳೆಯರ ಬದಕನ್ನು ಮುಖ್ಯ ಭೂಮಿಕೆಯಾಗಿಟ್ಟುಕೊಂಡು ರೂಪಿಸಬೇಕಾಗುತ್ತದೆ. ಈ ಬಗೆಯ ಒಂದು ಕಾರ್ಯತಂತ್ರವನ್ನು ರೂಪಿಸಲು ಇಲ್ಲಿ ಒಂದು ಪ್ರಯತ್ನ ಮಾಡಲಾಗಿದೆ. ಇದೇನು ಅಂತಿಮವಾದುದಲ್ಲ. ಇದರ ಬಗ್ಗೆ ಸಾರ್ವಜನಿಕರು ಚರ್ಚೆ ಮಾಡಬಹುದು. ಅದನ್ನು ಬದಲಾಯಿಸಬಹುದು. ಅದಕ್ಕೆ ಹೊಸದಾಗಿ ಸೇರಿಸಬಹುದು.

ಗುಲಬರ್ಗಾ ವಿಭಾಗಕ್ಕೊಂದುಜನರನ್ನು ಒಳಗೊಳ್ಳುವ ಅಭಿವೃದ್ಧಿ ಕಾರ್ಯತಂತ್ರ

ಈ ಪ್ರಬಂಧದ ಸಾರಾಂಶವನ್ನು ನೀಡುವುದಕ್ಕೆ ಪೂರ್ವದಲ್ಲಿ ಹೈ.ಕ.ಪ್ರ.ದಲ್ಲಿ ಜನರನ್ನು ಒಳಗೊಳ್ಳುವ ಅಭಿವೃದ್ಧಿಯನ್ನು ಸಾಧಿಸಿಕೊಳ್ಳಬೇಕಾದರೆ ಯಾವ ಬಗೆಯ ಅಭಿವೃದ್ಧಿ ಕಾರ್ಯತಂತ್ರ ಅಗತ್ಯವೆಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಜನರನ್ನು ಒಳಗೊಳ್ಳುವ ಅಭಿವೃದ್ಧಿ ಕಾರ್ಯತಂತ್ರದ ಸ್ವರೂಪವನ್ನು ಸ್ಥೂಲವಾಗಿ ಹತ್ತು ಸೂತ್ರಗಳ ರೂಪದಲ್ಲಿ ಇಲ್ಲಿ ನೀಡಲಾಗಿದೆ.

ಆರ್ಥಿಕ ಮಹಾಶಕ್ತಿಯೋ ಅಥವಾ ಜನರ ಧಾರಣಾ ಸಾಮರ್ಥ್ಯವೋ?

ಇಂದು ಎಲ್ಲೆಲ್ಲೂ ಭಾರತವನ್ನು, ಅದರಂತೆ ಕರ್ನಾಟಕವನ್ನು ಆರ್ಥಿಕ ಸೂಪರ್‌ಪವರ್ ಆಗಿ ನಿರ್ಮಾಣ ಮಾಡಬೆಂಕೆಂಬ ಮಾತುಗಳು ಕೇಳಿಬರುತ್ತಿವೆ. ಮಾನವ ಅಭಿವೃದ್ಧಿ ವರದಿಯ ರೂವಾರಿ ಮೆಹಬೂಬ್ ಉಲ್‌ಹಕ್ ಹೇಳುವಂತೆ ಒಂದು ದೇಶದ ಸಂಪತ್ತೆಂದರೆ ಅಲ್ಲಿನ ಜನರೇ ವಿನಾ ಅಲ್ಲಿ ಉತ್ಪಾದಿಸಲಾಗುವ ಶಸ್ತ್ರಾಸ್ತ್ರಗಳಲ್ಲ, ಅಲ್ಲಿನ ಬೃಹತ್ ಉದ್ದಿಮೆಗಳಲ್ಲ, ಆಯಕಟ್ಟಿನ ವಿದ್ಯುತ್ ಸ್ಥಾವರಗಳಲ್ಲ. ವರಮಾನವೆಂಬುದೇ ಜನರ ಬದುಕಿನ ಮೊತ್ತವಲ್ಲ. ಇದನ್ನು ಒಂದು ಉದಾಹರಣೆ ಮೂಲಕ ವಿವರಿಸಬಹುದೆಂದು ಕಾಣುತ್ತದೆ. ನಮ್ಮ ದೇಶವು ಹಸಿರು ಕ್ರಾಂತಿಯ ಮೂಲಕ ಆಹಾರದಲ್ಲಿ ಸ್ವಾವಲಂಬನೆಯನ್ನು ಮತ್ತು ಆಹಾರ ಭದ್ರತೆಯನ್ನು ಸಾಧಿಸಿಕೊಂಡಿದೆ. ಆದರೆ ಇಲ್ಲಿನ ಪ್ರಶ್ನೆಯೆಂದರೆ ಜನರ ಆಹಾರ ಭದ್ರತೆ ! ಅದನ್ನು ದೇಶ ಸಾಧಿಸಿಕೊಂಡಿದೆಯೇ ? ಕರ್ನಾಟಕವನ್ನೇ ತೆಗೆದುಕೊಂಡರೆ ಇಲ್ಲಿ ಸರಿ ಸುಮಾರು 60 ಲಕ್ಷ ದಿನಗೂಲಿ ದುಡಿಮೆಗಾರರು ಆಹಾರ ಅಭದ್ರತೆಯಿಂದ ನರಳುತ್ತಿದ್ದಾರೆ. ಹೈ.ಕ.ಪ್ರ.ದಲ್ಲಿ ಆಹಾರ ಅಭದ್ರತೆಯಿಂದ ನರಳುತ್ತಿರುವವರ ಸಂಖ್ಯೆ 16.37 ಲಕ್ಷ. ರಾಜ್ಯದಲ್ಲಿ ಆಹಾರ ಅಭದ್ರತೆಯಿಂದ ನರಳುತ್ತಿರುವವರಲ್ಲಿ ಹೈ.ಕ.ಪ್ರ.ಪಾಲು ಶೇ.27.28. ಆರ್ಥಿಕತೆಯು ಸಮೃದ್ಧವಾದರೆ ಸಾಕಾಗುವುದಿಲ್ಲ. ಜನರ ಬದುಕು ಸಮೃದ್ಧವಾಗಬೇಕು. ಆದ್ದರಿಂದ ಜನರ ಧಾರಣಾ ಸಾಮರ್ಥ್ಯವನ್ನು ದಷ್ಟಪುಷ್ಟಗೊಳಿಸುವುದು ಅಭಿವೃದ್ಧಿಯ ಮೂಲ ಕಾರ್ಯವಾಗಬೇಕು. ಅದು ಇಲ್ಲಿನ ಅಭಿವೃದ್ಧಿಯ ಆದ್ಯತೆಯಾಗಬೇಕು. ಮೆಹಬೂಬ್ ಉಲ್ ಹಕ್ ಪ್ರಕಾರ ಅಭಿವೃದ್ಧಿಯು ಜನರನ್ನು ಒಳಗೊಳ್ಳುತ್ತಿದೆಯೋ ಅಥವಾ ಇಲ್ಲವೋ ಎಂಬುದಕ್ಕೆ ಒರೆಗಲ್ಲೆಂದರೆ ಜನರ ಬದುಕು ಸಮೃದ್ಧವಾಗಿದೆಯೋ ಇಲ್ಲವೋ ಎಂಬುದಾಗಿದೆ. ಅದಕ್ಕೆ ಆರ್ಥಿಕತೆಯನ್ನು ಮಹಾಶಕ್ತಿಯನ್ನಾಗಿ ನಿರ್ಮಾಣ ಮಾಡಿಬಿಟ್ಟರೆ ಸಾಕಾಗುವುದಿಲ್ಲ. ಜನರನ್ನು ಬಿಟ್ಟು ಅಭಿವೃದ್ಧಿಯನ್ನು ಪರಿಭಾವಿಸಿಕೊಳ್ಳುವುದು ಸರಿಯಲ್ಲ.

