ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವ ಹೊರಗಣವನು
ಸಂಬೋಳಿ, ಸಂಬೋಳಿ
ಎನ್ನುತ್ತಾ ಇಂಬಿನಲ್ಲಿ ಇದ್ದೇನೆ.
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದು ಅನಾಮಿಕ ನಾನು.[1]
ಬಸವಣ್ಣ

ಪ್ರಸ್ತಾವನೆ

ನಮ್ಮ ದೇಶದ ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯ ಪ್ರಧಾನ ಉದ್ಧೇಶ ‘ತ್ವರಿತ ಗತಿಯ ಮತ್ತು ಜನರನ್ನು ಒಳಗೊಳ್ಳುವ ಅಭಿವೃದ್ಧಿ’. ಈಗ ರಾಜಕೀಯ ಮತ್ತು ಶೈಕ್ಷಣಿಕ ವಲಯಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಪರಿಭಾವನೆಯೆಂದರೆ ‘ಜನರನ್ನು ಒಳಗೊಳ್ಳುವ ಅಭಿವೃದ್ಧಿ’. ಜನರನ್ನು ಒಳಗೊಳ್ಳುವ ಅಭಿವೃದ್ಧಿಯೆಂದರೇನು? ಅದು ಯಾಕೆ ಜನರನ್ನು ಹೊರಗಿಡುತ್ತದೆ? ಇದುವರೆವಿಗೂ ನಾವು ಅನುಸರಿಸಿಕೊಂಡು ಬರುತ್ತಿರುವ ಅಭಿವೃದ್ಧಿ ಮಾದರಿಗಿಂತ ಹೇಗೆ ಅದು ಭಿನ್ನ?. ಇದು ಸಾಂಪ್ರದಾಯಿಕ ಅಭಿವೃದ್ಧಿ ಮಾದರಿಗಿಂತ ಉತ್ತಮವಾದುದೇ?. ಕರ್ನಾಟಕದಲ್ಲಿ, ಅದರಲ್ಲೂ ಮುಖ್ಯವಾಗಿ ನಮ್ಮ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ (ಬಳ್ಳಾರಿ ಜಿಲ್ಲೆಯನ್ನು ಸೇರಿಸಿಕೊಂಡು[2]) ಅಭಿವೃದ್ಧಿಯು ಜನರನ್ನು ಒಳಗೊಳ್ಳುವ ಸ್ವರೂಪದಲ್ಲಿದೆಯೇ?. ಎಷ್ಟರ ಮಟ್ಟಿಗೆ ಅಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುತ್ತಿದೆ? ಅಭಿವೃದ್ಧಿಯಲ್ಲಿ ಪರಿಶಿಷ್ಟರ ಪಾಲೇನು? ಇಲ್ಲಿ ಜನರು ಎಂದರೆ ಅದು ಮಹಿಳೆಯರನ್ನು ಒಳಗೊಳ್ಳುತ್ತಿದೆಯೇ?. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅದು ಜನರನ್ನು ಒಳಗೊಳ್ಳುವ ಸ್ವರೂಪದಲ್ಲಿ ಇರದಿದ್ದರೆ ಅದನ್ನು ಸಾಧಿಸಿಕೊಳ್ಳುವುದು ಹೇಗೆ? ಅಲ್ಲಿರುವ ಸವಾಲುಗಳೇನು? ಅದನ್ನು ಸಾಧಿಸಿಕೊಳ್ಳಲು ಇರುವ ಅವಕಾಶಗಳೇನು? ಪ್ರಸ್ತುತ ಪ್ರಬಂಧದಲ್ಲಿ ಈ ಪ್ರಶ್ನೆಗಳನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ.

ಈ ಅಧ್ಯಯನ ಪ್ರಬಂಧವನ್ನು ಪ್ರಧಾನವಾಗಿ ಎರಡು ಭಾಗಗಳಲ್ಲಿ ರೂಪಿಸಲಾಗಿದೆ. ಮೊದಲನೆಯ ಭಾಗದಲ್ಲಿ ಹೈ.ಕ.ಪ್ರ.ದಲ್ಲಿ ಅಭಿವೃದ್ಧಿಯು ಹೇಗೆ ಜನರನ್ನು ಒಳಗೊಳ್ಳುತ್ತಿದೆ ಅಥವಾ ಒಳಗೊಳ್ಳುತ್ತಿಲ್ಲ ಎಂಬುದನ್ನು ವಿಶ್ಲೇಷಿಸಲಾಗಿದೆ. ಎರಡನೆಯ ಪ್ರಧಾನ ಭಾಗದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ದೃಷ್ಟಿಯಿಂದ ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯಲ್ಲಿನ ಪ್ರಮುಖ ಶಿಫಾರಸ್ಸಾದ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಅನುದಾನ ಹಂಚಿಕೆಯಲ್ಲಿ ಸರ್ಕಾರವು 2007 – 08ರಲ್ಲಿ ನಡೆಸಿದ ವ್ಯತ್ಯಯ ಮತ್ತು ಅದರಿಂದ ಗುಲಬರ್ಗಾ ವಿಭಾಗಕ್ಕೆ ಉಂಟಾಗುತ್ತಿದ್ದ ಹಾನಿ ಮತ್ತು ನಾನು ಮತ್ತು ನಮ್ಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಶೇಷಾದ್ರಿ ಅವರ ಮಧ್ಯ ಪ್ರವೇಶದಿಂದ ಅದನ್ನು ಸರಿಪಡಿಸಿ ರೀತಿ ಹಾಗೂ ನಮ್ಮ ಅಧ್ಯಯನದ ಕಾರಣದಿಂದಾಗಿ ಗುಲಬರ್ಗಾ ವಿಭಾಗಕ್ಕೆ ಉಂಟಾಗುತ್ತಿದ್ದ ರೂ 1309 ಕೋಟಿ ಹಾನಿಯನ್ನು ತಪ್ಪಿಸಿದ ಬಗೆಯನ್ನು ವಿವರವಾಗಿ ಚರ್ಚಿಸಲಾಗಿದೆ.

ಈ ಪ್ರಬಂಧದ ಮೊದಲನೆಯ ಭಾಗವನ್ನು ನಾಲ್ಕು ಉಪವಿಭಾಗಗಳನ್ನಾಗಿ ವರ್ಗೀಕರಿಸಿಕೊಳ್ಳಲಾಗಿದೆ. ಈ ಭಾಗದ ಮೊದಲನೆಯ ಉಪವಿಭಾಗದಲ್ಲಿ ಜನರನ್ನು ಒಳಗೊಳ್ಳುವ ಅಭಿವೃದ್ಧಿಯ ನಿರ್ವಚನವನ್ನು ಕೊಡುವ ಪ್ರಯತ್ನ ಮಾಡಲಾಗಿದೆ. ಎರಡನೆಯ ಉಪಭಾಗದಲ್ಲಿ ಹೈದರಾಬಾದ್ – ಕರ್ನಾಟಕ ಪ್ರದೇಶದ ಐದು ಜಿಲ್ಲೆಗಳಲ್ಲಿ ಅಭಿವೃದ್ಧಿಯು ಎಷ್ಟರಮಟ್ಟಿಗೆ ಜನರನ್ನು ಒಳಗೊಂಡಿದೆ ಎಂಬುದನ್ನು ಪರಿಶೀಲಿಸಲಾಗಿದೆ. ಇಲ್ಲಿ ಅನೇಕ ಬಗೆಯ ಅಂಕಿ – ಅಂಶಗಳನ್ನು, ಸೂಚಿಗಳನ್ನು, ಸೂಚ್ಯಂಕಗಳನ್ನು, ಪ್ರಣಾಳಿಕೆಗಳನ್ನು ಬಳಸಿಕೊಳ್ಳಲಾಗಿದೆ. ಮೂರನೆಯ ಭಾಗದಲ್ಲಿ ನಮ್ಮ ಹೈದರಾಬಾದ್ – ಕರ್ನಾಟಕ ಪ್ರದೇಶದಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತೆ ಮಾಡಲು ಇರುವ ಸವಾಲುಗಳೇನು ಎಂಬುದನ್ನು ಇಲ್ಲಿ ಗುರುತಿಸಲಾಗಿದೆ. ಈ ಸವಾಲುಗಳ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಲಿಂಗಸಂಬಂಧಿ ಸಂಗತಿಗಳನ್ನು ಕೂಲಂಕಶವಾಗಿ ಇಲ್ಲಿ ಚರ್ಚಿಸಲಾಗಿದೆ. ನಾಲ್ಕನೆಯ ಭಾಗದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತೆ ಮಾಡಲು ಇರುವ ಅವಕಾಶಗಳಾವುವು ಎಂಬುದನ್ನು ಅನಾವರಣಗೊಳಿಸಲಾಗಿದೆ. ಕಡೆಯ ಮುಗಿತಾಯ ಭಾಗದಲ್ಲಿ ಇಲ್ಲಿನ ಅಧ್ಯಯನದ ಹಿನ್ನೆಲೆಯಲ್ಲಿ ಹೈದರಾಬಾದ್ – ಕರ್ನಾಟಕ ಪ್ರದೇಶದಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತೆ ಮಾಡಲು ಅಗತ್ಯವಾದ ಕಾರ್ಯನೀತಿ ಬಗ್ಗೆ ಮತ್ತು ಈ ಬಗ್ಗೆ ಜನರು ಏನು ಮಾಡಬಹುದು ಎಂಬುದನ್ನು ಕುರಿತಂತೆ ವಿಚಾರ ಮಾಡಲಾಗಿದೆ.

ಭಾಗ –

. ಜನರನ್ನು ಒಳಗೊಳ್ಳುವ ಅಭಿವೃದ್ಧಿಯೆಂದರೇನು?

