ಪರಿಶಿಷ್ಟ ದುಡಿಮೆಗಾರರು ಮತ್ತು ಅಸಮಾನತೆ

ಈಗಾಗಲೆ ನೋಡಿರುವಂತೆ ಹೈ.ಕ.ಪ್ರ.ದಲ್ಲಿ ಒಟ್ಟು ದುಡಿಮೆಗಾರರಲ್ಲಿ ಭೂರಹಿತ ದಿನಗೂಲಿ ದುಡಿಮೆಗಾರರ ಪ್ರಮಾಣವು (ಶೇ. 39.76) ರಾಜ್ಯಮಟ್ಟದಲ್ಲಿರುವುದಕ್ಕಿಂತ (ಶೇ. 26.45) ಅಧಿಕವಾಗಿದೆ. ಇದನ್ನು ಪರಿಶಿಷ್ಟರಿಗೆ (ಪ.ಜಾ+ಪ.ಪಂ) ಸಂಬಂಧಿಸಿದಂತೆ ಪರಿಶೀಲಿಸಿದರೆ ನಮಗೆ ಇನ್ನೂ ವಿಷಾದನೀಯವಾದ ಚಿತ್ರ ಎದುರಾಗುತ್ತದೆ. ರಾಜ್ಯಮಟ್ಟದಲ್ಲಿನ ಒಟ್ಟು ದುಡಮೆಗಾರರಲ್ಲಿ ಪರಿಶಿಷ್ಟರ ಪ್ರಮಾಣ ಶೇ 16.85 ರಷ್ಟಾದರೆ ಹೈ.ಕ.ಪ್ರ.ದಲ್ಲಿ ಅವರ ಪ್ರಮಾಣ ಶೇ 34.15. ಅದೇ ರೀತಿ ರಾಜ್ಯಮಟ್ಟದಲ್ಲಿ ಒಟ್ಟು ದಿನಗೂಲಿಗಳಲ್ಲಿ ಪರಿಶಿಷ್ಟ ದಿನಗೂಲಿಗಳ ಪ್ರಮಾಣ ಶೇ39.73 ರಷ್ಟಾದರೆ ಹೈ.ಕ.ಪ್ರ.ದಲ್ಲಿ ಅದು ಶೇ 44.65ರಷ್ಟಿದೆ. ಇಲ್ಲಿ ಮಹಿಳೆಯರ ಪ್ರಮಾಣವು ಅತ್ಯಧಿಕವಾಗಿದೆ. ದುಸ್ಥಿತಿ, ಅಭದ್ರತೆ, ಅಸಮಾನತೆ, ಅನಕ್ಷರತೆ, ಅನಾರೋಗ್ಯ ಮತ್ತು ಅಸಮಾನತೆಗಳ ದುಷ್ಪರಿಣಾಮಗಳು ಮೊದಲನೆಯದಾಗಿ ಪರಿಶಿಷ್ಟರ ಮೇಲೆ ಅಧಿಕವಾಗಿದೆ. ಅದರಲ್ಲಿ ಇದು ಪರಿಶಿಷ್ಟ ಮಹಿಳೆಯರಲ್ಲಿ ಮಡುಗಟ್ಟಿಕೊಂಡಿದೆ. ಅಭಿವೃದ್ಧಿಯು ಪರಿಶಿಷ್ಟರನ್ನು ‘ಹೊರಗಣ’ದವರನ್ನಾಗಿ ಕಾಣುತ್ತಿದೆ.

ಜನರನ್ನು ಅಭಿವೃದ್ಧಿಯು ಎಷ್ಟರಮಟ್ಟಿಗೆ ಒಳಗೊಳ್ಳುತ್ತಿದೆಯೆಂಬುದನ್ನು ಸಾಮಾಜಿಕವಾಗಿ ಪರಿಶೀಲಿಸಿದಾಗ ನಮಗೆ ಅನೇಕ ವಿಕಾರಗಳು ಗೋಚರಿಸುತ್ತವೆ. ಬಹಳ ಮುಖ್ಯವಾಗಿ ಅದು ಪರಿಶಿಷ್ಟರನ್ನು ಎಷ್ಟು ಪ್ರಮಾಣದಲ್ಲಿ ಒಳಗೊಳ್ಳಬೇಕೋ ಅಷ್ಟು ಪ್ರಮಾಣದಲ್ಲಿ ಒಳಗೊಳ್ಳುತ್ತಿಲ್ಲ. ಇದು ಹೈದರಾಬಾದ್ ಕರ್ನಾಟಕಕ್ಕೆ ಎಷ್ಟರ ಮಟ್ಟಿಗೆ ನಿಜವೋ ಕರ್ನಾಟಕ ರಾಜ್ಯಕ್ಕೂ ಅದೇ ರೀತಿಯಲ್ಲಿ ಅನ್ವಯವಾಗುತ್ತದೆ. ಈ ವೈರುಧ್ಯಗಳು ತಮ್ಮಷ್ಟಕ್ಕೆ ತಾವು ಬಗೆಹರಿದು ಬಿಡುವುದಿಲ್ಲ. ಅದನ್ನು ಸರಿಪಡಿಸಲು ಪ್ರಜ್ಞಾಪೂರ್ವಕ ಪ್ರಯತ್ನ ನಡೆಯಬೇಕಾಗುತ್ತದೆ. ನಮ್ಮ ರಾಜ್ಯದಲ್ಲಿ ಹೈ.ಕ.ಪ್ರ.ವು ತೀವ್ರ ಸ್ವರೂಪದ ಪ್ರಾದೇಶಿಕ ಅಸಮಾನತೆಯಿಂದ ನರಳುತ್ತಿದೆ. ಹಾಗೂ ಅಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವುದಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿವೆ. ಈ ವಿಷಯದಲ್ಲಿ ಮಹಿಳೆಯರು ಹೆಚ್ಚಿನ ದುಸ್ಥಿತಿ ಅನುಭವಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಊಳಿಗಮಾನ್ಯ ಪದ್ದತಿಯ ಪಳೆಯುಳಿಕೆಗಳು ಇನ್ನೂ ಗಾಢವಾಗಿ ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ನಾವು ಈ ಪ್ರದೇಶದಲ್ಲಿನ ಅಭಿವೃದ್ಧಿಯ ಜನರನ್ನು ಒಳಗೊಳ್ಳುವ ನೆಲೆಗಳನ್ನು ಗುರುತಿಸಬೇಕು.

  1. ಬ್ಯಾಂಕಿಂಗ್ ಮತ್ತು ಜೀವವಿಮಾ ಸೇವಾ ವಲಯವು ಜನರನ್ನು ಒಳಗೊಳ್ಳುತ್ತಿರುವ ಪರಿ : ಅದರ ಪ್ರಾದೇಶಿಕ ಸ್ವರೂಪ.

ಕೆಳಗೆ ನೀಡಿರುವ ಕೋಷ್ಟಕಗಳಲ್ಲಿ (6, 7 ಮತ್ತು 8) ಬ್ಯಾಂಕಿಂಗ್ ವಲಯವು ಕರ್ನಾಟಕದ ವಿವಿಧ ಪ್ರದೇಶ/ವಿಭಾಗಗಳಲ್ಲಿ ಜನರನ್ನು ಹೇಗೆ ಒಳಗೊಂಡಿದೆ ಮತ್ತು ಅದರಲ್ಲಿ ಪ್ರಾದೇಶಿಕ ಅಸಮಾನತೆಯು ಯಾವ ಸ್ವರೂಪದಲ್ಲಿದೆ ಎಂಬುದನ್ನು ತೋರಿಸಲಾಗಿದೆ. ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ದಕ್ಷಣ ಕರ್ನಾಟಕ ಪ್ರದೇಶವು ಸೌಲಭ್ಯಗಳನ್ನೆಲ್ಲ ಒಂದು ರೀತಿಯಲ್ಲಿ ಮನಾಪಲಿ ಮಾಡಿಕೊಂಡಿರುವಂತೆ ತೋರುತ್ತದೆ. ಉದಾಹರಣೆಗೆ ಪ್ರತಿ ಲಕ್ಷ ಜನಸಂಖ್ಯೆಗೆ ಗುಲಬರ್ಗಾ ವಿಭಾಗದಲ್ಲಿ ಠೇವಣಿಯ ಮೊತ್ತ ರೂ.78.01 ಕೋಟಿಯಾದರೆ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಅದು ರೂ. 452.45 ಕೋಟಿಯಷ್ಟಿದೆ.

ಕೋಷ್ಟಕ – 6 : ಬ್ಯಾಂಕಿಂಗ್ ವ್ಯವಸ್ಥೆಯ ಜನರನ್ನು ಒಳಗೊಳ್ಳುವ ಪ್ರಮಾಣ : ಪ್ರಾದೇಶಿಕ ಸ್ವರೂಪ : ಕರ್ನಾಟಕ 2007

ಪ್ರದೇಶ/ವಿಭಾಗಗಳು ಪ್ರತಿ ಸಾವಿರ .ಕಿ.ಮೀ.ಗೆ ಬ್ಯಾಂಕು ಶಾಖೆಗಳ ಸಂಖ್ಯೆ ಪ್ರತಿ ಲಕ್ಷ ಜನಸಂಖ್ಯೆಗೆ ಬ್ಯಾಂಕು ಶಾಕೆಗಳ ಸಂಖ್ಯೆ ಪ್ರತಿ ಲಕ್ಷ ಜನಸಂಖ್ಯೆಗೆ ಠೇವಣಿ ಪ್ರಮಾಣ (ಕೋಟಿ ರೂಪಾಯಿಗಳಲ್ಲಿ) ಪ್ರತಿ ಲಕ್ಷ ಜನಸಂಖ್ಯೆಗೆ ಸಾಲದ ಪ್ರಮಾಣ (ಕೋಟಿ ರೂಪಾಯಿ ಗಳಲ್ಲಿ)
ದಕ್ಷಿಣ ಕರ್ನಾಟಕ ಪ್ರದೇಶ (ದ.ಕ.ಪ್ರ) 37 11 452.45 341.43
ಉತ್ತರ ಕರ್ನಾಟಕಪ್ರದೇಶ (ಉ.ಕ.ಪ್ರ) 19 8 97.08 87.75
ಗುಲಬರ್ಗಾ ವಿಭಾಗ 15 6 78.01 82.63
ಬೆಳಗಾವಿ ವಿಭಾಗ 22 9 111.35 91.58
ಕರ್ನಾಟಕ ರಾಜ್ಯ 27 9 300.15 232.54

ಟಿಪ್ಪಣಿ: ಈ ಕೋಷ್ಟಕವನ್ನು 2007ರ ಪ್ರಕ್ಷೇಪಿತ ಜನಸಂಖ್ಯೆಯನ್ನು ಆಧರಿಸಿ ಲೆಕ್ಕ ಹಾಕಲಾಗಿದೆ. ಈ ಜನಸಂಖ್ಯೆಯ ವಿವರಗಳು ಕರ್ನಾಟಕ ಸರ್ಕಾರದ ಆರ್ಥಿಕ ಮತ್ತು ಸ್ಯಾಂಖಿಕ ನಿರ್ದೇಶನಾಲಯದ ವರದಿಯಿಂದ ಪಡೆದುಕೊಳ್ಳಲಾಗಿದೆ.