. ‘ಜನರನ್ನು ಒಳಗೊಳ್ಳುವ ಅಭಿವೃದ್ಧಿ ಕಾರ್ಯತಂತ್ರ‘ – ಹತ್ತು ಸೂತ್ರಗಳು

ಈ ಕಾರ್ಯತಂತ್ರವು ಒಳಗೊಳ್ಳಬೇಕಾದ ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

 1. ಅಕ್ಷರ ಕ್ರಾಂತಿ

ಈ ಪ್ರದೇಶದಲ್ಲಿ ಸಾಕ್ಷರತೆಯ ಪ್ರಮಾಣವನ್ನು, ಅದರಲ್ಲೂ, ಮಹಿಳೆಯರ, ಅದರಲ್ಲೂ ಪರಿಶಿಷ್ಟ ಮಹಿಳೆಯರ ಸಾಕ್ಷರತೆಯನ್ನು ಉತ್ತಮಪಡಿಸುವುದನ್ನು ಅಭಿಯಾನ ರೂಪದಲ್ಲಿ ಕೈಗೊಳ್ಳಬೇಕು. ಜನರನ್ನು ಒಳಗೊಳ್ಳುವ ಅಭಿವೃದ್ಧಿಯ ಕೀಲಿ ಕೈ ಅಕ್ಷರ ಸಂಸ್ಕೃತಿಯಲ್ಲಿದೆ. ನಾವೇನಾಗಿದ್ದೇವೆ ? ನಾವು ಬಡವರೇಕಾಗಿದ್ದೇವೆ? ಅದು ದೇವರ ಶಾಪವೇ ? ಅದರ ನಿವಾರಣೆಗೆ ಏನು ಮಾಡಬೇಕು?. ಅದನ್ನು ಪರಿಹರಿಸಿಕೊಳ್ಳುವುದು ಮನುಷ್ಯ ಪ್ರಯತ್ನದಿಂದ ಸಾಧ್ಯವೇ? – ಮುಂತಾದ ಪ್ರಶ್ನೆಗಳನ್ನು ಹಾಕಿಕೊಳ್ಳುವ, ಅವುಗಳನ್ನು ಕುರಿತಂತೆ ಚರ್ಚಿಸುವ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಜನರಿಗೆ ಸಾಕ್ಷರತೆಯಿಂದ ಪ್ರಾಪ್ತವಾಗುತ್ತದೆ. ಅಕ್ಷರವೆನ್ನುವುದು ಆಯುಧವಿದ್ದಂತೆ. ಅದನ್ನು ಬಡವರಿಗೆ, ವಂಚಿತರಿಗೆ, ಅಂಚಿನಲ್ಲಿರುವವರಿಗೆ, ಮಹಿಳೆಯರಿಗೆ ನೀಡುವ ಅಗತ್ಯವಿದೆ.

2.ಶಾಲಾ ದಾಖಲಾತಿ ಕ್ರಾಂತಿ

ಈ ಪ್ರದೇಶದಲ್ಲಿನ 6 – 16 ವಯೋಮಾನದ ಪ್ರತಿಯೊಂದು ಮಗುವೂ ಕನಿಷ್ಟ ಹತ್ತು ವರ್ಷದ ಶಾಲಾ ಶಿಕ್ಷಣವನ್ನು ಪೂರೈಸುವಂತೆ ನೋಡಕೊಳ್ಳಬೇಕು. ಈ ದಿಶೆಯಲ್ಲಿ ಶಾಲಾ ಮಕ್ಕಳ ಸಾಮಾಜಿಕ ಮತ್ತು ಲಿಂಗ ಸ್ವರೂಪವನ್ನು ಗಮನದಲ್ಲಟ್ಟುಕೊಳ್ಳಬೇಕು. ಈ ಪ್ರದೇಶದಲ್ಲಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಹತ್ತನೆಯ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆಯು ರಾಜ್ಯಮಟ್ಟದಲ್ಲಿನ ಸಂಖ್ಯೆಗೆ ಸಮವಾಗುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ವಿಶೇಷ ಅಭಿಯಾನ ಕೈಗೊಳ್ಳಬೇಕು. ಹತ್ತನೆ ತರಗತಿಯಲ್ಲಿನ ಮಕ್ಕಳ ಪ್ರಗತಿಯನ್ನು ಉತ್ತಮಪಡಿಸುವ ದಿಶೆಯಲ್ಲಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆಯು ಪ್ರದೇಶ ನಿರ್ದಿಷ್ಟ ಶಿಕ್ಷಣ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಒತ್ತಾಯ ಮಾಡಬೇಕು.