ಅಮತ್ಯ್‌ಸೆನ್ (1999) ಸರಿಯಾಗಿ ಗುರುತಿಸಿರುವಂತೆ ಸಾಂಪ್ರದಾಯಿಕ ಅಭಿವೃದ್ಧಿ ಮೀಮಾಂಸೆಯಲ್ಲಿ ಜನರನ್ನು ಕೇವಲ ಅಭಿವೃದ್ಧಿಯ ಸಾಧನವನ್ನಾಗಿ ನೋಡಲಾಗಿದೆ. ಈ ಕಾರಣದಿಂದಾಗಿಯೇ ‘ಮಾನವ ಸಂಪನ್ಮೂಲ’ವೆಂಬ ಪರಿಕಲ್ಪನೆಯು (ಎಚ್‌ಆರ್‌ಡಿ) ಇಂದು ಚರ್ಚೆಯು ಮುಂಚೂಣಿಗೆ ಬಂದು ಬಿಟ್ಟಿದೆ.[3] ‘ಅಭಿವೃದ್ಧಿಗಾಗಿ ಜನರು’ ಎಂಬುದು ಇಲ್ಲಿನ ನಂಬಿಕೆಯಿರುವಂತೆ ಕಾಣುತ್ತಿದೆ. ಜಲ ಸಂಪನ್ಮೂಲ, ಅರಣ್ಯ ಸಂಪನ್ಮೂಲ, ಖನಿಜ ಸಂಪನ್ಮೂಲ – ಇತ್ಯಾದಿ ಇದ್ದಂತೆ ಮಾನವ ಸಂಪನ್ಮೂಲ. ಆದರೆ ಜನರು ಕೇವಲ ಸಂಪನ್ಮೂಲವಲ್ಲ. ಸಂಪನ್ಮೂಲದ ಮಟ್ಟಕ್ಕೆ ಜನರನ್ನು ಇಳಿಸಬಾರದು. ಅವರು ಅಭಿವೃದ್ಧಿಯ ಸಾಧನವೂ ಹೌದು. ಅವರು ಅಭಿವೃದ್ಧಿಯು ಒಳಗೊಳ್ಳಬೇಕಾದ ಸಂಗತಿಯೂ ಹೌದು. ಜನರನ್ನು ಒಳಗೊಳ್ಳದ್ದು ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ.

ಜನರನ್ನು ಅಭಿವೃದ್ಧಿಯ ಕರ್ತೃಗಳನ್ನಾಗಿ ನೋಡುವ ಪರಿಯನ್ನು ನಾವು ಬೆಳೆಸಬೇಕಾಗಿದೆ. ಅವರು ಕೇವಲ ಅಭಿವೃದ್ಧಿಯನ್ನು ಸ್ವೀಕರಿಸುವ ಫಲಾನುಭವಿಗಳು ಮಾತ್ರವಲ್ಲ. ಅವರು ಅದರ ಕರ್ತೃಗಳು. ಆದರೆ ಇಂದು ಅಭಿವೃದ್ಧಿಯು ಜನರನ್ನು ಅಂದರೆ ಸಮಾಜದ ಎಲ್ಲ ವರ್ಗಗಳನ್ನೂ, ಎಲ್ಲ ಸಾಮಾಜಿಕ ಗುಂಪುಗಳನ್ನೂ, ಎಲ್ಲ ಲಿಂಗಗಳನ್ನೂ, ಎಲ್ಲ ಪ್ರದೇಶಗಳನ್ನೂ ಒಳಗೊಳ್ಳುವ ಕೇಂದ್ರೀಕರಣಗೊಳ್ಳುವ, ಅದು ಕೆಲವು ಪ್ರದೇಶದಲ್ಲಿ ನೆಲೆ ನಿಂತು ಬಿಡುವ ಪ್ರವೃತ್ತಿಯನ್ನು ಹೊಂದಿರುತ್ತದೆ. ಅದು ಗಂಡಸರ ಅಗತ್ಯಗಳನ್ನು ಪೂರೈಸಿದಂತೆ ಮಹಿಳೆಯರ ಅಗತ್ಯಗಳನ್ನು ಪೂರೈಸುವುದಿಲ್ಲ. ಅಲ್ಲಿ ಶಿಷ್ಟರು ಒಳಗಣದವರಾದರೆ ಪರಿಶಿಷ್ಟರು ಹೊರಗಣದವರಾಗುತ್ತಾರೆ. ಅದು ಕೆಲವರನ್ನು ಒಳಗೊಳ್ಳುತ್ತಿದ್ದರೆ ಹಲವರನ್ನು ಹೊರಗಟ್ಟುತ್ತಿರುತ್ತದೆ. ಸಾಂಪ್ರದಾಯಿಕ ಅಭಿವೃದ್ಧಿ ಮೀಮಾಂಸೆಯ ಸಮಸ್ಯೆಯೆಂದರೆ ಅದು ಎಲ್ಲವನ್ನು ಅಖಂಡವಾಗಿ ಪರಿಭಾವಿಸಿಕೊಳ್ಳುತ್ತದೆ. ಅದೊಂದು ವಿಶ್ವಾತ್ಮಕ ಪ್ರಕ್ರಿಯೆಯೆಂದು ಪ್ರತಿಪಾದಿಕೊಂಡು ಬರಲಾಗಿದೆ.

ಅಭಿವೃದ್ಧಿಯ ಒಳಗಣದವರು ಮತ್ತು ಅಭಿವೃದ್ಧಿಯ ಹೊರಗಣದವರು ಎಂಬ ಪರಿಭಾವನೆಗಳು ತುಂಬಾ ರೋಚಕವಾಗಿವೆ. ಅಭಿವೃದ್ಧಿಯು ಸಮಾಜದಲ್ಲಿ ಯಾರನ್ನು ಒಳಗೊಳ್ಳುತ್ತದೆ ಮತ್ತು ಯಾರನ್ನು ಅದು ಹೊರಗಿಡುತ್ತದೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.

ಈ ಬಗೆಯ ಅಭಿವೃದ್ಧಿ ಕುರಿತ ಚರ್ಚೆಗಳಲ್ಲಿ ಬಂಡವಾಳ ಹೂಡಿಕೆಯ ಬಗ್ಗೆಯಾಗಲಿ ಅಥವಾ ಉಳಿತಾಯದ ಪ್ರಮಾಣವನ್ನು ವರ್ಧಿಸುವ ಬಗ್ಗೆಯಾಗಲಿ ಮಾತನಾಡುವುದಿಲ್ಲ. ಅಭಿವೃದ್ಧಿಯೆಂಬುದು ಇಲ್ಲಿ ರಾಜಕೀಯ ಪ್ರಶ್ನೆ. ಸಾಂಪ್ರದಾಯಿಕ ಅಭಿವೃದ್ಧಿ ಮೀಮಾಂಸೆಯಲ್ಲಿ ಅಭಿವೃದ್ಧಿಯನ್ನು ಕೇವಲ ಒಂದು ಆರ್ಥಿಕ ಸಂಗತಿಯನ್ನಾಗಿ ಮಾಡಲಾಗಿದೆ. ಇಲ್ಲಿ ಲಿಂಗ ಸಂಬಂಧಗಳ ಬಗ್ಗೆಯಾಗಲಿ ಅಥವಾ ಸ್ವಾತಂತ್ರ್ಯದ ಬಗ್ಗೆಯಾಗಲಿ ಅಥವಾ ಸಾಮಾಜಿಕ ನ್ಯಾಯದ ಬಗ್ಗೆಯಾಗಲಿ ಮಾತನಾಡುವುದಿಲ್ಲ. ಜನರನ್ನು ಒಳಗೊಳ್ಳುವ ಅಭಿವೃದ್ಧಿಯನ್ನು ಕುರಿತ ಚರ್ಚೆಯಲ್ಲಿ ಇಂತಹ ಆರ್ಥಿಕೇತರ ಸಂಗತಿಗಳು ಮುಖ್ಯವಾಗಿ ಬಿಡುತ್ತವೆ. ಈಗಿರುವ ಬಂಡವಾಳ ಹೂಡಿಕೆಯನ್ನು ಹೆಚ್ಚು ಮಾಡದೆಯೂ ಅಭಿವೃದ್ಧಿಯು ಎಲ್ಲ ಜನರನ್ನು ಒಳಗೊಳ್ಳುವಂತೆ ಮಾಡಬಹುದಾಗಿದೆ. ಅಭಿವೃದ್ಧಿಯ ಹೊರಗಣದವರ ಧಾರಣಾ ಸಾಮರ್ಥ್ಯವನ್ನು ಉತ್ತಮ ಪಡಿಸದೆ ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತೆ ಮಾಡುವುದು ಸಾಧ್ಯವಿಲ್ಲ. ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತೆ ಮಾಡುವುದೆಂದರೆ ಅದರಿಂದ ಹೊರಗಿರುವವರು ಅಭಿವೃದ್ಧಿಯ ಮೇಲಿನ ತಮ್ಮ ಹಕ್ಕುದಾರಿಕೆಯನ್ನು, ಅಧಿಕಾರವನ್ನು ಸ್ಥಾಪಿಸುವಂತೆ ಮಾಡಬೇಕು. ಅಭಿವೃದ್ಧಿಯಲ್ಲಿ ಒಂದು ದೇಶ/ಪ್ರದೇಶದ ಎಲ್ಲ ಜನರಿಗೂ ಪಾಲು ದೊರೆಯಬೇಕು. ಪಾಲು ದೊರೆಯದಿದ್ದರೆ ಅದನ್ನು ಅವರು ಒತ್ತಾಯಿಸಬೇಕು. ಅದು ಅವರ ಹಕ್ಕು. ಇದು ಜನರನ್ನು ಒಳಗೊಳ್ಳುವ ಅಭಿವೃದ್ಧಿ. ಅಭಿವೃದ್ಧಿಯೆಂಬುದು ‘ದತ್ತಿ’ – ‘ದಾನ’ ಅಥವಾ ‘ಕೊಡುಗೆ’ ಯಲ್ಲ. ಅದು ಜನರ ಹಕ್ಕು. ಜನರ ಅಧಿಕಾರ. ಈ ಹಕ್ಕುದಾರಿಕೆಯು ತನ್ನಷ್ಟಕ್ಕೆ ತಾನೆ ಒದಗಿ ಬರುವುದಿಲ್ಲ. ಅದನ್ನು ದಕ್ಕಿಸಿಕೊಳ್ಳಬೇಕಾಗುತ್ತದೆ. ಅಭಿವೃದ್ಧಿಯೆನ್ನುವುದು ಒಳಗಣದವರಿಗೆ ಸುಲಭವಾಗಿ ದಕ್ಕಿಬಿಡುತ್ತದೆ. ಆದರೆ ಅದು ಹೊರಗಣದವರಿಗೆ ದಕ್ಕುವಂತೆ ಮಾಡಬೇಕಾಗುತ್ತದೆ. ಈ ಒಳಗೊಳ್ಳುವ ಅಭಿವೃದ್ಧಿಗೆ ಜಾತಿ ಸಂಬಂಧಿ ಗುಣವಿದೆ. ವರ್ಗಸಂಬಂಧಿ ನೆಲೆಗಳಿವೆ. ಅದಕ್ಕೆ ಪುರುಷಶಾಹಿ ನೆಲೆಯಿದೆ. ಈಗಾಗಲೆ ಅಭಿವೃದ್ಧಿಯನ್ನು ಸಾಧಿಸಿಕೊಂಡ ಜನವರ್ಗ, ಪ್ರದೇಶಗಳು, ವೃತ್ತಿಗಳು ಮುಂತಾದವುಗಳನ್ನು ಮಾತ್ರ ಸರ್ಕಾರವೊಂದು ಸದಾ ಪ್ರೋತ್ಸಾಹಿಸಲು ಬಯಸುತ್ತದೆ. ಏಕೆಂದರೆ ಈ ಸಂಗತಿಗಳ ಮೇಲೆ ಒತ್ತು ನೀಡಿದರೆ ಸರ್ಕಾರವು ತಕ್ಷಣ ಫಲಿತಾಂಶವನ್ನು ನಿರೀಕ್ಷಿಸಬಹುದು. ಯಾವುದರಿಂದ ತಕ್ಷಣದ ಫಲಿತಾಂಶ ಬರುತ್ತದೋ ಅಂತಹದ್ದರ ಮೇಲೆ ಸರ್ಕಾರವು ಹೆಚ್ಚು ಅವಲಂಬಿಸಿರುತ್ತದೆ. ಈ ಬಗೆಯ ತಕ್ಷಣದ ಫಲಿತಾಂಶದಿಂದ ರಾಜಕೀಯ ಲಾಭ ಪಡೆಯಬಹುದು. ಆದರೆ ಅಭಿವೃದ್ಧಿಯ ಹೊರಗಣದವರನ್ನು ಒಳಗಣದವರನ್ನಾಗಿ ಮಾಡುವುದು ಸುಲಭದ ಕೆಲಸವಲ್ಲ. ಅದು ದೀರ್ಘ ಕಾಲದ ಪ್ರಯತ್ನವನ್ನು ಬಯಸುತ್ತದೆ. ಅದಕ್ಕೆ ಜನಸಂಘಟನೆಯ ಅಗತ್ಯವಿದೆ. ಜನರ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ. ಅದಕ್ಕೆ ಕಾಲಾವಕಾಶ ಬೇಕು. ಇಂದಿನ ರಾಜಕಾರಣದಲ್ಲಿ ಕಾಲಾವಕಾಶವೆನ್ನುವುದು ಅತ್ಯಂತ ಕೊರತೆಯ ಸಂಗತಿಯಾಗಿ ಬಿಟ್ಟಿದೆ. ಇದಕ್ಕೆ ಮುತ್ಸದ್ಧಿಗಳಂತೆ ಮುಂದಿನ ತಲೆಮಾರಿನ ಬಗ್ಗೆ ಚಿಂತಿಸುವ ರಾಜಕಾರಿಣಿಗಳು ಬೇಕಾಗುತ್ತಾರೆ. ಆದರೆ ಇಂದು ನಮ್ಮಲ್ಲಿ ಮುಂದಿನ ಚುನಾವಣೆ ಬಗ್ಗೆ ಚಿಂತಿಸುವವರೇ ಅಧಿಕ. ಈ ಹಿನ್ನೆಲೆಯಲ್ಲಿ ಜನರನ್ನು ಅಭಿವೃದ್ಧಿಯು ಒಳಗೊಳ್ಳುವಂತೆ ಮಾಡುವುದರ ಬಗ್ಗೆ ಚಿಂತಿಸಬೇಕಾಗಿದೆ.