ಮೂಲ: 1 ಕರ್ನಾಟಕ ಸರ್ಕಾರ 2007, ಕರ್ನಾಟಕ ಅಂಕಿ – ಅಂಶ ನೋಟ:20062007 ಆರ್ಥಿಕ ಮತ್ತು ಸ್ಯಾಂಖಿಕ ನಿರ್ದೇಶನಾಲಯ

  1. ಕರ್ನಾಟಕ ಸರ್ಕಾರ 2006 ಕರ್ನಾಟಕ ಮಾನವ ಅಭಿವೃದ್ಧಿ ವರದಿ: 2005. ಯೋಜನಾ ಇಲಾಖೆ.

ಅದೇ ರೀತಿ ಸಾಲಕ್ಕೆ ಸಂಬಂಧಿಸಿದಂತೆ ಅದರ ಮೊತ್ತ ದ.ಕ.ಪ್ರ.ದಲ್ಲಿ ರೂ. 341.13 ಕೋಟಿಯಷ್ಟಿದ್ದರೆ ಗುಲಬರ್ಗಾ ವಿಭಾಗದಲ್ಲಿ ಅದು ರೂ.82.63 ಕೋಟಿಯಷ್ಟಿದೆ. ಅದೇ ರೀತಿಯಲ್ಲಿ ಪ್ರತಿ ಸಾವಿರ ಚದರ ಕಿಲೋ ಮೀಟರ್ ವಿಸ್ತೀರ್ಣಕ್ಕೆ 37 ಬ್ಯಾಂಕುಗಳ ಶಾಖೆಗಳು ದ.ಕ.ಪ್ರ.ದಲ್ಲಿದ್ದರೆ ಗುಲಬರ್ಗಾ ವಿಭಾಗದಲ್ಲಿ ಅದರ ಸಂಖ್ಯೆ ಕೇವಲ 15 (ನೋಡಿ ಕೋಷ್ಟಕ – 6)

ಕೋಷ್ಟಕ – 7ರಲ್ಲಿ ತೋರಿಸಿರುವಂತೆ ದ.ಕ.ಪ್ರ.ವು ರಾಜ್ಯದ ಜನಸಂಖ್ಯೆಯಲ್ಲಿ ಶೇ.57.14ರಷ್ಟು ಪಾಲು ಪಡೆದಿದ್ದರೆ ವಾಣಿಕ್ಯ ಬ್ಯಾಂಕುಗಳ ಶಾಖೆಗಳಲ್ಲಿ ಶೇ.65.19, ಠೇವಣಿಗಳಲ್ಲಿ ಶೇ.86.13 ಮತ್ತು ಸಾಲದಲ್ಲಿ ಶೇ. 83.83ರಷ್ಟು ಪಾಲು ಪಡೆದುಕೊಂಡಿದೆ. ಆದರೆ ರಾಜ್ಯದ ಜನಸಂಖ್ಯೆಯಲ್ಲಿ ಶೇ. 42.86ರಷ್ಟು ಪಾಲು ಪಡೆದಿರುವ ಉ.ಕ.ಪ್ರ.ಮಾತ್ರ ಶಾಖೆಗಳಲ್ಲಿ ಶೇ 34.81, ಠೇವಣಿಗಳಲ್ಲಿ ಶೇ. 13.87 ಮತ್ತು ಸಾಲದಲ್ಲಿ ಶೇ.16.17ರಷ್ಟು ಮಾತ್ರ ಪಾಲು ಪಡೆದುಕೊಂಡಿದೆ. ನಮ್ಮ ರಾಜ್ಯದಲ್ಲಿ ಅತ್ಯಂತ ಮುಕ್ತವಾಗಿ ಬ್ಯಾಂಕಿಂಗ್ ಸೌಲಭ್ಯವು ಜನರನ್ನು ಒಳಗೊಳ್ಳುವ ರೀತಿಯಲ್ಲಿ ಬೆಳೆದಿಲ್ಲ. ಜನಸಂಖ್ಯೆಯಲ್ಲಿ ಶೇ.18.34 ಪಾಲು ಪಡೆದಿರುವ ಹೈ.ಕ.ಪ್ರ.ದ ಐದು ಜಿಲ್ಲೆಗಳು ಬ್ಯಾಂಕುಗಳ ಶಾಖೆಗಳಲ್ಲಿ ಶೇ.12.12, ಠೇವಣಿಯಲ್ಲಿ ಶೇ. 4.77 ಮತ್ತು ಸಾಲದಲ್ಲಿ ಶೇ. 6.51ರಷ್ಟು ಪಾಲು ಪಡೆದಿವೆ. ಇಲ್ಲಿ ಪ್ರಾದೇಶಿಕ ಅಸಮಾನತೆಯೆಂಬುದು ಡಾಳಾಗಿ ಗೋಚರಿಸುತ್ತದೆ.

ಕೊಷ್ಟಕ – 8 ಅನೇಕ ರೀತಿಯಲ್ಲಿ ಮಹತ್ವವಾದುದಾಗಿದೆ. ಅದು ಕರ್ನಾಟಕದ ವಿವಿಧ ಭಾಗಗಳು ತಮ್ಮ ಪ್ರದೇಶದ ವರಮಾನಕ್ಕೆ ಬ್ಯಾಂಕಿಂಗ್ ಮತ್ತು ವಿಮಾ ಸೇವಾ ವಲಯವು ಎಷ್ಟು ಕಾಣಿಕೆ ನೀಡು‌ತ್ತಿದೆ ಎಂಬುದನ್ನು ಇದರಲ್ಲಿ ತೋರಿಸಲಾಗಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಬ್ಯಾಂಕಿಂಗ್ ಮತ್ತು ವಿಮಾ ಸೇವಾ ವಲಯದ ಕಾಣಿಕೆ ಶೇ. 7.38ರಷ್ಟಿದ್ದರೆ ದ.ಕ.ಪ್ರದಲ್ಲಿ ಅದು ಶೇ. 8.32ರಷ್ಟಿದೆ. ಆದರೆ ಗುಲಬರ್ಗಾ ವಿಭಾಗದಲ್ಲಿ ಅದರ ಕಾಣಿಕೆ ಕೇವಲ ಶೇ. 4.21. ಹೀಗೆ ಬ್ಯಾಂಕಿಂಗ್ ಮತ್ತು ವಿಮಾ ಸೇವಾ ವಲಯವನ್ನು ಸರ್ಕಾರವು ಗುಲಬರ್ಗಾ ವಿಭಾಗಗದಲ್ಲಿ ಹೆಚ್ಚು ಹೆಚ್ಚು ಬೆಳೆಯುವಂತೆ ಮಾಡಬೇಕು. ಬ್ಯಾಂಕಿಂಗ್ ಅಭ್ಯಾಸ ಜನರಲ್ಲಿ ಉಂಟಾಗುವಂತೆ ಮಾಡಬೇಕಾಗುತ್ತದೆ.

ಕೋಷ್ಟಕ – 7 : ಕರ್ನಾಟಕದಲ್ಲಿ ವಾಣಿಜ್ಯ ಬ್ಯಾಂಕು ಸೇವೆಯ ಪ್ರಾದೇಶಿಕ ವಿತರಣೆ – 2007

ಪ್ರದೇಶ / ವಿಭಾಗಗಳು ಜನಸಂಖ್ಯೆ (ಲಕ್ಷಗಳಲ್ಲಿ) ವಾಣಿಜ್ಯ ಬ್ಯಾಂಕುಗಳ ಶಾಖೆಗಳು ವಾಣಿಜ್ಯ ಬ್ಯಾಂಕುಗಳ ಒಟ್ಟು ಠೇವಣಿ (ರೂಪಾಯಿ ಕೋಟಿಗಳಲ್ಲಿ) ವಾಣಿಜ್ಯ ಬ್ಯಾಂಕುಗಳ ಒಟ್ಟು ಸಾಲ (ರೂಪಾಯಿ ಕೋಟಿಗಳಲ್ಲಿ)
ದಕ್ಷಿಣ ಕರ್ನಾಟಕ ಪ್ರದೇಶ (ದ.ಕ.ಪ್ರ.) 327.26 3367 148069 111639
 (57.14)  (65.19)  (86.13)  (83.83)
ಉತ್ತರ ಕರ್ನಾಟಕ ಪ್ರದೇಶ (ಉ.ಕ.ಪ್ರ.) 245.44 1798 23823 21538
 (42.86)  (34.81)  (13.87)  (16.17)
ಗುಲಬರ್ಗಾ ವಿಭಾಗ 105.01 626 8192 8677
 (18.34)  (12.12)  (4.77)  (6.51)
ಬೆಳಗಾವಿ ವಿಭಾಗ 140.43 1172 15637 12861
 (24.52)  (22.69)  (9.10)  (9.66)
ಕರ್ನಾಟಕ ರಾಜ್ಯ 572.70 5165 171898 133177
 (100.00)  (100.00)  (100.00)  (100.00)

ಟಿಪ್ಪಣಿ: ಆವರಣದಲ್ಲಿನ ಅಂಕಿಗಳು ವಿಭಾಗಗಳು/ಪ್ರದೇಶಗಳ ಶೇಕಡಾ ಪಾಲನ್ನು ತೋರಿಸುತ್ತವೆ.