 1. ಪ್ರಾಥಮಿಕ ಶಿಕ್ಷಣ ಕ್ರಾಂತಿ

ಈ ದಿಶೆಯಲ್ಲಿ ಸರ್ಕಾರವು ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಪ್ರದೇಶಕ್ಕೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಈ ಶಿಕ್ಷಣ ಕಾರ್ಯಕ್ರಮವು ಪ್ರದೇಶ ನಿರ್ದಿಷ್ಟವಾಗಿರಬೇಕು. ಅದು ವಿದ್ಯಾರ್ಥಿ ನಿಲಯಗಳನ್ನು ತೆಗೆಯುವುದಾಗಿರಲಿ, ಮಧ್ಯಾಹ್ನ ಮತ್ತು ರಾತ್ರಿ ಬಿಸಿಯೂಟ ಕೊಡುವುದಾಗಲಿ, ವಿಶೇಷ ಪೂರಕ ಬೋಧನೆಯಾಗಲಿ, ಗುಣಮಟ್ಟದ ಶಿಕ್ಷಣವಾಗಲಿ – ಎಲ್ಲ ವಿಷಯದಲ್ಲೂ ಈ ಪ್ರದೇಶಕ್ಕೆ ಸೂಕ್ತವಾ ನೀತಿಯನ್ನು ಅಳವಡಿಸಿಕೊಳ್ಳಬೇಕು. ಭಾಗ – 1 ರ ‘ಈ’ ನಲ್ಲಿ ವಾದಿಸಿರುವಂತೆ ಹೈ.ಕ.ಪ್ರ.ದಲ್ಲಿ ಪ್ರಾಥಮಿಕ ಶಿಕ್ಷಣ ಕ್ರಾಂತಿ ನಡೆಯಬೇಕು.

 1. ಪೌಷ್ಟಿಕತೆ ಕ್ರಾಂತಿ

ಈ ಪ್ರದೇಶದಲ್ಲಿ ಮಕ್ಕಳ ಮತ್ತು ಮಹಿಳೆಯರ ಪೌಷ್ಟಿಕತೆಯ ಮಟ್ಟವನ್ನು ಉತ್ತಮ ಪಡಿಸುವುದು ಚಳುವಳಿ ರೂಪದಲ್ಲಿ ನಡೆಯಬೇಕು. ಏಕೆಂದರೆ ಇಲ್ಲಿ ಅಪೌಷ್ಟಿಕತೆಯು ತೀವ್ರವಾಗಿದೆ. ಇಡೀ ರಾಜ್ಯಕ್ಕೆ ಸಂಬಂಧಿಸಿದ ಕಾರ್ಯನೀತಿಯನ್ನೇ ಇಲ್ಲಿ ಅನುಸರಿಸಿದರೆ ಸಾಕಾಗುವುದಿಲ್ಲ ಮತ್ತು ಸರಿಯಾಗುವುದಿಲ್ಲ. ಅದಕ್ಕಾಗಿ ಈ ಪ್ರದೇಶದಲ್ಲಿ ಅಂಗನವಾಡಿ ಕ್ರಾಂತಿಯನ್ನು ಸಾಧಿಸಿಕೊಳ್ಳಬೇಕಾಗಿದೆ. ಈಗಾಗಲೇ ತಿಳಿಸಿರುವಂತೆ ನಮ್ಮ ಪ್ರದೇಶದಲ್ಲಿ ಪ್ರತಿ ವರ್ಷ 8000 ಎಳೆಶಿಶುಗಳು ಅಸು ನೀಗುತ್ತಿವೆ. ಅನೇಕ ಅಧ್ಯಯನಗಳು ತಿಳಿಸಿರುವಂತೆ ಇದಕ್ಕೆ ಮುಖ್ಯ ಕಾರಣವೆಂದರೆ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿನ ರಕ್ತ ಹೀನತೆ (ಅನಿಮಿಯ) ಮತ್ತು ಅಪೌಷ್ಟಿಕತೆ. ಇತ್ತೀಚಿಗೆ ಈ ಬಗ್ಗೆ ನಡೆದ ಅಧ್ಯಯನವೊಂದು ಅದರ ಸಮಸ್ಯೆಯನ್ನು ಹೀಗೆ ಪಟ್ಟಿ ಮಾಡಿದೆ. (ನೋಡಿ : ದಿ ಹಿಂದು. ಸೆಪ್ಟಂಬರ್ 15, 2009) .

 1. ಪೌಷ್ಟಿಕತೆಗೆಸಂಬಂಧಿಸಿದಸೇವೆಎಲ್ಲಿಅಗತ್ಯವಿದೆಯೋಅಲ್ಲಿಸೂಕ್ತವಾಗಿದೊರೆಯುತ್ತಿಲ್ಲ.
 2. ನಮ್ಮಸಮಾಜದಕೆಲವುವರ್ಗಗಳಿಗೆಈಸೇವೆವ್ಯವಸ್ಥಿತವಾಗಿದೊರೆಯದಂತೆಮಾಡಲಾಗಿದೆ.

iii. ಇಲ್ಲಿ ಮಕ್ಕಳಿಗೆ ಒದಗಿಸುತ್ತಿರುವ ಸೇವೆಯ ಗುಣಮಟ್ಟವು ಕಳಪೆಯಿಂದ ಕೂಡಿದೆ.

 1. ಈಸೇವೆಯನ್ನುಒದಗಿಸುತ್ತಿರುವವ್ಯವಸ್ಥೆಯಲ್ಲಿಉತ್ತರದಾಯಿತ್ವವುಇಲ್ಲವೆಇಲ್ಲವೆನ್ನುವಷ್ಟುದುರ್ಬಲವಾಗಿದೆ.
 2. ಇಲ್ಲಿನಸಮಸ್ಯೆಯಬಗ್ಗೆಸರಿಯಾದಅರಿವಿಲ್ಲ.