ವರಮಾನದ ವರ್ಧನೆಯೋ ಅಥವಾ ಧಾರಣಾ ಸಾಮರ್ಥ್ಯದ ವರ್ಧನೆಯೋ?

ನಮಗೆಲ್ಲಾ ತಿಳಿದಿರುವಂತೆ ವರಮಾನದಲ್ಲಿನ ವರ್ಧನೆಯನ್ನು ಅಭಿವೃದ್ಧಿಯೆಂದು ಪರಿಭಾವಿಸಿಕೊಂಡು ಬರಲಾಗಿದೆ. ಈ ಮಾದರಿಯಲ್ಲಿ ಒಂದು ಆರ್ಥಿಕತೆಯ ವರಮಾನದಲ್ಲಿನ ವರ್ಧನೆಯನ್ನು ಅಳೆಯಲು ರೂಪಿಸಿರುವ ಮಾಪನಗಳಾದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಎನ್‌ಪಿ) ಮತ್ತು ತಲಾ ಆಂತರಿಕ ಉತ್ಪನ್ನಗಳನ್ನು ಅಭಿವೃದ್ಧಿಯ ಮಾಪನಗಳೆಂದೇ ಪರಿಭಾವಿಸಿಕೊಂಡು ಬಳಸಲಾಗುತ್ತಿದೆ. ಈ ಬಗೆಯ ಸೈದ್ಧಾಂತಿಕ ಸಂಗತಿಯನ್ನು ಅಮರ್ತ್ಯಸೆನ್ ‘ವರಮಾನ ವರ್ಧನಾ ಅಭಿವೃದ್ಧಿ ಸಿದ್ಧಾಂತ’ವೆಂದು ಕರೆದಿದ್ದಾನೆ. ಆದರೆ ಅಮತ್ಯ್‌ಸೆನ್, ಮೆಹಬೂಬ್ ಉಲ್ ಹಕ್‌, ಮಾರ್ತ ನುಸುಬೌಮ್ ಮುಂತಾದ ಚಿಂತಕರು ವರಮಾನ ವರ್ಧನೆಗೂ ಮತ್ತು ಅಭಿವೃದ್ಧಿಗೂ ನೇರವಾದ ಮತ್ತು ಸಮೀಕರಣ ದೋಪಾದಿಯ ಸಂಬಂಧವಿಲ್ಲವೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಏಕೆಂದರೆ ವರ್ಧನೆಯಾದ ವರಮಾನವು ತನ್ನಷ್ಟಕ್ಕೆ ತಾನೆ ಎಲ್ಲ ಜನರಿಗೂ ಒದಗುವುದು ಅಥವಾ ಜನರನ್ನು ಒಳಗೊಳ್ಳುವುದು ಸಾಧ್ಯವಿಲ್ಲ. ಆದರೆ ಅದು ಹಾಗೆ ತನ್ನಷ್ಟಕ್ಕೆ ತಾನೆ ಎಲ್ಲ ಜನರಿಗೂ ಒದಗುವುದು ಅಥವಾ ಜನರನ್ನು ಒಳಗೊಳ್ಳುವುದು ಸಾಧ್ಯವಿಲ್ಲ. ಆದರೆ ಅದು ಹಾಗೆ ತನ್ನಷ್ಟಕ್ಕೆ ತಾನೆ ಎಲ್ಲರಿಗೂ ಒದಗುತ್ತದೆ ಮತ್ತು ಎಲ್ಲರನ್ನೂ ಅದು ಒಳಗೊಳ್ಳುತ್ತದೆ ಎಂಬುದು ಸಾಂಪ್ರದಾಯಿಕ ಅಭಿವೃದ್ಧಿ ತಜ್ಞರ ನಂಬಿಕೆಯಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಜೊಸೆಫ್ ಸ್ಟಿಗ್‌ಲಿಡ್ಜ್ ಜಾಗತೀಕರಣ ಕುರಿತ ತನ್ನ ಕೃತಿಯಲ್ಲಿ ಈ ‘ಟ್ರಿಕಲ್ ಡೌನ್’ ಪ್ರಮೇಯವನ್ನು ತಿರಸ್ಕರಿಸಿದ್ದಾನೆ. ಅದು ವಿಫಲಗೊಂಡಿದೆಯೆಂದು ಅವನು ಹೇಳುತ್ತಿದ್ದಾನೆ. ಆದ್ದರಿಂದ ಜನರನ್ನು ಒಳಗೊಳ್ಳುವ ಅಭಿವೃದ್ಧಿಯನ್ನು ವರಮಾನ ವರ್ಧನಾ ಸಿದ್ಧಾಂತಕ್ಕೆ ಭಿನ್ನವಾಗಿ ಜನರನ್ನು ಮೂಲಧಾತುವನ್ನಾಗಿ ಮಾಡಿಕೊಂಡಿರುವ ‘ಧಾರಣಾ ಸಾಮರ್ಥ್ಯ ವರ್ಧನಾ ಸಿದ್ಧಾಂತ’ದ ಆಧಾರದ ಮೇಲೆ ಪರಿಭಾವಿಸಿಕೊಳ್ಳಬೇಕಾಗುತ್ತದೆ. ವರಮಾನ ವರ್ಧನಾ ಅಭಿವೃದ್ಧಿ ಸಿದ್ಧಾಂತವನ್ನು ಆಧರಿಸಿದ ಅಭಿವೃದ್ಧಿಯು ಜನರನ್ನು ಒಳಗೊಳ್ಳುವುದು ಸಾಧ್ಯವಿಲ್ಲವೆಂಬುದನ್ನು ಮೆಹಬೂಬ್ ಉಲ್ ಹಕ್ ತನ್ನ ಒಂದು ಕೃತಿಯಲ್ಲಿ ಹೀಗೆ ತೋರಿಸಿಕೊಟ್ಟಿದ್ದಾನೆ.