ಮೂಲ : 1 ಕರ್ನಾಟಕ ಸರ್ಕಾರ 2007, ಕರ್ನಾಟಕ ಅಂಕಿ – ಅಂಶ ನೋಟ : 20062007 ಆರ್ಥಿಕ ಮತ್ತು ಸ್ಯಾಂಖಿಕ ನಿರ್ದೇಶನಾಲಯ

  1. ಕರ್ನಾಟಕ ಸರ್ಕಾರ 2006 ಕರ್ನಾಟಕ ಮಾನವ ಅಭಿವೃದ್ಧಿ ವರದಿ : 2005. ಯೋಜನಾ ಇಲಾಖೆ

ಅದು ರಾಜ್ಯದ ಎಲ್ಲ ಪ್ರದೇಶಗಳೂ ಒಳಗೊಳ್ಳುವಂತೆ, ಎಲ್ಲ ಜನಗರ್ವಗಳೂ ಒಳಗೊಳ್ಳುವಂತೆ ಬೆಳೆಯುವಂತಾಗಬೇಕು. ಬ್ಯಾಕಿಂಗ್ ವಲಯವನ್ನು ಆದ್ಯತೆಯ ಮೇಲೆ ಗುಲಬರ್ಗಾ ವಿಭಾಗದಲ್ಲಿ ಬೆಳೆಸಬೇಕಾಗಿದೆ. ಏಕೆಂದರೆ ಅಲ್ಲಿ ಅಭಿವೃದ್ಧಿಯ ಗತಿಯನ್ನು ತೀವ್ರಗೊಳಿಸಬೇಕಾದರೆ ಜನರಲ್ಲಿನ ಬ್ಯಾಂಕಿಂಗ್ ಸಹಭಾಗಿತ್ವವನ್ನು ಹೆಚ್ಚಿಸ/ಬೇಕಾಗುತ್ತದೆ. ಹಿಂದುಳಿದ ಪ್ರದೇಶದಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆದು ಬಿಟ್ಟರೆ ಸಾಕಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಅಲ್ಲಿ ಜನರಿಗೆ ಬ್ಯಾಂಕುಗಳು ಸುಸ್ಥಿರಗತಿಯಲ್ಲಿ ಹಾಗೂ ಲಾಭದಾಯಕವಾಗಿ ಆರ್ಥಿಕ ಚಟುವಟಿಕೆಗಳನ್ನು ಆರಂಭ ಮಾಡುವುದು ಹೇಗೆ ಮತ್ತು ಅವುಗಳನ್ನು ನಿರ್ವಹಿಸುವುದು ಹೇಗೆ ಎಂಬುದರ ಬಗ್ಗೆ ಜನರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕಾಗುತ್ತದೆ. ಸಾಲ ಕೊಡುವುದು ಬೇರೆ: ಅದನ್ನು ವರಮಾನ ನೀಡುವ ವ್ಯವಹಾರವಾಗಿ ಬಳಸುವುದು ಮತ್ತು ಬೆಳೆಸುವುದು ಬೇರೆ. ಬ್ಯಾಂಕುಗಳು ತಮ್ಮ ಜವಾಬುದಾರಿಯನ್ನು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತಗೊಳಿಸಿಕೊಂಡರೆ ಸಾಕಾಗುವುದಿಲ್ಲ. ಅವು ಸಾಮಾಜಿಕ ಜವಾಬುದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಈಗಾಗಲೇ ಅಭಿವೃದ್ಧಿ ಹೊಂದಿರುವ ಪ್ರದೇಶಗಳಲ್ಲಿ ಬ್ಯಾಂಕುಗಳ ವ್ಯವಹಾರ ಸುಲಭ. ಆದರೆ ಹಿಂದುಳಿದ ಪ್ರದೇಶಗಳಲ್ಲಿ ಅವುಗಳ ನಿರ್ವಹಣೆಯ ಸ್ವರೂಪ ಭಿನ್ನವಾಗಿರಬೇಕಾಗುತ್ತದೆ. ಇಂತಹ ಕಾರ್ಯವನ್ನು ಬ್ಯಾಂಕುಗಳು ತಮ್ಮಷ್ಟಕ್ಕೆ ತಾವು ಮಾಡುವುದು ಅಸಾಧ್ಯ. ಅದಕ್ಕೆ ಹೈ.ಕ.ಪ್ರ.ಅ.ಮಂ. (ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ) ಯಂತಹ ಸಂಸ್ಥೆಗಳು ಮುಂದಾಗಬೇಕಾಗುತ್ತದೆ. ಏರಿಕೆಯಾಗುತ್ತಿರುವ ವರಮಾನವನ್ನು ಜನರ ಬದುಕಾಗಿ ಪರಿವರ್ತಿಸಲು ಅಗತ್ಯವಾದ ಅನೇಕ ಕ್ರಮಗಳಲ್ಲಿ ಮೆಹಬೂಬ್ ಉಲ್ ಹಕ್ ಹೇಳುವ ಬ್ಯಾಂಕುಗಳು ಬಡ ಜನರಿಗೆ ನೆರವು ನೀಡಲು ಹೊಸ ಕಾಲ ಪದ್ಧತಿಯನ್ನು ರೂಪಿಸಬೇಕೆಂದು ಸಲಹೆ ಪ್ರಮುಖವಾದುದಾಗಿದೆ (1995) . ಇಲ್ಲಿ ನಮಗೆ ಬೇಕಾಗಿರುವುದು ಸಾಮಾಜಿಕ ಬ್ಯಾಂಕಿಂಗ್ ಅಲ್ಲ. ಆದರೆ ಹೈ.ಕ.ಪ್ರ.ಅ.ಮಂ.ಯು ತನ್ನ ಕಳೆದ 18ವರ್ಷಗಳ ಅವಧಿಯಲ್ಲಿ ಇಂತಹ ಸಂಗತಿಗಳ ಬಗ್ಗೆ ಕಾಳಜಿ ವಹಿಸಿದ್ದು ಕಂಡು ಬರುವುದಿಲ್ಲ. ಈ ಮಂಡಳಿಯ ಬಗ್ಗೆ ಡಾ. ಡಿ. ಎಂ.ನಂಜುಂಡಪ್ಪ ಸಮಿತಿ ವರದಿಯಲ್ಲಿನ ಟೀಕೆಗಳು ಮಂಡಳಿಯ ನಿರ್ವಹಣೆಗೆ ಸಂಬಂಧಿಸಿದಂತೆ ಶೋಭೆ ತರುವಂತಿಲ್ಲ. ಈ ಮಂಡಳಿಯ ಕಾರ್ಯಕಾರಿ ಸಮಿತಿಯ ಸಭೆಗಳನ್ನು ನಡೆಸುವುದೇ ದುರ್ಲಭವೆಂದರೆ ಅದರ ಬಗ್ಗೆ ಹೆಚ್ಚಿನ ಸಂಗತಿಯನ್ನು ಹೇಳುವ ಅಗತ್ಯವಿಲ್ಲ. ಅದರ ಕಾರ್ಯಕಾರಿ ಮಂಡಳಿಯ ಸಭೆ ನಡೆಸದೇ ಅದರ ಕೆಲಸಕಾರ್ಯ ನಡೆಯುತ್ತಿದೆ. ಅಭಿವೃದ್ಧಿಯು ಜನರನ್ನು ಒಳಗೊಳ್ಳುವ ಸಂಗತಿಗಳು ಯಾವುವು ಇವೆಯೋ ಆ ಸಂಗತಿಗಳ ಬಗ್ಗೆ ಮಂಡಳಿಯು ಗಮನ ಹರಿಸಬೇಕು. ಆದರೆ ಇಲ್ಲಿ ಇಂತಹ ಸಂಗತಿಗಳು ಸಾಧ್ಯವಿಲ್ಲವಾಗಿದೆ. ಈ ಮಂಡಳಿಯು ಹೈ.ಕ.ಪ್ರ.ದ ನಾಯಕ ಸಂಸ್ಥೆಯಾಗಿ ಅದು ಕೆಲಸ ಮಾಡುತ್ತಿಲ್ಲ. ಅದು ಅಭಿವೃದ್ಧಿಯನ್ನು ಪರಿಭಾವಿಸಿಕೊಂಡಿರುವ ಕ್ರಮದಲ್ಲೇ ಸಮಸ್ಯೆಯಿದೆ. ಕಾಮಗಾರಿಗಳೇ ಅಭವೃದ್ಧಿಯೆಂದು ಮಂಡಳಿಯು ತಿಳಿದಿರುವಂತೆ ಕಾಣುತ್ತದೆ.