ಮೇಲೆ ತಿಳಿಸಿದ ಎಲ್ಲ ಸಮಸ್ಯೆಗಳು ಹೈ.ಕ.ಪ್ರ.ದಲ್ಲಿ ತೀವ್ರ ಸ್ವರೂಪದಲ್ಲಿವೆ. ಆದ್ದರಿಂದ ಈ ಸಮಸ್ಯೆಯ ನಿರ್ವಹಣೆಗಾಗಿ ವಿಶೇಷ ಅಭಿಯಾನವನ್ನು ಹಮ್ಮಿ ಕೊಳ್ಳಬೇಕು.

 1. ಉದ್ಯೋಗ ಕ್ರಾಂತಿ

ಈ ಪ್ರದೇಶದಲ್ಲಿ ವಲಸೆಯು ವ್ಯಾಪಕವಾಗಿದೆ. ಅದನ್ನು ಜನನಾಯಕರು ಒಂದು ರೀತಿಯಲ್ಲಿ ಸಮರ್ಥಿಸುತ್ತಿದ್ದಾರೆ. ಅದರಿಂದ ದುಡಿಮೆಗಾರರಿಗೆ ಹೆಚ್ಚಿನ ಗಳಿಕೆ ಸಾಧ್ಯವೆನ್ನಲಾಗಿದೆ. ಇಂತಹ ವಾದದಿಂದ ಜನರನ್ನು ಒಳಗೊಳ್ಳುವ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಮೊಟ್ಟಮೊದಲನೆಯದಾಗಿ ಇಲ್ಲಿನ ವಲಸೆಯನ್ನು ತಡೆಯಬೇಕು. ಅದಕ್ಕಾಗಿ ಕೇಂದ್ರ ಸರ್ಕಾರವು ಹಮ್ಮಿಕೊಂಡಿರುವ ಎನ್.ಆರ್,ಇ,ಜಿ.ಎ. ಯನ್ನು ಇನ್ನಷ್ಟು ವಿಸ್ತೃತಗೊಳಿಸಿ ಪ್ರತಿವರ್ಷ 200 ದಿನಗಳ ಉದ್ಯೋಗವನ್ನು ಪ್ರತಿ ಕುಟುಂಬದ ಗಂಡು ಮತ್ತು ಹೆಣ್ಣಿಗೆ ಒದಗಿಸುವಂತಹ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದು ಜನರನ್ನು ಒಳಗೊಳ್ಳುವ ಅಭಿವೃದ್ಧಿ ತಂತ್ರ. ಈಗಿರುವ ಕುಟುಂಬದಲ್ಲಿ ಒಬ್ಬರಿಗೆ 100 ದಿನಗಳ ಉದ್ಯೋಗವೆಂಬ ನಿಯಮವನ್ನು ಬದಲಾಯಿಸಿ ಕುಟುಂಬದ ಗಂಡು ಮತ್ತು ಹೆಣ್ಣಿಗೆ ವರ್ಷದಲ್ಲಿ ತಲಾ 100 ದಿನಗಳ ಕೆಲಸವೆನ್ನುವ ನಿಯಮವನ್ನು ಅಳವಡಿಸಿಕೊಳ್ಳುವಂತೆ ಮಾಡಬಹುದು.

 1. ಸಾಮಾಜಿಕ ಬ್ಯಾಂಕಿಂಗ್ ಕ್ರಾಂತಿ

ಬ್ಯಾಂಕುಗಳು ಈ ಪ್ರದೇಶದಲ್ಲಿ ವಿಶೇಷವಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಅವು ಕೇವಲ ಸಾಲ ನೀಡುವ ಸಂಸ್ಥೆಗಳಾಗಿ ಬಿಟ್ಟರೆ ಸಾಕಾಗುವುದಿಲ್ಲ. ಅವು ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಬ್ಯಾಂಕುಗಳ ಹಣಕಾಸಿನ ವ್ಯವಹಾರದ ಜೊತೆಯಲ್ಲಿ ಸಾಮಾಜಿಕ ವ್ಯವಹಾರದಲ್ಲೂ ಭಾಗವಹಿಸಬೇಕು. ಈ ಪ್ರದೇಶದಲ್ಲಿ ನಮಗೆ ಬೇಕಾಗಿರುವುದು ಸಾಮಾಜಿಕ ಬ್ಯಾಂಕಿಂಗ್. ನಮಗೆ ಜಾಗತಿಕ ಬ್ಯಾಂಕಿಂಗ್‌ನ ಅಗತ್ಯವಿಲ್ಲ. ಜನರನ್ನು ಒಳಗೊಳ್ಳುವ ಅಭಿವೃದ್ಧಿಗೆ ಅಗತ್ಯವಾದುದು ಸಾಮಾಜಿಕ ಬ್ಯಾಂಕಿಂಗೆ ವಿನಾ ಜಾಗತಿಕ ಬ್ಯಾಂಕಿಂಗ್ ಅಲ್ಲ. ಸ್ವಸಹಾಯ ಗುಂಪುಗಳನ್ನು ಆಧರಿಸಿದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇಲ್ಲಿ ಬಲಪಡಿಸಬೇಕು.

 1. ಆರೋಗ್ಯ ಕ್ರಾಂತಿ

ಈ ಪ್ರದೇಶದಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳಬೇಕಾದರೆ ಅಲ್ಲಿ ಆರೋಗ್ಯ ಕ್ರಾಂತಿಯೊಂದು ನಡೆಯಬೇಕು. ಈಗ ಕೇಂದ್ರ ಸರ್ಕಾರವು ಎನ್.ಎಚ್.ಆರ್.ಎಮ್. ಎಂಬ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಜಾರಿಗೆ ತಂದಿದೆ. ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಯಗೆ ಒಬ್ಬರಂತೆ ‘ಆಶಾ’ (ಎ.ಎಸ್.ಎಚ್.ಎ) ಎಂಬ ಕಾರ್ಯಕರ್ತೆಯನ್ನು ನೇಮಿಸಲಾಗುತ್ತದೆ. ಇದು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡಬೇಕಾಗಿದೆ. ಆರೋಗ್ಯ ಕಾರ್ಯಕ್ರಮವನ್ನು ಅಭಿವೃದ್ಧಿ ನೀತಿಯ ಭಾಗವಾಗಿ ಪರಿಗಣಿಸುವ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯವು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದನ್ನು ಸರಿಪಡಿಸಬೇಕಾಗಿದೆ.