  1. ವರಮಾನವು ಆರ್ಥಿಕತೆಯಲ್ಲಿ ಅಸಮಾನವಾಗಿ ವಿತರಣೆಯಾಗಿರಬಹುದು. ಯಾರಿಗೆ ವರಮಾನದ ಮೇಲೆ ಹಕ್ಕುದಾರಿಕೆ ಪ್ರಾಪ್ತವಾಗಿರುವುದಿಲ್ಲವೋ ಅವರು ಅಭಿವೃದ್ಧಿಯಿಂದ ವಂಚಿತರಾಗಿರುತ್ತಾರೆ. ಅನೇಕ ದೇಶಗಳ ಅನುಭವವೆಂದದರೆ ಅಲ್ಲಿ ಏರಿಕೆಯಾದ ವರಮಾನವು ತಳಮಟ್ಟದಲ್ಲಿ ಜನರಿಗೆ ಒದಗುತ್ತಿಲ್ಲ.
  2. ವರಮಾನದಲ್ಲಿನ ವರ್ಧನೆಯು ದೇಶದಲ್ಲಿನ ಶಸ್ತ್ರಾಸ್ತ್ರ – ಪರಮಾಣು ಬಾಂಬು ಮುಂತಾದ ವಿನಾಶಕಾರಿ ಸಂಗತಿಗಳ ಉತ್ಪಾದನೆಯಿಂದಲೂ ಉಂಟಾಗಿರಬಹುದು. ಆಗ ಅದರಿಂದ ಜನರ ಬದುಕು ಉತ್ತಮವಾಗುವುದು ಸಾಧ್ಯವಿಲ್ಲ.
  3. ವರಮಾನ ವರ್ಧನೆ ಆಧರಿಸಿದ ಸಿದ್ಧಾಂತವು ಅಭಿವೃದ್ಧಿಯನ್ನು ಸಂಪೂರ್ಣವಾಗಿ ಆರ್ಥಿಕ ಸಂಗತಿಯನ್ನಾಗಿ ಪರಿಭಾವಿಸಿಕೊಳ್ಳುತ್ತದೆ. ಇಲ್ಲಿ ಅದೊಂದು ಆರ್ಥಿಕ ಚಟುವಟಿಕೆಯಾಗಿಬಿಡುತ್ತದೆ. ಆದರೆ ಅಭಿವೃದ್ಧಿಯೆಂಬುದು ಕೇವಲ ಆರ್ಥಿಕ ಸಂಗತಿಗೆ ಸಂಬಂಧಿಸಿದ ಸಂಗತಿಯಲ್ಲ. ಅದು ಸ್ವಾತಂತ್ರ್ಯ, ಮಾನವ ಹಕ್ಕುಗಳು, ಲಿಂಗ ಸಮಾನತೆ, ಆಹಾರ ಭದ್ರತೆ, ಸಾಮಾಜಿಕ ಘನತೆ ಮುಂತಾದ ಸಂಗತಿಗಳ ಜೊತೆ ಸಂಬಂಧ ಹೊಂದಿದೆ.
  4. ಬದುಕಿನಲ್ಲಿ ಅನೇಕ ಸಂಗತಿಗಳು ಸಂಪತ್ತಿಗೆ ಸಂಬಂಧಿಸಿರುವುದಿಲ್ಲ. ಆದರೆ ಜನರ ಬದುಕನ್ನು ಹಸನುಗೊಳಿಸುವಲ್ಲಿ ಅವುಗಳ ಪಾತ್ರ ತುಂಬಾ ಮಹತ್ವದ್ದಾಗಿರುತ್ತದೆ. ಸಂಪತ್ತು, ವರಮಾನ, ಬಂಡವಾಳ, ಆಸ್ತಿಪಾಸ್ತಿ ಮುಂತಾದವುಗಳನ್ನು ಜನರು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಸಂಗತಿಗಳನ್ನು ಪಡೆದುಕೊಳ್ಳಬಹುದು. ಆದರೆ ಅವುಗಳಿಗೆ ತಮ್ಮದೇ ಆದ ಉಪಯೋಗವಿಲ್ಲ.

ಈ ಬಗೆಯ ಅಭಿವೃದ್ಧಿ ವಿಚಾರ ಪ್ರಣಾಳಿಕೆಗೆ ಪ್ರತಿಯಾಗಿ ಅಮರ್ತ್ಯಸೆನ್, ಮೆಹಬೂಬ್ ಉಲ್ ಹಕ್, ಮಾರ್ತ ನುಸುಬೌಮ್, ಜೀನ್ ಡ್ರಿಜ್, ಜೊಸೆಫ್ ಸ್ಪಿಗ್‌ಲಿಡ್ಜ್ ಮುಂತಾದವರು ರೂಪಿಸಿರುವ ಮತ್ತು ಯುಎನ್‌ಡಿಪಿಯು ಕಾರ್ಯಾಚರಣೆ ರೂಪ ನೀಡಿರುವ ಧಾರಣಾ ಸಾಮರ್ಥ್ಯ ವರ್ಧನಾ ಅಭಿವೃದ್ಧಿ ಸಿದ್ಧಾಂತವು ವರಮಾನಕ್ಕೆ ಪ್ರತಿಯಾಗಿ ಜನರನ್ನು ಅಭಿವೃದ್ಧಿಯ ಮೂಲಧಾತುವನ್ನಾಗಿ ಮಾಡಿಕೊಂಡಿದೆ. ಜನರು, ಜನರ ಬದುಕು, ಅವರ ಸ್ವಾತಂತ್ರ್ಯ, ಅವರ ಹಕ್ಕುಗಳು, ಲಿಂಗ ಸಮಾನತೆ ಅಭಿವೃದ್ಧಿಯಲ್ಲಿ ಮುಖ್ಯವಾಗುತ್ತವೆ. ಅಂತಹ ವಿಚಾರ ಪ್ರಣಾಳಿಕೆಯನ್ನು ಆಧರಿಸಿದ ಅಭಿವೃದ್ಧಿ ಮಾತ್ರ ಜನರನ್ನು ಒಳಗೊಳ್ಳುವುದು ಸಾಧ್ಯ.

ಧಾರಣಾ ಸಾಮರ್ಥ್ಯವನ್ನು ಆಧರಿಸಿದ ಅಭಿವೃದ್ಧಿ ಸಿದ್ಧಾಂತ

ಈ ಸಿದ್ಧಾಂತ ಆಧರಿಸಿದ ಅಭಿವೃದ್ಧಿ ಮಾತ್ರ ಜನರನ್ನು ಒಳಗೊಳ್ಳುವುದು ಸಾಧ್ಯ. ಸಮಾಜದಲ್ಲಿ ಬದುಕನ್ನು ಉತ್ತಮಪಡಿಸಿಕೊಳ್ಳಲು ಅವಕಾಶಗಳು ಹರಿದು ಬರುತ್ತಿರುತ್ತವೆ. ಈ ಅವಕಾಶಗಳನ್ನು ಜನರು ತಮ್ಮದನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ಅವಕಾಶಗಳನ್ನು ಧಾರಣೆ ಮಾಡಿಕೊಳ್ಳಲು ಸಾಮರ್ಥ್ಯ ಬೇಕಾಗುತ್ತದೆ. ಈ ಸಾಮರ್ಥ್ಯವನ್ನು ವರ್ಧಿಸುವ ಪ್ರಕ್ರಿಯೆಯೇ ಅಭಿವೃದ್ಧಿ. ಈ ಬಗೆಯ ಅಭಿವೃದ್ಧಿಯು ಜನರನ್ನು ಒಳಗೊಳ್ಳುತ್ತದೆ. ಏಕೆಂದರೆ ಇಲ್ಲಿ ಏರಿಕೆಯಾದ ವರಮಾನವನ್ನು, ಉತ್ಪಾದನೆಯನ್ನು, ಉದ್ಯೋಗವನ್ನು ಧಾರಣೆ ಮಾಡಿಕೊಳ್ಳುವ ಸಾಮರ್ಥ್ಯ ಜನರಲ್ಲಿರುತ್ತದೆ. ಈ ಧಾರಣಾ ಸಾಮರ್ಥ್ಯವು ಜನರಿಗೆ ಹೀಗೆ ಬರುತ್ತದೆ? ಅದು ಸಾಕ್ಷರತೆಯಿಂದ ಬರುತ್ತದೆ. ಅದು ಆರೋಗ್ಯದಿಂದ ದೊರೆಯುತ್ತದೆ. ಅದು ಲಿಂಗ ಸಮಾನತೆಯಿಂದ ಪ್ರಾಪ್ತವಾಗುತ್ತದೆ. ಅದು ಸಾಮಾಜಿಕ ನ್ಯಾಯದಿಂದ ಒದಗುತ್ತದೆ. ಅದು ಆಹಾರ ಭದ್ರತೆಯಿಂದ ಸಾಧ್ಯವಾಗುತ್ತದೆ. ಅದನ್ನು ಸ್ವಾತಂತ್ರ್ಯದಿಂದ ದಕ್ಕಿಸಿಕೊಳ್ಳಬಹುದು.

ಅಭಿವೃದ್ಧಿ : ಅನುಕಂಪೆಯೋ ಅಥವಾ ಬದ್ಧತೆಯೋ?

ಈ ಸಂಗತಿಯನ್ನು ಕುರಿತಂತೆ ಅಮರ್ತ್ಯಸೆನ್ ತನ್ನ ಬಹಳಷ್ಟು ಕೃತಿಗಳಲ್ಲಿ ಚರ್ಚೆ ಮಾಡಿದ್ದಾನೆ. ಅವನ ಪ್ರಕಾರ ಅಭಿವೃದ್ಧಿ ಎಂಬುದು ಬದ್ಧತೆಯ ಸಂಗತಿಯೇ ವಿನಾ ಅನುಕಂಪೆಯ ಸಂಗತಿಯಲ್ಲ. ಅನುಕಂಪೆಯಿಂದ ದುಸ್ಥಿತಿಯು ನಿವಾರಣೆಯಾಗುವುದಿಲ್ಲ. ಸಮಾಜವಿಜ್ಞಾನಗಳಲ್ಲಿ ಜನರ ವರ್ತನೆಗೆ ಸಂಬಂಧಿಸಿದಂತೆ ಪ್ರತಿಪಾದಿಸಿಕೊಂಡು ಬರುತ್ತಿರುವ ಪ್ರಮೇಯವೆಂದರೆ ಅದು ಯಾವಾಗಲೂ ಜನರ ‘ಸ್ವಹಿತಾಸಕ್ತಿ’ ನೆಲೆಯಿಂದಲೇ ಕ್ರಿಯಾಶೀಲಗೊಳ್ಳುತ್ತದೆ ಎಂಬುದಾಗಿದೆ. ಈ ಬಗೆಯ ವರ್ತನೆಯನ್ನು ರ್ಯಾಷನಲ್ ವರ್ತನೆಯೆಂದು ಕರೆಯಲಾಗುತ್ತದೆ. ಈ ರೀತಿಯ ಪ್ರಮೇಯದ ಮೇಲೆ ಸಮಾಜವಿಜ್ಞಾನಗಳನ್ನು ಕಟ್ಟಲಾಗಿದೆ. ಆದರೆ ರ್ಯಾಷನ್ಯಾಲಿಟಿಯನ್ನು ಹೀಗೆ ಸೀಮಿತ ಚೌಕಟ್ಟಿನಲ್ಲಿ ನಿರ್ವಚಿಸುವುದನ್ನು ಸೆನ್ ಟೀಕಿಸುತ್ತಾನೆ. ಈ ವಿದ್ವಾಂಸರು ಆಡಂಸ್ಮಿತ್‌ನ ಪ್ರಸಿದ್ಧ ಹೇಳಿಕೆಯನ್ನು ಮತ್ತೆ ಮತ್ತೆ ಉಲ್ಲೇಖಿಸುತ್ತಾರೆ.