ಕೋಷ್ಟಕ – 8 : ಕರ್ನಾಟಕದ ವರಮಾನಕ್ಕೆ ಬ್ಯಾಂಕಿಂಗ್ ಮತ್ತು ವಿಮಾ ವಲಯದ ಕೊಡುಗೆ : 20032004

 (ಚಾಲ್ತಿ ಬೆಲೆಗಳು)

ಪ್ರದೇಶ/ವಿಭಾಗಗಳು ಬ್ಯಾಂಕಿಂಗ್ ಮತ್ತು ವಿಮಾ ವಲಯದವರಮಾನ (ರೂಪಾಯಿ ಕೋಟಿಗಳಲ್ಲಿ) ಒಟ್ಟು ಜಿಲ್ಲಾ (ರಾಜ್ಯ) ಆಂತರಿಕ ಉತ್ಪನ್ನ. (ರೂಪಾಯಿ ಕೋಟಿಗಳಲ್ಲಿ) ಒಟ್ಟು ವರಮಾನಕ್ಕೆ ಬ್ಯಾಂಕಿಂಗ್ ಮತ್ತು ವಿಮಾವಲಯದ ಕೊಡುಗೆ. (ಶೇಕಡಾ ಪಾಲು) .
ದಕ್ಷಿಣ ಕರ್ನಾಟಕ ಪ್ರದೇಶ (ದ.ಕ.ಪ್ರ.) 7198.70 86532.21 8.32
 (74.92)  (66.50)
ಉತ್ತರ ಕರ್ನಾಟಕ ಪ್ರದೇಶ (ಉ.ಕ.ಪ್ರ.) 2409.97 43594.40 5.53
 (25.08)  (33.50)
ಗುಲಬರ್ಗಾ ವಿಭಾಗ 804.10 19117.38 4.21
 (8.37)  (14.69)
ಬೆಳಗಾವಿ ವಿಭಾಗ 1605.87 24477.02 6.56
 (16.71)  (18.81)
ಕರ್ನಾಟಕ ರಾಜ್ಯ 9608.67 130126.61 7.38
 (100.00)  (100.00)

ಮೂಲ: ಕರ್ನಾಟಕ ಸರ್ಕಾರ 2004. ರಾಜ್ಯ ಆಂತರಿಕ ಉತ್ಪನ್ನ : ಕರ್ನಾಟಕ 20042004. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು. ಪು:40.

ಟಿಪ್ಪಣಿ: ಆವರಣದಲ್ಲಿ ನೀಡಿರುವ ಅಂಕಿಗಳು ಒಟ್ಟು ಮೊತ್ತದಲ್ಲಿ ವಿವಿಧ ಪ್ರದೇಶಗಳು ಪಡೆದಿರುವ ಶೇಕಡವಾರು ಪ್ರಮಾಣವನ್ನು ತೋರಿಸುತ್ತವೆ.

  1. ಅಭಿವೃದ್ಧಿ ಜನರನ್ನು ಒಳಗೊಳ್ಳುವ/ಒಳಗೊಳ್ಳದಿರುವುದರ ಬಗ್ಗೆ ಇತರೆ ಸೂಚಿಗಳು

ಜನರನ್ನು ಅಭಿವೃದ್ಧಿಯು ಎಷ್ಟರಮಟ್ಟಿಗೆ ಒಳಗೊಳ್ಳುತ್ತಿದೆ ಮತ್ತು ಎಷ್ಟರಮಟ್ಟಿಗೆ ಒಳಗೊಳ್ಳುತ್ತಿಲ್ಲ ಎಂಬುದನ್ನು ಸಾಕ್ಷರತೆ, ಶಿಕ್ಷಣ, ದುಡಿಯುವ ವರ್ಗ, ಪರಿಶಿಷ್ಟರು ಮತ್ತು ಬ್ಯಾಂಕಿಂಗ್ ಮತ್ತು ವಿಮಾ ವಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ಮೇಲಿನ ಭಾಗದಲ್ಲಿ ವಿವರಿಸಲಾಗಿದೆ. ಇವಲ್ಲದೆ ಇದನ್ನು ಬೇರೆ ಸೂಚಿಗಳ ಮೂಲಕವೂ ತೋರಿಸಬಹುದಾಗಿದೆ.

. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಹೈ.ಕ.ಪ್ರ.ದ ಪಾಲು ಎಷ್ಟಿದೆ ಎಂಬುದನ್ನು ಕೋಷ್ಟಕ – 8 ರಲ್ಲಿ ನೋಡಬಹುದು. ಅಲ್ಲಿ 2003 – 04ನೆಯ ಸಾಲಿನ ರಾಜ್ಯದ ವರಮಾನ ರೂ. 130126.61 ಕೋಟಿ. ಇದರಲ್ಲಿ ದ.ಕ.ಪ್ರ. ಪಾಲು ಶೇ 66.50 (ರೂ. 86531.21 ಕೋಟಿ) . ಆದರೆ ರಾಜ್ಯದ ಜನಸಂಖ್ಯೆಯಲ್ಲಿ ಶೇ.18.34 ಪಾಲು ಪಡೆದಿರುವ ಹೈ.ಕ.ಪ್ರ.ದ ಪಾಲು ಮಾತ್ರ ಕೇವಲ ಶೇ. 14.69 (ರೂ.19117.38 ಕೋಟಿ) . ವರಮಾನಕ್ಕೆ ಸಂಬಂಧಿಸಿದಂತೆ ಹೈ.ಕ.ಪ್ರ.ದಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವ ಪ್ರಮಾಣವು ರಾಜ್ಯಮಟ್ಟದಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವ ಪ್ರಮಾಣಕ್ಕಿಂತ ಕೆಳಮಟ್ಟದಲ್ಲಿದೆ (ಇದಕ್ಕೆ ಸಂಬಂಧಿಸಿದ ವಿವರಕ್ಕೆ ಅನುಬಂಧ ಕೊಷ್ಟಕ – 2 ನೋಡಿ) .

. ರಾಜ್ಯಮಟ್ಟದಲ್ಲಿ ಒಟ್ಟು ಮಹಿಳೆಯರ ಸಂಖ್ಯೆಯಲ್ಲಿ (2001) ಕಾಣೆಯಾದ ಮಹಿಳೆಯರ ಸಂಖ್ಯೆ 947274ರಷ್ಟಾದರೆ ಹೈ.ಕ.ಪ್ರ.ದಲ್ಲಿ ಅಲ್ಲಿನ ಮಹಿಳೆಯರ ಸಂಖ್ಯೆಯಲ್ಲಿ (2001) ಕಾಣೆಯಾದ ಮಹಿಳೆಯರ ಸಂಖ್ಯೆ 151068. ರಾಜ್ಯದ ಒಟ್ಟು ಕಾಣೆಯಾದ ಮಹಿಳೆಯರಲ್ಲಿ ಗುಲಬರ್ಗಾ ವಿಭಾಗದ ಪಾಲು ಶೇ.15.95 ಅಭಿವೃದ್ಧಿಯು ರಾಜ್ಯಮಟ್ಟದಲ್ಲಿ ಹಾಗೂ ಹೈ.ಕ.ಪ್ರ. ಮಟ್ಟದಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಒಳಗೊಳ್ಳುವುದಕ್ಕೆ ಪ್ರತಿಯಾಗಿ ಅವರಿಗೆ ಅದು ಅಭಿಶಾಪವಾಗಿ ಪರಿಣಮಿಸುತ್ತಿದೆ. ನಮ್ಮ ರಾಜ್ಯದಲ್ಲಿ 1991ರಲ್ಲಿ 0 – 6 ವಯೋಮಾನದ ಮಕ್ಕಳಲ್ಲಿ ಲಿಂಗ ಅನುಪಾತ 959 ರಷ್ಟಿದ್ದುದ್ದು 2001ರಲ್ಲಿ ಅದು 946ಕ್ಕಿಳಿದಿದೆ. ಹೈ.ಕ.ಪ್ರ.ದಲ್ಲಿ ಅದು 961 ರಿಂದ 946 ಕ್ಕಿಳಿದಿದೆ. ಅಂದರೆ ಹೆಣ್ಣು ಮಕ್ಕಳು ಹುಟ್ಟುವುದೇ ಇಲ್ಲಿ ದುರ್ಲಭವಾಗುತ್ತಿದೆ.

. ಜನರನ್ನು ಒಳಗೊಳ್ಳುವ ಅಭಿವೃದ್ಧಿಯ ಮತ್ತೊಂದು ಸೂಚಿಯೆಂದರೆ ಮಾನವ ಅಭಿವೃದ್ಧಿ ಸೂಚ್ಯಂಕ. ಇದು ಆರೋಗ್ಯ ಸೂಚಿ, ಶೈಕ್ಷಣಿಕ ಸಾಧನಾ ಸೂಚಿ ಮತ್ತು ತಲಾ ವರಮಾನದ ಶೂನ್ಯವಾದರೆ ಗರಿಷ್ಟ ಪ್ರಮಾಣ ಒಂದು. ವಾಸ್ತವ ಸ್ಥಿತಿಯು ಶೂನ್ಯದಿಂದ ಒಂದರ ನಡುವೆಯಿರುತ್ತದೆ. ಮಾನವ ಅಭಿವೃದ್ಧಿ ಸೂಚ್ಯಂಕದ ಮೌಲ್ಯವು ಒಂದಕ್ಕೆ ಹತ್ತಿರವಿದ್ದರೆ ಅಲ್ಲಿ ಅಭಿವೃದ್ಧಿಯು ಹೆಚ್ಚು ಹೆಚ್ಚು ಜನರನ್ನು ಒಳಗೊಳ್ಳುತ್ತಿದೆಯೆಂದು ಮತ್ತು ಅದು ಶೂನ್ಯಕ್ಕೆ ಹತ್ತಿರವಿದ್ದರೆ ಅಲ್ಲಿ ಅಭಿವೃದ್ಧಿಯು ಹೆಚ್ಚು ಹೆಚ್ಚು ಜನರನ್ನು ಒಳಗೊಳ್ಳುತ್ತಿಲ್ಲವೆಂದು ತಿಳಿಯಬಹುದು. ಕರ್ನಾಟಕ ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕವು 2001ರಲ್ಲಿ 0.650ರಷ್ಟಿತ್ತು.