 1. ಸಂತಾನೋತ್ಪತ್ತಿ ಆರೋಗ್ಯ ಕ್ರಾಂತಿ

ಸಂತಾನೋತ್ಪತ್ತಿ ಆರೋಗ್ಯವನ್ನು ಮಹಿಳೆಯರ ಹಕ್ಕೆಂದು ಪರಿಗಣಿಸಬೇಕು. ಇದು ವ್ಯಾಪಕವಾಗಿ ಉಲ್ಲಂಘನೆಯಾಗುತ್ತಿದೆ. ದುಡಿಯುವ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಯಾವುದೇ ರಕ್ಷಣೆಯಿಲ್ಲದಂತಾಗಿ ಬಿಟ್ಟಿದೆ. ಈ ಪ್ರದೇಶದಲ್ಲಿನ 10.56 ಲಕ್ಷ (2001) ದಿನಗೂಲಿಗಳಿದ್ದಾರೆ. ಮಹಿಳಾ ದುಡಿಮೆಗಾರರ ಸಂತಾನೋತ್ಪತ್ತಿ ಆರೋಗ್ಯದ ರಕ್ಷಣೆಗೆ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ನಾವು ಗಮನ ನೀಡಬೇಕಾದ ಸಂಗತಿಯೆಂದರೆ ಮಹಿಳೆಯರ ಮತ್ತು ಮಕ್ಕಳ ಸಂತಾನೋತ್ಪತ್ತಿ ಆರೋಗ್ಯ ಮತ್ತು ಪೌಷ್ಟಿಕತೆ. ಇದಕ್ಕಾಗಿ ಅಸ್ತಿತ್ವದಲ್ಲಿರುವ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಬೇಕಾಗಿದೆ. ಒಂದು ವಿಧದಲ್ಲಿ ಹೈ.ಕ.ಪ್ರ.ದಲ್ಲಿ ನಾವು ‘ಅಂಗನವಾಡಿ ಕ್ರಾಂತಿ’ ಯೊಂದನ್ನು ಸಂಘಟಿಸಬೇಕಾಗಿದೆ. ಈ ಪ್ರದೇಶಕ್ಕೆ ನಿರ್ದಿಷ್ಟವಾದ ಆರೋಗ್ಯ ಕಾರ್ಯತಂತ್ರವನ್ನು ಹಮ್ಮಿಕೊಳ್ಳಬೇಕಾಗಿದೆ. ಅಂಗನವಾಡಿಗಳಿಗೆ ಸಂಬಂಧಿಸಿದಂತೆ ನಾವು ಅದರ ಕಾರ್ಯತಂತ್ರವನ್ನು ರೂಪಿಸಿ ಸುಮಾರು 35 ವರ್ಷಗಳಾಗುತ್ತಾ ಬಂದಿದೆ. ಈ ಅವಧಿಯಲ್ಲಿ ಎಲ್ಲ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಈ ಹಿನ್ನೆಲೆಯಲ್ಲಿ ನಾವು ಅಂಗನವಾಡಿ ಕಾರ್ಯತಂತ್ರವನ್ನು ಪುನರ್ ಸಂಘಟಿಸುವ ಬಗ್ಗೆ ಯೋಚಿಸಬೇಕಾಗಿದೆ. ಅದರ ಕಾರ್ಯಾಚರಣೆ ಸ್ವರೂಪವನ್ನು ಬದಲಾಯಿಸಬೇಕಾಗಿದೆ. ಅದಕ್ಕೆ ಸಮಗ್ರ ಶಸ್ತ್ರ ಚಿಕಿತ್ಸೆಯಾಗಬೇಕಾಗಿದೆ.

ಈ ಬಗ್ಗೆ ಲಾರೆನ್ಸ್ ಹಡಾಡ್ ಸೂಚಿಸಿರುವ ಸಂಗತಿಗಳನ್ನು ಗಮನಿಸಬಹುದಾಗಿದೆ. (ವಿವರಗಳಿಗೆ ನೋಡಿ: ದಿ ಹಿಂದು. ಸೆಪ್ಟೆಂಬರ್ 15, 2009) .

 1. ಅಂಗನವಾಡಿಗಳಿಗೆಗ್ರಾಮೀಣಕ್ಕೆಸಂಬಂಧಿಸಿದಎಲ್ಲಕಾರ್ಯಕ್ರಮಗಳನ್ನುತುರುಕುವವಾಡಿಕೆಯನ್ನುಕೈಬಿಡಬೇಕು. ಅದಕ್ಕೆಒಂದೇಒಂದುಅಜೆಂಡಾಇರಬೇಕು. ಅದುಮಕ್ಕಳಆರೋಗ್ಯಮತ್ತುತಾಯಂದಿರಶುಶ್ರೂಷೆ.
 2. ಈವಿಷಯಕ್ಕೆಸಂಬಂಧಿಸಿದಎಲ್ಲಸಚಿವಾಲಯಗಳನಡುವೆಅನ್ಯೋನ್ಯಸಹಕಾರಮತ್ತುಸಹಯೋಗಸಾಧಿಸಿಕೊಳ್ಳಬೇಕು. ಅಪೌಷ್ಟಿಕತೆಮೇಲಿನಹೋರಾಟಸಂಘಟಿತವಾಗಿರಬೇಕು. ಅಪೌಷ್ಟಿಕತೆಯನ್ನುನಿವಾರಿಸುವುದುಕೇವಲಆರೋಗ್ಯಕ್ಕೆಸಂಬಂಧಿಸಿದಸಂಗತಿಯಲ್ಲ.

iii. ಪರಿಶಿಷ್ಟ ಮಕ್ಕಳಿಗೆ ಸಂಬಂಧಿಸಿದಂತೆ ವಿಶೇಷ ಗಮನ ಹರಿಸಬೇಕಾಗುತ್ತದೆ.