‘It is not from the benevolence of the butcher, the brewer or the baker that we expect our dinner, but from their regard for their own interest. We address ourselves, not to humanity but to their self – love ‘.

ಇದು ನಿಜ. ಇಲ್ಲಿ ಆಡಂಸ್ಮಿತ್ ಜನರ ಸ್ವಹಿತಾಶಕ್ತಿಯ ಬಗ್ಗೆ ಮಾತನಾಡುತ್ತಿದ್ದಾನೆ. ಈ ಸ್ವಹಿತಾಸಕ್ತಿಯೆಂಬುದನ್ನು ಸ್ಮಿತ್ ತನ್ನ ಬೇರೆ ಬರಹಗಳಲ್ಲಿ ವಿಸ್ತೃತ ನೆಲೆಯಲ್ಲಿ ಪರಿಭಾವಿಸಿಕೊಂಡಿದ್ದಾನೆ. ಸ್ವಹಿತಾಸಕ್ತಿಯೇ ಜನರ ಬದುಕಿನ ಮೂಲ ಚೈತನ್ಯವೆಂಬುದನ್ನು ನಂಬುದುವುದು ಸಾಧ್ಯವಿಲ್ಲ. ಆಡಂಸ್ಮಿತ್‌ನ ಈ ವಾದವನ್ನು ಕುರಿತಂತೆ ಅಮರ್ತ್ಯಸೆನ್ ವಿವರವಾಗಿ ಚರ್ಚೆ ಮಾಡಿದ್ದಾನೆ (ಅಮರ್ತ್ಯಸೆನ್, 1999: ಪು: 271 – 272) . ಸ್ವಹಿತಾಸಕ್ತಿಯೆನ್ನುವುದೇ ರ್ಯಾಷನಲ್ ಗುಣವೆಂದು ವಿವರಿಸುವ ಕ್ರಮವೊಂದು ಅರ್ಥಶಾಸ್ತ್ರದಲ್ಲಿದೆ. ಆದರೆ ಈ ರ್ಯಾಷನಲ್ ಗುಣವೆಂಬುದು ಶೂನ್ಯದಲ್ಲಿ ಸಂಭವಿಸುವ ಸಂಗತಿಯೇನಲ್ಲ. ಅದು ಒಂದು ಸಮಾಜದ ಚೌಕಟ್ಟಿನಲ್ಲಿ ಸಂಭವಿಸಬೇಕು. ನಮ್ಮ ರ್ಯಾಷನಲ್ ಗುಣವು ‘ನ್ಯಾಯ’ದ ವ್ಯಾಪ್ತಿಯಲ್ಲಿರಬೇಕಾಗುತ್ತದೆ. ಏಕೆಂದರೆ ವ್ಯಕ್ತಿಯೊಬ್ಬನು ಸಮಾಜದಲ್ಲಿ ಬದುಕುತ್ತಿರಬೇಕಾದರೆ ಅಲ್ಲಿ ಸಾರ್ವಜನಿಕವೆಂಬ ಜವಾಬುದಾರಿಯೂ ಜನರಿಗೆ ಇರುತ್ತದೆ. ವ್ಯಕ್ತಿಯು ಜನರ ನಡುವೆ ಬದುಕಬೇಕು ತಾನೇ!. ಆಡಂಸ್ಮಿತ್‌ನ ರ್ಯಾಷನಲ್ ವ್ಯಕ್ತಿಯು ಜನರ ನಡುವೆ ಇರುವ ವ್ಯಕ್ತಿಯೇ ವಿನಾ ಅವರು ಏಕಾಂಗಿಗಳಾಗಿ ಬದುಕಲು ಸಾಧ್ಯವಿಲ್ಲ. ಸ್ವಹಿತಾಸಕ್ತಿಯೆಂಬುದು ಸ್ವಂತ ಹಿತಾಸಕ್ತಿಯ ಜೊತೆಯಲ್ಲಿ ತನಗೆ ಸಂಬಂಧಿಸಿದ ಇತರರ ಹಿತಾಸಕ್ತಿಯನ್ನು ಒಳಗೊಳ್ಳಬಹುದಾಗಿದೆ. ತನ್ನ ಸ್ವಂತ ಹಿತಾಸಕ್ತಿಯನ್ನು ಪೂರೈಸಿಕೊಳ್ಳುವುದಕ್ಕಾಗಿ ಇತರರ ಹಿತಾಸಕ್ತಿಯ ಬಗ್ಗೆ ಕಾಳಜಿ ವಹಿಸುವ ಜನರ ವರ್ತನೆಯನ್ನು ನಾವು ‘ಅನುಕಂಪೆ’ವೆಂದು ಕರೆಯಬಹುದು. ಆದರೆ ಜನರು ತಮಗೆ ಸಂಬಂಧಿಸಿದವರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಉದ್ಧೇಶಕ್ಕಾಗಿ ತಮ್ಮ ಸ್ವಂತ ಹಿತಾಸಕ್ತಿಯನ್ನು ಬಿಟ್ಟುಕೊಡುತ್ತಿರಬಹುದು. ಇಲ್ಲಿ ಅನುಕಂಪೆಗೆ ಪ್ರತಿಯಾಗಿ ಒಂದು ಬಗೆಯ ‘ಬದ್ಧತೆ’ಯನ್ನು ಕಾಣಬಹುದಾಗಿದೆ. ಈ ಬಗೆಯ ವರ್ತನೆಯಲ್ಲಿ ಸ್ವಹಿತಾಸಕ್ತಿಗಿಂತ ಸಾಮಾಜಿಕ ನ್ಯಾಯ ಅಥವಾ ಸಾಮಾಜಿಕ ಬದ್ಧತೆಯು ಕೆಲಸ ಮಾಡುತ್ತಿರುತ್ತದೆ. ಈ ವಿಷಯ ಕುರಿತಂತೆ ಸೆನ್ ಒಂದು ಉದಾಹರಣೆ ನೀಡುತ್ತಾನೆ.

ಸಮಾಜದಲ್ಲಿನ ಬಡತನವನ್ನು ಕಂಡು ಬೇಸರಗೊಂಡು ಬಡವರಿಗೆ ಒಬ್ಬ ವ್ಯಕ್ತಿಯು ಸಹಾಯ ಮಾಡಬಹುದು. ಇದು ಅನುಕಂಪೆಯ ಸಂಗತಿ. ಬಡತನವು ಬೇಸರವನ್ನುಂಟು ಮಾಡುವುದಕ್ಕೆ ಪ್ರತಿಯಾಗಿ ಅದೊಂದು ಸಾಮಾಜಿಕ ನ್ಯಾಯದ – ಅನ್ಯಾಯದ ಸಂಗತಿಯಾದಾಗ ಅದರ ಬಗೆಗಿನ ನಮ್ಮ ದೃಷ್ಟಿಕೋನವು ಬದಲಾಗುತ್ತದೆ. ಅದರ ನಿವಾರಣೆಗೆ ನಾವು ಯೋಚಿಸತೊಡಗುತ್ತೇವೆ. ಆಗ ಅದು ‘ಬದ್ಧತೆ’ಯ ಸಂಗತಿಯಾಗುತ್ತದೆ. ಅನುಕಂಪೆಯಿಂದ ರೂಪುಗೊಂಡ ಕ್ರಿಯೆಯಲ್ಲಿ ಜನರು ಸ್ವಂತ ಹಿತಾಸಕ್ತಿಯನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವ ಅಗತ್ಯ ಬರುವುದಿಲ್ಲ. ಆದರೆ ಬದ್ಧತೆಯ ಸಂಗತಿಯಲ್ಲಿ ಸ್ವಂತ ಹಿತಾಸಕ್ತಿಯನ್ನು ಬಿಟ್ಟುಕೊಡುವ ಪ್ರಮೇಯ ಬರಬಹುದು. ಏಕೆಂದರೆ ಬಡತನದ ನಿವಾರಣೆಗೆ ಇಲ್ಲಿ ಪ್ರಯತ್ನಿಸುತ್ತಿರುವುದರ ಹಿಂದೆ ಸಾಮಾಜಿಕ ಅನ್ಯಾಯವನ್ನು ಸರಿಪಡಿಸಬೇಕೆಂಬ ಕಾಳಜಿ – ಬದ್ಧತೆ – ಆಕ್ರೋಶ ಅಡಗಿದೆ. ಈ ಬಗೆಯ ಬದ್ಧತೆಯಲ್ಲಿ ಸ್ವಹಿತಾಸಕ್ತಿಯ ಸಂಗತಿಯು ಅಡಗಿಲ್ಲವೆಂದು ಹೇಳಲು ಬರುವುದಿಲ್ಲ. ಏಕೆಂದರೆ ಅದೂ ಕೂಡ ಸ್ವಂತ ತೀರ್ಮಾನವೇ ಆಗಿದೆ. ಇದನ್ನು ರ್ಯಾಷನಲ್ ತೀರ್ಮಾನವಲ್ಲವೆಂದು ಹೇಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಸುಖ – ಸಂತೋಷಗಳು ಕೇವಲ ಒಬ್ಬ ವ್ಯಕ್ತಿಯ ಪ್ರಯತ್ನದಿಂದ, ಕ್ರಿಯೆಯಿಂದ ಪ್ರಾಪ್ತವಾಗುವ ಸಂಗತಿಗಳಲ್ಲ. ಅವು ಸಮಾಜದಲ್ಲಿ ಜನರ ನಡುವೆಯೇ ಸಂಭವಿಸಬೇಕಾದ ಸಂಗತಿಗಳಾಗಿವೆ. ಅದರಲ್ಲಿ ಆ ವ್ಯಕ್ತಿಯ ಪಾತ್ರವಿರುವಂತೆ ಇತರರ ಪಾತ್ರವೂ ಇರುತ್ತದೆ. ಒಬ್ಬೊಬ್ಬರೆ ಸುಖ – ಸಂತೋಷವನ್ನು ಪಡೆಯುವುದು ಮತ್ತು ಅದನ್ನು ಒಬ್ಬೊಬ್ಬರೆ ಅನುಭವಿಸುವುದು ಸಾಧ್ಯವಿಲ್ಲ. ಸಾಮಾಜಿಕ ಅನ್ಯಾಯ – ನ್ಯಾಯದ ನೆಲೆಯಿಂದ ಜನರು ಪ್ರಭಾವಿತರಾಗುವುದು ಬೇರೆ, ‘ಅಯ್ಯೋ ಪಾಪ’ ಎಂದು ಪ್ರಲಾಪಿಸುವುದು ಬೇರೆ. ಅಯ್ಯೋ ಪಾಪ ಎನ್ನುವ ಅನುಕಂಪೆಯಿಂದ ಬಡತನವು ನಿವಾರಣೆಯಾಗುವುದಿಲ್ಲ. ಅಲ್ಲಿ ಬಡತನದ ಹಿಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ ಕಾರಣಗಳನ್ನು ತಿಳಿದುಕೊಳ್ಳುವುದು, ವಿಶ್ಲೇಷಿಸುವುದು, ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಅನುಕಂಪೆಯಿಂದ ಪ್ರೇರಿತವಾದ ಕ್ರಮದಲ್ಲಿ ಸಮಸ್ಯೆಯ ಮೂಲದಲ್ಲಿನ ಸಾಮಾಜಿಕ ನೆಲೆಯನ್ನು ಗುರುತಿಸುವ ಅಗತ್ಯವೇ ಬರುವುದಿಲ್ಲ. ಬದ್ಧತೆಯ ನೆಲೆಯಿಂದ ನಡೆಯುವ ಪ್ರಯತ್ನದಲ್ಲೂ ಬಡತನವು ನಿವಾರಣೆಯಾಗದೆ ಇರಬಹುದು. ಆದರೆ ಇಲ್ಲಿ ಅದರ ಮೂಲದಲ್ಲಿನ ಕಾರಣ ಮೀಮಾಂಸೆಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಈ ಅರ್ಥ ಮಾಡಿಕೊಳ್ಳುವ ಕ್ರಮವೇ ಅದರ ನಿವಾರಣೆಯ ದಿಶೆಯಲ್ಲಿ ನಡೆಯುವ ಪ್ರಥಮ ಪ್ರಯತ್ನವಾಗಿದೆ.