ಕೋಷ್ಟಕ – 9 : ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ – 2001

ಕ್ರ.ಸಂ. ಜಿಲ್ಲೆಗಳು ಆರೋಗ್ಯ ಸೂಚ್ಯಂಕ ಶೈಕ್ಷಣಿಕ ಸಾಧನಾ ಸೂಚ್ಯಂಕ ತಲಾ ವರಮಾನ ಸೂಚ್ಯಂಕ ಮಾನವ ಅಭಿವೃದ್ಧಿ ಸೂಚ್ಯಂಕ
1. ಬಳ್ಳಾರಿ 0.685 0.618 0.549 0.617
2. ಬೀದರ್ 0.638 0.689 0.470 0.599
3. ಗುಲಬರ್ಗಾ 0.632 0.572 0.490 0.564
4. ಕೊಪ್ಪಳ 0.642 0.576 0.529 0.582
5. ರಾಯಚೂರು 0.648 0.524 0.469 0.547
6. ಕರ್ನಾಟಕ 0.680 0.712 0.559 0.650

ಮೂಲ: ಕರ್ನಾಟಕ ಸರ್ಕಾರ 2006 ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ವರದಿ – 2005. ಯೋಜನಾ ಇಲಾಖೆ, ಬೆಂಗಳೂರು.ಪು : 18

ಅಂದರೆ ಅದು ಒಂದಕ್ಕೆ ಹತ್ತಿರವಿದೆ. ಹೈ.ಕ.ಪ್ರ.ದ ಜಿಲ್ಲೆಗಳಲ್ಲಿ ಅದರ ಮೌಲ್ಯವು ಎಷ್ಟಿತ್ತು ಎಂಬುದನ್ನು ಜಿಲ್ಲಾವಾರು ಕೋಷ್ಟಕ – 9ರಲ್ಲಿ ತೋರಿಸಿದೆ. ಕೋಷ್ಟಕ – 9ರಲ್ಲಿ ಕಂಡು ಬರುವಂತೆ ಬಳ್ಳಾರಿ ಜಿಲ್ಲೆಯನ್ನು ಬಿಟ್ಟರೆ ಉಳಿದ ನಾಲ್ಕು ಜಿಲ್ಲೆಗಳಲ್ಲಿ ಸೂಚ್ಯಂಕವು 0.600ಕ್ಕಿಂತ ಕಡಿಮೆಯಿದೆ. ಅಂದರೆ ಅವು ಒಂದಕ್ಕೆ ದೂರದಲ್ಲಿವೆ. ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಅದು 0.600 ಗಡಿ ದಾಟಿದೆ. ಅದರೂ ಅದರ ಸೂಚ್ಯಂಕವು ರಾಜ್ಯ ಮಟ್ಟದ ಸೂಚ್ಯಂಕಕ್ಕಿಂತ ಕಡಿಮೆಯಿದೆ. ಮಾನವ ಅಭಿವೃದ್ಧಿಯು ಜನರನ್ನು ರಾಜ್ಯಮಟ್ಟದಲ್ಲಿ ಹೆಚ್ಚುಹೆಚ್ಚಾಗಿ ಒಳಗೊಳ್ಳುತ್ತಿದ್ದರೆ ಹೈ.ಕ.ಪ್ರ.ದಲ್ಲಿ ಅದರ ಹರವು ತುಂಬಾ ಸೀಮಿತವಾಗಿದೆ.

ಈ ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಹೈ.ಕ.ಪ್ರ. ಸ್ಥಿತಿಯು ಆಶಾದಾಯಕವಾಗಿಲ್ಲ. ರಾಜ್ಯಮಟ್ಟದಲ್ಲಿ ಜೀವನಾಯುಷ್ಯವು 2001 – 02ರಲ್ಲಿ 65.8ವರ್ಷಗಳಾಗಿದ್ದರೆ ಹೈ.ಕ.ಪ್ರ.ಜಿಲ್ಲೆಗಳಲ್ಲಿ ಅದು ಬಳ್ಳಾರಿ ಜಿಲ್ಲೆಯನ್ನು ಬಿಟ್ಟರೆ ಉಳಿದ ಜಿಲ್ಲೆಗಳಲ್ಲಿ 63 ವರ್ಷಗಳಿಗಿಂತ ಕಡಿಮೆಯಿದೆ. ಅದೇ ರೀತಿ ಶಿಶು ಮರಣ ಪ್ರಮಾಣವು ರಾಜ್ಯಮಟ್ಟದಲ್ಲಿ 2001 – 02ರಲ್ಲಿ 55ರಷ್ಟಿದ್ದರೆ ಹೈ.ಕ.ಪ್ರ. ಜಿಲ್ಲೆಗಳಲ್ಲಿ ಅದು ಬಳ್ಳಾರಿಯನ್ನು ಬಿಟ್ಟು ಉಳಿದ ಜಿಲ್ಲೆಗಳಲ್ಲಿ 60ಕ್ಕಿಂತ ಅಧಿಕವಾಗಿದೆ. ಒಟ್ಟು ಸಂತಾನೋತ್ಪತ್ತಿ ಪ್ರಮಾಣವು ರಾಜ್ಯ ಮಟ್ಟದಲ್ಲಿ 2.4ರಷ್ಟಿದ್ದರೆ ಹೈ.ಕ.ಪ್ರ. ದ ಜಿಲ್ಲೆಗಳಲ್ಲಿ ಅದು 3 ಕ್ಕಿಂತ ಅಧಿಕವಾಗಿದೆ. ರಾಜ್ಯಮಟ್ಟದಲ್ಲಿ ಜನಸಂಖ್ಯಾ ಬೆಳವಣಿಗೆ ಪ್ರಮಾಣವು 1991 – 2001ರ ಅವಧಿಯಲ್ಲಿ ವಾರ್ಷಿಕ 1.75ರಷ್ಟಿದ್ದರೆ ಹೈ.ಕ.ಪ್ರ.ದಲ್ಲಿ ಅದು ವಾರ್ಷಿಕ ಶೇ.2.21ರಷ್ಟಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಹೇಳಬಹುದಾದ ಸಂಗತಿಯೆಂದರೆ ಹೈ.ಕ.ಪ್ರ.ದಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವ ಪ್ರಮಾಣವು ಅತ್ಯಂತ ಕೆಳಮಟ್ಟದಲ್ಲಿದೆ.

. ಜನರನ್ನು ಒಳಗೊಳ್ಳುವ ಅಭಿವೃದ್ಧಿ : ಹೈ..ಪ್ರ.ದಲ್ಲಿನ ಸವಾಲುಗಳು

ಅನೇಕ ಅಧ್ಯಯನಗಳು ದೃಢಪಡಿಸಿರುವಂತೆ ಹೈ.ಕ.ಪ್ರ.ವು ಅಭಿವೃದ್ಧಿಯ ದೃಷ್ಟಿಯಿಂದ ಎರಡು ಬಗೆಯ ಸವಾಲುಗಳನ್ನು ಎದುರಿಸುತ್ತಿದೆ. ಮೊದಲನೆಯದಾಗಿ ಅದು ವರಮಾನದ ದೃಷ್ಟಿಯಿಂದಲೂ ಹಿಂದುಳಿದ ಸ್ಥಿತಿಯಲ್ಲಿದೆ. ರಾಜ್ಯದ ವರಮಾನದಲ್ಲಿ ಹೈ.ಕ.ಪ್ರ.ದ ಪಾಲು 2003 – 04ರಲ್ಲಿ ಶೇ. 14.69ರಷ್ಟಿತ್ತು. ಆದರೆ ಈ ಪ್ರದೇಶವು ರಾಜ್ಯದ ಜನಸಂಖ್ಯೆಯಲ್ಲಿ ಪಡೆದಿರುವ ಪಾಲು ಶೇ.18.34. ಅದೇ ರೀತಿ ಮಾನವ ಅಭಿವೃದ್ಧಿಯಲ್ಲಿಯೂ ಇದು ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದೆ. ಈ ಪ್ರದೇಶದ ಜಿಲ್ಲೆಗಳಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕವು ರಾಜ್ಯದ ಸೂಚ್ಯಂಕದ ಶೇ.94.92 ಬಳ್ಳಾರಿ ಜಿಲ್ಲೆಯಲ್ಲಿದ್ದರೆ ಶೇ.84.15ರಷ್ಟು ಕನಿಷ್ಟ ರಾಯಚೂರು ಜಿಲ್ಲೆಯಲ್ಲಿದೆ. ಈ ಪ್ರದೇಶದಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತೆ ಮಾಡುವಲ್ಲಿ ನಾವು ಎದುರಿಸಬೇಕಾದ ಸವಾಲೆಂದರೆ ವರಮಾನ ವರ್ಧನೆ ಮತ್ತು ಧಾರಣಶಕ್ತಿಯ ವರ್ಧನೆಗಳೆರಡನ್ನೂ ಏಕಕಾಲದಲ್ಲಿ ಸಾಧಿಸಿಕೊಳ್ಳಬೇಕಾಗಿದೆ. ಹೀಗೆ ಎರಡೂ ಮಾನದಂಡಗಳಲ್ಲಿ ಹಿಂದುಳಿದಿರುವ ಆರ್ಥಿಕತೆಗಳು ಅನಭಿವೃದ್ಧಿಯ ವಿಷಚಕ್ರದಲ್ಲಿ ಸಿಲುಕಿವೆಯೆಂದು ವರ್ಗೀಕರಿಸಲಾಗಿದೆ. ಇದು ಅಸಾಮಾನ್ಯವಾದ ಸವಾಲಾಗಿದೆ. ಈ ಪ್ರದೇಶವು ವರಮಾನದ ದೃಷ್ಡಿಯಿಂದ ಹಿಂದುಳಿದಿದೆ. ಇದು ಜನರ ಧಾರಣಾ ಶಕ್ತಿಯ ದೃಷ್ಟಿಯಿಂದಲೂ ದುಸ್ಥಿತಿಯಲ್ಲಿದೆ. ಇವೆರಡರ ಜೊತೆಯಲ್ಲಿ ಇದು ಜನಸಂಖ್ಯೆ ದೃಷ್ಟಿಯಿಂದಲೂ ಒತ್ತಡವನ್ನು ಅನುಭವಿಸುತ್ತಿದೆ. ಈ ಪ್ರದೇಶದಲ್ಲಿ ಲಿಂಗ ಅಸಮಾನತೆಯ ಪ್ರಮಾಣವು ರಾಜ್ಯ ಮಟ್ಟದಲ್ಲಿರುವುದಕ್ಕಿಂತ ತೀವ್ರವಾಗಿದೆ. ಇವೆಲ್ಲಕ್ಕೂ ಕಳಸಪ್ರಾಯದಂತೆ ಇದು ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಒಣ ಭೂ ಬೇಸಾಯದ ಪ್ರದೇಶವನ್ನು ಹೊಂದಿದೆ. ಅಭಿವೃದ್ಧಿಯ ಮೂಲ ಸಂಗತಿಯಾದ ಸಾಕ್ಷರತೆಯು ಅತ್ಯಂತ ಕೆಳಮಟ್ಟದಲ್ಲಿದೆ. ಒಂದು ಪ್ರದೇಶದ ಹಿಂದುಳಿದಿರುವಿಕೆಗೂ ಮತ್ತು ಅಲ್ಲಿ ಭೂರಹಿತ ದಿನಗೂಲಿಗಳ ಪ್ರಮಾಣ ಅಧಿಕವಿರುವುದಕ್ಕೂ ಮತ್ತು ಅನಕ್ಷರತೆಯು ಅಲ್ಲಿ ಹೆಚ್ಚರುವುದಕ್ಕೂ ನಡುವೆ ಸಂಬಂಧವಿರುತ್ತದೆ. ಇದೊಂದು ರೀತಿಯ ವಿಷಚಕ್ರವಿದ್ದಂತೆ. ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದು ಇಲ್ಲಿರುವ ಒಂದು ಸವಾಲು.