 1. ವರಮಾನವುಹಿಮಾಲಯಸದೃಶವಾಗಿಬಿಟ್ಟರೆಸಾಕಾಗುವುದಿಲ್ಲ. ಅದುಮಕ್ಕಳಪೌಷ್ಟಿಕತೆಯಾಗಿಪರಿವರ್ತಿತವಾಗಬೇಕು.
 2. ಹೈ.ಕ.ಪ್ರ.ದಲ್ಲಿಅಂಗನವಾಡಿಕ್ರಾಂತಿನಡೆಯಬೇಕು.
 3. ಪ್ರಾದೇಶಿಕ ಅಭಿವೃದ್ಧಿ ಕ್ರಾಂತಿ

ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸುಗಳ ಅನುಷ್ಟಾನ ಆರಂಭವಾಗಿ ಮೂರು ವರ್ಷವಾಯಿತು (2007 – 08) . ಈ ಅವಧಿಯಲ್ಲಿ ಇಲ್ಲಿ ಹೈ.ಕ.ಪ್ರ.ದಲ್ಲಿ ಏನಾಗಿದೆ? ಸಮಿತಿಯ ವರದಿಯ ಶಿಫಾರಸ್ಸುಗಳನ್ನು ವರದಿಯ ಸೂತ್ರದ ಪ್ರಕಾರ ಅನುಷ್ಟಾನಗೊಳಿಸಲಾಗುತ್ತಿದೆಯೇ? ಇನ್ನು ಉಳಿದ ಐದು ವರ್ಷಗಳಲ್ಲಿ ಹೈ.ಕ.ಪ್ರ.ವು ರಾಜ್ಯ ಮಟ್ಟದ ಅಭಿವೃದ್ಧಿಗೆ ಸಮನಾದ ಅಭಿವೃದ್ಧಿಯನ್ನು ಸಾಧಿಸಿಕೊಳ್ಳುತ್ತದೆಯೋ?. ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಬಹು ಮುಖ್ಯ ಶಿಫಾರಸ್ಸಾದ ‘ಪ್ರಾದೇಶಿಕ ಅಭಿವೃದ್ಧಿ ನೀತಿ’ ಯನ್ನು ಸರ್ಕಾರವು ತಕ್ಷಣ ಘೋಷಣೆ ಮಾಡುವಂತೆ ಒತ್ತಾಯ ಮಾಡಬೇಕು. ಈ ವರದಿಯ ಶಿಫಾರಸ್ಸುಗಳು ವರದಿಯಲ್ಲಿನ ಸೂತ್ರದ ಚೌಕಟ್ಟಿನಲ್ಲಿ ಅನುಷ್ಟಾನಗೊಳ್ಳಬೇಕು. ಈ ಪ್ರದೇಶದ ಅಕ್ಷರಸ್ಥರು, ಸಾಮಾಜಿಕವಾಗಿ ಜಾಗೃತರಾಗಿರುವವರು, ಶಾಲಾ – ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿರುವವರು, ಸಾಮಾಜಿಕ ಕಾರ್ಯಕರ್ತರು, ಆಕ್ಟಿವಿಸ್ಟರು, ಎನ್.ಜಿ.ಒಗಳು, ಮಹಿಳಾ ವಾದಿಗಳು, ದಲಿತರು, ಹಿಂದುಳಿದ ವರ್ಗಗಳು, ಬರಹಗಾರರು – ಎಲ್ಲರೂ ಹೈ.ಕ.ಪ್ರ.ದ ಅಭಿವೃದ್ಧಿಗೆ ಸಂಬಂಧಿಸಿದಂತೆ, ಪ್ರಾದೇಶಿಕ ಅಸಮಾನತೆ ಕುರಿತಂತೆ ಜನಜಾಗೃತಿ ನಡೆಸಬೇಕು, ಜನರ ಸಂಘಟನೆ ಮಾಡಬೇಕು, ಸುದ್ಧಿ ಮಾಧ್ಯಮಗಳಲ್ಲಿ ಈ ಪ್ರದೇಶದ ಸಮಸ್ಯೆಗಳನ್ನು ಕುರಿತಂತೆ ಚರ್ಚೆ ಮಾಡಬೇಕು. ರಾಜ್ಯದಲ್ಲಿ ಸರ್ಕಾರವು ತೆಗೆದುಕೊಳ್ಳುವ ‌ಪ್ರತಿಯೊಂದು ಕ್ರಮದ ಬಗ್ಗೆಯೂ ನಾವು ಅದರಿಂದ ಹೈ.ಕ.ಪ್ರ.ಕ್ಕೆ ಏನು ಪ್ರಯೋಜನವಾಗಿದೆ ಎಂಬುವ ಒರೆಗಲ್ಲಿಗೆ ಹಚ್ಚಿ ಅದನ್ನು ಪರೀಕ್ಷಿಸಬೇಕು. ಅದು ಈ ಪ್ರದೇಶಕ್ಕೆ ನ್ಯಾಯ ಒದಗಿಸದಿದ್ದರೆ ಅದರ ಬಗ್ಗೆ ನಮ್ಮ ಅಸಮ್ಮತಿಯನ್ನು, ಅಸಮಾಧಾನವನ್ನು ವ್ಯಕ್ತಪಡಿಸಬೇಕು.

ಇವು ನಮ್ಮ ಮುಂದಿರುವ ಗುರುತರವಾದ ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ. ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯಲ್ಲಿನ ಶಿಫಾರಸ್ಸಿನಂತೆ ‘ಹಿಂದುಳಿದ ತಾಲ್ಲೂಕು’ ಗಳಿಗೆ ಅಭಿವೃದ್ಧಿ ಅನುದಾನವನ್ನು ನೀಡಲಾಗುತ್ತಿದೆಯೇ ? ಇದುವರೆವಿಗೂ ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸಿನಂತೆ ‘ತಾಲ್ಲೂಕು’ ಗಳನ್ನು ಘಟಕಗಳಾಗಿ ಇಟ್ಟುಕೊಂಡು ಅನುದಾನದ ವಿತರಣೆ ನಡೆದಿಲ್ಲ. ಅದರ ಅನುಷ್ಟಾನ ಸಮಿತಿಯು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ ಸರ್ಕಾರವು ಪ್ರತಿ ವರ್ಷ ತನ್ನ ವಾರ್ಷಿಕ ಬಜೆಟ್ಟಿನಲ್ಲಿ ಪ್ರಾದೇಶಿಕ ಅಸಮಾನತೆಯ ಬಗ್ಗೆ ಒಂದು ವರದಿಯನ್ನು ನೀಡುವಂತಾಗಬೇಕು. ಈ ಅಸಮಾನತೆಯು ಒಂದು ವರ್ಷದಲ್ಲಿ ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಅಥವಾ ಅಧಿಕಗೊಂಡಿದೆ ಎಂಬುದರ ಮೌಲ್ಯಮಾಪನ ವಾರ್ಷಿಕ ಬಜೆಟ್ಟಿನಲ್ಲಿ ನಡೆಯಬೇಕು. ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಇಂತಹ ಶಿಫಾರಸ್ಸುಗಳನ್ನು ಮೂಲೆ ಗುಂಪು ಮಾಡಿ ಕೇವಲ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ ಬಗ್ಗೆ ಮಾತನಾಡುವುದು ಸರಿಯಲ್ಲ.