ಸ್ವಾತಂತ್ರ್ಯವಾಗಿ ಅಭವೃದ್ಧಿ

ಇದು ಅಮರ್ತ್ಯಸೆನ್ ಪ್ರಸಿದ್ಧ ಕೃತಿಯ ಹೆಸರು (1999) . ಈ ಕೃತಿಯಲ್ಲಿ ಸೆನ್ ಅಭಿವೃದ್ಧಿಯನ್ನು ಕುರಿತ ಧಾರಣಾ ಸಾಮರ್ಥ್ಯ ವರ್ಧನಾ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ. ಹನ್ನೊಂದನೆಯ ಯೋಜನೆಯಲ್ಲಿ ವಾಸ್ತವವಾಗಿ ತ್ವರಿತ ಗತಿಯ ಮತ್ತು ಜನರನ್ನು ಒಳಗೊಳ್ಳುವ ವರಮಾನ ವರ್ಧನಾ ಪ್ರಕ್ರಿಯೆಯ ಬಗ್ಗೆ ಮಾತನಾಡಲಾಗಿದೆ ವಿನಾ ಜನರನ್ನು ಒಳಗೊಳ್ಳುವ ಅಭಿವೃದ್ಧಿಯ ಬಗ್ಗೆ ಮಾತನಾಡಿಲ್ಲ. ವರಮಾನವು ಹೆಚ್ಚನ ನಡೆಯಲ್ಲಿ ಏರಿಕೆಯಾಗಬೇಕು ಮತ್ತು ಏರಕೆಯಾದ ವರಮಾನವು ಜನರನ್ನು ಒಳಗೊಳ್ಳಬೇಕು ಎಂಬುದು ಅದರ ಮಹೋನ್ನತ ಗುರಿಯಾಗಿದೆ. ವರಮಾನ ವರ್ಧನಾ ಬೆಳವಣಿಗೆ ಸಿದ್ಧಾಂತ ಮತ್ತು ಧಾರಣಾ ಸಾಮರ್ಥ್ಯ ವರ್ಧನಾ ಅಭಿವೃದ್ಧಿ ಸಿದ್ಧಾಂತಗಳ ನಡುವೆ ಮೂಲಭೂತ ಭಿನ್ನತೆಗಳಿವೆ. ಅಮತ್ಯಸೆನ್, ಮೆಹಬೂಬ್ ಉಲ್ ಹಕ್, ಮಾರ್ಥ ನುಸುಬೌಮ್, ಜೊಸೆಫ್ ಸ್ಟಿಗ್‌ಲಿಟ್ಜ್ ಮುಂತಾದವರು ತಮ್ಮ ಕೃತಿಗಳಲ್ಲಿ ಈ ಭಿನ್ನತೆಗಳ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದಾರೆ.

ಮೊಟ್ಟಮೊದಲನೆಯದಾಗಿ, ವರಮಾನ ವರ್ಧನಾ ಬೆಳವಣಿಗೆ ಸಿದ್ಧಾಂತದಲ್ಲಿ ಜನರ ಬದುಕನ್ನು ಉತ್ತಮಪಡಿಸುವ ದಿಶೆಯಲ್ಲಿ ಕ್ರಿಯಾಶೀಲವಾಗಿರುವ ಒಂದೇ ಒಂದು ಸಂಗತಿಯಾದ ವರಮಾನದ ಬಗ್ಗೆ ಮಾತನಾಡಲಾಗುತ್ತದೆ. ಆದರೆ ಮೆಹಬೂಬ್ ಉಲ್ ಹಕ್ ಹೇಳುವಂತೆ ಬದುಕನ್ನು ಉತ್ತಮಪಡಿಸಿಕೊಳ್ಳುವ ಅನೇಕ ಸಂಗತಿಗಳಲ್ಲಿ ವರಮಾನವು ಒಂದು. ಅದು ಬಹುಮುಖ್ಯವಾದ ಸಂಗತಿಯಾಗಿದೆ. ಆದರೆ ‘ವರಮಾನವೇ ಜನರ ಬದುಕಿನ ಮೊತ್ತವಲ್ಲ’.

ಧಾರಣಾ ಸಾಮರ್ಥ್ಯ ವರ್ಧನಾ ಅಭಿವೃದ್ಧಿ ಸಿದ್ಧಾಂತದಲ್ಲಿ ವರಮಾನದ ಜೊತೆಯಲ್ಲಿ ಜನರ ಬದುಕನ್ನು ಉತ್ತಮ ಪಡಿಸುವ ಇತರೆ ಅನೇಕ ಸಂಗತಿಗಳ ಬಗ್ಗೆಯೂ ಗಮನ ನೀಡಲಾಗಿದೆ. ಇಲ್ಲಿ ಜನರ ಸಾಕ್ಷರತಾ ಪ್ರಮಾಣ, ಪ್ರಾಥಮಿಕ ಶಿಕ್ಷಣ, ಜನರ ಆರೋಗ್ಯ, ಆಹಾರ ಭದ್ರತೆ, ಲಿಂಗ ಸಮಾನತೆ, ಮಾನವ ಹಕ್ಕುಗಳು, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಸರೀಕರ ಮುಂದೆ ಸಮಾನವಾಗಿ ಗೌರವದಿಂದ ನಿಂತು ಚರ್ಚೆ ಮಾಡುವುದು ಮುಂತಾದ ಸಂಗತಿಗಳನ್ನು ಅಭಿವೃದ್ಧಿಯು ಒಳಗೊಳ್ಳುತ್ತದೆ. ವರಮಾನವು ತನ್ನಷ್ಟಕ್ಕೆ ತಾನೆ ಜನರ ಅಕ್ಷರವಾಗಿ, ಆರೋಗ್ಯವಾಗಿ, ಲಿಂಗ ಸಮಾನತೆಯಾಗಿ, ಆಹಾರ ಭದ್ರತೆಯಾಗಿ, ಮಾನವ ಹಕ್ಕುಗಳಾಗಿ ಪರಿವರ್ತನೆಯಾಗುವುದಿಲ್ಲ. ವರಮಾನವು ತನ್ನಷ್ಟಕ್ಕೆ ತಾನು ಜನರು ಬದುಕನ್ನು ಉತ್ತಮಪಡಿಸಲು ಸಾಧ್ಯವಿಲ್ಲ.