ರಾಜಕೀಯ ದುಸ್ಥಿತಿ ಮತ್ತೊಂದು ಸವಾಲು

ರಾಜಕೀಯ ದೃಷ್ಟಿಯಿಂದ ನೋಡಿದಾಗಲೂ ಈ ಪ್ರದೇಶದ ಸಾಧನೆ ಹೇಳಿಕೊಳ್ಳುವಂತಿಲ್ಲ. ಈ ಪ್ರದೇಶದ ಅಭಿವೃದ್ಧಿಗೆ ಅಗತ್ಯವಾದ ನಾಯಕತ್ವವು ದೊರೆಯುತ್ತಿಲ್ಲ. ರಾಜಕಾರಿಣಿಗಳ ಕೊರತೆಯ ಬಗ್ಗೆ ಇಲ್ಲಿ ನಾನು ಮಾತನಾಡುತ್ತಿಲ್ಲ. ಆದರೆ ಅಭಿವೃದ್ಧಿಯ ರಾಜಕಾರಣಕ್ಕೆ ಪ್ರತಿಯಾಗಿ ಇಲ್ಲಿ ಪಟ್ಟಭದ್ರ ರಾಜಕಾರಣ ನಡೆದಿದೆ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಒಟ್ಟು ದುಡಿಮೆಗಾರರಲ್ಲಿ (2001) ಸಾಗುವಳಿದಾರರ ಸಂಖ್ಯೆ 39.92 ಲಕ್ಷದಷ್ಟಿದ್ದರೆ (ಶೇ. 29.14) ಭೂರಹಿತ ದಿನಗೂಲಿಗಳ ಸಂಖ್ಯೆ 26.54 ಲಕ್ಷದಷ್ಟಿದೆ (ಶೇ.19.37) . ಆದರೆ ಗುಲಬರ್ಗಾ ವಿಭಾಗದಲ್ಲಿ ಸಾಗುವಳಿದಾರರ ಸಂಖ್ಯೆ 11.43 ಲಕ್ಷದಷ್ಟಿದ್ದರೆ (ಶೇ. 27.78) ಭೂರಹಿತ ದಿನಗೂಲಿಗಳ ಸಂಖ್ಯೆ 16.70 ಲಕ್ಷದಷ್ಟಿದೆ (ಶೇ.40.59) . ಅಂದರೆ ದ.ಕ.ಪ್ರ.ದಲ್ಲಿ ಸಾಗುವಳಿದಾರರ ಸಂಖ್ಯೆಯು ಭೂರಹಿತ ದಿನಗೂಲಿ ದುಡಿಮೆಗಾರರ ಸಂಖ್ಯೆಗಿಂತ ಅಧಿಕವಿದೆ. ಇಲ್ಲಿ ರೈತಾಪಿ ಬೇಸಾಯವಿದೆ. ಆದರೆ ಉ.ಕ.ಪ್ರ.ದಲ್ಲಿ ಸಾಗುವಳಿದಾರರ ಸಂಖ್ಯೆಗಿಂತ ದಿನಗೂಲಿ ದುಡಿಮೆಗಾರರ ಸಂಖ್ಯೆಯು ಅಧಿಕವಾಗಿದೆ. ಇದು ಅಲ್ಲಿರುವ ಜಮೀನುದಾರಿ ಊಳಿಗಮಾನ್ಯ ವ್ಯವಸ್ಥೆಯನ್ನು ಸೂಚಿಸುತ್ತದೆ. ಈ ಬಗೆಯ ರಾಚನಿಕ ವಿಕೃತಿಗಳನ್ನು ಸರಿಪಡಿಸದೆ ಇಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತೆ ಮಾಡುವುದು ಕಷ್ಟ. (ವಿವರಗಳಿಗೆ ನೋಡಿ ಟಿ.ಆರ್. ಚಂದ್ರಶೇಖರ 2006) ಈ ಬಗೆಯ ರಾಚನಿಕ ಸಂಬಂಧಗಳಿಂದಾಗಿ ಉನ್ನತ ವರ್ಗದ ಹಿತಾಸಕ್ತಿಗಳು ರಾಜಕಾರಣದಲ್ಲಿ ಮುಖ್ಯವಾಗಿ ದಿನಗೂಲಿಗಳ, ಮಹಿಳೆಯರ, ಪರಿಶಿಷ್ಟರ, ವಲಸಿಗರ ಹಿತಾಸಕ್ತಿಗಳು ಇಲ್ಲಿ ಆದ್ಯತೆಯ ಸಂಗತಿಗಳಾಗುತ್ತಿಲ್ಲ. ಈ ಪ್ರದೇಶದಲ್ಲಿ ಅಭಿವೃದ್ಧಿಯು ಜನರನ್ನು ಒಳಗು ಮಾಡುವಂತೆ ಮಾಡಲು ಇರುವ ಪ್ರಬಲ ಸವಾಲೆಂದರೆ ಅಲ್ಲಿನ 16.70 ಲಕ್ಷ (2001) ದಿನಗೂಲಿ ದುಡಿಮೆಗಾರರು. ಇವರು ಸಾಮಾನ್ಯವಾಗಿ ಅನಕ್ಷರಸ್ಥರಾಗಿರುತ್ತಾರೆ. ಈ ವರ್ಗದಲ್ಲಿ ಕುಶಲತೆಯ ಮಟ್ಟವು ಕಡಿಮೆ. ಈ ವರ್ಗವನ್ನು ಅಭಿವೃದ್ಧಿಯ ಪರಿಧಿಯೊಳಗೆ ಹೇಗೆ ತರಬೇಕೆಂಬುದೇ ನಮ್ಮ ಮುಂದಿರುವ ದೊಡ್ಡ ಸವಾಲು. ಅಭಿವೃದ್ಧಿ ರಾಜಕಾರಣವನ್ನು ಇಲ್ಲಿ ಸೌಹಾರ್ದತೆಯ ನೆಲೆಯಲ್ಲಿ ಕಟ್ಟಲು ಪ್ರಯತ್ನಿಸಲಾಗುತ್ತಿದೆ. ಆದರೆ ಅವು ಸಂಘರ್ಷದ ಸಂಬಂಧಗಳನ್ನು ಹೊಂದಿರುತ್ತವೆ. ಈ ಸಂಘರ್ಷದ, ಅಸಮತೋಲನದ ಸಂಗತಿಗಳನ್ನು ಮರೆಮಾಚಿ ಎಲ್ಲರ ಮನವೊಲಿಸಿಕೊಳ್ಳುವ ಮೂಲಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಇಲ್ಲಿ ಸಂಘರ್ಷದ ಸಂಗತಿಗಳನ್ನು ಪಕ್ಕಕ್ಕೆ ತಳ್ಳಲಾಗುತ್ತಿದೆ. ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತಾಗಬೇಕಾದರೆ ಅಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ‘ಅಧಿಕಾರ ಸಂಬಂಧ’ಗಳಲ್ಲಿ ಬದಲಾವಣೆ ನಡೆಯಬೇಕಾಗುತ್ತದೆ. ಇಲ್ಲಿ ‘ಜನರು’ ಎಂಬುದನ್ನು ವಿಶೇಷ ಅರ್ಥದಲ್ಲಿ ಪರಿಭಾವಿಸಿಕೊಳ್ಳಬೇಕು. ಅಭಿವೃದ್ಧಿಯ ‘ಹೊರಗಣ’ದವರನ್ನು ‘ಒಳಗಣ’ದವರನ್ನಾಗಿ ಮಾಡುವುದು ಇಲ್ಲಿ ಆದ್ಯತೆಯ ಸಂಗತಿಯಾಗಬೇಕು. ಇದು ಇಲ್ಲಿರುವ ಮುಖ್ಯ ಸವಾಲು. ಅಭಿವೃದ್ಧಿ ರಾಜಕಾರಣವು ಅಭಿವೃದ್ಧಿಯ ಫಲಗಳನ್ನು ಉಳ್ಳವರು ಮನಾಪಲಿ ಮಾಡಿಕೊಳ್ಳುವುದನ್ನು ತಡೆಯಬೇಕು. ಅದಕ್ಕೆ ಅಭಿವೃದ್ಧಿಯ ಆದ್ಯತೆಯ ಸ್ವರೂಪವೇ ಭಿನ್ನವಾಗಬೇಕು. ಅದು ಉಳ್ಳವರಿಗಿಂತ ಉಳಿದವರ ಪಾಲಾಗುವಂತೆ ಅಭಿವೃದ್ಧಿಯನ್ನು ನಿರ್ವಹಿಸಬೇಕು. ಅದಕ್ಕೆ ಬಡವರ, ದಿನಗೂಲಿಗಳ, ಪರಿಶಿಷ್ಟರ, ಮಹಿಳೆಯರ, ವಲಸಿಗರ ಸಂಘಟನೆಯಾಗಬೇಕು. ಅವರ ಧ್ವನಿಯು ರಾಜಕಾರಣದಲ್ಲಿ ಕೇಳುವಂತಾಗಬೇಕು.