 1. ಲಿಂಗ ಸಮಾನತೆ ಕ್ರಾಂತಿ

ನಮ್ಮ ರಾಜ್ಯದ ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟು ಮಹಿಳೆಯರಿದ್ದಾರೆ. ಇದು ಹೈ.ಕ.ಪ್ರ.ಕ್ಕೂ ಅನ್ವಯವಾಗುವ ಸಂಗತಿಯಾಗಿದೆ. ಲಿಂಗ ಅನುಪಾತವು ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ವಿರುದ್ಧವಾಗಿದೆ. ಅಭಿವೃದ್ಧಿಯ ಯಾವುದೇ ಸೂಚಿಯನ್ನು ತೆಗೆದುಕೊಂಡರೂ ಅಲ್ಲಿ ಮಹಿಳೆಯರು ವಂಚಿತರಾಗಿರುವುದು ಕಂಡು ಬರುತ್ತದೆ. ಜನಸಂಖ್ಯೆಯಲ್ಲಿ ಅವರ ಪ್ರಮಾಣ ಶೇ. 50ಕ್ಕಿಂತ ಅಧಿವಾಗಿರಬೇಕು. ಏಕೆಂದರೆ ಅವರ ಜೀವನಾಯುಷ್ಯವು ಪುರುಷರ ಜೀವನಾಯುಷ್ಯಕ್ಕಿಂತ ಅಧಿಕ. ಅವರ ದುಡಿಮೆ ಸಹಭಾಗಿತ್ವ ಪ್ರಮಾಣವು ಪುರುಷರ ದುಡಿಮೆ ಸಹಭಾಗಿತ್ವ ಪ್ರಮಾಣಕ್ಕಿಂತ ಕಡಿಮೆ. ಇದಕ್ಕೆ ಕಾರಣವೆಂದರೆ ಅವರ ಕೌಟುಂಬಿಕ ದುಡಿಮೆಯನ್ನು ದುಡಿಮೆಯೆಂದು ಪರಿಗಣಿಸುವುದಿಲ್ಲ. ಮನೆಯ ಹೊರಗಿನ ದುಡಿಮೆಯ ಅವಕಾಶಗಳು ಅವರಿಗೆ ಕಡಿಮೆ. ಇಂದು ಹೆಣ್ಣು ಶಿಶುಗಳು ಹುಟ್ಟುವುದೇ ದುರ್ಲಭವಾಗುತ್ತಿದೆ. ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ, ಲಿಂಗ ತಾರತಮ್ಯ, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಾ ನಡೆದಿದೆ.

ಈ ಎಲ್ಲ ಸಂಗತಿಗಳನ್ನು ಹೈ.ಕ.ಪ್ರ.ದ ಮಹಿಳೆಯರು ಎದುರಿಸುತ್ತಿದ್ದಾರೆ. ವಾಸ್ತವವಾಗಿ ಅಲ್ಲಿ ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣವು 2001 ರಲ್ಲಿ ಶೇ. 34.28ರಷ್ಟಿದೆ. ರಾಜ್ಯಮಟ್ಟದಲ್ಲಿ ಅದು ಶೇ.31.98ರಷ್ಟಿದೆ. ಲಿಂಗ ಸಮಾನತೆಯೆಂಬುದು ಕೇವಲ ಮಹಿಳೆಯರಿಗೆ ಸಂಬಂಧಿಸಿದ ಸಂಗತಿಯಲ್ಲ. ಅದು ಸಾಮಾಜಿಕ ಸಂಗತಿ. ಅದರಿಂದ ಎಲ್ಲರ ಬದುಕನ್ನು ಉತ್ತಮಪಡಿಸಬಹುದಾಗಿದೆ. ಈ ಲಿಂಗ ಸಮಾನತೆಯನ್ನು ಅಭಿಯಾನದ ರೂಪದಲ್ಲಿ ಕೈಗೊಳ್ಳಬೇಕಾಗಿದೆ.

