ಈ ಕೃತಿಯನ್ನು ಸಿದ್ಧಪಡಿಸುವಲ್ಲಿ ಅನೇಕರ ಸಹಾಯ ನನಗೆ ದೊರೆತಿದೆ. ಮೊಟ್ಟಮೊದಲನೆಯದಾಗಿ ಈ ಲೇಖನದ ಪೂರ್ಣ ಕೀರ್ತಿಯು ನಮ್ಮ ವಿಭಾಗವನ್ನು ಆರಂಭಿಸಿದ ಪ್ರಾಧ್ಯಾಪಕ ಹಾಗೂ ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯ ಸದಸ್ಯರಾಗಿದ್ದ ಹಿರಿಯರೂ ನನ್ನ ಹಿತವನ್ನೇ ಸದಾ ಬಯಸುವ ಡಾ. ಬಿ.ಶೇಷಾದ್ರಿ ಅವರಿಗೆ ಸಲ್ಲಬೇಕು. ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯ ಶಿಫಾರಸ್ಸಾದ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯನ್ನು ಸರ್ಕಾರವು 2007 – 08ನೆಯ ಸಾಲಿನಲ್ಲಿ ಅನುಷ್ಟಾನಗೊಳಿಸುವಾಗ ಅದರ ಬಾಬ್ತು ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಸಮಿತಿಯ ಸೂತ್ರವನ್ನು ಕೈಬಿಟ್ಟು ತನ್ನದೇ ಸೂತ್ರವನ್ನು ಅಳವಡಿಸಿಕೊಂಡಿದ್ದರಿಂದ ಗುಲಬರ್ಗಾ ವಿಭಾಗಕ್ಕೆ ಅನ್ಯಾಯವಾಗುತ್ತದೆ ಎಂಬುದನ್ನು ಮೊದಲು ಅವರು ಕಂಡು ಹಿಡಿದರು. ಈ ಬಗ್ಗೆ ಎರಡು – ಮೂರು ಸಾರಿ ಒಟ್ಟಿಗೆ ಸೇರಿ ನಾವು ಚರ್ಚೆ ಮಾಡಿದೆವು. ಅನುದಾನ ಹಂಚಿಕೆ ಸರ್ಕಾರವು ಅಳವಡಿಸಿಕೊಂಡ ಸೂತ್ರದಿಂದ ಗುಲಬರ್ಗಾ ವಿಭಾಗಕ್ಕೆ ಅನ್ಯಾಯವಾಗುತ್ತದೆ ಎಂಬುದು ಖಚಿತವಾದಾಗ ಅದರ ಬಗ್ಗೆ ಲೇಖನವೊಂದನ್ನು ಸಿದ್ದಪಡಿಸಿ ಪ್ರಜಾವಾಣಿಯಲ್ಲಿ ಪ್ರಕಟಿಸಿದೆವು. ಅದರಿಂದಾಗಿ ಗುಲಬರ್ಗಾ ವಿಭಾಗದಲ್ಲಿ ಸಂಚಲನ ಉಂಟಾಯಿತು. ಸರ್ಕಾರವು ಇದರ ಬಗ್ಗೆ ಗಮನ ನೀಡಬೇಕಾಯಿತು. ನಂತರ ನಾವು ಏನೆಲ್ಲ ಮಾಡಿದೆವು ಮತ್ತು ಪ್ರಯತ್ನ ನಡೆಸಿದೆವು ಎಂಬುದನ್ನು ಪುಸ್ತಕದಲ್ಲಿ ವಿವರಿಸಿದ್ದೇನೆ. ಗುಲಬರ್ಗಾದ ಚೇಂಬರ್ಸ್‌ಆಫ್ ಕಾಮರ್ಸ್‌‌ನಲ್ಲಿ ಮತ್ತು ಬೆಂಗಳೂರಿನ ಶಾಸಕರ ಭವನದಲ್ಲಿ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ ಕುರಿತಂತೆ ಕಮ್ಮಟ ನಡೆಸಲು ಸಹಾಯ ಮಾಡಿದ ಗುಲಬರ್ಗಾದ ಶ್ರೀ ಮಾರುತಿ ಮಾನ್ಪಡೆ, ಪ್ರೊ ಆರ್.ಕೆ.ಹುಡುಗಿ ಮತ್ತು ಶ್ರೀ ಬಿ.ಆರ್ ಪಾಟೀಲ್ ಅವರಿಗೆ ನಾನು ಋಣಿಯಾಗಿದ್ದೇನೆ. ಈ ಪ್ರಯತ್ನದಲ್ಲಿ ನಮ್ಮ ಲೇಖನವನ್ನು ಪ್ರಕಟಿಸಿ ಮತ್ತು ಈ ವಿಷಯದ ಬಗ್ಗೆ ಸಂಪಾದಕೀಯವನ್ನು ಬರೆದು ಪ್ರೋತ್ಸಾಹ ನೀಡಿದ ಪ್ರಜಾವಾಣಿಗೆ ಮತ್ತು ಅದರ ಸಂಪಾದಕ ಬಳಗಕ್ಕೆ, ನನ್ನ ವಿಭಾಗದಲ್ಲಿನ ಸಹೋದ್ಯೋಗಿಗಳಿಗೆ ಹಾಗೂ ವಿಶ್ವವಿದ್ಯಾಲಯದ ಕುಲಪತಿ ಡಾ. ಎ. ಮುರಿಗೆಪ್ಪ ಮತ್ತು ಕುಲಸಚಿವ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ನನ್ನ ಕೃತಜ್ಞತೆ ಸಲ್ಲಬೇಕು.

ಈ ಕೃತಿಯ ಬಗ್ಗೆ ಆಸಕ್ತಿ ವಹಿಸಿ, ಅದರ ಪುಟವಿನ್ಯಾಸ, ಸ್ಕ್ಯಾನ್ ಕೆಲಸ ಹಾಗೂ ಮುದ್ರಣದ ಕೆಲಸಗಳನ್ನೆಲ್ಲಾ ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ಮತ್ತು ಇದನ್ನು ಚಂದವಾಗಿ ಪ್ರಕಟಿಸುತ್ತಿರುವ ಪ್ರಸಾರಾಂಗದ ನಿರ್ದೇಶಕ ಡಾ. ಮೋಹನ ಕುಂಟಾರ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಈ ಕೃತಜ್ಞತೆಯ ಪಟ್ಟಿಯನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಏಕೆಂದರೆ ಅದಕ್ಕೆ ಕೊನೆ ಎಂಬುದಿರುವುದಿಲ್ಲ. ಈಗ ಕೃತಿಯುಂಟು ತಾವು ಓದುಗರುಂಟು.

ಟಿ.ಆರ್. ಚಂದ್ರಶೇಖರ
ವಿದ್ಯಾರಣ್ಯ