ಅಭಿವೃದ್ಧಿಯೆನ್ನುವುದು ಅಖಂಡ ಪ್ರಕ್ರಿಯೆಯಲ್ಲ. ಅದು ಸಾಮಾನ್ಯವಾಗಿ ಪಟ್ಟಭದ್ರರ ಪರವಾಗಿರುತ್ತದೆ. ಅವರಿಗೆ ಅದು ಅಭಿಮುಖಿಯಾಗಿರುತ್ತದೆ.

[1] ರಾಜ್ಯಮಟ್ಟದಲ್ಲಿ ಅಭಿವೃದ್ಧಿಯು ಹೇಗೆ ಬೆಂಗಳೂರಿನಲ್ಲಿ ಮಡುಗಟ್ಟಿಕೊಳ್ಳುತ್ತಿದೆಯೋ[2] ಅದೇ ರೀತಿಯಲ್ಲಿ ಹೈ.ಕ.ಪ್ರ.ದಲ್ಲಿ ಅದು ಉಳ್ಳವರ ಪಾಲಾಗುತ್ತಿದೆ. ಇದು ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಮುಖ್ಯ.

ಈ ರಾಜಕಾರಣವನ್ನು ಬುಡಮೇಲು ಮಾಡಬೇಕಾಗುತ್ತದೆ. ಇದು ನಮ್ಮ ಮುಂದಿರುವ ಅತಿದೊಡ್ಡ ಸವಾಲು. ಅಭಿವೃದ್ಧಿಯನ್ನು ಜನರು ಹಕ್ಕನ್ನಾಗಿ ಒತ್ತಾಯಿಸುವ ಬಗ್ಗೆ ಯೋಚಿಸಬೇಕು. ಏಕೆಂದರೆ ಅದು ದತ್ತಿ – ದಾನವಲ್ಲ. ಈ ರೀತಿಯಲ್ಲಿ ಅಭಿವೃದ್ಧಿಯನ್ನು ಕುರಿತಂತೆ ಅನುಸಂಧಾನ ನಡೆಸಲು ಜನರಿಗೆ ಅಕ್ಷರ ಜ್ಞಾನದ ಅಗತ್ಯವಿದೆ. ದುಸ್ಥಿತಿ – ಬಡತನ, ಅನಕ್ಷರತೆ ಮುಂತಾದವುಗಳು ಹಿಂದಿನ ಜನ್ಮದಲ್ಲಿನ ಪಾಪದ ಫಲಗಳಲ್ಲ. ಅವು ದೇವರು ಕರುಣಿಸಿದ ಸಂಗತಿಗಳಲ್ಲ.

ಅವು ಮೂಲಭೂತವಾಗಿ ಸಾಮಾಜಿಕ – ಆರ್ಥಿಕ ಸಮಸ್ಯೆಗಳಾಗಿವೆ ಎಂಬುದನ್ನು ಹೈ.ಕ.ಪ್ರ.ದ. ಜನರು ಮನದಟ್ಟು ಮಾಡಿಕೊಳ್ಳಬೇಕು. ಈ ಬಗ್ಗೆ ಜನರು ಚರ್ಚೆ ಮಾಡಬೇಕು. ಸಂವಾದ ನಡೆಸಬೇಕು. ಇವೆಲ್ಲಕ್ಕೂ ಮೂಲ ಅಕ್ಷರ ಸಂಸ್ಕೃತಿ. ಪ್ರಸಿದ್ಧ ಆಡಳಿತಗಾರ ಪಿ.ಎಸ್.ಅಪ್ಪು ವಾದಿಸುವಂತೆ ಇಲ್ಲಿ ಪ್ರಾಥಮಿಕ ಶಿಕ್ಷಣ ಕ್ರಾಂತಿಯೊಂದು ನಡೆಯಬೇಕು. ಅಕ್ಷರ ಸಂಸ್ಕೃತಿಯನ್ನು ಧಾರಣೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆದಿರುವ ಶಿಷ್ಟ ಜನವರ್ಗವು ಅಭಿವೃದ್ಧಿಯಲ್ಲಿ ಅಧಿಕ ಪಾಲು ಪಡೆಯುತ್ತಿದೆ. ಅದರಿಂದ ವಂಚಿತರಾದ ಪರಿಶಿಷ್ಟರು, ದಿನಗೂಲಿಗಳು ಮತ್ತು ಮಹಿಳೆಯರು ಹೊರಗಣದವರಾಗಿ ದುಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಅಭಿವೃದ್ಧಿಯ ಒಳಗಣರಾಗುವುದಕ್ಕೆ ಅಗತ್ಯವಾದ ಧಾರಣಾ ಸಾಮರ್ಥ್ಯವನ್ನು ದಕ್ಕಿಸಿಕೊಳ್ಳುವುದರಲ್ಲಿ ಅವರು ವಿಫಲರಾಗಿದ್ದಾರೆ. ಇವೆಲ್ಲ ಸಾಮಾಜಿಕ – ಆರ್ಥಿಕ ಸಂಗತಿಗಳಾಗಿವೆ. ಅವು ದೇವರ ಶಾಪದಿಂದ ಉಂಟಾದ ಸಂಗತಿಗಳಲ್ಲ.

ಈ ಪ್ರದೇಶದ ಅಭಿವೃದ್ಧಿಗೆ ಅಡ್ಡಿಯಾಗಿರುವ ಮತ್ತು ಎಲ್ಲ ಬಗೆಯ ದುಸ್ಥಿತಿಗೂ ಕಾರಣವಾಗಿರುವ ಸಂಗತಿಯೆಂದರೆ ಅನಕ್ಷರತೆ. ಜಮೀನ್ದಾರಿ ಪಾಳೆಗಾರಿಕೆಯನ್ನು ಮುರಿಯಲು ಅಕ್ಷರ ಸಂಸ್ಕೃತಿ ಬೇಕು. ಜನರ ಧಾರಣಾ ಸಾಮರ್ಥ್ಯವನ್ನು ಉತ್ತಮ ಪಡಿಸಲು ಅದು ಬೇಕು. ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ಅದು ಬೇಕು. ಮಹಿಳೆಯರ ಮತ್ತು ಮಕ್ಕಳ ಅಪೌಷ್ಟಿಕತೆಯ ಸಮಸ್ಯೆಯನ್ನು ನಿವಾರಿಸಲು ಅದು ಬೇಕು. ಅದು ಈಗ ಉಳ್ಳವರಿಗೆ ಸರಾಗವಾಗಿ ದೊರೆಯುತ್ತಿದೆ. ಆದರೆ ಅದು ಉಳಿದವರಿಗೂ ಸಿಗುವಂತಾಗಬೇಕು. ಅನಕ್ಷರತೆಗೆ ಸಂಬಂಧಿಸಿದ ಸಮಸ್ಯೆಯನ್ನು ಜೀನ್ ಡ್ರೀಜ್ ಮತ್ತು ಅಮರ್ತ್ಯಸೆನ್ ತಮ್ಮ ಭಾರತ (2002) ಕುರಿತಿ ಕೃತಿಯಲ್ಲಿ ‘ಸಾಮಾಜಿಕ ವೈಫಲ್ಯ’ವೆಂದು ಕರೆದಿದ್ದಾರೆ. ದೀಪಕ್ ನಯ್ಯರ್ (2007) ಭಾರತವು ಸ್ವಾತಂತ್ರೋತ್ತರ 50 ವರ್ಷ ಅವಧಿಯಲ್ಲಿ ಎದುರಿಸುತ್ತಿರುವ ಸಮಸ್ಯೆಯೆಂದರೆ ಏರಿಕೆಯಾದ ವರಮಾನವನ್ನು ಜನರ ಬದುಕನ್ನಾಗಿ ಪರಿವರ್ತಿಸದಿರುವುದೆಂದು ಹೇಳಿದ್ದಾರೆ. ಜನರ ಬದುಕು ಎಂದರೆ ಅದು ಅಕ್ಷರ ಸಂಸ್ಕೃತಿಯೇ ಆಗಿದೆ. ಲಿಂಗ ಅಸಮಾನತೆಯು ಅಭಿವೃದ್ಧಿಗೆ ಅಡ್ಡಿಯಾಗಿರುವ ಮತ್ತೊಂದು ಸಂಗತಿಯಾಗಿದೆ. ಇದನ್ನು ಅಭಿವೃದ್ಧಿಗೆ ಸಂಬಂಧಿಸಿದ ಸಂಗತಿಯಾಗಿ ಹೇಗೆ ಪರಿಗಣಿಸುವುದೆಂದು ಯಾರಾದರೂ ಕೇಳಬಹುದು. ಆದರೆ ಲಿಂಗ ಸಮಾನತೆ, ಮಹಿಳೆಯರ ಸಾಕ್ಷರತಾ ಪ್ರಮಾಣ, ಅವರ ಸ್ವಾತಂತ್ರ್ಯ, ಅವರ ಆಸ್ತಿಯ ಹಕ್ಕು, ಅವರ ಆರೋಗ್ಯ ಮುಂತಾದವು ಅಭಿವೃದ್ಧಿಯ ನಿರ್ಣಾಯಕ ಸಂಗತಿಯೆಂಬುದನ್ನು ಅಭಿವೃದ್ಧಿಯನ್ನು ಕುರಿತ ಅನೇಕ ಅಧ್ಯಯನಗಳು ದೃಢಪಡಿಸಿವೆ. ಲಿಂಗ ನಿರಪೇಕ್ಷತೆಯು ಉದಾರವಾದಿ ಮತ್ತು ನವಉದಾರವಾದಿ ಅಭಿವೃದ್ಧಿ ಸಿದ್ಧಾಂತಗಳ ಸಮಸ್ಯೆಯಾಗಿದೆ.