ಅಧ್ಯಯನದ ಸಾರಾಂಶ

ಈ ಅಧ್ಯಯನದ ಪ್ರಸ್ತಾವನೆಯ ಭಾಗದಲ್ಲಿ ಈ ಪ್ರಬಂಧವನ್ನು ರೂಪಿಸಿರುವ ರೀತಿ, ಅದರ ಉದ್ಧೇಶ ಮುಂತಾದ ಸಂಗತಿಗಳನ್ನು ವಿವರಿಸಲಾಗಿದೆ. ಪ್ರಬಂಧದ ಮೊದಲನೆಯ ಭಾಗದಲ್ಲಿ ಜನರನ್ನು ಒಳಗೊಳ್ಳುವ ಅಭಿವೃದ್ಧಿಗೆ ಒಂದು ನಿರ್ವಚನವನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಹೈ.ಕ.ಪ್ರ.ದಲ್ಲಿ ಅಭಿವೃದ್ಧಿಯು ಹೇಗೆ ಜನರನ್ನು ಒಳಗೊಳ್ಳುತ್ತಿದೆ ಮತ್ತು ಅದು ಹೇಗೆ ಜನರನ್ನು ಹೊರಗಿಡುತ್ತಿದೆ ಎಂಬುದನ್ನು ಸಾಕ್ಷರತೆ, ಪ್ರಾಥಮಿಕ ಶಿಕ್ಷಣ, ದುಡಿಮೆಗಾರರ ರಾಚನಿಕ ಸ್ವರೂಪ, ಅಭಿವೃದ್ಧಿಯ ಶಿಷ್ಟ – ಪರಿಶಿಷ್ಟ ನೆಲೆಗಳು, ಸಾಮಾಜಿಕ ಅಸಮಾತನೆ, ಬ್ಯಾಂಕಿಂಗ್ ವ್ಯವಸ್ಥೆ, ವರಮಾನ, ಲಿಂಗ ಅನುಪಾತ, ರಾಜಕೀಯ ದುಸ್ಥಿತಿ, ಮಾನವ ಅಭಿವೃದ್ಧಿ ಮುಂತಾದವುಗಳಿಗೆ ಸಂಬಂಧಿಸಿದ ಸೂಚಿಗಳನ್ನು, ಮಾಪನಗಳನ್ನು, ಸೂಚ್ಯಂಕಗಳನ್ನು ಬಳಸಿಕೊಂಡು ವಿವರವಾಗಿ ವಿಶ್ಲೇಷಣೆ ಮಾಡಲಾಗಿದೆ. ಜನರನ್ನು ಒಳಗೊಳ್ಳುವ ಅಭಿವೃದ್ಧಿಯನ್ನು ಸಾಧಿಸಿಕೊಳ್ಳುವಲ್ಲಿ ಹೈ.ಕ.ಪ್ರ.ವು ಎದುರಿಸುತ್ತಿರುವ ಸವಾಲುಗಳು ಯಾವುವು ಎಂಬುದನ್ನು ವಿವಿಧ ಸಂಗತಿಗಳನ್ನು ಆಧಿರಿಸಿ ಚರ್ಚೆ ಮಾಡಲಾಗಿದೆ. ಅಭಿವೃದ್ಧಿಯು ಜನರನ್ನು ಒಳಗೊಳ್ಳುವುಂತೆ ಮಾಡುವ ಅವಕಾಶಗಳು ಯಾವ ರೂಪದಲ್ಲಿದೆ ಎಂಬುದನ್ನು ವಿವರಿಸಲಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ಅಗತ್ಯವಾದ ತಂತ್ರವೊಂದರ ರೂಪರೇಷೆಯನ್ನು ಇಲ್ಲಿ ನೀಡಲಾಗಿದೆ.

ಪ್ರಬಂಧದ ಎರಡನೆಯ ಭಾಗದಲ್ಲಿ ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯು ಸಲಹೆ ಮಾಡಿದ್ದ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅನುದಾನ ಹಂಚಿಕೆ ಸೂತ್ರದ ಬಗ್ಗೆ ಸರ್ಕಾರವು ಮಾಡಿದ್ದ ವಿಕೃತಿಯ ಬಗ್ಗೆ, ಅದರಿಂದ ಗುಲಬರ್ಗಾ ವಿಭಾಗಕ್ಕೆ ಉಂಟಾಗುತ್ತಿದ್ದ ರೂ. 1309 ಕೋಟಿ ಕಡಿತದ ಬಗ್ಗೆ, ನಾನು ಮತ್ತು ಡಾ. ಬಿ.ಶೇಷಾದ್ರಿ ಅವರ ಪ್ರಯತ್ನದಿಂದಾಗಿ ಹೇಗೆ ಸರ್ಕರವು ಅದನ್ನು ಸರಿಪಡಿಸಿಕೊಳ್ಳಬೇಕಾಯಿತು ಎಂಬುದನ್ನು ವಿವರವಾಗಿ ಚರ್ಚಿಸಲಾಗಿದೆ. ಇಲ್ಲಿನ ವಾದಕ್ಕೆ ಸರ್ಕಾರಿ ದಾಖಲೆಗಳನ್ನು, ವರದಿಗಳನ್ನು ಸರ್ಕಾರಿ ಪ್ರಕಟಣೆಗಳನ್ನು ಬಳಸಿಕೊಳ್ಳಲಾಗಿದೆ.

ಕೊನೆಯದಾಗಿ ಪ್ರಬಂಧದ ಅಂತಿಮ ಭಾಗದಲ್ಲಿ ಅಧ್ಯಯನದ ಸಾರಾಂಶವನ್ನು ನೀಡಲಾಗಿದೆ. ಹೈ.ಕ.ಪ್ರ.ದ ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತೆ ಮಾಡಬೇಕಾದರೆ ಯಾವ ಬಗೆಯ ಅಭಿವೃದ್ಧಿ ತಂತ್ರವನ್ನು ಅಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ವಿವರವಾಗಿ ನೀಡಲಾಗಿದೆ. ಅದನ್ನು ಇಲ್ಲಿ ‘ಹತ್ತು ಸೂತ್ರ’ಗಳೆಂದು ಕರೆಯಬಹುದು. ನಿಜಕ್ಕೂ ಹೈ.ಕ.ಪ್ರ. ಅಭಿವೃದ್ಧಿಗೆ ಏನು ಮಾಡಬೇಕೆಂಬುದನ್ನು ವಿವರವಾಗಿ ಅಲ್ಲಿ ವಿಶ್ಲೇಷಿಸಲಾಗಿದೆ.

ಈ ಪ್ರಬಂಧದ ಬಹುಮುಖ್ಯ ಭಾಗವೆಂದರೆ ಇಲ್ಲಿನ ಅನುಬಂಧಗಳು. ಅನುದಾನ ಹಂಚಿಕೆ ಸೂತ್ರದ ಬದಲಾವಣೆಗೆ ನಾವು ಏನೆಲ್ಲ ಪ್ರಯತ್ನ ಮಾಡಿದೆವೆಂಬುದಕ್ಕೆ ಸಂಬಂಧಿಸಿದ ನಮ್ಮ ಪ್ರಕಟಿತ ಲೇಖನ, ನಡೆಸಿದ ವಿಚಾರ ಸಂಕಿರಣಗಳು, ಅದರ ಬಗೆಗಿನ ಪತ್ರಿಕಾ ವರದಿಗಳು, ನಾವು ಸರ್ಕಾರಕ್ಕೆ ಮತ್ತು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಗಳು, ಸರ್ಕಾರದ ಪತ್ರಗಳು ಮುಂತಾದವುಗಳ ವಿವರಗಳನ್ನು ಮತ್ತು ಅವುಗಳ ಪಾಠಗಳನ್ನು ನೀಡಲಾಗಿದೆ.