ಸಾಂಪ್ರದಾಯಿಕ ವರಮಾನ ವರ್ಧನಾ ಬೆಳವಣಿಗೆ ಸಿದ್ಧಾಂತದಲ್ಲಿ ವರ್ಧನೆಯಾದ ವರಮಾನವು ಜನರಲ್ಲಿ ಸಮಾನವಾಗಿ ವಿತರಣೆಯಾಗಬೇಕೆಂದು ಹೇಳಲಾಗುತ್ತದೆ. ಆದರೆ ಅಭಿವೃದ್ಧಿಯೆಂಬುದು ವಿತರಣೆಗೆ ಸಂಬಂಧಿಸಿದ ಸಂಗತಿಯಲ್ಲ. ವರಮಾನದ ಸಮಾನ ವಿತರಣೆಯಾಗಬೇಕು. ಆದರೆ ಅದನ್ನು ಅಭಿವೃದ್ಧಿಯೆಂದು ಹೇಳಲು ಸಾಧ್ಯವಿಲ್ಲ. ವರಮಾನದಲ್ಲಿನ ವರ್ಧನೆ, ವರ್ಧನೆಯಾದ ವರಮಾನದ ಸಮಾನ ವಿತರಣೆ ಬಹಳ ಮುಖ್ಯ. ಅದಕ್ಕಿಂತ ಅಮರ್ತ್ಯಸೆನ್ ಪ್ರಕಾರ ವರ್ಧನೆಯಾದ ವರಮಾನವು ಜನರ ಬದುಕಾಗಿ ಪರಿವರ್ತನೆಯಾಗುವುದು ಮುಖ್ಯ. ಆಗ ಮಾತ್ರ ಅದು ಜನರನ್ನು ಒಳಗೊಳ್ಳುವ ಅಭಿವೃದ್ಧಿಯಾಗುತ್ತದೆ. ವರ್ಧನೆಯಾದ ವರಮಾನವು ಜನರ ಅಕ್ಷರವಾಗಿ, ಜನರ ಆರೋಗ್ಯವಾಗಿ, ಲಿಂಗ ಸಮಾನತೆಯಾಗಿ, ಆಹಾರ ಭದ್ರತೆಯಾಗಿ, ಮಾನವ ಹಕ್ಕುಗಳಾಗಿ, ಸಾಮಾಜಿಕ ನ್ಯಾಯವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯು ಇಲ್ಲಿ ಮುಖ್ಯ. ಈ ದಿಶೆಯಲ್ಲಿ ಜೊಸೆಫ್ ಸ್ಟಿಗ್‌ಲಿಡ್ಜ್ ಅಭಿವೃದ್ಧಿಯನ್ನು ಪರಿಭಾವಿಸಿಕೊಂಡಿರುವ ಕ್ರಮವು ಅನುಕರಣೀಯವಾಗಿದೆ. ಅವನ ಪ್ರಕಾರ ‘ಅಭಿವೃದ್ಧಿಯೆಂಬುದು ಸಮಾಜದಲ್ಲಿ ನಡೆಯುವ ಪರಿವರ್ತನಾ ಪ್ರಕ್ರಿಯೆಗೆ ಸಂಬಂಧಿಸಿದ ಸಂಗತಿಯಾಗಿದೆ. ಅದು ಬಡವರ ಬದುಕನ್ನು ಉತ್ತಮಪಡಿಸುವ ಪ್ರಕ್ರಿಯೆಗೆ ಸಂಬಂಧಿಸಿದ ಸಂಗತಿಯಾಗಿದೆ. ಅದು ಜನರು ಆರೋಗ್ಯ ಸೇವೆಯನ್ನು, ಶಿಕ್ಷಣವನ್ನು ಪಡೆಯುವ ಮತ್ತು ಅವುಗಳನ್ನು ಪಡೆಯುವಲ್ಲಿ ಯಶಸ್ವಿಯಾಗುವ ಪ್ರಕ್ರಿಯೆಗೆ ಸಂಬಂಧಿಸಿದ ಸಂಗತಿಯಾಗಿದೆ’ (2000) .

ಅಮರ್ತ್ಯಸೆನ್ ಪ್ರಕಾರ ಅಭಿವೃದ್ಧಿಯಲ್ಲಿ ವರಮಾನದ ವರ್ಧನೆ ಮತ್ತು ವರ್ಧನೆಯಾದ ವರಮಾನದ ಸಮಾನ ವಿತರಣೆ ಮುಖ್ಯ. ಅದಕ್ಕಿಂತ ವರ್ಧನೆಯಾದ ವರಮಾನವನ್ನು ತಮ್ಮ ಬದುಕನ್ನಾಗಿ ಪರಿವರ್ತಿಸಿಕೊಳ್ಳುವ ಜನರ ಸಾಮರ್ಥ್ಯ ಹೆಚ್ಚು ಮುಖ್ಯವಾಗಿದೆ. ಇದನ್ನೇ ಸೆನ್ ‘ಧಾರಣಾ ಸಾಮರ್ಥ್ಯ’ವೆಂದು ಕರೆದಿದ್ದಾನೆ. ಬದುಕನ್ನು ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಸಾಕ್ಷರತೆ, ಆರೋಗ್ಯ, ಲಿಂಗ ಸಮಾನತೆ, ಮಾನವ ಹಕ್ಕುಗಳು, ಸಾಮಾಜಿಕ ಗೌರವಗಳನ್ನು ಧಾರಣೆ ಮಾಡಿಕೊಳ್ಳುವ ಜನರ ಸಾಮರ್ಥ್ಯವನ್ನು, ಜನರ ಸ್ವಾತಂತ್ರ್ಯವನ್ನು ಸೆನ್ ‘ಧಾರಣಾ ಸಾಮರ್ಥ್ಯ’ವೆನ್ನುತ್ತಾರೆ. ಅವನು ತನ್ನ ‘ಸ್ವಾತಂತ್ರ್ಯವಾಗಿ ಅಭಿವೃದ್ಧಿ’ ಕೃತಿಯಲ್ಲಿ ಅಭಿವೃದ್ಧಿಯನ್ನು ಹೀಗೆ ನಿರ್ವಚಿಸಿದ್ದಾನೆ. ‘ಅಭಿವೃದ್ಧಿಯೆನ್ನುವುದು ಜನರು ಅನುಭವಿಸುತ್ತಿರುವ ಅನೇಕ ಬಗೆಯ ಅಸ್ವಾತಂತ್ರ್ಯಗಳನ್ನು ನಿರ್ಮೂಲನೆ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದೆ. ಏಕೆಂದರೆ ಅವು ಜನರ ಬದುಕನ್ನು ಉತ್ತಮಪಡಿಸಿಕೊಳ್ಳಲು ಲಭ್ಯವಿರುವ ಅವಕಾಶಗಳನ್ನು, ವಿಕಲ್ಪಗಳನ್ನು ಧಾರಣೆ ಮಾಡಿಕೊಳ್ಳಲು ಅಗತ್ಯವಾದ ಕರ್ತೃತ್ವಶಕ್ತಿಯನ್ನು ಸಿಮೀತಗೊಳಿಸುತ್ತವೆ’. ಅಭಿವೃದ್ಧಿಯನ್ನು ಒಟ್ಟು ಆಂತರಿಕ ಉತ್ಪನ್ನದ ಏರಿಕೆಗೆ, ಅಥವಾ ತಲಾ ವರಮಾನದಲ್ಲಿನ ಏರಿಕೆಗೆ, ಅಥವಾ ಕೈಗಾರಿಕೀಕರಣಕ್ಕೆ, ಅಥವಾ ತಾಂತ್ರಿಕ ಜ್ಞಾನಕ್ಕೆ ಸಂಬಂಧಿಸಿದ ಬೆಳವಣಿಗೆಗೆ ಅಥವಾ ಆಧುನೀಕರಣಕ್ಕೆ ಸಂವಾದಿ ಮಾಡುವುದನ್ನು ಅಮರ್ತ್ಯಸೆನ್ ‘ಸೀಮಿತ’ ವ್ಯಾಪ್ತಿಯ ವಿವರಣೆಯೆಂದು ಟೀಕಿಸುತ್ತಾನೆ. ಏಕೆಂದರೆ ಅವನ ಪ್ರಕಾರ ಅವೆಲ್ಲವೂ ಅಭಿವೃದ್ಧಿಗೆ ಅಗತ್ಯ. ಆದರೆ ಅವು ಅಭಿವೃದ್ಧಿಯ ಸಾಧನೆಗಳು ಮಾತ್ರ ಅವುಗಳಲ್ಲಿನ ಏರಿಕೆಯೇ ಅಭಿವೃದ್ಧಿಯಲ್ಲ. ಈಗಾಗಲೇ ಹೇಳಿರುವಂತೆ ಅಭಿವೃದ್ಧಿಗೆ ಅಗತ್ಯವಾಗಿ ಬೇಕಾಗಿರುವುದೇನೆಂದರೆ ಸಮಾಜದಲ್ಲಿ ಜನರ ಕರ್ತೃತ್ವಶಕ್ತಿಯನ್ನು ಸೀಮಿತಗೊಳಿಸುವ ಅನೇಕ ಬಗೆಯ ಅಸ್ವಾತಂತ್ರ್ಯಗಳ ನಿರ್ಮೂಲನೆ. ಅಂತಹ ಅಸ್ವಾತಂತ್ರ್ಯಗಳಾವುವೆಂದರೆ ಬಡತನ, ಶೋಷಣೆ, ಸೀಮಿತ ಆರ್ಥಿಕ ಅವಕಾಶಗಳು, ಸಾಮಾಜಿಕ ದುಸ್ಥಿತಿ, ಸಾರ್ವಜನಿಕ ಸೌಲಭ್ಯಗಳ ನಿರ್ಲಕ್ಷ್ಯ, ಅಸಹನೆ ಮತ್ತು ದಮನಕಾರಿ ಸರ್ಕಾರ ಮುಂತಾದವು. ಅಂದರೆ ಬಡತನದಿಂದ ತಮ್ಮನ್ನು ತಾವು ಬಿಡುಗಡೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಜನರು ಪಡೆದಿದ್ದಾರೆಯೇ? ಜನರು ಅನಕ್ಷರತೆಯೆಂಬ ಅಸ್ವಾತಂತ್ರ್ಯದಿಂದ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳಲು ಸಮರ್ಥರಾಗಿದ್ದಾರೆಯೇ? ಅಪೌಷ್ಟಿಕತೆಯೆಂಬ ಅಸ್ವಾತಂತ್ರ್ಯದಿಂದ ಬಿಡುಗಡೆ ಮಾಡಿಕೊಳ್ಳುವ ಶಕ್ತಿಯನ್ನು ಅವರು ಪಡೆದಿದ್ದಾರೆಯೇ? ಶುದ್ಧ ಕುಡಿಯುವ ನೀರನ್ನು ಪಡೆಯುವ ಸ್ವಾತಂತ್ರ್ಯವನ್ನು ಜನರು ಪಡೆದಿದ್ದಾರೆಯೇ? – ಇಂತಹ ಪ್ರಶ್ನೆಗಳನ್ನು ಅಮರ್ತ್ಯಸೆನ್ ಅಭಿವೃದ್ಧಿಯ ನಿರ್ವಚನಕ್ಕೆ ಸಂಬಂಧಿಸಿದಂತೆ ಕೇಳಿಕೊಳ್ಳುತ್ತಾನೆ. ಅಭಿವೃದ್ಧಿಯ ದೃಷ್ಟಿಯಿಂದ ಸ್ವಾತಂತ್ರ್ಯವು ಎರಡು ಕಾರಣಕ್ಕೆ ಮುಖ್ಯವಾಗುತ್ತದೆ. ಎಂಬುದು ಸೆನ್‌ನ ಅಭಿಪ್ರಾಯವಾಗಿದೆ. ಮೊದಲನೆಯದಾಗಿ ಅಭಿವೃದ್ಧಿಯ ಮೂಲ ಮೌಲ್ಯಮಾಪನವೆಂದರೆ ಅಲ್ಲಿ ಜನರ ಸ್ವಾತಂತ್ರ್ಯದ ವ್ಯಾಪ್ತಿಯು ವಿಸ್ತೃತಗೊಂಡಿದೆಯೇ ಅಥವಾ ಇಲ್ಲವೇ ಎಂಬುದಾಗಿದೆ. ಅಂದರೆ ಸ್ವಾತಂತ್ರ್ಯವೇ ಅಭಿವೃದ್ಧಿಯ ಮೌಲ್ಯಮಾಪನದ ಸಾಧನ. ಎರಡನೆಯದಾಗಿ ಜನರು ತಮ್ಮ ಕರ್ತೃತ್ವಶಕ್ತಿಯನ್ನು ಎಷ್ಟರಮಟ್ಟಿಗೆ ಉಪಯೋಗಿಸಲು ಸ್ವತಂತ್ರರಾಗಿದ್ದಾರೆ ಎಂಬುದರ ಮೇಲೆ ಅಭಿವೃದ್ಧಿಯು ನಿಂತಿದೆ.