ಎಲ್ಲಿಯವರೆಗೆ ಅಭಿವೃದ್ಧಿಯನ್ನು ಲಿಂಗ ನಿರ್ದಿಷ್ಟತೆಯನ್ನಾಗಿ ಮಾಡುವುದಿಲ್ಲವೋ, ಲಿಂಗ ಸ್ಪಂದಿಯನ್ನಾಗಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಜನರನ್ನು ಒಳಗೊಳ್ಳುವ ಅಭಿವೃದ್ಧಿ ಸಾಧ್ಯವಿಲ್ಲ. ಹೈ.ಕ.ಪ್ರ.ದಲ್ಲಿ ಲಿಂಗಸಂಬಂಧಿ ಸಂಗತಿಗಳನ್ನು ಅಭಿವೃದ್ಧಿಯ ಕಾರ್ಯತಂತ್ರದ ಭಾಗವನ್ನಾಗಿ ಮಾಡಿಕೊಳ್ಳುವುದು ಹೇಗೆ ಎಂಬುದು ಇಲ್ಲಿನ ಸವಾಲು. ಈ ಸವಾಲು ವಿಧಿ ಲಿಖಿತವಾದ ಸಂಗತಿಯೇನಲ್ಲ. ಇಂತಹ ವಿಧಿಯಾಟದ ನಂಬಿಕೆಗಳನ್ನು ಕಳೆದುಕೊಳ್ಳುವುದು ಜನರನ್ನು ಒಳಗೊಳ್ಳುವ ಅಭಿವೃದ್ಧಿ ಪ್ರಣಾಳಿಕೆಯ ಸೂತ್ರವಾಗಿದೆ. ಎಲ್ಲ ಬಗೆಯ ವಿಕೃತಿ – ವಿಕಾರಗಳನ್ನು ಮನುಷ್ಯ ಪ್ರಯತ್ನದಿಂದ ಸರಿಪಡಿಸಬಹುದೆಂಬುದು ಇಲ್ಲಿ ಜನರ ಅರಿವಿನ ಭಾಗವಾಗಬೇಕು.

ಅದನ್ನು ಜನರ ಅರಿವಿನ ಭಾಗವನ್ನು ಹೇಗೆ ಮಾಡಬೇಕೆಂಬುದೇ ನಮ್ಮ ಮುಂದಿರುವ ಸವಾಲು. ಹಂಗಿನ ಅಭಿವೃದ್ಧಿಯ ವ್ಯಾಪ್ತಿಯಿಂದ ಜನರು ಹೊರಬರಬೇಕು. ಹಕ್ಕಿನ ಅಭಿವೃದ್ಧಿಯ ಬಗ್ಗೆ ಅವರು ಮಾತನಾಡಬೇಕು. ಘನತೆಯಿಂದ ಕೂಡಿದ ಅಭಿವೃದ್ಧಿಯನ್ನು ಹಂಗಿನ ಸಂಸ್ಕೃತಿಯಿಂದ ಸಾಧಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಇಲ್ಲಿ ಆಡಂಸ್ಮಿತ್ ಅಭಿವೃದ್ಧಿಯನ್ನು ಕುರಿತಂತೆ ಹೇಳಿರುವ ಮಾತುಗಳನ್ನು ನೆನಪಿಸಿಕೊಳ್ಳಬಹುದು. ಅವರು ‘ಜನರು ಯಾವುದೇ ಅವಮಾನವನ್ನು, ಸಂಕೋಚವನ್ನು ಅನುಭವಿಸುವ ರೀತಿಯಲ್ಲಿ ಸರೀಕರೊಂದಿಗೆ ಸಹಭಾಗಿಗಳಾಗಲು ಅಗತ್ಯವಾದ ಸಾಮರ್ಥ್ಯವನ್ನು ಜನರಿಗೆ ನೀಡುವ ಪ್ರಕ್ರಿಯೆಯೇ ಆರ್ಥಿಕ ಅಭಿವೃದ್ಧಿ’ ಎಂದು ಅದನ್ನು ನಿರ್ವಚಿಸಿದ್ದಾನೆ. ಇಲ್ಲಿ ಅಭಿವೃದ್ಧಿಯೆಂಬುದು ಬಂಡವಾಳ ಹೂಡಿಕೆಯಲ್ಲಿನ ಏರಿಕೆಗೆ ಅಥವಾ ವರಮಾನದಲ್ಲಿ ಏರಿಕೆಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ.

[1] ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಏರಿಕೆಯಾದ ವರಮಾನವು ತನ್ನಷ್ಟಕ್ಕೆ ತಾನು ಮೇಲಿನಿಂದ ಕೆಳಗೆ ಹರಿದು ಬರುತ್ತದೆಯೆಂದು ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತಗಳು ಪ್ರತಿಪಾದಿಸಿಕೊಂಡು ಬಂದಿವೆ. ಇದನ್ನು ‘ಟ್ರಿಕಲ್ ಡೌನ್ ಅರ್ಥಶಾಸ್ತ್ರ’ವೆಂದು ಕರೆಯಲಾಗಿದೆ. ಆದರೆ ಅಂತಹ ಪ್ರಕ್ರಿಯೆಯು ವಿಫಲವಾಗಿದೆಯೆಂದು ತಜ್ಞರು ಹೇಳುತ್ತಿದ್ದಾರೆ (ವಿವರಗಳಿಗೆ ಜೊಸೆಫ್ ಸ್ಟಿಗ್‌ಲಿಟ್ಜ್‌ನ (2002) ಜಾಗತೀಕರಣ ಕುರಿತ ಕೃತಿಯನ್ನು ನೋಡಬಹುದು) . ಇಲ್ಲಿ ವರಮಾನವು ಮೇಲಿನಿಂದ ಕೆಳಗೆ ಸಹಜವಾಗಿ, ತನ್ನಷ್ಟಕ್ಕೆ ತಾನು ಹರಿದು ಬರಲು ಸಾಧ್ಯವಾಗುತ್ತಿಲ್ಲವೆಂಬುದಕ್ಕೆ ಜೀನ್ ಡ್ರೀಜ್ ಮತ್ತು ಅಮರ್ತ್ಯಸೆನ್ ತಮ್ಮ ಭಾರತ ಕುರಿತ ಕೃತಿಯಲ್ಲಿ (2002) ‘ಅನೂಚಾನವಾಗಿ ಹರಿದುಕೊಂಡು ಬರುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ವಿಕೃತಿಗಳು’ ಕಾರಣವೆಂದು ನುಡಿದಿದ್ದಾರೆ. ಅವುಗಳಿಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳದೆ ಕೇವಲ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸಿ ಬಿಟ್ಟರೆ ಸಾಕಾಗುವುದಿಲ್ಲ.

[2] ಇಂದು ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾತನೆ ಬಗ್ಗೆ ಮಾತನಾಡುವುದಾದರೆ ಬೆಂಗಳೂರು ಮತ್ತು ಉಳಿದ ಕರ್ನಾಟಕಗಳ ನಡುವಿನ ಅಸಮಾನತೆ ಬಗ್ಗೆ ಮಾತನಾಡಬೇಕಾಗುತ್ತದೆ. ಉದಾಹರಣೆಗೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (2006 – 07) ಬೆಂಗಳೂರು ನಗರ ಜಿಲ್ಲೆಯ ಪಾಲು ಶೇ. 29.43 ರಷ್ಟಿದೆ. ಈ ಜಿಲ್ಲೆಯಲ್ಲಿ ತಲಾ ವರಮಾನವು (2006 – 07) ರೂ. 84380ರಷ್ಟಿದ್ದರೆ ರಾಜ್ಯ ಸರಾಸರಿ ರೂ. 35469ರಷ್ಟಿದೆ. ರಾಜ್ಯದಲ್ಲಿನ ವಾಣಿಜ್ಯ ಬ್ಯಾಂಕುಗಳ ಒಟ್ಟು ಠೇವಣಿಯಲ್ಲಿ (ಮಾರ್ಚ, 2007) ಬೆಂಗಳೂರಿನ ಪಾಲು ಶೇ. 65.35 ಮತ್ತು ಸಾಲದಲ್ಲಿ ಅದರ ಪಾಲು ಶೇ. 65.04ರಷ್ಟಿದೆ. ರಾಜ್ಯದ ಅಭಿವೃದ್ಧಿಯನ್ನು ಎಲ್ಲಿಯವರೆಗೆ ಬೆಂಗಳೂರಿಗೆ ಉತ್ತರಾಭಿಮುಖಿಯನ್ನಾಗಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಇಲ್ಲಿ ಪ್ರಾದೇಶಿಕ ಅಸಮಾನತೆಯು ಪರಿಹಾರವಾಗುವುದು ಸಾಧ್ಯವಿಲ್ಲ. ಇಂದು ಎಲ್ಲವೂ ಬೆಂಗಳೂರಿನಲ್ಲಿ ಕೇಂದ್ರೀಕೃತಗೊಳ್ಳುತ್ತಿದೆ. ಇದು ತಪ್ಪಬೇಕು. ಕರ್ನಾಟಕವೆಂದರೆ ಬೆಂಗಳೂರು ಮಾತ್ರವಲ್ಲ. ಈ ಜಿಲ್ಲೆಯ ತಲಾ ವರಮಾನವು ರಾಜ್ಯ ತಲಾ ವರಮಾನದ ಶೇ. 238ರಷ್ಟಿದೆ. ಕೇಂದ್ರೀಕರಣಕ್ಕೆ ಇದಕ್ಕಿಂತ ಪುರಾವೆ ಮತ್ತೇನು ಬೇಕು?