[1] ಇದೊಂದು ಬಸವಣ್ಣನ ಕುತೂಹಲಕಾರಿ ವಚನವಾಗಿದೆ. ಅವನು ಈ ವಚನದಲ್ಲಿ ‘ಒಳಗಣದವರು’ (included) ಮತ್ತು ‘ಹೊರಗಣದವರು ‘ (excluded) ಎಂಬ ನುಡಿಗಳನ್ನು ಬಳಸಿದ್ದಾನೆ. ಕೆಲವರು ಒಳಗಡೆ ಇದ್ದಾರೆ. ಅವರು ಒಳಗಣದವರು. ಆದರೆ ತಾನು ಮಾತ್ರ ಹೊರಗಡೆ ಇದ್ದಾನೆ. ಅಂದರೆ ಅವನು ಹೊರಗಣದವನಾಗಿದ್ದಾನೆ. ಜನರನ್ನು ಒಳಗೊಳ್ಳುವುದು ಮತ್ತು ಜನರನ್ನು ಹೊರಗಿಡುವುದು ಎಂಬ ಪರಿಭಾವನೆಗಳನ್ನು ವಚನಕಾರರು ಇಂದು ನಾವು ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಬಳಸಿತ್ತಿರುವ ಅರ್ಥದಲ್ಲಿ ಬಳಸಿರಲಿಕ್ಕಿಲ್ಲ. ಆದರೆ ಈ ವಚನದಲ್ಲಿ ಬಸವಣ್ಣನು ಪ್ರಜ್ಞಾಪೂರ್ವಕವಾಗಿ ಸಮಾಜದಲ್ಲಿ ಒಳಗೊಳ್ಳುವ ಜನವರ್ಗವಿದ್ದಂತೆ ಹೊರಗಿರುವ ಜನವರ್ಗವೂ ಇರುತ್ತದೆ ಎಂಬುದನ್ನು ತೋರಿಸುತ್ತಿದ್ದಾನೆ. ಹೊರಗಣದವರನ್ನು ಒಳಗಣದವರನ್ನಾಗಿ ಮಾಡುವುದು ಹೇಗೆ ಎಂಬುದು ಇಲ್ಲಿ ಪ್ರಶ್ನೆ. ಬಸವಣ್ಣ ಅಂತಹ ಪ್ರಶ್ನೆಯನ್ನು ಹಾಕಿಕೊಳ್ಳುತ್ತಿದ್ದಾನೆ. (ಈ ವಚನದ ಬಗೆಗಿನ ವಿವಾದವನ್ನು ಬಿಟ್ಟು ಇಲ್ಲಿ ಕೇವಲ ವಚನವನ್ನಾಗಿ ಪರಿಶೀಲಿಸಬೇಕೆಂದು ಕೇಳಿಕೊಳ್ಳುತ್ತೇನೆ) . ಬೋಂತಾದೇವಿಯೆಂಬ ವಚನಕಾರ್ತಿಯು ತನ್ನ ವಚನವೊಂದರಲ್ಲಿ ‘ಒಳಗಣ’ ಮತ್ತು ‘ಹೊರಗಣ’ ಎಂಬ ನುಡಿಗಳನ್ನು ಬಳಸಿದ್ದಾರೆ. (ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೇ)

[2] ಚಾರಿತ್ರಿಕವಾಗಿ ಮತ್ತು ಭೂಗೋಳಿಕವಾಗಿ ನಾವು ಇಂದು ಹೈದರಾಬಾದ್ – ಕರ್ನಾಟಕ ಪ್ರದೇಶವೆಂದು ಯಾವುದನ್ನು ಕರೆಯುತ್ತಿದ್ದೇವೆಯೋ ಅದು ಕೇವಲ ಬೀದರ, ಗುಲಬರ್ಗಾ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳನ್ನು ಒಳಗೊಳ್ಳುತ್ತದೆ. ತುಂಗಭದ್ರಾ ನದಿಯಿಂದ ಉತ್ತರದ ಭಾಗವನ್ನು ಮಾತ್ರ ಅದು ಒಳಗೊಳ್ಳುತ್ತದೆ. ಈ ನದಿಯೇ ವಿಭಜನಾ ರೇಖೆಯಾಗಿದೆ. ಕರ್ನಾಟಕದ ಏಕೀಕರಣದ ನಂತರ ಆಡಳಿತದ ಅನುಕೂಲಕ್ಕಾಗಿ ಬಳ್ಳಾರಿ ಜಿ‌ಲ್ಲೆಯನ್ನು ಸೇರಿಸಿಕೊಂಡು ಗುಲಬರ್ಗಾ ವಿಭಾಗವನ್ನು ರಚಿಸಲಾಯಿತು. ಪ್ರಸ್ತುತ ಪ್ರಬಂಧದಲ್ಲಿ ಹೈದರಾಬಾದ್ – ಕರ್ನಾಟಕ ಪ್ರದೇಶವನ್ನು ಬಳ್ಳಾರಿ ಜಿಲ್ಲೆಯನ್ನು ಸೇರಿಸಿಕೊಂಡು ಐದು ಜಿಲ್ಲೆಗಳ ಒಂದು ವಿಭಾಗ – ಪ್ರದೇಶವನ್ನಾಗಿ ಪರಿಭಾವಿಸಿಕೊಂಡು ಚರ್ಚೆಯನ್ನು ಮಾಡಲಾಗಿದೆ. ಬಳ್ಳಾರಿಯನ್ನು ಹೈ.ಕ.ಪ್ರ.ದ ಭಾಗವನ್ನಾಗಿ ಮಾಡುವುದರಿಂದ ಈ ಪ್ರದೇಶಕ್ಕೆ ನ್ಯಾಯ ದೊರೆಯಲಿಕ್ಕಿಲ್ಲ. ಏಕೆಂದರೆ ಬಳ್ಳಾರಿಯು ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿದೆ. ಇದರ ಬಗ್ಗೆ ನಾವು ಎಚ್ಚರದಿಂದಿರಬೇಕು. ಉದಾಹರಣೆಗೆ ಅದರ 2007 – 08ರಲ್ಲಿ ಸಾಲಿನಲ್ಲಿ ತಲಾ ವರಮಾನ ರೂ.50000 ಮೀರಿದೆ.

[3] ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭೌತಿಕ ಬಂಡವಾಳದಂತೆ ಮಾನವ ಬಂಡವಾಳದ ಬಗ್ಗೆಯೂ ಮಾತನಾಡಲಾಗುತ್ತದೆ. ಜನರ ಶಿಕ್ಷಣ, ಕುಶಲತೆ, ತಾಂತ್ರಿಕ ಜ್ಞಾನ, ಬೌದ್ಧಿಕ, ಸಾಮರ್ಥ್ಯ ಮುಂತಾದ ಸಂಗತಿಗಳನ್ನು ಮಾನವ ಬಂಡವಾಳವೆಂದು ಕರೆಯಲಾಗಿದೆ. ಅಮರ್ತ್ಯಸೆನ್ ಪ್ರಕಾರ ಮಾನವ ಬಂಡವಾಳವೆನ್ನುವುದು ಅಭಿವೃದ್ಧಿಯ ಸಾಧನವೇ ವಿನಾ ಅದರ ವರ್ಧನೆಯೇ ಅಭಿವೃದ್ಧಿಯಲ್ಲ. ಜನರನ್ನು ಒಳಗೊಳ್ಳುವ ಅಭಿವೃದ್ಧಿಯ ಬಗ್ಗೆ ಮಾತನಾಡಿದಾಗ ಅಲ್ಲಿ ನಾವು ಭೌತಿಕ ಬಂಡವಾಳದ ಬಗ್ಗೆಯಾಗಲಿ ಅಥವಾ ಮಾವನ ಬಂಡವಾಳದ ಬಗ್ಗೆಯಾಗಲಿ ಮಾತನಾಡುತ್ತಿಲ್ಲ. ಮಾನವ ಬಂಡವಾಳವು ಅಭಿವೃದ್ಧಿಗೆ ಅವಶ್ಯಕ. ಆದರೆ ಅದು ಕೇವಲ ಅಭಿವೃದ್ಧಿಯ ಸಾಧನವೇ ವಿನಾ ಅದೇ ಅಭಿವೃದ್ಧಿಯಲ್ಲ. ಮಾನವ ಬಂಡವಾಳವು ಅಭಿವೃದ್ಧಿಗೆ ನೀಡುವ ಕಾಣಿಕೆ ಕುರಿತಂತೆ ಅನೇಕ ಅಧ್ಯಯನಗಳು ನಡೆದಿವೆ.